ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 11, 2018

2

ISROಗೆ ಸಾಧ್ಯವಾಗಿದ್ದು HALಗೇಕೆ ಸಾಧ್ಯವಾಗಲಿಲ್ಲ?

‍ನಿಲುಮೆ ಮೂಲಕ

– ಅಜಿತ್ ಶೆಟ್ಟಿ ಹೆರಾಂಜೆ

ಸುಮಾರು 78 ವರ್ಷ ಇತಿಹಾಸ ಇರುವ ವಿಮಾನ ತಯಾರಿಕ ಕಂಪೆನಿಯೊಂದು ಇಂದಿಗೂ ತೆವಳುತ್ತ ಕುಂಟುತ್ತಾ ಸಾಗುತ್ತಿದೆ ಅಂದರೆ ಅದಕ್ಕೆಯಾರುಹೊಣೆ? ಅದನ್ನ ನಿರ್ವಹಣೆ ಮಾಡುತ್ತಿರುವ ಸರಕಾರವಾ? ಅಥವಾ ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಾ? ಅಥವಾ ಕಾರ್ಮಿಕರಿಂದ ಕೆಲಸ ತೆಗೆಸುತ್ತಿರುವ ಅಧಿಕಾರಿ ವರ್ಗವಾ? ಅಥವಾ ಇವರೆಲ್ಲರೂ ಕಾರಣರ? ಹೌದು ನಾನು ಎತ್ತಿರುವ ಪ್ರಶ್ನೆ ಹೆಚ್ಎಎಲ್ ಬಗ್ಗೆ.ಈ ಪ್ರಶ್ನೆ ಈಗ ಯಾಕೆ ಗಂಭೀರ ಸ್ವರೂಪ ಪಡೆದಿದೆ ಎಂದರೆ ಇಂದು ಬಹಳಷ್ಟು ಮಂದಿಗೆ ಎಚ್ಎಎಲ್ ಅಂದರೆ ಅಮೇರಿಕದ ಬೋಯಿಂಗ್  ಕಂಪೆನಿಯ ತರವೋ ಅಥವಾ ರಶ್ಯಾದ ಸುಕೋಯಿ ಕಂಪೆನಿಯ ತರಹವೋ ಎಂದು ಅನಿಸೋಕೆ ಶುರು ಆಗಿದೆ. ಆದರೆ ವಾಸ್ತವಾಂಶ ಹಾಗಿಲ್ಲ. ಎಚ್ಎಎಲ್ ಸ್ಥಾಪನೆಯಾಗಿ 79 ವರ್ಷ ಕಳೆದರೂ ಇವತ್ತಿಗೂ ಈ ಕಂಪೆನಿ 79 ವರ್ಷಗಳ ಹಿಂದೆ ತಾನೇನನ್ನು ಮಾಡುತ್ತಿದಯೋ ಬಹುತೇಕ ಅದೇ ಕೆಲಸವನ್ನು ಇಂದಿಗೂ ಮಾಡುತ್ತಿರುವುದು ಈ ದೇಶದ ಬಹುದೊಡ್ಡ ದುರಂತ. ಎಚ್ಎಎಲ್ ಇಂದಿಗೂ ಬಹುತೇಕ ಕೆಲಸ ವಿದೇಶಿ ನಿರ್ಮಿತ ಯುದ್ದ ವಿಮಾನಗಳ ಬಿಡಿಬಾಗಾಗಳನ್ನ ಇಲ್ಲಿಗೆ ತಂದು ಅದೇ ಕಂಪೆನಿಗಳ‌ ಸಹಯೋಗದೊಂದಿಗೆ ಜೋಡಿಸುವ ಕಾರ್ಯವಷ್ಟೆ. ಒಂದು ಸಣ್ಣವ್ಯತ್ಯಾಸ ಅಂದರೆ 79 ವರ್ಷದ ಹಿಂದೆ Harlow PC-5 ವಿಮಾನವನ್ನು ಜೋಡಿಸಿತ್ತು ಇವತ್ತು ಸುಕೋಯಿ ಯಯದ್ದ ವಿಮಾನದ ಬಿಡಿ ಭಾಗವನ್ನ ಜೋಡಿಸಸುತ್ತಿದೆ ಅಷ್ಟೆ. ಎಚ್ಎಎಲ್ ತಾನಾಗಿಯೇ ಅಭಿವೃದ್ಧಿಪಡಿಸಿದ ವಿಮಾನ ಹಾಗು ಹೆಲಿಕಾಪ್ಟರ್ ಸಂಖ್ಯೆ ಬಹಳಾ ಕಡಿಮೆ.

ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್ ಇದರ ಮೂಲ ಹೆಸರು ಹಿಂದುಸ್ಥಾನ್ ಏರ್ಕ್ರಾಫ್ಟ್ ಲಿಮಿಟೆಡ್ ಎಂದು.ಇದನ್ನ 1940 ರಲ್ಲಿ ಅಂದಿನ ಮೈಸೂರು ಸರಕಾರದ ಸಹಯೋಗದೊಂದಿಗೆ  25 ಲಕ್ಷ ರೂಪಾಯಿ ಬಂಡವಾಳ ಹಾಕಿ ಸ್ಥಾಪಿಸಿದವರು ವಾಲ್ ಚಂದ ಹೀರಾಚಂದ್ ಎನ್ನುವವರು.1941ರಲ್ಲಿ ಅಂದಿನ ಬ್ರಿಟಿಷ್ ಸರಕಾರ ಈ ಕಂಪನಿಯ ಮೂರನೇ ಒಂದರಷ್ಟು ಪಾಲನ್ನು ಖರೀದಿಸಿತು. ಕಾರಣ ಅಂದಿನ ಕಾಲಕ್ಕೆ  ಬ್ರಿಟಿಷರ ಸೈನ್ಯಕ್ಕೆ ಆಧುನಿಕ ಮಿಲಿಟರಿ ಉಪಕರಣವನ್ನು ಸರಬರಾಜು  ಮಾಡಲು  ಏಷ್ಯಾ ಖಂಡದಲ್ಲಿ ಒಂದು ವ್ಯವಸ್ಥೆ ಬೇಕಿತ್ತು.ಅದರಂತೆಯೇ 1942 ರಲ್ಲಿ ಅಮೆರಿಕಾದ  Central Aircraft Manufacturing Company (CAMCO)  ಎನ್ನುವ ಕಂಪೆನಿಯ ಸಹಯೋಗದೊಂದಿಗೆ Harlow PC-5  ಎನ್ನುವ ವಿಮಾನವನ್ನು ನಿರ್ಮಿಸಿತು.ನಂತರ ಇದು ಭಾರತೀಯ ವಾಯು ಪಡೆಯ ಒಂದು ಮುಖ್ಯ ಯುದ್ಧ ವಿಮಾನವಾಗಿ ಬಹಳಷ್ಟು ವರ್ಷ ಸೇವೆ ಸಲ್ಲಿಸಿತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಈ ಸಂಸ್ಥೆ ಯನ್ನು ಭಾರತ ಸರ್ಕಾರ ಸಂಪೂರ್ಣ ತನ್ನ ಅಧೀನಕ್ಕೆ ತೆಗೆದುಕೊಂಡಿತು, ಅಕ್ಟೋಬರ್ 1, 1964 ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇದನ್ನ  ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಿ ಇದಕ್ಕೊಂದು ಮರು ಹುಟ್ಟು ಕೊಟ್ಟರು.ಹೆಚ್ಎಎಲ್ ಅನ್ನು ಆಧುನಿಕ ಭಾರತದ ಸೇನೆಯ ಬೇಡಿಕೆಯನ್ನು ಪೂರೈಸುವ ಒಂದು ಉತ್ತಮ ಸಂಸ್ಥೆಯನ್ನಾಗಿ  ಮಾಡ ಬೇಕೆಂಬ ಶಾಸ್ತ್ರಿಯವರ ಕನಸನ್ನ ನಂತರದ ದಿನಗಳಲ್ಲಿ ಬಂದ  ಸರ್ಕಾರಗಳು ಸಾಕಾರಗೊಳಿಸುವಲ್ಲಿ ಸೋತಿವೆ. ಹೆಚ್ ಎ ಎಲ್ ಸಂಸ್ಥೆಗೆ ಸುಮಾರು 79 ವರ್ಷದ ಇತಿಹಾಸ ಇದೆ.ಆದರೆ ಇಂದಿಗೂ ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಯಾವುದೇ ಕಂಪೆನಿಗಳ ಹತ್ತಿರಕ್ಕೂ ನಿಲ್ಲುವುದಿಲ್ಲ.

ಉದಾಹರಣೆಗೆ, ಭಾರತೀಯ ವಾಯುಪಡೆ ಇಂದು ಬಳಸುವ ಸುಖೋಯ್ ಯುದ್ಧ ವಿಮಾನಗಳನ್ನು ತಯಾರು ಮಾಡುವ ಸಂಸ್ಥೆ JSC Sukhoi ಕಂಪನಿ ಕೂಡ ಹೆಚ್ಎಎಲ್ ನ ಸಮಕಾಲೀನ ಸಂಸ್ಥೆ.ಇದು ಸ್ಥಾಪನೆಯಾಗಿದ್ದು 1939 ರಲ್ಲಿ. ಅಮೆರಿಕಾದ  ವಾಯುಪಡೆಗೆ F16,F35 ಯುದ್ಧ ವಿಮಾನಗಳನ್ನು ಕೊಟ್ಟ ಅಮೇರಿಕಾದ Lockheed Martin Corporation ಎನ್ನುವ ಸಂಸ್ಥೆ ಹುಟ್ಟಿದ್ದು  ಕೇವಲ 25 ವರ್ಷಗಳ ಕೆಳಗೆ,1995 ರಲ್ಲಿ.   ಇನ್ನು ಮೋದಿ ಸರ್ಕಾರ ಖರೀದಿಸಲು ಹೊರಟಿರುವ ರಾಫೆಲ್ ಯುದ್ಧ  ವಿಮಾನ ಉತ್ಪಾದನೆ  ಮಾಡುವ Dassault Aviations ಸ್ಥಾಪನೆಯಾಗಿದ್ದು ನಮ್ಮ ಹೆಚ್ಎಎಲ್  ಗಿಂತ ಕೇವಲ ಹನ್ನೊಂದು ವರ್ಷಗಳ ಹಿಂದೆ 1929 ರಲ್ಲಿ.ಇಂದು ವಿಶ್ವದೆಲ್ಲೆಡೆ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಉತ್ಪಾದನೆ ಮಾಡಿ ವಿದೇಶಗಳಿಗೆ ರಫ್ತು ಮಾಡುತ್ತಿರುವ ಕಂಪೆನಿಗಳು ಒಂದೋ ಹೆಚ್ ಎ ಎಲ್ ನ  ಸಮಕಾಲೀನದವು ಅಥವಾ ತೀರಾ ಇತ್ತೀಚಿಗೆ ಪ್ರಾರಂಭ ಆದವು. ಹೆಚ್ಎಎಲ್ ಇಂದು ತನ್ನ ಎಲ್ಲ ವಿಭಾಗದ  ವಿಮಾನಗಳ ಉತ್ಪಾದನೆಯಲ್ಲಿ ತನ್ನ ನಿಗದಿತ ಗುರಿಗಿಂತ ಹಿಂದೆ ಬಿದ್ದಿದೆ. ಇದರಿಂದ ಒಂದು ಕಡೆ ಉತ್ಪಾದನಾ ವೆಚ್ಚದಲ್ಲಿ ಗಣನೀಯವಾಗಿ ಏರಿಕೆ ಆಗುತಿದ್ದರೆ, ಇನ್ನೊಂದು ಕಡೆ ದೇಶದ ರಕ್ಷಣಾ ವ್ಯವಸ್ಥೆಯ ಮೇಲೂ ಇದು ತೀವ್ರ ತರನಾದ ಪರಿಣಾಮ ಬೀರುತ್ತಿದೆ.ಹೆಚ್ಎಎಲ್ ತಾನೇ ಅಭಿವೃದ್ಧಿ ಪಡಿಸಿದ ತೇಜಸ್ ಯುದ್ಧ ವಿಮಾನವನ್ನು ವಾಯು ಸೇನೆಗೆ ಪೂರೈಕೆ ಮಾಡುವಲ್ಲಿ ಕೂಡ ಹಿಂದೆ ಬಿದ್ದಿದೆ ಭಾರತೀಯ ವಾಯುಸೇನೆ 123 ತೇಜಸ್ ಯುದ್ಧ ವಿಮಾನಗಳನ್ನು, ವಾರ್ಷಿಕವಾಗಿ 16 ವಿಮಾನದ ಉತ್ಪದನೆಯ ತನ್ನ ಗುರಿಯ ಬದಲು ಅದು ಉತ್ಪಾದನೆ ಮಾಡುತ್ತಿರುವುದೇ 8 ವಿಮಾನ. ಹೀಗಾಗಿ ಈಗ ಭಾರತೀಯ  ವಾಯುಸೇನೆಯ ಅಧಿಕಾರಗಳು ತೇಜಸ್ ವಿಮಾನದ ಉತ್ಪಾದನೆಯ ನಿಗರಾಣಿಯನ್ನು ನೇರವಾಗಿ ತಮ್ಮ ಕೈಗೆ  ತೆಗೆದು ಕೊಂಡಿದ್ದಾರೆ.

ಇದರ ಬೆನ್ನಲ್ಲೇ ಇನ್ನೊಂದು ಮಹತ್ವದ ಮತ್ತು ಆಘಾತಕಾರಿಯಾದ ವಿಷಯವೆಂದರೇ,ರಷ್ಯಾ ಮತ್ತು ಭಾರತ ಸರ್ಕಾರಗಳ ನಡುವಿನ ಒಪ್ಪಂದದ ಪ್ರಕಾರ ಭಾರತ 190 ಸುಕೋಯ್ SU-30MKI ಯುದ್ಧ ವಿಮಾನಗಳ ಖರೀದಿ ಮಾಡಿತ್ತು ಅದರಲ್ಲಿ 50 ಯುದ್ಧ ವಿಮಾನಗಳನ್ನೂ ಫ್ಲೈ ಅವೇ ಕಂಡೀಷನ್ ನಲ್ಲಿ ರಷ್ಯಾದಿಂದ ತರಿಸಿವುದು ಇನ್ನುಳಿದ 140 ವಿಮಾನಗಳನ್ನು ಹೆಚ್ ಎ ಎಲ್ ನ ನಾಸಿಕ್ ಘಟಕದಲ್ಲಿ ರಷ್ಯಾ ಮತ್ತು ಹೆಚ್ಎಎಲ್ ಜಂಟಿಯಾಗಿ ಉತ್ಪಾದನೆ ಮಾಡುವುದಾಗಿತ್ತು. ಇದರ ಜೊತೆಗೆ  ಭಾರತೀಯ ವಾಯುಸೇನೆ ಹೆಚ್ಚಿನ 88 ಯುದ್ಧ ವಿಮಾನಗಳ ಬೇಡಿಕೆ ಸಲ್ಲಿಸಿತ್ತು ಒಟ್ಟಿಗೆ 222 ಯುದ್ಧ ವಿನಗಳನ್ನು ಹೆಚ್ ಎ ಎಲ್ 2015 ರಲ್ಲಿ ಪೂರೈಸಬೇಕಿತ್ತು. ಆದರೆ  ಇದನ್ನು ಮುಗಿಸಲು ಹೆಚ್ಎಎಲ್ ಇನ್ನೂ  3 ವರ್ಷ ಹೆಚ್ಚಿಗೆ ಸಮಯ ತೆಗೆದುಕೊಳ್ಳಲಿದೆ ಎಂದು ಹಿರಿಯ ವಾಯು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಇದರ  ಜೊತೆಗೆ ಜಾಗ್ವಾರ್ ಯುದ್ಧ ವಿಮಾನದ ಪೂರೈಕೆಯಲ್ಲಿ ಹೆಚ್ಎಎಲ್ ತನ್ನ ನಿಗದಿತ ಸಮಯಕ್ಕಿಂತ  6 ವರ್ಷ ಹಿಂದೆ ಇದ್ದರೆ,1997 ರಲ್ಲಿ ಆರಂಭಿಸಿದ Inter mediate Trainer  ಪೈಲೆಟ್ ತರಬೇತಿ ತಯಾರಿಕಾ ಕಾರ್ಯಕ್ರಮದ ಮೊದಲ ಪ್ರಾಯೋಗಿಕ ವಿಮಾನ 2003 ರಲ್ಲಿ‌ ನಿರ್ಮಾಣಗೊಂಡು ನೂರಾರು ಗಂಟೆ ಹಾರಾಟ ನಡೆಸಿದರೂ ಅದನ್ನ ಇನ್ನು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ವಾಯುಸೇನೆಗೆ ಕೊಡುವಲ್ಲಿ ಯಶಸ್ಸು ಕಂಡಿಲ್ಲ .

ಈಗ ಹೇಳಿ ಹೆಚ್ ಎ ಎಲ್ ನ ಪರಿಸ್ಥಿಯನ್ನು ಈ ಮಟ್ಟಕ್ಕೆ ಇಳಿಯಲು ಬಿಟ್ಟು ರಾಫೆಲ್ ಯುದ್ಧ ವಿಮನಯನ್ನು ಹೆಚ್ಎಎಲ್ ಗೆ ಉತ್ಪಾದನೆ ಮಾಡಲು  ಬಿಟ್ಟಿಲ್ಲ,ಅದು ದೇಶದ್ರೋಹ ಅನ್ನುತ್ತಾ ಕೂಗಾಡುವವರು ಸುಮಾರು 79  ವರ್ಶಗಳ ಕಾಲ ಇದೆ ಹೆಚ್ಎಎಲ್ ಕುಂಟುತ್ತಾ ತೆವಳುತ್ತ ಸಾಗುತ್ತಿದ್ದಾಗ ಒಮ್ಮೆಯೂ  ಅದರ ಕೈ ಹಿಡಿದು ಮೇಲಕ್ಕೆ ಎತ್ತಿ ನಿಲ್ಲಿಸಬೇಕು ಅನ್ನುವ ಆಲೋಚನೆ ಬಾರದೆ ಹೋಯಿತಾ ನಿಮಗೆ? ವಿಶ್ವದ ಬಹುತೇಕ ವಿಮಾನ ತಯಾರಿಕಾ ಕಾಂಪೆನಿಗಳು ಭಾತರದ ಹೆಚ್ಎಎಲ್ ನ  ಸಮಾನ ಕಾಲಾಘಟ್ಟದಲ್ಲಿ ಆರಂಭವಾಗಿದ್ದವು. ಹಾಗಿದ್ದಮೇಲೆ ಇಂದು ಜಾಗತಿಕ ಮಂಚದಲ್ಲಿ ಹೆಚ್ಎಎಲ್ ಇವುಗಳ ಸಮಾನಾಗಿ ನಿಲ್ಲುವಲ್ಲಿ ಎಲ್ಲಿ ಎಡವಿತು?

ಇವತ್ತು ಜಗತ್ತಿನ ಅತ್ಯುತ್ತಮ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿರುವ ನಮ್ಮ ಇಸ್ರೋ ಸ್ಥಾಪನೆಯಾಗಿದ್ದು  1969ರಲ್ಲಿ. ನಮ್ಮ ಹೆಚ್ಎಎಲ್ ಸ್ಥಾಪನೆಯಾಗಿ ಸುಮಾರು ೨೨ ವರ್ಷಗಳ ನಂತರ  ಇಸ್ರೋ  ಸ್ಥಾಪನೆಯಾದಾಗ ಇದಕ್ಕೆ ನಮ್ಮ ಸಮಾಜ ಮತ್ತು ಸರಕಾರದಿಂದ ಹೆಚ್ಎಎಲ್ ಗೆ ಸಿಕ್ಕಷ್ಟು ಸಾಕಾರ ಬೆಂಬಲ ಇರಲಿಲ್ಲ. ಹೊಟ್ಟೆಗೆ ಸರಿಯಾಗಿ ಹಿಟ್ಟೇ ಇಲ್ಲ ಮತ್ಯಾಕೆ ಜುಟ್ಟಿಗೆ ಮಲ್ಲಿಗೆ ಅಂದವ್ರೆ ಹೆಚ್ಚು.ಆದರೆ ಇಸ್ರೋಗೆ ವಿಕ್ರಂಸಾರಾಭಾಯಿ ಅನ್ನುವ ಸರ್ವ ಶ್ರೇಷ್ಟ ವಿಜ್ಞಾನಿಯೊಬ್ಬರು ಅಡಿಗಲ್ಲು ಹಾಕಿದರೆ  ಅವರ ಗರಡಿಯಲ್ಲಿ ಪಳಗಿದ APJ ಅಬ್ದುಲ್  ಕಲಾಂ ಅದರ ಸಾರಥ್ಯ ವಹಿಸಿದರು.ಇಸ್ರೋ ಸ್ಥಾಪನೆಯಾಗಿ 6 ವರ್ಷದಲ್ಲಿ ಅದು ತನ್ನ ಮೊದಲ ಸ್ವದೇಶಿ ಉಪಗ್ರಹ ಆರ್ಯಭಟವನ್ನು ರಷ್ಯಾದ ಸಹಾಯದೊಂದಿಗೆ ಕಕ್ಷೆಗೆ ಕಳುಹಿಸಿತು.1980ರಲ್ಲಿ ರೋಹಿಣಿ ಎನ್ನುವ ಇನ್ನೊಂದು ಉಪಗ್ರಗವನ್ನು ಇಸ್ರೋ ತಾನೇ ತಯಾರಿಸಿದ  Polar Satellite Launch Vehicle (PSLV) ಎನ್ನುವ ರಾಕೆಟ್ ಬಳಸಿ ಕಕ್ಷೆಗೆ ಕಳುಹಿಸಿತು.ಇಲ್ಲಿಂದ ಇಸ್ರೋ ಮತ್ತೆ ಎಂದೂ ಹಿಂತಿರುಗಿ ನೋಡಿಲ್ಲ,ಇಲ್ಲಿಯ ತನಕ ಇಸ್ರೋ 350 ಕ್ಕೂ ಹೆಚ್ಚು ದೇಶೀಯ ಹಾಗು ವಿದೇಶೀ ಉಪಗ್ರಹಗಳನ್ನು  ಕಕ್ಷೆಗೆ ಹಾರಿಸಿದೆ.ಇಡೀ ವಿಶ್ವವೇ  ಅಚ್ಚರಿಯಿಂದ ಕಂಡ 2014 ರ ಮಂಗಳಯಾನ ಮತ್ತು 2008ರ ಚಂದ್ರ ಯಾನ  ಇಸ್ರೋ ಮಾಡಿದ ಅತ್ಯದ್ಭುತ ಸಾದನೆಗಳು. ಇಸ್ರೋ ಇಂದು ಸುಮಾರು ವಿಶ್ವದ 28 ರಾಷ್ಟ್ರಗಳ 250 ಕ್ಕೂ ಹೆಚ್ಚು ಉಪಗ್ರಗಹಳನ್ನು  ಕಕ್ಷೆಗೆ ಸೇರಿಸಿದೆ.ಇಸ್ರೋ ಇಂದು ತಾನು ತನ್ನ ಗ್ರಾಹಕ ದೇಶಗಳಿಗೆ ವಿಧಿಸುವ ಕಡಿಮೆ ಉಡಾವಣಾ ವೆಚ್ಚದಿಂದಾಗಿ ವಿಶ್ವದ ಬಾಹ್ಯಾಕಾಶ ತಂತ್ರಜ್ನಾದಲ್ಲಿ ಹಿರಿಯಣ್ಣ ಅಮೇರಿಕಾದ ನಾಸಾಗೆ ಪ್ರತಿಸ್ಪರ್ಧಿಯಾಗಿ ನಿಂತಿದೆ.ಅಮೆರಿಕಾದ ಎಷ್ಟೋ ಕಂಪೆನಿಗಳು ನಾಸಾದ ದುಬಾರಿ ಉಡಾವಣಾ ವೆಚ್ಚದಿಂದಾಗಿ ಇಸ್ರೋ ಕಡೆ ಮುಖಮಾಡಿವೆ.ಇಸ್ರೋ ಇವತ್ತು ವಾರ್ಷಿಕ ನೂರಾರು ಮಿಲಿಯನ್ ಡಾಲರ್ ವಿದೇಶಿ ವಿನಿಮಯವನ್ನು ಭಾರತದತ್ತ ಸೆಳೆಯುತ್ತಿದೆ, ತನ್ನ ಉಪಗ್ರಹಗಳನ್ನು ಮಾರಾಟ ಮಾಡಿ ವಾರ್ಷಿಕ ಸುಮಾರು ೮೦೦ ಕೋಟಿಯಷ್ಟು ಲಾಭ ಗಳಿಸುತ್ತಿದೆ.

ಆದರೆ,ಇತ್ತ ಹೆಚ್ಎಎಲ್ ಮಾತ್ರ ತಾನು ಅಂದುಕೊಂಡ ಯಾವುದೇ ಗುರಿಯನ್ನು ತಲುಪುವಲ್ಲಿ ವಿಫಲವಾಯಿತು,ಇದಕ್ಕೆ ಅಂದಿನ ಸರ್ಕಾಗಳೂ ನೇರವಾಗಿ ಕಾರಣವೆ.   ಇದುವರೆಗೂ ಕೇವಲ ವಿದೇಶಿ ಕಂಪೆನಿಗಳ ವಿಮಾನಗಳ ಬಿಡಿ ಬಾಗವನ್ನು ತಂದು ಜೋಡಣೆ ಮಾಡುತಿದ್ದ  ಹೆಚ್ಎಎಲ್ ಮೊತ್ತ ಮೊದಲ ಬಾರಿಗೆ 1983ರಲ್ಲಿ  ರಾಜೀವ್ ಗಾಂಧಿ  ಕಾಲದಲ್ಲಿ ದೇಶೀಯವಾಗಿ ಲಘು ಯುದ್ಧ ವಿಮಾನವನ್ನು ನಿರ್ಮಾಣವನ್ನು ಮಾಡುವ ಯೋಜನೆ ಕೈಗೊಂಡಿತು.ಇದಕ್ಕೆ  1986ರಲ್ಲಿ ಅಂದಿನ  ರಾಜೀವ ಗಾಂಧಿ ಸರಕಾರ  ಸುಮಾರು 579 ಕೋಟಿ ರೂಪಾಯಿಗಳಷ್ಟು ಹಣವನ್ನು ಬಿಡಿಗಡೆ ಮಾಡಿದರು. ಆದರೆ  ಇಡೀ ಯುದ್ಧವಿಮಾನ ನಿರ್ಮಾಣ ಮಾಡುವ ಹೊಣೆಯನ್ನ ಕೇವಲ ಹೆಚ್ಎಎಲ್ ಗೆ ಮಾತ್ರ ನೀಡಲಿಲ್ಲ.  ಈ ಲಘು ಯುದ್ಧ ವಿಮಾನದ ಅತ್ಯಂತ ಮುಖ್ಯ ಅಂಗವಾದ ಜೆಟ್ ಎಂಜಿನ್ ಅನ್ನು  Defence Research and Development Organisation (DRDO) ಗೆ ಕೊಟ್ಟಿತು.ದುರಂತವೆಂದರೆ  ಈ ರೀತಿಯ ಎಂಜಿನ್ ತಯಾರು ಮಾಡಿ ಯಾವುದೇ ಅನುಭವ ಇಲ್ಲದ DRDO ಗೆ ಸರ್ಕಾರವು ಅತ್ಯಂತ ಕಡಿಮೆ ಸಮಯದಲ್ಲಿ  ಮತ್ತು ಅತ್ಯಂತ  ಕಡಿಮ ಖರ್ಚಿನಲ್ಲಿ ಜೆಟ್ ಎಂಜಿನ್ ತಯಾರಿಸಲು  ಹೇಳಿತು.DRDO  ಅಂದಿನ ಸರ್ಕಾರಗಳ ಬಳಿ  ಎಷ್ಟೇ ನಿವೇದಿಸಿಕೊಡರೂ ಸರ್ಕಾರ ಈ ಎಂಜಿನ್ ತಯಾರಿಸಲು ಬೇಕಾದ ಸರಿಯಾದ ಸಲಕರಣೆಗಳನ್ ನುಒದಗಿಸಿಕೊಡಲೇ ಇಲ್ಲ. ಹಾಗಾಗಿ 8 ವರ್ಷಗಲ್ಲಿ ಮುಗಿಯಬೇಕಿದ್ದ ಕೆಲಸ ಇಂದಿಗೂ ಮುಗಿದಿಲ್ಲ!!

1998ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಿಗ್ 21 ವಿಮಾನಗಳ ಮಿತಿಯನ್ನು ಅರಿತ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಲಘು ಯುದ್ಧ ವಿಮಾನ ತೇಜಸ್ ನ ನಿರ್ಮಾಣ ಕಾರ್ಯವನ್ನು ಚುರುಕುಕೋಳಿಸಲು ಹೇಳಿದರು ಈ ಲಘು ಯುದ್ಧ ವಿಮಾನಕ್ಕೆ ದೇಸಿ ಎಂಜಿನ್ ಬದಲು  General Electric ನ F404   ಎಂಜಿನ್ ಬಳಸಲು  ತೀರ್ಮಾನಿಸಲಾಯಿತು.ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಬೇಕಂದು ಹೋರಾಟ ಯುದ್ಧ ವಿಮಾನ 12  ವರ್ಷಗಳ ಬಳಿಕ  2002 ರಲ್ಲಿ  40 % ವಿದೇಶಿ ತಂತ್ರಜ್ಞಾನದ ನೆರೆವಿನಿಂದ ತನ್ನ ಮೊದಲ ಪ್ರಾಯೋಗಿಕ ಹಾರಾಟ ನಡೆಸಿತು. 40 % ವಿದೇಶಿ ತಂತ್ರಜ್ಞಾನ ಬಳಸಿಯೂ ಇಷ್ಟೊಂದು  ವಿಳಂಬ ಯಾಕೆ ಎಂದು ಪ್ರಶ್ನೆ ಮಾಡಿದರೆ ಹೆಚ್ಎಎಲ್ ಅಧಿಕಾರಿಗಳು ಕೊಡುವ ಉತ್ತರ 1998 ರ  ಪರಮಾಣು ಪರೀಕ್ಷೆಯ ನಂತ್ರ ಅಮೇರಿಕ ಹಾಕಿದ ಪ್ರತಿಬಂಧ.ನೆನಪಿರಲಿ ಇಸ್ರೋಗೆ ಕೂಡ ಇಂತದ್ದೇ ಪ್ರತಿಬಂಧ ಇತ್ತು. ಅತಿ ಭಾರದ ಉಪಗ್ರಹ ಹೊತ್ತೊಯ್ಯ ಬಲ್ಲ ತಾಕತ್ತು ಇರುವ ಕ್ರಯೋಜನಿಕ್ ಎಂಜಿನ್ ತಂತ್ರಜ್ಞಾನವನ್ನು ಅಂತಾರಾಷ್ಟ್ರೀಯ ಪ್ರತಿಬಂಧದ ಕಾರಣ ರಷ್ಯಾ ಕೊಡಲು ಒಪ್ಪದಿದ್ದಾಗ ಇಸ್ರೋ ವಿಜ್ಞಾನಿಗಳು ಅದೇ ತಂತ್ರಜ್ಞಾನವನ್ನು ದೇಶಿಯವಾಗಿ ಅಭಿವೃದ್ಧಿ ಪಡಿಸಿದರು. ಇಸ್ರೋ ಸಾಧಿಸಿದ್ದನ್ನು ಹೆಚ್ಎಎಲ್ ಗೆ ಯಾಕೆ ಸಾಧಿಸಲು ಆಗಲಿಲ್ಲ ಅನ್ನುವುದು ನಮ್ಮ ಪ್ರಶ್ನೆ?

ದೇಶದ ರಕ್ಷಾಣಾ ಬೇಡಿಕೆಗಳು ಹೆಚ್ಚಾದಂತೆ ಆದಂತಹ ಬೇಡಿಕೆಗಳನ್ನ ನಿಗದಿತ ಸಮಯದಲ್ಲಿ ಪೂರೈಸಲಾಗದ  ಸಂಸ್ಥೆಗಳ  ಔಚಿತ್ಯ ಮತ್ತು ಅದರ ಭವಿಷ್ಯದ ಬಗ್ಗೆ ಸರ್ಕಾರಗಳು ಕಾಲ ಕಾಲಕ್ಕೆ  ವಿಮರ್ಶೆ ಮಾಡಿ ಅವುಗಳನ್ನ ಸರಿಯಾಯದ ಪಥದಲ್ಲಿ ನಡೆಸಬೇಕು. ಅವುಗಳನ್ನ ಅವುಗಳಷ್ಟಕ್ಕೆ ಬಿಟ್ಟು,ಎಲ್ಲೋ ಆಗೊಮ್ಮೆ ಈಗೊಮ್ಮೆ ಗಮನ ಹರಿಸಿ  ಮಲತಾಯಿ ಮಕ್ಕಳಂತೆ  ಬೆಳೆಸಿದರೆ ಮುಂದೊಮ್ಮೆ ಅದು ಹೆಚ್ಎಎಲ್ ಅಂತೆ ಆದ್ರೆ ಬಹಳ ಕಷ್ಟ . ಹೆಚ್ಎಎಲ್ ಸ್ಥಾಪನೆಯಾಗಿ ಇಂದಿನ ತನಕ 79 ವರ್ಷಗಳ ಸುಧೀರ್ಘ ಇತಿಹಾಸದಲ್ಲಿ ಸರ್ಕಾರ ಇದರ ಮೇಲೆ ಸಹಸ್ರಾರು ಕೋಟಿಯಷ್ಟು  ಭಾರತೀಯರ ತೆರಿಗೆ ಹಣ ವ್ಯಯಿಸಿದೆ.ಇಂದು ಹೆಚ್ ಎ ಎಲ್ ಬಳಿ ಇರುವ  ಪ್ರತಿಯೊಂದು ಪ್ರಾಜೆಕ್ಟ್ , ತೇಜಸ್ ವಿಮಾನದ ಉತ್ಪಾದನೆ,SU 30 ವಿಮಾನದ ಉತ್ಪಾದನೆ,ಮಿರಾಜ್ 2000 ವಿಮಾನದ ಆಧುನೀಕರಣದ ಕಾರ್ಯಕ್ರಮ ಹೀಗೆ  ಪ್ರತಿಯೊಂದು ತನ್ನ ನಿಗದಿತ ಕಾಲಕ್ಕಿಂತ  3 ರಿಂದ 5 ವರ್ಷ ಹಿಂದಕ್ಕೆ ಇದೆ.ಹೆಚ್ ಈ ಎಲ್  ಅಭಿವೃದ್ಧಿ ಪಡಿಸಿದ ಲಘು ಯುದ್ಧ ವಿಮಾನ ತನ್ನ ದರ್ಜೆಯಲ್ಲಿ  ವಿಶ್ವದ ಅತ್ಯುತ್ತಮ ವಿಮಾನಗಳಲ್ಲಿ ಒಂದು.ಉಳಿದ ಮುಂದುವರಿದ ದೇಶಗಳು ಆಭಿವೃದ್ಧಿ ಪಡಿಸಿದ ವಿಮಾನಗಳಿಗಿಂತ ತೇಜಸ್ ವಿಮಾನದ ಬೆಲೆಯೂ ಕಮ್ಮಿ ಹಾಗಾಗಿ ಶ್ರೀಲಂಕಾ,ಈಜಿಪ್ಟ್, ಇಂಡೋನೇಷಿಯದಂತಹ ದೇಶಗಳು ತೇಜಸ್ ಬಗ್ಗೆ  ಆಸಕ್ತಿ ವ್ಯಕ್ತಪಡಿಸಿವೆ.ಆದರೆ ಭಾರತ ಸರಕಾರ  ಹೆಚ್ಎಎಲ್ ನ ಈಗಿರುವ ಉತ್ಪಾದನಾ ಸಾಮರ್ಥ್ಯ ಗಮದಲ್ಲಿಟ್ಟುಕೊಂಡು ಇಂತಹ ಯಾವುದೇ ವ್ಯವಹಾರಕ್ಕೆ ಕೈ ಹಾಕುತ್ತಿಲ್ಲ.

ಒಂದು ಕಡೆ  ಹೆಚ್ಎಎಲ್ ಭಾರತ  ಸರ್ಕಾರಕ್ಕೆ ಹೊನ್ನ ಶೂಲವಾಗುತಿದ್ದರೆ ಇನ್ನೊಂದು ಕಡೆ ಇಸ್ರೋ ಭಾರತದ ಪಾಲಿಯಾಗಿ ಚಿನ್ನದ ಮೊಟ್ಟೆ ಇಡುವ ಕೋಳಿ. ಇಸ್ರೋ ಕೈಗೊಂಡ ಮಂಗಳಯಾನದ ಒಟ್ಟು ಖರ್ಚು ಹಾಲಿವುಡ್ ನ ಗ್ರಾವಿಟಿ ಚಿತ್ರ ನಿರ್ಮಾಣಕ್ಕೆ ತಗುಲಿದ ವೆಚ್ಚಕ್ಕಿಂತ ಕಮ್ಮಿ.ಇಸ್ರೋ 1970  ಭಾರತದ್ ಮಿಸೈಲ್ ಮನುಶ್ಯ ಎ ಪಿ ಜೆ  ಅಬ್ದುಲ್ ಕಲಾಮ್ ಉಪಗ್ರಹಗಳ ಉಡಾವಣೆಗೆ ವಿದೇಶಗಳನ್ನು ಆಶ್ರಯಿಸುತ್ತಿದ್ದ ಇಸ್ರೋವನ್ನು ಸ್ವಾವಲಂಭಿ ಮಾಡಲು ಹೊರಟರು ಅದರ ಮೊದಲ ಪ್ರಯತ್ನವೇ 1980 ರಲ್ಲಿ ಇಸ್ರೋ ತನ್ನ ಮೊಟ್ಟಮೊದಲ ಉಡಾವಣಾ ರಾಕೆಟ್ ನಿರ್ಮಾಣ ಮಾಡಿತು.Satellite Launch Vehicle (SLV) ಇದರ ಯಶಸ್ಸಿನ ನಂತರ ಮತ್ತೆ ಇಸ್ರೋ  ಹಿಂದೆ ತಿರುಗಿ ನೋಡಲೇ ಇಲ್ಲ,1992 ರಲ್ಲಿ Augmented Satellite Launch Vehicle (ASLV),೧೯೯೪ ರಲ್ಲಿ  Polar Satellite Launch Vehicle (PSLV)  2001 ರಲ್ಲಿ  Geosynchronous Satellite Launch Vehicle (GSLV), 2010 ರಲ್ಲಿ Geosynchronous Satellite Launch Vehicle (GSLV Mark III) ಯನ್ನು ಸಂಪೂರ್ಣ ಸ್ವದೇಶಿ ಕ್ರಯೋಜನಿಕ್  ಎಂಜಿನ್ ಬಳಸಿ ನಿರ್ಮಿಸಿದೆ.

ಇವುಗಳನ್ನ ನಿರ್ಮಾಣ ಮಾಡಿದ್ದಲ್ಲದೆ ಇವುಗಳ ಮುಖಾಂತರ ನೂರಾರು ದೇಶಿಯ ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಹಾರಿಸಿದೆ. ಇದನ್ನೆಲ್ಲಾ ನೋಡಿದಾಗ ಮನಸ್ಸಿನಲ್ಲಿ ಮತ್ತದೇ ಪ್ರಶ್ನೆ ಇಸ್ರೋ ಸಾಧಿಸಿದ್ದನ್ನ ಹೆಚ್ಎಎಲ್ ಯಾಕೆ ಸಾಧಿಸಲಾಗದೆ ತೆವಳುತ್ತಿದೆ? ಪರಿಸ್ಥಿತಿ ಹೀಗೆ ಮುಂದುವರಿದರೆ ಬಹುಶ ಸರ್ಕಾರ  ಹೆಚ್ಎಎಲ್ ಅನ್ನು ಭಾರತೀಯ ವಾಯುಸೇನೆಯ ಸುಪರ್ದಿಗೆ ಕೊಟ್ಟು  ಅದನ್ನು ಕೇವಲ ಸಂಶೋಧನೆಗಷ್ಟೇ ಸೀಮಿತಗೊಳಿಸಿ,ಉತ್ಪಾದನೆಯನ್ನು ಸರ್ಕಾರೇತರ ಕಂಪೆನಿಗಳಿಗೆ ಕೊಡುವುದು ಸೂಕ್ತ.ಅಮೆರಿಕಾದ Lockheed ಮಾರ್ಟಿನ್ ಕಂಪೆನಿ ತನ್ನ ಎಫ್ 16 ಜೆಟ್ ರೆಕ್ಕೆಯನ್ನು ತಯಾರು ಮಾಡಲು ಭಾರತದಲ್ಲಿ ಟಾಟಾ ಸಂಸ್ಥೆಯ Tata Advanced Systems Limited (TASL) ನೊಂದಿಗೆ ಕೈ ಜೋಡಿಸಿದೆ. ಅದಲ್ಲದೆ ರಿಲಯನ್ಸ್,ಎಲ್ ಎಂಡ್ ಟಿ,ಮಹಿಂದ್ರಾ ಅಂತಹಾ ಕಂಪೆನಿಗಳು ಭಾರತದ ರಕ್ಷಣಾ ವಲಯದಲ್ಲಿ ಕೆಲಸ ಮಾಡುತ್ತಿವೆ.ಹೀಗಿರುವಾಗ,ಹೆಚ್ಎಎಲ್ ಎನ್ನುವ ಬಿಳಿಯಾನೆಯನ್ನು ಇನ್ನೆಷ್ಟು ದಿನ ಭಾರತೀಯರ ತೆರಿಗ ಹಣದೊಂದಿಗೆ ಚೆಲ್ಲಾಟ ಆಡಲು ಸರ್ಕಾರ ಬಿಡುತ್ತದೆ ಎಂದು ಕಾದುನೋಡಬೇಕು

2 ಟಿಪ್ಪಣಿಗಳು Post a comment
  1. Nandeesha m s
    ಆಕ್ಟೋ 11 2018

    These are all thinking matter about our army and national safety

    ಉತ್ತರ
  2. ಮಾರ್ಕ್ಸ್ ಮಂಜು
    ಆಕ್ಟೋ 12 2018

    ಬಂಡವಾಳಶಾಹಿಗಳ ಬಡಾಯಿ ಲೇಖನ. ಸಾರ್ವಜನಿಕ ಸರ್ಕಾರಿ ಸಂಸ್ಥೆಗಳನ್ನು ಮುಚ್ಚಿಸಿ ಅಂಬಾನಿ,ಅದಾನಿಗಳಿಗೆ ವಹಿಸುವ ಹುನ್ನಾರವನ್ನು ಖಂಡಿಸುತ್ತೇವೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments