ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 10, 2018

3

ಆಗಸಕ್ಕೆ ಏಣಿ ಹಾಕಿದ ನಾಯಕರು..

‍ನಿಲುಮೆ ಮೂಲಕ

– ಸುಜಿತ್ ಕುಮಾರ್

ರಿಚರ್ಡ್ ಬ್ರಾನ್ಸನ್:

104631479-GettyImages-124080917.1910x1000ಆತನ ವಯಸ್ಸು 16. ಬಾಲ್ಯವೆಲ್ಲ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ನರಳಿದ ಆತ ತನ್ನ ಜೀವನದ ಅತಿ ಮಹತ್ವದ ಘಟ್ಟದಲ್ಲಿ ನಿಂತಿದ್ದಾನೆ. ಓದಲು, ಕಲಿಯಲು ಮನಸ್ಸಿದ್ದರೂ ದೇಹ ಸಾಥ್ ನೀಡುತ್ತಿಲ್ಲ. ಹಿಂದಿಯ ‘ತಾರೆ ಝಮೀನ್ ಪರ್’ ಚಿತ್ರವನ್ನು ನೋಡಿದವರಿಗೆ ಈ ಸಮಸ್ಯೆಯ ಆಳ ಒಂದಿಷ್ಟು ಅರಿಯಬಹುದು. ಅಂದು ಆತನ ಶಾಲೆಯ ಕೊನೆ ದಿನ. ಓದಲು ಬರೆಯಲು ಆಗದು ಎಂದರಿತ ಪೋಷಕರು ಆತನನ್ನು ಶಾಲೆಯಿಂದ ತೆಗೆಯುವ ನಿರ್ಧಾರವನ್ನು ಮಾಡಿದ್ದಾರೆ. ಆ ಎಳೆಯ ಹುಡುಗ ತನ್ನ ಸ್ನೇಹಿತರಿಂದ, ಶಾಲೆಯಿಂದ ದೂರವಾಗುತ್ತಿದ್ದಾನೆ. ಶಿಕ್ಷಕರಲೊಬ್ಬರು ಈತ ಹೊರಡುವಾಗ ‘ನೀನು ಮುಂದೆ ಒಂದೋ ಅಪರಾದಿಯಾಗಿ ಜೈಲಿನಲ್ಲಿ ಕೊಳೆಯುತ್ತೀಯ ಇಲ್ಲವಾದರೆ ಒಬ್ಬ ಕೋಟ್ಯಧಿಪತಿಯಾಗಿ ಬೆಳೆಯುತ್ತೀಯ’ ಎಂದು ದ್ವಂದ್ವದ ಹಾರೈಕೆಯೊಂದನ್ನು ನೀಡಿ ಬೀಳ್ಕೊಟ್ಟರು. ಹೇಳಿದ ಮಾತಿನ ಅರ್ಥವನ್ನು ಅರಿಯುವುದು ಹಾಗಿರಲಿ ಕಡೆಯ ಪಕ್ಷ ದಿನನಿತ್ಯದ ಕೆಲಸಕಾರ್ಯಗಳನ್ನೂ ಸರಿಯಾಗಿ ಮಾಡಲಾಗದ ಹುಡುಗನೊಬ್ಬ ಆತನ ಶಿಕ್ಷಕನ ಮಾತಿನಂತೆ ಇಂದು ಏನಾಗಿರಬಹುದು? ಅದು ಶಿಕ್ಷಕನ ಕುಹಕ ನುಡಿಯೋ ಅಥವಾ ಪ್ರೋತ್ಸಾಹಭರಿತ ಮಾತೋ, ಆತ ಮಾತ್ರ ಇಂದು ಜಗತ್ತಿನಾದ್ಯಂತ ಇರುವ ಸುಮಾರು 400 ಕಂಪನಿಗಳ ಒಡೆಯ!  ಹೆಸರು ರಿಚರ್ಡ್ ಬ್ರಾನ್ಸನ್. ವರ್ಜಿನ್ ಗ್ರೂಪ್ಸ್ ಎಂಬ ವಿಶ್ವದ ಪ್ರಖ್ಯಾತ ಸಂಘಟಿತ ಸಂಸ್ಥೆಯ ಮಾಲೀಕನಾದ ಈತ ಬೆಳೆದು ಬಂದ ಹಾದಿ ಯಾವ ಚಿತ್ರಕತೆಗೂ ಕಮ್ಮಿ ಇಲ್ಲ. ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆದ ಈತನ ಪೋಷಕರು ಈತನೊಬ್ಬ ಸಹಜ ಮಾನವ ಜೀವಿಯಾದರೆ ಸಾಕೆಂದಷ್ಟೇ ಅರಸಿದರು. ಹೊರಜಗತ್ತಿಗೆ ಈತ ಒಬ್ಬ ವಿಕಲಚೇತನನಂತೆ ಕಂಡರೂ ಈತನ ಒಳಜಗತ್ತು ಜಗತ್ತನೇ ಗೆಲ್ಲುವ ತವಕದಲ್ಲಿತ್ತು. ಆದುದರಿಂದಲೇ ಏನೋ ಅಂದು ಶಾಲೆಯಿಂದ ಹೊರಬಂದ ಬ್ರಾನ್ಸನ್ ‘ಸ್ಟೂಡೆಂಟ್’ ಎಂಬ ಹೆಸರಿನ ಮ್ಯಾಗಜಿನ್ ಒಂದನ್ನು ತೆರೆದೇಬಿಟ್ಟ! ತನ್ನ ಕ್ರಿಯಾಶೀಲತೆಯನ್ನೆಲ್ಲ ಆ ಮ್ಯಾಗಜಿನ್ ನ ಮೇಲೆತ್ತುವಿಕೆಯಲ್ಲೇ ಹರಿಸಿ ನೋಡನೋಡುತ್ತಿದ್ದಂತೆಯೇ ತನ್ನ ಒಡೆತನದ ರೆಕಾರ್ಡಿಂಗ್ ಸ್ಟುಡಿಯೋ ಒಂದನ್ನು ಆತ ತೆರದ. ಅಲ್ಲಿಂದ ಮುಂದೆ ಈತನನ್ನು ಯಾರೊಬ್ಬರೂ ಸಹ ಹಿಡಿದು ನಿಲ್ಲಿಸಲಾಗಲಿಲ್ಲ, ಸ್ವತಃ ಆತನ ಡಿಸ್ಲೆಕ್ಸಿಯಾ ಸಮಸ್ಯೆ ಕೂಡ! ಇಂದು 5.1 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯನಾಗಿರುವ ರಿಚರ್ಡ್ ಬ್ರಾನ್ಸನ್ ನ ‘ವರ್ಜಿನ್ ಮೀಡಿಯಾ’ , ‘ವರ್ಜಿನ್  ಹಾಲಿಡೇಸ್’, ‘ವರ್ಜಿನ್ ಮ್ಯೂಸಿಕ್’ , ‘ವರ್ಜಿನ್  ಗಲಾಟಿಕ್’ ಎಲ್ಲವೂ ವಿಶ್ವದಾದ್ಯಂತ ಚಿರಪರಿಚಿತವಾಗಿರುವ ಬ್ರಾಂಡ್ ಗಳು.

ಜೆಫ್ ಬೆಝೋಸ್:

105141369-Jeff_Bezos_Pad.1910x1000ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ರನ್ನು ಹಿಂದಕ್ಕೆ ಹಾಕಿದ ಈತ ಇಂದು ವಿಶ್ವದ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗ. ಹೆಚ್ಚು ಕಡಿಮೆ ಪ್ರಸ್ತುತ ಪ್ರತಿಯೊಬ್ಬರೂ ಕೇಳಿರುವ ಅಮೆಜಾನ್ ಎಂಬ ಧೈತ್ಯ ಸಂಸ್ಥೆಯ ಮಾಲೀಕನಾದ ಈತ ಮೂವತ್ತು ವರ್ಷಗಳ ಹಿಂದೆ ನಮ್ಮ ನಿಮ್ಮಂತೆಯೇ ಬೆಳಗಿನಿಂದ ಸಂಜೆಯವರೆಗೆ ದುಡಿಯುವ ಒಬ್ಬ ಸಾಧಾರಣ  ನೌಕರ. ಆದರೆ ತನ್ನ ಮೂರನೇ ವಯಸ್ಸಿಗೆ ಸ್ಕ್ರೂ ಡ್ರೈವರ್ ಒಂದನ್ನು ಹಿಡಿದು ತನ್ನನ್ನು ಕಟ್ಟಿ ಹಾಕುತಿದ್ದ ತೊಟ್ಟಿಲನ್ನೇ ಬಿಚ್ಚಲು ಹೊರಟಿದ್ದ ಮಗುವೊಂದು ಹೀಗೆ ಜೀವನವಿಡೀ ಖಾಸಗಿ ಕಂಪನಿಗಳಿಗೆ ದುಡಿಯುವ ಸಂಭವ ತೀರಾ ಕಡಿಮೆ. ಅಂತೆಯೇ ಕೆಲವರ್ಷಗಳ ಕಾಲ ಖಾಸಗಿ ಕಂಪನಿಗಳಿಗೆ ದುಡಿದ ಜೆಫ್ 1994 ರಲ್ಲಿ ಅಮೆಜಾನ್ ಎಂಬ ಆನ್ಲೈನ್ ಪುಸ್ತಕ ಮಳಿಗೆಯನ್ನು ತೆರೆದ. ಅದು ಇಂಟರ್ನೆಟ್ ಎಂಬ ಹೆಮ್ಮರ ಚಿಗುರೊಡೆಯುತ್ತಿದ್ದ ಕಾಲ. ಅದರ ಮುನ್ಸೂಚನೆ ಜೆಫ್ ನ ಬಡಿದೆಬ್ಬಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಪುಸ್ತಕಗಳೊಟ್ಟಿಗೆ ಮ್ಯೂಸಿಕ್ ವಿಡಿಯೋ ಗಳು ಹಾಗು ಇತರೆ ಗೃಹಪಯೋಗಿ ವಸ್ತುಗಳನ್ನೂ ಅಲ್ಲಿ ಮಾರಲು ಆತ ಶುರುವಿಟ್ಟನು. ಆದರೆ ಹಿಂದೆಂದೂ ಕಾಣದ ಹೊಸ ಮಾದರಿಯ ವಹಿವಾಟನ್ನು ಗಮನಿಸಿ ಹಲವರು ಈತನಿಗೆ ಎಚ್ಚರಿಸಿದ್ದೂ ಉಂಟು. ಆದರೆ ಗುರಿ ಸ್ಪಷ್ಟವಾಗಿದ್ದು ನಮ್ಮ ಪ್ರಯತ್ನವೂ ಅದಕ್ಕೆ ಪೂರಕವಾಗಿದ್ದರೆ ಹೆದರುವ ಮಾತೆಲ್ಲಿಂದ?  ಜೆಫ್ ತನ್ನ ವೇಗವನ್ನು ಹೆಚ್ಚಿಸಿದ. ನೋಡ ನೋಡುತ್ತಲೇ ಅಮೆಜಾನ್ ಮನೆ-ಮನೆಯ ಮಾತಾಯಿತು. ಜೆಫ್ನ ಸಾಧನೆ ನೆಟ್ಟಿನಲ್ಲಿ ಹರಿದಾಡತೊಡಗಿತು. Souq.com, ಗುಡ್ ರೀಡ್ಸ್, IMDb,  ಶತಮಾನಗಳ ಇತಿಹಾಸ ವಿರುವ ‘ದಿ ವಾಷಿಂಗ್ ಟನ್ ಟೈಮ್ಸ್  ಪತ್ರಿಕೆ’ ,ಬ್ಲೂ ಆರಿಜಿನ್ ಎಂಬ ಒಟ್ಟು ಹದಿನಾಲ್ಕು ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುನ್ನೆಡೆದ ಈತ ಇಂದು ಒಟ್ಟು 112 ಬಿಲಿಯನ್ ಡಾಲರ್ ಗಳ ಒಡೆಯ!

ಎಲಾನ್ ಮಸ್ಕ್ :

20774elon-musk-1ಈತನಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ನ ಹುಚ್ಚು ಅದೆಷ್ಟಿತ್ತೆಂದರೆ  ತನ್ನ ಹತ್ತನೇ ವಯಸ್ಸಿಗೇ ಯಾವುದೇ ಶಾಲಾ ಕಾಲೇಜುಗಳ ತರಗತಿಗಳ ಅವಶ್ಯಕೆತೆ ಇಲ್ಲದೆಯೇ, ಮನೆಯಲ್ಲಿದ್ದ ಪುಸ್ತಕಗಳ ಓದಿನಿಂದಲೇ ವಿಡಿಯೋ ಗೇಮಿನ ಪ್ರೋಗ್ರಾಮ್ ಒಂದನ್ನು ಬರೆಯುತ್ತಾನೆ. ಅದು ಯಶಸ್ವಿಯೂ ಆಗುತ್ತದೆ. ನಂತರ ಆ ಗೇಮನ್ನು ಕೆಲವೇ ನೂರು ಡಾಲರ್ಗೆ ಕಂಪನಿಯೊಂದಕ್ಕೆ ಆತ ಮಾರಿಯೂ ಬಿಡುತ್ತಾನೆ! ಬಹುಷಃ ಈ ಒಂದು ವಹಿವಾಟೇ ಆತನಿಗೆ ಹೊಸತೊಂದನ್ನು ಹುಟ್ಟುಹಾಕಿ, ಬೆಳೆಸಿ ಅದನ್ನು ಮಾರಿ ಮಗದೊಂದು ಸಾಹಸಕ್ಕೆ ಕೈಯಾಕುವ ಧೈರ್ಯವನ್ನು ಅಂದು ಬೆಳೆಸಿರಬೇಕು. ಬ್ಯುಸಿನೆಸ್ ವಲಯದ ಐರನ್ ಮ್ಯಾನ್ ಎಂದೇ ಪ್ರಖ್ಯಾತಿ ಹೊಂದಿರುವ ಎಲಾನ್ ಮಸ್ಕ್ ಮುಂದೆ ಬೆಳೆದ ಹಾದಿ ಆತನ ಈ ನೆಡೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾಕಷ್ಟು ಏಳುಬೀಳುಗಳ ನಂತರ 1995 ರಲ್ಲಿ Jip-2 ಎಂಬ ಆನ್ಲೈನ್ ಸಿಟಿ ಗೈಡ್ ವೆಬ್ಸೈಟ್ ಅನ್ನು ತೆರೆದ ಈತ ಕೆಲವೇ ವರ್ಷಗಳ ನಂತರ ಅದನ್ನು ಬೇರೊಂದು ಕಂಪನಿಗೆ ಮಾರಿ ಬರೋಬ್ಬರಿ 22 ಮಿಲಿಯನ್ ಡಾಲರ್ ಗಳನ್ನು ಗಳಿಸಿಕೊಳ್ಳುತ್ತಾನೆ. ದೊರೆತ ಹಣದಿಂದ X.com ಎಂಬ ಆನ್ಲೈನ್ ಬ್ಯಾಂಕಿಂಗ್ ಕಂಪನಿಯನ್ನು ತೆರೆದ ಈತ ಮುಂದೆ ಅದನ್ನು ‘ಕಾನ್ಫಿನಿಟಿ’ ಎಂಬ ಕಂಪನಿಯೊಟ್ಟಿಗೆ ವಿಲೀನಗೊಳಿಸಿ ಸ್ಥಾಪಿಸಿದ ಹೊಸ ಕಂಪನಿಯೇ ವಿಶ್ವವಿಖ್ಯಾತ ‘Paypal.com’. ಮುಂದೆ PayPal ಅನ್ನು Ebay.com ಕಂಪನಿಗೆ 1.5 ಬಿಲಿಯನ್ ಡಾಲರ್ ಗೆ ಮಾರಿ ತನ್ನ ಷೇರಿನ ಮೊತ್ತ 165 ಮಿಲಿಯನ್ ಡಾಲರ್ ಗಳನ್ನು ಕಿಸೆಗೆ ಹಾಕಿಕೊಳ್ಳುತ್ತಾನೆ. ಬಂದ ಹಣದಿಂದ ಈತ ಸ್ಥಾಪಿಸಿದ ಮಗದೊಂದು ಕಂಪನಿ ಅಕ್ಷರ ಸಹ ಈತನ ಮೂರ್ಖ ನಡೆಯಂತೆ ಅಂದು ಎಲ್ಲರಿಗೂ ಭಾಸವಾಯಿತು. ಏಕೆಂದರೆ ಈತ ದೊರೆತ ಆ ದೊಡ್ಡ ಮೊತ್ತದ ಹಣವನ್ನು ಬಳಸಿಕೊಂಡಿದ್ದು ಅಂತರಿಕ್ಷ ವಾಹನಗಳ ಬಿಡಿಭಾಗಗಳ ನಿರ್ಮಾಣ ಹಾಗು ಬಾಹ್ಯಾಕಾಶಕ್ಕೆ ಚಲಿಸುವ ವಾಹನಗಳ ನಿರ್ಮಾಣದ SpaceX ಎಂಬ ಸಂಸ್ಥೆ! ಸರಿ ಆತನ ದುಡ್ಡು ಆತನ ಬುದ್ದಿ ಎಂದು ಸುಮ್ಮನಾದ ಈತನ ಹಿತೈಷಿಗಳಿಗೆ ಆತನ ಓಟದ ಗುರಿ ಇನ್ನೂ ತಿಳಿದಿರಲಿಲ್ಲ. ಮುಂದೆ ಟೆಸ್ಲಾ ಮೋಟಾರ್ಸ್ ಎಂಬ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿ, ಸೋಲಾರ್ ಪ್ಯಾನೆಲ್ ಗಳನ್ನು ನಿರ್ಮಿಸುವ ಸೋಲಾರ್ ಸಿಟಿ ಎಂಬ ಕಂಪನಿ, OpenAI ಎಂಬ ಲಾಭರಹಿತ  ಸಂಶೋಧನಾ ಸಂಸ್ಥೆಯನ್ನು ತೆರೆದು ಕೃತಕ ಬುದ್ದಿವಂತಿಕೆಗೆ ಉತ್ತೇಜನ, ಘಂಟೆಗೆ 2000 ಕಿಲೋಮೀಟರ್ ವೇಗವನ್ನು ತಲುಪುವ ಹೈಪರ್ ಲೂಪ್ ಎಂಬ ಸಾರಿಗೆ ವ್ಯವಸ್ಥೆಯನ್ನು ತನ್ನ ‘ದ ಬೋರಿಂಗ್’ ಕಂಪನಿಯ ಮೂಲಕ ಸಾಧಿಸಲು ಗುರಿಯನ್ನು ಹಾಕಿಕೊಂಡಿರುವ ಈತನದು ಇಂದು ಬೆಳೆಯುತ್ತಿರುವ ಹಲವು ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವ.

ಇಲ್ಲಿ ಏಕೆ ಈ ಮೂವರ ಬಗ್ಗೆ ಇಂದು ಚರ್ಚಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಖಂಡಿತಾವಾಗಿಯೂ ಇದೆ. ಈ ಮೂವರ ಯೋಚನೆಯಲ್ಲೂ ಹಾಗು ಯೋಜನೆಯಲ್ಲೂ ಅತಿ ಕಾಮನ್ ಅಂಶ ಒಂದಿದೆ. ಅದೇ ಬಾಹ್ಯಾಕಾಶ. ಮಗುವೊಂದಕ್ಕೆ ತನ್ನ ಎಳೆತನದಲ್ಲಿ ಅಂತರಿಕ್ಷಕ್ಕೆ ಜಿಗಿಯುವ ಪ್ಲೈನು ರಾಕೆಟ್ಗಳನ್ನು ನೋಡಿ ನಾನೂ ಕೂಡ ಅಂತಹದೊಂದು ಸಾಧನೆಯನ್ನು ಮಾಡಬೇಕೆಂದು ಕನಸ್ಸು ಕಾಣುವುದು ತೀರಾ ಸಹಜವೇ. ಈ ತ್ರಿವಳಿಗಳೂ ಅಂತಹದ್ದೇ ಆದ ಕನಸ್ಸನ್ನು ತಮ್ಮ ಎಳೆಯ ವಯಸ್ಸಿನಲ್ಲಿ ಕಂಡಿದ್ದರು. ಸಮಯ ಹಾಗು ಸಂಧರ್ಭ ತಮ್ಮ ಕನಸ್ಸಿಗೆ ಪೂರಕವಾಗಿರಲಿಲ್ಲವಷ್ಟೇ. ಆದರೆ ಆ ಕನಸ್ಸು ಕಾಲದ ಗಾಲಿಯಲ್ಲಿ ಸವೆಯಲಿಲ್ಲ. ಅಳಿಸಲಿಲ್ಲ. ಒಳಗೊಳಗೇ ಅದು ಗಟ್ಟಿಗೊಂಡಿತ್ತು. ಎಂದು ಇವರುಗಳು ಯಶಸ್ಸಿನ ಉತ್ತುಂಗವನ್ನು ಹತ್ತಿದರೋ ಅಂದೇ ತಮ್ಮ ವಿಶಿಷ್ಟ ಕನಸ್ಸಿಗೆ ರೆಕ್ಕೆಯನ್ನು ಕಟ್ಟಲಾಂಬಿಸಿದರು. ರಿಚರ್ಡ್ ಬ್ರಾನ್ಸನ್ 2004 ರಲ್ಲಿ ವರ್ಜಿನ್ ಗಲಾಟಿಕ್ ಎಂಬ ಅಂತರಿಕ್ಷ ವಾಹನಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸಿದ. ಎರಡು ಟೆಸ್ಟ್ ಫ್ಲೈಟ್ ಗಳನ್ನೂ ನಭಕ್ಕೆ ಚಿಮ್ಮಿಸಿ ಯಶಸ್ವಿಯೂ ಆಗಿರುವ ಕಂಪನಿ ಈಗ ಮಾನವ ಸಹಿತ ತನ್ನ ಚೊಚ್ಚಲ ಸ್ಪೇಸ್ ಶಿಪ್ ಅನ್ನು ಹಾರಿಸುವ ಸನಿಹದಲ್ಲಿದೆ. ಈ ಸಾಹಸಕ್ಕೆ ಸಾಕ್ಷಿಯಾಗುವ ‘ಯಾತ್ರಿ’ ಗಳಿಂದ ಅರ್ಜಿಯನ್ನು ಸ್ವೀಕರಿಸಿ ಹಲವರನ್ನು ಅಂತಿಮಗೊಳಿಸಿಯೂ ಆಗಿದೆ. ಅಲ್ಲದೆ ಅಂತಹ ಕೆಲ ನಿಮಿಷಗಳ ಯಾತ್ರೆಗೆ ಅವರುಗಳು ತೆರಬೇಕಾದ ಮೊತ್ತ ಹತ್ತಿರ ಹತ್ತಿರ 2 ಕೋಟಿ ರೂಪಾಯಿಗಳು! ಅಲ್ಲದೆ ಸ್ವತಃ ಬ್ರಾನ್ಸನ್ ಈ ಯಾತ್ರೆಯ ಮೊದಲ ಪ್ರಯಾಣಿಕನಾಗಲಿದ್ದಾನೆ. ಇನ್ನು ಜೆಫ್ ಬೆಝೋಸ್ನ ಬ್ಲೂ ಆರಿಜಿನ್ (ಕ್ರಿ ಶ 2000)ಕಂಪನಿಯೂ ಸಹ ಅಂತರಿಕ್ಷ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದೆಯಲ್ಲದೆ ಅಮೇರಿಕಾದ ನಾಸಾ ಸಂಸ್ಥೆಯ ರಾಕೆಟ್ಗಳನ್ನು ಹಾಗು ಹೊಸ ಟೆಕ್ನಾಲಾಜಿಗಳನ್ನು ಪರೀಕ್ಷಿಸುವ ಒಪ್ಪಂದವನ್ನೂ ಅದು ಮಾಡಿಕೊಂಡಿದೆ. ಈ ಮೂಲಕ ಖಾಸಗಿ ಅಂತರಿಕ್ಷ ಸಂಸ್ಥೆಗಳ ಹೊಸ ಯುಗಕ್ಕೆ ನಾಂದಿಯನ್ನು ಹಾಡಿದೆ. ನಿಧಾನವಾದರೂ ಅಚ್ಚುಗಟ್ಟಾಗಿ ಗಟ್ಟಿಯಾದ ಒಂದೊಂದೇ ಹೆಜ್ಜೆಯನ್ನು ಇಡುತ್ತಿರುವ ಬ್ಲೂ ಆರಿಜಿನ್ ಅಂತರಿಕ್ಷ ವಲಯದಲ್ಲಿ ಗಟ್ಟಿಗನೆಂಬುದರಲ್ಲಿ ಸಂಶಯವಿಲ್ಲ. ಇನ್ನು ಎಲಾನ್ ಮಸ್ಕ್ ನ SpaceX ಸಂಸ್ಥೆಯ ವಿಚಾರಕ್ಕೆ ಬಂದರೆ ಆತನ ಕನಸ್ಸು ಇನ್ನು ಒಂದೆಜ್ಜೆ ಮುಂದಿದೆ ಎನ್ನಬಹುದು. ಆತ ಯಾತ್ರಿಕರನ್ನು ನಿಮಿಷಮಾತ್ರಕ್ಕೆ ಗಗನಕ್ಕೆ ಕಳುಹಿಸಿ ವಾಪಸ್ಸು ಕರೆತರುವ ಯೋಜನೆಯಷ್ಟೇ ಅಲ್ಲದೆ ದೈನಂದಿನ ವಿಮಾನಯಾನಗಳಂತೆ ‘ಬಾಹ್ಯಾಕಾಶಯಾನ’ ವನ್ನೂ ಮಾಡಿಸುವುದಾಗಿದೆ. ಅರ್ಥಾತ್ ಭೂಮಿಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಬಾಹ್ಯಾಕಾಶದ ಮುಖೇನ ಜಿಗಿಯುವ ಯೋಜನೆ. ಮುಂದೊಂದು ದಿನ ಈ ಯೋಜನೆ ಸಫಲಗೊಂಡರೆ ಇಡೀ ಭೂಮಿಯ ಯಾವ ಮೂಲೆಗೂ ಕೇವಲ ಅರವತ್ತು ನಿಮಿಷಗಳೊಳಗೆ ತಲುಪಬಹುದಾಗಿದೆ! ಅಲ್ಲದೆ ಎಲಾನ್ ಮಸ್ಕ್ ಮಂಗಳ ಗ್ರಹದಲ್ಲಿ ಮಾನವರನ್ನು ಇಳಿಸುವ ತನ್ನ ಬಾಲ್ಯದ ಕನಸ್ಸನ್ನೂ ನನಸ್ಸಾಗಿಸುವ ಸನಿಹದಲ್ಲಿದ್ದಾನೆ. ಈ ಯೋಜನೆಗೆ ಅದಾಗಲೇ BFR (Big Falcon Rocket) ಎಂಬ ಮರುಬಳಕೆ ಮಾಡಬಹುದಾದ ಸ್ಪೇಸ್ ಕ್ರಾಫ್ಟ್ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.

ಒಟ್ಟಿನಲ್ಲಿ ಸಾಮಾನ್ಯ ಕುಟುಂಬದಲ್ಲೆ ಹಲವಾರು ಕಷ್ಟ, ದುಃಖ ಹಾಗು ನ್ಯೂನ್ಯತೆಗಳೊಟ್ಟಿಗೆ ನಮ್ಮ ನಿಮ್ಮಂತೆಯೇ ಹುಟ್ಟಿ ಬೆಳೆದ ಈ ಮೂವರು ಇಂದು ಇಡೀ ವಿಶ್ವದಲ್ಲೇ ತಮ್ಮ ಹೆಸರಿನ ಬ್ರಾಂಡನ್ನು ಕಟ್ಟಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಹೇಳಿಕೊಳ್ಳುವ ಮಹತ್ತರವಾದ ಡಿಗ್ರಿಗಳಿರದಿದ್ದರೂ ಅಂತರಿಕ್ಷ ವಲಯದಲ್ಲಿ ದೊಡ್ಡ ದೊಡ್ಡ ಹೆಸರಿನ ಸಂಸ್ಥೆಗಳೇ ಇವರ ಕಂಪನಿಯ ಟೆಕ್ನಾಲಜಿಗಳ ಮುಂದೆ ತಲೆಬಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹಣವನ್ನು ಯಾರಾದರೂ ಗಳಿಸಬಹುದು. ಅದಕ್ಕೆ ಸಾವಿರಾರು ಮಾರ್ಗಗಳಿವೆ. ಆದರೆ ಗಳಿಸಿದ ನಂತರ ಇಡುವ ಹೆಜ್ಜೆ ಇದೆಯಲ್ಲ ಅದು ಆತನ ಅಥವಾ ಅವಳ ಸ್ವಭಾವವನ್ನು ಹಾಗು ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ. ಸೋಲು ಖಚಿತವೆಂದು ದೇವರೇ ಬಂದು ಹೇಳಿದರೂ ಇವರುಗಳು ಮಾತ್ರ ಪ್ರಯತ್ನಿಸುವುದ ಬಿಡಲಿಲ್ಲ. ಹಣದ ಹೊಳೆಯೇ ಪೋಲಾದರೂ ದೃತಿಗೆಡಲಿಲ್ಲ. ಅವರ ಪ್ರತಿ ಸೋಲೂ ಪ್ರಗತಿಯಾಗಿದ್ದಿತೇ ವಿನಃ ಕೇವಲ ನಡೆಯಾಗಿರಲಿಲ್ಲ. ಇಲ್ಲವಾದರೆ ತಿಂಗಳ ಕೊನೆಗೆ ಸಿಗುವ ಸಂಬಳಕ್ಕೆ ದುಡಿಯುವ ನೌಕರನೊಬ್ಬ ನಾಸಾದಂತಹ ಧೈತ್ಯ ಅಂತರಿಕ್ಷ ಸಂಸ್ಥೆಗಳಿಗೆ ರಾಕೆಟ್ ಗಳನ್ನು ಮಾಡಿ ಕೊಡುವ ಪ್ರಪೋಸಲ್ ಅನ್ನು ಇಡಲು ಸಾಧ್ಯವಾದೀತೆ? ಒಮ್ಮೆ ಯೋಚಿಸಿ. ಇವರುಗಳ ನಡುವೆ ಅದೆಂತಹ ಪೈಪೋಟಿಯೇ ಇರಬಹುದು ಆದರೆ ಸೋಲನ್ನು ಸೋಲಿಸಿ ಆಗಸಕ್ಕೆ ಏಣಿಯಿಟ್ಟವರಿವರು. ನಮ್ಮ ನಿಮ್ಮ ಸುತ್ತಲೂ ಇಂತಹ ಹತ್ತಾರು ನೂರಾರು ಅರಬ್ ಪತಿಗಳು, ಕೋಟ್ಯಾಧಿಪತಿಗಳು ಕಾಣಸಿಗುತ್ತಾರೆ. ಕೂತು ತಿಂದರೂ ಕೊಳೆಯುವಷ್ಟು ಹಣವಿರುವ ಶ್ರೀಮಂತರಿದ್ದಾರೆ. ವಿಶ್ವದ ಪಟ್ಟಿಯಲ್ಲಿ ಅಗ್ರಮಾನ್ಯರೆನಿಸಿಕೊಂಡವರಿದ್ದಾರೆ. ಆದರೆ ಅದರಲ್ಲಿ ಅದೆಷ್ಟು ಜನ ಇಂತಹ ಸಾಹಸದ ಕಾರ್ಯಕ್ಕೆ ಕೈಹಾಕಬಲ್ಲರು?. ಅವರಲ್ಲಿ ಅದೆಷ್ಟು ಮಂದಿಗೆ ಇಂತಹ ಡೇರಿಂಗ್ ವಲಯಗಳನ್ನು ಪ್ರವೇಶಿಸುವ ತಾಕತ್ತು ಹಾಗು ಆ ತಾಕತ್ತಿಗೆ ಬೇಕಾದ ವಿದ್ವತ್ತು ಇರಬಹುದು? ಉತ್ತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅತಿ ಮಹತ್ವವಾದದ್ದು!

3 ಟಿಪ್ಪಣಿಗಳು Post a comment
  1. mypenmythoughts
    ಆಕ್ಟೋ 11 2018

    Super….

    ಉತ್ತರ
  2. mypenmythoughts
    ಆಕ್ಟೋ 11 2018
  3. Louis
    ಆಕ್ಟೋ 12 2018

    Super Article

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments