ಓ ‘ಸಂಬಂಧ’ಗಳೇ ನೀವ್ಯಾಕೆ ಇಷ್ಟು ‘ಬಿಜಿ’!
– ಸುವರ್ಣ ಹೀರೆಮಠ
ಆ ಕಾಲವೇ ಹಾಗಿತ್ತು. ಮುಖಾಮುಖಿ ಮಾತು, ಸಂಬಂಧಗಳಿಗೆ ಬೆಲೆ ಇತ್ತು. ಜತೆಯಾಗಿ ಊಟ, ಆಟ, ಪಾಠ ನಮ್ಮದಾಗುತ್ತಿತ್ತು. ಆದರೆ ಈಗ ಕಾಲ ಆಗಿಲ್ಲ. ವೈಯಕ್ತಿಕ ಹಿತಾಸಕ್ತಿ ಸಾಧನೆ, ಕೆಲಸದ ಒತ್ತಡ ಎಲ್ಲವನ್ನು ನುಂಗುತ್ತಿದೆ. ಸಂಬಂಧವೆಂಬುದು ದೂರದ ಬೆಟ್ಟವಾಗುತ್ತಿದೆ. ಹತ್ತಿರ ಹೋಗಿ ನೋಡಿದಾಗ, ಅದು ಕೈಗೆ ಸಿಗದ ವಸ್ತು ಎಂಬುದು ತಿಳಿಯುತ್ತದೆ. ನಾವೆಲ್ಲ ಯಾಕೆ ಹೀಗೆ ಆಗುತ್ತಿದ್ದೇವೆ ? ದೊಡ್ಡ ಗ್ರಾತ್ರದ ಕಟ್ಟಡ ಕಟ್ಟಬೇಕು. ರೋಬೊ ಕಂಡುಹಿಡಿಯಬೇಕು ನಿಜ. ಆದರೆ ನಾವೇ ರೋಬೊ ಆಗಬಾರದು. ನಿಂತ ಕಟ್ಟಡವೂ ಆಗಬಾರದು.
ಆಗೊಂದಿತ್ತು ಕಾಲ. ಊರ ದೇವರ ಜಾತ್ರೆ ಬಂದರೆ ಎಲ್ಲಾರಿಗೂ ಪತ್ರ ಬರೆದು ಅಹ್ವಾನಿಸುವ ಮುಖ್ಯ ಕೆಲಸ ಅಪ್ಪ ನನಗೆ ವಹಿಸುತಿದ್ದರು. ನಮ್ಮೂರಿನ ಅಂಚೆ ಕಛೇರಿಗೆ ಹೋಗಿ 50 ಪೈಸೆ ಕವರ್ ತಗೊಂಡು ನನ್ನ ಪ್ರೀತಿಯ ಮಾವನವರಿಗೆ ನಿನ್ನ ಸೊಸೆ ಸುವರ್ಣ ಮಾಡುವ ನಮಸ್ಕಾರಗಳು ಹೀಗೆ ಶುರು ಮಾಡುತ್ತಾ, ಇದೇ ತಿಂಗಳು ಹೊಸ್ತಿಲ ಹುಣ್ಣಿಮೆಗೆ ನಮ್ಮೂರ ಜಾತ್ರೆ ಇರುವುದು ನಿಮಗೆಲ್ಲ ತಿಳಿದ ವಿಷಯ ಜಾತ್ರೆಗೆ ಬರಬೇಕೆಂದು ಇತ್ಯಾದಿ ಇತ್ಯಾದಿ … ಬರೆದು ಪೋಸ್ಟ್ ಡಬ್ಬಿ ಒಳಗೆ ಒಂದು ಸಲ ಕಣ್ಣಾಡಿಸಿ ಅದೊರೊಳಗೆ ಪತ್ರ ತುರಕಿ ಬರುತಿದ್ದೇ..
ಜಾತ್ರೆ ಇನ್ನು ಎರಡು ದಿನ ಇದೇ ಅನ್ನುವ ಮುಂಚೆ ಮಾಮ, ಅತ್ತೆ ಸಂಬಂಧಿಕರು ಎಲ್ಲಾರು ಬಂದು ಸೇರಿ ಮನೆಯಲ್ಲ ಗಿಜಗನ ಗೂಡು ಆಗುತ್ತಿತ್ತು. ಮನೆ ಮಂದಿ ನೆಂಟರಿಷ್ಟರೂ ಎಲ್ಲಾರು ಸೇರಿ, ಬಾಳ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಊರ ದೇವರ ಹನುಮಪ್ಪನ ಜಾತ್ರೆ, ಆಚರಣೆ ಮಾಡ್ತಾ ಇದ್ವಿ.. ಜಾತ್ರೆಗೆ ಹೊಸ ಹೊಸ ಬಟ್ಟೆ ಧರಿಸಿ, ದೇವಸ್ಥಾನಕ್ಕೆ ಹೋಗಿ ದೇವರಿಗೆ ಹಣ್ಣು ಕಾಯಿ ಮಾಡಿಸಿ, ನೈವೇದ್ಯ ಹಿಡಿದು ಎಲ್ಲಾರು ಒಟ್ಟಿಗೆ ಕುಳಿತು ಊಟ ಮಾಡುತ್ತಿರುವಾಗ ಅದರ ಸಂಭ್ರಮವೇ ಬೇರೆ. ಜಾತ್ರೆಯಲ್ಲಿ ನಂದಿಕೋಲು ಸೇವೆ, ಜೊತೆಗೆ ನಮ್ಮೂರ ಶಾಸ್ತ್ರಿಗಳು ಹೇಳುತ್ತಿದ್ದ ವೀರಗಾಸೆ ಕೇಳುತ್ತಾ.. ನಾ ಮುಂದು ತಾ.. ಮುಂದು ಎನ್ನುತ್ತಾ ರಥ ಎಳೆಯುವುದು, ಅಪ್ಪ ಅಮ್ಮನ ಕೈ ಹಿಡಿದು ಜಾತ್ರೆ ಸುತ್ತಿಸಿ, ಫೀಪೀ.. ಬೆಂಡು ಬತಸ್ ಕೂಡಿಸಿ, ನಾವು ಕೇಳಿದ್ದು ಕೊಡಿಸಿಲ್ಲ ಅಂದ್ರೆ ಅಲ್ಲೇ ನೆಲದ ಮೇಲೆ ಬಿದ್ದು ಒದ್ದಾಡಿ ಅತ್ತು ಕರೆದು, ಅಂತೂ ಇಷ್ಟದ ಗೊಂಬೆ ತೆಗೆದುಕೊಂಡು ಮನೆಗೆ ಬಂದಿದ್ದು, ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಜಾತ್ರೆಗೆ ಬಂದಿರುವ ಎಲ್ಲಾ ನೆಂಟರಿಷ್ಟರು ಮನೆ ಮಂದಿಯೆಲ್ಲ ಸೇರಿ ಪಡಸಾಲೆ ಒಳಗೆ ಕುಳಿತು ಅಮ್ಮ ಮಾಡಿದ ಕಾರಚಿಕಾಯಿ. ಜಾತ್ರೆ ಒಳಗೆ ತಂದಿರುವ ಜಿಲೇಬಿ, ಬಜ್ಜಿ ಆದರ ಜೊತೆಗೆ ಒಂದಿಷ್ಟು ಮಂಡಾಳು (ಮಂಡಕ್ಕಿ) ಖಾರ ಕುಂತು ತಿಂದರೆ ನನಗೊಂದಿಷ್ಟು ನಿನಗೊಂದಿಷ್ಟು ಅಂತ ದೊಡ್ಡವರ ಮಧ್ಯ ಕೈ ಹಾಕಿ ಕುರು.. ಕುರು.. ಅಂತ ತಿನ್ನುತ್ತಿದ್ದ, ಆ ದೃಶ್ಯ ನೆನೆಸಿಕೊಂಡರೆ, ಈಗಲೂ ಬಾಯಲ್ಲಿ ನೀರುರುತ್ತೆ..
ಇದು 20 ವರ್ಷದ ಹಿಂದಿನ ಮಾತು. ಈಗಲೂ ಊರ ದೇವರ ಜಾತ್ರೆ ನಡೆಯುತ್ತೆ. ಈ ಸಲದ ಜಾತ್ರೆಗೆ ಎಲ್ಲಾರಿಗೂ ಆಹ್ವಾನಿಸುವ ಮುಖ್ಯ ಕೆಲಸ ಅಪ್ಪ ನನಗೆ ವಹಿಸಿದರು. ಒಕೆ ಎಂದು ಹೇಳಿ ಮೊಬೈಲ್ ಪೋನ್ ಕೈಗೆತ್ತಿಕೊಂಡು ದೂರದ ಊರು ಬೆಂಗಳೂರಿನಲ್ಲಿ ಇರುವ ಮಾಮನಿಗೆ ರಿಂಗ್ ಆಯಿಸಿದೆ. ಟ್ರಿಂಗ್ … ಟ್ರಿಂಗ್.. ರಿಂಗ್ ಆಯ್ತು ಹಲೋ ಮಾಮ, ನಾನು ಸುವರ್ಣ ಈ ಸಲ ದ ಜಾತ್ರೆಗೆ ಬರಬೇಕೆಂದು ಆಹ್ವಾನಿಸಿದೆ. ಆ ಕಡೆಯಿಂದ ಮಾಮ ಅಯ್ಯೋ.. ಇಲ್ಲ ಸುವರ್ಣ, ನನಗೆ ತುಂಬಾ ಕೆಲಸ ಇದೆ ಬರೋಕೆ ಆಗಲ್ಲ.. ಅಂದ್ರೂ, ಹೊಗ್ಲಿ ಅತ್ತೆಗೆ ಪೋನ್ ಕೊಡಿ ಅವರನ್ನಾದರೂ ಕೇಳ್ತೀನಿ ಅಂದೆ, ಅದಕ್ಕೆ ಅವರು ನಿಮ್ಮ ಅತ್ತೆ ನಂಬರ್‍ಗೆ ಕಾಲ್ ಮಾಡು ಅಂತ ಹೇಳಿ ಪೋನ್ ಕಟ್ ಮಾಡಿದ್ರೂ, ಈಗಿನ ಕಾಲದಾಗ ಎಲ್ಲಾರ ಹತ್ರಾನೂ ಮೋಬೈಲ್ ಇರ್ತವೇ ಅನ್ನೋದು ಆ ಕ್ಷಣ ಮರೆತಿದ್ದೆ. ಹೋಗಲಿ ಅಂತ ಅತ್ತೆ ನಂಬರಿಗೆ ಕಾಲ್ ಮಾಡಿದೆ, ಅತ್ತೆ ನಮ್ಮೂರ ಜಾತ್ರೆ ಅಂದೆ.. ಅಯ್ಯೋ ಮನೆಯಲ್ಲಿ ತುಂಬಾ ಕೆಲಸ ಮಕ್ಕಳ ಪರೀಕ್ಷೆ ಹತ್ತಿರ ಬರ್ತಾ ಇದವೇ ಕಣೇ, ಬರೊಕೆ ಆಗೋದಿಲ್ಲ, ಮಹಿಳಾ ಕ್ಲಬ್ ಮೀಟಿಂಗ್ ಬೇರೆ ಇದೆ, ಅಂತ ಹೇಳಿ ಅತ್ತೆನೂ ಪೋನ್ ಕಟ್ ಮಾಡಿದ್ರು. ಹೀಗೆ ಎಲ್ಲಾ ಸಂಬಂಧಿಕರು ಒಂದಿಲ್ಲ ಒಂದೊಂದು ನೆಪ ಹೇಳಿ ಜಾತ್ರೆಗೆ ಬರಲೇ ಇಲ್ಲ..
ಜಾತ್ರೆ ಏನು ನಡಿತು ಮೊದಲಿದ್ದ ಸಂಭ್ರಮ ಸಡಗರ ಜಾತ್ರೆಯಲ್ಲಿ ಇರಲಿಲ್ಲ. ಅಪ್ಪ ಅಮ್ಮನನ್ನು ಕರೆದು ಜಾತ್ರೆಗೆ ಹೋದೆ, ಮುಖ್ಯ ದ್ವಾರದ ಬಳಿ ಹೋಗುತ್ತಿದ್ದಂತೆ ಜಾತ್ರೆಯ ಶುಭಾಶಯ ಕೋರಲು ನಾ ಮುಂದು ತಾ ಮುಂದು ಅಂತ 6 ಅಡಿಯಿಂದ 8 ಅಡಿವರೆಗೆ ತಮ್ಮ ಪೋಟೋಗಳು ಹಾಕಿ ಸ್ಥಳೀಯ ಜನ ಪ್ರತಿನಿಧಿಗಳು, ಯುವಕ ಸಂಘಗಳು ಹೀಗೆ ಜಾತ್ರೆಯಲ್ಲಿ ಕಟ್ಟಿರುವ ಮಾವಿನ ತೋರಣಗಳಿಗಿಂತ ಇವರು ಹಾಕಿದ ಕಟ್ ಔಟ್‍ಗಳು ರಾರಾಜಿಸುತ್ತಿದ್ದವು, ಮೊದಲಿನಂತೆ ಜಾತ್ರೆಯ ಸಂಭ್ರಮ ಸಡಗರ ಇರಲಿಲ್ಲ. ಜಾತ್ರೆಗೆ ಬಂದಿರುವ ಮಂದಿಯೆಲ್ಲ ಶೃಂಗರಿಸಿದ ರಥ ನೋಡವುದಕ್ಕಿಂತ ಹೆಚ್ಚು ಇವರು ಹಾಕಿರುವ ಕಟ್ ಔಟ್‍ಗಳನ್ನೆ ನೋಡುತ್ತಿದ್ದರು, ಜೊತೆಗೆ ರಥದ ಮುಂದೆ ನಿಂತು, ಸೇಲ್ಪಿ ತೆಗೆದುಕೊಳ್ಳುತ್ತಿದ್ದೇ ಹೆಚ್ಚು. ನಂದಿಕೋಲು ಸೇವೆ ಮಾಡುತ್ತಾ. ವೀರಗಾಸೆ ಹೇಳುವುದು ಈಗಿನಾ ಮಂದಿ ಮರೆತಂತಿತ್ತು.
ಅಂತೂ ಅಪ್ಪ ಅಮ್ಮ ನಾನು ಮೂವರು ಸೇರಿ ಜಾತ್ರೆ ಮಾಡಿದೆವು, ಮೊದಲಿದ್ದ ಸಂಭ್ರಮ ಈಗಿರಲಿಲ್ಲ. ಎಲ್ಲರೂ ಕುಳಿತು ಜಾತ್ರೆಯಲ್ಲಿ ಖರೀದಿಸಿದ ಬತಸ್, ಜೀಲೇಬಿ ತಿನ್ನುತ್ತಾ ಹರಟೆ ಹೊಡೆಯುವ ಪಡಸಾಲೇ ಖಾಲಿ ಖಾಲಿ ಇತ್ತು. ಪಡಸಾಲೇ ಖಾಲಿಯಾದಂತೆ ನಮ್ಮ ಮನಸ್ಸು ಖಾಲಿಯಾದಂತೆ ಕಾಣುತ್ತದೆ. ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಆರಾಮ ತಪ್ಪಿದರು, ಆಗಿನಾ ಕಾಲದಾಗ ಅಷ್ಟೊಂದು ಸಾರಿಗೆ ಆನಾನುಕೂಲ ಇದ್ದ ಕಾಲದಲ್ಲೂ ನಮ್ಮ ಸಂಬಂಧಿಕರು, ಬಳಗದವರು, ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯನ್ನು ಮಾತನಾಡಿಸಲು ಬಂದು, ಅವರಿಗೆ ಸಮಾಧಾನ ಸಾಂತ್ವಾನ ಹೇಳುತ್ತಿದ್ದರು.
ಈಗಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಚೆನ್ನಾಗಿದೆ. ನಮ್ಮವರ ಹತ್ತಿರ ಹೋಗಿ ಮಾತನಾಡುವಷ್ಟು ಅವರಿಗೆ ಸಮಾಧಾನ ಸಾಂತ್ವನ ಹೇಳಲಾರದಷ್ಟು ಬಿಜಿಯಾಗಿದ್ದೇವೆ ಅಲ್ಲವೇ..?
ಸತ್ಯ ಕ್ಕೆ ತುಂಬಾ ಹತ್ತಿರ ವಾಗಿದೆ
True