ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 6, 2018

1

ಅರುಣ್ ನಂದಗಿರಿಯ ಆನಂದದ ಗೆರೆಗಳು!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

Arun Nandagiri-2ಮಿತ್ರ ಅರುಣ್ ನಂದಗಿರಿ ವಿಧಿವಶರಾದರು ಎಂದು ಕೇಳಿ ಬಹಳ ದುಃಖವಾಯಿತು. ‘ Smile is a small curve which makes many things straight’ ಅನ್ನೋ ಒಂದು ಮಾತಿದೆ. ಅಂದ್ರೆ ನಗು ಎನ್ನುವ ಒಂದು ಸಣ್ಣ ವಕ್ರಗೆರೆ ಬದುಕಿನ ಎಷ್ಟೋ ಸಂಗತಿಗಳನ್ನು, ಡೊಂಕುಗಳನ್ನ ನೇರ ಮಾಡುತ್ತದೆ ಅಂತ. ಸ್ನೇಹಿತ ಅರುಣ್ ನಂದಗಿರಿ ತನ್ನ ಮೂಳೆಗಳೆಲ್ಲಾ ವಕ್ರವಾಗಿದ್ದರೂ ಸಹ ಜನರ ಬದುಕಿನ ಅಸಂಬದ್ಧತೆಗಳನ್ನ ತನ್ನ ನಗೆ ಗೆರೆಗಳ ಮೂಲಕ ನೇರವಾಗಿಸುವ ಛಲದಂಕ ಮಲ್ಲರಾಗಿದ್ದರು.

ಅರುಣ್ ನಂದಗಿರಿ ನನಗೆ ಪತ್ರಮುಖೇಣ ಪರಿಚಯವಾದಾಗ ತಮ್ಮ ಬಗ್ಗೆ ಏನೊಂದೂ ಹೇಳಿಕೊಂಡಿರಲಿಲ್ಲ. ಎಲ್ಲರಂತೆ ತಾವೊಬ್ಬ ವ್ಯಂಗ್ಯ ಚಿತ್ರಕಾರ ಎಂದಷ್ಟೇ ಪರಿಚಯಿಸಿಕೊಂಡಿದ್ದರು. ಇವರಲ್ಲಿ ಅಂತಹ ಹೆಚ್ಚುಗಾರಿಕೆ ಇದೆ ಎಂದು ನನಗೂ ಅನಿಸಿರಲಿಲ್ಲ. ಆ ನಂತರ ಪತ್ರಿಕೆಯೊಂದರಲ್ಲಿ ಅರುಣ್‍ರವರ ಬಗ್ಗೆ ಪರಿಚಯ ಲೇಖನವೊಂದು ಪ್ರಕಟವಾದಾಗ ಅದರಲ್ಲಿದ್ದ ಈ ವಾಮನ ಮೂರ್ತಿಯ ಭಾವಚಿತ್ರ ಕಂಡು ದಂಗುಬಡಿದು ಹೋದೆ. ದಿನದ AN-524 ಗಂಟೆಯೂ ಹಾಸಿಗೆಯ ಮೇಲೇ ಮಲಗಿರುವ ಈ ವ್ಯಕ್ತಿ ನಗೆಚಿತ್ರಗಳನ್ನು ಹೇಗೆ ರಚಿಸಬಲ್ಲ ಎಂದು ಅಚ್ಚರಿಯಾಯಿತು. ಅರುಣ್ ಅವರ ಅಸಹಾಯಕ ಸ್ಥಿತಿಯ ಬಗ್ಗೆ ತೀವ್ರ ವಿಷಾದ ಎನಿಸಿತು. ಅವರಿಗೆ ತಕ್ಷಣ ಫೋನಾಯಿಸಿದೆ. ನಿಮ್ಮ ಸ್ಥಿತಿಯ ಬಗ್ಗೆ ನೀವೇಕೆ ನನಗೆ ಏನೂ ಹೇಳಲಿಲ್ಲ ಎಂದು ನಯವಾಗಿ ಆಕ್ಷೇಪಿಸಿದೆ. ಅದಕ್ಕವರು ಕೊಟ್ಟ ಉತ್ತರ : ‘ ಅಣ್ಣ, ನಾವು ಬೇರೆಯವರಿಗೆ ನಗುವನ್ನು ಮಾತ್ರ ಹಂಚಬೇಕು. ನೋವನ್ನು ಹಂಚಬಾರದು. ಇಲ್ಲಿಯವರೆಗೆ ನಾನು ಮಾಡಿರೋದೂ ಅದನ್ನೇ! ಜನ ನನ್ನ ಬಗ್ಗೆ ಅನುಕಂಪ ಪಡೋದು ಬೇಡ, ಅವರು ನನ್ನನ್ನ ಪ್ರೀತಿಸಬೇಕು, ನನ್ನ ವ್ಯಂಗ್ಯಚಿತ್ರಗಳು ಅವರ ದುಃಖ, ದುಮ್ಮಾನಗಳನ್ನ ಹಗುರಾಗಿಸಬೇಕು, ನಾನು ಹೇಗಿದೀನಿ ಅನ್ನೋದು ಮುಖ್ಯ ಅಲ್ಲ‘. ಅರುಣ್ ಅವರ ಮಾತು ಕೇಳಿ ನನಗೆ ಅವರ ಬಗ್ಗೆ ತುಂಬಾ ಅಭಿಮಾನ, ಗೌರವ ಮೂಡಿತು. ಬಾಯ್ತುಂಬಾ ಅಣ್ಣ ಎಂದು ಕರೆದ ಅರುಣ್ ಅವತ್ತಿನಿಂದ ನನ್ನ ಸಹೋದರನಾದರು.

AN-1ಅರುಣ್ ನೋಡಿದಾಕ್ಷಣ ನನಗೆ ನೆನಪಿಗೆ ಬಂದದ್ದು ಗತಿಸಿದ ಮಿತ್ರ ಟಿ.ಎಂ.ಷಡಕ್ಷರಿ. 80ರ ದಶಕದ ಕೊನೆಯಲ್ಲಿ ಮತ್ತು 90 ದಶಕದ ಪ್ರಾರಂಭದಲ್ಲಿ ಗೆಳೆಯ ಷಡಕ್ಷರಿ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತವೆನಿಸುವ ಕೊಡುಗೆ ನೀಡಿದ್ದ. ಸತತ 10 ವರ್ಷಕ್ಕೂ ಹೆಚ್ಚು ಕಾಲ ‘ಕಾಲು ನುಂಗುವ ಕಾಯಿಲೆ’ ಯಿಂದ ನರಳುತ್ತಾ ತಿಪಟೂರಿನ ಜನರಲ್ ಆಸ್ಪತ್ರೆಯ ಜನರಲ್ ವಾರ್ಡ್‍ನಲ್ಲಿ ಅಂಗಾತ ಮಲಗಿಯೇ ತನ್ನ ವೇದನೆಗಳಿಗೆ ಕಾವ್ಯ ರೂಪ ನೀಡಿದ್ದ. ಬಿಳಿಗೆರೆ ಕೃಷ್ಣಶಾಸ್ತ್ರಿಗಳು ಅವನ ‘ಮೌನಸ್ಪಂದನ’ ಕವನ ಸಂಕಲನವನ್ನು ತಾವೇ ಮುಂದೆ ನಿಂತು ಪ್ರಕಟಿಸಿದ್ದರು. ನಾನು ಅವನನ್ನು ಭೇಟಿ ಮಾಡಲು ಹೋದಾಗಲೆಲ್ಲ ಅವನಿಗೆ ಖುಷಿಯೋ ಖುಷಿ. ಅದಕ್ಕೆ ಮುಖ್ಯ ಕಾರಣ, ನಾನು ಹಾಸ್ಯ ಬರೆಯುತ್ತೇನೆಂದು. ‘ಸರ್! ಇತ್ತೀಚಿನ ನಿಮ್ಮ ಹಾಸ್ಯ ಓದಿದೆ, ತುಂಬಾ ಖುಷಿಯಾಯಿತು ಸರ್, ನಗು ಬರೋದು ಏನಾದರೂ ಓದುತ್ತಿದ್ದರೆ ನನ್ನ ನೋವು ಅರ್ಧ ಕಮ್ಮಿಯಾಗುತ್ತೆ ಅನ್ನುತ್ತಿದ್ದ. ಯಾರು ಪ್ರಶಸ್ತಿ ಕೊಡಲಿ AN-6ಬಿಡಲಿ, ನನ್ನ ಬರಹಗಳು ಒಬ್ಬ ಸ್ನೇಹಿತನ ಮನಸ್ಸಿಗೆ ಒಂದಿಷ್ಟು ಮುದ ಕೊಡುತ್ತದಲ್ಲ, ನಾನು ಬರೆದದ್ದಕ್ಕೂ ಸಾರ್ಥಕವಾಯಿತು ಎಂದುಕೊಂಡಿದ್ದೆ. ಅರುಣ್ ಪರಿಚಯವಾದ ಮೇಲೆ ನನ್ನ ಸ್ನೇಹಿತ ನನಗೆ ವಾಪಸ್ ಸಿಕ್ಕಿದ ಎಂದು ನಿಜಕ್ಕೂ ಖುಷಿಯಾಗಿತ್ತು. ಷಡಕ್ಷರಿಗೂ ಅರುಣ್‍ರವರಿಗೂ ಇರುವ ಒಂದು ವ್ಯತ್ಯಾಸವೆಂದರೆ ಷಡಕ್ಷರಿಯ ಬಹುತೇಕ ಕವನಗಳಲ್ಲಿ ಬದುಕು ಮತ್ತು ವ್ಯವಸ್ಥೆಯ ಬಗ್ಗೆ ತೀವ್ರ ವಿಷಾಧವಿತ್ತು, ಒಂದು ರೀತಿ ಬಂಡಾಯದ ಧ್ವನಿಯಿತ್ತು. ಅದರೆ ಅರುಣ್ ಗೆರೆಗಳಲ್ಲಿ ಪುಟಿಯುವ ಜೀವನೋತ್ಸಾಹವಿತ್ತು. ವ್ಯವಸ್ಥೆಯ ಅಂಕು ಡೊಂಕನ್ನು ಕಂಡು ವ್ಯಂಗ್ಯವಾಡುವ ಮನಸ್ಸಿತ್ತು, ಚಿಕಿತ್ಸಕ ಕಣ್ಣಿತ್ತು. ಮೂಲತಃ ಹಾಸ್ಯ ಬರಹಗಾರನಾದ ನನಗೆ ಇದು ನಿಜಕ್ಕೂ ತುಂಬಾ ಖುಷಿ ನೀಡಿದ ಸಂಗತಿ.

AN-2ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಲು ಮತ್ತು ನಿರಂತರವಾಗಿ ತನ್ನ ಛಾಪು ಮೂಡಿಸಲು ವ್ಯಕ್ತಿಯೊಬ್ಬ ಬದಲಾಗುತ್ತಿರುವ ಪರಿಸರ,ಸಾಂಸ್ಕೃತಿಕ ವಾತಾವರಣ ಮತ್ತು ಹೊಸ ಅವಿಷ್ಕಾರಗಳೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿರಬೇಕಾಗುತ್ತದೆ. ಇದಕ್ಕೆ ಚಲನಶೀಲತೆ, ಅನುಭವ ಮತ್ತು ಅಧ್ಯಯನ ಆಧಾರವಾಗುತ್ತದೆ. ಆದರೆ ಅರುಣ್‍ರವರು ಮಲಗಿದ್ದಲ್ಲಿಂದಲೇ ಪ್ರತಿದಿನ ಅಪ್‍ಡೇಟ್ ಆಗುವ ಪರಿಯಂತೂ ತುಂಬಾ ಆಶ್ಚರ್ಯ ಮೂಡಿಸುತ್ತಿತ್ತು. ಮಾಮೂಲಿ ಸಾಂಸಾರಿಕ ವಿಷಯಗಳಿಂದ ಹಿಡಿದು ಅಮೇರಿಕಾದ ಆರ್ಥಿಕ ಹಿಂಜರಿತ, ಒಲಿಂಪಿಕ್ಸ್, ಮಹಾಸ್ಪೋಟ, ಭಯೋತ್ಪಾದನೆ, ಚಂದ್ರಯಾನ, ಹೀಗೆ ಹತ್ತು ಹಲವು ಜಾಗತಿಕ ವಿದ್ಯಮಾನಗಳನ್ನೂ ತಮ್ಮ ವ್ಯಂಗ್ಯಚಿತ್ರದೊಳಗೆ ಎಳೆದುತರುವುದು ಅವರ ಬೌದ್ದಿಕ ದಾಹಕ್ಕೆ ಸಾಕ್ಷಿಯಾಗುತ್ತು. ಹಾಗೆಯೇ ದೇಶೀಯ ಆಗುಹೋಗುಗಳನ್ನೂ ತಮ್ಮ ಗೆರೆಗಳಲ್ಲಿ ಹಿಡಿದಿಡುವುದರಲ್ಲೂ ಅವರು ಎತ್ತಿದ ಕೈ. ರಾಜಕೀಯದಿಂದ ಹಿಡಿದು ಕನ್ನಡದ ಶಾಸ್ರೀಯ ಸ್ಥಾನ ಮಾನ ನೀಡಿಕೆ, ರಿಯಾಲಿಟಿ ಶೋಗಳವರೆಗೆ ಅವರ ಚಿತ್ರಗಳು ಅಧಿಕೃತವಾಗಿ ಮಾತಾಡುತ್ತಿದ್ದವು,ಕಚಗುಳಿಯಿಡುತ್ತಿದ್ದವು, ಹಿಂದೆಯೇ ಚಿಂತನೆಗೆ ಹಚ್ಚುತ್ತಿದ್ದವು.

AN-3ಅರುಣ್ ಅವರ ನಗೆಚಿತ್ರಗಳು,ಅವರ ಸಾಹಸಮಯ ಜೀವನಗಾಥೆ ನೋಡಿದಾಗ ಈ ಸಮಾಜ ಅವರಿಂದ ಕಲಿಯುವುದು ಬಹಳಷ್ಟಿದೆ ಎನಿಸುತ್ತದೆ. ಶೋಷಿತರ ಎದೆಬಿರಿಯುವ ಆಕ್ರಂದನಕ್ಕೆ ನಾವು ಕಿವುಡಾಗಿದ್ದೇವೆ. ಮಾನವೀಯ ಕರೆಗಳಿಗೆ ಸ್ಪಂದಿಸದಷ್ಟು ಹೃದಯಶೂನ್ಯರಾಗಿದ್ದೇವೆ. ಭ್ರಷ್ಟಾಚಾರ, ಅನ್ಯಾಯ, ಲಂಚಕೋರತನದ ವಿರುದ್ಧ ಧನಿ ಎತ್ತಲಾಗದೆ ಮೂಗರಾಗಿದ್ದೇವೆ. ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಾಣದಷ್ಟು ಕುರುಡರಾಗಿದ್ದೇವೆ. ನಾಡಿಗಾಗಿ, ದೇಶಕ್ಕಾಗಿ ಕೈ ಎತ್ತಲಾರದಷ್ಟು ಹೆಳವರಾಗಿದ್ದೇವೆ. ಇದಕ್ಕಿಂತ ಅಂಗವೈಕಲ್ಯ ಬೇಕಾ? ಆದರೆ ಅರುಣ್ ಚಿತ್ರಗಳು ಈ ಎಲ್ಲದರ ಬಗ್ಗೆ ಧ್ವನಿಮೂಡಿಸುತ್ತಿದ್ದವು. ಮಲಗಿದಲ್ಲಿಂದಲೇ ಅರುಣ್ ಹೊಸ ಕಾಯಕಲ್ಪಕ್ಕೆ ತಮ್ಮ ಗೆರೆಗಳ ಮೂಲಕವೇ ಸೂಚ್ಯವಾಗಿ ಕರೆನೀಡುತ್ತಿದ್ದರು. ದೈವಕೃಪೆ ಇದ್ದಲ್ಲಿ ಕುಂಟ ಬೆಟ್ಟ ಹತ್ತುತ್ತಾನೆ, ಮೂಕ ಮಾತಾಡುತ್ತಾನೆ’ ಎಂಬುದಕ್ಕೆ ನಂದ ‘ಗಿರಿ’ ಸಾಕ್ಷಿಯಾಗಿದ್ದರು.

AN-4ಅರುಣ್ ತಮ್ಮ ಕೃತಿ ‘ಅರುಣ್ ಕಂಡ ಪ್ರಪಂಚ’ ದ ಮೂಲಕ ಹೊಸ ಇತಿಹಾಸ ಬರೆದಿದ್ದರು. ಆರ್.ಕೆ.ಲಕ್ಷಣ್‍ರವರ ‘who said it ? ‘ ವ್ಯಂಗ್ಯಚಿತ್ರಗಳಲ್ಲಿರುವ ಮೊನಚು ಅರುಣ್ ಅವರ ಗೆರೆಗಳಲ್ಲಿದ್ದವು. ವ್ಯಂಗ್ಯ ಚಿತ್ರಗಳ ಸಂಕಲನ ಹೊರತರುವ ಮೂಲಕ ನಾಡಿಗ್, ಜೇಮ್ಸ್‍ವಾಜ್, ಪ್ರಸನ್ನ, ಮುಂತಾದ ಪ್ರಖ್ಯಾತರ AN-7ಸಾಲಿಗೆ ಸೇರಿದ್ದರು. ಅರುಣ್ ಅವರ ಈ ನಗಿಸುವ ಕಾಯಕ ನಿರಂತರವಾಗಿ ಹೀಗೇ ಸಾಗಬೇಕಿತ್ತು. ಅವರೂ ನಗುನಗುತ್ತಾ ನೂರ್ಕಾಲ ಬಾಳಬೇಕಿತ್ತು. ಅರುಣ್ ನಂದಗಿರಿ ಎಂದೆಂದಿಗೂ ನಂದದ ಆನಂದ ಗಿರಿಯಾಗಬೇಕಿತ್ತು. ಆದರೆ ಅವರು ಸುಳಿವೇ ಕೊಡದೆ ನಮ್ಮನ್ನು ಅಗಲಿ ಹೋಗಿದ್ದಾರೆ. ಅವರಿಗೆ ಸದ್ಗತಿ ಸಿಗಲಿ ಎಂದು ಹಾರೈಸುವೆ.

1 ಟಿಪ್ಪಣಿ Post a comment
  1. Bindu
    ಡಿಸೆ 7 2018

    ನೂರಾರು ಜನರ ಬದುಕಿಗೆ ಮಾದರಿಯಾಗಬಲ್ಲ ಇಂತಹವರು ನಮ್ಮ ಮಧ್ಯದಲ್ಲೇ ಇದ್ದರೂ ನಮಗೆ ಇವರ ಬಗ್ಗೆ ತಿಳಿದಿರಲಿಲ್ಲ. ಇವರ ಬಗ್ಗೆ ಎಲ್ಲರಿಗೂ ತಿಳಿಸಿದ್ದಕ್ಕೆ ಧನ್ಯವಾದಗಳು. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ. ಅವರ ಬಂಧು ಬಾಂಧವರಿಗೆ ಈ ದುಃಖವನ್ನು ಎದುರಿಸುವ ಶಕ್ತಿ ಯನ್ನು ಕೊಡಲಿ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments