ಮೋದಿ ಮತ್ತೊಮ್ಮೆ ಎನ್ನುವುದಕ್ಕಿಂತ, ಮೋದಿ ಮತ್ತೆ ಮತ್ತೆ ಎನ್ನಿ!
– ಸಾಗರ ಮುಧೋಳ
ಕಳೆದ ಒಂದು ದಶಕದ ಹಿಂದೆ ಯಾರಾದರೂ ಒಬ್ಬ ವಿದ್ಯಾರ್ಥಿ ಅಥವಾ ಯುವಕ ತಾನೂ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕು ಅಂದುಕೊಂಡಿದ್ದರೆ, ಅದು ಅವನ ದೃಷ್ಟಿಯಲ್ಲಿ ವಿಜ್ಞಾನಿ, ಅಧ್ಯಾಪಕ, ಅಧಿಕಾರಿ, ವೈದ್ಯ ಹೀಗೆ ಹಲವು ಬಗೆಯಲ್ಲಿ ಯೋಚಿಸುತ್ತಿದ್ದ. ಆದರೆ, ತಪ್ಪಿಯೂ ನಾನೊಬ್ಬ ರಾಜಕಾರಣಿಯಾಗಬೇಕೆಂದು ಚಿಂತಿಸುತ್ತಿರಲಿಲ್ಲ. ರಾಜಕಾರಣವೆಂದರೆ ಅದೊಂದು ಸಮಾಜದ ಬಹು ಜನರ ಆಶೋತ್ತರಗಳಿಂದ ಅಸ್ಪೃಶ್ಯವಾಗಿಯೇ ಉಳಿದ ಕ್ಷೇತ್ರ. ಅಲ್ಲಿ ಮಾನವೀಯತೆ, ಪ್ರಾಮಾಣಿಕತೆ, ಒಳ್ಳೆಯತನಕ್ಕೆ ಬೆಲೆಯೇ ಇಲ್ಲ. ರಾಜಕಾರಣವಿರುವುದೇ ದುಡ್ಡು ಮಾಡುವುದಕ್ಕೆ, ಜನರನ್ನು ಮೋಸ ಮಾಡುವುದಕ್ಕೆ ಎನ್ನುವುದು ನಾಡಿನ ಹಲವರಿಂದ ಅಸ್ಖಲಿತವಾಗಿ ಹೊಮ್ಮುತ್ತಿದ್ದ ವಾಣಿ. ಯಾರೊಬ್ಬರೂ ಊಹಿಸಿರಲಿಲ್ಲ! 2014 ರ ಸಂದರ್ಭದಿಂದ ಈ ದೇಶದಲ್ಲಿ ಬಾಲಿವುಡ್, ಕ್ರಿಕೆಟ್ ಗಿಂತ ಅತಿ ಹೆಚ್ಚು ಚರ್ಚೆ ಮತ್ತು ಮೆಚ್ಚುಗೆ ಪಡೆದ ವಿಷಯ ರಾಷ್ಟ್ರದ ರಾಜಕೀಯವೇ ಆಯಿತು. ಮೋದಿ ಎಂದರೆ ಅವರೊಬ್ಬ Political leader ಅಲ್ಲ, ಬದಲಾಗಿ ದೇಶದ ಬ್ರಾಂಡ್! ಮೋದಿ ಟೀ,ಮೋದಿ ಕುರ್ತಾ,ಮೋದಿ ಜಾಕೆಟ್ ಎಲ್ಲವೂ ಬ್ರಾಂಡ್. ಮೋದಿಗೆ ಸಂಬಂಧಿಸಿರುವುದೆಲ್ಲವು ಬ್ರಾಂಡ್. ಹಿಂದೆ ಅಪ್ಪ -ಅಮ್ಮ ಮನೆಯಲ್ಲಿ ರಾತ್ರಿ ನ್ಯೂಸ್ ನೋಡುತ್ತಿರಬೇಕಾದರೆ, ತಮ್ಮನ್ನು ಇಂದಿನ ಕ್ರಿಕೆಟ್ ಮ್ಯಾಚನ್ನು ನೋಡುವುದರಿಂದ ತಪ್ಪಿಸಿರುವವರ ಕಡೆ ಮಕ್ಕಳು ಶಪಿಸುತ್ತಾ ಮೂಗು ಮುರಿಯುತ್ತಿದ್ದರು. ಆದರೆ ಮೋದಿ ಎಂಟ್ರಿ ಕೊಟ್ಟ ಮೇಲೆ ಸಕುಟುಂಬ ಸಮೇತರಾಗಿ ಮನೆಯ ಟಿ.ವಿ. ಪರದೆಯ ಮೇಲೆ ಮೋದಿ ಗಾಥೆಯನ್ನು ನೋಡಲು ಶುರುಹಚ್ಚಿದರು. 2014 ರಲ್ಲಿ ಮೋದಿ ಗೆಲ್ಲುವುದು ಅನಿವಾರ್ಯ ಮಾತ್ರವಲ್ಲ, ಅಂತಿಮವಾದ ಪೂರ್ವ ನಿಯೋಜಿತ ತೀರ್ಮಾನವಾಗಿತ್ತು. Breaking news ಗಾಗಿ ಹಪಹಪಿಸುತ್ತಿದ್ದ ನ್ಯೂಸ್ ಚಾನೆಲ್ ಗಳಿಗೆ ಮೋದಿಯಿಂದ ಪ್ರತಿದಿನ Breaking news ಸಿಗುವ ಹಾಗಾಯಿತು. ಕೊನೆಗೆ ಮೋದಿ ಸುನಾಮಿಯ ಎದುರು ಪ್ರತಿಪಕ್ಷಗಳು ಕೊಚ್ಚಿಕೊಂಡು ಹೋದವು. ಅತ್ತ ನಾಯಕತ್ವವುಯಿಲ್ಲದೆ, ಇತ್ತ ಧ್ಯೇಯೋದ್ದೇಶಗಳು ಇಲ್ಲದ ಪ್ರತಿಪಕ್ಷಗಳು ಮೋದಿಯ ವಿಜಯಕ್ಕೆ ತಲೆ ಬಾಗಲೇ ಬೇಕಾಯಿತು. ಮೋದಿ ಈ ದೇಶದ ಪ್ರಧಾನಮಂತ್ರಿ ಎಂದು ಜನ ಹೇಳುತ್ತಿರುವಾಗ, ” ನಾನು ಈ ದೇಶದ ಪ್ರಧಾನಮಂತ್ರಿಯಲ್ಲ, 125 ಕೋಟಿ ಭಾರತೀಯರ ಪ್ರಧಾನ ಸೇವಕ” ಎಂದ ಮೋದಿಯ ಕೃತಜ್ಞತಾ ಭಾವಕ್ಕೆ ಇಡೀ ದೇಶ ಶರಣೆಂದಿತು.
ಹಾಗೋ, ಹೀಗೋ ಮೋದಿ ಅಧಿಕಾರ ವಹಿಸಿದ ನಂತರ ಸ್ವಲ್ಪ ದಿನಗಳು ಪ್ರತಿಪಕ್ಷಗಳು ಟೀಕೆ ಮಾಡಿದರೂ, ಅಷ್ಟೊಂದು ಉಗ್ರರೂಪವನ್ನೆನೂ ತಾಳುತ್ತಿರಲಿಲ್ಲ. ಆದರೆ ಮೋದಿಯವರು ಯಾವಾಗ ನೋಟು ರದ್ಧತಿಯನ್ನು ಕೈಗೆತ್ತಿಕೊಂಡರೋ, ಆಗಲೇ ಪ್ರತಿಪಕ್ಷಗಳ ಆಂತರ್ಯದಲ್ಲಿ ಕುದಿಯುತ್ತಿದ್ದ ಬೆಂಕಿ ಹೊರಬಂದಿದ್ದು. ಇಡೀ ದೇಶವ್ಯಾಪಿ ಪ್ರತಿಭಟನೆಗಳಾದವು, ಮೋದಿ ನಿಂದನೆ ಮಿತಿ ಮೀರಿತು. ಕೋಟ್ಯಾಂತರ ರೂಪಾಯಿಗಳ ಹಗರಣದಲ್ಲಿ ಪಾಲುದಾರರಾಗಿರುವವರು ಹರಿದ ಕಿಸೆಯಲ್ಲಿ ಕೈ ಹಾಕಿ ಈ ದೇಶದ ಬಡವರ ಧ್ವನಿ ನಾನು ಎಂದು ನಾಟಕವಾಡಿದರು. ಅಂದಿನಿಂದ ಈ ದೇಶದಲ್ಲಿ Anti -Modi brigade ಅಧಿಕೃತವಾಗಿ ರೂಪುತಳೆಯಿತು. ನಂತರ ಒಂದರ ನಂತರ ಮತ್ತೊಂದು GST, ರಫೇಲ್, ಮಲ್ಯರ ಸಾಲ ಪ್ರಕರಣ ಹೀಗೆ ಸಿಕ್ಕಂತೆಲ್ಲ ಸಿಕ್ಕ ಸಿಕ್ಕಲ್ಲೆಲ್ಲ ಮೋದಿಯವರನ್ನು ಚುಚ್ಚಲು ಪ್ರಾರಂಭಿಸಿದರು. ಭವಿಷ್ಯ, ಬೇರೆ ಯಾರಾದರೂ ಆಗಿದ್ದರೆ ಹೇಗೆ ನಿರ್ವಹಿಸುತ್ತಿದ್ದರೊ ಗೊತ್ತಿಲ್ಲ. ಆದರೆ ಮೋದಿಯವರು ಸ್ಥಿತಪ್ರಜ್ಞರಂತೆ ಎಲ್ಲವೂ ಸ್ವೀಕರಿಸಿಯೂ, ಎಂದಿನಂತೆ ಬತ್ತದ ಉತ್ಸಾಹದಿಂದ ಮಾತೃಭೂಮಿಯ ಸೇವಗೆ ಆಣಿಯಾದರು. ಮೋದಿಯನ್ನು ವಿಶ್ವ ನಾಯಕನೆಂದು ಕರೆದು, ದರ್ಶನಕ್ಕೆ ವಿದೇಶದ ಗಣ್ಯಮಣಿಗಳು ತುದಿಗಾಲಲ್ಲಿ ನಿಂತಿರುವಾಗ ಭಾರತದ ಈ Anti – Modi brigade ಮಾತ್ರ ದೇಶವಾಸಿಗಳಿಗೆ ಮಣ್ಣು ತಿನ್ನಿಸುವ ಕೆಲಸವೇ ಮಾಡಿದ್ದು! ಹಲವು ರಾಷ್ಟ್ರ ಚಿಂತಕರ ಸುದೀರ್ಘ ತಪಸ್ಸಿನ ಫಲವಾಗಿ ಉದಯಿಸಿದ ಮೋದಿಯನ್ನು ಅಧಿಕಾರದಿಂದ ಇಳಿಸಲು JNU ನಂತಹ ದೇಶದ ಪ್ರತಿಷ್ಠಿತ ಶೈಕ್ಷಣಿಕ ಕೇಂದ್ರಗಳಿಂದ ಪ್ರಯತ್ನಗಳ ಸರಮಾಲೆಯೆ ಶುರುವಾಯಿತು. ಪಾಠ ಹೇಳಲು ಮನಸ್ಸಿಲ್ಲದ ಮಾಸ್ತರರು, ಪಾಠ ಕೇಳಿಯೂ ಉದ್ಧಾರವಾಗೋದಕ್ಕೆ ಲಾಯಕ್ಕಿಲ್ಲದ ದಂಡಪಿಂಡ ಹುಡುಗರು ಸೇರಿ ಕ್ಯಾಂಪಸ್ ನಿಂದ ಹೊರಬಂದು Anti- Modi brigade ಗೆ ಬಲತುಂಬತೊಡಗಿದರು. ಊರಿನ ರಸ್ತೆ ಸರಿಯಾಗಿಲ್ಲದಿದ್ದರು ಮೋದಿ ಕಾರಣ, ತಮ್ಮ ಮನೆಯ ಟಾಯ್ಲೆಟ್ ಕ್ಲೀನ್ ಆಗಿರದಿದ್ದರೂ ಮೋದಿನೇ ಕಾರಣ ಎನ್ನುವಷ್ಟರಮಟ್ಟಿಗೆ Anti – Modi brigade ಜನಸಮೂಹಕ್ಕೆ ಸಾರಲು ಯತ್ನಿಸಿತು.
ಯಾರು ಎಷ್ಟೇ ಬೊಬ್ಬೆ ಹೊಡೆದರೂ, ಸತ್ಯ ಎನ್ನುವುದು ಸತ್ಯವೇ ಅಲ್ಲವೇ? ಕಳೆದ ನಾಲ್ಕುವರೆ ವರ್ಷಗಳಲ್ಲಿ ಮೋದಿ ಸರ್ಕಾರ ಈ ದೇಶದಲ್ಲಿ ಮಾಡಿರುವ ಅಭಿವೃದ್ಧಿ, ಬೆಳವಣಿಗೆಯನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಗಾಂಧೀಯ ಹೆಸರಿನಿಂದ ವೊಟು ಕೇಳುವವರ ಬದಲಾಗಿ ಗಾಂಧೀಯ ಚಿಂತನೆಯ ಅಡಿಯಲ್ಲಿ ಕೆಲಸಮಾಡಿದ ವ್ಯಕ್ತಿ ಮೋದಿ. ಮಹಾತ್ಮ ಗಾಂಧೀಜಿಯವರ ಅಭಿಪ್ರಾಯದಲ್ಲಿ, ಸರ್ಕಾರ – ಜನರ ಆಶೋತ್ತರಗಳಿಗೆ ಸ್ಪಂದಿಸುವ ಒಂದು ಸಂಸ್ಥೆ. ಜನರು ಮತ್ತು ಸರ್ಕಾರದ ನಡುವೆ ಯಾವುದೇ ರೀತಿಯ ಅಡಚಣೆಯಿರಬಾರದು. ಜನರ ಪ್ರಾತಿನಿಧ್ಯತೆ ಸಂಪೂರ್ಣವಾಗಿ ಸರ್ಕಾರದ ಯೋಜನೆಗಳಲ್ಲಿರಬೇಕು. ಅಂತೆಯೇ ಮೋದಿಯವರು ಮಹಾತ್ಮರು ನೆನಪಿನಲ್ಲೇ ” ಸ್ವಚ್ಛ ಭಾರತ “ದ ನಿರ್ಮಾಣಕ್ಕೆ ಪೊರಕೆ ಹಿಡಿದು ಸಿದ್ಧರಾದರು. ಅಲ್ಲಿಯವರೆಗೆ ಮನೆಯ ಕಸವನ್ನೂ ಎತ್ತದವರು, ಬೀದಿಯನ್ನು ಸ್ವಚ್ಛಗೊಳಿಸಲು ಸನ್ನದ್ಧರಾದರು. ಹಳ್ಳಿ – ನಗರಗಳು ಸ್ವಚ್ಛವಾಗಲಾರಂಭಿಸಿತು. ಜನರಿಗೆ ಸ್ವಚ್ಛತೆಯ ಅರಿವಿನ ಜೊತೆಗೆ ಸರ್ಕಾರದ ಜೊತೆಗೆ ಒಂದಾಗಿ ಕೆಲಸ ಮಾಡುವ ಅವಕಾಶವು ದಕ್ಕಿತು. Skill India ದ ಮುಖಾಂತರ ಕೌಶಲ್ಯದ ಅವಗಾಹನೆಗಾಗಿ ಯುವಶಕ್ತಿ ಸಜ್ಜಾಯಿತು. Start-up India ಯುವಮನಸುಗಳಿಗೆ ಕನಸಿನ ಸಕಾರಕ್ಕೆ ಆಧಾರವಾಗುವುದರ ಮೂಲಕ ಭಾರತದ ಉದ್ಯಮ ಜಗತ್ತಿಗೆ ಹೊಸ ಚೈತನ್ಯವನ್ನು ತುಂಬಿತು. ವಿದ್ಯುತ್ತಿನ ಬೆಳಕು ಕಾಣದ ಗ್ರಾಮಗಳಿಗೆ ವಿದ್ಯುತ್ ಪ್ರಸರಣದ ಜೊತೆಗೆ ಅಭಿವೃದ್ಧಿಯ ಶೀಘ್ರಪಥದಲ್ಲಿ ಸಂಚರಿಸುತ್ತಿರುವ ಸ್ಮಾರ್ಟ್ ಟೆಕ್ನಾಲಜಿಯು ಅವರ ಬಾಳಿಗೆ ತಲುಪಿತು. ವೈದ್ಯಕೀಯ, ಶಿಕ್ಷಣ, ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರಗಳಿಗೂ ವಿಕಾಸದ ಬೃಹತ್ ಸ್ಪರ್ಶ ದೊರಕಿತು. ನೋಡನೋಡುತ್ತಲೇ ವಿಶ್ವದ ಪಟ್ಟಿಯಲ್ಲಿ 50 – 60 ಇರುವ ದೇಶದ ಆರ್ಥಿಕ ಅಭಿವೃದ್ಧಿ ಸೂಚ್ಯಂಕ 3 – 4 ರಲ್ಲಿ ಏರತೊಡಗಿತು. ವಿಶ್ವ ಮೋದಿ ಆಗಮನಕ್ಕೆ ರತ್ನಗಂಬಳಿ ಹಾಸತೊಡಗಿತು. ಜಗತ್ತಿನಲ್ಲಿ ಭಾರತದ ಗುಣ-ಗಾನ, ವೇದ- ಮಂತ್ರಗಳ ಘೋಷ ಹೊಮ್ಮತೊಡಗಿತು. ಭಾರತದ ಯೋಗ-ಆಯುರ್ವೇದ-ಸಂಸ್ಕೃತ-ಸಂಸ್ಕೃತಿ-ಕಲೆಗಳು ವಿದೇಶಿಯರ ಮನಸೂರೆಗೊಂಡಿತು. ಭಾರತದ ವಿಜ್ಞಾನಿಗಳು, ಶಿಕ್ಷಕರು,ವೈದ್ಯರು, ಅಭಿಯಂತರರು, ಲೆಕ್ಕ ಪರಿಶೋಧಕರು ಅಷ್ಟೇ ಏಕೆ ಈ ದೇಶದ ಯೋಗಿಗಳು, ಸಾಧು-ಸಂತರು, ಬಾಬಾಗಳು ವಿದೇಶಕ್ಕೆ Export ಆಗತೊಡಗಿದರು. ಈ ಬೆಳವಣಿಗೆಯ ನಂತರ ಭಾರತದ Soft power ನ ಬಗ್ಗೆ ವ್ಯಾಪಕ ಚರ್ಚೆಗಳಾಗತೊಡಗಿತು. ಭಾರತದ ಪ್ರವಾಸೋದ್ಯಮ ವಿದೇಶಿಯರನ್ನು ಸೆಳೆಯಲಾರಂಭಿಸಿದೆ. ಸಾಮಾನ್ಯ ಹಳ್ಳಿಯ ಹುಡುಗನು ಕೂಡಾ ವಿದೇಶಗಳ ಜೊತೆ ಸಂಪರ್ಕವನ್ನಿಡಲು ಸಾಧ್ಯವಾಗಿದೆ. ಭಾರತ ಎಂದರೆ ಯಾವುದೋ ಬಡ ರಾಷ್ಟ್ರ ಅಲ್ಲ, ಇಂದು ವಿಶ್ವ ಎದುರು ನೋಡುತ್ತಿರುವ ಜಾಗತಿಕ ಸಾರಥ್ಯವಹಿಸಲಿರುವ ನಾಯಕ.
ಅಭಿವೃದ್ಧಿಯ ಜೊತೆಯಲ್ಲಿಯೇ ಶತ್ರು ಸಮನ್ವಯ ಕಾರ್ಯ. ಇನ್ಯಾರಾದರೂ, ಭಾರತದ ತಂಟೆಗೆ ಬಂದರೆ ಅವರು ಭೂಪಟದಿಂದಲೇ ನಾಶವಾಗುವ ದಿಟ್ಟ ಎಚ್ಚರಿಕೆ ಭಾರತ ನೀಡಿದೆ. ಸೈನಿಕರ ತಲೆ ಕಡಿದು ಚೆಲ್ಲಾಟವಾಡುತ್ತಿರುವ ಪಾಕಿಸ್ತಾನ ಸರ್ಜಿಕಲ್ ಸ್ಟೈಕ್ ಗೆ ಬೆಚ್ಚಿಬಿದ್ದಿದೆ. ಚೀನಾದ ಕುಟೀಲ ನೀತಿಗಳಿಗೆ ಭಾರತ ಸಮರ್ಥ ಉತ್ತರ ನೀಡುತ್ತಿದೆ. ಭಾರತದ ಬಗ್ಗೆ ಗೌರವ ಮಾತ್ರವಲ್ಲ, ಶತ್ರು ರಾಷ್ಟ್ರಗಳಿಗೆ ಭಯವೂ ಮೂಡಿದೆ. ಸೈನಿಕರ ತ್ಯಾಗ – ಬಲಿದಾನಗಳಿಗೆ ದೇಶ ಕಣ್ಣಿರಿಡುತ್ತಿದೆ. ಮನೆಯ ಆಧಾರವನ್ನು ಕಳೆದುಕೊಂಡ ಸೈನಿಕರ ಕುಟುಂಬಗಳಿಗೆ ಸಮಾಜದಲ್ಲಿ ಪೂಜ್ಯ ಸ್ಥಾನದ ಜೊತೆಗೆ ಸಮರ್ಪಕವಾಗಿ ಪರಿಹಾರ ಸಿಗುತ್ತಿದೆ. ದೇಶ ಕಾಯುವ ಸೈನಿಕ, ಆತ ನಿಜವಾದ ಹೀರೋ! ಎಂದು ಯುವಸಮೂಹ ಅರಿಯಲು ಪ್ರಾರಂಭಿಸಿದೆ. ಜಾಗತಿಕ ಮಟ್ಟದ ಯಾವುದೇ ನಿರ್ಧಾರಗಳಿಗೆ ಇಂದು ಭಾರತ ಪ್ರಮುಖ ನಿರ್ಧಾರಕವಾಗಿದೆ. ಭಾರತದ ವಿದೇಶಾಂಗ ನೀತಿ ವಿಸ್ತರಣೆಯಾಗಿದೆ ರಾಜತಾಂತ್ರಿಕ ಸಂಬಂಧಗಳು ಗಟ್ಟಿಯಾಗಿವೆ. ಬುದ್ಧಿ ಇರುವ ಎಲ್ಲರೂ ಮೋದಿ ಮತ್ತೆ ಬೇಕು. ಮೋದಿ ಮತ್ತೊಮ್ಮೆ ಎಂಬ ಸಂಕಲ್ಪಕ್ಕೆ ನಾಂದಿ ಹಾಡಿದ್ದಾರೆ.
ಇಷ್ಟರಲ್ಲೇ, ಪಂಚರಾಜ್ಯ ಗಳ ಚುನಾವಣೆಯಲ್ಲಿ ಸೋತಿರುವ ಹತಾಶೆಯು ಕಾಡುತ್ತಿದೆ. Anti – Modi brigade ಸರ್ವ ಪ್ರಯತ್ನಗಳಲ್ಲಿ ತಲ್ಲೀನವಾಗಿದೆ. ಸೂಕ್ತ ನಾಯಕತ್ವಯಿಲ್ಲದೆ ಕಾಂಗ್ರೆಸ್ ಪಕ್ಷ ಮಿತ್ರಪಕ್ಷಗಳಿಂದ ನಾಯಕತ್ವವನ್ನು Import ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಈ ಬಾರಿ ಮೋದಿ ಮತ್ತೆ ಬಂದರೆ ನಮಗೆ ಉಳಿಗಾಲವಿಲ್ಲ ಎಂದು ಭ್ರಷ್ಟರ ಎದೆ ನಡುಗತೊಡಗಿದೆ. ಮೋದಿ ಎಂಬ ಬೆಂಕಿಯ ಜೊತೆಗೆ ಚುನಾವಣಾ ಚಾಣಕ್ಯ ಅಮಿತ್ ಶಾ, ಭ್ರಷ್ಟರ ಬೇಟೆಯಾಡುವ ಸಮರ್ಥ ಸೇನಾನಿ ಡಾ. ಸುಬ್ರಹ್ಮಣ್ಯಂ ಸ್ವಾಮಿ ಮತ್ತು ವಿಕಾಸದ ದಶದಿಕ್ಕುಗಳಿಗೂ ಹಬ್ಬಿದ ಮೋದಿ ಸಂಪುಟದ ಸಚಿವರು, ಮೋದಿಯನ್ನು ಪ್ರೀತಿಸುವ, ಗೆಲ್ಲಿಸಲು ಸಿದ್ಧರಾಗಿರುವ ಜನಸ್ತೋಮವನ್ನು ನೋಡಿದಾಗ ಈ Anti – Modi brigade ಗೆ ಮರಣ ಭಯ ಕಾಡುತ್ತಿದೆ. ಇನ್ನಾದರೂ ಆಗಲಿ, ತಮ್ಮ ಅಸ್ತಿತ್ವದ ಉಳಿವಿಗಾಗಿ ಶತಾಯ- ಗತಾಯ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚೆಗೆ ಕನ್ನಡದ ಶ್ರೇಷ್ಠ ಲೇಖಕ ಎಸ್.ಎಲ್. ಭೈರಪ್ಪನವರು ಮಾಧ್ಯಮಗಳೊಂದಿಗೆ, ” ಇನ್ನೂ 15 ವರ್ಷ ಮೋದಿ ಅಧಿಕಾರದಲ್ಲಿ ಇರಬೇಕು, ಆಗಲೇ ಈ ದೇಶಕ್ಕೆ ಉಳಿಗಾಲ” ಎನ್ನುವುದರ ಮೂಲಕ ಭವಿಷ್ಯದ ಚಿತ್ರಣ ತೆರೆದಿಟ್ಟಿದ್ದಾರೆ. ಮೋದಿ ಮತ್ತೊಮ್ಮೆ ಎಂಬ ಸಂಕುಚಿತತೆಯ, ಕಾಲದ ಪ್ರಭಾವಕ್ಕೆ ಒಳಗಾಗದೆ ನಾಡಿಗಾಗಿ ಮೋದಿ, ನನಗಾಗಿ ಮೋದಿ, ಮೋದಿಗಾಗಿ ನಾವು. ಇದು ಪಕ್ಷಾತೀತವಾದ ಪ್ರಯತ್ನ – ದೇಶದ ಉಳಿವಿಗಾಗಿ ಯತ್ನ. ಮೋದಿ ಮತ್ತೊಮ್ಮೆ ಅಲ್ಲ, ಮೋದಿ ಮತ್ತೆ ಮತ್ತೆ ದೇಶದ ಗೌರವಕ್ಕಾಗಿ, ಅಖಂಡತೆಗಾಗಿ, ಸ್ವಾಭಿಮಾನಕ್ಕಾಗಿ ಮತ್ತು ಸುಂದರ ಭವಿಷ್ಯಕ್ಕಾಗಿ……….