ಈ ತುಲನೆ ನ್ಯಾಯವೇ!?
– ಶ್ರೀಧರ್ ಭಟ್
ಶಬರಿಮಲೆಯ ದೇಗುಲವನ್ನು ವಯಸ್ಸಿನ ಮಿತಿಯಲ್ಲದೇ ಯಾವ ಮಹಿಳೆಯೂ ಸಹ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದ ಬೆನ್ನಲ್ಲೇ ವ್ಯಕ್ತವಾದ ಹಲವಾರು ಪ್ರತಿಕ್ರಿಯೆಗಳು ನನ್ನ ಗಮನ ಸೆಳೆದಿದ್ದವು. ಹಿಂದುತ್ವದ ಪರವಾಗಿ ಅನೇಕ ಕೆಲಸಗಳನ್ನು ಮಾಡಿರುವ, ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿರುವ ಮತ್ತು ನಾನು ಗೌರವಿಸುವ ಕೆಲವು ವ್ಯಕ್ತಿಗಳ ಪ್ರತಿಕ್ರಿಯೆಗಳು ಮಾತ್ರ ಅವಾಸ್ತವಿಕ ಎಂದೆನಿಸಿದವು.
ಅವರ ಮಾತುಗಳು ಹೀಗಿದ್ದವು; ತ್ರಿವಳಿ ತಲಾಖ್ ಎಂಬ ಸಾಮಾಜಿಕ ಪಿಡುಗನ್ನು ನ್ಯಾಯಾಲಯವು ನಿಷೇಧಿಸಿದಾಗ ನಾವೆಲ್ಲರೂ ಹೇಗೆ ಸ್ವಾಗತಿಸಿದ್ದೆವೋ, ಹಾಗೆಯೇ ಶಬರಿಮಲೆಯ ಕುರಿತಾದ ಈ ತೀರ್ಪನ್ನೂ ಸ್ವಾಗತಿಸಿ, ಮಹಿಳೆಯರ ಸಬಲೀಕರಣವನ್ನೂ, ಸಮಾನತೆಯನ್ನೂ ಎತ್ತಿಹಿಡಿಯಬೇಕು.
ಈಗ ನನ್ನ ಪ್ರತಿಕ್ರಿಯೆ ಏನಿದ್ದರೂ, ಮೇಲಿನ ವಾದಕ್ಕೆ ಪ್ರತಿವಾದವಾಗಿ ಮಾತ್ರ. ಶಬರಿಮಲೆಯನ್ನು ಯಾವ ವಯಸ್ಸಿನ ಮಹಿಳೆ ಬೇಕಾದರೂ ಪ್ರವೇಶಿಸಬಹುದೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ನನ್ನ ಬಳಿ ಸ್ಪಷ್ಟವಾದ ಉತ್ತರವಿಲ್ಲ. ವಯಸ್ಸಿನ ಕಟ್ಟುಪಾಡುಗಳಿಗೆ ಒಳಪಡದೇ, ದೇಗುಲವನ್ನು ಪ್ರವೇಶಿಸುವ ಅವಕಾಶ ನನಗಿದ್ದರೂ, ಅಲ್ಲಿ ಹೋಗಬೇಕೆಂದು ನನಗೆ ಯಾವತ್ತೂ ಅನಿಸಿಲ್ಲ.
ಇಂದಿನ ದಿನಮಾನದ ಹೆಚ್ಚಿನ ಯುವತಿಯರು ಶಬರಿಮಲೆಗೆ ಹೋಗಬೇಕೆಂಬ ಕನಸನ್ನು ಹೊತ್ತು, ಕಟ್ಟುಪಾಡುಗಳ ನಡುವೆ ಸಿಲುಕಿ, ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗದೇ ಬೇಸರಗೊಂಡಿಲ್ಲ. ಅಷ್ಟಕ್ಕೂ, ದೇವಸ್ಥಾನಕ್ಕೆ ಹೋಗದೆಯೂ ಸಹ ಒಬ್ಬ ವ್ಯಕ್ತಿ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ನಮ್ಮಲ್ಲಿ, ಅಂದರೆ ಹಿಂದೂಗಳಲ್ಲಿ, ದೇವರನ್ನು ಒಲಿಸಿಕೊಳ್ಳಲು ದೇವಸ್ಥಾನ ಒಂದು ಆಯ್ಕೆ ಹೊರತು ಅನಿವಾರ್ಯತೆ ಅಲ್ಲ.
ಆದರೆ, ತ್ರಿವಳಿ ತಲಾಖ್ ವಿಚಾರ ಹಾಗಲ್ಲ. ಬುದ್ಧಿಜೀವಿಗಳು ಒಪ್ಪಲಿ ಅಥವಾ ಒಪ್ಪದಿರಲಿ, ಮುಸ್ಲಿಂ ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಕಡಿಮೆ ಎನ್ನುವುದು ಸತ್ಯ. ಗಂಡ ಎನಿಸಿಕೊಂಡಾತ ತಲಾಖ್ ಎಂದು ಏಕಾಏಕಿ ಕೈಬಿಟ್ಟರೆ, ಅವರ ನೆರವಿಗೆ ಬರುವುದು ಯಾರೋ? ಆ ದೇವರಿಗೂ ಗೊತ್ತಿರಲಿಕ್ಕಿಲ್ಲ. ಆದ್ದರಿಂದ ತ್ರಿವಳಿ ತಲಾಖ್ ಎಂಬ ಆಚರಣೆಯನ್ನು ನಿಷೇಧಿಸಿರುವುದಲ್ಲಿ ಏನೂ ತಪ್ಪಿಲ್ಲ.
ಒಟ್ಟಾರೆಯಾಗಿ ಹೇಳುವುದಿದ್ದರೆ, ಆಕ್ಷೇಪಕ್ಕೆ ಅವಕಾಶವೇ ಇಲ್ಲದಂತೆ ಆಕ್ಷೇಪಾರ್ಹ ಆಚರಣೆಯನ್ನು ನಿಲ್ಲಿಸುವುದು ಮತ್ತು ಇದೇ ಸರಿ ಎಂಬಂತೆ ನಿರ್ಧಾರವನ್ನು ತಳೆಯಲಾಗದ, ಇನ್ನಷ್ಟು ಜಿಜ್ಞಾಸೆಯ ಅಗತ್ಯವಿರುವ ಸಂಗತಿಯನ್ನು ತುಲನೆ ಮಾಡುವುದು ಅತಾರ್ಕಿಕ ಎಂದಷ್ಟೇ ನನ್ನ ನಿಲುವು.