ಮನಸೇ..!
– ಸ್ನೇಹ
ಬೇಕು ಬೇಡಗಳ ನಡುವಿನ ನಮ್ಮ ಜೀವನದ ಚಿಕ್ಕದೊಂದು ಒಳನೋಟವಿದು.
ಮನಸೇ ಹಾಗೆ ನಾವು ಎಷ್ಟೇ ಪ್ರಯತ್ನಿಸಿದರು ಅದನ್ನು ನಿಯಂತ್ರಿಸಲು ಅಸಾಧ್ಯ. ಯಾವುದು ಬೇಡವೋ ಅದನ್ನೇ ಬಯಸುತ್ತೆ, ನಿಜಕ್ಕೂ ನನ್ನನ್ನು ಕಾಡುವ ನಿರಂತರ ಪ್ರಶ್ನೆ ನೆಮ್ಮದಿಯ ಬದುಕು ಬೇಕಿರುವುದು ಮನಸ್ಸಿಗೋ ಅಥವಾ ನಮ್ಮ ಸುತ್ತಲಿನ ಸಮಾಜದ ಮೆಚ್ಚುಗೆಗೊ. ನಮ್ಮ ಜೀವನದಲ್ಲಿ ನಾವೆಷ್ಟು ಬಾರಿ ನಮಗಾಗಿ ಬದುಕುತ್ತೀವಿ ಎಂದು ಅರಿತರೆ ಜೀವನದ ನಿಜವಾದ ಅರ್ಥ ಬಹುಶಃ ತಿಳಿಯಬಹುದೇನೋ. ಬಾಲ್ಯದಿಂದ ಮುಪ್ಪಿನವರೆಗೆ ಯಾವುದೋ ಒಂದು ನಿರೀಕ್ಷೆಯಲ್ಲಿ ನಮ್ಮ ಜೀವನ ಸಾಗುತ್ತಿರುತ್ತದೆ. ಹಂತ ಹಂತವಾಗಿ ನಮ್ಮ ಅಭಿಪ್ರಾಯ ಬದಲಾಗುತ್ತ ಹೋಗುತ್ತದೆ. ಆದರೆ ಕಟುವಾದ ಸತ್ಯವೆಂದರೆ ಅದು ಯಾವುದು ನಮ್ಮ ಅಭಿಪ್ರಾಯವಾಗಿರುವುದಿಲ್ಲ.ನಾವು ನಮ್ಮ ಸುತ್ತಲಿನ ನೀರಿಕ್ಷೆಗಳಿಗೆ ನಮ್ಮನ್ನು ಹೊಂದಿಸಿಕೊಂಡು ಹೋಗುತ್ತಿರುತ್ತೇವೆಯೇ ಹೊರತು ನಮ್ಮ ಮನಸಿನ ಭಾವನೆಗಳೊಂದಿಗಲ್ಲ.
ಜೀವನದ ಕೆಲವೊಂದು ಅನುಭವಗಳು ಅನುಭಾವವಾಗಿ ಬದಲಾಗುತ್ತವೆ, ಏನೇ ಆಗಲಿ ಜೀವನ ಸಾಗುತ್ತಿರುತ್ತದೆ ಬೇಕು ಬೇಡಗಳ ಗೊಂದಲದಲ್ಲಿ. ಹಿಂತಿರುಗಿ ನೋಡಿದಾಗ ಕೆಲವರು ನಮ್ಮಿಂದ ದೊರವಾದರೆ ಇನ್ನು ಕೆಲವರಿಂದ ನಾವು ದೂರವಾಗಿರುತ್ತೇವೆ, ಯಾವುದು ಸರಿ ಯಾವುದು ತಪ್ಪು ಎಂಬುದರ ಅವಲೋಕನೆಗೆ ಯಾರಲ್ಲೂ ಸಮಯವಿಲ್ಲ. ಕಾಲದ ಹಿಂದೆ ಓಡುತ್ತಾ ಜೀವನದ ಮೌಲ್ಯಗಳನ್ನು ಮರೆತಿದ್ದೇವೆ. ದಿನದಿಂದ ದಿನಕ್ಕೆ ಬದುಕು ಕಠಿಣವಾಗುತ್ತದೆ. ಅದಕ್ಕೆ ಕಾರಣಗಳು ಹಲವು ಕೆಲಸದ ಒತ್ತಡ, ಜವಾಬ್ದಾರಿ ಆದರೆ ಜೀವನದ ಕೊನೆಯಲ್ಲಿ ಉಳಿಯುವ ಪ್ರಶ್ನೆ ನಾವೆಷ್ಟು ನಮ್ಮನ್ನು ಬಯಸುವ ಗೌರವಿಸುವ ಮನಸಿಗೆ ಸ್ಪಂದಿಸಿದ್ದೀವಿ. ಹಣವೊಂದೇ ಜೀವನವಲ್ಲ, ಸಾಧನೆ ಮುಖ್ಯ. ಆದರೆ ಒಂದನ್ನು ಉದ್ದೇಶವಾಗಿಸಿಕೊಂಡು ಮತ್ತೊಂದರಿಂದ ದೂರವಾಗುವ ಅನಿವಾರ್ಯವೇ ಬದುಕಾಗಬಾರದು. ಮನಸಿಗೆ ಮನಸೇ ಆಸರೆಯಾಗಬೇಕು, ಅದನ್ನು ಬೇರೆ ಯಾವುದೇ ವಸ್ತುವಿನಿಂದ ತುಂಬಲು ಹೋಗಬಾರದು.
ನಮಗೆ ಹಸಿವಿದ್ದಾಗ ಮಾತ್ರ ಊಟದ ಬೆಲೆ ತಿಳಿಯುತ್ತದೆಯೇ ಹೊರತು ಹಸಿವು ನೀಗಿದಾಗ ಅಲ್ಲ. ಹಾಗೆಯೇ ಸಂಬಂಧಗಳು ಅಗತ್ಯವಿದ್ದಾಗ ಜೊತೆಯಲ್ಲಿರಬೇಕು, ನಾವು ಬಯಸುವ ಜೀವ ನಮಗೆ ಮಾನಸಿಕವಾಗಿ ಜೊತೆಯಾಗಿರಬೇಕು. ಜೀವನದಲ್ಲಿ ಎಲ್ಲವೂ ಮುಖ್ಯವಾಗುತ್ತವೆ, ಕೆಲವೊಂದು ಸಮಯ, ನಿರ್ಧಾರಗಳು ಬಹಳ ಮಹತ್ವಪೂರ್ಣ ಬದಲಾವಣೆಗಳನ್ನು ತರುತ್ತವೆ. ಇವತ್ತಿನ ಪರಿಸ್ಥಿತಿಯಲ್ಲಿ ಸಂಬಂಧಗಳು ಕೇವಲ ನಾಮಕಾವಾಸ್ತೆಯಾಗಿ ಬದಲಾಗುತ್ತಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. ನಾವು ಏನು ಗಳಿಸುತ್ತೇವೋ ಅದು ನಮ್ಮ ಸಾಮರ್ಥ್ಯ, ಅದೇ ರೀತಿ ನಾವು ಕಳೆದುಕೊಂಡದ್ದು ಕೂಡ ನಮ್ಮಿಂದ ಎನ್ನುವ ಅರಿವು ನಮಗಿರುವುದು ಅಗತ್ಯ.
ಭಾವನೆಗಳ ಬೆಲೆ ಅರಿಯುವುದು ಬಹಳ ಮುಖ್ಯವಾಗುತ್ತವೆ. ನಿರ್ಮಲ ಭಾವ ನಿರ್ಮಲ ಮನಸು ಹುಡುಕುವುದು ಬಹಳ ಕಷ್ಟ, ಒಂದು ವೇಳೆ ಅಂತಹ ಪ್ರೀತಿಭರಿತ ಮನಸು ನಿಮ್ಮ ಜೊತೆಯಲ್ಲಿದ್ದರೆ ಅಂತಹ ಮನಸಿಗೆ ಎಂದಿಗೂ ನೋವು ಕೊಡಬೇಡಿ, ಬಯಸಿದಾಗ ಬಯಸಿದ ಮನಸಿನಿಂದ ಸಮಾಧಾನದ ಸಾಂಗತ್ಯ ದೊರೆತರೆ ಅದುವೇ ಧನ್ಯತೆಯ ಭಾವ, ಸಂಬಂಧಗಳು ಸಮಯದ ಕೈಗೊಂಬೆಯಾಗಬಾರದು, ಸಂಬಂಧಗಳು ಮಾನಸಿಕ ಭಾವನೆಗಳ ಸಂಗಾತಿಯಾಗಬೇಕೇ ಹೊರತು ಹೊರ ಪ್ರಪಂಚದ ತೋರಿಕೆಗಳಿಗಲ್ಲ. ಕೊನೆಗೆ ತೃಪ್ತಿ ಸಿಗುವುದು ಕೇವಲ ಸ್ಪಂದನೆಗಳಿಂದ, ವಸ್ತುಗಳಿಂದಲ್ಲ. ಸಾವಿರ ಜನರ ಮಧ್ಯೆ ಕೂಡ ಮನಸು ಹುಡುಕುವುದು ನಾವು ಬಯಸುವ ಮನಸಿನ ಮಾತನ್ನು ಮಾತ್ರ. ಹಣ ಬದುಕಲು ಬೇಕು ಅಷ್ಟೇ. ಅದೇ ಬದುಕಿನ ಗುರಿಯಾಗಬಾರದು, ಒಂಟಿಯಾಗಿದ್ದಾಗ ಖುಷಿ ಸಿಗುವುದು ಕೇವಲ ಸುಂದರ ನೆನಪುಗಳಿಂದಷ್ಟೇ, ಸಾಧ್ಯವಾದರೆ ಯಾವ ಮನಸಿಗೂ ನೋವು ನೀಡದಂಥ ಬದುಕು ನಮ್ಮದಾಗಲಿ ಎಂಬುದು ನನ್ನ ಆಶಯ.
ಮನಸೊಂದು ಭಾವ ನೂರು
ಭಾವನೆಗಳಿಗೆ ಬೆಲೆ ಕೊಡುವ ಮನಸಿಲ್ಲದಿದ್ದರೆ ಪರವಾಗಿಲ್ಲ
ಆದರೆ ಎಂದು ಭಾವನೆಗಳನ್ನು ನೋಯಿಸದಿರು ಮನವೇ!