ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 18, 2018

ರೈತರ ಬಾಳನು ಹಸನಾಗಿಸಿದ ಹೈನುಗಾರಿಕೆ

‍ನಿಲುಮೆ ಮೂಲಕ

– ಸಂಜಯ.ಆರ್

• ಹೈನುಗಾರಿಕೆಯಿಂದಾಗಿ ಸ್ತ್ರೀ ಸಬಲೀಕರಣ
• ಸಾವಯವ ಹೈನುಗಾರಿಕೆಯಲ್ಲಿ ಕ್ಷೀರ ಕ್ರಾಂತಿ

1ಅಭಿವೃದ್ಧಿ ಹೊಂದುತ್ತಿರುವ ದೇಶದ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಭಾರತ, ಕೈಗಾರಿಕಾ ಕ್ರಾಂತಿ ಐ.ಟಿ ಹಾಗೂ ಪ್ರಾರಂಭಿಕ ಉದ್ದಿಮೆ (ಸ್ಟಾರ್ಟ್ ಅಪ್) ಗಳ ಮೂಲಕೇಂದ್ರ ಬಿಂದುವಾದರೂ ಕೃಷಿ ಮತ್ತು ಹೈನುಗಾರಿಕೆ ಇಂದಿಗೂ ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಂತಿದೆ. ರಾಷ್ಟ್ರದ ಶೇ ೪೦% ಅಧಿಕ ಜನಸಂಖ್ಯೆ ಇಂದಿಗೂ ಕೃಷಿ ಮತ್ತು ಕೃಷಿಯೇತರ ಉದ್ಯಮಗಳಾದ ಹೈನುಗಾರಿಕೆ ಮೇಲೆ ಅವಲಂಭಿತವಾಗಿದೆ. ಇಷ್ಟಾದರೂ ಕೃಷಿ ಅಧ್ಯಯನದ ಮೇಲೆ ಹೂಡಿಕೆ ಮಾಡುತ್ತಿರುವುದು ಶೇ ೦.೩೦% ರಷ್ಟು. ಇಂದು ಚೈನಾ (೦.೬೨%) ಅಮೇರಿಕಾ (೧.೨೦%) ಬ್ರೆಜಿಲ್ (೧.೮೨) ಹಾಗೂ ದಕ್ಷಿಣ ಆಫ್ರಿಕಾ (೩.೦೬) ಕ್ಕಿಂತ ಕಡಿಮೆಯಾಗಿದ್ದು, ರೈತರ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ.

ಇವುಗಳ ನಡುವೆ ನಾವು ನೋಡುತ್ತಿರುವ ಹಸಿರು ಕ್ರಾಂತಿ, ಸಾವಯವ ಕೃಷಿ ಹಾಗೂ ಉತ್ತಮ ಮಟ್ಟದ ಆಹಾರ ಸೇವನೆ ಜನ ಸಾಮಾನ್ಯರಲ್ಲಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಹೊಸ ಆಸಕ್ತಿ ಮೂಡಿಸಿ ಕೃಷಿ ಉದ್ಯಮಕ್ಕೆ ಹೊಸ ತಿರುವು ಕೊಟ್ಟಿದೆ. ಇವುಗಳ ಸಾಲಿನಲ್ಲಿ ರೈತರ ಪಾಲಿಗೆ ಅಮೃತವಾಗಿ ಇರುವುದು ಹೈನುಗಾರಿಕೆ. ರೈತರ ಬೆಳೆಗೆ ನ್ಯಾಯವಾದ ಬೆಂಬಲ ಬೆಲೆ ಇಲ್ಲದೇ ಇಂದಿಗೂ ಮಧ್ಯಸ್ತಿಕರಿಂದ ಸೋತಿರುವ ರೈತರಿಗೆ ಹೈನುಗಾರಿಕೆ ದಿಕ್ಸೂಚಿಯಾಗಿ, ಜೀವನೋಪಾಯಕ್ಕೆ ಪರಿಹಾರವಾಗಿ ನಿಂತಿದೆ. ಹೈನುಗಾರಿಕೆಯಲ್ಲಿ ಯಾವುದೂ ನಿರಪಯೋಗಿ ವಸ್ತುಗಳು ಇರುವುದಿಲ್ಲ.

ಐ. ಎಂ.ಆರ್.ಸಿ ಯ ಅಧ್ಯಯನದ ಪ್ರಕಾರ ಹಾಲು ಹಾಗೂ ಡೈರಿ ಉತ್ಪನ್ನಗಳ ಉದ್ಯಮ ೨೦೧೭ರಲ್ಲಿ ೭.೯ ಲಕ್ಷ ಕೋಟ ತಾಟಿತ್ತು. ೨೦೧೬ರಲ್ಲಿ ಇದು ೩ಲಕ್ಷ ಕೋಟಿ ಅಷ್ಟಿತ್ತು. ಇದು ೨೦೨೧ ರ ವೇಳೆಗೆ ೭.೩ ಲಕ್ಷ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಈ ವಿಶ್ಲೇಷಣೆಯ ಪ್ರಕಾರ, ಭಾರತದಲ್ಲಿ ಹೈನುಗಾರಿಕೆಯಲ್ಲಿ ಅವಕಾಶಗಳು ವಿಸ್ತೃತವಾಗಿದ್ದು, ಇದರಲ್ಲಿ ಜೀವನೋಪಾಯ ಕಂಡುಕೊಳ್ಳಲು ಕೌಶಲ್ಯಾಭಿವೃದ್ಧಿಯ ನೆರವಿನ ಅವಶ್ಯಕತೆ ಇದೆ.

ನಮ್ಮ ರಾಜ್ಯದಲ್ಲಿ ಅನೇಕ ಸಾಮಾಜಿಕ ಸಂಘ-ಸಂಸ್ಥೆಗಳು ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಪಾಲಿಗೆ ಕಾಮಧೇನುವಾಗಿ ನಿಂತಿದೆ. ಈ ಕ್ರಾಂತಿಗೆ ಪೂರಕವಾಗಿ “ಕೌಶಲ ಭಾರತ ಯೋಜನೆ” ಆಡಿಯಲ್ಲಿ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತಾ ತರಬೇತಿ ನೀಡುವ ಲೇಬರ್ ನೆಟ್ ನಂತಹ ಸಾಮಾಜಿಕ ಉದ್ಯಮಗಳು ಹಾಗೂ ರೈತರಲ್ಲಿ ಆರ್ಥಿಕ ಸ್ಥಿರತೆ ಹಾಗೂ ಉದ್ಯಮಶೀಲತೆ (ಸಾವಯವ ಡೈರಿ ಉತ್ಪನ್ನಗಳ ಮೂಲಕ) ಬೆಳೆಸುವ ಅಕ್ಷಯಕಲ್ಪದಂತಹ ಉಪಕ್ರಮಗಳು, ಹೈನುಗಾರಿಕಾ ಉದ್ಯಮದ ಚಿತ್ರಣವನ್ನೇ ಬದಲಿಸಿದ್ದು, ರೈತರ ಆರ್ಥಿಕ ವ್ಯವಸ್ಥೆಯನ್ನೂ ಬಲಗೊಳಿಸಿದೆ.

ಈ ಬದಲಾವಣೆಯ ಉದಾಹರಣೆಯಾಗಿ ನಿಂತಿರುವುದು ಗೌರಮ್ಮ.. ಕರ್ನಾಟಕದ ಮಂಡ್ಯ ಜಿಲ್ಲೆಯ ಗೌಡನ ದೊಡ್ಡಿ ಗ್ರಾಮದ ಒಂದು ದೊಡ್ಡ ಕೃಷಿ ಕುಟುಂಬಕ್ಕೆ ಸೇರಿದ ಗೌರಮ್ಮ, ಸಾಂಪ್ರದಾಯಿಕ ಕೃಷಿ ಪದ್ಧತಿಯ ಹೊರತಾಗಿ ಬೇರೆ ಉದ್ಯಮದ ಬಗ್ಗೆ ತಿಳಿದವರಲ್ಲ. ಸಾಂಪ್ರದಾಯಿಕ ಕೃಷಿ ಪದ್ಧತಿಗಳಲ್ಲಿ ಬಹು ಪರಿಣತರಾದ ಗೌರಮ್ಮ ಅವರು. ಕೃಷಿ ಕುಟುಂಬದಲ್ಲಿ ಮದುವೆಯಾದ ನಂತರ, ಅವರು ವಿವಿಧ ಕೃಷಿ-ಸಂಬಂಧಿತ ಕೆಲಸಗಳಲ್ಲಿ ಮನೆಯ ಗಂಡಸರಿಗೆ ಸಹಾಯ ಮಾಡುತ್ತಿದ್ದರು. ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಸಲುವಾಗಿ ಹವಾಮಾನದ ಅವಲಂಬಿತವಾಗಿಲ್ಲದ ಪರ್ಯಾಯ ಕೃಷಿ ಪದ್ಧತಿಗಳಿಗೆ ಮಾರ್ಪಾಡು ಮಾಡಿಕೊಳ್ಳಬೇಕಾಗಿತ್ತು. ಆ ಸಮಯದಲ್ಲಿ ಅವರಿಗೆ ಹೊಳೆದಿದ್ದೇ ಹೈನುಗಾರಿಕೆ. ಗೌರಮ್ಮ ಅವರಿಗೆ ಉತ್ತಮ ಜೀವನಕ್ಕಾಗಿ ಒಂದು ಹೈನುಗಾರಿಕೆ (ಡೈರಿ) ಕೃಷಿ ಲಾಭದಾಯಕ ಆಯ್ಕೆಯಾಗಿ ಕಾಣುತ್ತದೆ. ಆಗ ೨ ಉತ್ತಮ ತಳಿಯ ಎರಡು ಹಸುಗಳಿಂದ ಪ್ರಾರಂಭವಾಯಿತು. ಆದಾಗ್ಯೂ, ಆರಂಭಿಕ ದಿನಗಳಲ್ಲಿ, ಕೆಲ ರೈತರಿಂದ ಮತ್ತು ಇತರ ಸಾಂಪ್ರದಾಯಿಕ ಡೈರಿ ರೈತರ ಅವಲೋಕನದ ಮೂಲಕ ಕೃಷಿ ಅಭ್ಯಾಸದ ಬಗ್ಗೆ ಬಹಳ ಕಡಿಮೆ ವೈಜ್ಞಾನಿಕ ಜ್ಞಾನವನ್ನು ಹೊಂದಿದ್ದರು. ಇದು ಹಾಲಿನ ಇಳುವರಿ ಮತ್ತು ಗುಣಮಟ್ಟದಲ್ಲಿ ಕಡಿಮೆ ಆಯಿತು. ಮತ್ತು ಗೌರಮ್ಮ ಅವರಿಗೆ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ.

2ಆಗ ತನ್ನ ಗ್ರಾಮದಲ್ಲಿ ಲೇಬರ್ ನೆಟ್ (ಸಾಮಾಜಿಕ) ಸಂಸ್ಥೆಯಿಂದ ಪಿಎಂಕೆವಿವೈ ಆರ್ಪಿಎಲ್ ಯೋಜನೆ ಯಡಿಯಲ್ಲಿ ಡೈರಿ ಫಾರ್ಮ್ನಲ್ಲಿ ಪ್ರಮಾಣೀಕರಣ ಕಾರ್ಯಕ್ರಮವೊಂದನ್ನು ಗೌರಮ್ಮ ಕಲಿತರು. ಈ ಕಾರ್ಯಕ್ರಮವು ಹಾಲಿನ ಇಳುವರಿಯನ್ನು ಹೆಚ್ಚಿಸಲು ಮತ್ತು ಅದರ ಗುಣಮಟ್ಟವನ್ನು ಸುಧಾರಿಸಲು ಡೈರಿ ಫಾರ್ಮ್ ಆಧುನಿಕ ಉಪಕರಣಗಳು ಮತ್ತು ಆಹಾರ ತಂತ್ರಜ್ನಾನಗಳನ್ನು ಹೊಂದಿತ್ತು. ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಹಸುಗಳಲ್ಲಿ ಯಾವುದೇ ಕಾಯಿಲೆಗಳ ಲಕ್ಷಣಗಳನ್ನು ಪತ್ತೆಹಚ್ಚುವಲ್ಲಿ ಅವರಿಗೆ ತರಬೇತಿ ಮೂಲಕ ಅರಿವು ನೀಡಲಾಯಿತು. ಶೀಘ್ರದಲ್ಲೇ ಪ್ರಮಾಣೀಕರಣದ ತರಬೇತಿ ಪಡೆದ ನಂತರ ಅವರು ಕಲಿತ ಎಲ್ಲವನ್ನೂ ಅಭ್ಯಾಸ ಮಾಡಲು ಪ್ರಾರಂಭಿಸಿದರು ಮತ್ತು ನಂತರ ಬಂದ ಫಲಿತಾಂಶಗಳು ಆಕೆಗೆ ಆಶ್ಚರ್ಯವಾಯಿತು. ಸರಿಯಾದ ವಿಧಾನಗಳನ್ನು ಅನುಸರಿಸಿ ಹಾಲಿನ ಇಳುವರಿ ವಾಸ್ತವವಾಗಿ 2% ಹೆಚ್ಚಾಗಿತ್ತು. ಆಧುನಿಕ ಕೊಟ್ಟಿಗೆಯ ಶುಚಿತ್ವದಿಂದ ಹಸುಗಳಲ್ಲಿ ಉಂಟಾಗುವ ‘ಕೆಚ್ಚಲು ಬಾವು’ ನಂತಹ ಸೋಂಕಿನಿಂದ ದೂರ ಉಳಿಯಬಹುದೆಂದು ಅರಿತುಕೊಂಡರು. ಆಕೆಯು ತಕ್ಷಣದ ಬಂದ ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗೌರಮ್ಮ ಸ್ವತಃ ತರಬೇತಿ ನೀಡುವವರಾಗಿ ಸ್ವಯಂಸೇವಕರಾಗಿ ಮತ್ತು ತನ್ನ ಗ್ರಾಮದಲ್ಲಿ ಇತರರನ್ನು ಪ್ರೋತ್ಸಾಹಿಸಿದರು. ಗೌರಮ್ಮನ ಯಶಸ್ಸಿನ ಬಗ್ಗೆ ಕುತೂಹಲದಿಂದ, ಗ್ರಾಮಸ್ಥರು ಲೇಬರ್ ನೆಟ್ ನಿಂದ ಪಿಎಂಕೆವಿವೈ ಆರ್ಪಿಎಲ್ ಯೋಜನೆಯಡಿಯಲ್ಲಿ ಡೈರಿ ಫಾರ್ಮ್ನಲ್ಲಿ ಪ್ರಮಾಣೀಕರಣ ಪ್ರೋಗ್ರಾಂಗೆ ಸೇರಿಕೊಳ್ಳಲು ಪ್ರಾರಂಭಿಸಿದರು ಮತ್ತು ಯುವಜನತೆಯನ್ನು ಮತ್ತು ಹೊಸ ಉದ್ಯಮ ನಡೆಸುವವರನ್ನೂ ಈ ಹೈನುಗಾರಿಕೆ (ಡೈರಿ) ರೈತರನ್ನಾಗಿ ಮಾಡಿದರು.

ಆಧುನಿಕತೆ ಬೆಳೆದಂತೆ, ರೈತ ಕುಟುಂಬಗಳನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಸುವ ಉದ್ದೇಶದೊಂದಿಗೆ, ಹೈನುಗಾರಿಕೆಗೆ ಹೊಸ ರೂಪವನ್ನು ನೀಡುತ್ತಿರುವ ಸಂಸ್ಥೆ ಅಕ್ಷಯಕಲ್ಪ. ಇಂದು ಭಾರತೀಯ ರುಚಿ ಮತ್ತು ಕೃಷಿಯನ್ನು ಪುನರುಜ್ಜೀವನಗೊಳಿಸುವ ಅಕ್ಷಯಕಲ್ಪ ಸಂಸ್ಥೆಯದು ಅಮೃತ ಕರ್ನಾಟಕದ ಹೈನುಗಾರಿಕೆಯ ಪರಿಕಲ್ಪನೆಯಾಗಿದೆ. ಅಕ್ಷಯಕಲ್ಪ ಹೈನು ಉದ್ಯಮಶೀಲತೆಗೆ ಸ್ಪಷ್ಟತೆ ನೀಡುವುದರ ಜೊತೆಗೆ ಪಾರದರ್ಶಕ ಶುದ್ಧತೆ ಮತ್ತು ಶ್ರೇಷ್ಠತೆಯನ್ನು ಕಾಪಾಡುವುದೇ ಅಕ್ಷಯಕಲ್ಪದ ಗುರಿಯಾಗಿದೆ. ಕರ್ನಾಟಕದ ಹೈನುಗಾರಿಕೆಗೆ ಅಪೂರ್ವ ಕೊಡುಗೆ ನೀಡಿರುವ ‘ಬೈಫ್’ ಸಂಸ್ಥೆಯಲ್ಲಿ ಸುದೀರ್ಘ ಕಾಲ ದುಡಿದಿದ್ದ ಡಾ. ರೆಡ್ಡಿ ಅವರ ಪರಿಕಲ್ಪನೆಯೇ ಅಕ್ಷಯಕಲ್ಪ, ಗ್ರಾಮೀಣ ಪ್ರದೇಶದ ರೈತ ಕುಟುಂಬಗಳು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು. ನೇರವಾಗಿ ರೈತಾಪಿ ಮ೦ದಿಯ ಖಾತೆಗಳಿಗೆ ಹಣ ಸ೦ದಾಯ ಮಾಡುವುದು, ಪಾರದರ್ಶಕ ಕಾರ್ಯವೈಖರಿ ಈ ಸ೦ಸ್ಥೆಯ ವಿಶೇಷತೆ. ಅಕ್ಷಯಕಲ್ಪ ಸಂಸ್ಥೆಯ ಈ ಶಿಸ್ತಿನ ಕಾರ್ಯ ವೈಖರಿ ರೈತಾಪಿ ಮಂದಿಯ ಜೀವನ ಶೈಲಿಯನ್ನು ಬದಲಿಸಿದೆ, ಬ್ಯಾಂಕ್ ಗಳಿಂದ ಪಡೆದ ಹಣಕಾಸಿನ ನೆರವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸುವಲ್ಲಿ ಸಫಲರಾಗಿದ್ದಾರೆ. ಈ ಸಾಧನೆ ರೈತರನ್ನು ಸ್ವಾವಲ೦ಬಿಗಳನ್ನಾಗಿ ಮಾಡಿದೆ.

ಸಾವಯವ ಕೃಷಿ ಪದ್ಧತಿ ಅನುಸರಿಸುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಕೃಷಿ ಶ್ರೀಮಂತವಾಗಲು ಮಹಿಳೆಯ ಪಾತ್ರ ಮಹತ್ವದ್ದಾಗಿದೆ. ಕೇವಲ ಕೃಷಿಯನ್ನೇ ಅವಲಂಬಿತವಾಗಿದ್ದ ಶ್ರೀ ರಂಗೇಗೌಡರ ಕುಟುಂಬ ಸರಿಯಾದ ಬೆಂಬಲ ಬೆಲೆ ಇಲ್ಲದೆ ಹಾಗೂ ಅನಾವೃಷ್ಟಿಯಿಂದ ಕಂಗಾಲಾಗಿ, ಜೀವನೋಪಾಯಕ್ಕಾಗಿ ದಾರಿ ಕಾಣದೇ ಇದ್ದಾಗ, ಇವರ ನೆರವಿಗೆ ಬಂದದ್ದು ಇದೇ ಹೈನುಗಾರಿಕೆ, ರಂಗೇಗೌಡರಿಗೆ ಕಷ್ಟದ ಸಮಯದಲ್ಲಿ ಯಾವ ಬ್ಯಾಂಕುಗಳು ಸಹಾಯ ಮಾಡಲಿಲ್ಲ, ಸಾಲದ ಹೊರೆಯನ್ನು ಹೊತ್ತುಕೊಂಡು ಕಂಗಲಾಗಿದ್ದರು. ೨೦೧೫ ರಲ್ಲಿ ಅಕ್ಷಯಕಲ್ಪ ಇವರ ನೆರವಿಗೆ ಧಾವಿಸಿತು. ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಂಡಾಗ ಇವರ ನೆರವಿಗೆ ಬಂದ ಅಕ್ಷಯಕಲ್ಪ ಸಂಸ್ಥೆಯು ಇವರಿಗೆ ನೀಡಿದ ಹೈನುಗಾರಿಕೆ, ನಿರ್ವಹಣೆ, ತರಬೇತಿ ಹಾಗೂ ನೆರವನ್ನು ಇಂದಿಗೂ ಸ್ಮರಿಸುತ್ತಾರೆ. ಅಕ್ಷಯಕಲ್ಪ ನಿಯಮದಂತೆ ರಂಗೇಗೌಡರು ತಮ್ಮ ಕೃಷಿ ನಿರ್ವಹಣೆಯನ್ನು ಬದಲಾಯಿಸಿಕೊಂಡರು. ತಮಗೆ ಕೃಷಿಯಲ್ಲಿ ಬೆಂಬಲವಾಗಿದ್ದ ಇವರ ಹೆಂಡತಿ ಹೈನುಗಾರಿಕೆ ನೆರವಿಗೆ ಬಂದರು. ಇಂದು ರಂಗೇಗೌಡ ಕುಟುಂಬ ತಿಂಗಳಿಗೆ ಮೂರು ಲಕ್ಷದವರೆಗೂ ಸಂಪಾದಿಸಿ ಇತರರಿಗೆ ಮಾದರಿ ಕುಟುಂಬವಾಗಿ ಮಾರ್ಪಟ್ಟಿದೆ. ತಮ್ಮ ಈ ಯಶಸ್ಸಿಗೆ ತಮ್ಮ ಹೆಂಡತಿಯ ಸತತ ಶ್ರಮ ಇದೆ ಎನ್ನುತಾರೆ. ಇಂದು ಹೈನುಗಾರಿಕೆಯೇ ಇವರ ಜೀವನಾಧಾರ ಹಾಗೂ ತಮ್ಮ ಮಕ್ಕಳಿಗೂ ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೇ ಹೈನುಗಾರಿಕೆಯಿಂದ ಆಗುವ ಲಾಭದ ಬಗ್ಗೆ ಗ್ರಾಮದ ಪ್ರತಿಯೊಬ್ಬರಿಗೂ ಹೆಮ್ಮೆಯಿಂದ ತಿಳಿ ಹೇಳುತ್ತಾರೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ನಾನ ಬಹಳ ಉಪಯುಕ್ತವಾಗಿದೆ, ಇದರ ಬಳಕೆ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಇದೆ ಎನ್ನುತ್ತಾರೆ. ಅಕ್ಶಯಕಲ್ಪ ಹೈನುಗಾರಿಕೆಯಲ್ಲಿ ಹೆಚ್ಚು ಮಾನವ ಸಂಪನ್ಮೂಲವಲ್ಲದ ಎಲ್ಲಾ ಪ್ರಕ್ರಿಯೆಗಳು ವೇಗವಾಗಿ ಆಗುತ್ತದಲ್ಲದೇ ಎಲ್ಲವೂ ಗುಣಮಟ್ಟದಲ್ಲಿ ಪಾರದರ್ಶಕವಾಗಿರುತ್ತವೆ. ಹೈನುಗಾರಿಕೆಯಿಂದ ಪಡೆಯುವ ಸಾವಯವ ಗೊಬ್ಬರ ಕೃಷಿಗೆ ಉತ್ತಮ ಗುಣಮಟ್ಟದ್ದಾಗಿರುತ್ತವೆ, ಯಾವುದೇ ರಾಸಾಯನಿಕ ಅಗತ್ಯ ರೈತರಿಗೆ ಇರುವುದಿಲ್ಲ ಎನ್ನುತ್ತಾರೆ. ಹಾಗೂ ತಮ್ಮಂತೆ ಇತರೆ ರೈತರಿಗೆ ಹೈನುಗಾರಿಕೆ ಕಡೆಗೆ ಹೆಚ್ಚಿನ ಆಸಕ್ತಿ ಬಂದು, ನಮ್ಮ ಅಕ್ಷಯಕಲ್ಪ ಸಂಸ್ಥೆಯ ಲಾಭವನ್ನು ಹೆಚ್ಚು ಜನ ರೈತರು ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡುತ್ತಾರೆ ನಮ್ಮ ರಂಗೇಗೌಡರು. ಹವಾಮಾನ ವೈಪರೀತ್ಯದಿಂದಾಗಿ ರೈತರು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಹೈನುಗಾರಿಕೆಗೆ ಈ ಹವಮಾನ ವೈಪರಿತ್ಯದಿಂದ ಅಷ್ಟಾಗಿ ನಷ್ಟ ಆಗದು. ಆಧುನಿಕ ತ೦ತ್ರಜ್ಞಾನವನ್ನು ಬಳಸಿ ಗ್ರಾಮೀಣ ಭಾಗದ ಹಾಲು ಉತ್ಪಾದಕರಿಗೆ ಸಾವಯವ ಹಾಲು ಉತ್ಪಾದನೆಗೆ ಉತ್ತೇಜಿಸುತ್ತಿದ್ದು, ಉತ್ಪಾದಿಸಿದ ಸ೦ಪೂರ್ಣ ಹಾಲಿನ ಪ್ರಮಾಣವನ್ನು ಖರೀದಿ ಮಾಡಿ ಇತರೆ ಯೋಜನೆಗಳ ಮುಖೇನ ರೈತರನ್ನು ಆರ್ಥಿಕವಾಗಿ ಸಧೃಡವನ್ನಾಗಿ ಮಾಡುತ್ತಿರುವುದಲ್ಲದೇ ಗ್ರಾಮೀಣ ಯುವಕರ ವಲಸೆಯನ್ನು ತಡೆಯುವಲ್ಲಿ ಪ್ರಯತ್ನಿಸುತ್ತಿದೆ ಮತ್ತೂ ಇಂದು ಅಕ್ಷಯಕಲ್ಪ ೧೭೦ಕ್ಕೂ ಹೆಚ್ಚು ರೈತರೊಂದಿಗೆ ಕೈ ಜೋಡಿಸಿ, ಪ್ರತಿಯೊಬ್ಬ ರೈತ ತಿಂಗಳಿಗೆ ರೂ. ೫೦,೦೦೦ ಸಂಪಾದಿಸುವ ಸಾಮರ್ಥ್ಯವನ್ನು ತಂದುಕೊಟ್ಟಿದೆ.

ಇಂದು ಬಹುತೇಕ ಮಂಡ್ಯ ಜಿಲ್ಲೆಯ ಗೌಡನ ದೊಡ್ಡಿ ಗ್ರಾಮದ ಡೈರಿ ಫಾರ್ಮ್ ಲೇಬರ್ ನೆಟ್ ಸಂಸ್ಥೆಯಿಂದಾಗಿ ಮತ್ತು ತಿಪಟೂರಿನ ಸುತ್ತ ಮುತ್ತಲಿನ ರಂಗೇಗೌಡರಂತಹ ಹಲವಾರು ರೈತರು ಅಕ್ಷಯಕಲ್ಪದ ಮಾರ್ಗದರ್ಶದಲ್ಲಿ ಪರಿಣಾಮಕಾರಿ ತರಬೇತಿಯಿಂದ ತಮ್ಮ ಸಾಂಪ್ರದಾಯಿಕ ನಿರ್ವಹಣಾ ಶೈಲಿಯನ್ನು ಬದಲಿಸಿಕೊಂಡು ಸರಿಯಾದ ವಿಧಾನಗಳನ್ನು ಮತ್ತು ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಗೌರಮ್ಮ ಅವರು ತಮ್ಮಂತೆ, ಇತರ ಮಹಿಳೆಯರನ್ನು ತನ್ನಂತೆ ಹಾಲು ಕೃಷಿಗೆ ಪ್ರಾರಂಭಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಆರ್ಥಿಕವಾಗಿ ಸ್ವತಂತ್ರರಾಗಲು ಇತರ ಗ್ರಾಮದವರಿಗೂ ಮಾಹಿತಿ ಕೊಡುತ್ತಿದ್ದಾರೆ. ಅಕ್ಷಯಕಲ್ಪ ಆರೋಗ್ಯಕರ ವಿಶಿಷ್ಟ ಹಾಲನ್ನು ಖರೀದಿಸುವುದರ ಮೂಲಕ ತನ್ನ ವ್ಯಾಪಾರವನ್ನು ವಿಸ್ತರಿಸಲು ಮತ್ತು ಇತರ ರೈತರೊಂದಿಗೆ ಪಾಲುದಾರಿಕೆ ಮತ್ತು ಹಾಲಿನ ಜೊತೆಗೆ ಡೈರಿ ಉತ್ಪನ್ನಗಳನ್ನು ಮಾರುವ ಮೂಲಕ ಹೈನುಗಾರಿಕಾ ಕ್ರಾಂತಿಗೆ ಹೆಜ್ಜೆ ಇಟ್ಟಿದೆ.

ಈ ಹಿನ್ನೆಲೆಯಲ್ಲಿ ಗ್ರಾಮೀಣ ಮಹಿಳೆಯರು ಹೈನುಗಾರಿಕಾ ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸಧೃಡಗೊಳಿಸಬೇಕು. ಗ್ರಾಮೀಣ ಭಾಗದ ಮಹಿಳೆಯರು ಸ್ವ ಉದ್ಯೋಗ ಕೈಗೊಂಡು, ಅಕ್ಷಯಕಲ್ಪ ಮತ್ತು ಲೇಬರ್ ನೆಟ್ನಂತಹ ಸಂಸ್ಥೆಗಳ ಮುಖಾಂತರ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಮಹಿಳೆಯರು ತಮ್ಮ ಬದ್ಧತೆಯನ್ನು ಪರಿಪೂರ್ಣಗೊಳಿಸಿದಾಗ ಭಾರತ ಬಲಿಷ್ಟವಾಗುತ್ತದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments