ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 21, 2018

ನಿಂದಕರಿಂದಲೇ ಸಂತೋಷ, ನಿಂದಕರಿದ್ದರೆ ಸಂತೋಷ

‍ನಿಲುಮೆ ಮೂಲಕ

– ಬಿದರೆಪ್ರಕಾಶ್

“ನಿಂದಕರಿರಿಬೇಕು, ನಿಂದಕರಿರಬೇಕು
ದುಷ್ಟ ಜನರು ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲಾ ಕೀರ್ತಿಗಳು”

ಎಂದು ಅಂದು ಹಾಡಿದ ಪುರಂದರ ದಾಸರ ನುಡಿಗಳು ಎಂದಿಗೂ ಎಂದೆಂದಿಗೂ ಪ್ರಸ್ತುತವೆಂದು ಇತ್ತೀಚೆಗಿನ ಕೆಲವು ಹಿದ್ಯಮಾನಗಳಿಂದ ವೇದ್ಯವಾಗುತ್ತದೆ.. ಹೌದು, ಪುರಂದರದಾಸರ ವಾಣಿಯಂತೆ ದುಷ್ಟ ಜನರಿಂದಲೇ ಶಿಷ್ಟ ಜನರಿಗೆ ಕೀರ್ತಿಗಳು ಲಭ್ಯವಾಗಿವೆ. ಹಾಗೆಂದು ಈ ಶಿಷ್ಟ ಜನರು ಕೀರ್ತಿಗಾಗಿ ಆಸೆ ಪಟ್ಟವರಲ್ಲ, ಪರರ ತಂಟೆಗೆ ಹೋದವರಲ್ಲ, ಕರ್ತವ್ಯಮುಖಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಈ ಇಬ್ಬರು ವ್ಯಕ್ತಿಗಳು ಇಂದು ಖ್ಯಾತಿಗೆ, ಕೀರ್ತಿಗೆ ಭಾಜನರಾಗುತ್ತಿದ್ದಾರೆಂದರೆ ಅದಕ್ಕೆ ಕಾರಣ ಈ ನಿಂದಕರೇ. ಬಹುಷಃ ಈ ನಿಂದಕರಿರದಿದ್ದರೆ ಈ ಇಬ್ಬರು ವ್ಯಕ್ತಿಗಳು ಇಂದಿಗೂ ತೆರೆಮರೆಯಲ್ಲಿಯೇ ಇರುತ್ತಿದ್ದರೇನೋ. ಹಿನ್ನೆಲೆಯಲ್ಲೇ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಈ ಇಬ್ಬರನ್ನು ಮುನ್ನಲೆಗೆ ತಂದು ನಿಲ್ಲಿಸಿರುವುದು ಈ ನಿಂದಕರೇ. ಅದಕ್ಕಾಗಿಯೇ ಈ ನಿಂದಕರಿಗೆ ಧನ್ಯವಾದ ಹೇಳಲೇಬೇಕು.

ಸಮಾಜಕ್ಕೋಸ್ಕರ ತಮ್ಮ ಜೀವನವನ್ನು ಕೊಟ್ಟು ಪ್ರಚಾರಕರಾಗಿ,ರಾಜ್ಯ ಬಿಜೆಪಿಯಲ್ಲಿ ಕೇಂದ್ರ ಬಿಂದುವಿನಂತೆ ಕಳೆದ ಹತ್ತು ವರ್ಷಗಳಿಂದ ತಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಬಿ.ಎಲ್.ಸಂತೋಷ್(ಸಂತೋಷ್‌ಜೀ)ರವರು ಒಬ್ಬರಾದರೆ,ಪತ್ರಕರ್ತರಾಗಿ ಅಂಕಣಕಾರರಾಗಿ ರಾಷ್ಟ್ರೀಯ ವಿಚಾರಗಳನ್ನು ಪ್ರತಿಪಾದಿಸುತ್ತಾ, ಜೀವನಕ್ಕಿಂತ ಅಧ್ಯಯನಕ್ಕೇ ಆದ್ಯತೆ ಕೊಟ್ಟು, ಕಾರ್ಯನಿರ್ವಹಿಸುತ್ತಿರುವ ಸಂತೋಷ್ ತಮ್ಮಯ್ಯ ಮತ್ತೋರ್ವರು. ಸಂತೋಷ್‌ಜೀರವರು ರಾಜಕೀಯ ಕ್ಷೇತ್ರದಲ್ಲಿದ್ದರೂ ಎಂದಿಗೂ ಪ್ರಚಾರ ಪ್ರಿಯರಾಗಲಿಲ್ಲ. ತಮ್ಮಲ್ಲಿರುವ ಅಗಾಧ ಸಂಘಟನಾ ಸಾಮರ್ಥ್ಯವನ್ನು ಕಳೆದ ಹತ್ತು ವರ್ಷಗಳಿಂದ ಬಿಜೆಪಿಯನ್ನು ಕಟ್ಟುವುದಕ್ಕಾಗಿಯೇ ಧಾರೆ ಎರೆಯುತ್ತಿರುವ ಇವರು ಮತ್ತು ಇವರ ಸಾಮರ್ಥ್ಯ ಬಿಜೆಪಿಯ ಒಳಗಿರುವವರಿಗೆ ಮತ್ತು ಪರಿವಾರದ ಕಾರ್ಯಕರ್ತರುಗಳಿಗೆ ಮಾತ್ರ ಪರಿಚಯವಿತ್ತು.ಅದೇ ರೀತಿ ಅಸೀಮ ಪತ್ರಿಕೆಯ ಸಂಪಾದಕರಾಗಿ,ಹೊಸದಿಗಂತ ಪತ್ರಿಕೆಯ ಅಂಕಣಕಾರರಾಗಿ ಓದು ಮತ್ತು ಬರಹಗಳನ್ನು ಮಾತ್ರ ಅಂಟಿಸಿಕೊಂಡು, ಅಧ್ಯಯನದ ಮೂಲಕ ಅಗಾಧ ಬರವಣಿಗೆಯ ಸಾಮರ್ಥ್ಯವನ್ನು ಹೊಂದಿದ್ದ, ಸಂಕೋಚ ಸ್ವಭಾವದ ಸಂತೋಷ್ ತಮ್ಮಯ್ಯ ಸಹ ಎಂದೂ ಮುನ್ನಲೆಗೆ ಬಂದವರಲ್ಲ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮಗಿರುವ ಶಕ್ತಿಯನ್ನು ವಿನಿಯೋಗಿಸಿ ತೆರೆಮರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಈ ಇಬ್ಬರನ್ನೂ ನಿಂದಕರುಗಳು ಜನರ ಮುಂದೆ ತಂದು ನಿಲ್ಲಿಸಿಬಿಟ್ಟಿದ್ದಾರೆ. ಈ ಕಾರಣದಿಂದಾಗಿಯೇ ಸಂತೋಷ್‌ಜೀ ಮತ್ತು ಸಂತೋಷ್ ತಮ್ಮಯ್ಯ ಇಬ್ಬರ ಹೆಸರು ಜನಜನಿತಾಗುತ್ತಿದೆ. ಇವರಿಬ್ಬರ ಸಾಮರ್ಥ್ಯದ ಅರಿವು ಜನರಿಗೆ ಆಗತೊಡಗಿದೆ. ಅದಕ್ಕೇ ಅಂದು ಪುರಂದರ ದಾಸರು ಹೇಳಿದ ’ಶಿಷ್ಟ ಜನರ ಕೀರ್ತಿಗಳಿಗೆ ನಿಂದಕರಿರಬೇಕು, ನಿಂದಕರಿರಿಬೇಕು’ ಎಂಬ ನುಡಿ ಇಂದೂ ಪ್ರಸ್ತುತವೆಂಬುದು ರುಜುವಾತಾಗಿಬಿಟ್ಟಿದೆ.

ಬಿ.ಎಲ್.ಸೋತೋಷ್, ಬಹಳಷ್ಟು ಜನರು ಸಂತೋಷ್‌ಜೀ ಎಂದು ಆತ್ಮೀಯವಾಗಿ, ಗೌರವಪೂರ್ವಕವಾಗಿ ಕರೆಸಿಕೊಳ್ಳುವ ಇವರು ಬಿಜೆಪಿಯಲ್ಲಿ ’ಸಂಘಟನಾ ಕಾರ್ಯದರ್ಶಿ’ ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿ ಬಿಜೆಪಿಯ ಸಂಘಟನೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿ ಕಾರ್ಯನಿರ್ವಹಿಸುತ್ತಿರುವವರು.ಬಿಜೆಪಿಯನ್ನು ಸಂಘಟನಾತ್ಮಕವಾಗಿ ಶಕ್ತವಾಗಿಸುವಲ್ಲಿ ಸಂತೋಷ್‌ಜೀಯವರ ಪಾತ್ರ ಅಸದಳವಾದುದು ಎಂಬುದನ್ನು ಬಿಜೆಪಿಯಲ್ಲಿ ಅವರನ್ನು ಸಹಿಸಿಕೊಳ್ಳದವರೂ ಒಪ್ಪಿಕೊಳ್ಳುತ್ತಾರೆ.

ಬಿಜೆಪಿ ಕಾರ್ಯಾಲಯವೆಂಬ ಜಗನ್ನಾಥ ಭವನವನ್ನು ’ಬಿಜೆಪಿ ಮನೆ’ಯನ್ನಾಗಿ ಮಾಡಿದ ಕೀರ್ತಿಯೂ ಸಂಂತೋಷ್‌ರವರದ್ದು. ಜಗನ್ನಾಥ ಭವನದ ಮುಂದೆ ಬೆಳಿಗ್ಗೆ ರಂಗೋಲಿ ಹಾಕದ ದಿನಗಳಿಲ್ಲ. ಜಗನ್ನಾಥ ಭವನದ ಮುಂದೆ ಹಾದು ಹೋದ ದೇವರಿಗೆ ಮಂಗಳಾರತಿ ಮಾಡಿಸದ ಉದಾಹರಣೆಗಳಿಲ್ಲ. ಜಗನ್ನಾಥ ಭವನದಲ್ಲಿ ಆಚರಿಸದ ಹಬ್ಬಗಳಿಲ್ಲ. ಜಗನ್ನಾಥಭವನದ ಕೆಳಗಿನ ಅಂತಸ್ತುಗಳು ಬಿಜೆಪಿಯ ಚಟುವಟಿಕೆಗಳ ಕೇಂದ್ರವಾಗಿದ್ದರೆ, ನಾಲ್ಕನೇ ಮಹಡಿ, ಬಿಜೆಪಿಗಾಗಿ ದುಡಿದು ಬರುವ ಬಿಜೆಪಿ ಕಾರ್ಯಕರ್ತನಿಗೆ ನೆಮ್ಮದಿಂದ ವಿಶ್ರಾಂತಿ ತೆಗೆದುಕೊಳ್ಳುವ ಬಿಜೆಪಿಯ ಮನೆಯಾಗಿತ್ತು. ಅಲ್ಲಿನ ಆತಿಥ್ಯದಲ್ಲಿ ಆತ್ಮೀಯತೆತ್ತು. ನೀಡುವ ತಿಂಡಿ, ಊಟದಲ್ಲಿ ವಾತ್ಸಲ್ಯವಿತ್ತು.ಇಷ್ಟೇ ಅಲ್ಲ,ಬಂದ ಕಾರ್ಯಕರ್ತರಿಗೆ ’ದೇಶ ಮೊದಲು’ ಎಂಬ ಧ್ಯೇಯದ ಜವಾಬ್ದಾರಿಯನ್ನು ನೆನಪಿಸುವ, ಬಿಜೆಪಿಯ ಹಿರಿಯರ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಮೂಡಿಸುವ ಸಾಹಿತ್ಯವೂ ಇಲ್ಲಿ ದೊರೆಯುತ್ತಿತ್ತು. ಜಿಲ್ಲಾ ಕೇಂದ್ರದಿಂದ ಮಾತ್ರವಲ್ಲ, ಇಡೀ ದೇಶದ ಯಾವುದೇ ರಾಜ್ಯದಿಂದ ಬಂದ ಬಿಜೆಪಿ ಹಿತೈಷಿಗಳಿಗೆ,ಕಾರ್ಯಕರ್ತರುಗಳಿಗೆ,ನಾಯಕರುಗಳಿಗೆ ರಾಜಕೀಯ ಪಕ್ಷವೊಂದರ ಕಾರ್ಯಾಲಯ ಹೇಗಿರಬೇಕು ಎಂದರೆ ’ಜಗನ್ನಾಥ ಭವನದ ರೀತಿ ಇರಬೇಕು’ ಎಂದು ಅನ್ನಿಸಿಬಿಡುತ್ತಿತ್ತು. ಇದೆಲ್ಲಾ ಸಾಧ್ಯವಾಗಿದ್ದು ಜಗನ್ನಾಥ ಭವನದಲ್ಲಿ ಮೂಲೆ ರೂಮಿನಲ್ಲಿ ಕುಳಿತಿದ್ದರೂ, ನಾಲ್ಕನೇ ಮಹಡಿಯ ಮೇಲೆ ಚಾಪೆಯ ಮೇಲೆ ಮಲಗಿದ್ದರೂ ಬಿಜೆಪಿಯ ಬಗ್ಗೆಯೇ ಚಿಂತಿಸುತ್ತಿದ್ದ ಸಂತೋಷ್‌ಜೀಯವರ ಕಾರ್ಯತತ್ಪರತೆಯಿಂದ ಕಾರ್ಯಕರ್ತರಿಗೆ ಅವರ ಸಾಮರ್ಥ್ಯಕ್ಕನುಗುಣವಾಗಿ ಜವಾಬ್ದಾರಿಗಳನ್ನು ನೀಡಿದರು. ಬಿಜೆಪಿಗಾಗಿ (ಯಾವುದೇ ವ್ಯಕ್ತಿಗಾಗಿ ಅಲ್ಲ) ದುಡಿಯಬೇಕಾದ ಅನಿವಾರ್ಯತೆ, ನಿರ್ವಹಿಸಬೇಕಾದ ಜವಾಬ್ದಾರಿ, ರೀತಿ, ನೀತಿಗಳ ಬಗ್ಗೆ ಕಾರ್ಯಕರ್ತರಿಗೆ ಅರಿವು ಮೂಡಿಸಿದರು.ಅವರಿಗಿದ್ದದ್ದು ಒಂದೇ ಚಿಂತೆ. ಅದು ಬಿಜೆಪಿ. ಅವರ ಫೋನ್ ಕಾಲ್‌ಗಳು ರಿಂಗಣಿಸುತ್ತಿದ್ದದು ಒಂದೇ ಕಾರಣಕ್ಕಾಗಿ, ಅದು ಬಿಜೆಪಿಗಾಗಿ. ಯಾವುದೇ ಕಾರ್ಯಕರ್ತ ಅವರ ಮುಂದೆ ಒಂದೆರಡು ನಿಮಿಷ ಕುಳಿತರೆ ಆತ ಯಾವುದೇ ಮಟ್ಟದ ಕಾರ್ಯಕರ್ತನಾಗಿದ್ದರೂ ಬಿಜೆಪಿಗಾಗಿ ಮುಂದಿನ ಮೂರು ವರ್ಷ ಅವನು ನಿರ್ವಹಿಸಬೇಕಾದ ಕಾರ್ಯ ಚಟುವಟಿಕೆಗಳ ಸಿಲಬಸ್‌ನ್ನು ಅವನ ಮುಂದಿಟ್ಟು ಬಿಡುತ್ತಿದ್ದರು. ಅನೇಕ ಕಾರ್ಯಕರ್ತರಿಗೆ ಇವರು ನೀಡಿದ ಜವಾಬ್ದಾರಿಯ ನಂತರವೇ ಅವರಲ್ಲಿರುವ ಸಾಮರ್ಥ್ಯದ ಮತ್ತು ತನ್ನ ಸಾಮರ್ಥ್ಯದ ಅರಿವಾಗಿದೆಯೆಂದರೆ ತಪ್ಪಾಗಲಾರದು.

ಇಷ್ಟೇ ಅಲ್ಲ.ಜನನಾಯಕರೆಂದೆನಿಸಿಕೊಂಡಿದ್ದ ಯಡಿಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ ಸಂಕಷ್ಟದ ದಿನಗಳಲ್ಲಿ ಬಿಜೆಪಿಯನ್ನು ನೆಲಕಚ್ಚದಂತೆ ಮಾಡುವಲ್ಲಿ ಸಂತೋಷ್‌ಜೀಯವರ ಪಾತ್ರ ಅಗಾಧವಾದುದು. ಅಂತಹ ಪರ್ವ ಕಾಲದಲ್ಲಿ ’ಮುಂದೇನು’ ಎಂದು ಮೂಲೆ ಹಿಡಿಯುವ ಸ್ಥಿತಿಯಲ್ಲಿದ್ದ ರಾಜ್ಯದ ಮೂಲೆಮೂಲೆಗಳಲ್ಲಿನ ಕಾರ್ಯಕರ್ತರುಗಳನ್ನು ಸಂಪರ್ಕಿಸಿದರು.ಅವರುಗಳೆಲ್ಲರನ್ನು ಭರವಸೆಂದ ಬಿಜೆಪಿಯಲ್ಲಿರುವಂತೆ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವಂತೆ ಮಾಡಿದರು. ಕೈಚೆಲ್ಲಿ ಕುಳಿತಿದ್ದ ನಾಯಕರುಗಳನ್ನು ಕ್ರಿಯಾಶೀಲರಾಗಲು ಬೇಡಿದರು,ಬಡಿದೆಬ್ಬಿಸಿದರು.ಈ ಕಾರಣದಿಂದಲೇ ಅಂದು ಬಿಜೆಪಿಗೆ ಸಂಖ್ಯಾತ್ಮಕವಾಗಿ ಸ್ವಲ್ಪ ಹಿನ್ನಡೆಯಾತಾದರೂ ಅದರ ಸಂಘಟನಾತ್ಮಕ ಶಕ್ತಿ ಕುಂದಲಿಲ್ಲ. ಬಿಜೆಪಿಯ ಬೇರುಗಳು ಅಲುಗಾಡಲಿಲ್ಲ.

ಇಡೀ ರಾಜ್ಯದ ಬಿಜೆಪಿಯ ಆಳ ಅಗಲಗಳನ್ನು ಅರಿತು ಅದಕ್ಕೆ ತಕ್ಕಂತೆ ಕಾರ್ಯಕರ್ತರ ಜೋಡಣೆ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದರು.ಕಾರ್ಯಕರ್ತರುಗಳಿಗೆ ಸ್ಫೂರ್ತಿಯಾದರು.ಬಿಜೆಪಿ ಬೆಳವಣಿಗೆಗೆ ಪೂರಕರಾದರು, ಪ್ರೇರಕರಾದರು. ಆದರೂ ಅವರೆಂದೂ ಅನವಶ್ಯಕವಾಗಿ ವೇದಿಕೆ ಏರಲಿಲ್ಲ. ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯಲಿಲ್ಲ.ಫ್ಲೆಕ್ಸ್‌ಗಳಲ್ಲಿ ರಾರಾಜಿಸಲಿಲ್ಲ.ಒಬ್ಬ ರಾಜಕೀಯ ಸಂತನ ರೀತಿಯಲ್ಲಿಯೇ ಜೀವನ ನಡೆಸುತ್ತಿದ್ದ ಇವರನ್ನೂ ನಿಂದಿಸುವ ಜನರು ಹುಟ್ಟಿಕೊಂಡು ಬಿಟ್ಟರು. ಈ ನಿಂದಕರು ಎಲೆ ಮರೆಯಂತೆ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್‌ಜೀಯವರನ್ನು ರಾಜಕಾರಣದ ಮುನ್ನಲೆಯ ಬೆಳಕಿಗೆ ತಂದರು. ನಾಡಿನ ಜನರಿಗೆ ’ಕರ್ನಾಟಕದ ಬಿಜೆಪಿಯಲ್ಲಿಯೂ ಇಂತಹ ಸಂಘಟನಾ ಸಾಮರ್ಥ್ಯವುಳ್ಳ ಒಬ್ಬ ರಾಜಕೀಯ ಸಂತ’ನೊಬ್ಬನಿದ್ದಾನೆಂಬ ಸಂಗತಿ ಅರಿವಿಗೆ ಬಂದದ್ದೇ ಆಗ.

ಇನ್ನು ಸಂತೋಷ್ ತಮ್ಮಯ್ಯ ಎಂಬ ರಾಷ್ಟ್ರೀಯ ವಿಚಾರವಾದಿ ಪತ್ರಕರ್ತ ತನ್ನ ಜೀವನದಲ್ಲಿ ’ಓದು ಮತ್ತು ಬರಹ’ ಬಿಟ್ಟು ಮತ್ತೇನನ್ನು ಹೆಚ್ಚು ಅಂಟಿಸಿಕೊಂಡವನಲ್ಲ. ಅಧ್ಯಯನವನ್ನೇ ಆವರಿಸಿಕೊಂಡು, ಅವಲಂಬಿಸಿಕೊಂಡು ಬರಹಗಳ ಮೂಲಕ ರಾಷ್ಟ್ರೀಯ ಜಾಗೃತಿಯೆಂಬ ಕೈಂಕರ್ಯವನ್ನು ಮಾಡಿಕೊಂಡಿದ್ದ ಈತನ ಮೇಲೂ ಪ್ರಕರಣವೊಂದನ್ನು ದಾಖಲಿಸಿ ಜೈಲಿಗೆ ತಳ್ಳಿದ ’ಮಹಾನುಭಾವ’ರು ನಾಡಿಗೆ ಕೇವಲ ಒಂದು ದಿನದಲ್ಲಿ ನಮ್ಮಲ್ಲೂ ಇಂತಹ ಒಬ್ಬ ವೈಚಾರಿಕತೆಯನ್ನು ಅಂಟಿಸಿಕೊಂಡ ಅಪರೂಪದ ಪರ್ತಕರ್ತನೊಬ್ಬನಿದ್ದಾನೆಂಬುದನ್ನು ಪರಿಚಯ ಮಾಡಿಕೊಟ್ಟು ಬಿಟ್ಟರು.ಈ ಪ್ರಕರಣಕ್ಕೆ ಮುಂಚೆ ಕೆಲವೇ ವಲಯದಲ್ಲಿ ಮಾತ್ರ ಪರಿಚಿತರಾಗಿದ್ದ ಸಂತೋಷ್ ತಮ್ಮಯ್ಯ ಇಂದು ಖ್ಯಾತಿ, ಕೀರ್ತಿಗೆ ಕಾರಣರಾಗಿರವುದು, ’ಸಂತೋಷ್ ತಮ್ಮಯ್ಯ ಒಬ್ಬ ಕೋಮುವಾದಿ, ಸಮಾಜದ ಅಶಾಂತಿಯನ್ನು ಉಂಟು ಮಾಡುವ ಭಾಷಣಕಾರ’ ಎಂದು ಬಿರುದು ಬಾವಳಿಗಳನ್ನು ಕೊಟ್ಟು ಕಟಕಟೆಯ ಮೆಟ್ಟಿಲನ್ನೇರಿಸಿದ ಸಮಾಜದಲ್ಲಿ ಎಂದಿಗೂ ಇರುವ ಈ ನಿಂದಕರುಗಳೇ.

ಈತ ಆದಿ ಶಂಕರರನ್ನು ಅರೆದು ಕುಡಿದಿದ್ದಾರೆ,ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ.ಕಾರ್ಗಿಲ್ ಹುತಾತ್ಮ ಯೋಧರ ಬಗ್ಗೆ ಪುಟಗಟ್ಟಲೆ ಬರೆಯಬಲ್ಲ ಸರಕನ್ನು ತಲೆಯೊಳಗಿಟ್ಟುಕೊಂಡಿದ್ದಾರೆ.ವಾರಕ್ಕೊಮ್ಮೆ ಒಬ್ಬ ಮಾಜಿ ಅಥವಾ ಹಾಲಿ ಯೋಧನೊಂದಿಗೆ ಒಂದಿಷ್ಟು ಕದನ ಕುತೂಹಲಗಳನ್ನು ಹಂಚಿಕೊಳ್ಳದಿದ್ದರೆ ಇವರಲ್ಲಿ ಹರಿಯುತ್ತಿರುವ ಕೊಡಗಿನ ರಕ್ತ ಹೆಪ್ಪುಗಟ್ಟಿ ಬಿಡುತ್ತದೆ. ಹುತಾತ್ಮ ಯೋಧನನ್ನು ಕಳೆದು ಕೊಂಡ ಕುಟುಂಬದ ಬಗೆಗಿನ ನೋವಿನ ಕತೆಯೊಂದನ್ನು ದಾಖಲಿಸದಿದ್ದರೆ ಇವರಿಗೆ ನಿದ್ದೆ ಬರುವುದಿಲ್ಲ. ಸಂಘ ನಿಂದನೆ,ಸಮಾಜ ವಿರೋಧಿ, ದೇಶ ವಿರೋಧಿ ನಿಲವುಗಳನ್ನೆಂದೂ ಈತ ಸಹಿಸುವುದಿಲ್ಲ. ಇದೆಲ್ಲದರ ಜೊತೆಗೆ ಇವರಲ್ಲಿರುವ ಕೊಡಗಿನ ಕ್ಷಾತ್ರಗುಣ ಮತ್ತು ವೈಚಾರಿಕತೆಯಿಂದ ಪಡೆದ ಪ್ರೇರಣೆ, ದೇಶ ವಿರೋಧೀ ಶಕ್ತಿಗಳ ವಿರುದ್ಧ ಸಿಡಿದೇಳುವ,ಅದನ್ನು ತಮ್ಮ ಬರಹ, ಭಾಷಣದ ಮೂಲಕ ಅಭಿವ್ಯಕ್ತಗೊಳಿಸುವ ವ್ಯಕ್ತಿತ್ವ ರಕ್ತಗತವಾಗಲು ಕಾರಣವಾಗಿಬಿಟ್ಟಿದೆ.ಇವರೆಂದೂ ಇನ್ನಿತರ ಪತ್ರಕರ್ತರಂತೆ ವಶೀಲಿಬಾಜಿ,ಅವಕಾಶವಾದಿತನ,ಸೋಗಲಾಡಿತನವನ್ನು ಮೈಗಂಟಿಸಿಕೊಂಡವರಲ್ಲ. ಇವುಗಳನ್ನೇನಾದರೂ ಅಲ್ಪಸ್ವಲ್ಪ ಅಂಟಿಸಿಕೊಂಡಿದ್ದರೆ ಇಂದು ಇವರ ಸ್ಥಾನ ಮತ್ತೆಲ್ಲೋ ಇರುತ್ತಿತ್ತು.ಇಂತಹವರ ಮೇಲೆ ಧರ್ಮ ನಿಂದನೆಯೆಂಬ ಆರೋಪ. ಇಂತಹವರ ಮೇಲೊಂದು ಕೇಸು.ಇವರಿಗೆ ಜೈಲು.ಈ ಎಲ್ಲವೂಗಳಿಗೂ ಕಾರಣವಾದ ನಿಂದಕರುಗಳು,ವ್ಯವಸ್ಥೆಯಿಂದಾಗಿ ಇಂದು ಸಂತೋಷ್‌ ತಮ್ಮಯ್ಯ ಬಹುಜನರ ಬಾಯಲ್ಲಿದ್ದಾರೆ.

ದುಷ್ಟ ಜನರು ಸೃಷ್ಟಿಯೊಳಿದ್ದರೆ ಶಿಷ್ಟ ಜನರಿಗೆಲ್ಲಾ ಕೀರ್ತಿಗಳು ಎಂಬ ದಾಸವಾಣಿಗೆ ಈ ಇಬ್ಬರ ದೃಷ್ಟಾಂತಕ್ಕಿಂತ ಮತ್ತೊಂದು ಬೇಕಿಲ್ಲ. ನಿಂದಕರುಗಳಿಂದಾಗಿಯೇ ಈ ಇಬ್ಬರು ವ್ಯಕ್ತಿಗಳು ಮುನ್ನಲೆಗೆ ಬಂದು ನಿಂತು ಬಿಟ್ಟಿದ್ದಾರೆ. ಇವರುಗಳಿಗಿರುವ ಸಾಮರ್ಥ್ಯ ಮತ್ತು ಬದ್ಧತೆಗಳೇ ಇವರಿಬ್ಬರನ್ನು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯತ್ತದೆ ಎನ್ನುವುದರಲ್ಲಿ ಅನುಮಾನವೂ ಇಲ್ಲ. ಅದಕ್ಕೆ ತಕ್ಕಂತೆ ಇವರನ್ನು ಎತ್ತರೆತ್ತರಕ್ಕೆ ಬೆಳೆಸಲು ಇವರನ್ನು ಟೀಕಿಸುವ, ಟ್ವಿಟಿಸುವ ಮತ್ತೊಂದಿಷ್ಟು ಜನ ವಿರೋಧಿಗಳೂ ಇದ್ದೇ ಇರುತ್ತಾರೆ. ಈ ವಿರೋಧಿಗಳು ಇವರುಗಳನ್ನು ಟೀಕಿಸಿ,ನಿಂದಿಸಿ ಮತ್ತಷ್ಟು ಪ್ರಚಾರವನ್ನು ಕೊಡದೆ ಇರಲಾರರು.ಈ ನಿಂದಕರುಗಳು,ವಿರೋಧಿಗಳು ಮತ್ತಷ್ಟು ಕ್ರಿಯಾಶೀಲರಾಗಲಿ, ಆ ಮೂಲಕ ಇವರಿಬ್ಬರು ಮತ್ತಷ್ಟು ಬೆಳೆಯಲಿ ಎಂಬುದೇ ನಮ್ಮ ಹರಕೆ, ಹಾರೈಕೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments