ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 16, 2018

1

ಕುಂ.ವೀ ಮತ್ತೆ ಕುಳಿತು ಮೊದಲಿಂದ ಹೇಳಿದ ಕತೆ – “ಶಾಮಣ್ಣ”

‍ನಿಲುಮೆ ಮೂಲಕ

– ಶ್ರೀರಂಗ ಯಲಹಂಕ

ನಾನು ‘ಶಾಮಣ್ಣ’ ಕಾದಂಬರಿ ಓದುವುದಕ್ಕೂ ಮುಂಚೆ   ಕುಂ ವೀ ಅವರ ‘ಡೋಮ ಮತ್ತಿತರ ಕಥೆಗಳು’, ‘ಯಾಪಿಲ್ಲು’ ಕಾದಂಬರಿ, ‘ರಾಯಲಸೀಮಾ’ (ಆತ್ಮಕಥಾನಕ ಮಾದರಿಯ ಬರಹಗಳು), ಅವರ ಆತ್ಮ ಕಥೆ ‘ಗಾಂಧೀ ಕ್ಲಾಸು’, ‘ಅರಮನೆ’ ಕಾದಂಬರಿ ಇವುಗಳನ್ನು ಓದಿದ್ದೆ. ಯಾಪಿಲ್ಲು ಕಾದಂಬರಿಯು ಪುಸ್ತಕರೂಪ ಪಡೆದ ಬಗ್ಗೆ ಬರೆಯುತ್ತಾ ಕುಂ ವೀ ಅವರು ‘ಇದು ಶಾಮಣ್ಣ ಕಾದಂಬರಿಗಿಂತ ಮೊದಲೇ ಬರೆದು ಗೊಂಗಡಿಯಲ್ಲಿ ಅಡಗಿಸಿಟ್ಟಿದ್ದೆ… ‘ ಎಂದು ಬರೆದಿದ್ದಾರೆ.ಅದನ್ನು ಓದಿದ ಮೇಲೆ ‘ಶಾಮಣ್ಣ’ ಕಾದಂಬರಿಯನ್ನು ಓದಬೇಕೆಂಬ ಆಸೆಯನ್ನು ತಡೆಯಲಾರದೆ ಹೋದೆ. ಕೊಂಡುಕೊಂಡು ಓದಿದೆ. ಆಸೆ ನಿರಾಸೆಯಾಯಿತು. ಅದರ ವಿವರಗಳಿಗೆ ಹೋಗುವ ಮುನ್ನ ಒಂದೆರೆಡು ವಿಷಯಗಳನ್ನು ಮೊದಲೇ ಸ್ಪಷ್ಟಪಡಿಸುವುದು ಮುಖ್ಯ. ಈ ನನ್ನ ಬರಹ ‘ಶಾಮಣ್ಣ’ ಕಾದಂಬರಿಯ ಪೂರ್ಣ ಪ್ರಮಾಣದ ವಿಮರ್ಶೆಯಲ್ಲ.ನಾನು ಇದುವರೆಗೆ ಓದಿರುವ ಅವರ  ಕೃತಿಗಳು ಕೆಲವೊಂದು ಮಿತಿಗಳ ನಡುವೆಯೂ ನನಗೆ ಓದಿನ ಸಂತೋಷವನ್ನು ಕೊಟ್ಟಿದೆ. ‘ಅರಮನೆ’ ಕಾದಂಬರಿಯಂತೂ  ಒಂದು ಮಾಸ್ಟರ್ ಪೀಸ್.( ಅದಕ್ಕೆ ೨೦೦೭ನೇ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ.). ಪ್ರಶಸ್ತಿ ಬಂದ ಕೃತಿಗಳೆಲ್ಲಾ ಉತ್ತಮವಾಗಿರಲೇಬೇಕು ಎಂಬ ನಿಯಮವೇನಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ‘ಅರಮನೆ’ ಕಾದಂಬರಿ ನಿಜವಾಗಲೂ ಆ ಪ್ರಶಸ್ತಿಗೆ ಅರ್ಹವಾದ ಕೃತಿ. ‘ಅರಮನೆ’  ಓದಿದ ಮೇಲೆ ಕುಂ ವೀ ಅವರ ಎಲ್ಲಾ ಕಾದಂಬರಿಗಳನ್ನು ಓದಬೇಕೆಂಬ ಆಸೆ ಇತ್ತು. ಇತ್ತೀಚೆಗೆ ಅವರ ‘ಕತ್ತೆಗೊಂದು ಕಾಲ’ ಎಂಬ ಕಾದಂಬರಿ ಬಿಡುಗಡೆ ಆಯಿತು. ಸದಾ ಪ್ರಯೋಗಶೀಲರಾದ ಕುಂ ವೀ ಅವರ ಆ ಕೃತಿಯ ಬಗ್ಗೆ ನನಗೆ ತುಂಬಾ ಕುತೂಹಲವಿದೆ. ಆದರೆ ‘ಶಾಮಣ್ಣ’ ಕಾದಂಬರಿ ಓದಿದ ಮೇಲೆ ನನ್ನ ಆ ಕುತೂಹಲಕ್ಕೆ ಸ್ವಲ್ಪ ಬ್ರೇಕ್ ಹಾಕಿರುವೆ.

‘ಶಾಮಣ್ಣ’ ೧/೮ ಡೆಮಿ ಆಕಾರಾದ ೬೮೭ ಪುಟಗಳ, ಗಟ್ಟಿ ಮುಟ್ಟಾದ ರಕ್ಷಾಪುಟದ ಬೃಹತ್ ಕಾದಂಬರಿ. ಮೊದಲ ಮುದ್ರಣ ೧೯೯೮. ಪರಿಷ್ಕೃತ ಮುದ್ರಣ ಮೇ ೨೦೧೧. ಬೆಲೆ ರೂ ೩೯೫-. ಪ್ರಕಾಶಕರು ‘ಸಪ್ನ ಬುಕ್ ಹೌಸ್, ಬೆಂಗಳೂರು –೯. ಇದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ. ನಾನು ಓದಿದ್ದು ಪರಿಷ್ಕೃತ ಮುದ್ರಣದ ‘ಶಾಮಣ್ಣ’ನನ್ನು!!  ಪರಿಷ್ಕೃತ  ಮುದ್ರಣದ ಮುನ್ನುಡಿ ರೂಪದ ಮಾತಿನಲ್ಲಿ ಕುಂ ವೀ ಅವರು ಹೇಳಿರುವ ಮಾತುಗಳು ‘ಯಥಾವತ್ತಾಗಿ’ ಹೀಗಿವೆ.
‘… ನನ್ನ ಉಳಿದ ಕಾದಂಬರಿಗಳಂತೆ ಇದು ಸಹ ದ್ವಿತೀಯ ಮುದ್ರಣ ಸೌಲಭ್ಯದ ಹಂತ ತಲುಪಿತು. ಇನ್ನೇನು ಯಥಾವತ್ತಾಗಿ ಪ್ರಕಟವಾಗಬೇಕೆನ್ನುವಷ್ಟರೊಳಗೆ ಓದಲು ಆರಂಭಿಸಿದೆ. ಆರ್ಥಿಕ ಆಸರೆ ಸಲುವಾಗಿ ಕೇವಲ ಇಪ್ಪತ್ತು ದಿವಸಗಳ ಬರೆದ ಕಾಲಾವಕಾಶ ನೆನಪಿಸಿಕೊಂಡೆ. ನಿರಾಸೆ, ಭ್ರಮ ನಿರಸನವಾಯಿತು. ಮೂರು ತಿಂಗಳುಗಳ ಪರ್ಯಂತ ಇದರ ಕಾಮಗಾರಿ ಕೈಗೊಂಡೆ. ಕಾದಂಬರಿಯ ಭಾಷೆ ಸೇರಿದಂತೆ ಪಾತ್ರಗಳ ವ್ಯಕ್ತಿತ್ವವನ್ನು ಪರಿಷ್ಕರಿಸಿದೆ. ಕೆಲವು ಪಾತ್ರಗಳ ಕ್ರಿಯಾಕಲಾಪವನ್ನು ಹ್ರಸ್ವಗೊಳಿಸಿದೆ… ಅನ್ಯ ವಾಚಕ ಮತ್ತು ಲೇಖಕನಾಗಿ ಓದಿಕೊಂಡೆ, ಖುಷಿಯಾಯಿತು. ಓದುಗರೂ  ಖುಷಿ ಪಡಬಹುದೆಂಬ ನಂಬಿಕೆ ಮೂಡಿತು. ದಶಕದ ಹಿಂದೆ ಕಟುವಾಗಿ ವಿಮರ್ಶಿಸಿದ್ದ ಡಾ. ಸಿ ಎನ್. ರಾಮಚಂದ್ರನ್ ಅವರಿಗೂ ಕಾದಂಬರಿಯ ಬದಲಾದ ವಾಸ್ತು, ಭಾಷೆ, ಸಂವಿಧಾನ, ಹಿಡಿಸಬಹುದೆಂಬ ಭರವಸೆಯಿಂದ ಪ್ರಕಟಿಸುತ್ತಿರುವೆ… ‘ .

ಆದರೆ ಸಿ ಎನ್  ರಾಮಚಂದ್ರನ್ (ಸಿ ಎನ್  ಆರ್) ಅವರು ಬರೆದಿದ್ದ  (ಮೊದಲನೇ ಮುದ್ರಣದ ಸಂದರ್ಭದ)  ವಿಮರ್ಶೆಯನ್ನೂ ಈ ಪರಿಷ್ಕೃತ ಮುದ್ರಣದ ಜತೆ ಸೇರಿಸಿದ್ದರೆ  ಓದುಗರಿಗೆ ಸಿ ಎನ್  ಆರ್ ಅವರು ಏಕೆ ಕಟುವಾಗಿ ಟೀಕಿಸಿದ್ದರು; ಟೀಕಿಸಿದ  ಆ ಎಲ್ಲಾ ಅಂಶಗಳನ್ನು ಕುಂ ವೀ ಅವರು ‘ಮತ್ತೆ ಕುಳಿತು ಮೊದಲಿಂದ ಹೇಳಿದ ಶಾಮಣ್ಣನ ಕಥೆಯಲ್ಲಿ’ ಸಾಧ್ಯವಾದಷ್ಟೂ ನಿವಾರಿಸಿದ್ದಾರೆಯೇ ಎಂದು ತಿಳಿಯುತ್ತಿತ್ತು. ಈಗ ಆ ಅವಕಾಶ ಇಲ್ಲವಾಗಿದೆ. ೬೮೭ ಪುಟಗಳ, ೩೯೫ ರೂಪಾಯಿಗಳ ಬೆಲೆಯ ಈ ಪುಸ್ತಕಕ್ಕೆ ಸಿ ಎನ್ ಆರ್  ಅವರ ಮೂರ್ನಾಲಕ್ಕು ಪುಟಗಳ ವಿಮರ್ಶೆ ಭಾರವೆನಿಸಬಾರದಿತ್ತು. ಬೇಕಾದರೆ ಇನ್ನೂ ಐದು ರೂಪಾಯಿಗಳನ್ನು ಜಾಸ್ತಿ ಮಾಡಿ ನಾಲ್ಕುನೂರು ರೂಪಾಯಿಗಳ ಬೆಲೆಯಿಡಬಹುದಾಗಿತ್ತು. ಕುಂ ವೀ ಅವರ ಬರವಣಿಗೆಯನ್ನು ಇಷ್ಟಪಡುವ ನನ್ನಂತ ಅಭಿಮಾನಿಗಳಿಗೆ ಇನ್ನು  ಐದು ರೂಪಾಯಿ ಜಾಸ್ತಿ ಕೊಡುವುದು ಭಾರವೆನಿಸುತ್ತಿರಲಿಲ್ಲ. ಜತೆಗೆ ಕುಂ ವೀ ಅವರ ಓದುಗರಿಗೆ  ಆ ವಿಮರ್ಶೆ ‘ಶಾಮಣ್ಣ’ ಕಾದಂಬರಿಯ ರೀವಾಲ್ಯೂಯೇಷನ್ ತರಹ ಆಗುತ್ತಿತ್ತು. ಆ ಅವಕಾಶ ಈಗ ತಪ್ಪಿಹೋಗಿದೆ. ಬೆನ್ನುಡಿ ಬರೆದಿರುವ ಮೂವರು ಸಾಹಿತಿ /ವಿಮರ್ಶಕರೆನೋ ಮುಕ್ತ ಕಂಠದಿಂದ ‘ಶಾಮಣ್ಣ’ನ ಪ್ರಶಂಸೆ ಮಾಡಿದ್ದಾರೆ!!
ಕಾದಂಬರಿಯೊಂದರ ಪುಟಗಳು, ಅದರಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ವರ್ಣನೆ ಇತ್ಯಾದಿ  ಜಾಸ್ತಿಯಾಗಿರಬೇಕೋ ಕಡಿಮೆಯಾಗಿರಬೇಕೋ ಎಂಬುದಕ್ಕೆ ನಿರ್ದಿಷ್ಟ ನಿಯಮವೇನಿಲ್ಲ. ಪುಟಗಳು ಜಾಸ್ತಿಯಾದರೆ ಕಾದಂಬರಿಯ ವಸ್ತುವಿನ  ‘ಬಿಗಿ’ ತಪ್ಪಿಹೋಗುತ್ತದೆ; ಪುಟಗಳು ಕಡಿಮೆಯಿದ್ದರೆ  ಬಿಗಿ  ಹೆಚ್ಚು ಎಂದೇನಿಲ್ಲ. ಅದೇ ರೀತಿ ಕಡಿಮೆ ಪುಟಗಳು ಯಶಸ್ವೀ ಕಾದಂಬರಿಯೊಂದರ ಸೂತ್ರಗಳಲ್ಲಿ ಒಂದು ಎಂದೇನಿಲ್ಲ. ಎರಡಕ್ಕೂ ಕುಂ ವೀ ಅವರ ಕಾದಂಬರಿಗಳಿಂದಲೇ  ಉದಾಹರಣೆಗಳನ್ನು ಕೊಡಬಹುದು. ಅವರ ‘ಅರಮನೆ’ ಕಾದಂಬರಿಯ ಏಳನೇ  ಮುದ್ರಣದ (೨೦೧೪) ಪುಟಗಳ ಸಂಖ್ಯೆ ೫೪೪. ಮೊದಲ ಮುದ್ರಣ ಆಗಸ್ಟ್ ೨೦೦೫. ಹತ್ತು ವರ್ಷಗಲ್ಲಿ ಏಳು ಮುದ್ರಣಗಳನ್ನು ಕಂಡಿದೆ. ಕಾಕತಾಳೀಯವಿದ್ದರೂ ಇರಬಹುದುದು ‘ಶಾಮಣ್ಣ’ ಕಾದಂಬರಿಯನ್ನು ೧೯೯೮ರಲ್ಲಿ ಕುಂ ವೀ ಅವರು ಹೇಳಿದಂತೆ ಕಟುವಾಗಿ ಟೀಕಿಸಿದ್ದ ಸಿ ಎನ್  ಆರ್ ಅವರೇ ೨೦೦೫ರಲ್ಲಿ ‘ಅರಮನೆ’ ಕಾದಂಬರಿಯನ್ನು ಚಾರಿತ್ರಿಕ, ಧಾರ್ಮಿಕ,ಸಾಮಾಜಿಕ,ಆಯಾಮಗಳಲ್ಲಿ ದೀರ್ಘವಾಗಿ ವಿಮರ್ಶಿಸಿದ್ದಾರೆ!. ಕುಂ ವೀ ಅವರ ಕಥನಗಾರಿಕೆಯನ್ನು  ಮೆಚ್ಚಿಕೊಂಡಿದ್ದಾರೆ. ‘ಯಾಪಿಲ್ಲು’ ಕೇವಲ ೯೧ ಪುಟಗಳಿಷ್ಟಿದೆ. ಜತೆಗೆ ಪ್ರೊ।।ರಾಜೇಂದ್ರ ಚೆನ್ನಿ  ಅವರ ಉತ್ತಮ ವಿಮರ್ಶಾತ್ಮಕ ಪತ್ರರೂಪಿ ಮುನ್ನುಡಿಯಿದೆ. ಆದರೂ ಅದು ಕುಂ ವೀ ಅವರ ಉತ್ತಮ ಕಥೆಯೊಂದರ ಮಟ್ಟವನ್ನು ಮುಟ್ಟಲೂ ಆಗಿಲ್ಲ.
ಇಷ್ಟು ಪ್ರಸ್ತಾವನೆಯೊಡನೆ ‘ಶಾಮಣ್ಣ’ ಕಾದಂಬರಿಯು,ಓದುಗನ್ನು ಪಟ್ಟಾಗಿ ಹಿಡಿದು ಕೂತು ಓದಿಸುವ  ಕುಂ ವೀ ಅವರ ಕಥೆ ಹೇಳುವ ಜಾದೂಗಾರಿಕೆಯಿಂದ  ಮಾಯವಾಗಿ ಕೇವಲ  ಪದಗಳ, ವಾಕ್ಯಗಳ ಮೆರವಣಿಗೆಯ ವಿಜೃಂಭಣೆಯಾಗಿ ಮಾತ್ರ  ಏಕೆ ಕಾಣುತ್ತದೆ ಎಂದು ನೋಡೋಣ.
೧. ಮೂರು ತಲೆಮಾರುಗಳ ಕಥೆ/ಕಾದಂಬರಿಗಳು ಕನ್ನಡಕ್ಕೆ ಹೊಸದೇನಲ್ಲ. ಇಂತಹ ಕಥಾವಸ್ತುವಿದ್ದರೆ ಸಹಜವಾಗಿ ಕಾದಂಬರಿ ವಿಸ್ತಾರವಾಗುತ್ತದೆ. ಆದರೆ ವಿಸ್ತಾರವಾದಾಗ ಕಥೆಯ  ಆಳ ಕಡಿಮೆಯಾಗದಂತೆ ಎಚ್ಚರವಹಿಸಬೇಕಾಗುತ್ತದೆ. ಇಲ್ಲವಾದರೆ ನದಿಯಲ್ಲಿ ಪ್ರವಾಹ ಬಂದಾಗ ಹೊಲ,ಗದ್ದೆ, ಮನೆ,ಮಠಗಳನ್ನೆಲ್ಲಾ ಆವರಿಸಿ ಪ್ರವಾಹ ಇಳಿಯುವುದನ್ನೇ ಕಾಯುತ್ತಾ ಕೂರುವ ಸಂತ್ರಸ್ತರಪಾಡಿನಂತೆ ಓದುಗನೂ ಕಥೆಯ ಮೂಲ ಎಳೆಯಿಂದ ತಪ್ಪಿಸಿಕೊಂಡು ಅಲೆದಾಡುವಂತಾಗುತ್ತದೆ.ಎಣಿಸಿ ಲೆಕ್ಕಹಾಕಿದರೆ ಸುಮಾರು ಐವತ್ತರಷ್ಟು ಪಾತ್ರಗಳು ಉಪಪಾತ್ರಗಳು, ಅವುಗಳ ಕಥೆ ಉಪಕಥೆಗಳು. ಕಥೆ ಕಟ್ಟುವುದರಲ್ಲಿಪರಿಣಿತರಾದ  ಕುಂ ವೀ ಅವರು ಅವುಗಳನ್ನು ಚೆನ್ನಾಗಿಯೇ ಕಟ್ಟಿದ್ದಾರೆ. ಆದರೆ ಆ ಎಲ್ಲಾ ವಿವರಗಳು ಮೂಲ ಕಥೆಯ ಎಳೆಯಾದ ‘ ಶಾಮಣ್ಣ’ ನನ್ನು ಕಾದಂಬರಿಯ ಕೊನೆಯ ಪುಟಗಳ ತನಕ ಬದಿಗೆ ಸರಿಸಿ ತಾವೇ ರಂಗಭೂಮಿಯ ಮೇಲೆ ವಿಜೃಂಭಿಸಿದರೆ ಹೇಗೆ? ತಮ್ಮ ಕಾದಂಬರಿಯು  ಕೇವಲ ‘ಶಾಮಣ್ಣ’ ಎಂಬ ಪಾತ್ರದ ಸುತ್ತಾ ಮಾತ್ರ ಕೇಂದ್ರೀಕೃತವಾಗಬಾರದು; ಆ ಕಾಲದ ಸಮಸ್ತ ಸಾಮಾಜಿಕ,ರಾಜಕೀಯ ಇತ್ಯಾದಿಗಳನ್ನು ಪ್ರತಿಬಿಂಬಿಸುವಂತಿರಬೇಕೆಂದು ಕಾದಂಬರಿಕಾರರ ಉದ್ದೇಶವಿರಬೇಕು. ಉದ್ದೇಶವೇನೋ ದೊಡ್ಡದೇ. ಆದರೆ ಚಪ್ಪರ  ದೊಡ್ಡದಾದಷ್ಟೂ ಮಳೆ ಗಾಳಿಗಳಿಗೆ ಬೇಗ ತುತ್ತಾಗಿ ಕೆಳಕ್ಕೆ  ಬೀಳುವ ಅಪಾಯ ಜಾಸ್ತಿ!
೨. ಕಾದಂಬರಿಯು ೬೮೭ ಪುಟಗಳ ತನಕ ಬೆಳೆಯಲು ಮತ್ತೊಂದು ಕಾರಣ ಭಾಷೆಯ ದುಂದುಗಾರಿಕೆ. ಸಾಹಿತಿಯು ಭಾಷೆಯ ಬಳಕೆಯಲ್ಲಿ ಜಿಪುಣನಾಗಿರಬೇಕು. ಹತ್ತಾರು  ಪದಗಳ  ಒಂದು ವಾಕ್ಯ ಬರೆಯುವಾಗ ಅದನ್ನು ಐದಾರು ಪದಗಳಲ್ಲಿ ಹೇಳಲು ಪ್ರಯತ್ನಿಸಬೇಕು. ಸಾಹಿತಿ ಭಾಷೆಯನ್ನು ರಕ್ಷಿಸಿದರೆ , ಭಾಷೆ ಸಾಹಿತಿಯನ್ನು ರಕ್ಷಿಸುತ್ತದೆ. ಆದರೆ ‘ಶಾಮಣ್ಣ’ ಕಾದಂಬರಿಯಲ್ಲಿ ಕುಂ ವೀ ಅವರು ತುಂಬಾ ಧಾರಾಳಿಯಾಗಿದ್ದಾರೆ. ಒಂದು ವಾಕ್ಯ ಹೇಳುವಲ್ಲಿ ಅದೇ ಅರ್ಥವನ್ನು ಕೊಡುವ ಐದಾರು ವಾಕ್ಯಗಳು ಒಂದರ ಹಿಂದೊಂದರಂತೆ ಹಿಂಬಾಲಿಸುತ್ತವೆ. ಈಗ ಟಿವಿಗಳಲ್ಲಿ ಬರುವ ಮೇಘಾ ಸೀರಿಯಲ್ ಗಳ ಸನ್ನಿವೇಶ, ಸಂಭಾಷಣೆಗಳಂತೆ  ಕಾದಂಬರಿಯ ಪುಟಗಳು ಭಾಸವಾಗುತ್ತವೆ. ಟಿವಿಯವರಿಗಂತೂ ತಲೆ ಬಾಲವಿಲ್ಲದ  ಕಥೆಗಳು   ಧಾರಾವಾಹಿಗಳಾಗಿ, ಜಾಹೀರಾತದಾರರು ಇರುವತನಕ ಓಡಿಸುವ ದರ್ದು ಇರುತ್ತದೆ. ಯಾವಾಗ ಅವುಗಳಿಗೆ  ಟಿ ಆರ್ ಪಿ ಇಲ್ಲವಾಗುತ್ತದೋ ಆಗ ಟಿವಿ ಪರದೆಯಿಂದ ಮಾಯವಾಗುತ್ತವೆ. ಆದರೆ  ಒಂದು ಕೃತಿಯನ್ನು ದುಡ್ಡು ಕೊಟ್ಟು ಕೊಂಡು ಓದುಗರನ್ನು ಸಾಹಿತಿಯು ಮರೆತರೆ ಹೇಗೆ? ಒಬ್ಬ ಸಾಹಿತಿಯು ಕಥೆ ಕಾದಂಬರಿಗಳನ್ನು ಬರೆಯುವಾಗ ಓದುಗರನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕೇ ಬೇಡವೇ ಎಂಬ ಚರ್ಚೆ ಅರ್ಧ ಶತಮಾನದಷ್ಟು ಹಳೆಯದು. ಅದನ್ನು ಚರ್ಚಿಸಲು ಬೇರೆಯದೇ ಲೇಖನ ಬರೆಯಬೇಕಾಗುತ್ತದೆ.
೩.ಕುಂ ವೀ ಅವರು ಸಾಕಷ್ಟು  ಕಥೆ ಕಾದಂಬರಿಗಳನ್ನು ಬರೆದು ಕಥಾವಸ್ತು,ತಂತ್ರಗಳನ್ನು ಅರಿತವರು; ಆ ಕಲೆಯನ್ನು  ಪಳಗಿಸಿಕೊಂಡವರು. ‘ಶಾಮಣ್ಣ’ ಕಾದಂಬರಿಯ ಪರಿಷ್ಕೃತ ಆವೃತ್ತಿಯಲ್ಲಿ ‘ಕೆಲವು ಪಾತ್ರಗಳ ಕ್ರಿಯಾಕಲಾಪವನ್ನು ಹ್ರಸ್ವಗೊಳಿಸಿದೆ’ ಎಂದಿದ್ದಾರೆ. ಇನ್ನೂ ಮಾಡಬಹುದಿತ್ತು.   ಇನ್ನೂ ಸ್ವಲ್ಪ  ಕಠಿಣರಾಗಿ ಕತ್ತರಿ ಆಡಿಸಿದ್ದರೆ ಕನಿಷ್ಠ ಒಂದು ನೂರು ನೂರೈವತ್ತರಷ್ಟು  ಪುಟಗಳನ್ನು ಬಿಡಬಹುದಾಗಿತ್ತು. . ಈ ಕಾದಂಬರಿಯ ಕಥಾಸಂವಿಧಾನದೊಳಗೆ  ಸಂಸ್ಕೃತದಿಂದಾಯ್ದ ಹಲವಾರು ಸೂಕ್ತಿಗಳು,ಸುಭಾಷಿತಗಳನ್ನು ಉದ್ಧರಿಸಿ ಅವುಗಳ ಕನ್ನಡ ಅನುವಾದಗಳನ್ನೂ ಕುಂ ವೀ ಅವರು ಬರೆದಿದ್ದಾರೆ. ಶಾಮಣ್ಣನ ತಾತ ಪರಮೇಶ್ವರಶಾಸ್ತ್ರಿಗಳು ಸಂಸ್ಕೃತದಲ್ಲಿ ಉದ್ಧಾಮ ಪಂಡಿತರಾಗಿದ್ದರು ಎಂಬ ಮಾತ್ರಕ್ಕೆ ಆ ಭಾಷೆಯ ಸೂಕ್ತಿ ಇತ್ಯಾದಿಗಳನ್ನು ಕಾದಂಬರಿಯಲ್ಲಿ ಸೇರಿಸುವ ಅಗತ್ಯವಿತ್ತೇ? ತೀರಾ ಅನಿವಾರ್ಯವಾಗಿದ್ದಾಗ  ಒಂದೆರೆಡನ್ನು ಮೂಲದೊಡನೆ  ಮತ್ತು ಓದುಗರಿಗೆ ಅರ್ಥವಾಗಲಿ ಎಂದು ಅದರ ಕನ್ನಡಾನುವಾದವನ್ನೂ ಸೇರಿಸಲಿ. ಆದರೆ ಪದೇ ಪದೇ ಪರಮೇಶ್ವರಶಾಸ್ತ್ರಿಗಳ ಸಂಸ್ಕೃತ ಭಾಷೆಯ ಮೇಲಿನ ಹಿಡಿತವನ್ನು, ಬಲವನ್ನು  ಕಾದಂಬರಿಯ ಓದುಗರ ಮೇಲೆ ಪ್ರಯೋಗಿಸುವ ಅವಶ್ಯಕತೆ ಇರಲಿಲ್ಲ. ಇದರಿಂದ ಓದುಗನಿಗೆ  ಪ್ರಯೋಜನವಿಲ್ಲ, ಅದರ ಬದಲು  ಕಾದಂಬರಿಯು ಈಗಿರುವ ಗಾತ್ರಕ್ಕೆ ಹಿಗ್ಗಿದೆ. ಕಾದಂಬರಿಗೆ ಹಿನ್ನುಡಿಯನ್ನು ಬರೆದಿರುವ ಒಬ್ಬರು ಹಿರಿಯ ಸಾಹಿತಿಗಳು  ‘…….. ಇಲ್ಲಿ ಬಳಕೆಯಾಗಿರುವ ಗಂಭೀರ, ಪ್ರೌಢ,ಅಲಂಕಾರಯುಕ್ತ ಭಾಷೆಗೆ ನಿರ್ಧಿಷ್ಟ ಉದ್ದೇಶವಿದೆ. ಇದು ಲೇಖಕರ ಪಾಂಡಿತ್ಯ ಪ್ರದರ್ಶನವಲ್ಲ  ……… ‘ ಎಂದಿದ್ದಾರೆ. ಕುಂ ವೀ ಅವರಿಗೆ ಅಂತಹ ಉದ್ದೇಶಗಳಿಲ್ಲವೆಂದು  ಅವರ ಅಭಿಮಾನಿ ಓದುಗರು ಅಂದುಕೊಳ್ಳಬಹುದು. ಸಮಸ್ಯೆ ಅದಲ್ಲ. . ಆದರೆ ಅಂತಹ ಪಾಂಡಿತ್ಯದ ಸಾಲುಗಳು ಕಾದಂಬರಿಯಲ್ಲಿ ಸೇರಿಕೊಂಡು ಓದುಗನ ತಾಳ್ಮೆಯ ಪರೀಕ್ಷೆಯನ್ನು ಪದೇ ಪದೇ ಮಾಡುವುದು ಸರಿಯೇ?
1 ಟಿಪ್ಪಣಿ Post a comment
  1. ಶ್ರೀರಂಗ ಯಲಹಂಕ
    ಆಕ್ಟೋ 16 2018

    ಈ ಲೇಖನದ ೨ನೇ ಭಾಗದಲ್ಲಿನ ಒಂದು ವಾಕ್ಯದಲ್ಲಿ ಟೈಪಿಂಗ್ ದೋಷವಾಗಿದೆ. ಅದನ್ನು ‘ಆದರೆ ಒಂದು ಕೃತಿಯನ್ನು ದುಡ್ಡು ಕೊಟ್ಟು ಕೊಂಡು ಓದುವ ಓದುಗರನ್ನು…’ ಎಂದು ಓದಿಕೊಳ್ಳಬೇಕಾಗಿ ವಿನಂತಿ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments