ರಾಫೆಲ್ : ಇಲ್ಲದ ಹಗರಣ ಸೃಷ್ಟಿಸಲು ಹೊರಟ ರಾಹುಲ್
– ರಾಕೇಶ್ ಶೆಟ್ಟಿ
ರಾಫೆಲ್ ಬಗ್ಗೆ ಈ ಹಿಂದೆಯೇ ಬರೆದಿದ್ದ ಲೇಖನದಲ್ಲಿ ದೇಸಿ ಗೊಬೆಲ್ಸ್ ರಾಹುಲ್ ಆಂಡ್ ಕಂಪೆನಿ ಯಾವ ರೀತಿಯಲ್ಲಿ, ಹಿಟ್ಲರ್ ಸರ್ಕಾರದ Goebbels Theoryಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ವಿವರಿಸಿದ್ದೆ.ಕಳೆದ ಕೆಲವು ತಿಂಗಳಿನಿಂದ ರಾಫೆಲ್ ಕುರಿತು ಜನರ ಮನದಲ್ಲಿ ಅನುಮಾನ ಮೂಡಿಸುವಂತೆಯೇ ಆಗೀಗ ಮಾತನಾಡುತ್ತಿದ್ದ ಕಾಂಗ್ರೆಸ್ ಈಗ ಪದೇ ಪದೇ ರಾಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆಯೆಂದು ಬೊಬ್ಬೆ ಹೊಡೆಯುತ್ತಿದೆ.ಕರ್ನಾಟಕದಲ್ಲಂತೂ ಪ್ರತಿ ಜಿಲ್ಲೆಯಲ್ಲೂ ಈ ಬಗ್ಗೆ ಪ್ರತಿಭಟನೆಯನ್ನು ಕಾಂಗ್ರೆಸ್ ನಡೆಸುತ್ತಿದೆ. ಮಂಗಳೂರಿನಲ್ಲಿ ನಡೆದ ರಾಫೆಲ್ ಪ್ರತಿಭಟನೆಯ ವಿಡಿಯೋ ತುಣುಕೊಂದು, ಕಾಂಗ್ರೆಸ್ ಎಂಬ ಪುರಾತನ ಪಕ್ಷದ ದೈನೇಸಿ ಸ್ಥಿತಿಗೆ ಕೈಗನ್ನಡಿ ಹಿಡಿದಂತಿತ್ತು. ಪ್ರತಿಭಟನೆಗೆ ಬಂದ ಅರ್ಧದಷ್ಟು ಕಾರ್ಯಕರ್ತರಿಗೆ ಯಾವ ವಿಷಯಕ್ಕಾಗಿ ಪ್ರತಿಭಟನೆ ಎಂದೇ ಗೊತ್ತಿರಲಿಲ್ಲ.ಕೆಲವರು ಪೆಟ್ರೋಲ್,ಡೀಸೆಲ್ ಬೆಲೆ ಇಳಿಸಬೇಕು ಎಂದರೆ,ಇನ್ನು ಕೆಲವರು ಬಾಯಿಗೆ ಬಂದಷ್ಟು ಅಂಕಿ ಸಂಖ್ಯೆಯಲ್ಲಿ ಹಗರಣವಾಗಿದೆ ಎನ್ನುತ್ತಿದ್ದರು. ಕೆಲವರಿಗೆ ರಾಫೆಲ್ ಎಂದರೇನು ಎನ್ನುವುದೂ ಗೊತ್ತಿಲ್ಲ ಆದರೂ ಪ್ರತಿಭಟಿಸಬೇಕು.ಯಾಕೆ? ಯಾಕೆಂದರೆ ಆರೋಪ ಮಾಡುತ್ತಿರುವುದು ಮೋದಿಯ ಮೇಲಲ್ಲವೇ ಅದಕ್ಕಾಗಿ.
HAL ಅನ್ನು ಬಿಟ್ಟು ರಿಲಯನ್ಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮೋದಿ ಸರ್ಕಾರ ಜನರಿಗೆ ಮೋಸ ಮಾಡಿದೆ ಎನ್ನುವ ಬಗ್ಗೆಯೇ ಹೆಚ್ಚು ಮಾತನಾಡಲಾಗುತ್ತಿದೆ. ಮೋದಿ ಅಧಿಕಾರಕ್ಕೆ ಬಂದರೆ ಅಂಬಾನಿ,ಅದಾನಿಯಂತವರಿಗೆ ಮಾತ್ರ ಲಾಭ ಎಂದು ಗಂಜಿಗಿರಾಕಿಗಳು ಚುನಾವಣೆಗೆ ಮೊದಲು ಕುಯ್ಯಿಗುಡುತ್ತಿದ್ದರು. ಈಗ ಈ ಒಪ್ಪಂದವನ್ನಿಡಿದು ನೋಡಿ ಹೇಳಿರ್ಲಿಲ್ವಾ ಎನ್ನುತ್ತಿದ್ದಾರೆ. ದಸಾಲ್ಟ್ ಹಾಗೂ ರಿಲಯನ್ಸ್ ಒಪ್ಪಂದದ ಬಗ್ಗೆ ಮಾತನಾಡುವ ಮೊದಲು,ದೇಶದ ರಕ್ಷಣಾ ಉದ್ಯಮದಲ್ಲಿ ಈಗಾಗಲೇ ಇರುವ ಖಾಸಗಿ ಕಂಪೆನಿಗಳ ಬಗ್ಗೆಯೂ ಒಮ್ಮೆ ನೋಡಿಬಿಡೋಣ. ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ ಹಾಗೂ ಚಿನುಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್ ಗಾಗಿ ಅಮೆರಿಕಾದ ಜೊತೆಗೆ ನಡೆದ ಒಪ್ಪಂದದಲ್ಲಿ ಇಂಡಿಯನ್ ಆಫ್ಸೆಟ್ ಪಾಲುದಾರರನ್ನಾಗಿ ಬೋಯಿಂಗ್ ಆರಿಸಿಕೊಂಡಿದ್ದು ಟಾಟಾ ಅಡ್ವಾನ್ಡ್ಸ್ ಸಿಸ್ಟಮ್,ಡೈನಮೆಟಿಕ್ ಟೆಕ್ನಲಾಜಿಸ್ ಮತ್ತಿತ್ತರರನ್ನು.
ರಾಫೆಲ್ ಒಪ್ಪಂದ ಹೇಗೆ ಭಾರತ-ಫ್ರಾನ್ಸ್ ಸರ್ಕಾರಗಳ ನಡುವೆ ನಡೆದಿದೆಯೋ ಅದೇ ರೀತಿಯಲ್ಲಿ ಭಾರತ-ಅಮೆರಿಕಾದ ನಡುವೆ M777 ULH ಆರ್ಟಿಲರಿಗಳ ಒಪ್ಪಂದವಾಗಿತ್ತು. ೧೪೫ರಲ್ಲಿ ೨೫ಗನ್ ಗಳನ್ನು ಅದರ ಉತ್ಪಾದಕ ಸಂಸ್ಥೆ ಬಿಇಎಸ್ ಸಿಸ್ಟಮ್ ಪೂರೈಸಿದರೆ, ಇನ್ನುಳಿದ ೧೨೦ನ್ನು ಭಾರತದಲ್ಲಿ ಜೋಡಣೆ ಮಾಡಲು ಒಪ್ಪಂದವಾಗಿತ್ತು. ಈ ಒಪ್ಪಂದದಲ್ಲಿ ಆಫ್ ಸೆಟ್ ಪಾಲುದಾರನನ್ನಾಗಿ ಬಿಇಎಸ್ ಸಿಸ್ಟಮ್ ಆರಿಸಿಕೊಂಡಿದ್ದು ಮಹಿಂದ್ರಾ ಡಿಫೆನ್ಸ್ ಅನ್ನು.
ಕಾಂಗ್ರೆಸ್ ಕೆಂಗಣ್ಣಿಗೆ ರಿಲಯನ್ಸ್ ಗುರಿಯಾಗಲು ಮತ್ತೊಂದು ಕಾರಣವಿದೆ. ದಸಾಲ್ಟ್ ಕಂಪೆನಿಯೊಂದಿಗೆ ಆಫ್ ಸೆಟ್ ಒಪ್ಪಂದಕ್ಕಾಗಿ ಸಂಜಯ್ ಭಂಡಾರಿ ಎಂಬ ಉದ್ಯಮಿಯ ಆಫ್ ಸೆಟ್ ಇಂಡಿಯಾ ಸಲ್ಯೂಷನ್ಸ್ ಎಂಬ ಕಂಪೆನಿಯೂ ಪ್ರಯತ್ನಿಸಿತ್ತು. ಆದರೆ ಅದರ ಜೊತೆಗೆ ಒಪ್ಪಂದಕ್ಕೆ ದಸಾಲ್ಟ್ ಆಸಕ್ತಿ ತೋರಿಸುವುದಿಲ್ಲ. ಈ ಕಂಪೆನಿಯ ಮಾಲೀಕ ಸಂಜಯ್ ಭಂಡಾರಿ, ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾಧ್ರಾನ ಬ್ಯುಸಿನೆಸ್ ಪಾರ್ಟ್ನರ್ ಎಂದು ಬಿಜೆಪಿ ಆರೋಪಿಸಿದೆ. ೨೦೦೮ರಲ್ಲಿ ಶುರುವಾದ ಈತನ ಕಂಪೆನಿ ದಿಢೀರ್ ಎನ್ನುವಂತೆ ಕೋಟಿಗಟ್ಟಲೆ ವ್ಯವಹಾರಕ್ಕಿಳಿದಾಗ ಸಹಜವಾಗಿ ತೆರಿಗೆ ಇಲಾಖೆಯ ಕಣ್ಣಿಗೆ ಬಿದ್ದಿತ್ತು. ದುಬಾರಿ ಕಾರುಗಳ ಮೇಲಿನ ತೆರಿಗೆ ಪಿನ್ ಎನ್ನುವ ಗುಮಾನಿಯ ಮೇಲೆ ಈತನ ಕಂಪೆನಿಯ ಮೇಲೆ ದಾಳಿಯಾದಾಗ,ರಕ್ಷಣಾ ಒಪ್ಪಂದಗಳ ಅತಿರಹಸ್ಯ ಫೈಲುಗಳು ದೊರೆತಿದ್ದರಿಂದ ಈತನ ಮೇಲೆ ಸಿಬಿಐ ತನಿಖೆ ನಡೆಸುತ್ತಿದೆ. ಸದ್ಯಕ್ಕೆ ಸಂಜಯ್ ಭಾರತ ಬಿಟ್ಟು ಪರಾರಿಯಾಗಿದ್ದಾನೆ. ಈತನ ಕಂಪೆನಿ ರಕ್ಷಣಾ ವ್ಯವಹಾರಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ. ತಾನು ಬಯಸಿದವರಿಗೆ ಆಫ್ ಸೆಟ್ ಒಪ್ಪಂದದ ಪಾಲುದಾರಿಕೆ ಸಿಗದೇ ರಿಲಯನ್ಸ್ ಆಯ್ಕೆಯಾಗಿದ್ದಕ್ಕೆ ಈ ಪರಿಯ ಅಸಹನೆ ವ್ಯಕ್ತವಾಗುತ್ತಿದೆಯೇ? ಕಾಂಗ್ರೆಸ್ ಪಕ್ಷವೇಕೆ ಈ ಪರಿ ಬಾಯಿಬಡಿದುಕೊಳ್ಳುತ್ತಿದೆ? ಬಾಯಿಗೆ ಬಂದಂತೆ ಮಾತನಾಡುತ್ತಿರುವ ರಾಹುಲ್ ಗಾಂಧಿಯೇ ಹೇಳಬೇಕು!
ತನ್ನ ಬ್ರಹ್ಮಾಂಡ ಭ್ರಷ್ಟಾಚಾರದಿಂದಲೇ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ನರೇಂದ್ರ ಮೋದಿಯವರ ಸರ್ಕಾರ ಐದು ವರ್ಷ ಪೂರೈಸುತ್ತಾ ಬಂದರೂ ಭ್ರಷ್ಟಾಚಾರದ ಆರೋಪ ಮಾಡಲು ಒಂದೇ ಒಂದು ಕೇಸು ಸಿಕ್ಕಿಲ್ಲ. ಅಂತಹ ಸಮಯದಲ್ಲಿ ಸಿಕ್ಕಿದ್ದು ಯುಪಿಎ ಸರ್ಕಾರದ ಕಾಲದಲ್ಲಿ ಗೊಂದಲದ ಗೂಡಾಗಿದ್ದ ರಾಫೆಲ್ ಒಪ್ಪಂದ ( ಅಸಲಿಗೆ ಅದು ಒಪ್ಪಂದವಾಗಿರಲಿಲ್ಲ,ಗುರಿ ಮುಟ್ಟದ ಚರ್ಚೆಯ ಹಂತದಲ್ಲಿತ್ತು). ತನ್ನ ಹತ್ತು ವರ್ಷಗಳ ಅವಧಿಯಲ್ಲಿ ಮುಗಿಸಲಾಗದ ಒಪ್ಪಂದವನ್ನು ನರೇಂದ್ರ ಮೋದಿ ಸರ್ಕಾರ ೧.೫ ವರ್ಷಗಳಲ್ಲಿ ಮುಗಿಸಿದ್ದು ಕಾಂಗ್ರೆಸ್ಸಿನ ಹೊಟ್ಟೆ ಉರಿಸಿತೋ ಏನೋ? ಇದು ರಾಷ್ಟ್ರದ ರಕ್ಷಣೆಯಂತಹ ಅತಿಸೂಕ್ಷ್ಮ ವಿಚಾರ ಎನ್ನುವುದನ್ನೂ ಮರೆತು ಪುರಾತನ ಪಕ್ಷದ ಬೇಜವಾಬ್ದಾರಿ ಅಧ್ಯಕ್ಷ ರಾಹುಲ್ ಗಾಂಧೀ ಕಂಡ ಕಂಡಲ್ಲಿ ಸುಳ್ಳು ಹೇಳಲಾರಂಭಿಸಿದರು. ಖುದ್ದು ಪ್ರಧಾನಿ ಮೋದಿಯವರೇ ಲೋಕಸಭೆಯಲ್ಲಿ,ಎರಡು ದೇಶಗಳ ನಡುವಿನ ಸಂಬಂಧದ ಮೇಲೂ ಗಂಭೀರ ಪರಿಣಾಮ ಬೀರಬಲ್ಲ ಇಂತಹ ವಿಷಯದಲ್ಲೂ ಹುಡುಗಾಟಿಕೆ ಮಾಡುವುದನ್ನು ಬಿಡಿ ಎಂದು ROFL ಗಾಂಧಿಯ ಕಿವಿ ಹಿಂಡಿದ್ದರು.
ಬರೆದುಕೊಟ್ಟ ಭಾಷಣವನ್ನೇ ಸರಿಯಾಗಿ ಓದಲಾಗದ ಸನ್ಮಾನ್ಯ ಪಪ್ಪು ಸಾಹೇಬರಿಗೆ ರಾಫೆಲ್ ಒಪ್ಪಂದ ಅರ್ಥವಾಗದೇ ಇರುವುದರಲ್ಲಿ ಆಶ್ಚರ್ಯವೇನೂ ಕಾಣುವುದಿಲ್ಲ. ಮೋದಿ ಎಲ್ಲಾ ರೀತಿ ರಿವಾಜುಗಳನ್ನು ಮೀರಿ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವುದು ಕಾಂಗ್ರೆಸ್ ತಗಾದೆ. ಆದರೆ Defence Procurement Procedure (DPP 2002 & DPP 2016) ಪ್ರಕಾರ ಎರಡು ಸರ್ಕಾರಗಳ ಮಟ್ಟದಲ್ಲಿಯೂ ಒಪ್ಪಂದಗಳಾಗಬಹುದು. ದೊಡ್ಡ ಮೊತ್ತದ ಹಾಗೂ ಧೀರ್ಘಕಾಲಿನ ಸರ್ವಿಸ್ ಬೇಕಾಗುವಂತಹ ಒಪ್ಪಂದಗಳ ಸಂದರ್ಭದಲ್ಲಿ inter-government agreement (IGA) ಒಳ್ಳೆಯದು ಎಂದೇ DPP ಹೇಳುತ್ತದೆ. ಮೋದಿ ಸರ್ಕಾರ ಅನುಸರಿಸಿರುವುದು ಇದನ್ನೇ. ಫ್ರಾನ್ಸ್ ಪ್ರವಾಸದಲ್ಲಿ ಮೋದಿಯವರು ಮಾಡಿದ್ದು ಉನ್ನತ ಮಟ್ಟದ ಒಪ್ಪಂದವನ್ನು ಮಾತ್ರವೇ, ಟೆಕ್ನಿಕಲ್ ಹಾಗೂ ಇನ್ನಿತರ ಅಧಿಕಾರಿ,ಸಚಿವಾಲಯ ಮಟ್ಟದ ಡಿಟೈಲ್ಡ್ ಒಪ್ಪಂದಗಳು ಘೋಷಣೆಯಾಗಿ ಒಂದು ವರ್ಷದ ನಂತರ ಮುಗಿದವು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲರನ್ನು ಬಿಟ್ಟು ಮೋದಿಯೊಬ್ಬರೇ ನಿರ್ಧಾರ ತೆಗೆದುಕೊಳ್ಳುವುದಾಗಿದ್ದರೆ ಒಂದು ವರ್ಷದ ನಂತರ ಅಧಿಕೃತವಾಗಿ ಒಪ್ಪಂದ ಮುಗಿದಿದ್ದು ಏಕೆ?
ಇನ್ನು HAL ಅನ್ನು ಹೊರಗಿಟ್ಟು ಮೋಸ ಮಾಡಲಾಗಿದೆ ಎನ್ನುವ ಬೊಬ್ಬೆಯ ಬಗ್ಗೆ, ಯುಪಿಎ ಅವಧಿಯಲ್ಲಿ ನಡೆಯುತ್ತಿದ್ದ ಚರ್ಚೆಯ ಪ್ರಕಾರ, HAL ಹಾಗೂ ದಸಾಲ್ಟ್ ಜಂಟಿ ಉತ್ಪಾದನೆಯಲ್ಲಿ ತೊಡಗಿಕೊಳ್ಳಬೇಕಿತ್ತು.ಆದರೆ ದಸಾಲ್ಟ್, HAL ಉತ್ಪಾದಿಸುವ ವಿಮಾನಗಳಿಗೆ ಗ್ಯಾರಂಟಿ ಕೊಡಲು ಒಪ್ಪಲೇ ಇಲ್ಲ. ಹೊಸ ಒಪ್ಪಂದದಲ್ಲಿ ಜಂಟಿ ಉತ್ಪಾದನೆಯಿಲ್ಲ. ಎಲ್ಲಾ ೩೬ ವಿಮಾನಗಳು ರೆಡಿ ಟು ಫ್ಲೈ ಆಗಿ ನಮಗೆ ಸಿಗಲಿವೆ. DPPಯ ಪ್ರಕಾರ ಒಪ್ಪಂದದ ೫೦% ಪ್ರತಿಶತ ಹಣವನ್ನು ಭಾರತದ ರಕ್ಷಣಾ ವ್ಯವಹಾರಗಳ ಕಂಪೆನಿಗಳಲ್ಲಿ ಹೂಡಿಕೆ ಹಾಗೂ ಕೆಲಸ ಮಾಡಬೇಕು. ತನ್ನ ಹೂಡಿಕೆಯ ಪಾಲುದಾರರನ್ನಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಸಂಪೂರ್ಣವಾಗಿ ವಿದೇಶಿ ಕಂಪೆನಿಯ ನಿರ್ಧಾರವಾಗಿರುತ್ತದೆ. ಈ ಒಪ್ಪಂದದಲ್ಲಿ ದಸಾಲ್ಟ್ ಕಂಪೆನಿಯವರು ರಿಲಯನ್ಸ್ ಕಂಪೆನಿಯನ್ನು ಒಬ್ಬ ಹೂಡಿಕೆದಾರರನ್ನಾಗಿ ಮಾಡಿಕೊಂಡಿದೆ. ರಾಹುಲ್ ಗಾಂಧೀ ಹಾಗೂ ಕಾಂಗ್ರೆಸ್ಸಿನ ನಾನ್ಸೆನ್ಸ್ ಹೆಚ್ಚಾಗುತ್ತಿದ್ದಂತೆ, ದಸಾಲ್ಟ್ ಒಪ್ಪದಂದ ಕುರಿತು ಬಿಡುಗಡೆ ಮಾಡಿದ ಹೇಳಿಕೆಯಲ್ಲೂ ಇದನ್ನೇ ಒತ್ತಿ ಹೇಳುತ್ತಿದೆ. ರಿಲಯನ್ಸ್ ಅನ್ನು ಪಾಲುದಾರರನ್ನಾಗಿ ಆಯ್ಕೆ ಮಾಡಿರುವುದು ನಮ್ಮದೇ ನಿರ್ಧಾರ ಹಾಗೂ ಇದು ಮೇಕ್ ಇನ್ ಇಂಡಿಯಾದ ಭಾಗವಾಗಿದೆ ಎನ್ನುತ್ತದೆ ವರದಿ.ರಿಲಯನ್ಸ್ ಜೊತೆ ಸೇರಿ ಫಾಲ್ಕನ್ ಸಿವಿಲ್ ಜೆಟ್ ಹಾಗೂ ರಾಫೆಲ್ ಬಿಡಿ ಭಾಗಗಳ ಉತ್ಪಾದನೆ ಮಾಡಲಿದ್ದೇವೆ ಎಂದು ದಸಾಲ್ಟ್ ಹೇಳಿದೆ.ರಿಲಯನ್ಸ್ ಜೊತೆ ಜೊತೆಗೆ ಬಿಟಿಎಸೆಲ್, ಕೈನೆಟಿಕ್, ಮಹಿಂದ್ರಾ, ಡೆಫಿಸಿಸ್,ಮೈನಿನಿ,ಸಂಟೆಲ್ ನಂತಹ ಕಂಪೆನಿಗಳೊಂದಿಗೂ ಒಪ್ಪಂದ ಮಾಡಿಕೊಂಡಿದ್ದೇವೆ ಎಂದಿದೆ.ಅಷ್ಟಕ್ಕೂ ರಿಲಯನ್ಸ್ ಮೇಲೆ ಹೂಡಿಕೆಯಾಗುವ ಹಣದಿಂದ ಕೆಲಸ ಸಿಗುವುದು ಪಾಕಿಸ್ತಾನಿಗಳಿಗಾ? ಅಥವಾ ರಿಲಯನ್ಸ್ ಪಾಕಿಸ್ತಾನಿಗಳ ಕಂಪೆನಿಯ? ಅಲ್ಲವಾದರೇ ಅದೇಕೆ ಇಷ್ಟು ಹೊಟ್ಟೆ ನೋವು? ರಿಲಯನ್ಸ್ ನವರಿಗೆ ರಕ್ಷಣಾ ಕ್ಷೇತ್ರದಲ್ಲಿ ಅನುಭವವಿಲ್ಲವೆನ್ನುವುದು ವಿರೋಧಿಗಳ ತಗಾದೆ. ಆದರೆ, ತನ್ನ ಪಾಲುದಾರನ ಅನುಭವದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದವರು ಹೊಡಿಕೆದಾರರಾದ ದಸಾಲ್ಟಿನವರೋ ಅಥವಾ ರಾಹುಲ್ ಗಾಂಧಿಯಂತಹ ವಿಷಯದ ಪರಿಜ್ಞಾನವಿಲ್ಲದೇ ಮಾತನಾಡುವವರೋ?
ಇನ್ನು ಕಡೆಯದಾಗಿ HAL ಸಾಮರ್ಥ್ಯದ ಬಗ್ಗೆ ಮಾತನಾಡುವ ಬೃಹಸ್ಪತಿಗಳು ತೇಜಸ್ ವಿಮಾನದ ಕತೆಯೇನಾಗಿದೆ ಎನ್ನುವುದನ್ನು ನೋಡಬೇಕು. ೧೯೮೩ರಲ್ಲಿ ಶುರುವಾದ Light Combat Aircraft (LCA) ಪ್ರಾಜೆಕ್ಟ್ ತನ್ನ ಮೊದಲ ವಿಮಾನವನ್ನು ನೀಡಿದ್ದು ೨೦೦೧ರಲ್ಲಿ. ೨೦೦೬ರಲ್ಲಿ ವಾಯುಸೇನೆ ಮಾಡಿಕೊಂಡ ಮೊದಲ ಒಪ್ಪಂದದ ಪ್ರಕಾರ ೨೦೧೧ರ ವೇಳೆಗೆ ೨೦ ವಿಮಾನಗಳನ್ನು HAL ನೀಡಬೇಕಿತ್ತು. ಹಾಗೂ ೨೦೧೦ರ ಇನ್ನೊಂದು ಒಪ್ಪಂದದ ಪ್ರಕಾರ ೨೦೧೬ರ ವೇಳೆಗೆ ೨೦ ವಿಮಾನಗಳು ಸಿಗಬೇಕಿತ್ತು. ಒಟ್ಟಾರೆಯಾಗಿ ೪೦ ವಿಮಾನಗಳು ಸಿಗಬೇಕಿತ್ತು. ಆದರೆ ಸಿಕ್ಕಿದ್ದು ಕೇವಲ ೯. HALನ ವಿವಿಧ ಡಿಪಾರ್ಟ್ಮೆಂಟುಗಳ ನಡುವಿನ ಸಮನ್ವಯದ ಕೊರೆತೆಯಿಂದಾಗಿ ತಡವಾಗುತ್ತಿದೆಯೆಂದು ಮನಗಂಡ ವಾಯುಸೇನೆ ತನ್ನದೇ ಅಧಿಕಾರಿಯೊಬ್ಬರನ್ನು ಸಂವಹನಕ್ಕಾಗಿ ನೇಮಿಸಿತ್ತು. ಅದರಿಂದಲೂ ಕೆಲಸ ಆಗುವುದಿಲ್ಲವೆಂದು ತಿಳಿದು ಈಗ ಸಂಪೂರ್ಣ ತೇಜಸ್ ಪ್ರಾಜೆಕ್ಟ್ ಅನ್ನು ಖುದ್ದು ತಾನೇ ನಿರ್ವಹಿಸಲು ಭಾರತೀಯ ವಾಯುಸೇನೆ ಹೊರಟಿದೆ,ಈ ನಡೆಗೆ ಕೇಂದ್ರ ಸರ್ಕಾರ ಅನುಮತಿಯನ್ನೂ ನೀಡಿದೆ. ಬರೆದುಕೊಟ್ಟ ಭಾಷಣವೇ ಅರ್ಥವಾಗದ ಪಕ್ಷದ ಅಧ್ಯಕ್ಷರಿಗೂ ಅವರ ಪಕ್ಷದವರಿಗೂ ಇವೆಲ್ಲಾ ವಿಷಯಗಳು ಅರ್ಥವಾಗುತ್ತದೆಯೇ?
೧೨೬ ವಿಮಾನಗಳ ಬದಲಿಗೆ ಕೇವಲ ೩೬ ವಿಮಾನಗಳನ್ನು ಏಕೆ ಖರೀದಿಸಿದ್ದೀರಿ ಎನ್ನುವ ಮೂರ್ಖರು ಅರ್ಥ ಮಾಡಿಕೊಳ್ಳಬೇಕಾಗಿದ್ದು,೧೨೬ ವಿಮಾನಗಳ ಬೇಡಿಕೆಯಿಟ್ಟು ೧೫ ವರ್ಷಗಳಾದರೂ ಯಾವುದೇ ಒಪ್ಪಂದಗಳೂ ಆಗಿರಲಿಲ್ಲ. ವಾಯುಸೇನೆಯ ತುರ್ತು ಅಗತ್ಯವಾಗಿ ೩೬ ವಿಮಾನಗಳನ್ನು ಈಗ ಖರೀದಿಸಲಾಗುತ್ತಿದೆ. ಕಳೆದು ಹೋದ ೧೫ ವರ್ಷಗಳನ್ನು ರಾಹುಲ್ ಗಾಂಧೀ ತಂದುಕೊಡುತ್ತಾರೆಯೇ? ಮನೋಹರ್ ಪರಿಕ್ಕರ್ ಅವರು ರಕ್ಷಣಾ ಸಚಿವರಾಗಿದ್ದಾಗ, ೧೨೬ ವಿಮಾನಗಳ ಬೇಡಿಕೆಗೆ ಬೇಕಾದ ಹಣದ ಬಗ್ಗೆ ಮಾತನಾಡುತ್ತ ಅಷ್ಟೂ ಹಣವನ್ನೂ ಒಂದೇ ಕಡೆ ಹಾಕಿದರೆ,ಉಳಿದ ರಕ್ಷಣಾ ಸಾಮಗ್ರಿ, ಸಲಕರೆಣೆಗಳಿಗೆ ಹಣವೆಲ್ಲಿಂದ ತರಬೇಕು ಎಂದಿದ್ದರು. ಹಾಗೆಯೇ ಯುಪಿಎ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಹೇಗೆ ಪಾಕಿ ವಾಯುಸೇನೆ ನಮಗಿಂತ ಬೆಟರ್ ಆದ ಸ್ಥಿತಿಯಲ್ಲಿದೆ ಎನ್ನುವುದನ್ನು ಹೇಳಿದ್ದರು.ಯುಪಿಎ ಸರ್ಕಾರದ ರಕ್ಷಣಾ ಸಚಿವ ಎ.ಕೆ ಆಂಟನಿ ೨೦೧೪ರಲ್ಲಿ ನಡೆದ ಸಮಾರಂಭವೊಂದರಲ್ಲಿ, ೧೨೬ ರಾಫೆಲ್ ವಿಮಾನ ಖರೀದಿಸಲು ನಮ್ಮಲ್ಲಿ ಹಣವಿಲ್ಲ ಎಂದಿದ್ದರು.ಹಾಗಿದ್ದರೆ ರಾಹುಲ್ ಗಾಂಧೀ ಹೇಳುತ್ತಿರುವುದೇನು? ಹಣವೇ ಇಲ್ಲವೆಂದು ಒಪ್ಪಂದವನ್ನು ಕೋಲ್ಡ್ ಫ್ರಿಜರ್ನಲ್ಲಿಟ್ಟವರು, ಇವತ್ತು ಬಂದು ನಾವು ಕಡಿಮೆ ದುಡ್ಡಿಗೆ ಒಪ್ಪಂದ ಮಾಡಿಕೊಂಡಿದ್ದೆವು ಎನ್ನುತ್ತಿರುವುದು ಸುಳ್ಳಲ್ಲವೇ?
ಅರ್ಧ ಶತಮಾನಗಳ ಕಾಲ ದೇಶವಾಳಿದ ಕಾಂಗ್ರೆಸ್, ಈ ದೇಶದ ರಕ್ಷಣಾ ಉದ್ಯಮವನ್ನು ಸ್ವತಂತ್ರವಾಗಿ ರೂಪಿಸಿದ್ದರೆ, ಇವತ್ತು ಈ ದೇಶದ ಶೇ ೭೦ ರಕ್ಷಣಾ ಸಾಮಗ್ರಿ, ಉಪಕರಣಗಳನ್ನು ಆಮದು ಮಾಡಿಕೊಳ್ಳಬೇಕಾಗಿರಲಿಲ್ಲ ಅಲ್ಲವೇ? ಕೆಲಸ ಮಾಡಬೇಕಾದ,ಮಾಡಿಸಬೇಕಾದ ಸಮಯದಲ್ಲಿ ಉಂಡು ಮಲಗಿದ ಪಕ್ಷಕ್ಕೆ ಇವತ್ತು ಪ್ರಶ್ನೆ ಮಾಡುವ ನೈತಿಕತೆಯಿದೆಯೇ?
ಅಂತಿಮವಾಗಿ,ರಾಫೆಲ್ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಪದೇ ಪದೇ ಸುಳ್ಳನ್ನೇ ಜೋರಾಗಿ ಹೇಳಿ ಸತ್ಯ ಮಾಡಲು ಹೊರಟಿದೆ. ಕೇಂದ್ರದ ಸಚಿವರು ಸರ್ಕಾರಿ ಮಟ್ಟದಲ್ಲಿ ಪತ್ರಿಕಾ ಹೇಳಿಕೆಗಳ ಮೂಲಕವೇನೋ ಸ್ಪಷ್ಟನೇ ನೀಡುತ್ತಿದ್ದಾರೆ.ಆದರೆ ಬಿಜೆಪಿ ಒಂದು ಪಕ್ಷವಾಗಿ ಕಾಂಗ್ರೆಸ್ಸಿನ ಸುಳ್ಳನ್ನು ಧ್ವಂಸ ಮಾಡಿ ಜನರಿಗೆ ಸತ್ಯ ಹೇಳದೇ ಹೋದರೇ,ರಾಹುಲ್ ಗಾಂಧಿಯ ಸುಳ್ಳುಗಳನ್ನೇ ಸತ್ಯವೆಂದು,ಜನರು ನಂಬುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.