ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 30, 2018

5

ವಿವಾಹೇತರ ಸಂಬಂಧ ಹಾಗೂ ಶಬರಿಮಲೈ ಕುರಿತ ಸುಪ್ರೀಂ ತೀರ್ಪು

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ಬ್ರಿಟೀಷರ ಕಾಲದಲ್ಲಿ ಕ್ರಿಶ್ಚಿಯಾನಿಟಿಯಿಂದ ಎತ್ತಿ ತಂದ ಹಲವಾರು ಕಾನೂನುಗಳಲ್ಲಿ ಅಡಲ್ಟ್ರೀ ಕೂಡಾ ಒಂದು. ಈ ಕಾನೂನು ವಿವಾಹೇತರ ಸಂಬಂಧವನ್ನು ಅಪರಾಧವನ್ನಾಗಿ ಕಾಣುವ ಕಾನೂನಾಗಿತ್ತು. ವಿವಾಹೇತರ ಸಂಬಂಧದಲ್ಲಿ ಮಹಿಳೆ ಹಾಗೂ ಪುರುಷ ಪರಸ್ಪರ ಒಪ್ಪಂದದಿಂದ ತೊಡಗಿದ್ದರೆ, ಈ ಕಾನೂನಿನ ಅಡಿಯಲ್ಲಿ ಅವರನ್ನು ಶಿಕ್ಷಿಸಲಾಗುತ್ತಿತ್ತು. ಪುರುಷನು ಒತ್ತಾಯಿಸಿದ್ದರೆ ಅದು ಅತ್ಯಾಚಾರವೆಂದು ಪರಿಗಣಿಸಲಾಗುತ್ತಿತ್ತು. ಈ ಕಾನೂನು ಮುಂಚೆ ಬ್ರಿಟೀಷರಲ್ಲಿ ಇತ್ತು. ಅದು ಭಾರತಕ್ಕೂ ಬಂದಿತು.
ಯುರೋಪಿನಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿಯ ವಿಚಾರಗಳು ಪಸರಿಸಿದಂತೆ ಇದನ್ನು ಅಪರಾಧವನ್ನಾಗಿ ನೋಡಬಾರದು ಹಾಗೂ ಅವರವರ ಖಾಸಗೀ ಆಯ್ಕೆಯನ್ನಾಗಿ ಕಾಣಬೇಕು ಎಂಬ ನಿರ್ಧಾರಕ್ಕೆ ಅಲ್ಲಿನ ಸರ್ಕಾರಗಳು ಬಂದವು ಹಾಗೂ ಈ ಕಾನೂನನ್ನು ರದ್ದುಪಡಿಸಿಕೊಂಡವು. ಎಲ್ಲದರಲ್ಲೂ ಪಾಶ್ಚಿಮಾತ್ಯರನ್ನೇ ಅನುಸರಿಸುವ ನಮ್ಮ ಸಂವಿಧಾನ, ಸರ್ಕಾರ ಹಾಗೂ ನ್ಯಾಯಾಲಯಗಳಲ್ಲಿ ಪ್ರೊಟೆಸ್ಟಂಟ್ ವಿಚಾರಗಳು ಪಸರಿಸಿದಂತೆ ಈ ಕಾನೂನು ಇಲ್ಲಿಯೂ ರದ್ದಾಯಿತು. ಆದರೆ ಭಾರತೀಯ ಜನಸಾಮಾನ್ಯರಿಗೆ ಈ ರೀತಿಯ ಕಾನೂನು ಇದೆ ಎಂಬುದರ ಅರಿವೂ ಅಷ್ಟಕ್ಕಷ್ಟೇ ಇತ್ತು.
ಪ್ರಪಂಚದ ಎಲ್ಲ ಸಮಾಜಗಳಂತೇ ನಮ್ಮ ದೇಶದ ಸಮಾಜಗಳಲ್ಲಿಯೂ ವಿವಾಹೇತರ ಸಂಬಂಧಗಳು ಕದ್ದು ಮುಚ್ಚಿ ನಡೆಯುತ್ತ ಬಂದಿವೆ. ಆದರೆ ಹಾಗೆ ಮಾಡುವವರು ಈ ಕಾನೂನಿಗೆ ಹೆದರಿಕೊಂಡು ಕದ್ದು ಮುಚ್ಚಿ ಸಂಬಂಧ ಇಟ್ಟುಕೊಳ್ಳುತ್ತಿರಲಿಲ್ಲ. ಅದಕ್ಕೆ ಕಾರಣವೇ ಬೇರೆ. ಹಾಗೆಯೇ ದಾಂಪತ್ಯವ್ರತಕ್ಕೆ ನಿಷ್ಠರಾಗಿ ಆದರ್ಶ ಸತಿಪತಿಗಳಾಗಿ ಬದುಕಿದವರಿಗೂ ನಮ್ಮ ಸಮಾಜಗಳಲ್ಲಿ ಕೊರತೆಯಿಲ್ಲ. ಅವರೇನೂ ಈ ಕಾನೂನನ್ನು ಪಾಲಿಸಬೇಕು ಎಂಬ ಕಾರಣಕ್ಕೆ ದಾಂಪತ್ಯವ್ರತಕ್ಕೆ ನಿಷ್ಠರಾಗಿ ಬದುಕಿರಲಿಲ್ಲ. ಅವರು ಹಾಗೆ ಬದುಕಿದ್ದಕ್ಕೂ ಕಾರಣವು ಬೇರೆಯೇ.
ಹೀಗಾಗಿ ಜನರಿಗೆ ಅಷ್ಟಾಗಿ ಪರಿಚಯವೇ ಇರದ ಕಾನೂನೊಂದನ್ನು ತೆಗೆದು ಹಾಕಿದ ಮಾತ್ರಕ್ಕೆ ಸಮಾಜವು ಹಾಳಾಗಿ ಹೋಗುತ್ತದೆ ಎನ್ನುವದು ಸಂಪೂರ್ಣ ಸತ್ಯವಲ್ಲ. ಆದರೆ ಈಗಿನ ಸಮಾಜವು ಎತ್ತ ಸಾಗುತ್ತಿದೆ ಎಂಬ ಹಿರಿಯರ ಕಳಕಳಿಯನ್ನೂ ಕೂಡ ಸಂಪೂರ್ಣವಾಗಿ ತೆಗೆದು ಹಾಕಲು ಬರುವದಿಲ್ಲ. ಪಶ್ಚಿಮದಲ್ಲಿ ಈ ಸಂಬಂಧಗಳನ್ನು ಹೇಗೆ ನೋಡಲಾಯಿತು ಎಂಬುದಕ್ಕಿಂತ ನಮ್ಮ ಪೂರ್ವಜರು ಈ ಸಂಬಂಧಗಳನ್ನು ಹೇಗೆ ವಿಶ್ಲೇಷಿಸಿದರು ಎಂಬುದನ್ನು ಗಮನಿಸಿದರೆ ಇವೆಲ್ಲಕ್ಕೂ ಉತ್ತರ ದೊರಕಬಹುದು.

ಬಹುಶಃ ನಮ್ಮ ಪ್ರಾಚೀನ ಭಾರತೀಯರು “ಮನುಷ್ಯನಲ್ಲಿರುವ ಅನಿಯಂತ್ರಿತ ಕಾಮ, ಲೋಭ, ಮೋಹಾದಿಗಳೇ, ವಿವಾಹೇತರ ಸಂಬಂಧಗಳಿಗೆ ಕಾರಣಗಳು” ಎಂದು ಭಾವಿಸಿದ್ದರು ನನ್ನ ಅನಿಸಿಕೆ. ಇತಿಹಾಸ ಪುರಾಣಗಳಲ್ಲಿ ಬರುವ ಜಾರ-ಜಾರಿಣಿಯರಿರಲಿ ಅಥವಾ ಈಗಿನ ತಥಾಕಥಿತ ಹೈ ಸೊಸೈಟಿ ಕ್ಲಬ್ಬುಗಳ ಪುರುಷ-ಮಹಿಳೆಯರಿರಲಿ, ಎಲ್ಲ ಕಾಲಕ್ಕೂ ಮನುಷ್ಯನನ್ನು ವಿವಾಹೇತರ ಸಂಬಂಧಗಳಲ್ಲಿ ತೊಡಗುವಂತೆ ಮಾಡಿದ್ದು ಹಾಗೂ ಮಾಡುವದು ಕಾಮಾದಿಗಳೇ ಎನ್ನುವದು ನಮ್ಮ ಪೂರ್ವಜರ ವಿಶ್ಲೇಷಣೆ ಎಂದು ನನಗೆ ಅನಿಸುತ್ತದೆ.
ಈ ವಿಶ್ಲೇಷಣೆಯೇ ನನಗೆ ಸರಿ ಎನಿಸಲು ಹಲವಾರು ಕಾರಣಗಳಿವೆ. ಅಡಲ್ಟ್ರೀ ಕಾನೂನು ಬರುವದಕ್ಕೆ ಮೊದಲೂ ವಿವಾಹೇತರ ಸಂಬಂಧಗಳಿದ್ದವು. ಈ ಕಾನೂನು ಬಂದ ಮೇಲೂ ಅವುಗಳೇನೂ ನಾಶವಾಗಲಿಲ್ಲ. ಈ ಕಾನೂನು ಹೋಗದಿದ್ದರೂ ಅಥವಾ ಇನ್ನೂ ಕಠಿಣ ಕಾನೂನನ್ನಾಗಿಸಿದ್ದರೂ ಈ ಸಂಬಂಧಗಳು ಸಮಾಜದಿಂದೇನೂ ನಾಶವಾಗುತ್ತಿರಲಿಲ್ಲ. ಆದ್ದರಿಂದ ಸಮಾಜದಲ್ಲಿ ವಿವಾಹೇತರ ಸಂಬಂಧಗಳಿಗೂ ಅಡಲ್ಟ್ರೀ ಕಾನೂನಿಗೂ ಯಾವುದೇ ಕಾರ್ಯಕಾರಣ ಸಂಬಂಧವೇರ್ಪಡುವದಿಲ್ಲ.

ಆದರೆ ಮನುಷ್ಯನಲ್ಲಿರುವ ಅನಿಯಂತ್ರಿತ ಕಾಮಾದಿಗಳೇ ಈ ರೀತಿಯ ವಿವಾಹೇತರ ಸಂಬಂಧಗಳಿಗೆ ಕಾರಣ ಎಂದು ಊಹಿಸಿದರೆ, ಆ ಊಹೆಯು ದೇಶಕಾಲಾತೀತವಾಗಿ ಪ್ರಪಂಚದ ಯಾವದೇ ಮೂಲೆಯಲ್ಲಿ ನಡೆಯುವ ವಿವಾಹೇತರ ಸಂಬಂಧಕ್ಕೆ ಕಾರ್ಯಕಾರಣ ಸಂಬಂಧವೇರ್ಪಡಿಸುವದರಲ್ಲಿ ಸಹಾಯಕಾರಿಯಾಗುತ್ತದೆ. ಹಾಗಿದ್ದರೆ ಇತರ ಪುರುಷ ಅಥವಾ ಮಹಿಳೆಯರ ಮೇಲೆ ಕಾಮಾದಿಗಳು ಹುಟ್ಟದಂತೆ ಜಾಗ್ರತೆ ವಹಿಸುವದು ಹೇಗೆ? ಈ ಸಮಸ್ಯೆಯನ್ನು ನಮ್ಮ ಪೂರ್ವಜರು ಹೇಗೆ ನಿಭಾಯಿಸಿರಬಹುದು?

ಇದನ್ನು ಸಾಧಿಸಲು ಹಿಂದಿನ ಕಾಲದಲ್ಲಿ ಎಲ್ಲ ಜಾತಿ ಪರಂಪರೆಗಳಲ್ಲಿ ಕಾಮಾದಿಗಳನ್ನು ನಿಯಂತ್ರಿಸಲು ಹಲವಾರು ಆಚರಣೆಗಳನ್ನು ಜನರು ಹಾಕಿಕೊಂಡಿದ್ದಿರಬಹುದು. ಈ ಆಚರಣೆಗಳು ನೀಡುತ್ತಿದ್ದ ಅನುಭವವು ಕಾಮಾದಿಗಳ ನಿಯಂತ್ರಣವನ್ನು ಸಹಜವಾಗಿ ನಿಭಾಯಿಸಲು ಸಹಾಯಕವಾಗುತ್ತಿದ್ದಿರಬಹುದು. ವಿವಾಹೇತರ ಸಂಬಂಧಗಳ ಕುರಿತು ನಮ್ಮ ಪೂರ್ವಜರು ಹೀಗೆಯೇ ವಿಶ್ಲೇಷಿಸಿದ್ದರು ಎನ್ನುವದನ್ನು ಒಪ್ಪುವದಾದರೆ, ನಾವು ಇನ್ನೂ ಒಂದು ಅಂಶವನ್ನು ಒಪ್ಪಬೇಕು. ಅದೇನೆಂದರೆ, ಈ ಕಾಮಾದಿಗಳನ್ನು ನಿಯಂತ್ರಿಸಲು ಸಹಾಯಕವಾಗಿದ್ದ ಅಭ್ಯಾಸವನ್ನು ಕಲಿಸುತ್ತಿದ್ದ ಹಲವಾರು ಪರಂಪರಾಗತ ಆಚರಣೆಗಳನ್ನು ನಾವು ಇಂದು ಬಿಟ್ಟುಬಿಟ್ಟಿದ್ದೇವೆ. ಇಂದು ಇದು ನಮ್ಮ ಶಿಕ್ಷಣದಲ್ಲಿಯೂ ಇಲ್ಲ ಹಾಗೂ ಪರಂಪರಾಗತ ಆಚರಣೆಗಳ ಅನೂಚಾನ ಅನುಷ್ಠಾನವೂ ಎಲ್ಲ ಮನೆಗಳಲ್ಲಿ ಕಂಡು ಬರುವದಿಲ್ಲ.
ಇಂದಿನ ಸಮಾಜಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿವೆಯೇ? ಹೌದು ಎಂದಾದರೆ ಬಹುಶಃ ನಾವು ನಮ್ಮಲ್ಲಿ ಹುಟ್ಟುವ ಕಾಮಾದಿಗಳನ್ನು ನಿಯಂತ್ರಿಸಲು ಸಾಧ್ಯವಾಗಿಸುವ ಪರಂಪರಾಗತ ಅಭ್ಯಾಸಗಳನ್ನು ಬಿಟ್ಟಿದ್ದೇ ಕಾರಣವಾಗಿರಬಹುದು. ಇಲ್ಲಿ ಅಭ್ಯಾಸ ಎಂದರೆ ಅದು ಯೋಗ ಅಥವಾ ಪ್ರಾಣಾಯಾಮವೇ ಆಗಿರಬೇಕಿಲ್ಲ. ಪ್ರತಿಯೊಂದು ಸಂಪ್ರದಾಯವೂ ಆಚರಿಸುವ ನೂರಾರು ಆಚರಣೆಗಳಲ್ಲಿ ಯಾವುದು ಬೇಕಾದರೂ ಈ ಅಭ್ಯಾಸವನ್ನು ಕಲಿಸಿರಬಹುದು. ಮಡಿ ಕೂಡ ಇಂಥದೊಂದು ಅಭ್ಯಾಸವಾಗಿರಬಹುದು. ರಂಗೋಲಿ ಹಾಕೂವದೂ ಈ ಅಭ್ಯಾಸದ ಭಾಗವಾಗಿರಬಹುದು. ಪರಿಚಿತ ಅಥವಾ ಅಪರಿಚಿತ ಮಹಿಳೆಯರನ್ನು ಅಮ್ಮ ಎಂದೇ ಸಂಬೋಧಿಸಲು ಹೇಳಿಕೊಡುವ ಪ್ರವೃತ್ತಿಯೂ ಆಗಿರಬಹುದು. ಆದರೆ ಆಳವಾದ ಅಧ್ಯಯನಗಳಿಂದ ಇದನ್ನು ತಿಳಿದುಕೊಳ್ಳಬೇಕು.

ಒಂದು ವೇಳೆ ಈ ರೀತಿಯ ಅಧ್ಯಯನಗಳು ಈಗಾಗಲೇ ಆಗಿಬಿಟ್ಟಿದ್ದರೆ, ಅದು ನಮಗೆ ಸಹಾಯಕಾರಿಯಾಗುತ್ತಿತ್ತೇ? ಖಂಡಿತ ಹೌದು. ಶಬರಿಮಲೈ ದೇವಸ್ಥಾನದ ಕುರಿತು ಸುಪ್ರೀಂ ಕೋರ್ಟು ನೀಡುವ ತೀರ್ಪಿನಲ್ಲಿ ಈ ಅಧ್ಯಯನವು ಪ್ರಧಾನ ಪಾತ್ರವನ್ನು ವಹಿಸುತ್ತಿತ್ತು ಹಾಗೂ ಅಲ್ಲಿನ ಪರಂಪರೆಯನ್ನು ಉಳಿಸಿಕೊಳ್ಳುವ ತೀರ್ಪನ್ನು ಪಡೆಯಲು ಒಂದು ಪ್ರಬಲವಾದ ವಾದವನ್ನು ಅದು ನೀಡುತ್ತಿತ್ತು.
ಈಗ ಶಬರಿಮಲೈ ದೇವಸ್ಥಾನದ ಕುರಿತ ಯಾವುದೇ ಆಚರಣೆಯನ್ನು ಸುಪ್ರೀಂ ಕೋರ್ಟಿನಲ್ಲಿ ಚರ್ಚಿಸುವಾಗ ಅದನ್ನು ಕ್ಯಾಥೋಲಿಕ್ ಚರ್ಚಿನ ಮಾದರಿಯ ಆಚರಣೆಯನ್ನಾಗಿ ಚಿತ್ರಿಸಲಾಗುತ್ತದೆ. ಈ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎಂದು ಕಟಿಬದ್ಧರಾದವರೂ ಕೂಡ ಕೋರ್ಟಿನಲ್ಲಿ ವಾದ ಮಾಡಲು ನಿಂತಾಗ ಕ್ಯಾಥೋಲಿಕ್ ಮಾದರಿಯ ವಾದವನ್ನೇ ಅನುಸರಿಸುತ್ತಾರೆ. ಹೀಗಾಗಿ ಆ ವಾದಗಳು ನಿಲ್ಲದೇ ಬಿದ್ದು ಹೋಗುತ್ತದೆ. ಕೋರ್ಟುಗಳು ಅನುಸರಿಸುವ ಪ್ರಾಟೆಸ್ಟಂಟ್ ವಾದಗಳು ಇಲ್ಲಿ ಗೆದ್ದುಬಿಡುತ್ತವೆ. ಈ ವಾದಗಳಿಗೂ ಕ್ರಿಶ್ಚಿಯಾನಿಟಿಯ ಥಿಯಾಲಜಿಗೂ ಕಾರ್ಯಕಾರಣ ಸಂಬಂಧವಿದೆ.
ಕ್ಯಾಥೋಲಿಕ್ ಥಿಯಾಲಜಿಯ ಪ್ರಕಾರ ಹೆಣ್ಣು ಗಂಡಿಗಿಂತ ಕಡಿಮೆ ದರ್ಜೆಯವಳು. ಈವ್ ಶಾಪಗ್ರಸ್ತಳಾಗಿ ಆಡಮ್ ಜೊತೆ ಭೂಮಿಗೆ ಬಂದ ಮೇಲೆ ಋತುಮತಿಯಾಗಲಾರಂಭಿಸಿದಳು ಎಂದು ಕೆಲವು ಕ್ರಿಶ್ಚಿಯನ್ ಡಾಕ್ಟ್ರಿನ್ನುಗಳು ನಂಬುತ್ತವೆ. ಹೀಗಾಗಿ ಋತುಮತಿಯಾಗುವದು ಪಾಪದ ಫಲ ಎಂಬ ಭಾವನೆ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿಯಲ್ಲಿತ್ತಂತೆ. ಈ ಕಾರಣಕ್ಕಾಗಿಯೇ ಋತುಮತಿಯಾದ ಹೆಣ್ಣು ಚರ್ಚಿಗೆ ಬರುವಂತಿರಲಿಲ್ಲ ಎಂದು ಕೆಲವು ಕ್ಯಾಥೋಲಿಕ್ಕರ ಅಭಿಪ್ರಾಯವಾಗಿತ್ತು. ಆದರೆ ಪ್ರೊಟೆಸ್ಟಂಟ್ ಚಳುವಳಿ ಬೆಳೆದ ನಂತರ, ಸಮಾನತೆಯಂಥ ಕಲ್ಪನೆಗಳು “ಹೆಣ್ಣಿನ ಹಕ್ಕು ಹಾಗೂ ಘನತೆ” ಮತ್ತು ”ಮಹಿಳೆಯರು ಎರಡನೇ ದರ್ಜೆಯವರಲ್ಲ” ಎಂಬಂಥ ತರ್ಕವನ್ನೊಡ್ಡಿದವು. ಈ ತರ್ಕಗಳ ಮುಂದೆ ಕ್ಯಾಥೋಲಿಕ್ ತರ್ಕಗಳು ಸೋತುಹೋದವು.

ಸುಧಾರಣಾವಾದಿಗಳು ಹೇಳುವಂತೆ ಪುರೋಹಿತರು ಮುಟ್ಟಿನ ವಯಸ್ಸಿನ ಮಹಿಳೆಯರನ್ನು ಬಿಟ್ಟುಕೊಳ್ಳದಿರಲು ಅವರಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ ಗುಣವಿದೆ ಎಂಬ ಕಾರಣಕ್ಕಲ್ಲ. ಆ ಕಾರಣ ಈ ಪ್ರವೃತ್ತಿ ಯೂರೋಪಿನಲ್ಲಿತ್ತೇ ಹೊರತು ಇಲ್ಲಿರಲಿಲ್ಲ. ಆದರೆ ಕೋರ್ಟು ಇಲ್ಲಿಯೂ ಆ ಮನಸ್ಥಿತಿ ಇದೆ ಎಂದು ಊಹಿಸಿ ತೀರ್ಪು ನೀಡಿದೆ. ಹಾಗೆಯೇ ಮಹಿಳೆಯರು ಮುಟ್ಟಾದಾಗ ಅಪವಿತ್ರರಾಗಿರುತ್ತಾರೆ ಎನ್ನುವದೂ ಕೂಡ ಕ್ಯಾಥೋಲಿಕ್ ಮನಸ್ಥಿತಿ. ಆದರೆ ಈ ಕಾರಣಕ್ಕಾಗಿ ಮಹಿಳೆಯರು ದೇವಸ್ಥಾನಕ್ಕೆ ಹೋಗದಿರುವ ನಿರ್ಧಾರ ಮಾಡುವದಿಲ್ಲ. ಈ ವಯಸ್ಸಿನ ಮಹಿಳೆಯರು ಶಬರಿಮಲೈಗೆ ಹೋಗದಿರುವದೂ ಕೂಡ ಈ ಕಾರಣಕ್ಕಾಗಿ ಅಲ್ಲ. ಆದರೆ ಇಲ್ಲದ ಕಾರಣಗಳನ್ನು ಒಡ್ಡುವದರ ಮೂಲಕ ಸಂಪ್ರದಾಯದ ಪರವಾಗಿ ವಾದಿಸುವವರು ಇಲ್ಲದ ಕ್ಯಾಥೋಲಿಸಿಸಮ್ಮನ್ನು ಸೃಷ್ಟಿಸುತ್ತಿದ್ದಾರೆ.ಮಹಿಳೆಯರಿಗೆ ಪ್ರವೇಶ ಏಕೆ ನೀಡಬಾರದು ಎಂಬ ಪ್ರಶ್ನೆಗೆ ಸಂಪ್ರದಾಯದ ಪರವಾಗಿ ವಾದಿಸುವವರು ನೀಡಿರುವ ಹೇಳಿಕೆಗಳನ್ನು ನೋಡಿ. “ಮಹಿಳೆಯರು ಮುಟ್ಟಾದಾಗ ಬಂದರೆ ದೇವಸ್ಥಾನವು ಅಪವಿತ್ರವಾಗುತ್ತದೆ”, “ಇದು ವೈದಿಕ ದೇವಸ್ಥಾನವಲ್ಲ, ತಾಂತ್ರಿಕ ದೇವಸ್ಥಾನವಾಗಿದ್ದು ಇಲ್ಲಿನ ದೈವಕ್ಕೆ ಅದರದೇ ಆದ ಹಕ್ಕುಗಳಿವೆ, ಹಾಗೂ ಋತುಮತಿಯಾಗುವ ಮಹಿಳೆಯರನ್ನು ಇಲ್ಲಿನ ದೈವವು ಒಪ್ಪುವದಿಲ್ಲ”, “ಋತುಮತಿ ಮಹಿಳೆಯರು ಈ ದೇವಸ್ಥಾನಕ್ಕೆ ಬಂದರೆ ಅವಘಡಗಳು ಸಂಭವಿಸುತ್ತವೆ.” “ಮಹಿಳೆಯರು ಬಂದರೆ ಪುರುಷರಿಗೆ ಚಿತ್ತಚಾಂಚಲ್ಯವಾಗುತ್ತದೆ” ಇತ್ಯಾದಿ.

ಇನ್ನು ಕೆಲವು ಸಂಪ್ರದಾಯದ ಪರ ವಾದಿಸುವವರು “ಈ ನಿಯಮವು ಹಿಂದೆ ಸರಿಯಾಗಿದ್ದಿರಬಹುದು. ಆಗ ವಾಹನ ವ್ಯವಸ್ಥೆ ಇರಲಿಲ್ಲ. ಮಹಿಳೆಯರಿಗೆ ಗುಡ್ಡ ಹತ್ತಲಾಗುತ್ತಿರಲಿಲ್ಲ. ಈಗ ಆ ನಿಯಮ ಬೇಕಾಗಿಲ್ಲ. ಆದರೆ ಈ ಬದಲಾವಣೆಯು ಅಲ್ಲಿನ ಸಮಾಜದೊಳಗೇ ಆಗಬೇಕು.” ಎಂದು ಅಭಿಪ್ರಾಯಪಟ್ಟರು. ಇವೆಲ್ಲ ವಾದಗಳೂ ಸಂಪ್ರದಾಯವನ್ನು ಉಳಿಸಿಕೊಳ್ಳಲು ಬಂದವೇ ಹೊರತು ಮಹಿಳೆಯರನ್ನು ಅವಮಾನಿಸಲು ಖಂಡಿತ ಅಲ್ಲ. ಆದರೆ ಕೋರ್ಟಿಗೆ ಈ ವಾದಗಳು ಬೇರೆಯದೇ ಸಂದೇಶ ನೀಡಿತು.

ಕೋರ್ಟು ಈ ವಾದಗಳನ್ನು ಮಹಿಳೆಯರನ್ನು ಕೀಳಾಗಿ ಕಾಣುವ, ಅವರ ಪ್ರಾಕೃತಿಕ ಋತುಚಕ್ರವನ್ನು ಅವಮಾನಿಸುವ ಹಾಗೂ ಅವರ ಗೌರವಕ್ಕೆ ಧಕ್ಕೆ ತರುವಂಥ ಮನಸ್ಥಿತಿ ಎಂದು ವ್ಯಾಖ್ಯಾನಿಸಿತು. ಏಕೆಂದರೆ, ಸಂಪ್ರದಾಯದ ಪರ ವಾದಿಸುವವರು ಮಹಿಳೆಯರು ಏಕೆ ದೇವಸ್ಥಾನಕ್ಕೆ ಹೋಗಬಾರದು ಎಂಬುದಕ್ಕೆ ಕ್ರಿಶ್ಚಿಯನ್ ಚೌಕಟ್ಟಿನಲ್ಲಿ ವಿವರಣೆಗಳನ್ನು ನೀಡಲು ಹೊರಟರು. ಹೀಗಾಗಿ ಈ ವಿವರಣೆಗಳು ಸಂಪ್ರದಾಯದ ಪರ ವಾದಿಸುವವರಲ್ಲಿ ಕ್ಯಾಥೋಲಿಕ್ ಮಾದರಿಯ ಮಧ್ಯಯುಗೀಯ ಮನಸ್ಥಿತಿಯಿದೆ ಎಂಬ ಅಭಿಪ್ರಾಯ ಸೃಷ್ಟಿಸಿತು.

ಇಂದು ಸಂಪ್ರದಾಯದ ಪರ ವಾದಿಸುವವರು ಋತುಚಕ್ರವನ್ನು ಇಟ್ಟುಕೊಂಡು ವಾದ ಹೆಣೆಯಲು ಹೋಗಿ ಸಾವಿರ ವರ್ಷಗಳ ಹಿಂದಿನ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿ ವಾದಗಳನ್ನೇ ಮಾರುತ್ತಿದ್ದಾರೆ. ಹೀಗಾಗಿ ಈ ವಾದಗಳು ಸೋಲುವದು ಶತಃಸಿದ್ಧ. ಒಟ್ಟಿನಲ್ಲಿ ನಾವು ಸಂಪ್ರದಾಯ ಹಾಗೂ ಸುಧಾರಣೆಯ ಹೆಸರಿನಲ್ಲಿ ಇಲ್ಲದ ಯೂರೋಪನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಮಹಿಳೆಯರು ಮುಟ್ಟಾದಾಗ ದೇವಸ್ಥಾನಗಳಿಗೆ ಹೋಗುವದಿಲ್ಲ. ಕೆಲವು ದೇವಸ್ಥಾನಗಳಿಗೆ ಮಹಿಳೆಯರು ಹೋಗುವದಿಲ್ಲ. ಕೆಲವು ದೇವಸ್ಥಾನಗಳಿಗೆ ಪುರುಷರು ಹೋಗುವದಿಲ್ಲ. ಕೆಲವು ಸಮಯದಲ್ಲಿ ಯಾರೂ ಹೋಗಬಾರದ ದೇವಸ್ಥಾನಗಳಿವೆ. ಈ ರೀತಿಯ ವಿಚಿತ್ರ ನಿಯಮಗಳಿರುವ ದೇವಸ್ಥಾನಗಳಿಗೆ ಲೆಕ್ಕವೇ ಸಿಗುವದಿಲ್ಲ. ಆದರೆ ಈ ನಿಯಮಗಳಿಗೂ ಶೋಷಣೆಗೂ ಯಾವುದೇ ಕಾರ್ಯಕಾರಣ ಸಂಬಂಧವೇರ್ಪಡುವದಿಲ್ಲ.
ಆದರೆ ಹಿಂದೆ ಹೇಳಿದ ಪರಂಪರಾಗತ ಆಚರಣೆಗಳ ಕುರಿತು ಒಂದು ಪ್ರಖರವಾದ ಅಧ್ಯಯನ ನಾವು ಮಾಡಿದ್ದಿದ್ದರೆ, ಬಹುಶಃ ಶಬರಿಮಲೈ ದೇವಸ್ಥಾನಕ್ಕೆ ಹೋಗಲು ಪಾಲಿಸಬೇಕಾದ ವ್ರತವನ್ನೂ ಕೂಡ ಒಂದು ವಿಶಿಷ್ಟ ಅನುಭವವನ್ನು ನೀಡುವ ಕ್ರಿಯೆಯನ್ನಾಗಿ ನೋಡುವ ದೃಷ್ಟಿಕೋಣವೇ ಹುಟ್ಟುತ್ತಿತ್ತು. ಆಗ ಕೋರ್ಟು ಆ ಪರಂಪರೆಯನ್ನು ನಂಬಿಕೆಯೆಂದಾಗಿಯೋ ಅಥವಾ ಋತುಮತಿಯಾಗುವ ಮಹಿಳೆಯರನ್ನು ನಿರ್ಬಂಧಿಸಲು ಹಾಕಿರುವ ಮೂಢನಂಬಿಕೆಂದಾಗಿಯೋ ನೋಡದೇ, ಆ ಆಚರಣೆಯು ಮನುಷ್ಯನಿಗೆ ನೀಡುವ ಅನುಭವವು ಯಾವೆಲ್ಲ ಅಭ್ಯಾಸಗಳನ್ನು ಕಲಿಸುತ್ತದೆ ಎಂಬ ಅಧ್ಯಯನ ಮಾಡುತ್ತಿತ್ತು. ಬಹುಶಃ ಆಗ ಕೋರ್ಟು ಶಬರಿಮಲೈ ದೇವಸ್ಥಾನವನ್ನು ಕೇವಲ ಒಂದು ಪೂಜಾಸ್ಥಾನವನ್ನಾಗಿ ನೋಡದೇ, ಅದನ್ನು ಹಲವು ದಿನಗಳ ಕಾಲ ಭಕ್ತರು ತೊಡುವ ವಿಶಿಷ್ಟ ವ್ರತದ ಒಂದು ಅಂಗವಾಗಿ ನೋಡುತ್ತಿತ್ತು. ಈ ವ್ರತವನ್ನು ಹಾಗೂ ವ್ರತದ ಅಂತ್ಯದಲ್ಲಿ ಜನರು ಸೇರುವ ಶಬರಿಮಲೈ ದೇವಸ್ಥಾನವನ್ನು ಇಡಿಯಾಗಿ ಒಂದು ವ್ಯವಸ್ಥೆಯಾಗಿ ಅಧ್ಯಯನ ಮಾಡುತ್ತಿತ್ತು.
ಒಂದು ವೇಳೆ ಹೀಗಾಗಿದ್ದರೆ ಕೋರ್ಟು ತನ್ನ ಮುಂದೆ ಬೇರೆಯದೇ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಿತ್ತು. ಋತುಮತಿಯಾಗಬಹುದಾದ ಮಹಿಳೆಗೆ ಇದು ಅನುಕೂಲಕರವಾದ ವ್ರತವೇ? ಇದನ್ನು ಉಳಿದವರು ಮಾಡುವದರಿಂದ ಅವರಿಗೆ ಯಾವ ಅನುಭವವು ಒದಗಿ ಬರುವದೋ ಆ ಅನುಭವವು ಋತುಮತಿಯಗುವ ವಯಸ್ಸಿನ ಮಹಿಳೆಗೂ ಒದಗುವದೇ? ಹೌದು ಎಂದಾದಲ್ಲಿ ಈಗಿರುವ ತೀರ್ಪನ್ನೇ ನೀಡಬಹುದಿತ್ತು. ಆದರೆ ಇದೆಲ್ಲವೂ ಅಧ್ಯಯನದಿಂದ ತೀರ್ಮಾನಿತವಾಗುತ್ತಿತ್ತು ಮತ್ತು ಜನರಿಂದ ಸ್ವೀಕೃತವೂ ಆಗುತ್ತಿತ್ತು.

ಇಂದು ಗ್ರೀಕ್ ಹಾಗೂ ಪ್ರಾಚೀನ ರೋಮನ್ನರು ತಮ್ಮ ಸಮಾಜದ ಕುರಿತು ಯಾವ ಜ್ಞಾನವನ್ನು ಹೊಂದಿದ್ದರು ಎಂಬುದನ್ನು ತಿಳಿಯುವದು ಅತ್ಯಂತ ಕಷ್ಟವಾಗಿದೆ. ಏಕೆಂದರೆ ಆ ಸಂಸ್ಕೃತಿಗಳು ಈಗ ಉಳಿದಿಲ್ಲ. ಅವುಗಳ ಕುರಿತು ನಾವು ಮಾಡುವದೇನಿದ್ದರೂ ಅದು ಮರಣೋತ್ತರ ಪರೀಕ್ಷೆ. ಈ ದುಃಸ್ಥಿತಿ ನಮ್ಮ ಪರಂಪರೆಗಳಿಗೆ ಬರಬಾರದು ಎಂದಿದ್ದರೆ ಎಚ್ಚೆತ್ತುಕೊಳ್ಳಲು ಇದು ಸಕಾಲ. ಎಲ್ಲಿಯವರೆಗೆ ನಮ್ಮ ಪರಂಪರಾಗತ ಆಚರಣೆಗಳು ಒಂದು ಪ್ರಖರವಾದ ಮನೋವಿಶ್ಲೇಷಣೆಯಿಂದ ಹುಟ್ಟಿರುವ ಕ್ರಿಯೆಗಳು ಎನ್ನುವದನ್ನು ಕಂಡುಕೊಳ್ಳುವದಿಲ್ಲವೋ ಅಲ್ಲಿಯವರೆಗೂ ನಮ್ಮ ಪರಂಪರಾಗತ ಆಚರಣೆಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಪುನಾರಚಿಸಿಕೊಳ್ಳುವದೂ ಅಷ್ಟೇ ಕಷ್ಟ.

5 ಟಿಪ್ಪಣಿಗಳು Post a comment
 1. ಸೂರಜ್
  ಸೆಪ್ಟೆಂ 30 2018

  ಎರಡೂ ತೀರ್ಪನ್ನು ಸರಿಯಾಗಿ ವಿಶ್ಲೇಷಣೆ ಮಾಡಿದ್ದೀರ.
  ಹಾಗೇ ಇನ್ನೊಂದು ಸಂಗತಿ ಸೇರಿಸಿ, ಪ್ರತಿಯೊಂದು ಮಸೀದಿಗೆ ಮಹಿಳೆಯರ ನಿರ್ಬಂಧವಿದೆ. ಅದನ್ನು ಏಕೆ ಯಾರು ಪ್ರಶ್ನಿಸುತ್ತ ಇಲ್ಲ?

  ಉತ್ತರ
  • Nagshetty Shetkar
   ಸೆಪ್ಟೆಂ 30 2018

   ಮುಸಲ್ಮಾನರನ್ನು ಅವರ ಪಾಡಿಗೆ ಬದುಕಲು ನೀವು ಏಕೆ ಬಿಡುತ್ತಿಲ್ಲ. ಹಿಂದೂ ಸಮಾಜದ ಕೊಳಕಿಗೂ ಮುಸಲ್ಮಾನರೇ ಕಾರಣವೇನು? ಕೋಮುವಾದಿ ಮನಸ್ಥಿತಿ ಸುಶಿಕ್ಷಿತರನ್ನೂ ಭಕ್ತರಾಗಿಸಿದೆ ಎಂಬುದಕ್ಕೆ ನಿಮ್ಮ ಪ್ರತಿಕ್ರಿಯೆ ಒಳ್ಳೆಯ ಉದಾಹರಣೆ ರಾಯರೇ.

   ಉತ್ತರ
 2. Nagshetty Shetkar
  ಸೆಪ್ಟೆಂ 30 2018

  Welcome is Supreme Court judgment. Big blow Bhakts getting.

  ಉತ್ತರ
 3. Nagshetty Shetkar
  ಸೆಪ್ಟೆಂ 30 2018

  ಸುಪ್ರೀಂ ಕೋರ್ಟು ಕೊಟ್ಟ ತೀರ್ಪು ಪ್ರಗತಿಪರ ಸಮಾಜದ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಕೋಮುವಾದಿ ಮನಸ್ಥಿತಿಯ ದೇವಸ್ಥಾನಗಳು ಇನ್ನಾದರೂ ಎಚ್ಚರಗೊಂಡು ಸಂವಿಧಾನಬದ್ಧ ಸಮಾನತೆಯನ್ನು ಅನುಷ್ಠಾನಕ್ಕೆ ತರತಕ್ಕದ್ದು. ಸ್ತ್ರೀಯರನ್ನು ತುಚ್ಛವಾಗಿ ಕಾಣುವ ಪುರೋಹಿತಶಾಹಿ ಶಕ್ತಿಗಳಿಗೆ ಪ್ರಜಾಪ್ರಭುತ್ವದ ಪ್ರಾಥಮಿಕ ಪಾಠವನ್ನು ಜೈಲಿನಲ್ಲಿ ಕೊಡಲಾಗುವುದು. ಎಲ್ಲಾ ವಿಷಯಗಳಿಗೂ ತಲೆ ಹಾಕುವ ಪೇಜಾವರ ಶಬರಿಮಲೆ ತೀರ್ಪು ಬಗ್ಗೆ ಮೌನ ತಾಳಿರುವುದು ಮಾರ್ಮಿಕವಾಗಿದೆ.

  ಉತ್ತರ
 4. ಪ್ರಜ್ನಾ
  ನವೆಂ 4 2018

  “ಈವ್ ಶಾಪಗ್ರಸ್ತಳಾಗಿ ಆಡಮ್ ಜೊತೆ ಭೂಮಿಗೆ ಬಂದ ಮೇಲೆ ಋತುಮತಿಯಾಗಲಾರಂಭಿಸಿದಳು ಎಂದು ಕೆಲವು ಕ್ರಿಶ್ಚಿಯನ್ ಡಾಕ್ಟ್ರಿನ್ನುಗಳು ನಂಬುತ್ತವೆ. ಹೀಗಾಗಿ ಋತುಮತಿಯಾಗುವದು ಪಾಪದ ಫಲ ಎಂಬ ಭಾವನೆ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿಯಲ್ಲಿತ್ತಂತೆ. ಈ ಕಾರಣಕ್ಕಾಗಿಯೇ ಋತುಮತಿಯಾದ ಹೆಣ್ಣು ಚರ್ಚಿಗೆ ಬರುವಂತಿರಲಿಲ್ಲ ಎಂದು ಕೆಲವು ಕ್ಯಾಥೋಲಿಕ್ಕರ ಅಭಿಪ್ರಾಯವಾಗಿತ್ತು”

  –>ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದ ಹಾಗಾಯಿತು. ಭಾರತೀಯ ಸಂಪ್ರದಾಯದಲ್ಲಿ ಮುಟ್ಟಾದ ಹೆಣ್ಣನ್ನು ದೂರವಿಟ್ಟಷ್ಟು ಕ್ಯಾಥೊಲಿಕ್ಕರಲ್ಲಿ ಇಟ್ಟಿರಲಿಲ್ಲ. ಇಂದಿಗೂ ಮುಟ್ಟಾದ ಮಹಿಳೆಯನ್ನು ಮನೆಯೊಳಗೆ, ದೇವಸ್ಥಾನದೊಳಗೆ ಸೇರಿಸುವದಿಲ್ಲ. ಕ್ಯಾಥೊಲಿಕ್ಕರು ಯಾರೆಂದರೇನೆ ಗೊತ್ತಿರದ ಪುರೋಹಿತರು, ಸಂಪ್ರದಾಯವಾದಿಗಳು ಮುಟ್ಟಾದ ಹೆಣ್ಣನ್ನು ಅಪವಿತ್ರ ಎಂದೆ ಬಗೆಯುತ್ತಾರೆ. ಈ ಗ್ರಹಿಕೆಯನ್ನು ಹಿಂದೂ ಸಂಪ್ರದಾಯವಾದಿಗಳು ಕ್ರಿಶ್ಚಿಯನ್ನರಿಂದ ಎರವಲು ಪಡೆದದ್ದು ಎಂದು ಶಿಷ್ಯಕೋಟಿಗಳು ಬೇರೆಯವರ ತಲೆಮೇಲೆ ಹೂವಿಡುತ್ತಿದ್ದಾರೆ ಅಷ್ಟೆ. ಎಲ್ಲದಕ್ಕೂ ಕಾರಣ, ಕ್ಯಾಥೊಲಿಕ್ಕರು, ಪ್ರೊಟೆಸ್ಟಂಟರು ಎಂದು ದೂರುವದನ್ನು ಬಿಟ್ಟರೆ ಶಿಷ್ಯಕೋಟಿಗಳ ಸಂಶೋಧನೆಯಲ್ಲಿ ಬೇರ್ಯಾವ ಬಂಡವಾಳವೂ ಇಲ್ಲ. ಅದು ಅಪವಿತ್ರತೆಯ ಕಾರಣಕ್ಕಲ್ಲ ಎಂದರೆ ಮತ್ಯಾವ ಕಾರಣ ಎಂದು ಶಿಷ್ಯಕೋಟಿಗಳೇ ಸಂಶೋಧನೆ ಮಾಡಬೇಕು.

  “ಋತುಮತಿಯಾಗಬಹುದಾದ ಮಹಿಳೆಗೆ ಇದು ಅನುಕೂಲಕರವಾದ ವ್ರತವೇ? ಇದನ್ನು ಉಳಿದವರು ಮಾಡುವದರಿಂದ ಅವರಿಗೆ ಯಾವ ಅನುಭವವು ಒದಗಿ ಬರುವದೋ ಆ ಅನುಭವವು ಋತುಮತಿಯಗುವ ವಯಸ್ಸಿನ ಮಹಿಳೆಗೂ ಒದಗುವದೇ? ಹೌದು ಎಂದಾದಲ್ಲಿ ಈಗಿರುವ ತೀರ್ಪನ್ನೇ ನೀಡಬಹುದಿತ್ತು”

  –>ತೀರ್ಪನ್ನು ಒಂದು ಅಧ್ಯಯನದ ಮುಖಾಂತರ ನೀಡುವದೆ ವಸಾಹತುಶಾಹಿ ಪ್ರಜ್ನೆ. ಲೇಖನದುದ್ದಕ್ಕೂ ಕ್ಯಾಥೊಲಿಕ್ಕು, ಪ್ರಾಟೆಸ್ಟಂಟು ಅಂತ ಉದ್ದುದ್ದ ಬರೆದು ಮತ್ತದೆ ಆಲದಮರಕ್ಕೆ ಶರಣಾಗುತ್ತಿದ್ದೀರಲ್ರಿ. ಒಂದು ಹೆಣ್ಣೂ ತನಗಿಷ್ಟ ವೃತ ಪಾಲಿಸಲು, ದೇವಸ್ಥಾನಕ್ಕೆ ಹೋಗಲು, ಬರಲು ಯಾವ ಅಧ್ಯಯನದ ಅಗತ್ಯತೆ ಯಾಕೆ ಇದೆ?ಆಧ್ಯಾತ್ಮಿಕ ಅನುಭವಗಳನ್ನು ಅಧ್ಯಯನಕ್ಕೆ ಒಳಪಡಿಸುವದು ಭಾರತೀಯ ಸಂಪ್ರದಾಯದ ನಿರೂಪಣೆಯೊ ಅಥವಾ ವಸಾಹತುಶಾಹಿ ಪ್ರಜ್ನೆಯ ಭಾಗವೋ? ಅಷ್ಟಕ್ಕೂ ನಿಮಗೆ ಸಧ್ಯದ ತೀರ್ಪಿನಲ್ಲಿ ಸಮಸ್ಯೆಯಾದರೂ ಏನಿದೆ? ಸಮಸ್ಯೆಯಿರುವದು ಸಂಪ್ರದಾಯವಾದಿಗಳಿಗೆ. ಅವರಿಗೆ ಶಿಷ್ಯಕೋಟಿಗಳೆಲ್ಲ ಸೇರಿ ಬುದ್ಧಿ ಹೇಳಿ, ನಿಮ್ಮ ಈ ಗ್ರಹಿಕೆ ಕ್ಯಾಥೊಲಿಕ್ಕರದು ಅಂತ, ನಮ್ಮ ಸಂಪ್ರದಾಯದಲ್ಲಿ ಮುಟ್ಟಾದ ಹೆಂಗಸರು ಅಪವಿತ್ರವಲ್ಲ ಅಂತ ಸಂಪ್ರದಾಯವಾದಿಗಳಿಗೆ ತಿಳಿಯಪಡಿಸಿ. ಅದನ್ನು ಬಿಟ್ಟು ಮುಟ್ಟಾದ ಮಹಿಳೆಯರ ಅನುಭವಗಳನ್ನೆಲ್ಲಾ ಅಧ್ಯಯನ ಮಾಡಿ ತೀರ್ಪು ಕೊಡ್ಬೇಕು ಎನ್ನುವ ಅಸಂಬದ್ಧ ತರ್ಕವನ್ನು ಮುಂದಿಡುತ್ತಿದ್ದೀರಲ್ಲಾ?
  ಇಂತಹ ಅಧ್ಯಯನವನ್ನು ಮಾಡಲು ಶಿಷ್ಯಕೋಟಿಗಳೇ ಸೂಕ್ತ. :D.
  ತೀರ್ಪನ್ನು ’ಮಶಿ’(ಮರುತ್ಪಾದಕ ಶಿಷ್ಯಕೋಟಿ) ಗಳೇ ನೀಡಲಿ, ಅದರ ಅನುಸರಣೆ ಮಾತ್ರ ನಿಮ್ಮಲ್ಲೆ ಇಟ್ಟುಕೊಳ್ಳಿ. ಬೇರೆಯವರು ನಿಮ್ಮ ಅಧ್ಯಯನದ ಪ್ರಕಾರ ಅನುಸರಿಸಬೇಕು ಎನ್ನುವದು ಅನವಶ್ಯಕ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments