ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 19, 2018

820 ಗುಳಿಗೆಗಳನ್ನು ತಿನ್ನಿಸಿ ಪರಾರಿಯಾದ 420

‍ನಿಲುಮೆ ಮೂಲಕ

– ಸುಜಿತ್ ಕುಮಾರ್

rtxg4p0_1432726241_725x725ತಿಹಾರ್ ಜೈಲು. ಬಹುಶಃ ಈ ಹೆಸರನ್ನಿಂದು ಕೇಳಿರದವರಿರಲು ಸಾಧ್ಯವೇ ಇಲ್ಲ. ದೇಶ-ವಿದೇಶದ ಹೈ ಪ್ರೊಫೈಲ್ ನಟೋರಿಯಸ್ ಕ್ರಿಮಿನಲ್ ಗಳನ್ನು ಬಂಧಿಸುವ ಈ ಕಾರಾಗೃಹ ದೇಶದ ಅಷ್ಟೂ ಜೈಲುಗಳಿಗಿಂತಲೂ ಅತಿ ಹೆಚ್ಚಿನ ಭದ್ರತೆಯನ್ನೊಳಗೊಂಡ ಚಕ್ರವ್ಯೂಹವೆಂದೇ ಹೇಳಬಹುದು! ಅಪ್ಪಿ-ತಪ್ಪಿ ಒಂದು ಇಲಿಮರಿಯೂ ಸಹ ಒಳಹೊಕ್ಕರೆ ಹೊರ ಬರಲು ಪೇಚಾಡುವಂತಹ ಭದ್ರತೆಯ ಈ ಜೈಲಿನಿಂದ ಎಸ್ಕೇಪ್ ಆಗುವುದೆಂದರೆ ಆತ ಒಬ್ಬ ದೇವದೂತನಾಗಿರಬೇಕೇ ವಿನಃ ಸಾಮಾನ್ಯ ವ್ಯಕ್ತಿಯಾಗಿರಲಂತೂ ಸಾಧ್ಯವೇ ಇಲ್ಲ! ಆದರೂ, ಅಲ್ಲೊಬ್ಬ ಇಲ್ಲೊಬ್ಬ ಕೋಟಿಗೊಬ್ಬನಂತಹ  ಕಿಲಾಡಿಗಳು ಇಲ್ಲೂ ಸಹ ತಮ್ಮ ಕೈಚಳಕವನ್ನು ತೋರಿ ಅಂತಹ ಭಾರಿ ಭದ್ರತೆಯ ಕೋಟೆಯನ್ನೇ ಮೀಟಿ ಪರಾರಿಯಾದದ್ದುಂಟು. ಇಂತಹ ಪ್ರತಿಭಾನ್ವಿತ ದೇಹದೂತರ ಕೆಲ ರೋಚಕ ಕತೆಗಳು ದೇಶದ ಇತಿಹಾಸದಲ್ಲಿ ಇಂದು ಹಚ್ಚಳಿಯಾಗಿ ಉಳಿದುಕೊಂಡಿವೆ. ಆ ಪ್ರತಿಭಾನ್ವಿತ ಕ್ರಿಮಿನಲ್ಗಳ ದೇಶೀ / ವಿದೇಶಿ ಕ್ಯಾರೆಕ್ಟರ್ ಗಳು ಇಂದು ದೇಶ ವಿದೇಶದ ಹಲವಾರು ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿ ಹಲವೆಡೆ ‘ಸ್ಫೂರ್ತಿ’ದಾಯಕವೂ ಆಗಿವೆ ಎಂದರೆ ಅದು ನಮ್ಮೆಲ್ಲರ ವಿಪರ್ಯಾಸವೇ ಸರಿ!

ಹೆಸರು ಚಾರ್ಲ್ಸ್ ಶೋಭ್ರಾಜ್. ಸೈಕೋಪಾಥ್, ಸೀರಿಯಲ್ ಕಮ್ ಬಿಕಿನಿ ಕಿಲ್ಲರ್, ವಂಚಕ, ದಿ ಸರ್ಪೆಂಟ್ , ಚತುರ ಸುಳ್ಳುಗಾರ ಹಾಗು ಒಬ್ಬ ಭಯಾನಕ ಎಸ್ಕೇಪಿಸ್ಟ್ etc etc  ಎಂಬುದೆಲ್ಲ ಈತ ಕಷ್ಟಪಟ್ಟು ಗಳಿಸಿಕೊಂಡ ಅನ್ವರ್ಥನಾಮಗಳು! ವಿಯೆಟ್ನಾಂ ನಲ್ಲಿ ಹುಟ್ಟಿ ಫ್ರಾನ್ಸ್ನಲ್ಲಿ ಬೆಳೆದು, ತನ್ನ ಕುಕೃತ್ಯಗಳಿಂದ ವಿಶ್ವದಾದ್ಯಂತ ಪ್ರಸಿದ್ದಿ ಪಡೆದು ಸದ್ಯಕ್ಕೆ ನೇಪಾಳದ ಜೈಲಿನಲ್ಲಿ ಶಿಕ್ಷೆಯನ್ನನುಭವಿಸುತ್ತಿರುವ ಈತನ ಹೆಸರನ್ನು ಕೇಳಿದ್ದರೆ ಅಂದು ವಯಸ್ಸಿನ ಹುಡುಗಿಯರಷ್ಟೇ ಅಲ್ಲದೆ ಕಲ್ಲುಗುಂಡಿನಂತ ಪೊಲೀಸರೂ ಬೆಚ್ಚಿಬೀಳುತ್ತಿದ್ದರು. 1944 ರಲ್ಲಿ ಭಾರತೀಯ ಸಿಂಧಿ ಮೂಲದ ಅಪ್ಪನಿಗೆ (ಶೋಬ್ರಾಜ್) ಜನಿಸಿದ ಚಾರ್ಲ್ಸ್ ನ ಬಾಲ್ಯ ಇತರೆ ಎಲ್ಲ ಮಕ್ಕಳಂತಿರಲಿಲ್ಲ. ಈತನ ಅಮ್ಮನೊಟ್ಟಿಗೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದ ಅಪ್ಪ ಅದೊಂದು ದಿನ ಕುಟುಂಬವನ್ನು ಬಿಟ್ಟು ಬೇರೊಂದು ಸಂಸಾರವನ್ನು ಹೂಡಿದಾಗ ಚಾರ್ಲ್ಸ್ ಗೆ ಐದಾರು ವರ್ಷಗಳಿರಬಹುದು. ನಂತರ ಅಮ್ಮ ಮತ್ತೊಬ್ಬ ಬಾಯ್ ಫ್ರೆಂಡನ್ನು ಮಾಡಿಕೊಂಡು ಸುತ್ತತೊಡಗುವುದನ್ನು ನೋಡಿ ಸಹಿಸಲಾರದೆಯೋ ಅಥವಾ ಹೇಳುವವರು ಕೇಳುವವರಿಲ್ಲದಿದ್ದರಿಂದೇನೊ ಚಾಲ್ಸ್ ಮನಬಂದ ಕುಕೃತ್ಯಗಳನ್ನು ರಾಜಾರೋಷವಾಗಿ ಮಾಡತೊಡಗಿದ. ಅದು ಆತನ ಜೀವನದ ದಿಕ್ಕನ್ನೇ ಬುಡಮೇಲು ಮಾಡಿತು. ಪರಿಣಾಮ ಎಳೆಯ ವಯಸ್ಸಿನಲ್ಲಿಯೇ ಜೈಲು ಸೇರಿ ಶಿಕ್ಷೆಯನ್ನನುಭವಿಸುತ್ತಾನೆ. ಇಷ್ಟೆಲ್ಲದರ ನಡುವೆಯೂ ಆ ಹುಡುಗನಿಗೆ ಒಂದು ಹವ್ಯಾಸ ಮಾತ್ರ ವಿಪರೀವಾಗಿದ್ದಿತು. ಪುಸ್ತಕಗಳ ಓದು. ಎಲ್ಲ ಬಗೆಯ ಪುಸ್ತಕಗಳನ್ನು ಅದರಲ್ಲೂ ಮನಶಾಸ್ತ್ರದ ಬಗೆಗಿನ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದ ಚಾಲ್ಸ್ ತನ್ನ ಮುಂದಿರುವವರ ಗುಣನಡತೆ ಇಷ್ಟ ಕಷ್ಟಗಳಿಂದಿಡಿದು ಸೂಕ್ಷ್ಮತೆ ಹಾಗು ನ್ಯೂನ್ಯತೆಗಳೆಲ್ಲವನ್ನು ಕೂಡಲೇ ಅರಿತು ಅದಕ್ಕೆ ಪೂರಕವಾದೊಂದು ಏನಾದರು ತಂತ್ರವನ್ನು ಹೂಡಿ ಅವರ ವಿಶ್ವಾಸ ಗಿಟ್ಟಿಸಿಕೊಂಡು ಅವರಿಗೇ ದ್ರೋಹ ಬಗೆಯುವ ಕಲೆಯನ್ನು ನಿಧಾನವಾಗಿ ಈತ ಕರಗತಮಾಡತೊಡಗಿದ.

ಜೈಲಿನಿಂದ ಹೊರಬಂದ ಬಿಸಿರಕ್ತದ ಚಾರ್ಲ್ಸ್ ಕೋಟ್ಯಧಿಪತಿ ಕುಳಗಳೇ ತುಂಬಿ ತುಳುಕುತ್ತಿದ್ಧ ಫ್ರಾನ್ಸ್ ಗೆ ತೆರಳಿ ತಾನು ಅಲ್ಲಿಯವರೆಗೂ ಸಂಪಾದಿಸಿದ್ದ ಜ್ಞಾನವನ್ನೆಲ್ಲ ಧಾರೆಯೆರೆದು ವಿಶ್ವವನ್ನೇ ಲೂಟಿದ ಪ್ರೆಂಚರನ್ನು ನಿರಾಯಾಸವಾಗಿ ಲೂಟಿಮಾಡತೊಡಗುತ್ತಾನೆ. ಆದರೆ ಆತನ ಹಾವಳಿ ಹೆಚ್ಚು ಕಾಲ ನಡೆಯಲಿಲ್ಲ. ಅಲ್ಲಿನ ಪೊಲೀಸರಿಗಾಗಲೇ ಆ ಬಗ್ಗೆ ಸುಳಿವು ಸಿಕ್ಕು ಆತನನ್ನು ಹಿಡಿಯಲು ಬಲೆಯನ್ನು ಬೀಸುತ್ತಾರೆ. ಏತನ್ಮದ್ಯೆ ಪರ್ಷಿಯಾದ ಒಬ್ಬಾಕೆಯನ್ನು ಮದುವೆಯೂ ಆಗಿದ್ದ ಆತ ಪೊಲೀಸರಿಂದ ಸಂಸಾರ ಸಮೇತ ಪರಾರಿಯಾಗತೊಡಗಿದ. ಸಾಮಾನ್ಯದ ಕಳ್ಳಕಾಕರಾದರೆ ಸಿಟಿಯ ಅಥವಾ ಹಳ್ಳಿಯ ಅಲ್ಲೋ ಇಲ್ಲೋ ತಲೆಮರೆಸಿಕೊಂಡು ಕೆಲಕಾಲದ ನಂತರ ಹೊರಬಂದು ಬದುಕುತ್ತಿದ್ದರು. ಆದರೆ ಈ ಪ್ರಚಂಡ ವಂಚಕ ಮಾತ್ರ ತಾನು ಮಾಡಿರುವ ಕುಕೃತ್ಯಗಳ ಸಲುವಾಗಿಯೋ ಅಥವ ವಿಶ್ವವನ್ನೇ ದೋಚಿ ಮೆರೆಯುವ ಆಸೆಯಿಂದಲೋ ಏನೋ ಫ್ರಾನ್ಸ್ ಅನ್ನು ಬಿಟ್ಟು ಪರಾರಿಯಾದದ್ದು ಸೀದಾ ಮುಂಬೈಯಿಗೆ. ಪೋಲೀಸರ ಸರ್ಪಗಾವಲಿನಲ್ಲಿಯೂ ಅದೇಗೆ ಈತ ಎಸ್ಕೇಪ್ ಆತ ಎಂಬುದು ಆತನೊಬ್ಬನಿಗೆ ಮಾತ್ರ ಗೊತ್ತು!  ಅದು 1970. ದೇಶದ ರಾಜಕೀಯ ಸ್ಥಿತಿ ಅಲ್ಲೊಲ್ಲ ಕಲ್ಲೋಲವಾಗುವ ಎಲ್ಲಾ ಮುನ್ಸೂಚನೆಗಳು ಮೂಡುತ್ತಿದ್ದ ಸಂದಿಗ್ಧ ಕಾಲ. ಮುಂಬೈಗೆ ಬಂದಿಳಿದ ಚಾರ್ಲ್ಸ್ ಕೆಲಸಮಯದಲ್ಲಿ ಹೆಣ್ಣುಮಗಳೊಬ್ಬಳ ತಂದೆಯೂ ಆಗುತ್ತಾನೆ. ಆದರೆ ಊರು ಬಿಟ್ಟ ಸಂಸಾರಿ ಹೊರ ಊರಿನಲ್ಲಿ ಕುಟುಂಬವನ್ನು ಪೊರೆಯುವದ ಬಿಟ್ಟು ಮತ್ತದೇ ದೋಚುವ ಚಾಳಿಗೆ ಮೈಯೊಡ್ಡುತ್ತಾನೆ. ಕ್ರಮೇಣವಾಗಿ ಆತನ ಪತ್ನಿಯೂ ಒಲ್ಲದ ಮನಸ್ಸಿನಿಂದ ಆತನ ದುಷ್ಕೃತ್ಯಗಳಿಗೆ ಸಾಥ್ ನೀಡಬೇಕಾಗುತ್ತದೆ. ಇನ್ನು 2008 ರಲ್ಲೇ ಮುಂಬೈಯ ಭದ್ರತೆ ಹಾಗಿರುವಾಗ ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ಹೇಗಿದ್ದಿರಬಹದು?! ಚಾರ್ಲ್ಸ್ ನಂತ ಖದೀಮರಿಗೆ ಅದು ಸ್ವರ್ಗದ ತಾಣವಾಗಿದ್ದಿತೇನೋ. ಅಂತಹ ಸ್ವರ್ಗದಲ್ಲಿ ಸ್ಮಗ್ಲಿಂಗ್, ಗ್ಯಾಂಬ್ಲಿಂಗ್ ಹಾಗು ಟೂರಿಸ್ಟ್ ಗಳಾಗಿ ಬರುತ್ತಿದ್ದ ವಿದೇಶಿಗರನ್ನು ಲೂಟುತ್ತಿದ್ದ ಈ ಆಸಾಮಿ ಕೊನೆ ಕೊನೆಗೆ ಹಾಡ ಹಗಲೇ ಬ್ಯಾಂಕ್ಗಳ ದರೋಡೆಗೆ ಇಳಿಯುತ್ತಾನೆ. ಕೊನೆಗೂ ನಮ್ಮ ಪೊಲೀಸ್ ಮಹಾಶಯರ ಕೈಗೆ ಸಿಕ್ಕಿಕೊಂಡ ಈತ ಅಲ್ಲೂ ಸಹ ಪವಾಡಸದೃಶ್ಯ ರೀತಿಯಲ್ಲಿ ಪಾರಾಗುತ್ತಾನೆ. ನಂತರದ ಈತನ ಲೂಟಿಯಾತ್ರೆ ಉತ್ತರದ ಆಫ್ಘಾನಿಸ್ತಾನದೆಡೆಗೆ. ಕಾಬುಲ್ ನಲ್ಲಿ ಪ್ರವಾಸಿಗರ ವಿಪರೀತ ಲೂಟಿ ಕೂಡಲೇ ಅಲ್ಲಿನ ಅಧಿಕಾರಿಗಳನ್ನೂ ಜಾಗೃತಗೊಳಿಸಿತು. ಅಲ್ಲಿಯೂ ಸಿಕ್ಕಿಹಾಕಿಕೊಂಡ ಈತ ಮತ್ತೊಮ್ಮೆ ಅಧಿಕಾರಿಗಳಿಗೆ ಚಳ್ಳೆಹಣ್ಣನು ತಿನ್ನಿಸಿ ಇರಾನ್ ಗೆ ಪರಾರಿಯಾಗುತ್ತಾನೆ. ಆದರೆ ಈ ಬಾರಿ ಕೇವಲ ಜೈಲಿನಿಂದಷ್ಟೇ ಪರಾರಿಯಾಗುವುದಲ್ಲದೆ ತನ್ನ ಪುಟ್ಟ ಸಂಸಾರವನ್ನು ನಡುನೀರಿನಲ್ಲಿ ಬಿಟ್ಟು ಪಲಾಯನಗೈದಿರುತ್ತಾನೆ. ಕೆಲ ಸಮಯದ ನಂತರ ಅಣ್ಣನ ಹಿರಿಮೆಯ ಸುದ್ದಿಗೆ ಮನಸೋತು ಇದ್ದೂ ಸತ್ತಂತಿದ್ದ ಆತನ ತಮ್ಮ ಎಲ್ಲಿಂದಲೋ ಅಣ್ಣನನ್ನು ಅರಸಿಕೊಂಡು ಹೋಗಿ ಆತನ ಪಾದಾರವಿಂದಗಳಿಗೆರಗಿ ತನ್ನನೂ ಈ ಮಾರ್ವೆಲಸ್ ಬಿಸಿನೆಸ್ಗೆ ಸೇರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಾನೆ. ಅಣ್ಣ ತಥಾಸ್ತು ಎನ್ನುತ್ತಾನೆ! ಮುಂದೆ ಶುರುವಾದ ಅಣ್ಣ ತಮ್ಮಂದಿರ ಕೈಚಳಕ ಹೆಚ್ಚು ಕಡಿಮೆ ಅಷ್ಟೂ ಮಧ್ಯಪ್ರಾಚ್ಯಾದೇಶಗಳನ್ನು ಒಳಹೊಕ್ಕು ದೂರದ ಗ್ರೀಸ್ನ ವರೆಗೂ ವ್ಯಾಪಿಸುತ್ತದೆ. ಕೊನೆಗೆ ಸಹೋದರರ ಸವಾಲನ್ನು ಸ್ವೀಕರಿಸಿದ ಅಥೆನ್ಸ್ ನ ಅಧಿಕಾರಿಗಳು ಜೋಡಿಯನ್ನು ಹಿಡಿದು ಜೈಲಿನೊಳಗೆ ದಬ್ಬುತ್ತಾರೆ. ಆದರೆ ಅವರಿಗೇನು ಗೊತ್ತಿತ್ತು ತಾವು ಹಿಡಿದ ವ್ಯಕ್ತಿ ಕಟ್ಟಿ ಕೂರಿಸಲಾಗದ ಗಾಳಿಯಂತವನೆಂದು! ಅಲ್ಲಿನ ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗುವಂತೆ ಅಣ್ಣ, ತಮ್ಮನ ಐಡೆಂಟಿಯನ್ನೇ ಬದಲಿಸುತ್ತಾನೆ. ಅರ್ಥಾತ್ ತಾನೇ ಸಣ್ಣವನೆಂದು ಹಾಗು ಅಸಲಿಯ ತಮ್ಮನೇ ಚಾರ್ಲ್ಸ್ ಎಂದು ಅಧಿಕಾರಿಗಳಿಗೆ ಮಣ್ಣು ಮುಕ್ಕಿಸುತ್ತಾನೆ. ಅದೂ ಸಹ ಒಂದು ಕಲೆ. ಒಟ್ಟಿನಲ್ಲಿ ಒಳಗಿದ್ದ ಆತನ ತಮ್ಮನಿಗೆ 18 ವರ್ಷದ ಕಾರಾಗೃಹ ಶಿಕ್ಷೆಯಾದಾಗಲೇ ಜಗತ್ತಿಗೆ ತಿಳಿದಿದ್ದು ಅಣ್ಣ ಚಾರ್ಲ್ಸ್ ಅದಾಗಲೇ ದೇಶವನ್ನು ಬಿಟ್ಟು ಪರಾರಿಯಾಗಿದ್ದನೆಂದು!

ದೇಶವಿದೇಶಗಳ ಹಲವಾರು ಭಾಷೆಗಳಲ್ಲಿ ನಿಪುಣನಾಗಿದ್ದ ಈತನ ಹೆಚ್ಚಿನ ಟಾರ್ಗೆಟ್ 20-25 ರ ವಯಸ್ಸಿನ ಪ್ರವಾಸಿ ಹುಡುಗಿಯರು. ತನ್ನ ಅಂದವಾದ ಮೈಮಾಟದಿಂದ ಹುಡುಗಿಯರನ್ನು ಸೆಳೆದು ಡ್ರಗ್ಸ್ ನ ನಶೆಯನ್ನು ಹತ್ತಿಸಿ ಅವರನ್ನು ಲೂಟಿ ಮಾಡುತ್ತಿದ್ದನಲ್ಲದೆ ವಿಚಿತ್ರ ರೀತಿಯಲ್ಲಿ ಅವರನ್ನು ಕೊಂದು ಸಾಯಿಸಿರುವುದೂ ಉಂಟು! ಎಪ್ಪತನೆ ದಶಕದ ಮೊದಲಾರ್ದದಲ್ಲೇ ಸುಮಾರು 15 ರಿಂದ 20 ಕೊಲೆಗಳನ್ನು ಮಾಡಿದ್ದ ಕೀರ್ತಿ ಈತನ ಹೆಸರಿನಲ್ಲಿದ್ದಿತು!  ಡಜನ್ ಗಟ್ಟಲೆ ದೇಶಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂಬ ಪಟ್ಟವೂ ಈತನದೇ ಆಗಿದ್ದಿತು.

ಏತನ್ಮದ್ಯೆ 1976 ರಲ್ಲಿ ಈತ ಭಾರತದ ಅಧಿಕಾರಿಗಳ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅದು ಪೊಲೀಸ್ ಅಧಿಕಾರಿಗಳು ಆತನಿಗಾಗಿ ಬೀಸಿದ ಬಲೆಯೋ ಅಥವ ಆತನೇ ತನಗಾಗಿ ರಚಿಸಿದ ತಂತ್ರವೋ, ಉತ್ತರ ಕಾಣಲು ಪೊಲೀಸರಿಗೆ ಎರಡು ದಶಕಗಳು ಬೇಕಾಯಿತು! ದೆಹಲಿಯ ಹೈ ಪ್ರೊಫೈಲ್ ಪಾರ್ಟಿಯೊಂದಲ್ಲಿ ನೆರೆದಿದ್ದ ಹಲವಾರು ಪ್ರೆಂಚ್ ಪ್ರಜೆಗಳಿಗೆ ಡ್ರಗ್ಸ್ ಕೊಟ್ಟು ಲೂಟಿಮಾಡಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡ ಈತ ತನ್ನ ಹಳೆಯ ಅಳಿದುಳಿದ ಕರ್ಮಕಾಂಡಗಳೆಲ್ಲದರ ಫಲವಾಗಿ ಬರೋಬ್ಬರಿ 11 ವರ್ಷ ಕಾರಾಗೃಹ ಶಿಕ್ಷೆಯನ್ನು ‘ವಿಧಿಸಿಕೊಳ್ಳುತ್ತಾನೆ’. ಅದಾಗಲೇ ಭಾರತದಲ್ಲಿ ಎರಡೆರಡು ಭಾರಿ ಜೈಲ್ ಬ್ರೇಕ್ಗಳ ಹೆಗ್ಗಳಿಕೆಗೆ ಹೆಸರುವಾಸಿಯಾಗಿದ್ದ ಈತನನ್ನು ಇಟ್ಟರೆ ತಿಹಾರ್ ಜೈಲೇ ಬೇಕೆಂದು ಅಧಿಕಾರಿಗಳು ಅಂದು ತೀರ್ಮಾನಿಸಿದರು. ಅಲ್ಲಿಗೆ 1976 ರಿಂದ 1986 ರ ವರೆಗಿನ ಜೈಲುವಾಸ ಆತನಿಗೆ ಫಿಕ್ಸ್ ಆಗುತ್ತದೆ. ಆದರೆ ಈ ಆಸಾಮಿಗೆ ತಿಹಾರ್ ಜೈಲುವಾಸ ಅದೆಷ್ಟು ಪ್ರಿಯವಾಗಿತೆಂದರೆ 1986 ರಿಂದ ಮತ್ತೂ 10 ವರ್ಷ ಅಲ್ಲೇ ಇರಬೇಕೆಂದು ತೀರ್ಮಾನಿಸುತ್ತಾನೆ! ದಿನ ಅದೇ ಕಂಬಿಗಳು, ಅದೇ ಗೋಡೆಗಳು, ಅದೇ ಪರಿಸರ ಮತ್ತದೇ ಊಟವನ್ನು ತಿಂದು ಜೀವನವೇ ನರಕವೆನಿಸುವ ಜೈಲಿನಂತಹ ಜಾಗದಲ್ಲೂ ದಶಕಗಳ ಕಾಲ ಜೀವನ ನಡೆಸಿ ಮತ್ತದೇ ಜಾಗಕ್ಕೆ ಬರಲಿಚ್ಛಿಸುವ ವ್ಯಕ್ತಿ ಹುಚ್ಚನೇ ಸರಿ. ಆದರೆ ಚಾರ್ಲ್ಸ್ ಒಂಥರಾ ಬುದ್ದಿವಂತ ಹುಚ್ಚ. ಆತನ ಈ ಎಕ್ಸ್ಟೆಂಡೆಡ್ ಜೈಲುವಾಸದ ಪ್ಲಾನ್ ಶತಾಯ ಗತಾಯ ಸಾಧಿಸಿಯೇ ತೀರಬೇಕಾಗಿರುತ್ತದೆ. ಕಾರಣ ಮಾತ್ರ ಬಹುಶಃ ಅಲ್ಲಿನ ಯಾರೊಬ್ಬರಿಗೂ ತಿಳಿದಿರಲು ಸಾಧ್ಯವಿಲ್ಲ! ಅದಕ್ಕಾಗಿ ಆತ ಮಾಡಿದ ಪ್ಲಾನ್ ಪ್ರಿಸನ್ ಬ್ರೇಕ್ ಅರ್ಥಾತ್ ಜೈಲಿನಿಂದ ಎಸ್ಕೇಪ್ ಆಗುವುದು! ಇಲ್ಲಿ ಕೊಂಚ ದ್ವಂದ್ವಕ್ಕೊಳಗಾಗುವುದು ಅತಿ ಸಹಜವೇ. ಆದರೆ ಮೊದಲೇ ಹೇಳಿದಂತೆ ಈತ ಬುದ್ದಿವಂತ ಹುಚ್ಚ.

ಇಡೀ ಭೂಮಂಡಲವನ್ನೇ ತನ್ನ ಕ್ರೈಂ ಅಡ್ಡವಾಗಿಸಿಕೊಂಡಿದ್ದ ಈತನಿಗೆ ಹೊದಡೆಯಲ್ಲ ಪೋಲೀಸರ ಹಾಗು ಕೋರ್ಟುಗಳ ‘ರಾಜಾತಿಥ್ಯ’ ದೊರೆಯುತ್ತಿತ್ತು. ಹಾಗೆಯೆ ಥೈಲ್ಯಾಂಡಿನ ಸರ್ಕಾರ ಕೊಲೆ ಕೇಸೊಂದರಲ್ಲಿ ಈತನನ್ನು ವಿಚಾರಣೆಗೊಳಿಸಬೇಕಿತ್ತು. ಒಂದು ವೇಳೆ ಈತನ ವಿರುದ್ದದ ಅಲ್ಲಿಯ ಅಪರಾದಗಳೆಲ್ಲ ಸಾಬೀತಾದಾರೆ ಅಲ್ಲಿನ ಸರ್ಕಾರ ಈತನಿಗೆ ಮರಣದಂಡಣೆಯನ್ನು ನೀಡಿದರೂ ಆಶ್ಚರ್ಯಪಡಬೇಕಾಗಿರಲಿಲ್ಲ.  ಆದರೆ ಆ ದೇಶದಲ್ಲಿ ಒಂದು ಕಾನೂನಿದೆ. ಒಂದು ವೇಳೆ ಕೇಸೊಂದರ ಕುರಿತು ಅಧಿಕಾರಿಗಳು ಮೂಲ ಅಪರಾಧಿಯನ್ನು 20 ವರ್ಷಗಳ ಒಳಗೆ ವಿಚಾರಣೆಗೆ ಒಳಪಡಿಸದಿದ್ದರೆ, ಅಥವ ಆ ಕೇಸಿನ ಬಗ್ಗೆ ಒಂದಿಷ್ಟೂ ವಿಚಾರಣೆ ನಡೆಯದಿದ್ದರೆ ಆ ಕೇಸನ್ನು ಮುಚ್ಚಿಹಾಕಲಾಗುತ್ತದೆ. ಎಲ್ಲವನ್ನೂ ಪಕ್ಕ ಲೆಕ್ಕಾಚಾರದಲ್ಲಿ ಮಾಡುವ ಚಾರ್ಲ್ಸ್ ಈ ವಿಷಯವನ್ನು ಚೆನ್ನಾಗಿ ಅರಿತಿದ್ದ.  1975 ರಲ್ಲಿ ಆರಂಭವಾದ ಆ ಕೇಸು ಒಂದು ವೇಳೆ 1995ರ ವರೆಗೂ ಯಾವುದೇ ಆಂತ್ಯವನ್ನು ಕಾಣದಿದ್ದರೆ ಅದು ಮುಚ್ಚಲ್ಪಡುತ್ತಿತ್ತು. ಅದಾಗಲೇ ಹನ್ನೊಂದು ವರ್ಷಗಳ ಜೈಲುವಾಸವನ್ನು ಅನುಭವಿಸಿದ ಚಾಲ್ಸ್ ನಮ್ಮ ದೇಶದ ಅಧಿಕಾರಿಗಳು ಆತನನ್ನು ಥೈಲ್ಯಾಂಡಿನ ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಮೊದಲೇ ಈತ ಭಾರತದಲ್ಲೇ ಮತ್ತೊಂದು ಕ್ರೈಂ ಅನ್ನು ಮಾಡಬೇಕು ಹಾಗು ಅದರ ಶಿಕ್ಷೆಯ ಅವಧಿ ಕನಿಷ್ಠ ಹತ್ತು ವರ್ಷಕ್ಕೂ ಮಿಗಿಲಾಗಿರಬೇಕು! ಜೈಲಿನಲ್ಲಿದ್ದೇ ಮತ್ತೆ ಜೈಲು ಸೇರುವ ಸಾಹಸವನ್ನು ಮಾಡಬೇಕೆಂದರೆ ಇರುವ ಒಂದೇ ಉಪಾಯ ಜೈಲಿನಿಂದ ಕದ್ದು ಓಡುವುದು ಹಾಗು ಕೆಲದಿನಗಳ ನಂತರ ಪುನಃ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವುದು. ಕ್ರಿಮಿನಲ್ ಮೈಂಡ್ ಎಂದರೆ ಇದಕ್ಕೆ ಹೇಳುವುದೇನೋ. ಹೀಗೆ ಮಾರ್ಚ್ 16, 1986 ರ ರಾತ್ರಿ ಏಷ್ಯಾದಲ್ಲೇ ಅತಿ ಹೆಚ್ಚಿನ ಭದ್ರತೆಯ ಜೈಲೊಂದರಿಂದ ಪುಟಗೋಸಿಯಂತಿದ್ದ ಚಾರ್ಲ್ಸ್ ಓಟ ಕಿತ್ತಿರುತ್ತಾನೆ. ಆದರೆ ಅಂತಹ ಭದ್ರತೆಯ ಜೈಲಿಂದ  ನೈಟ್ ವಾಕಿಗೆ ಹೋಗುವಂತೆ ನಿರಾಯಾಸವಾಗಿ ಈತ ಹೊರಬಂದಿದ್ದಾದರೂ ಹೇಗೆ?!

ಜೈಲೆಂದರೆ ಹೆಚ್ಚಾಗಿ ಪಾಪಿ ಜೀವಗಳೇ ತುಂಬಿ ತುಳುಕುವ ಭಯಾನಕ ಅಡ್ಡ. ಅಂತಹ ಜಾಗದಲ್ಲಿ ಹುಟ್ಟು ಗುಣ ಸತ್ತರೂ ಹೋಗದಂತಹ ಅಸಾಮಿಗಳನ್ನೇನು ಹುಡುಕುವುದು ಕಷ್ಟವೇ? ಇದನ್ನು ಅರಿತಿದ್ದ ಚಾರ್ಲ್ಸ್ , ಜೈಲಿನೊಗಳೇ ಡ್ರಗ್ಸ್ ಸಾಗಾಣಿಕೆಯಿಂದ ಸಿಕ್ಕಿಬಿದ್ದು ಕೊಳೆಯುತ್ತಿದ್ದ ಬಿಳಿಯನೊಬ್ಬನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಹೆಸರು ಡೇವಿಡ್ ಹಾಲ್. ಮೊದಲೇ ಪಕ್ಕ ಮನಶಾಸ್ತ್ರವನ್ನು ಅರೆದು ಕುಡಿದವನಾಗಿದ್ದ ಚಾರ್ಲ್ಸ್ ಡೇವಿಡ್ ನ ಸಂಪೂರ್ಣ ಗುಣನಡತೆಯನ್ನು ತಿಳಿಯುತ್ತಾನೆ. ಎಲ್ಲೆಲ್ಲಿ ಆತನ ವೀಕ್ ಪಾಯಿಂಟ್ ಗಳಿದ್ದವೊ ಅಲ್ಲೆಲ್ಲ ತನ್ನ ನರಿ ಬುದ್ದಿಯನ್ನು ಬಳಸಿ ಆತನನ್ನು ಒಂತರ ಎಮೋಷನಲ್ ಬ್ಲಾಕ್ ಮೇಲ್ಗೆ ಒಳಪಡಿಸುತ್ತಾನೆ. ಕೆಲ ಸಮಯದ ನಂತರ ಆತನನ್ನು ತನ್ನ ಆಟಿಕೆಯಂತಾಗಿ ಮಾಡಿಕೊಂಡು ಮೊದಲು ಆತನನ್ನು ಜೈಲಿನಿಂದ ಹೊರಕಳಿಸಿ ನಂತರ ಅವನ ಮೂಲಕ ತನ್ನ ಕಾರ್ಯವನ್ನು ಸಿದ್ಧಿಸಿಕೊಳ್ಳುವ ಪ್ಲಾನ್ ಈತನದ್ದು. ಡೇವಿಡ್ ಎಂಬ ಮಂಕನೂ ಈತನ ಮಾತಿಗೆ ಬೆಲೆಕೊಟ್ಟು ಹೇಳಿದಂತೆಯೇ ನಡೆದುಕೊಳ್ಳುತ್ತಾನೆ. ಅದೇಗೆ ಮಾನವನ ಅಂಗಾಗಗಳ ಬಗ್ಗೆ ತಿಳಿದಿದ್ದನೋ ಏನೋ ಆಸ್ಪತ್ರೆಗೆ ಬಂದ ಡಾಕ್ಟರ್ ರಿಂದಲೇ ಡೇವಿಡ್ ಗೆ ಕಿಡ್ನಿ ಸಮಸ್ಯೆ ಇದೆ ಎಂದು ನಂಬುವಂತೆ ಮಾಡಿ ಅವರಿಂದಲೇ ಈತನನ್ನು ಜಾಮೀನಿನ ಮೇಲೆ ಬಿಡುವಂತೆ ಮಾಡುತ್ತಾನೆ ಚಾರ್ಲ್ಸ್!  ಜೈಲಿನಿಂದ ಹೊರಬಂದ ಡೇವಿಡ್ ಸೀದಾ ತನ್ನ ದೇಶದ ವಿಮಾನವನ್ನು ಹತ್ತುವುದನ್ನು ಬಿಟ್ಟು ಕೀಲುಗೊಂಬೆಯಂತೆ ಚಾಲ್ಸ್ ನ ಎಸ್ಕೇಪ್ ಪ್ಲಾನ್ ಗೆ ಕಾರ್ಯೋನ್ಮುಖನಾಗುತ್ತಾನೆ.

ಅದಕ್ಕಾಗಿ ಬೇಕಾಗಿದ್ದ ಜನರನ್ನು ಉಪಕರಣಗಳನ್ನು ಡೇವಿಡ್ ಒಟ್ಟುಗೂಡಿಸತೊಡಗುತ್ತಾನೆ. ಇತ್ತ ಕಡೆ ಖದೀಮ ಚಾರ್ಲ್ಸ್ ಜೈಲಿನೊಳಗೇ ಇನ್ನೂ ಮೂವರ ಗುಂಪೊಂದನ್ನು ಕಟ್ಟಿಕೊಂಡು, ಅವರನ್ನೂ ಜೈಲಿನಿಂದ ಪರಾರಿಯಾಗಿಸುವ ಮಾತನ್ನು ಕೊಟ್ಟು ಅವರ ಮೂಲಕ ಡೇವಿಡ್ ಗೆ ಪ್ರಿಸನ್ ಬ್ರೇಕ್ ನ ಬಗ್ಗೆ ನಿರ್ದೇಶನವನ್ನು ನೀಡುತ್ತಿರುತ್ತಾನೆ. ಇವೆಲ್ಲ ಈತನ ಪ್ಲಾನ್ ಬಿ. ಆತನ ಪ್ಲಾನ್ ಎ ಬೇರೆಯೇ ಇರುತ್ತದೆ! ಅಲ್ಲದೆ ಅದು ಸಿಕ್ಕಾಬಟ್ಟೆ ‘ಸ್ವೀಟ್’ ಹಾಗು ವೆರಿ ವೆರಿ ಸಿಂಪಲ್ ಕೂಡ ಆಗಿರುತ್ತದೆ. ಎಸ್ಕೇಪ್ ಪ್ಲಾನಿನ ಕೆಲವು ತಿಂಗಳುಗಳ ಮೊದಲಿಂದಲೇ ಇಲ್ಲಸಲ್ಲದ ಕಾರಣಗಳನ್ನು ಹೇಳಿ ತಿಂಡಿ ಹಣ್ಣುಗಳನ್ನು ತರಿಸಿ ಜೈಲಿನವರಿಗೆಲ್ಲವೂ ಸಾಕೆನಿಸುವಷ್ಟು ಹಂಚುತ್ತಿದ್ದ ಚಾರ್ಲ್ಸ್. ಅಂದ ಹಾಗೆ ಈತ ಆ ಕಾಲದ ದಿ ಮೋಸ್ಟ್ ರಿಚ್ಚೆಸ್ಟ್ ಕ್ರಿಮಿನಲ್! ತನ್ನ ಬಗೆಗೆ ಪುಸ್ತಕ ಬರೆಯುವರಿಗೆ, ಚಲನಚಿತ್ರಗಳನ್ನು ಮಾಡುವವರಿಗೆ, ಇಂಟರ್ವ್ಯೂ ಮಾಡಲು ಬರುವ ಟಿವಿ ಚಾನೆಲ್ ಗಳಿಗೆ ಎರ್ರಾಬಿರಿ ಚಾರ್ಜ್ ಮಾಡುತ್ತಿದ್ದ ಚಾರ್ಲ್ಸ್ ಆಗಿನ ಕಾಲಕ್ಕೆ ಒಬ್ಬ ಕೋಟ್ಯಧಿಪತಿ. ಮೇಲಾಗಿ ದೊಡ್ಡ ದೊಡ್ಡ ಕುಳಗಳನೆಲ್ಲ ದೋಚಿ ಈತ  ಮಾಡಿಟ್ಟಿರುವ ಹಣವೇ ಎಷ್ಟಿದೆಯೆಂದು ಇಂದಿಗೂ ಸಹ ಯಾರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಅನಾಮಿಕವಾಗಿದ್ದ ತನ್ನ ಅಕೌಂಟಿನಿಂದ ಈ ಎಲ್ಲ ಕಾರುಬಾರುಗಳು ಈತನಿಗೆ ಜೈಲಿನೊಳಗಿಂದಲೇ ಸಾಧ್ಯವಾಗುತ್ತಿದ್ದವು. ಮಾರ್ಚ್ 16 ರ ಭಾನುವಾರ ತನ್ನ ಹುಟ್ಟುಹಬ್ಬವೆಂದು ಭರ್ಫಿ ಹಾಗು ದ್ರಾಕ್ಷಿಯನ್ನು ತರಿಸಿದ ಈತ ಎಲ್ಲರಿಗೂ ಬಾಯಿ ತುಂಬುವಷ್ಟು ನೀಡಿ ಖುಷಿಪಡತೊಡಗಿದ. ಜೈಲಿನ ಗಾರ್ಡುಗಳೂ ಯಾವುದೇ ಸಂಶಯವಿಲ್ಲದೆ ಆತ ನೀಡಿದ ಸಿಹಿಯನ್ನು ತಿಂದು ತೇಗಿದರು. ಆದರೆ ಆ ತೇಗು ಸಾಮಾನ್ಯದ  ತೇಗಾಗಿರಲಿಲ್ಲ. ತಿಂದ ಕೆಲ ಹೊತ್ತಿನಲ್ಲಿಯೇ ಎಲ್ಲಿಲ್ಲದ ನಿದ್ರೆ ಅವರನ್ನು ಆವರಿಸತೊಡಗಿತು. ಕಾರಣ ಈತ ‘ಲಾರ್ಪೊಸ್’ ಎಂಬ ನಿದ್ರೆ ಮಾತ್ರೆಯ ಒಟ್ಟು 820 ಸಣ್ಣ ಸಣ್ಣ ಗುಳಿಗೆಗಳನ್ನು ಆ ಸಿಹಿಗಳಲ್ಲಿ ಸೇರಿಸಿದ್ದನ್ನು! ತಿಂದು ನಿದ್ರೆಹೋಗುವುದು ಹಾಗಿರಲಿ ಬಹುಶಃ ಆ ಮಟ್ಟಿನ ಡೋಸ್ಗೆ ವಾಸನೆ ಕುಡಿದೇ ಹಲವರು ಮೂರ್ಛೆ ಹೋಗಿರಬಹುದು. ಆದರೆ ಗುಳಿಗೆಗಳು 820 ಆಗಿದ್ದರೆ ಚಾರ್ಲ್ಸ್ ಮಾತ್ರ ಪಕ್ಕಾ 420! ಅಷ್ಟು ಗುಳಿಗೆಗಳಿದ್ದರೂ, ಅದೆಷ್ಟೇ ಅವುಗಳನ್ನು ತಿಂದರೂ ಬರೋಬ್ಬರಿ ಮೂವತ್ತು ನಿಮಿಷಗಳವರೆಗೂ ಯಾವುದೇ ಪರಿಣಾಮ ಬೀರದಂತೆ ಡೋಸ್ ಗಳನ್ನು ಮಾಡಿದ್ದ ಈ ಡ್ರಗ್ ಪರಾಕ್ರಮಿ. ಮುಂದಿನ್ನೇನು. ಸರಿಯಾಗಿ ಮೂವತ್ತು ನಿಮಿಷಗಳ ನಂತರ ಗೇಟಿನ ದ್ವಾರಪಾಲಕರೆಲ್ಲರೂ ತಮ್ಮ ಬಾಯಿಗಳನ್ನು ತೆರೆದುಕೊಂಡು ಗನ್ನುಗಳನ್ನು ತಬ್ಬಿಕೊಂಡು ಸುಖ ನಿದ್ರೆಗೆ ಜಾರಿದ್ದರು. ರಾಜಾರೋಷವಾಗಿ ಹೊರನಡೆದರು ಚಾರ್ಲ್ಸ್ ಹಾಗು ಆತನ ದೇಸಿ ಸಂಗಡಿಗರು.

ಇದು ಭಾರತದ ಕಳ್ಳ ಪೋಲೀಸರ ಇತಿಹಾಸದಲ್ಲಿ ಹಚ್ಚಳಿಯಾಗಿ ಉಳಿದ ಬೆಚ್ಚಿಬೀಳಿಸುವ ಕಥನ. ನಮ್ಮ ವ್ಯವಸ್ಥೆ ಅದೆಷ್ಟೇ ಉತ್ಕೃಷ್ಟವಾಗಿದ್ದರೂ ಜೈಲುಗಳು ಅದೆಂತಹದ್ದೇ ಭದ್ರತೆಯನ್ನು ಒಳಗೊಂಡಿದ್ದರೂ ಕಳ್ಳನನ್ನು ಕೂಡಿಡುವಾಗ ಕಳ್ಳನಂತೆಯೇ ಯೋಚಿಸಬೇಕೆಂಬ ಪಾಠವನ್ನು ಇದು ಅಧಿಕಾರಿಗಳಿಗೆ ನೀಡಿತು. ಅಲ್ಲಿಂದ ಮುಂದೆ ಚಾರ್ಲ್ಸ್ ತನಗಾದ ಎಲ್ಲ ಬಗೆಯ ಸುಳಿವುಗಳನ್ನು ನೀಡುತ್ತಾ ಪೊಲೀಸರೇ ಅವನ ಬಳಿಗೆ ಬರುವಂತೆ ಮಾಡಿಕೊಳ್ಳುತ್ತಾನೆ. ಗೋವಾದ ಹೋಟೆಲೊಂದರಲ್ಲಿ ಬಂದಿಯಾದ ಆತ ಅಂದುಕೊಂಡಂತೆ ಪ್ರಿಸನ್ ಬ್ರೇಕಿನ ಸಲುವಾಗಿ ಮುಂದಿನ 10 ವರ್ಷ ಅಂದರೆ 1997 ರ ವರೆಗೂ ಜೈಲುವಾಸವನ್ನನುಭವಿಸಿ ಕೊನೆಗೂ ಥೈಲ್ಯಾಂಡಿನ ಅಧಿಕಾರಿಗಳಿಗೆ ಸಿಗದಂತೆ ಬಚಾವಾಗುತ್ತಾನೆ. ಇಂತಹ ಒಬ್ಬ ಕೊಲೆಪಾತಕೀಗೂ ನಮ್ಮಲ್ಲಿ ಆತ್ಮಸ್ಟ್ರೈರ್ಯ ವನ್ನು ತುಂಬಿ ಆತನ ಪರವಾಗಿ ಕಾಯ-ವಾಚಾ-ಮನಸಾ ವಾದಿಸುತ್ತಾ ಹೋರಾಟ ನಡೆಸಿ ದೇಶಕ್ಕಾಗಿ ಕಾದಾಡಿದ ಯೋಧನೊಬ್ಬನ್ನು ಬೀಳ್ಕೊಡುವಂತೆ ವಿಮಾನ ಹಚ್ಚುವ ನಮ್ಮ ಲಾಯರುಗಳಿಗೂ ಪ್ರಶಸ್ತಿಯನ್ನು ತಂದು ನೀಡಬೇಕು! ಭಾರತದಿಂದ ಪ್ಯಾರಿಸ್ ಗೆ ಹಾರಿದ ಚಾರ್ಲ್ಸ್ ತಾನು ದೋಚಿದ ಹಣದಿಂದ ಅಲ್ಲಿ ಒಬ್ಬ ಸೆಲೆಬ್ರಿಟಿಯ ಐಷಾರಾಮಿ ಜೀವನವನ್ನು ನಡೆಸುತ್ತಾನೆ. ಆದರೆ ವಿಧಿಯಾಟದ ಮುಂದೆ ಯಾರು ದೊಡ್ಡವರು? ಅಲ್ಲಿಂದ 5 ವರ್ಷದ ನಂತರ ನೇಪಾಳದಲ್ಲಿ ಸೆರೆಸಿಕ್ಕ ಚಾರ್ಲ್ಸ್ ಅಲ್ಲಿನ ಯಾವುದೊ ಹಳೆಯ ಕೊಲೆಕೇಸಿನಲ್ಲಿ ಪುನ್ಹ ಬಂಧಿತನಾಗಿ ಜೀವಾವಧಿ ಶಿಕ್ಷೆಯನ್ನನುಭವಿಸುತ್ತಾನೆ. ಆದರೆ ಅರ್ವತ್ತು ವರ್ಷದ ಮುದುಕ ಚಾರ್ಲ್ಸ್  ಪೆನ್ನಿನ ನಿಬ್ ಗಳ ಮೂಲಕ ಡ್ರಗ್ಸ್ ಗಳನ್ನು ತರಿಸಿ ಅಲ್ಲಿಯೂ ಪರಾರಿಯಾಗುವ ಖತರ್ನಾಕ್ ಸ್ಕೆಚನ್ನು ಮತ್ತೊಮ್ಮೆ ರೂಪಿಸುತ್ತಾನೆ. ಆದರೆ ಈ ಭಾರಿ ಅಲ್ಲಿನ ಪೊಲೀಸರಿಗೆ ರೆಡ್ ಹ್ಯಾಂಡಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ  ಹಾಗು ಇಂದಿಗೂ ಅಲ್ಲಿಯೇ ಕೊಳೆಯುತ್ತಿದ್ದಾನೆ..

ಬರೆಯುತ್ತ ಹೋದರೆ ಇಂಥ ಸಮಾಜಘಾತುಕ ವ್ಯಕ್ತಿತ್ವಗಳು ಅಗಣಿತ ಸಂಖ್ಯೆಯ ಸರಕುಗಳನ್ನು ನೀಡುತ್ತಾ ಹೋಗುತ್ತವೆ. ಆದರೆ ಇದರಿಂದ ಸಮಾಜಕ್ಕೆ ಒಳಿತಾಗುವ ವಿಚಾರಗಳಂತೂ ಎಳ್ಳಷ್ಟೂ ಇರುವುದಿಲ್ಲ. ಆದರೆ ಒಂದು ವಿಷಯ ಮಾತ್ರ ದಿಟ. ಪ್ರತಿಭೆಯೆಂಬ ಮಾಯಕುದುರೆಗೆ ಲಂಗು ಲಗಾಮೆಂಬ ಮೂಗುದಾರವನ್ನು ತೊಡಿಸದಿದ್ದರೆ ಅದರ ಓಟ ಅದೆಷ್ಟೇ ಥ್ರಿಲ್ಲಿಂಗಾದರೂ ಅಂತ್ಯ ಮಾತ್ರ ಅಷ್ಟೇ ಘೋರವಾಗಿರುತ್ತದೆ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments