ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 25, 2018

ಆಲಾಪ..

‍ನಿಲುಮೆ ಮೂಲಕ

– ಸುಜಿತ್ ಕುಮಾರ್

young-couple-breaking-up-girl-450w-239389240‘ಎಕ್ಸ್ ಕ್ಯೂಸ್ ಮೀ .. ನೀವು ರಿಸರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?’

‘ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ’ ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು.

‘ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು.. ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನಡೆದಳು.

ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. ‘ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚೆಲುವೆ ನಿಜವಾಗಿಯೂ ಇವಳೇನಾ ಅಂತಂದುಕೊಳ್ಳುತ್ತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ.

.

.

.

ಆ ಕಿಕ್ಕಿರಿದ ಜನಸ್ತೋಮದಲ್ಲೂ ಸಣ್ಣ ಭೂಕಂಪನವನ್ನೇ ಸೃಷ್ಟಿ ಮಾಡಿದ್ದವು ಮಾನಸನ ಆ ಡ್ರಮ್ ಬೀಟ್ಸ್ ಗಳು. ಮಿರಿಮಿರಿ ಮಿರುಗುವ ಕಪ್ಪಾದ ಲೆದರ್ ಜಾಕೆಟ್, ಮುಖವನ್ನು ಅರೆ ಮುಚ್ಚುವಷ್ಟು ದೊಡ್ಡದಾದ ತಲೆಯ ಕ್ಯಾಪು, ಕಪ್ಪಾದ ಝರಿಯಂತೆ ಕೆಳಗಿಳಿದು ಬೆನ್ನಿನವರೆಗೂ ಬೆಳೆದಿರುವ ಆ ನೀಳ ಕೂದಲು, ಕಣ್ಣಿಗೊಂದು ಘಾಡ ಕೆಂಪಿನ ಕನ್ನಡಕ, ಕಪ್ಪು ಜೀನ್ಸಿನ ಕೆಳಗೆ ಬೆಳ್ಳಗೆ ಹೊಳೆಯುವ ಶೂಗಳೊಟ್ಟಿಗೆ ಡ್ರಮ್ ಸ್ಟಿಕ್ ಗಳೆರಡನ್ನು ಹಿಡಿದು ಈತ ಬಡಿಯುತ್ತಾ ಹೋದರೆ ಅಲ್ಲಿ ಸೇರುವ ಸಮಸ್ತ ಜನಸ್ತೋಮ ಹುಚ್ಚೆದ್ದು ಕುಣಿಯತೊಡಗುತ್ತದೆ. ಅದು ಆತನ ಸಂಗೀತ ಜ್ಞಾನವೂ ಅಥವಾ ಸಂಗೀತವೇನೆಂದೇ ಅರಿಯದ ಜನಸ್ತೋಮದ ರಂಜನೆಯೋ ಅಥವಾ ತನ್ನ ದುಃಖ, ನೋವು, ಹತಾಶೆ ಹಾಗು ಅವಮಾನವನ್ನು ಹೊರಹಾಕುವ ಪ್ರಕ್ರಿಯೆಯೋ ಒಟ್ಟಿನಲ್ಲಿ ವಾರಕ್ಕೊಂದೆರಡು ಬಾರಿ ಹೀಗೆ ತಡರಾತ್ರಿಯವರೆಗೆ ಪಬ್ಬಿನಲ್ಲಿ ಡ್ರಮ್ಸ್ಗಳನ್ನು ಚಚ್ಚಿ ಕೆಡವುವಂತೆ ಭಾರಿಸಿ ಮನಸ್ಸಿನ ತನ್ನೆಲ್ಲ ಭಾರವನ್ನು ಕರಗಿಸಿಕೊಳ್ಳುತ್ತಿದ್ದ ಮಾನಸ್. ರಂಜನೆ ಹವ್ಯಾಸವಾಗಿ, ಹವ್ಯಾಸ ರೂಟಿನ್ ನಂತಾಗಿ ಈಗ ಅದು ಒಂತರ ಚಟವಾಗಿಬಿಟ್ಟಿದೆ ಎಂದರೆ ತಪ್ಪಾಗದು. ಒಂದು ಪಕ್ಷ ಆತ ಬಿಯರ್ ಹಾಗು ಸಿಗರೇಟನ್ನೂ ಬಿಟ್ಟರೂ ಹೀಗೆ ವಾರಕ್ಕೊಂದೆರಡು ಬಾರಿ ಡ್ರಮ್ ಗಳನ್ನು ಬಡಿಯದೇ ಇರುತ್ತಿರಲಾರ. ಇಲ್ಲವಾದರೆ ಏನನ್ನೋ ಕಳೆದುಕೊಂಡ ಶೂನ್ಯಭಾವ ಆತನ ಮನಸ್ಸನ್ನು ಆವರಿಸುತ್ತಿತ್ತು.

ಇಂದು ರಾತ್ರಿ ಹನ್ನೆರಡರ ಸುಮಾರಿಗೆ ಪುಬ್ಬಿನಿಂದ ಹೊರಬಂದ ಮಾನಸ್ ತನ್ನ ಕಾರಿನೊಳಗೆ ಕೂರುವ ಮುನ್ನ ಸಿಗರೇಟನ್ನು ಹೊತ್ತಿಸಲು ಲೈಟರ್ ಹೊರತೆಗೆದ. ಕೂಡಲೇ ರ್ರುಮ್ ರ್ರುಮ್ ಎಂದು ಸದ್ದು ಮಾಡುತ್ತಾ ಸೈಲೆಂಟ್ ಮೋಡಿನಲ್ಲಿದ್ದ ಆತನ ಮೊಬೈಲು ಅಲುಗಾಡತೊಡಗಿತು. ಟಪ್ ಟಪ್ ಎಂದು ಬಂದ ನಾಲ್ಕೈದು ಮೆಸೇಜ್ ಗಳನ್ನು ಆತ ಕಣ್ಣರಳಿಸಿ ನೋಡತೊಡಗಿದ. ಅದೆಂದೋ ಕಾಲೇಜಿನ ದಿನಗಳಲ್ಲಿ ತೆರೆದಿದ್ದ ಮ್ಯಾರೇಜ್ ಆಪ್ (!) ನಿಂದ ಯಾರೋ ಹುಡುಗಿ ಕಳುಹಿಸಿದ ಸಂದೇಶಗಳಾಗಿದ್ದವು. ಅಂತಹ ಅದೆಷ್ಟೋ ಮೆಸೇಜ್ ಗಳೂ ಬಂದಿದ್ದರೂ, ಅವುಗಳಿಗೆ ಗುಲಗಂಜಿಯಷ್ಟೂ ಗಮನವನ್ನು ನೀಡದ ಆತನಿಗೆ ಅದ್ಯಾಕೋ ಈಕೆ ಮನಸ್ಸಿಗೆ ತೀರಾ ಹಿಡಿಸಿದಳು. ಹುಡುಗಿ ನೋಡಲು ಹಾಲಿನ ಗೊಂಬೆಯಂತೆ ಸುಂದವಾಗಿದ್ದಾಳೆ. ಆ ಕಪ್ಪಾದ ಕಣ್ಣುಗಳು, ಕೆಂಪಾದ ತುಟಿ, ಘಾಡ ಕಪ್ಪು ಕೂದಲಿಗೆ ಹೊಂದುವಂತೆ ಹಚ್ಚೋತ್ತಿದಂತರಿರುವ ಆ ಹಣೆಯ ಹುಬ್ಬುಗಳು ಹಾಗು ಚೊಕ್ಕವಾದ ಒಂದು ಹಣೆಯ ಬೊಟ್ಟು ಆಕೆಯನ್ನು ಅಪ್ಸರೆಯ ಮಗಳೇನೋ ಎಂಬಂತೆ ಮಾಡಿದ್ದವು. ಪ್ರೀತಿ, ಪ್ರೇಮ, ಸಲುಗೆ, ಸಂಬಂಧ ಎಂದರೆ ಬೇಡವಾಗಿಬಿಟ್ಟಿದ್ದ ಮಾನಸನಿಗೆ ಅದೆಷ್ಟೇ ಪ್ರಯತ್ನಿಸಿದರೂ ಇಂದು ಆಕೆಗೆ ಪ್ರತಿಕ್ರಿಯಿಸದೆ ಇರಲಾಗಲಿಲ್ಲ.

***********************************************************************

ರೂಪ ಅತಿಸುಂದರಿಯಾಗದಿದ್ದರೂ ಗುಣವಂತೆ. ಆಕೆಯ ಸನ್ನಡತೆ ಬೇರೆಯ ಯಾವುದೇ ನ್ಯೂನ್ಯತೆಗಳನ್ನೂ ಬದಿಗಿರಿಸುವಂತಿತ್ತು. ಆ ಸಣ್ಣ ಕಂಠದ ಮಾತುಗಳು, ಮಾತಿಗಿಂತ ಆ ಮಾತಿನ ಭಾವವನ್ನರಿತು ಪ್ರತಿಕ್ರಿಯಿಸುವ ಆಕೆಯ ಪ್ರೌಢಿಮೆ, ನವಿರಾದ ಹಾಸ್ಯಪ್ರಜ್ಞೆ, ಸ್ನಾತಕೋತರ ಪದವಿಗಳಿದ್ದರೂ ಅಹಂ ಇಲ್ಲದ ಆಕೆಯ ಕ್ಯಾರೆಕ್ಟರ್, ವಿಶಾಲ ಮನೋಭಾವ, ಇವೆಲ್ಲವೂ ಆಕೆಯನ್ನು ಒಂದು ಆಕರ್ಷಣ ಕೇಂದ್ರವನ್ನಾಗಿ ಮಾಡಿದ್ದವು. ಆದ್ದರಿಂದಲೇ ಏನೋ ದಶಕಗಳ ಹಿಂದಿನ ಅಂಗನವಾಡಿಯ ಗೆಳೆಯರೂ ಆಕೆಯ ಸಂಪರ್ಕದಲ್ಲಿದ್ದಾರೆ. ವರ್ಷಕೊಮ್ಮೆ ಕನಿಷ್ಠವಾದರೂ ಒಮ್ಮೆಯಾದರೂ ಆಕೆಯನ್ನು ನೆನೆದು ಫೋನಾಯಿಸುತ್ತಾರೆ. ತುಸು ಕಪ್ಪು ಬಣ್ಣ, ಕೋಲುಮುಖ ಹಾಗು ಕಣ್ಣಿಗೆ ದಪ್ಪದಾದೊಂದು ಕನ್ನಡಕವನ್ನು ಧರಿಸುವ ಆಕೆಗೆ ‘ಸಹಜ’ವಾಗಿಯೇ ಯಾವುದೇ ಪ್ರೀತಿ, ಪ್ರೇಮ ಹಾಗು ಬಾಯ್ ಫ್ರೆಂಡ್ ಗಳೆಂಬ ನಂಟಿರಲಿಲ್ಲ. ರೂಪಳ ಪೋಷಕರಿಗೆ ಆಕೆ ಇಪ್ಪತೈದಾದಂತೆಯೇ ಮದುವೆಯ ಶಾಸ್ತ್ರವನ್ನು ಮಾಡಿ ಮುಗಿಸಬೇಕಂಬ ಚಿಂತೆ ಕಾಡತೊಡಗಿತ್ತು. ಕಳೆದ ಕೆಲ ವರ್ಷಗಳಿಂದ ಆಕೆಯನ್ನು ಕಾಡಿ-ಬೇಡಿ ಕೊನೆಗೆ ‘ನೀವ್ ಯಾರನ್ನು ಹೇಳಿದ್ರು ನಾನ್ ಮದುವೆ ಆಗ್ತೀನಿ. ಆದ್ರೆ ಒಂದೇ ಕಂಡೀಶನ್, ಆತನಿಗೆ ಕುಡಿಯುವ ಚಟ ಮಾತ್ರ ಇರಬಾರದು’ ಎಂದು ಆಕೆಯಿಂದ ಹೇಳಿಸಿಯೂ ಆಗಿದೆ.

ಪ್ರಸ್ತುತ ಕಾಲದಲ್ಲಿ ಇಂಟೆರ್ನೆಟ್ಟೇ ಎಲ್ಲ ಆಗಿರುವಾಗ ಇಂತಹ ಹುಡುಗನನ್ನು ಹುಡುಕಿಕೊಂಡು ಹೋಗುವುದು ಎಲ್ಲಿಗೆ. ರೂಪಾಳ ತಂದೆ ಉಪಾಯವೊಂದನ್ನು ಮಾಡಿ ಮ್ಯಾರೇಜ್ ಸೈಟಿನಲ್ಲಿ ತಮ್ಮ ಮಗಳ ಅಕೌಂಟ್ ಒಂದನ್ನು ತೆರೆದರು. ಅಲ್ಲಿ ಈಕೆಯ ಒಂದೇ ಕಂಡೀಶನ್ ಅನ್ನು ಸೇರಿಸಿ, ಒಂದೆರೆಡು ಫೋಟೋವನ್ನೂ ಅಪ್ಲೋಡ್ ಮಾಡಿದ್ದರು. ಇದಾದ ನಂತರ ಕೆಲದಿನಗಳ ಕಾಲ ತನ್ನ ಮಗಳಿಗೆ ಸರಿಹೊಂದುವ, ಅತಿ ಸುಂದರನೂ ಅಲ್ಲದ ಅತಿ ಕುರೂಪಿಯೂ ಎಂದೆನಿಸದ ಹುಡುಗನೊಬ್ಬನನ್ನು ಹುಡುಕತೊಡಗಿದರು. ಅದೆಷ್ಟೇ ಹುಡುಕಿದರೂ, ಅದೆಂತಹದ್ದೇ ಮೆಸೇಜ್ ಗಳನ್ನು ಹರಿಬಿಟ್ಟರೂ ಅತ್ತ ಕಡೆಯಿಂದ ಪ್ರತ್ಯುತ್ತರ ಮಾತ್ರ ಬರುತ್ತಿರಲಿಲ್ಲ. ಇಂತಹ ಗುಣವಂತ ಹುಡುಗಿಗೆ ಒಬ್ಬ ವರನೂ ಸಿಗಲಾರನೇ? ಬಣ್ಣ ಕೊಂಚ ಕಪ್ಪಾದ ಮಾತ್ರಕ್ಕೆ ಗುಣನಡತೆಗೆ ಬೆಲೆಯೇ ಇಲ್ಲವೇ? ಅಪ್ಪ ತಮ್ಮ ನೋವನ್ನು ಒಳಗೇ ಬಚ್ಚಿಟ್ಟು ರೋಧಿಸುತ್ತಿದ್ದರು. ರೂಪಾಳಿಗೆ ಅದರ ಬಗ್ಗೆ ಏನನ್ನು ಹೇಳುತ್ತಿರಲಿಲ್ಲ. ಒಂದು ಪಕ್ಷ ಹೇಳಿದ್ದರೂ ಆಕೆ ಇಂತಹ ಸಣ್ಣ ಪುಟ್ಟ ವಿಚಾರಗಳಿಗೆಲ್ಲ ಚಿಂತಿಸುತ್ತಿರಲಿಲ್ಲವೆಂಬುದು ಅವರಿಗೂ ತಿಳಿದಿತ್ತು. ಆದರೆ ತಂದೆಯ ಹೃದಯ, ಕೇಳಬೇಕಲ್ಲ. ತನ್ನ ಒಬ್ಬಳೇ ಮಗಳನ್ನು ಯಾರಾದರೂ ರಿಜೆಕ್ಟ್ ಮಾಡಿದರೆ ಅಥವಾ ಒಪ್ಪಿಕೊಳ್ಳದಿದ್ದರೆ ಅದು ಅವರ ಎದೆಗೇ ಭಲವಾದ ಗುದ್ದನ್ನು ನೀಡಿದಂತಾಗುತ್ತಿತ್ತು.

.

.

.

‘ಸರ್, ನೀವು ಮಾನಸ್ ಅಲ್ವ?’ ಎನ್ನುತ್ತಾ ತಾನು ಕೂತಿದ್ದ ಟೇಬಲ್ಲಿನ ಮುಂದೆ ಬಂದು ಕೂತರು, ಸುಮಾರು ಅರ್ವತ್ತು ವರ್ಷದ ಅವಳ ತಂದೆ. ತಪ್ಪು ಮಾಡಿರುವ ಅಮಾಯಕನ ನಗುವನ್ನು ಬೀರುತ್ತಾ ಕೂತ ಅವರನ್ನು ನೋಡಿ ‘ಅಂಕಲ್, ಪ್ಲೀಸ್. ನನ್ನನ್ನ ಮಾನಸ್ ಅಂತಾನೆ ಕರೀರಿ.’ ಎನ್ನುತ್ತಾ, ಅವರ ಮೇಲಿನ ಕೋಪ ಇನ್ನೂ ಆರಿರದಿದ್ದರೂ ಕುಡಿಯಲು ಏನಾದರು ಬೇಕೆಂದು ಕೇಳುತ್ತಾನೆ. ಏನೂ ಬೇಡೆಂದು ನಿರಾಕರಿಸಿದ ಅವರು ತುಸು ಮೊದಲು ಹೊರಟುಹೋದ ರೂಪಾಳ ಪರವಾಗಿ ಮಾನಸ್ನ ಕೈಗಳೆರಡನ್ನು ಬಿಗಿಯಾಗಿ ಹಿಡಿದುಕೊಂಡು ‘ನನ್ನನ್ನು ಕ್ಷಮಿಸಿ…’ ಎನುತ ಸಣ್ಣದಾಗಿ ಅಳತೊಡಗುತ್ತಾರೆ! ಅವರ ಕೈಗಳ ಕಂಪನ ಮಾನಸ್ ಅರಿವಿಗೆ ಸ್ಪಷ್ಟವಾಗಿ ಬರುತ್ತಿರುತ್ತದೆ. ಕೂಡಲೇ ಎದ್ದು ನಿಂತ ಮಾನಸ್ ಅವರನ್ನು ಸಮಾಧಾನಪಡಿಸುತ್ತಾ, ‘ಅಂಕಲ್, ಈಗ ಏನಾಯಿತು ಅಂತ ನೀವ್ ಅಳ್ತಾ ಇದ್ದೀರಾ? ನನ್ಗೆ ಏನೊಂದು ಇಲ್ಲಿ ಅರ್ಥ ಆಗ್ತಿಲ್ಲ. ಪ್ಲೀಸ್ ಅಳ್ಬೇಡಿ’ ಎನ್ನುತ್ತಾನೆ.

‘ಹುಟ್ಟಿ ಬೆಳೆಸಿದ ತಂದೆ ಕಾಣಪ್ಪಾ. ದೇವ್ರು ನನ್ನ್ ಮಗಳಿಗೆ ಎಲ್ಲವನ್ನೂ ಕೊಟ್ಟ, ಅಂದ ಅನ್ನೋ ಒಂದು ಕಳಶವನ್ನು ಬಿಟ್ಟು! ಆದರೆ ನನ್ನ ಮಗಳು ಯಾವುದೇ ರೀತಿಯಲ್ಲೂ ಅಸುಂದರೆಯಲ್ಲ. ಆಕೆಯ ಪ್ರತಿಯೊಂದು ಗುಣನಡತೆಯೂ ಅಪ್ಪಟ ಚಿನ್ನ ಕಾಣಪ್ಪಾ. ಆದರೆ ಈ ಸ್ವಾರ್ಥಿ ಜಗತ್ತಿಗೆ ಅದು ಅರಿವಿಗೆ ಬರುತ್ತಿಲ್ಲವಷ್ಟೇ’. ಮ್ಯಾರೇಜ್ ಸೈಟಿನಲ್ಲಿ ಅವಳ ಪರವಾಗಿ ನಾನೇ ಪ್ರೊಫೈಲ್ ಅನ್ನು ತೆರೆದಿದ್ದು ಎನ್ನುತ್ತಾರೆ. ಅದೆಷ್ಟೋ ದಿನಗಳ ನಂತರ ಆಕೆಯ ಪ್ರೊಫೈಲಿಗೆ ಯಾವುದೇ ಪ್ರತಿಕ್ರಿಯೆಯೂ ಬಾರದಿದ್ದಾಗ ಇವರು ಆಕೆಯ ಫೋಟೋಗಳನ್ನು ಎಡಿಟ್ ಮಾಡಿ ಕೃತಕ ಫಿಲ್ಟರ್ಗಳನ್ನು ಬಳಸಿ, ಒಬ್ಬ ವಿಭಿನ್ನ ಹುಡುಗಿಯೋ ಎಂಬುವಂತೆ ಕಾಣಿಸಿ ಬಂದ ಫೋಟೋವನ್ನು ಅಪ್ಲೋಡ್ ಮಾಡಿರುತ್ತಾರೆ. ಹಾಗು ತೀರಾ ಸಾಮನ್ಯವಾಗಿ ಕಾಣುತಿದ್ದ ಮಾನಸನ ಪ್ರೊಫೈಲ್ ಒಂದಕ್ಕೆ ಒಂದೆರಡು ಮೆಸೇಜ್ಗಳನ್ನು ಕಳಿಸಿ ಸುಮ್ಮನಾಗಿರುತ್ತಾರೆ.

‘ಆದರೆ ನೀವೂ ಕೂಡ ಆ ಫೋಟೋದಲ್ಲೇ ಒಂತರ ಇದ್ದೀರಾ, ಇಲ್ಲಿ ಬೇರೇನೇ ಕಾಣ್ತಿರಲ್ಲ’ ಎಂದ ಅವರ ಪ್ರಶ್ನೆಗೆ ಮಾನಸ್,

‘ಅಂಕಲ್, ಅದು ನನ್ನ ಕಾಲೇಜು ದಿನಗಳ ಫೋಟೋ. ಹುಡುಗಾಟಿಕೆಯೂ ಮತ್ತೊಂದೋ ಒಂದು ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿ ಅದ್ವಾನ ಮಾಡಿಕೊಂಡುಬಿಟ್ಟೆ. ಹಾಗೆಯೆ ಇದ್ದ ಆ ಪ್ರೊಫೈಲ್ ನಲ್ಲಿ ಆಗೊಮ್ಮೆ ಈಗೊಮ್ಮೆ ಮೆಸೇಜ್ಗಳು ಬರುತ್ತಿದ್ದರೂ ಏಕೋ ನಿಮ್ಮ ಮಗಳ ಪ್ರೊಫೈಲ್ ಇಷ್ಟವಾಯಿತು ‘ ಎಂದು ಸುಮ್ಮನಾಗುತ್ತಾನೆ.

ತನ್ನ ಮಗಳನ್ನು ಸುಂದರವಾಗಿ ಕಾಣಲು ಆಕೆಯ ಕನ್ನಡಕ ರಹಿತ ಫೋಟೋವೊಂದನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಿರುತ್ತಾರೆ ರೂಪಾಳ ತಂದೆ. ಆ ಫೋಟೋಗಳನ್ನು ನೋಡಿ ಅದೇನೋ ಒಂದು ಬಗೆಯ ಆಕರ್ಷಣೆ ಮಾನಸ್ನಿಗೆ ಅವಳ ಮೇಲೆ ಮೂಡಿರುತ್ತದೆ. ಅವರ ಮೆಸ್ಸೇಜಿಗೆ ಖುದ್ದು ಹುಡುಗಿಯೇ ಕೇಳಿಕೊಳ್ಳುತ್ತಿರುವಳು ಎಂದುಕೊಂಡು ತಿಳಿಸಿದ ಕೆಫೆ ಡೇ ಗೆ ಬಂದು, ಇಬ್ಬರಿಗೂ ಒಬ್ಬರನೊಬ್ಬರು ಗುರುತು ಹಿಡಿಯದಂತಾಗಿ ರೂಪ ಅಲ್ಲಿಂದ ಹೋದ ನಂತರ ಮಾನಸ್ ಅಲ್ಲೇ ಕೂತಿರುತ್ತಾನೆ.

ಅಷ್ಟರಲ್ಲಾಗಲೇ ರೂಪಾಳ ತಂದೆಯ ಕಣ್ಣೇರು ಒಣಗಿ ಕೆನ್ನೆಗಳ ಮೇಲೆ ತಮ್ಮ ಅಚ್ಚನ್ನು ಮೂಡಿಸಿದ್ದವು. ಮಾನಸ್ನಿಗೆ ಮುಂದೇನೂ ಹೇಳಲು ಪದಗಳೇ ತೋಚುವುದಿಲ್ಲ. ‘ಸರಿ ಬಿಡಪ್ಪ.. ಅವ್ರ್ ಅವ್ರ ಹಣೇಲಿ ಏನೇನ್ ಬರ್ದಿರುತ್ತೋ ಅದ್ ಹಾಗೆ ಆಗುತ್ತೆ. ಆಲ್ ದ ಬೆಸ್ಟ್ ಫಾರ್ ಯುವರ್ ಫ್ಯೂಚರ್’ ಎಂದು ಅವರು ಅಲ್ಲಿಂದ ಬೀಳ್ಗೊಂಡರು.

ಆ ದಿನದಿಂದ ಅದೇನೋ ಒಂದು ಬಗೆಯ ಹತಾಶೆ ಮಾನಸನನ್ನು ಆವರಿಸುತ್ತದೆ. ತನ್ನ ನೀಳ ಕೂದಲು, ಟ್ರಿಮ್ ಮಾಡದ ಗಡ್ಡ, ಬೀಯರ್ ಹಾಗು ಸಿಗರೇಟುಗಳಿಗೆ ಕಾರಣವಾಗಿದ್ದ ಕಹಿಘಟನೆಗಳು ಇನ್ನೂ ಮನಸ್ಸಿಂದ ಮಾಸುವ ಮುನ್ನವೇ ಮತ್ತೊಂದು ವಿಪರೀತವಾದಂತಹ ನೋವು ಅವರಿಸತೊಡಗುತ್ತದೆ. ಕಣ್ಣೇರಿರದೆ ಅಳುತ್ತಿದ್ದ ಆತನ ಕಣ್ಣುಗಳು ಇಂದು ತುಂಬಿ ಬಂದಿವೆ. ಹಳೆಯ ನೋವುಗಳಿಗೆ ಯಾರೋ ಬೆಂಕಿ ಗೀರಿ ಹಚ್ಚಿದಂತಾಗಿತ್ತು. ತಾನು ಹಾಗು ತನ್ನ ಜೀವನ ಎಂದುಕೊಂಡಿದ್ದವನಿಗೆ ಆ ಒಂದು ಕ್ಷಣಮಾತ್ರದ ಭೇಟಿ ಈ ಬಗೆಯ ನೋವನ್ನು ತರುತ್ತದೆ ಎಂದುಕೊಂಡಿರಲಿಲ್ಲ. ಚಲುವೆನ್ನೆ ನಾಚಿಸುವ ಅವಳ ನಡತೆ, ಅಸಹಾಯಕ ಅಪ್ಪ, ಅವರ ಕಣ್ಣೀರು.. ಪದೇ ಪದೇ ಆತನನ್ನು ಕಾಡತೊಡಗಿದವು.

ಭಾರಿಸುತ್ತಿದ್ದ ಡ್ರಮ್ ಗಳ ಸದ್ದು ಕೇಳುಗರಿಗೆ ನಡುಕವನ್ನುಂಟುಮಾಡುತ್ತಿರುತ್ತವೆ. ಬದಲಾವಣೆ ಬೇಕೆಂದು ಅವುಗಳು ಚೀರುತ್ತಿರುತ್ತವೆ.

ಹಳೆಯ ದಿನಗಳ ಮಾನಸ್ ಪುನಃ ಹುಟ್ಟತೊಡಗುತ್ತಾನೆ. ಜಗತ್ತನೇ ಗೆಲ್ಲುವ ಮಹತ್ವಕಾಂಕ್ಷೆಯ, ಸಂಗೀತ ಲೋಕದಲ್ಲಿ ದಿಗ್ಗಜನಾಗುವ ಆ ಎಳೆಯ ಪೋರ ಡ್ರಮ್ ಭೀಟ್ಸ್ಗಳ ಸದ್ದಿನಲ್ಲಿ ಕಾಣೆಯಾಗಿಹೋದದ್ದೇ ತಿಳಿದಿರುವುದಿಲ್ಲ. ಕೆಲದಿನಗಳಲ್ಲೇ ನೀಳ ಕೂದಲಿಗೆ, ಕುರುಚಲು ಗಡ್ಡಕ್ಕೆ ಕತ್ತರಿಯನ್ನು ಹಾಕಿ ತನ್ನ ನೆಚ್ಚಿನ ಸಿತಾರ್ ಅನ್ನು ಹೊರತೆಗೆದ. ವರ್ಷಗಳ ಧೂಳು ಹಿಡಿದು ಜಡಗಟ್ಟಿ ಹೋದರೂ ಅದರ ತಂತಿಗಳನ್ನು ಮೀಟಿದಾಗ ಮೂಡುತ್ತಿದ್ದ ಸ್ವರಗಳು ಅದೇ ಆನಂದಭಾಷ್ಪವನ್ನು ಆತನಲ್ಲಿ ಮೂಡಿಸುತ್ತಿದ್ದವು. ಸಂಗೀತದ ತಾಲೀಮು ಮಗದೊಮ್ಮೆ ಆರಂಭವಾಯಿತು. ದಿನ ಬೆಳಗ್ಗೆ ಹಾಗು ಸಂಜೆ ಸರಸ್ವತಿ ಪಠಕ್ಕೆ ಪೂಜಿಸಿ ಸೀತಾರನ್ನು ನುಡಿಸತೊಡಗಿದ. ಮಂದಹಾಸ ಆತನ ಮುಖದಲ್ಲಿ ಮನೆಮಾಡಿತು. ಆ ಮಂದಹಾಸದ ಹಿಂದಿದ್ದ ಚಹರೆಯೇ ಕೆಲತಿಂಗಳ ಹಿಂದೆ ಕ್ಷಣಮಾತ್ರಕ್ಕೆ ಸಿಕ್ಕಿ ಮರೆಯಾದ ರೂಪ. ಮೇಲು-ಕೀಳು, ಭೇದಭಾವ, ಅಂದ-ಚಂದಳಿಗೆ ಒಂದಿಷ್ಟು ಜಾಗವಿರದ ಆಕೆಯ ಚಹರೆ ಮಾನಸನಿಗೆ ಕೆಲವೇ ಕ್ಷಣಗಳಾದರೂ ಜೀವನಕ್ಕಾಗುವಷ್ಟು ಕಲಿಕೆಯನ್ನು ಕಳಿಸಿದವು. ಆ ಗುಂಗಿನಲ್ಲೇ ಆತ ಮುಂದುವರೆದ.

ಅಂದಿನಿಂದ ಅದೆಷ್ಟೋ ಬಾರಿ ರೂಪಾಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲೇ ಇಲ್ಲ. ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲೂ ಆಕೆಯ ಸುಳಿವು ಸಿಗಲಿಲ್ಲ. ಅಪ್ಪ ಮಗಳ ನಂಬರುಗಳೆರಡೂ ಸ್ವಿಚ್ ಆಫ್ ಬರುತ್ತಿದ್ದವು. ಆದರೆ ಆತನ ಅರಸುವಿಕೆ ಮಾತ್ರ ನಿಲ್ಲಲಿಲ್ಲ. ಇತ್ತೀಚಿಗೆ ಸಂಗೀತ ಕಚೇರಿಗಳನ್ನು ನಡೆಸಿಕೊಡಲು ಆತನಿಗೆ ಆಮಂತ್ರಣಗಳು ಬರತೊಡಗಿದವು. ಹೋದೆಡೆಯಲ್ಲ ಜನಸ್ತೋಮದಲ್ಲಿ ಆಕೆಯ ಚಹರೆಯನ್ನೇ ಆತ ಹುಡುಕುತ್ತಾನೆ. ಮೇಕಪ್ಪು ಬಳಿದು ಪಳಪಳ ಹೊಳೆಯುವ ಮುಖಗಳ ನಡುವೆ ಆ ಮುಗ್ದ ಮಧುರ ಚಹರೆ ಅದೆಷ್ಟೇ ಹುಡುಕಿದರೂ ಕಾಣುವುದಿಲ್ಲ. ಇತ್ತ ಕಡೆ ರೂಪಾಳೂ ಅಂದಿನಿಂದ ತನಗೆ ಹುಡುಗರನ್ನು ಹುಡುಕುವುದು ಬಿಡಬೇಕೆಂದೂ, ತಾನು ಇನ್ನೂ ಹೆಚ್ಚಿನ ಓದನ್ನು ಮಾಡುತ್ತಿರುವೆನೆಂದು ಅಪ್ಪನಿಗೆ ತಿಳಿಸುತ್ತಾಳೆ. ಮೊದಲ ಬಾರಿಗೆ ಹುಡುಗನೊಬ್ಬ ಇಷ್ಟವಾಗಿ ಸಿಗಲು ಹೋದರೆ ಆತ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಬಾರಲೇ ಇಲ್ಲವೆಂದು ಕುಪಿಸಿಕೊಂಡು ಹುಡುಗರ ಮೇಲೆಯೇ ಒಂದು ಬಗೆಯ ಆಲಸ್ಯ ಅವಳಲ್ಲಿ ಮೂಡಿರುತ್ತದೆ. ಎಲ್ಲೆಂದರಲ್ಲಿ ಹರಿಬಿಟ್ಟಿದ್ದ ತನ್ನ ಹಾಗು ಅಪ್ಪನ ನಂಬರುಗಳೆರಡನ್ನೂ ಆಕೆ ಬದಲಿಸುತ್ತಾಳೆ.

ಅಂದು ತನ್ನ ಕಾಲೇಜಿನ ವಾರ್ಷಿಕೋತ್ಸವಕ್ಕೆ ಹಿಂದೂಸ್ತಾನಿ ಸಂಗೀತ ಕಚೇರಿಯನ್ನು ನಡೆಸುತ್ತಾರೆ ಎಂದು ತಿಳಿದು ರೂಪ ಎಲ್ಲರಿಗಿಂತ ಮೊದಲೇ ಆಡಿಟೋರಿಯಂನಲ್ಲಿ ಆಸೀನಳಾಗುತ್ತಾರೆ. ಸಂಗೀತದ ವ್ಯಾಕರಣ ಆಕೆಗೆ ಬಲ್ಲದು, ಆದರೆ ಸಂಗೀತವೆಂಬುದು ಭಾವಪದಗಳ ಸುಂದರ ಭಾಷೆ ಎಂಬುದು ಆಕೆಯ ಅಭಿಮತ. ಸಂಜೆ ಸರಿಯಾಗಿ ಏಳಕ್ಕೆ ಶುರುವಾದ ಸಂಗೀತ ಕಚೇರಿಗೆ ಹೇಳಿಕೊಳ್ಳುವ ಮಟ್ಟಿನ ಪ್ರೇಕ್ಷಕರೇನೂ ಸೇರಿರಲಿಲ್ಲ. ಕೊಳಲು ಹಾಗು ತಬಲದ ಜುಗಲ್ಬಂಧಿಯ ನಂತರ ಸೀತಾರ್ ವಾದಕ ಶ್ರೀಯುತ ಮಾನಸ್ ಎಂದು ಸಂಭೋದಿಸುತ್ತಾ ಆಹ್ವಾನಿಸಿದ ನಿರೂಪಕಿಯ ಮಾತನ್ನು ಕೇಳಿ ರೂಪಾಳ ಎದೆ ಒಮ್ಮೆಲೇ ಜಲ್ ಎನಿಸುತ್ತದೆ. ಮಾನಸ್ ಸ್ಟೇಜಿನ ಮೇಲೆ ಬಂದು ನೆರೆದವರಿಗೆಲ್ಲ ವಂದಿಸಿ ತನ್ನ ಸೀತಾರನ್ನು ನುಡಿಸತೊಡಗಿದಾಗ ಗುಸುಗುಸುಗುಡುತ್ತಿದ್ದ ಜನಸ್ತೋಮ ಕಲ್ಲಿನಂತೆ ಸ್ತಬ್ದವಾಗಿಬಿಡುತ್ತದೆ. ಆ ರಾಗಗಳ ಆಳೇತ್ತರ ಎಂಥವರನ್ನೂ ಸಂಗೀತದ ಸುಧೆಯಲ್ಲಿ ತೇಲಾಡಿಸಿಬಿಡುವಂತಿತ್ತು. ಈತ ಇಷ್ಟು ಮಹಾನ್ ಕಲಾವಿದನಾಗಿರುವುದಕ್ಕೆ ಅಂದು ನನ್ನಂತ ಸಾಧಾರಣ ಹುಡುಗಿಯನ್ನು ಆತ ಭೇಟಿಯಾಗಲು ನಿರಾಕರಿಸಿದ್ದು. ಅವನೆಲ್ಲಿ, ನಾನೆಲ್ಲಿ?! ಆತ ಅಂದು ನನನ್ನು ಭೇಟಿಯಾಗದಿದ್ದದ್ದೇ ಒಳ್ಳೆಯದಾಯಿತು ಎಂಬ ಕೀಳರಿಮೆ ಆತನ ಸಂಗೀತವನ್ನು ಕೇಳಿ ರೂಪಾಳಲ್ಲಿ ಮೂಡುತ್ತದೆ. ಆ ಅದ್ಭುತ ಸಂಗೀತಕ್ಕೆ ಅಲ್ಲಿ ಮನಸೋತ ಪ್ರೇಕ್ಷಕರಿರಲಿಲ್ಲ. ಸಂಗೀತ ಬಲ್ಲವರು, ಬಾರದವರು ಎಲ್ಲರು ಗಮನವಿಟ್ಟು ಸಂಗೀತವನ್ನು ಕೇಳುತ್ತಿರಬೇಕಾದರೆ ರೂಪ ಮಾತ್ರ ಎದ್ದು ಸ್ಟೇಜಿನ ಮುಂದೆಯೇ ಹಾದು ಹೊರನಡೆಯುತ್ತಾಳೆ.

ಕಳೆದ ಒಂದು ವರ್ಷದಿಂದ ಹೊದೆಡೆಯಲ್ಲ ಹುಡುಕುತ್ತಿದ್ದ ಆ ಒಂದು ಚಹರೆ ಸಿಗದೆ ಮಾನಸನ ಮನಸ್ಸು ದುಃಖ ತುಂಬಿದ ಕಟ್ಟೆಯಂತಾಗಿದ್ದಿತು. ಅದೇನೋ ಈ ಬಾರಿ ಆತನಿಗೆ ತಡೆಯಲಾಗಲಿಲ್ಲ. ಸಂಗೀತದ ಸಾಗರದಲ್ಲಿ ಮುಳುಗಿದ್ದ ಆತನ ಕಣ್ಣುಗಳಿಂದ ಗಳಗಳನೆ ಅಶ್ರುಧಾರೆಗಳು ಮೂಡತೊಡಗಿದವು. ಆದರೆ ಸ್ವರಾಲಾಪನೆ ಮಾತ್ರ ಎಲ್ಲಿಯೂ ತಪ್ಪಲಿಲ್ಲ. ಅತ್ತು ಮಂಜುಗಟ್ಟಿದ್ದ ಕಣ್ಣುಗಳಿಗೆ ತನ್ನ ಎದುರಿಗೆ ಹಾದುಹೊದ ‘ಆ’ ಚಹರೆ ಕಾಣದಾಯಿತು. ಸಂಗೀತದ ರೋಧನೆ ಮುಗಿಲುಮುಟ್ಟಿತು…..

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments