ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 4, 2018

ಸಂಸದರ ಸಮೇತ ಇಡೀ ಪಾರ್ಲಿಮೆಂಟನ್ನೇ ಮಾರಿದ ಭೂಪನೀತ!!

‍ನಿಲುಮೆ ಮೂಲಕ

– ಸುಜಿತ್ ಕುಮಾರ್

imagesಪ್ರತಿಭೆ. ಎಲ್ಲೆಂದರಲ್ಲಿ ಎಲ್ಲರಿಗೂ ಸಿಗುವ ವಸ್ತುವಂತು ಇದು ಅಲ್ಲವೇ ಅಲ್ಲ. ಹುಟ್ಟುತ್ತಲೇ ಬರುವ ಪ್ರತಿಭೆಯನ್ನು ಹೇಗೆ ಪ್ರತಿಭೆಯೆಂದೆನ್ನಲಾಗದೋ ಹಾಗೆಯೇ ಕಷ್ಟ ಪಟ್ಟು ಗಿಟ್ಟಿಸಿಕೊಳ್ಳುವ ಪ್ರತಿಭೆಯನ್ನು ಪ್ರತಿಭೆಯೆಂದೆನ್ನಲಾಗದಿರದು! ಹಾಗೆ ಅದನ್ನು ಅದನ್ನು ಗಿಟ್ಟಿಸಿಕೊಳ್ಳಲು ಸವೆಸಬೇಕಾದ ಹಾದಿಯೂ ಸಹ ಬಲು ದುರ್ಘಮ. ಒಮ್ಮೆ ದೊರೆತರೆ ಮೇಲು-ಕೀಳು, ಬಡವ-ಬಲ್ಲಿದ, ಕಳ್ಳ ಕಾಕರ್ಯಾರನ್ನೂ ಸಹ ಅದು ಪರಿಗಣಿಸುವುದಿಲ್ಲ. ಕಾರ್ಯಗಳು ಒಳ್ಳೆವೋ, ಕೆಟ್ಟವೋ ಅಥವಾ ಉಪಯೋಗ ದುಷ್ಪಾರಿಣಾಮಗಳೇನೇ ಇದ್ದರೂ ಲೆಕ್ಕಿಸದೆ ಆಡಿಸುವವನ ಕೈಚಳಕದಲ್ಲಿ ಪ್ರತಿಭೆಯೂ ಕೂಡ ಆಡತೊಡಗುತ್ತದೆ. ವಿಶ್ವೇಶ್ವರೈಯ್ಯ, ಸತ್ಯಜಿತ್ ರೇ, ವಿರಾಟ್ ಕೊಹ್ಲಿ ಅಥವಾ ಧೀರೂಭಾಯಿ ಅಂಬಾನಿಯಂತಹ ಹಲವರೊಟ್ಟಿಗಿದ್ದ/ಇರುವ ವಿಭಿನ್ನ ಹಾಗು ವಿಶಿಷ್ಟ ಪ್ರತಿಭೆಯೇ ಅವರನ್ನು ಇಂದು ದೇಶದ ಇತಿಹಾಸದಲ್ಲಿ ದಂತಕತೆಗಳನ್ನಾಗಿ ಮಾಡಿದೆ. ಅಂತೆಯೇ ವೀರಪ್ಪನ್, ಸದ್ದಾಂ ಹುಸೇನ್, ಒಸಾಮಾ ಬಿನ್ ಲಾಡೆನ್ರಂತಹ ನರರಾಕ್ಷಸರ ಕೈಯ ಬೆಂಕಿಯ ಉಂಡೆಯಂತೆಯೂ ಅದು ಸಾವಿರಾರು ಜನರ ವಂಚನೆ ಹಾಗು ಮಾರಣಹೋಮದಲ್ಲಿ ಪರೋಕ್ಷವಾಗಿಯೂ ಸಹಕರಿಸಿದೆ! ಇಂತಹದ್ದೇ ಪ್ರತಿಭೆಯನ್ನು ಬೆಳೆಸಿಕೊಂಡು ಬಂದ ಹಲವರು ದೇಶದ ನಾನಾ ಜೈಲುಗಲ್ಲಿ ಬಂದಿಯಾಗಿ, ಶಿಕ್ಷೆಗಳೆಲ್ಲವನ್ನೂ ಅನುಭವಿಸಿದರೆ ಕೆಲವರು ಅಲ್ಲಿಯೇ ಕೊಳೆತು ಕೊನೆಯುಸುರೆಳೆದಿದ್ದಾರೆ. ಇನ್ನು ಕೆಲವರು ತಮ್ಮ ಕೊನೆಗಾಲದಲ್ಲಿ ಕುಂಟುತ್ತಾ ಕೊರಗುತ್ತಾ ಹೊರಬರುತ್ತಾರೆ ಮತ್ತೂ ಕೆಲವರು ಮಾತ್ರ ಒಂದಲ್ಲ, ಎರಡಲ್ಲ ಹತ್ತಾರು ಭಾರಿ ಅಂತಹ ಭಾರಿ ಜೈಲುಗಳಿಗೇ ಚಳ್ಳೆಹಣ್ಣನು ತಿನ್ನಿಸಿ ಹೊರ ಓಡಿರುವುದೂ ಉಂಟು. ಅಲ್ಲೂ ಇದ್ದ ಆ ಅಮೂಲ್ಯ ಅಂಶವೇ ಪ್ರತಿಭೆ! ಇಂತಹ ಪ್ರತಿಭೆಗಳ ಮಾಸ್ಟರ್ ಗೇಮ್ಗಳನ್ನು ನಾವು ಹಲವಾರು ಚಿತ್ರಗಳಲ್ಲಿ ಕಂಡು ಬೆರಗಾಗಿದ್ದೇವೆ. ಅಂತಹ ಪ್ರತಿಭೆಯುಳ್ಳವನು ಒಬ್ಬ ವಿಲನ್ ನಂತಾದರೂ ನೋಡುಗರನೇಕರಿಗೆ ಮಾತ್ರ ನಾಯಕಶ್ರೇಷ್ಠ!
ನಟವರ್ಲಾಲ್:

ಸ್ವಾತಂತ್ರ್ಯಪೂರ್ವ ಭಾರತದಿಂದ ಇತ್ತೀಚಿನ ಕೆಲ ದಶಕಗಳವರೆಗೂ ಈ ಒಂದು ಹೆಸರು ತುಂಬಾನೇ ಹೆಸರು ಮಾಡಿದ್ದಿತು. ಕಳ್ಳತನವನ್ನು ಪ್ರತಿಭೆಯೆಂದುಕೊಂಡವರಿಗೆ ಆ ಪ್ರತಿಭೆಗೆ ಕೊಡುವ ಉತ್ಕೃಷ್ಟ ಬಿರುದೇನೋ ಎಂಬುವಂತೆ ನಟ್ವರ್ಲಾಲ್ನ ಹೆಸರನ್ನು ಬಳಸಲಾಗುತ್ತಿತ್ತು. ನೂರಕ್ಕಿಂತ ಹೆಚ್ಚಿನ ಕೇಸುಗಳ ಫಲದಿಂದ 113 ವರ್ಷಗಳ ಸಜೆಗೆ ಒಳಗಾಗಿದ್ದ, 8 ರಾಜ್ಯದ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ, 50ಕ್ಕಿಂತ ಹೆಚ್ಚಿನ ಅನ್ವರ್ಥ ನಾಮಗಳನ್ನು ಒಳಗೊಂಡು, ಟಾಟಾ, ಬಿರ್ಲಾ ಹಾಗು ಅಂಬಾನಿಯರಂತಹ ಹತ್ತಾರು ಉದ್ಯಮಪತಿಗಳಿಗೆ ಮಂಕುಬುದ್ದಿಯನ್ನೆರಚಿ, ರಾಷ್ಟ್ರಪತಿಗಳ ಹಸ್ತಾಕ್ಷರವನ್ನೇ ನಕಲು ಮಾಡಿದ್ದ, ಮೂರು ಬಾರಿ ತಾಜ್ ಮಹಲ್ ಅನ್ನು, ರಾಷ್ಟ್ರಪತಿಭವನ ಅಷ್ಟೇ ಏಕೆ ನಮ್ಮ ಇಡೀ ಪಾರ್ಲಿಮೆಂಟನ್ನೇ ಅಷ್ಟೂ ಸಂಸದರೊಟ್ಟಿಗೆ(!) ವಿದೇಶಿಗರಿಗೆ ಮಾರಿದವನೀತ ಎಂದರೆ ನಮಗೆ ಅಚ್ಚರಿಯಾಗದಿರದು. ಇಂದು ದಿನವಿಡಿ ಅರಚಾಡಿ ಕಚ್ಚಾಡಿ ಸಂತೆಯಂತಾಗುತ್ತಿರುವ ನಮ್ಮ ವ್ಯವಸ್ಥೆಯನ್ನು ಮಾರುವ ಇಂಥವರು ಇಂದಿಗೂ ಇದ್ದಿದ್ದರೆ ಬಹುಶಃ ಒಳಿತಾಗುತ್ತಿತ್ತೇನೋ. ಅದಿರಲಿ. ಇಷ್ಟೆಲ್ಲಾ ಕೃತ್ಯಗಳನ್ನು ಎಸಗಿ ಸಿಕ್ಕಿಹಾಕಿಕೊಂಡ ಈತ ತನ್ನ ನೂರಾರು ವರ್ಷದ ಸೆರೆವಾಸದಲ್ಲಿ ಅನುಭವಿಸಿದ್ದು ಮಾತ್ರ ಹೆಚ್ಚೆಂದರೆ 20 ವರ್ಷಗಳಷ್ಟೇ. ಬಾಕಿ ಅಷ್ಟೂ ಬಾರಿಯೂ ಒಂದಲ್ಲ ಒಂದು ಬಗೆಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣನು ತಿನ್ನಿಸಿ ಪರಾರಿಯಾಗಿರುತ್ತಾನೆ. ಈತನ ಕಟ್ಟ ಕಡೆಯ ಎಸ್ಕೇಪ್ ನೆಡೆದದ್ದು 1996 ರಲ್ಲಿ. ಆತನಿಗಾದ ಬರೋಬ್ಬರಿ 84 ವರ್ಷ!

ಮೋಸಮಾಡಿ ಹಣಗಳಿಸುವ ಹವ್ಯಾಸ ಈತನಿಗೆ ತನ್ನ ಓದಿನ ದಿನಗಳಿಂದಲೇ ಮೈಹತ್ತಿತ್ತು. ಪರಿಚಯದವರೊಬ್ಬರು ಬ್ಯಾಂಕ್ ಡ್ರಾಫ್ಟ್ ಗಳನ್ನು ಬ್ಯಾಂಕಿಗೆ ಜಮಾವಣೆ ಮಾಡಲು ಈತನನ್ನು ಕಳಿಸುವಾಗ ಅವರುಗಳ ಹಸ್ತಾಕ್ಷರಗಳನ್ನು ನೋಡುತ್ತಾ ಪಕ್ಕಾ ಒರಿಜಿನಲ್ ಹಸ್ತಾಕ್ಷರಗಳಂತೆಯೇ ನಕಲು ಮಾಡುವುದನ್ನು ಕಲಿತು ಅಂದಿಗೇ ಸಾವಿರಾರು ರೂಪಾಯಿಗಳನ್ನು ಬ್ಯಾಂಕಿನಿಂದ ಪಡೆದು ಪರಾರಿಯಾದನಾತ. ಅಲ್ಲಿಂದ ಶುರುವಾದ ಈತನ ಕಳ್ಳತನದ ಪ್ರತಿಭೆ, ಒಂದು ಮೂಟೆ ಅಕ್ಕಿಯನ್ನು ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಕಳಿಸಿ ಸಿಗುವ ಬಿಲ್ಲಿನಲ್ಲಿ ಒಂದರ ಮುಂದೆ ಎರಡು ಸೊನ್ನೆಯನ್ನು ಸುತ್ತಿ ತಾನೊಬ್ಬ ದೊಡ್ಡ ಅಕ್ಕಿವ್ಯಾಪಾರೀ ಎಂದು ತೋರಿಸಿಕೊಂಡು ಬ್ಯಾಂಕುಗಳಿಗೆ ಮೋಸ ಮಾಡುವವರೆಗೂ ಮುಂದುವರೆಯಿತು. ಅಲ್ಲದೆ ಕೇಂದ್ರ ಸರ್ಕಾರದ ಉನ್ನತ ಸಚಿವರ PA ಎಂದು ನಂಬಿಸಿ ನಮ್ಮ ಪಕ್ಷದ ರಾಜಕಾರಣಿಗಳಿಗೆ ಉತ್ಕೃಷ್ಟ ಮಟ್ಟದ ವಾಚುಗಳು ಬೇಕೆಂದು ಅವುಗಳನ್ನು ಉದ್ಯಮಿಗಳಿಂದ ಖರೀದಿಸಿ ನಕಲು ಚೆಕ್ ಗಳನ್ನು ಬರೆದು ಪರಾರಿಯಾದ ಕೇಸುಗಳೇ ಇವನ ಹೆಸರಲ್ಲಿ ಹತ್ತಾರಿವೆ. ಅಲ್ಲದೆ ವೇಶ್ಯೆಯರಿಗೆ ಮತ್ತಿನ ಮಾತ್ರೆಯನ್ನು ತಿನ್ನಿಸಿ ಅವರ ಆಭರಣಗಳ ಲೂಟಿ, ರೈಲ್ವೆ ಆರ್ಡರ್ಗಳನ್ನು ಸೃಷ್ಟಿಸಿ ವಸ್ತುಗಳನ್ನು ರಾಜಾರೋಷವಾಗಿ ಪಡೆದು ಪರಾರಿಯಾಗುವಿಕೆ ಎಲ್ಲವು ಅಂದಿನ ಕಾಲಕ್ಕೆ ಕೇಳುಗರಿಗೆ ರೋಮಾಂಚನಕಾರಿಯಾದ ಸುದ್ದಿಗಳಾಗಿದ್ದವು. ಇನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ರ ಹಸ್ತಾಕ್ಷರವನ್ನು ನಕಲು ಮಾಡಿ ದೇಶದ ಭವ್ಯ ಸ್ಮಾರಕಗಳನ್ನು ಮಾರಿರುವ ಕತೆಗಳಂತೂ ಈತ ಹುಟ್ಟಿರುವುದೇ ಫೋರ್ಜರಿ ಮಾಡುವ ಸಲುವಾಗೇ ಎಂದನಿಸದಿರದು.

ಕಾನ್ಪುರ ಜೈಲು:

ತನ್ನ ಕುಕೃತ್ಯಗಳಿಂದ ದೇಶವ್ಯಾಪಿ ಹೆಸರಾಗಿ ಕೊನೆಗೂ ಪೋಲೀಸರ ದಿವ್ಯಹಸ್ತಗಳಿಗೆ ದೊರೆತ ಈತ ಕಾನ್ಪುರ ಜೈಲಿನಲ್ಲಿ ಶಿಕ್ಷೆಯನ್ನನುಭವಿಸಬೇಕಾಯಿತು. ಆದರೆ ತನ್ನ ಮಧ್ಯ ವಯಸ್ಸಿನಲ್ಲಿದ್ದ ನಟ್ವರ್ಲಾಲ್ (ಅಂದಹಾಗೆ ಆತನ ಅಸಲಿ ಹೆಸರು ಮಿಥಿಲೇಶ್ ಕುಮಾರ್ ಶ್ರೀವತ್ಸವ!) ಹೇಗೆ ತಾನೇ ತನ್ನನು ನಾಲ್ಕು ಕೋಣೆಗಳ ರೂಮಿನೊಳಗೆ ಬಂದಿರಿಸಿಕೊಳ್ಳಲು ಸಾಧ್ಯ? ಆತನ ಮನಸ್ಸು ಸದಾ ಹೊರ ಜಗತ್ತನ್ನೇ ಹಾತೊರಿಯುತ್ತಿತ್ತು . ಹೊರಬಂದು ಮತ್ತಷ್ಟು ದೊಡ್ಡ ದೊಡ್ಡ ಕುಳಗಳ ಜೇಬಿಗೆ ಕತ್ತರಿಯನ್ನು ಹಾಕುವ ವಿಧವಿಧವಾದ ಯೋಜನೆಗಳು ಆತನ ತಲೆಯೊಳಗೆ ತಯಾರಾಗಿ ಕಾರ್ಯರೂಪಕ್ಕೆ ಬರಲು ಹವಣಿಸುತ್ತಿದ್ದವು. ಅಂದು ತನ್ನ ಕಿಲಾಡಿ ಬುದ್ದಿಯನ್ನು ಬಳಸಿ ಪೋಲೀಸ್ ಸಮವಸ್ತ್ರ ಒಂದನ್ನು ಕದ್ದ ಈತ ಅದನ್ನು ತನ್ನ ಕೋಣೆಯೊಳಗೆ ಯಾರಿಗೂ ಕಾಣದಂತೆ ಮುಚ್ಚಿಡುತ್ತಾನೆ. ನಂತರ ತನ್ನ ರೂಮಿನ ದ್ವಾರಪಾಲಕರನ್ನು ನಯವಾಗಿ ಪಾಟಯಿಸಿಕೊಂಡಿದ್ದ ಆತ ಹಣ ತುಂಬಿದ ಎರಡು ಬ್ಯಾಗುಗಳನ್ನು ಅವರಿಗೆ ನೀಡಿ ಅಂದು ರಾತ್ರಿ ತನ್ನ ಕೋಣೆಯ ಬಾಗಿಲನ್ನು ಮುಚ್ಚದಂತೆ ಕೇಳಿಕೊಳ್ಳುತ್ತಾನೆ. ಅಷ್ಟು ದೊಡ್ಡ ನೋಟಿನ ಗಂಟನ್ನು ಕಂಡ ದ್ವಾರಪಾಲಕರು ತಮ್ಮ ಕೆಲಸ ಹೋದರೂ ಚಿಂತೆಯಿಲ್ಲವೆಂಬಂತೆ ಆತನ ಬಾಗಿಲನ್ನು ತೆರೆದು ಬಿಟ್ಟರು. ಕದ್ದ ಪೊಲೀಸ್ ಸಮವಸ್ತ್ರವನ್ನು ನೀಟಾಗಿ ಧರಿಸಿ ರಾಜಾರೋಷವಾಗಿ ಹೊರಬಂದ ಅವನನ್ನು ಕಂಡ ಕಾನ್ಸ್ಟೇಬಲ್ ಗಳು ನಮಸ್ಕರಿಸುತ್ತಾ ಜೈಲಿನ ಹೊರಗೇಟನ್ನು ತೆರೆದರು. ಬಹುಶಃ ಆತನ ಆ ಪರ್ಸನಾಲಿಟಿ ಯಾವೊಬ್ಬ ಪೊಲೀಸ್ ಅಧಿಕಾರಿಗೂ ಕಡಿಮೆ ಇದ್ದಿರಲು ಸಾಧ್ಯವಿಲ್ಲ. ಜೈಲಿನಿಂದ ಹೊರಬಂದ ಆತ ನೇರವಾಗಿ ದೂರದಲ್ಲಿದ್ದ ಪೊಲೀಸ್ ಜೀಪಿನೊಳಗೆ ಕೂರುತ್ತಾನೆ. ಆದರೆ ಚಾಲಕನಿಗೂ ಅದೇನು ಮಂಕು ಕವಿದಿತ್ತೋ ಅಥವಾ ಆತನೂ ಈ ಹೊಸ ಅಧಿಕಾರಿಯ ರಗಡ್ ಲುಕ್ಕಿಗೆ ಹೆದರಿಯೋ ಏನೋ ಕೂಡಲೇ ಜೀಪನ್ನು ಶುರುಮಾಡಿ ಆತ ಹೇಳಿದ ಕಡೆ ಚಲಾಯಿಸಿಕೊಂಡು ಹೋಗುತ್ತಾನೆ! ಇತ್ತ ಕಡೆ ಹಣದ ಗಂಟಿನ ಖುಷಿಯಲ್ಲಿದ್ದ ದ್ವಾರಪಾಲಕರು ಗಂಟನ್ನು ಬಿಚ್ಚಿ ನೋಡಿದರೆ ಕಾಣಸಿಕ್ಕ ರಾಶಿ ರಾಶಿ ಬಿಳಿಯ ಹಾಳೆಗಳನ್ನು ನೋಡಿ ಎದೆಬಡಿದುಕೊಂಡು ಅಳತೊಡಗಿದರು. ದೇಶದ ಇತಿಹಾಸದಲ್ಲಿ ಇಂದಿಗೂ ದಿ ಗ್ರೇಟ್ ಎಸ್ಕೇಪ್ ಗಳ ಸಾಲಿನಲ್ಲಿ ನಟ್ವರ್ಲಾಲ್ನ ಈ ಸಾಹಸ ಮೊದಲಾಗಿ ಬರುತ್ತದೆ.

ತನ್ನ ಜೀವನವೆಲ್ಲ ಕಳ್ಳ ಪೊಲೀಸ್ ಆಟದಲ್ಲಿಯೇ ಕಳೆದ ಈತ ತನ್ನ ಎಂಬತ್ತರ ವಯಸ್ಸಿನಲ್ಲಿ ಇಂದೋರ್ ಜೈಲಿನಲ್ಲಿ ಸೆರೆಸಿಕ್ಕು ಕಾಲವನ್ನು ತಳ್ಳುತ್ತಿರುತ್ತಾನೆ. ಆದರೆ ತನ್ನ ಜೀವಮಾನದ ಪಾಪವನ್ನೆಲ್ಲ ಹೊತ್ತುಕೊಂಡು ಸುತ್ತುತ್ತಿದ್ದ ಈ ಹಣ್ಣು ಹಣ್ಣು ಮುದುಕನನ್ನು ಮಹಾರಾಷ್ಟ್ರ ಪೊಲೀಸರು ಬಾಕಿ ಉಳಿದಿದ್ದ ಹಲವಾರು ಕೇಸುಗಳ ಸಲುವಾಗಿ 1996 ರಲ್ಲಿ ಮುಂಬೈಗೆ ಕರೆಸಿಕೊಳ್ಳುತ್ತಾರೆ. ನಡೆಯಲೂ ಶಕ್ತವಿರದ ಮುದುಕ ನಟ್ವರ್ಲಾಲ್ ವೀಲ್ ಚೇರಿನ ಮೂಲಕ ಓಡಾಡುತ್ತಿರುತ್ತಾನೆ. ಮುಂಬೈಗೆ ಬಂದ ಆತ ತನಗೆ ಕಿಡ್ನಿ ಸಮಸ್ಯೆ ಇದೆ ಎನುತ ಆಸ್ಪತ್ರೆಗೆ ಸೇರಿಕೊಳ್ಳುವ ನೆಪವೊಡ್ಡಿ ಆಸ್ಪತ್ರೆಗೆ ತೆರಳುತ್ತಾನೆ. ಇಬ್ಬರು ಕಾನ್ಸ್ಟೇಬಲ್ಗಳನ್ನು ಜೊತೆಮಾಡಿ ನಡೆದಾಡಲು ಶಕ್ಯವಿರದ ಮುದುಕನೊಬ್ಬನ್ನು ಆಸ್ಪತ್ರೆಗೆ ಕಳುಹಿಸುತ್ತಾರೆ ಅಲ್ಲಿನ ಅಧಿಕಾರಿಗಳು. ಮಾರ್ಗಮಧ್ಯದಲ್ಲಿ ದೆಹಲಿಯ ರೈಲ್ವೆ ಸ್ಟೇಷನ್ ನಲ್ಲಿ ತನ್ನೊಟ್ಟಿಗಿದ್ದ ಕಾನ್ಸ್ಟೇಬಲ್ ರಿಗೆ ಕುಡಿಯಲು ಚಹಾವನ್ನು ತರುವಂತೆ ಹೇಳಿ ಅಲ್ಲಿಯೂ ವಿಸ್ಮಯವೆನ್ನುವ ರೀತಿ ಈತ ಪರಾರಿಯಾಗುತ್ತಾನೆ. ಅದೇ ಆತನ ಕೊನೆಯ ಸುದ್ದಿ. ಅಲ್ಲಿಂದ ಮುಂದೆ ನಟ್ವರ್ಲಾಲ್ ಯಾರಿಗೂ ಎಲ್ಲಿಯೂ ಸಿಗುವುದಿಲ್ಲ. ಆದರೆ ಆತನ ದಂತಕಥೆಗಳು ಮಾತ್ರ ಇಂದಿಗೂ ಜೀವಂತವಾಗಿವೆ. ಅಲ್ಲದೆ ಆತನ ಸಾವೂ ಕೂಡ ಕೊನೆಗೆ ಪ್ರಶ್ನೆಯಾಗಿಯೇ ಉಳಿಯಿತು. ಕಾರಣ 2009ರಲ್ಲಿ ಆತನ ವಕೀಲ ನಟ್ವರ್ಲಾಲ್ ಆ ವರ್ಷ ಸತ್ತನೆಂದು ಆತನ ವಿರುದ್ದವಿದ್ದ ನೂರಾರು ಕೇಸುಗಳನ್ನು ತೆರವುಗೊಳಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ನಟ್ವರ್ಲಾಲ್ನ ತಮ್ಮ 1996 ರಲ್ಲಿಯೇ ಆತ ಸತ್ತನೆಂದು ತಾನಾಗಿಯೇ  ಖುದ್ದಾಗಿ ಆತನ ಅಂತ್ಯಕ್ರಿಯೆಯನ್ನು  ಮಾಡಿರುವುದಾಗಿಯೂ ಹೇಳುತ್ತಾನೆ. 1996 ರಲ್ಲಿಯೇ ಆತ ಸತ್ತರೆ 2009 ರಲ್ಲಿ ಆತನ ವಿರುದ್ದದ ಕೇಸುಗಳನ್ನು ಖುಲಾಸೆ ಮಾಡಬೇಕೆನ್ನುವ ವಕೀಲರ ವಾದದ ಪ್ರಕಾರ ಆತ ಅಂದಿಗೂ ಜೀವಂತವಿದ್ದನು ಎಂಬ ಸಂಶಯ ಮಾತ್ರ ಬಾರದಿರದು.

ಹೀಗೆ ಪ್ರತಿಭೆ ಎಂಬ ಹುಚ್ಚು ಕುದುರೆಯ ಓಟದ ಹಾದಿ ಕೇವಲ ಅದನ್ನು ಓಡಿಸುವವನ ಮನದಲ್ಲಿ ಮೂಡಿದಂತಿರುತ್ತದೆ. ಅದೇ ಪ್ರತಿಭೆಯನ್ನು ಸಮಾಜ ಕಟ್ಟುವ ಕೆಲಸಗಳಿಗೆ ಬಳಸಿಕೊಂಡಿದ್ದರೆ ನಟ್ವರ್ಲಾಲ್ನ ಹೆಸರನ್ನು ಇಂದು ಬೇರೊಂದು ರೀತಿಯಾಗಿಯೇ ಬಳಸಿಕೊಳ್ಳಲಾಗುತ್ತಿತ್ತು. ತನ್ನನ್ನು ದೇಶೀ ರಾಬಿನ್ ಹುಡ್ ಎಂದೇ ಕರೆದುಕೊಂಡು ಮೆರೆಯುತ್ತಿದ್ದ ಈತ ಒಂದು ಉತ್ಕೃಷ್ಟ ಪ್ರತಿಭೆಯನ್ನು ಪೋಲುಮಾಡಿದ ಉದಾಹರಣೆಯಾಗಿ ಮಾತ್ರವಷ್ಟೇ ಇತಿಹಾಸದಲ್ಲಿ ಕಾಣಸಿಗುತ್ತಾನೆ. ಇಂಥಹದ್ದೇ ಚಾಣಾಕ್ಷ ಬುದ್ದಿಯ ಮತ್ತೊಬ್ಬ ದೇಶದ ಅತಿ ಸುರಕ್ಷಿತ ಜೈಲೆಂಬ ಹೆಗ್ಗಳಿಕೆಗೆ ಪಾತ್ರವಾಗುವ ತಿಹಾರ್ ಜೈಲಿನಿಂದ ಪಾರಾರಿಯಾಗಿ ಪೋಲಿಸರ ತಲೆತಗ್ಗುವಂತೆ ಮಾಡುತ್ತಾನೆ. ನಂತರ ಹಾಗೂ ಹೀಗೋ ಸೆರೆಸಿಕ್ಕ ಆತ ತಾನು ತಪ್ಪಿಸಿಕೊಳ್ಳುವುದು ಹಾಗು ಮತ್ತೊಮೆ ಹೀಗೆ ಸೆರೆಸಿಕ್ಕುವುದು ಎಲ್ಲವೂ ‘ಪಾರ್ಟ್ ಆಫ್ ಮೈ ಪ್ಲಾನ್’ ಎಂದು ವಿಚಾರಣಾಧಿಕಾರಿಗಳು ಕಕ್ಕಾಬಿಕ್ಕಿಯಾಗುವಂತೆ ಮಾಡುತ್ತಾನೆ. ಆತ ಜೈಲಿನಿಂದ ತಪ್ಪಿಸಿಕೊಂಡಿದ್ದೇಕೆ, ತಪ್ಪಿಸಿಕೊಂಡು ಮತ್ತೊಮ್ಮೆ ಸೆರೆ ಸಿಕ್ಕಿದಾದರೂ ಏತಕ್ಕೆ? ವಿದೇಶಿ ಪೋರನ ಆ ದೇಶೀ ಎಸ್ಕೇಪ್ ಸ್ಟೋರಿ ಮುಂದಿನ ಅಂಕಣದಲ್ಲಿ…

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments