ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 18, 2018

ಸುದ್ದಿಮನೆಯ ಸ್ವಗತಗಳು

‍ನಿಲುಮೆ ಮೂಲಕ

– ಹುಳಗೋಳ ನಾಗಪತಿ ಹೆಗಡೆ
ಸಹಾಯಕ ಶಿಕ್ಷಕ
ಪಿ.ಎಮ್. ಹೈಸ್ಕೂಲ್
ಅಂಕೋಲಾ – 581314
ಉತ್ತರ ಕನ್ನಡ ಜಿಲ್ಲೆ

newspaper-editor-clipart-1ಬದುಕಿನಲ್ಲಿ ಹಾಸ್ಯ ಸನ್ನಿವೇಶಗಳು, ವಿನೋದ ಪ್ರಸಂಗಗಳು ಕಾಣದ ಕ್ಷೇತ್ರಗಳೇ ಇಲ್ಲ. ಈ ಮಾತಿಗೆ ಸುದ್ದಿಮನೆ ಅಂದರೆ ವರ್ತಮಾನ ಪತ್ರಿಕೆಗಳ ಮುದ್ರಣಾಲಯಗಳೂ ಹೊರತಲ್ಲ. ಅತ್ಯಂತ ಜಾಗರೂಕತೆಯಿಂದಲೇ ಕಾರ್ಯನಿರ್ವಹಿಸಿದರೂ ಸಿಬ್ಬಂದಿಗಳ ತಪ್ಪು ಗ್ರಹಿಕೆಯಿಂದಲೋ, ಅಜಾಗರೂಕತೆಯಿಂದಲೋ ಇಲ್ಲಿಯೂ ಕೆಲವು ಅಧ್ವಾನಗಳು ನಡೆದುಹೋಗುತ್ತವೆ. ಅವುಗಳಲ್ಲಿ ಕೆಲವು ಗಂಭೀರವಾದ ಪರಿಣಾಮವನ್ನುಂಟು ಮಾಡಿ ಕೋರ್ಟಿನ ಮೆಟ್ಟಿಲು ಹತ್ತಿಸಿ ಹೊಗೆಯಾಗಿ ಕಾಡುವುದೂ ಉಂಟು. ಇನ್ನೂ ಕೆಲವು ನಗೆಯಾಗಿ ಹಾರಿಹೋಗುವುದೂ ಉಂಟು.

ಈಗ ಸುಮಾರು 20-25 ವರ್ಷಗಳ ಹಿಂದೆ ನಾನೊಂದು ಸ್ಥಳೀಯ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಉಪಸಂಪಾದಕನೆಂದರೆ ಕೇವಲ ಉಪಸಂಪಾದಕನಲ್ಲ, ಉಪಸಂಪಾದಕ ಕಂ ವರದಿಗಾರ ಕಂ ಪ್ರಸರಣ ವಿಭಾಗದ ಮುಖ್ಯಸ್ಥ ಕಂ ಜಾಹೀರಾತು ವಿಭಾಗದ ಮುಖ್ಯಸ್ಥ ಕಂ ಪ್ರೂಫ್ ರೀಡರ್ ಕೆಲವೊಮ್ಮೆ ಕಂ ಕಂಪೋಸರ್! ಆಫ್‍ಸೆಟ್ ಪ್ರಿಂಟಿಂಗ್ ಆಗತಾನೇ ಕಾಲಿಡುತ್ತಿದ್ದ ಕಾಲ. ಸಣ್ಣ ಪ್ರಮಾಣದ ಪತ್ರಿಕೆಗಳಿನ್ನೂ ಅಚ್ಚಿನ ಮೊಳೆ ಜೋಡಿಸುವ ಕ್ರೆಡಲ್ ಮಷೀನುಗಳಲ್ಲಿಯೇ ನಡೆಯುತ್ತಿದ್ದವು. ನಮ್ಮ ಪತ್ರಿಕೆಯದೂ ಅಂತಹುದೇ ಒಂದು ಮಷೀನ್ ಇತ್ತು. ಅದಕ್ಕೆ ಪ್ರಿಂಟರ್, ಇಂಕು, ನ್ಯೂಸ್‍ಪ್ರಿಂಟು, ಅಚ್ಚಿನ ಮೊಳೆ, ಫೋಟೊ ಬ್ಲಾಕು ಇತ್ಯಾದಿಗಳನ್ನು ಹೊಂದಿಸುವುದರಲ್ಲಿಯೇ ನಾವು ಮುಪ್ಪಾಗಿಬಿಡುತ್ತಿದ್ದೆವು. ಹರಸಾಹಸಪಟ್ಟು ಪ್ರತಿದಿನ ಬೆಳಗಿನಜಾವ ಪತ್ರಿಕೆಯ ಮುದ್ರಣ ಕಾರ್ಯ ಮುಗಿದು ಬಂಡಲ್‍ಗಳನ್ನು ಕಟ್ಟಿ ಬಸ್ಸುಗಳಿಗೆ ಹಾಕಿ ಬರುವ ವೇಳೆಗೆ ದೇಹವು ಬಸವಳಿದು ಮುಖಮೂತಿಯೆಲ್ಲ ಅಕ್ಷರಶಃ ಕಪ್ಪಾಗಿ ಹೋಗಿರುತ್ತಿತ್ತು! (ಕೈಗಳಿಗೆ ಅಂಟಿಕೊಂಡಿದ್ದ ಅಚ್ಚಿನ ಮೊಳೆಯ ಮಸಿ ಇನ್ನೆಲ್ಲಿ ಹೋಗಬೇಕು?!) ತದನಂತರ ಬಂಡಲ್ಲುಗಳು ತಲುಪಿಲ್ಲವೆಂದೋ, ಬಸ್ಸು ಬರಲಿಲ್ಲವೆಂದೋ, ಹೊರಟುಹೋಯಿತೆಂದೋ ಎಂದೊರಲುವ ದೂರವಾಣಿ ಕರೆಗಳು ಬೇರೆ! ಇಷ್ಟೆಲ್ಲ ಮಾಡಿದರೂ ನಮಗೆ ಆಗ ದೊರೆಯುತ್ತಿದ್ದ ಸಂಬಳವೆಷ್ಟು ಗೊತ್ತೇ? ತಿಂಗಳಿಗೆ ಐನೂರು, ಸಂಪಾದಕರು ಖುಷಿಯ ಮೂಡಿನಲ್ಲಿದ್ದರೆ ಆರುನೂರು! ಅದೂ ಕಂತಿನ ರೂಪದಲ್ಲಿ!
ಸಂಗತಿ ಹೀಗಿರಲಾಗಿ ಒಂದು ದಿನ ಪತ್ರಿಕೆಯಲ್ಲಿ ಬರಬೇಕಾದ ಸುದ್ದಿ, ಜಾಹೀರಾತು ಇತ್ಯಾದಿಗಳ ಸಂಯೋಜನೆಯಲ್ಲಿ ತೊಡಗಿದ್ದೆ. ಐದಾರು ಜನರ ಗುಂಪೊಂದು ಏರುಧ್ವನಿಯಲ್ಲಿ ಮಾತನಾಡುತ್ತ ಕಚೇರಿಯ ಒಳಗೇ ಬಂದಿತು. ಕೈಯಲ್ಲಿ ಅಂದಿನ ಪತ್ರಿಕೆಯಿದೆ, ನಮ್ಮದೇ ಪತ್ರಿಕೆ! ಕೋರ್ಟಿಗೆ ಹೋಗುತ್ತೇವೆ, ಮೊಕದ್ದಮೆ ಹೂಡುತ್ತೇವೆ ಎಂದೆಲ್ಲ ಹಾರಾಡತೊಡಗಿದರು. ಅವರನ್ನೆಲ್ಲ ಕುಳ್ಳಿರಿಸಿ ವಿಷಯದ ಮಜಕೂರು ತಿಳಿದಾಗ ಮೂರ್ಛೆಹೋಗುವ ಸರದಿ ನನ್ನದಾಗಿತು. ಅಂದಿನ ಲೀಡ್‍ನ್ಯೂಸ್‍ನಲ್ಲಿ ‘ವಿಧಾನಸಭೆಯಲ್ಲಿ ಕಾಗೆಗಳ ಹಾರಾಟ’ ಎಂದು ಪ್ರಕಟವಾಗಿತ್ತು! ಸಂಪಾದಕರು ಬರೆದಿದ್ದ ಮೂಲಪ್ರತಿಯನ್ನು ತಂದು ತಾಳೆ ನೋಡಿದೆ. ಅದು ‘ವಿಧಾನಸಭೆಯಲ್ಲಿ ಕಾಂಗೈಗಳ ಹಾರಾಟ’ ಎಂದಾಗಬೇಕಿತ್ತು! ಏನು ಮಾಡುವುದು? ಗುಂಪನ್ನು ಮತ್ತೊಮ್ಮೆ ಅವಲೋಕಿಸಿದೆ. ಒಂದಿಬ್ಬರು ನನ್ನ ಪರಿಚಿತರಾಗಿದ್ದರು. ಕಣ್ಸನ್ನೆಯಿಂದಲೇ ಅವರನ್ನು ಒಳಗೆ ಕರೆದುಕೊಂಡು ಹೋಗಿ ಏನೇನೋ ಭರವಸೆ ಕೊಟ್ಟು, ಮರುದಿನ ‘ತಿದ್ದುಪಡಿ’ ಹಾಕುವುದಾಗಿ ನಂಬಿಸಿ ಉಳಿದವರನ್ನು ಸಮಾಧಾನಪಡಿಸಿ ಕರೆದುಕೊಂಡು ಹೋಗುವಂತೆ ಮಾಡುವಲ್ಲಿ ಸುಸ್ತಾಗಿ ಹೋಗಿದ್ದೆ. ಸಂಪಾದಕರು ಬರುವುದರೊಳಗೆ ಅವರನ್ನು ಸಾಗಹಾಕಲೇಬೇಕಾದ ಅನಿವಾರ್ಯತೆ ನನಗಿತ್ತು. ಅವರೆದುರು ಇವರೇನಾದರೂ ಹಾರಾಡಿದರೆ ನಾನು ಎರಡೂ ಕಡೆಯ ಹಾರಾಟವನ್ನು ಶಮನಗೊಳಿಸಬೇಕಾಗುತ್ತಿತ್ತು!

ಮತ್ತೊಮ್ಮೆ ಇನ್ನೂ ದೊಡ್ಡ ಅವಾಂತರ. ಒಬ್ಬ ಗೃಹಸ್ಥ ಕಚೇರಿಯೊಳಗೆ ಬಂದು ಜಾಹೀರಾತು ಕೊಡಬೇಕೆಂದು ಹೇಳಿ, ಎಷ್ಟು ದುಡ್ಡಾದರೂ ಪರವಾಗಿಲ್ಲವೆಂದ. ದುಡ್ಡಿಗಾಗಿ ಬಾಯಿಬಾಯಿ ಬಿಡುತ್ತಿದ್ದ ನಾನು ಹಿಂದುಮುಂದು ಯೋಚಿಸದೆ ಒಂದಕ್ಕೆ ಒಂದೂವರೆ ಪಟ್ಟು ಜಾಹೀರಾತು ದರವನ್ನು ಹೇಳಿ, ಜಾಹೀರಾತಿನ ವಿಷಯವನ್ನು ಬರೆದುಕೊಂಡೆ. ‘…. ಇಂಥವರು ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. …. ಇಂಥ ದಿನ ಅವರ ವೈಕುಂಠ ಸಮಾರಾಧನೆ ಇದೆ. ಅವರ ಹಿತೈಷಿಗಳು ಈ ಜಾಹೀರಾತನ್ನೇ ಆಮಂತ್ರಣವೆಂದು ತಿಳಿದು ಆಗಮಿಸಿ, ಪ್ರಸಾದ ಸ್ವೀಕರಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ವಿನಂತಿ’ ಎಂಬುದು ವಿಷಯವಾಗಿತ್ತು. ಕೆಳಗಡೆ ದುಃಖತಪ್ತ ಪತ್ನಿ ಮತ್ತು ಮಕ್ಕಳು ಎಂದು ಬರೆದುಕೊಂಡೆ. ಆಗಿಂದಾಗ್ಗೆ ಒಂದೇ ಗಂಟಿನಲ್ಲಿ ಜಾಹೀರಾತಿನ ಒಟ್ಟು ದುಡ್ಡು ಸಿಕ್ಕ ಖುಷಿಯಲ್ಲಿ ಅವರ ಹೆಸರು ಕೇಳುವುದನ್ನೂ ಮರೆತಿದ್ದೆ! ಮರುದಿನ ಯಥಾಪ್ರಕಾರ ಕುರ್ಚಿಯಲ್ಲಿ ಕುಳಿತಿದ್ದೇನೆ, ಒಬ್ಬ ಆಜಾನುಬಾಹು ವ್ಯಕ್ತಿ ಧಡಧಡನೆ ಪತ್ರಿಕಾಲಯದೊಳಗೆ ನುಗ್ಗಿದ. ಬೀಸುತ್ತ ಬರುತ್ತಿದ್ದ ಅವನ ಕೈಯಲ್ಲಿ ಹಿಡಿದಿದ್ದ ನಮ್ಮದೇ ಪತ್ರಿಕೆ ಇಂದ್ರನ ವಜ್ರಾಯುಧದಂತೆ ಭಾಸವಾಯಿತು. ಒಳಮನಸ್ಸು ಇವನನ್ನೆಲ್ಲೋ ನೋಡಿದ್ದೇನಲ್ಲ ಎಂದು ನುಡಿಯುತ್ತಿತ್ತು! ಬಂದವನೇ ಮೇಜಿನ ಮೇಲೆ ಪತ್ರಿಕೆಯನ್ನು ಒಗಾಯಿಸಿ, ‘ಏನ್ರೀ, ಎಂಥಾ ಪತ್ರಿಕೇರೀ ನಿಮ್ದೂ. ಬದುಕಿರುವವನು ಸತ್ತಿದ್ದಾನೆಂದು ವೈಕುಂಠ ಸಮಾರಾಧನೆ ಆಮಂತ್ರಣವನ್ನು ಪ್ರಕಟಿಸುತ್ತೀರಿ….’ ಎಂದು ಕೂಗಾಡತೊಡಗಿದ. ಪತ್ರಿಕೆಯನ್ನು ಬಿಡಿಸಿ ನೋಡುತ್ತೇನೆ, ನಮ್ಮ ಪತ್ರಿಕೆಯಲ್ಲಿ ಫೋಟೊವಾದವನೇ ಎದುರಿಗೆ ಕುಳಿತಿದ್ದಾನೆ! ಏನೆಂದು ಸಮಜಾಯಸಿ ಕೊಡುವುದು. ಅವನ ಕೈಯನ್ನೇ ಕಾಲೆಂದು ಭಾವಿಸಿ ಹಿಡಿದವನು ಬಿಡದೆ ಯಥಾಪ್ರಕಾರ ಮರುದಿನ ‘ತಿದ್ದುಪಡಿ’ ಹಾಕುವ ಭರವಸೆಯೊಂದಿಗೆ ಅವನನ್ನು ಒಡಂಬಡಿಸುವಲ್ಲಿ ನಾನು ಕಲಿತಿದ್ದ ವಿದ್ಯೆಗಳೆಲ್ಲ ಖರ್ಚಾಗಿದ್ದವು. ಮತ್ತೊಮ್ಮೆ ಇಂಥದ್ದೇ ಇನ್ನೊಂದು ಎಡವಟ್ಟಾಗಿತ್ತು. ಸತ್ತವನ ಸುದ್ದಿಯೊಂದಿಗೆ ಇದ್ದವನ ಫೋಟೊ ಪ್ರಕಟವಾಗಿತ್ತು! ಆಗಲೂ ‘ತಿದ್ದುಪಡಿ’ಯ ಅಸ್ತ್ರವನ್ನೇ ಬಳಸಬೇಕಾಯಿತು.

ಆಗಿನ ಕ್ರೆಡಲ್ ಮಷೀನುಗಳಲ್ಲಿ ಫೋಟೊಗಳನ್ನು ಮುದ್ರಿಸಲು ತುಂಬಾ ಕಷ್ಟಪಡಬೇಕಾಗಿತ್ತು. ಈಗಿನಂತೆ ಸ್ಕ್ಯಾನ್ ಮಾಡಿ ಅರೆಕ್ಷಣದಲ್ಲಿ ಹಾಕುವಂತಿರಲಿಲ್ಲ. ಅದರ ಬ್ಲಾಕ್ ಮಾಡಿಸಿಕೊಂಡು ಜೋಡಿಸಬೇಕಿತ್ತು. ಹುಬ್ಬಳ್ಳಿಯಿಂದ ಬ್ಲಾಕ್ ಮಾಡಿಸಿಕೊಂಡು ಬರಬೇಕಿತ್ತು. ಪ್ರತಿದಿನ ಬಸ್ಸಿಗೆ ಫೋಟೊ ಕಳಿಸಿ, ಸಾಯಂಕಾಲದ ಬಸ್ಸಿಗೆ ಅವರು ಕಳಿಸುತ್ತಿದ್ದ ಬ್ಲಾಕುಗಳನ್ನು ತಂದು ಮುದ್ರಣಕ್ಕೆ ಬಳಸಿಕೊಳ್ಳಬೇಕಿತ್ತು. ಒಮ್ಮೆ ಸುದ್ದಿಯೊಂದಕ್ಕೆ ಒಬ್ಬ ವ್ಯಕ್ತಿಯ ಫೋಟೊ ಹಾಕಬೇಕಿತ್ತು. ಬಸ್ ಸ್ಟ್ರೈಕಿನಿಂದಾಗಿ ಹುಬ್ಬಳ್ಳಿಗೆ ಫೋಟೊ ಕಳಿಸುವುದು ಸಾಧ್ಯವಿರಲಿಲ್ಲ. ಫೋಟೊ ಮುದ್ರಣವಾಗಲೇಬೇಕು. ಏನು ಮಾಡುವುದು? ತಕ್ಷಣವೇ ಉಪಾಯವೊಂದು ಮಿಂಚಿತು. ಆ ವ್ಯಕ್ತಿಯ ಫೋಟೊವನ್ನೇ ಹೋಲುವ ಹಳೆಯ ಬ್ಲಾಕೊಂದನ್ನು ಹುಡುಕಿ ತೆಗೆದು ಅದನ್ನು ಸಿಮೆಂಟ್ ಗೋಡೆಗೆ ಸ್ವಲ್ಪ ಉಜ್ಜಿ ಕೊಟ್ಟೆ. ಮರುದಿನ ಸಿಕ್ಕಿದ ಆ ವ್ಯಕ್ತಿ ‘ಸುದ್ದಿ ಬಹಳ ಚೆನ್ನಾಗಿ ಬಂದಿದೆ. ಫೋಟೊ ಮಾತ್ರ ಕ್ಲಿಯರಾಗಿ ಬರಲಿಲ್ಲ ನೋಡು’ ಎಂದ!

ಆಗಿನ ಮಷೀನುಗಳಲ್ಲಿ ಪ್ರಿಂಟಿಂಗ್ ಕೆಲಸ ಮಾಡುವ ಪ್ರಿಂಟರ್‍ಗಳನ್ನು ಹುಡುಕುವುದು ಬಹಳ ಕಷ್ಟದ ಕೆಲಸವಾಗಿತ್ತು. ಹೆಚ್ಚು ಸಂಬಳ ಕೊಟ್ಟರೂ ಬರಲು ಒಪ್ಪುತ್ತಿರಲಿಲ್ಲ. ಆದರೂ ಹೇಗೋ ಮಾಡಿ ಒಬ್ಬ ಹುಡುಗನನ್ನು ಕೈತಪ್ಪಿಹೋಗದಂತೆ ಪ್ರಿಂಟರನನ್ನಾಗಿ ಇಟ್ಟುಕೊಂಡಿದ್ದೆವು. ಬಂದ ಹೊಸತರಲ್ಲಿ ಚೆನ್ನಾಗಿಯೇ ಇದ್ದ. ಒಳ್ಳೆ ಕೆಲಸಗಾರ ಬೇರೆ. ಕೆಲವೇ ದಿನಗಳಲ್ಲಿ ನಮ್ಮ ಪ್ರೆಸ್ಸಿನ ಕಂಪೋಸರ್ ಹುಡುಗಿಯೊಬ್ಬಳೊಂದಿಗೆ ಅವನ ಪ್ರೇಮಾಂಕುರವಾಯಿತು. ಅಲ್ಲಿಂದ ನಮಗೆ ಕಲಿಗಾಲ ಶುರುವಾಯಿತು! ಅವಳು ಕೆಲಸಕ್ಕೆ ಬಾರದ ದಿನ ಇವನೂ ಬರುವುದಿಲ್ಲ! ಅಕಸ್ಮಾತ್ ಅವಳು ಬರದಿರುವುದು ತಿಳಿಯದೇ ಇವನು ಬಂದರೂ ಸ್ವಲ್ಪ ಸಮಯಕ್ಕೇ ಅವನಿಗೆ ಹೊಟ್ಟೆನೋವು ಅಥವಾ ಇನ್ನಾವುದಾದರೂ ತೊಂದರೆ ಶುರುವಾಗಿ ಹಿಂಬಾಗಿಲಿನಿಂದಲೇ ಜಾರಿಕೊಂಡು ಬಿಡುತ್ತಿದ್ದ. ಕಂಪೋಸರ್ ಬರದಿದ್ದರೆ ಇನ್ನುಳಿದವರು ಹೇಗಾದರೂ ನಿಭಾಯಿಸುತ್ತಿದ್ದರು. ಪ್ರಿಂಟರನೇ ಕೈಕೊಟ್ಟರೆ ಮಾಡುವುದೇನು? ಸಾಯಂಕಾಲದ ವೇಳೆಗೆ ಅವನ ಮನೆಗೇ ಹೋಗಿ ಪುಸಲಾಯಿಸಿ ಕರೆದುಕೊಂಡು ಬಂದು ಕೆಲಸ ಮಾಡಿಸಿಕೊಳ್ಳಬೇಕಿತ್ತು. ಅಷ್ಟಾದರೂ ಕೆಲವೊಮ್ಮೆ ಮೊಂಡುಹಟ ಮಾಡಿ ಬರುತ್ತಲೇ ಇರಲಿಲ್ಲ. ಆಗ ಇನ್ನುಳಿದ ಪ್ರೆಸ್ಸುಗಳಿಗೆಲ್ಲ ಅಲೆದು ಅವರ ಪ್ರಿಂಟರರಲ್ಲಿ ಒಬ್ಬನನ್ನು ಎರವಲು ತಂದು ಅಂದಿನ ಕೆಲಸವನ್ನು ಮುಗಿಸಿದ ಉದಾಹರಣೆಗಳೂ ಇದ್ದವು! ಸುದ್ದಿಮನೆಯ ಇಂತಹ ಹಲವು ಘಟನೆಗಳು ಸ್ವಗತಗಳಾಗಿಯೇ ಇರುತ್ತವೆ; ಅವು ಸುದ್ದಿಯಾಗುವುದಿಲ್ಲ!

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments