ರಿಯಾಲಿಟಿ ಷೋ ಎಂಬ ಹೆಸರಲ್ಲಿ ನಡೆಯುವ ಅಪಸವ್ಯಗಳು..!
– ಶ್ರೀಧರ ಭಟ್ಟ, ಹೊನ್ನಾವರ
‘ಹಳ್ಳಿ ಹೈದ ಪ್ಯಾಟೆಗ್ ಬಂದ’ ಎಂಬ ರಿಯಾಲಿಟಿ ಷೋ ಒಂದರಲ್ಲಿ ನಮ್ಮ ಹೊನ್ನಾವರದ ಯುವಕರೊಬ್ಬರು ಭಾಗವಹಿಸಿದ್ದಾರೆ ಎಂಬ ವಿಷಯವನ್ನು ಕೇಳಿದಾಗ ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಶ್ರೀರಾಮ ಎಂಬ ಆ ಯುವಕ, ಹೊನ್ನಾವರ ಪಟ್ಟಣದ ಭಾಗವಾಗಿರುವ ರಾಯಲಕೇರಿಯವರು, ಸುತ್ತಮುತ್ತಲಿನ ಊರುಗಳಲ್ಲಿ ಹೆಸರುವಾಸಿಯಾಗಿರುವ ಅಶೋಕ ಜಾದೂಗಾರ ಅವರ ಮಗ ಎನ್ನುವ ಸಂಗತಿಯನ್ನು ಅರಗಿಸಿಕೊಳ್ಳುವುದಕ್ಕೂ ಆಗಲಿಲ್ಲ. ಸುವರ್ಣ ವಾಹಿನಿಯವರ ಕಣ್ಣಿಗೆ ನಮ್ಮ ಪಟ್ಟಣ ಅದ್ಯಾವ ಕೋನದಿಂದ ಹಳ್ಳಿಯಂತೆ ಕಂಡಿತೋ? ತಂದೆಯಂತೆ ಜಾದೂಗಾರರೇ ಆಗಿರುವ ಶ್ರೀರಾಮ ಅವರಿಗೆ ತಾನು ಹಳ್ಳಿ ಹೈದನಾಗಬೇಕು ಎಂದು ಏಕೆ ಅನಿಸಿತೋ? ಗೊತ್ತಿಲ್ಲ.
ಕಾರ್ಯಕ್ರಮದ ವೀಡಿಯೋ ತುಣುಕೊಂದನ್ನು ನೋಡಿದಾಗ ನನಗನಿಸಿದ್ದಿಷ್ಟು. ನಿರೂಪಕರಾಗಿರುವ ಅಕುಲ್ ಬಾಲಾಜಿ ಮತ್ತು ಜೊತೆಗಿರುವ ನಟಿಯರ ಪಟಾಲಮ್ಮಿನ ಮಾತಿನ ಧಾಟಿ ಸ್ವಲ್ಪವೂ ಸರಿಯಿಲ್ಲ. ಸ್ಪರ್ಧಿಗಳು ಮಾತನಾಡುವ ‘ಪ್ರಾಂತಿಕ ಭಾಷಾಭೇದ’ವಿರುವ ಕನ್ನಡವನ್ನು ಕೇಳಿ ವ್ಯಂಗ್ಯದ ನಗೆಯಾಡುವ ಅವರು, ಸ್ಪರ್ಧಿಗಳನ್ನು ಏಕವಚನದಲ್ಲಿ ಮಾತನಾಡಿಸಿ ತಮ್ಮ ಸಣ್ಣತನವನ್ನು ಪ್ರದರ್ಶಿಸುತ್ತಿದ್ದಾರೆ.
ಸ್ಪರ್ಧಿಗಳೂ ಅಷ್ಟೇ; ಜಿಯೋ ಕಂಪನಿಯಿಂದ ಅನಿಯಮಿತ ಡೇಟಾ ಸಿಗುವ ಈ ಕಾಲದಲ್ಲಿ, ೪ಜಿ ಮೊಬೈಲ್ ಬಳಸದ, ‘ನಾಗರಿಕ ಪ್ರಪಂಚ’ದ ಅರಿವೇ ಇಲ್ಲದ ಯುವಕರು ಸಿಗದೇ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ, ಭಾಗವಹಿಸಿರುವ ಸ್ಪರ್ಧಿಗಳಲ್ಲಿ ಒಬ್ಬರಾದ ಶ್ರೀರಾಮ ಅವರು ಮೈಕ್ ಹಿಡಿಯಲು ಬರದಂತೆ, ಸುತ್ತಮುತ್ತಲಿನ ಜನರನ್ನು ನೋಡಿ ನಿಬ್ಬೆರಗಾದಂತೆ ವರ್ತಿಸುವುದು; ಬೆದರುತ್ತ, ತೊದಲುತ್ತ ನಮ್ಮೂರಿನ ಶೈಲಿಯಲ್ಲಿ ಮಾತನಾಡುವುದು ಇದನ್ನೆಲ್ಲ ನೋಡಿದಾಗ, ವಾಹಿನಿಯವರೇ ಸ್ಪರ್ಧಿಗಳ ಬಳಿ ಆಮಿಷವೊಡ್ಡಿ ಅಥವಾ ಜೋರು ಮಾಡಿ ಹೀಗೆ ಮಾಡಿಸುತ್ತಿರಬಹುದು ಎಂಬ ಅನುಮಾನ ಮೂಡುವುದು ಸುಳ್ಳಲ್ಲ.
ಜನರು ದಡ್ಡರಲ್ಲ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶ್ರೀರಾಮ ಅವರೇ ಹೇಳಿಕೊಂಡಂತೆ, ಅವರು ಹೊರರಾಜ್ಯಗಳಲ್ಲಿ ಜಾದೂ ಪ್ರದರ್ಶನ ಕೊಟ್ಟ ಕಲಾವಿದರು, ಅಸಾಮಾನ್ಯವೆನಿಸುವ ಯಾವುದಾದರೂ ಕೈಚಳಕವನ್ನು ಪ್ರದರ್ಶಿಸಿ ಗಿನ್ನಿಸ್ ದಾಖಲೆಯನ್ನು ಮೂಡಿಸಬೇಕೆಂಬ ಕನಸು ಹೊತ್ತವರು. ಹೀಗಿರುವವರಿಂದ ಬಾಲಿಶವೆನಿಸುವ ವರ್ತನೆಯನ್ನು ನಿರೀಕ್ಷಿಸಲಾದೀತೇ ? ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ, ಕಲಾವಿದನನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ವಾಹಿನಿಯ ಮೇಲೆ ಜಿಗುಪ್ಸೆಯಿದೆ.
ಅಂದಹಾಗೆ, ಸುಮಾರು ಏಳೆಂಟು ವರ್ಷಗಳ ಹಿಂದೆ ಪ್ರಸಾರವಾಗಿದ್ದ ಇದೇ ಕಾರ್ಯಕ್ರಮದ ಮೊದಲ ಅವತರಣಿಕೆಯಲ್ಲಿ, ಯಾವುದೋ ಕುಗ್ರಾಮಗಳ ನಡುವಿನಿಂದ ‘ಸಿದ್ದಿ’, ‘ಕುಣಬಿ’ ಮೊದಲಾದ ಜನಾಂಗಗಳ ಮುಗ್ಧ ಯುವಕರನ್ನು ಕರೆತಂದು, ಅವರಿಗೆ ಅರಿವಾಗದಂತೆ ಅವರನ್ನೇ ಶೋಷಿಸಿ, ಕೊನೆಗೆ ‘ರಾಜೇಶ’ ಎಂಬ ಅಮಾಯಕನನ್ನು ವಿಜೇತನನ್ನಾಗಿಸಿ, ರಾತ್ರೋರಾತ್ರಿ ಮುನ್ನಲೆಗೆ ತರಲಾಗಿತ್ತು. ಅಲ್ಪಕಾಲದಲ್ಲಿ ಸಿಕ್ಕ ಯಶಸ್ಸನ್ನು ಕಾಯ್ದುಕೊಳ್ಳಲಾಗದೇ, ಆತ ಸಿನಿಮಾಗಳಲ್ಲಿ ನಟಿಸಬೇಕು, ಹೀರೊ ಆಗಬೇಕು ಎಂಬಿತ್ಯಾದಿ ಅವಾಸ್ತವಿಕ ಕನಸುಗಳನ್ನು ಹೊತ್ತು, ಗೆದ್ದ ಹಣವನ್ನೆಲ್ಲ ಕಳೆದುಕೊಂಡು, ಖಿನ್ನತೆಗೆ ಒಳಗಾಗಿ ಸಾವಿಗೆ ಶರಣಾದ ನೆನಪು ಇನ್ನೂ ಹಸಿಯಾಗಿಯೇ ಇದೆ.
ಮನರಂಜನೆಯ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಬದಲು, ನಮ್ಮಂತಹ ಜನಸಾಮಾನ್ಯರಿಗೆ ಮಾರ್ಗದರ್ಶಿಯೆನಿಸುವಂತಹ ವಿಚಾರಗಳೊಂದಿಗೆ ಹೊರಹೊಮ್ಮಿದರೆ, ಮಾಧ್ಯಮಗಳ ಮೇಲಿರುವ ಅಲ್ಪ ಮರ್ಯಾದೆಯಾದರೂ ಉಳಿಯಬಹುದು.
ಶನಿವಾರ ಮತ್ತು ಭಾನುವಾರ ಬಂತೆಂದರೆ ಈ ರಿಯಾಲಿಟಿ ಶೋಗಳ ಹಾವಳಿಯಿಂದ ಅವುಗಳನ್ನು ನೋಡದೇ ಮನೆಯ ಯಾವುದೋ ಒಂದು ರೂಮಿನಲ್ಲಿ ಕುಳಿತವರದ್ದೂ ತಲೆಚಿಟ್ಟು ಹಿಡಿದು ಹೋಗುತ್ತದೆ. ಆ ಎರಡು ದಿನಗಳ ಖಾಲಿ ಜಾಗ ತುಂಬಲು ವಾರದ ಇನ್ನು ಐದು ದಿನಗಳು ಪೈಪೋಟಿಯ ಮೇಲೆ ಇತರೆ ಚಾನೆಲ್ ಗಳು ತಲೆ ಬುಡವಿಲ್ಲದ ಹೊಸ ಹೊಸ ರಿಯಾಲಿಟಿ ಶೋಗಳಿಂದ ಹಾಗೂ ಕಣ್ಣೀರಿನ ಧಾರೆ ಕರೆಯುವ, ಮಾಯಾ- ಮಂತ್ರಗಳ, ದೆವ್ವ, ಭೂತ,ಹಾವುಗಳ ಧಾರಾವಾಹಿಗಳಿಂದ ಪ್ರೇಕ್ಷಕರ ಮೇಲೆ ಲಗ್ಗೆಯಿಡುತ್ತವೆ. ಇಂತಹುಗಳನ್ನು ನೋಡುವ ಪ್ರೇಕ್ಷರಿದ್ದಾರೆಂದೇ ಅವುಗಳು ಟಿವಿ ಪರದೆಯ ಮೇಲೆ ಬರುತ್ತಿವೆ. ಕೈಯಲ್ಲಿ ರಿಮೋಟ್ ಹಿಡಿದಿರುವ ಪ್ರೇಕಕರೇ ಇಂತಹ ಅಪಸವ್ಯಗಳನ್ನು ನಿಲ್ಲಿಸಲು ಸಾಧ್ಯ. ಅವರು ಮನಸ್ಸು ಮಾಡಬೇಕಷ್ಟೇ.
Yes, I agree 100%. There should be some means to oppose these programs. Unless our education system prepares people to question when they see something wrong, nothing is going to change.
ವಿದ್ಯಾಭ್ಯಾಸದ ಪದ್ಧತಿಯ ಬದಲಾವಣೆಗಿಂತ ನಮ್ಮ ನಮ್ಮ ಮನೆಗಳಲ್ಲಿ ರಿಯಾಲಿಟಿ ಶೋಗಳೆಂಬ ಅರ್ಥವಿಲ್ಲದ ಅತೀ ಮಾತಿನ ಮಂಟಪ, ಮೂರು, ನಾಲ್ಕನೇ ದರ್ಜೆಯ ಹಾಸ್ಯದಲ್ಲಿ ರಂಜನೆ ಕಾಣುತ್ತಿರುವವರಿಗೆ ಬೇಜಾರು ಬರಬೇಕಷ್ಟೇ. ಅಲ್ಲಿಯ ತನಕ ಇದರಿಂದ ಬಿಡುಗಡೆಯಿಲ್ಲ. ಜತೆಗೆ ಕೆಲಸದಿಂದ ನಿವೃತ್ತಿಯಾದವರು ಕಾಲ ಕಳೆಯಲು ಟಿವಿ ಮುಂದೆ ಕೂರುವಬದಲು ಸಂಗೀತ, ಸಾಹಿತ್ಯದ ಅಭಿರುಚಿಯನ್ನೋ ಬೆಳೆಸಿಕೊಳ್ಳಲು ಅಥವಾ ನಮಗೆ ಗೊತ್ತಿರದ ಯಾವುದಾದರೊಂದು ಹೊಸ ಭಾಷೆಯನ್ನು ಕಲಿಯಲು ಪ್ರಯತ್ನಪಡಬಹುದು. ಇಂಥ ದಾರಿಗಳು ಬೇಕಾದಷ್ಟು ಇದೆ. ಪ್ರಯತ್ನಪಡುವ ಆಸೆ ನಮಗಿರಬೇಕು.