ಇಸ್ಲಾಮ್ ವಿಮರ್ಶೆ ಮಾಡಬಾರದಮ್ಮ,ಹಿಂದೂಗಳನ್ನು ಟೀಕಿಸುವುದು ಕರ್ಮ: ಮೈತ್ರಿ ಸರ್ಕಾರದ್ದು ಧೃತರಾಷ್ಟ್ರ ಪ್ರೇಮ!
– ಶ್ರೀನಿವಾಸ್ ರಾವ್
ಘಟನೆ-1
ಬ್ರಿಟೀಶ್ ವಿರುದ್ಧದ ಹೋರಾಟದಲ್ಲಿ ಕೆಂಪೇಗೌಡರ ಪಾತ್ರವೇನು? ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಮರುನಾಮಕರಣ ಮಾಡಬೇಕು – ಗಿರೀಶ್ ಕಾರ್ನಾಡ್
ಗಿರೀಶ್ ಕಾರ್ನಾಡ್ ಗೆ ಇತಿಹಾಸ ಗೊತ್ತಿಲ್ಲ, ಸರ್ಕಾರಿ ಪ್ರಾಯೋಜಿತ ಸಾಹಿತಿ- ಹೆಚ್ ಡಿ ಕುಮಾರಸ್ವಾಮಿ
2015 ರ ಟಿಪ್ಪು ಜಯಂತಿ ಕಾರ್ಯಕ್ರಮ, ರಕ್ತಪಾತವಾದರೂ ಸರಿಯೇ ಟಿಪ್ಪು ಜಯಂತಿಯನ್ನು ನಡೆಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ದ ಸಿದ್ದರಾಮಯ್ಯ ಸರ್ಕಾರ, ಟಿಪ್ಪು ಸುಲ್ತಾನನನ್ನು ಬಣ್ಣಿಸಲು “ಟಿಪ್ಪುವಿನ ಕನಸುಗಳು”ನ್ನು ಕಟ್ಟಿಕೊಟ್ಟಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ಆಹ್ವಾನಿಸಿತ್ತು. ತಮ್ಮ ಧಣಿಯ ಎದುರು ಅವರ ಕುಲದೈವವನ್ನು ಹೊಗಳಲು ನಿಂತ ಸರ್ಕಾರಿ ಪ್ರಾಯೋಜಿತ ಸಾಹಿತಿ ಗಿರೀಶ್ ಕಾರ್ನಾಡ್ ಮಾತಿನ ಓಘದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರೇಕೆಬೇಕು? ಟಿಪ್ಪು ಹೆಸರಿಡಬೇಕು, ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದ, ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಕೆಂಪೇಗೌಡರ ಪಾತ್ರ ಇರಲಿಲ್ಲ ಎಂದುಬಿಟ್ಟಿದ್ದರು.
ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಕೆಂಪೇಗೌಡರ ಪಾತ್ರ ಏನು? ಮಹಾಭಾರತದ ಯುದ್ಧದಲ್ಲಿ ಅರ್ಜುನ ಕೌರವರ ವಿರುದ್ಧ ಏಕೆ ಬ್ಯಾಲಿಸ್ಟಿಕ್ ಮಿಸೈಲ್ ಪ್ರಯೋಗ ಮಾಡಲಿಲ್ಲ? ದನ್ಯಾಂಗ್-ಕುನ್ಶಾನ್ ಗ್ರ್ಯಾಂಡ್ ಬ್ರಿಡ್ಜ್ ನಿರ್ಮಾಣಕ್ಕೆ ಶ್ರೀರಾಮನ ಕೊಡುಗೆ ಏನು
ಎಂಬಂಥಹ ಸೆನ್ಸಿಬಲ್ ಪ್ರಶ್ನೆಗಳು ಸೆಕ್ಯುಲರ್ ಸರ್ಕಾರಿ ಪ್ರಾಯೋಜಿತ ಬುದ್ಧಿಜೀವಿಗಳಿಗಷ್ಟೇ ಹೊಳೆಯುವುದಕ್ಕೆ ಸಾಧ್ಯ. ಇರಲಿ…
ಈಗ ಗಿರೀಶ್ ಕಾರ್ನಾಡ್ ಅವರ ಹೇಳಿಕೆಗೆ ಮರಳೋಣ. “ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದ, ಟಿಪ್ಪು ಹಿಂದೂವಾಗಿದ್ದರೆ ಆತನಿಗೆ ಶಿವಾಜಿ ಮಹಾರಾಜನಷ್ಟೇ ಗೌರವ ಸಲ್ಲುತ್ತಿತ್ತು,ಟಿಪ್ಪು ಕೆಂಪೇಗೌಡರಿಗಿಂತಲೂ ಶ್ರೇಷ್ಠ” ಎಂದಿದ್ದ ಕಾರ್ನಾಡರನ್ನು ಇಂದಿನ ಸಿಎಂ, ಅಂದಿನ ವಿಪಕ್ಷ ನಾಯಕ ಹೆಚ್ ಡಿ ಕುಮಾರಸ್ವಾಮಿ ಸರ್ಕಾರಿ ಪ್ರಾಯೋಜಿತ ಸಾಹಿತಿ ಇತಿಹಾಸದ ಪರಿಜ್ಞಾನವಿಲ್ಲ ಎಂದೆಲ್ಲಾ ಟೀಕಿಸಿದ್ದರು. ಕಾರ್ನಾಡರು ಕ್ಷಮೆ ಕೇಳಿದ ಹೊರತಾಗಿಯೂ ಸಹ ಕೆಂಪೇಗೌಡರ ಗೌರವಾದರಗಳಿಗೆ ಧಕ್ಕೆ ಉಂಟುಮಾಡಿದ್ದ ಕಾರ್ನಾಡರನ್ನು ತರಾಟೆಗೆ ತೆಗೆದುಕೊಳ್ಳದೇ ಬಿಟ್ಟಿರಲಿಲ್ಲ ಕುಮಾರಸ್ವಾಮಿ. ಆದರೆ ಇಂದು ಅದೇ ಕುಮಾರಸ್ವಾಮಿ ಅಧಿಕಾರಾಕ್ಕಾಗಿ ಕಾಂಗ್ರೆಸ್ ಜೊತೆ ಸೇರಿ, ಟಿಪ್ಪುವಿನ ವಿಮರ್ಶೆಗೆ ನಿಂತ ಕೊಡವರನ್ನು ಧರ್ಮ ನಿಂದನೆಯ ಆರೋಪದಡಿ ಜೈಲಿಗೆ ಕಳಿಸಿ ಟಿಪ್ಪು ಜಯಂತಿಯನ್ನು ಆಚರಿಸುವಷ್ಟು ದೈನೇಸಿ ಪರಿಸ್ಥಿತಿ ತಲುಪಿದ್ದಾರೆ!.
ಕೆಂಪೇಗೌಡರಿಗಿಂತ ಟಿಪ್ಪು ಶ್ರೇಷ್ಠ ಎಂದು ಹೇಳಿದ ಮಾತ್ರಕ್ಕೇ ಕುಮಾರಸ್ವಾಮಿಗಳ ಸಂವೇದನೆ ಜಾಗೃತವಾಗುವುದಾದರೆ, ಇನ್ನು ತಮ್ಮವರನ್ನು ತರಿದು, ಮತಾಂತರ ಮಾಡಿದ್ದ ಕೊಡವರನ್ನು ಲೆಕ್ಕಿಸದೇ ಟಿಪ್ಪು ಜಯಂತಿಯನ್ನು ಮಾಡಿದ್ದಾರಲ್ಲಾ, ಸಂವೇದನೆ, ಸ್ವಧರ್ಮ ಅಭಿಮಾನವೆಲ್ಲಾ ಅನ್ವಯಿಸುವುದು ನಿಮಗೊಬ್ಬರಿಗೇನಾ? ಕೊಡವರ ಭಾವನೆಗಳಿಗೆ ನಿಮ್ಮ ಸರ್ಕಾರದಲ್ಲಿ ಬೆಲೆಯೇ ಇಲ್ಲವಾ ಮುಖ್ಯಮಂತ್ರಿಗಳೇ? ಅಥವಾ ಅಂದಿನ ನಿಮ್ಮ ಸಂವೇದನೆ, ಆಕ್ರೋಶಗಳು ಬೂಟಾಟಿಕೆಯದ್ದಾ? ಯಾವಾಗಲೋ ಆಗಿ ಹೋದ ಕೆಂಪೇಗೌಡರ ಹೆಸರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಮರುನಾಮಕರಣ ಮಾಡಬೇಕು ಎಂದತಕ್ಷಣವೇ ನೀವು ದಿಢೀರನೆ ಎದ್ದು ಕುಳಿತು ನಖಶಿಖಾಂತ ಉರ್ಕೊಂಡಿದ್ದು ಪ್ರತಿಭಟಿಸಿದ್ದು ಸರಿ ಎನ್ನುವುದಾದರೆ,ತಮ್ಮ ಸಂಸ್ಕೃತಿಯನ್ನು ನಾಮಾವಶೇಷ, ಮತಾಂತರ ಮಾಡಿ ಭೂಭಾಗಗಳನ್ನು ಮರು ನಾಮಕರಣ ಮಾಡಲು ಹವಣಿಸಿದ್ದ ಟಿಪ್ಪು ಹಾಗೂ ಆತನ ಜಯಂತಿಯನ್ನು ಕೊಡವರು ವಿರೋಧಿಸುವುದರಲ್ಲಿ ತಪ್ಪೇನು?
ನಿಮ್ಮ ಬೂಟಾಟಿಕೆ, ಯು-ಟರ್ನ್ ಗಳು ರಾಜ್ಯದ ಜನತೆಗೇನು ಹೊಸದೇನಲ್ಲ ಬಿಡಿ, ನೀವೇನೋ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಕ್ಕಾಗಿ, ಸ್ವಾಭಿಮಾನವನ್ನು ಅಡ(ಒತ್ತೆ) ಇಟ್ಟು ಟಿಪ್ಪು ಜಯಂತಿಯನ್ನು ಸಹಿಸಿಕೊಳ್ಳಬಹುದು. ಈಗಿನ ಪರಿಸ್ಥಿತಿಯಲ್ಲಿ ನೀವೇ ಒಂದೊಮ್ಮೆ ಟಿಪ್ಪು ಕೆಂಪೇಗೌಡರಿಗಿಂತ ಶ್ರೇಷ್ಠ ಎಂದುಬಿಟ್ಟರೂ ಆಶ್ಚರ್ಯವೇನು ಇಲ್ಲ. ಆದರೆ ಕದನ ಕಲಿಗಳಾದ ಕೊಡವರೇಕೆ ತಮ್ಮ ಸ್ವಾಭಿಮಾನವನ್ನು ಒತ್ತೆ ಇಡಬೇಕು? ಯಾವ ಪುರುಷಾರ್ಥಕ್ಕಾಗಿ ಟಿಪ್ಪು-ಆತನ ಜಯಂತಿಯನ್ನು ಸಹಿಸಿಕೊಳ್ಳಬೇಕು ಹೇಳಿ? ಟಿಪ್ಪು ಜಯಂತಿ ವಿರುದ್ಧ ಮಾತನಾಡಿದರೆ ಹುಷಾರ್, ಇಷ್ಟ ಇಲ್ಲ ಅಂದ್ರೆ ಕಾರ್ಯಕ್ರಮಕ್ಕೆ
ಬರ್ಬೇಡಿ ಮನೆಯಲ್ಲಿರಿ ಎನ್ನುತ್ತೀರಲ್ಲಾ…ಗಿರೀಶ್ ಕಾರ್ನಾಡರು ವಿಮಾನ ನಿಲ್ದಾಣಕ್ಕೆ ಮರುನಾಮಕರಣದ ಪ್ರಸ್ತಾಪವನ್ನಿಟ್ಟಾಗ ನಿಮ್ಮ ಪ್ರತಿಭಟನೆಗೆ “ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದನ್ನು ವಿರೋಧಿಸಿದರೆ ಹುಷಾರ್, ಇಷ್ಟ ಇಲ್ಲ ಅಂದ್ರೆ ಆ ವಿಮಾನ ನಿಲ್ದಾಣಕ್ಕೆ ಬರಲೇಬೇಡಿ” ಎಂದು ಹೇಳಿದಷ್ಟೇ ಸೆನ್ಸಿಬಲ್ ಆಗಿದೆಯಲ್ಲವೇ ನಿಮ್ಮ ಇತ್ತೀಚಿನ ಎಚ್ಚರಿಕೆ ಕೂಡ!
ಕೆಂಪೇಗೌಡರನ್ನು ಟೀಕಿಸಿದ ಗಿರೀಶ್ ಕಾರ್ನಾಡರ ಮನಸ್ಥಿತಿಯನ್ನು ನೀವು ಸರ್ಕಾರಿ ಪ್ರಾಯೋಜಿತ ಸಾಹಿತಿ ಎಂದೆಲ್ಲಾ ವಿಮರ್ಶೆ ಮಾಡಬಹುದಾದರೆ, ತಮ್ಮ ಸಂಸ್ಕೃತಿ, ಸಂತತಿಗೇ ಕಂಟಕವಾಗಿದ್ದ ಟಿಪ್ಪುವನ್ನು ಹಾಗೂ ಆತನಿಗೆ ಮತಾಂತರ, ನರಮೇಧಗಳಿಗೆ ಪ್ರೇರಣೆ ನೀಡುತ್ತಿದ್ದ ಇಸ್ಲಾಂನ್ನು ಕೊಡವರು ವಿಮರ್ಶಿಸಬಾರದೇ? ಹಾಗೆ ವಿಮರ್ಶಿಸಿದ ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಧರ್ಮ ನಿಂದನೆಯಲ್ಲಿ ಬಂಧಿಸುತ್ತೀರಾ? ನಿಮ್ಮದ್ಯಾವ ಸೀಮೆ ರಾಜಧರ್ಮ ಸ್ವಾಮಿ? ಹಾಗಾದರೆ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಮರುನಾಮಕರಣ ಮಾಡಲು ಪ್ರತಿಭಟಿಸಿ ಭಾವನೆಗಳಿಗೆ ಘಾಸಿಯುಂಟುಮಾಡಿದ್ದ ನಿಮ್ಮ ಮೇಲೂ ಕೇಸ್ ಹಾಕಬಹುದಲ್ಲ!
ಘಟನೆ-2
ಟಿಪ್ಪು ದೇಶಭಕ್ತನಲ್ಲ ಎನ್ನುವ ಕೊಡವರು ಭಾರತೀಯರಲ್ಲ-ನಿರ್ದೇಶಕ ಸತ್ಯು, 2016 ನವೆಂಬರ್
ಕೊಡವರು ಇಲ್ಲಿನ ಸ್ಥಾನಿಕರಲ್ಲ. ಈ ನೆಲದ ಮೂಲದವರಲ್ಲ- ಕೋ.ಚೆನ್ನಬಸಪ್ಪ, 2013 ಡಿಸೆಂಬರ್
ಮುಖ್ಯಮಂತ್ರಿಗಳೇ ನಿಮಗೆ ಗೊತ್ತಿರಬಹುದು, ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಕೆ. ರೆಹಮಾನ್ ಖಾನ್ ಯುಪಿಎ ಸರ್ಕಾರದಲ್ಲಿ ಟಿಪ್ಪು ವಿವಿ ಸ್ಥಾಪನೆ ಕುರಿತು ಮಾತನಾಡಿದಾಗಿನಿಂದ ಈ ಟಿಪ್ಪುವಿನ ನಿಜ ಸ್ವರೂಪದ ಬಗ್ಗೆ ಹೆಚ್ಚು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಲು ಪ್ರಾರಂಭವಾಗಿತ್ತು. ಅಲೀಘರ್ ವಿವಿ ಮಾದರಿಯಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಮಾಡುತ್ತೇವೆ ಎನ್ನುವ ಪ್ರಸ್ತಾವನೆಯ ವಿರುದ್ಧ ಖ್ಯಾತ ವಿದ್ವಾಂಸ ಚಿದಾನಂದ ಮೂರ್ತಿಗಳೂ ಸಹ ತಮ್ಮ ಧ್ವನಿ ಎತ್ತಿದ್ದರು.
ಅದೇ ವೇಳೆ ನಡೆದಿದ್ದ 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿಡುವುದನ್ನು ವಿರೋಧಿಸುವುದು ಖಂಡನೀಯ. ಕೆಲವರು ಹೇಳುವಂತೆ ಟಿಪ್ಪು ಕೊಡವರನ್ನು ಅಷ್ಟೊಂದು ಸಂಖ್ಯೆಯಲ್ಲಿ (೭೦ಸಾವಿರ) ಕೊಂದಿದ್ದರೆ ಇಂದು ಕೊಡಗಿನಲ್ಲಿ ಕೊಡವರ ಸಂಖ್ಯೆ ತುಂಬಾ ಕಡಿಮೆ ಇರಬೇಕಿತ್ತು. ಆದರೆ ಕೊಡಗಿನಲ್ಲಿ ಇಂದು ಕೊಡವರ ಸಂಖ್ಯೆ ಹೆಚ್ಚಿದೆ. ಟಿಪ್ಪು ಮತಾಂತರ ಮಾಡಿದ್ದಿದ್ದರೆ ಮುಸಲ್ಮಾನರ ಸಂಖ್ಯೆ ಕೊಡಗಿನಲ್ಲಿ ಹೆಚ್ಚಿರಬೇಕಿತ್ತು. ಆದರೆ ಇಂದು ಕೊಡಗಿನಲ್ಲಿ ಕೇವಲ ೧೪,೭೩೦ ಜನ ಮಾತ್ರ ಮುಸಲ್ಮಾನರಿದ್ದಾರೆ.” ಎಂದಿದ್ದರು.
ಚಿದಾನಂದ ಮೂರ್ತಿಗಳು ಹಾಕಿದ್ದ ಸವಾಲಿಗೆ ಉತ್ತರವೇ ಕೊಡಲು ಸಾಧ್ಯವಾಗದೇ ಕೊನೆಗೆ ಕೊಡವರು ಭಾರತೀಯರೇ ಅಲ್ಲ ಈ ನೆಲದ ಮೂಲದವರೇ ಅಂದುಬಿಟ್ಟರು ಕೋ.ಚೆ. ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಅಡ ಇಟ್ಟು, ಸಂಸ್ಕೃತಿಯನ್ನು ಹರಾಜು ಹಾಕಿ ಬದುಕುವ ರಾಜಕಾರಣಿಗಳಿಗೆ ಟಿಪ್ಪು-ಇಸ್ಲಾಂ ನಲ್ಲಿರುವ ಬರ್ಬರತೆಯ ಟೀಕೆ ಧರ್ಮ ನಿಂದನೆಯಾಗಿ ಕಾಣಿಸುತ್ತೆ. ಪ್ರಕರಣ ದಾಖಲಿಸಬೇಕು ಅಂತಲೂ ಅನಿಸುತ್ತೆ. ಆದರೆ ದೇಶವೇ ಹೆಮ್ಮೆ ಪಡುವಂತಹ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರನ್ನು ನೀಡಿದ ಕೊಡವರನ್ನು ಭಾರತೀಯರೇ ಅಲ್ಲ ಅಂದಿದ್ದು ಕೊಡವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎನಿಸುವುದಿಲ್ಲ.
ಟಿಪ್ಪು ಜಯಂತಿ ವಿರೋಧಿಸಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿ ವಿರೋಧವನ್ನು ಖಂಡಿಸುವಷ್ಟು ಧಾರ್ಷ್ಟ್ಯವನ್ನು ಅಪ್ಪಿತಪ್ಪಿಯೂ ಯಾವುದೇ ಸರ್ಕಾರ ಕೊಡವರ ಭಾವನೆಗಳಿಗೆ ಧಕ್ಕೆಯುಂಟಾದರೆ ಕ್ರಮ ಎದುರಿಸಬೇಕಾಗುತ್ತೆ ಎಂದು ಹೇಳುವುದಕ್ಕೆ ತೋರಿಸುವುದಿಲ್ಲ. ಇನ್ನು ನಿರ್ದೇಶಕ ಸತ್ಯು ಟಿಪ್ಪು ದೇಶಭಕ್ತನಲ್ಲ ಎನ್ನುವ ಕೊಡವರು ಭಾರತೀಯರೇ ಅಲ್ಲ ಅಂದಾಗ ಒಂದು ಇಡೀಯ ಸಂಸ್ಕೃತಿ, ಜನಾಂಗಕ್ಕೇ ಅವಮಾನ ಮಾಡಲಾಗುತ್ತಿದೆ ಉಂಟಾಗಿದೆ ಎಂಬ ಪ್ರಜ್ನೆ ಸ್ವಾಭಿಮಾನವನ್ನು ಒತ್ತೆ ಇಟ್ಟು ಬದುಕುವ ಸೆಕ್ಯುಲರ್ ರಾಜಕಾರಣಿಗೂ ಮೂಡುವುದಿಲ್ಲ!
5 ವರ್ಷಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಶತಾಯ ಗತಾಯ ಟಿಪ್ಪು ಜಯಂತಿಯನ್ನು ಮಾಡಲೇಬೇಕೆಂಬ ಜಿದ್ದಿಗೆ ಬಿದ್ದ ಪರಿಣಾಮ ಹಲವರು ಜೀವ ಕಳೆದುಕೊಂಡಿದ್ದರು. ಈಗ ನಿಮ್ಮ ಮೈತ್ರಿ ಸರ್ಕಾರ ಟಿಪ್ಪು ಜಯಂತಿ ವಿರೋಧಿಸುವವರನ್ನು ಜೈಲಿಗೆ ಕಳಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ನಾಮ ಮಾಡುವ ಮೂಲಕವಾದರೂ ಟಿಪ್ಪು ಜಯಂತಿ ಮಾಡುತ್ತೇವೆ ಎಂಬ ಸಂದೇಶ ನೀಡಿದೆ. ಸಿದ್ದರಾಮಯ್ಯ ತಾವೊಬ್ಬ ಟಿಪ್ಪು ಅಭಿಮಾನಿ ಎಂದು ನೇರಾ ನೇರವಾಗಿ ಹೇಳಿಕೊಂಡು ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು. ಈ ರೀತಿ ನೇರಾ ನೇರವಾಗಿರುವ ವಿರೋಧಿಗಳನ್ನು ಎದುರಿಸುವುದು ಯಾವುದೇ ಸಮಾಜಕ್ಕೆ ಆರೋಗ್ಯಕರವೇ ಹೌದು, ಆದರೆ ದೇವಾಲಯಗಳಿಗೆ ಭೇಟಿ ನೀಡುತ್ತಾ ಹೋಮ-ಹವನ ಮಾಡಿಸುತ್ತಾ ಒಳಗಿಂದಲೇ ಗೆದ್ದಲ ಹುಳುಗಳ ತರ ಪ್ರಜ್ಞಾಪೂರ್ವಕವಾಗಿಯೂ, ಅವಕಾಶವಾದಿತನಕ್ಕೋ ಒಟ್ಟಿನಲ್ಲಿ ಸಂಸ್ಕೃತಿಯನ್ನು ನಾಶ ಮಾಡುವವರ ಬಗ್ಗೆ ಯಾವುದಕ್ಕೂ ಎಚ್ಚರದಿಂದ ಇರಬೇಕಿದೆ. ಕೊನೆಯದಾಗಿ ಮಾತೆತ್ತಿದರೆ ದೇವಾಲಯಗಳನ್ನು ಸುತ್ತುತ್ತೀರಲ್ಲಾ ಮುಖ್ಯಮಂತ್ರಿಗಳೇ, ಮೇಲುಕೋಟೆ ಪ್ರಾಂತ್ಯದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದಾಗ ನಿಮಗೊಂದಷ್ಟು ವ್ಯವಧಾನವಿದ್ದರೆ ಕ್ಷೇತ್ರ ಪರಿಚಯ ಮಾಡಿಕೊಳ್ಳುತ್ತಾ, ಅಲ್ಲಿನ ಅರ್ಚಕರನ್ನು ಕೇಳಿ ಮಂಡ್ಯಂ ಅಯ್ಯಂಗಾರರು ದೀಪಾವಳಿಯೇ ಯಾಕೆ ಆಚರಿಸುವುದಿಲ್ಲ ಅಂತ. ಅವರು ನಿಮ್ಮ ಆರಾಧ್ಯ ದೈವ ಟಿಪ್ಪು ಈ ನಾಡಿನ ಸಂಸ್ಕೃತಿಗೆ ಕೊಟ್ಟ ಕೊಡುಗೆ ಬಗ್ಗೆ ವಿವರವಾಗಿ ತಿಳಿಸುತ್ತಾರೆ. ಹ್ಹಾ…
ಇಷ್ಟವಿಲ್ಲದಿದ್ದರೆ ಮಂಡ್ಯಂ ಅಯ್ಯಂಗಾರರ ಕಥೆಯನ್ನು ಕೇಳದೇ ಮನೆಯಲ್ಲಿಯೇ ಇದ್ದುಬಿಡಿ ಆದರೆ ಟಿಪ್ಪುವನ್ನು ವಿರೋಧಿಸಿದರೆಂದು ನೀವು ಅವರ ಮೇಲೂ ಕೇಸ್ ಹಾಕಬೇಡಿ…