ವಿಷಯದ ವಿವರಗಳಿಗೆ ದಾಟಿರಿ

ಜನವರಿ 3, 2019

ಮೋದಿರಾಗಾ ಸರಿಸಿ ಮತ ಹಾಕಲು ಮತ್ತೊಂದು ಹೆಸರು ಹೇಳುವಿರಾ?

‍ನಿಲುಮೆ ಮೂಲಕ

– ಗೋಪಾಲಕೃಷ್ಣ
ಚಿಕ್ಕಮಗಳೂರು

4CE0D6B8-390C-4E23-889C-7727E2BCC073ಹಾಗೆ ಒಮ್ಮೆ ಕಲ್ಪಿಸಿಕೊಳ್ಳಿ; 2014ರಲ್ಲಿ ನರೇಂದ್ರ ಮೋದಿಯವರಿಗೆ ಬಹುಮತ ಸಿಗದೇ ಇದ್ದಿದ್ದರೆ, 18 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ, 16 ಸದಸ್ಯರನ್ನು ಹೊಂದಿದ್ದ ಚಂದ್ರಬಾಬು ನಾಯ್ಡು, 37 ಸ್ಥಾನ ಹೊಂದಿದ್ದ ಎಐಎಡಿಎಂಕೆ ಹೇಗೆಗೆಲ್ಲಾ ‘ಪೊಲಿಟಿಕಲ್ ಬ್ಲಾಕ್‍ಮೇಲ್’ ಮಾಡಬಹುದಿತ್ತು! ಅಂದು ಎನ್‍ಡಿಎ ಮೈತ್ರಿಕೂಟದ 336 ಸದಸ್ಯರಲ್ಲಿ 282 ಸ್ಥಾನಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಬಿಜೆಪಿ ಎನ್ನುವುದಕ್ಕಿಂತಲೂ ನರೇಂದ್ರ ಮೋದಿಯವರಿಗಾಗಿ ದೇಶ ನೀಡಿದ್ದ ಸ್ಪಷ್ಟ ಜನಾದೇಶವದು. ಹೀಗಿದ್ದರೂ ಶಿವಸೇನೆ ಪ್ರತಿಬಾರಿಯೂ ಕಿತಾಪತಿ ಮಾಡುತ್ತಲೇ ಬರುತ್ತಿದೆ. ಚಂದ್ರಬಾಬು ನಾಯ್ಡು ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಜಿಗಿಯುತ್ತಲೇ ಇದ್ದಾರೆ. ಇನ್ನು ಜಯಲಲಿತಾ ಬದುಕಿದ್ದಿದ್ದರೆ ಅದು ಇನ್ನೊಂದು ರೀತಿಯ ರಾಜಕಾರಣವಾಗುತ್ತಿತ್ತು ಬಿಡಿ.

1984ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಹತ್ಯೆಯ ಅನುಕಂಪದ ಮೇಲೆ ರಾಜೀವ್ ಗಾಂಧಿಯವರಿಗೆ ದೊರೆತ ರಾಕ್ಷಸ ಬಹುಮತ (404 ಸ್ಥಾನಗಳು)ವೇ ಕೊನೆ. ನಂತರ ನಡೆದದ್ದೆಲ್ಲಾ ಸಮ್ಮಿಶ್ರವೆಂಬ ಕಿಚಡಿ ಸರ್ಕಾರಗಳ ಕಾರುಬಾರು. ಒಂದೇ ಒಂದು ಮತದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಅಧಿಕಾರ ಕಳೆದುಕೊಳ್ಳುವುದರಿಂದ ಹಿಡಿದು ಅಮೇರಿಕಾದೊಂದಿಗಿನ ಅಣು ಒಪ್ಪಂದದವರೆಗೂ ನಡೆದಿದ್ದೆಲ್ಲಾ ಸ್ವಾರ್ಥ ರಾಜಕಾರಣ. ದೇಶ ಸುಭದ್ರ ಸರ್ಕಾರವೊಂದನ್ನು ಕಾಣಲು 2014ರವರೆಗೆ ಕಾಯಬೇಕಾಯಿತು. ಅದೂ ಸುನಾಮಿಯಂತೆ ಬಂದ ಮೋದಿ ಅಲೆಯಿಂದಾಗಿ. ಈಗ ನಾವು ಮತ್ತೊಂದು ಲೋಕಸಭಾ ಚುನಾವಣೆಗೆ ತಯಾರಾಗುತ್ತಿದ್ದೇವೆ. ಒಂದು ಕಡೆ ನರೇಂದ್ರ ಮೋದಿ ಮತ್ತೊಮ್ಮೆ ಸ್ಪಷ್ಟ ಬಹುಮತ ಕೋರಿ ಜನರ ಮುಂದೆ ಬರುವವರಿದ್ದರೆ, ಇನ್ನೊಂದು ಕಡೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ, ಮುಲಾಯಂಸಿಂಗ್, ಚಂದ್ರಬಾಬು ನಾಯ್ಡು, ಶರದ್ ಪವಾರ್, ಕೆ.ಸಿ. ಚಂದ್ರಶೇಖರ ರಾವ್ ಮುಂತಾದ ನಾಯಕರುಗಳು ಒಗ್ಗಟ್ಟು/ಪ್ರಧಾನಮತ್ರಿ ಆಕಾಂಕ್ಷಿ ಎಂದುಕೊಂಡು ಚುನಾವಣೆಗೆ ತಯಾರಾಗುತ್ತಿದ್ದಾರೆ.

ಎಷ್ಟೇ ಪ್ರಾಮಾಣಿಕರು, ದಕ್ಷರು, ಮೇಧಾವಿಗಳು, ದೂರದೃಷ್ಟಿಯುಳ್ಳವರು ರಾಜಕಾರಣದಲ್ಲಿದ್ದರೂ ಸಹ, ಚುನಾವಣಾ ರಾಜಕೀಯದಲ್ಲಿ ಗೆಲ್ಲುವರಿಗೇ ಪಟ್ಟ. ಆ ನಿಟ್ಟಿನಲ್ಲಿ ಮೇಲೆ ಹೇಳಿದ ನಾಯಕರುಗಳೇ ಸಂಭಾವ್ಯ ಪ್ರಧಾನಮಂತ್ರಿ ಪಟ್ಟಿಯಲ್ಲಿದ್ದಾರೆ. ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರನ್ನು ಪಕ್ಕಕ್ಕಿಟ್ಟು ಉಳಿದ ನಾಯಕರುಗಳ ಸಾಧನೆಗಳನ್ನೊಮ್ಮೆ ನೋಡಲೇಬೇಕಿದೆ. 2008 ಸಂಸತ್ ಕಲಾಪವನ್ನೊಮ್ಮೆ ನೆನಪು ಮಾಡಿಕೊಳ್ಳಿ. ಅಮೇರಿಕಾದೊಂದಿಗಿನ ಅಣು ಒಪ್ಪಂದದ ವಿಚಾರ. ಅಂದು ಯುಪಿಎ-1ರ ಸಮ್ಮಿಶ್ರ ಸರ್ಕಾರದಲ್ಲಿ, ಕಾಂಗ್ರೆಸ್‍ಗೆ ಬೆಂಬಲಿಸಿದ್ದ ಇನ್ನಿತರ ಪಕ್ಷಗಳ ನಾಯಕರುಗಳು ನಡೆಸಿದ ದೊಂಬರಾಟಗಳೇನು ಕಡಿಮೆಯೇ. ಅದು ದೇಶದ ಸಮಗ್ರತೆಯ ವಿಚಾರ, ದೇಶವೇ ಒಗ್ಗಟ್ಟಾಗಿರಬೇಕಿತ್ತು. ಆದರೆ ಅದನ್ನೇ ಬಳಸಿಕೊಂಡು ತಾನು ಪ್ರಧಾನಮಂತ್ರಿಯಾಗಲು ಪಗಡೆಯಾಟವಾಡಿದ ಮಾಯಾವತಿಯವರ ನಡೆಗಳನ್ನು ದೇಶವಿನ್ನು ಮರೆತಿಲ್ಲ. ಮುಂದೆ ಮಾಯಾವತಿ ಬೆಂಬಲಿತ ಸರ್ಕಾರ ರಚನೆಯಾದರೆ ವಿದೇಶಾಂಗ ನೀತಿ ಹೇಗಿರಬಹುದು ನೀವೇ ಊಹಿಸಿಕೊಳ್ಳಿ. ದೇಶದಲ್ಲಿ ಸಾಲು ಸಾಲು ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದರೂ, ಕೃಷಿ ಸಚಿವರಾಗಿದ್ದ ಶರದ್ ಪವಾರ್ ಬಿಸಿಸಿಐ ರಾಜಕೀಯದಲ್ಲಿ ಬ್ಯಾಟ್ ಬೀಸಿದ್ದೇ ಹೆಚ್ಚು. ದೇಶದ ಜಿಡಿಪಿಗೆ ಅತಿ ಹೆಚ್ಚು ಕೊಡುಗೆ ನೀಡುವ ಕೃಷಿ ಕ್ಷೇತ್ರಕ್ಕಿಂತ ದುಡ್ಡಿನ ಹೊಳೆಯಲ್ಲೇ ಮುಳುಗುವ ಮನರಂಜನೆಯ ಕ್ರಿಕೆಟ್‍ನ ಹಿಂದೆ ಬಿದ್ದಿದ್ದರು ನಮ್ಮ ಹಿಂದಿನ ಕೃಷಿ ಸಚಿವ ಶರದ್ ಪವಾರ್. ಅವರೂ ಈಗ ಪ್ರಧಾನಮಂತ್ರಿ ರೇಸ್‍ನಲ್ಲಿದ್ದಾರೆ. ಅಧಿಕಾರ ದೊರೆತರೆ ಕ್ರಿಕೆಟ್‍ಗಾಗಿ ಬಜೆಟ್‍ನಲ್ಲಿ ಒಂದಿಷ್ಟು ಹಣ ಮೀಸಲಿಟ್ಟು, ಬಿಸಿಸಿಐ ಅನ್ನು ಇಲಾಖೆಯನ್ನಾಗಿ ಮಾಡಬಹುದೇನೋ!

ಚೀನಾವನ್ನೇ ತನ್ನ ತವರು ಮನೆ ಎಂದುಕೊಂಡಿರುವ ಕಮ್ಯುನಿಸ್ಟ್ ಪಕ್ಷದ ಜನವಿರೋಧಿ ಆಡಳಿತದ ಲಾಭ ಪಡೆದು ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿಯರಿಂದ ಪಶ್ಚಿಮ ಬಂಗಾಳದಲ್ಲಿ ಭಾರೀ ಬದಲಾವಣೆಯನ್ನೇ ನಿರೀಕ್ಷಿಸಲಾಗಿತ್ತು. ರಾಜ್ಯದ ಒಟ್ಟಾರೆ ಅಭಿವೃದ್ಧಿಯ ಮಾತಿರಲಿ, ರಾಜಧಾನಿ ಕೊಲ್ಕೊತ್ತಾವೇ ಬದಲಾವಣೆಯನ್ನು ಕಂಡಿಲ್ಲ. ಆದರೂ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಭಾರೀ ಮಮತೆಯನ್ನು ಹೊಂದಿರುವ ದೀದಿ ಸಹ ಪ್ರಧಾನಮಂತ್ರಿ ಆಕಾಂಕ್ಷಿ. ಈಗ ಹೇಳಿ ಮಮತಾ ಬೆಂಬಲಿತ ಸರ್ಕಾರದಿಂದ ಈಶಾನ್ಯ ರಾಜ್ಯಗಳ ಪರಿಸ್ಥಿತಿ ಏನಾಗಬಹುದು? ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎನ್ನುವ ಚಂದ್ರಬಾಬು ನಾಯ್ಡು, ಮುಲಾಯಂ ಸಿಂಗ್ ತರಹದ ನಾಯಕರುಗಳಿಂದ ಹೊಸದೇನನ್ನೋ ನಿರೀಕ್ಷಿಸುವ ಮೊದಲು, ಹಿಂದಿದ್ದ ಸರ್ಕಾರಗಳೊಂದಿಗೆ ಅವರುಗಳು ಮಾಡಿದ ಪೊಲಿಟಿಕಲ್ ಬ್ಲಾಕ್ ಮೇಲ್ ನೋಡಿದರೆ ಸಾಕು. ತಮ್ಮ ರಾಜಕೀಯದ ಉತ್ತುಂಗದ ಸಮಯದಲ್ಲಿಯೇ, ಕೇಂದ್ರದಲ್ಲಿರುತ್ತಿದ್ದ ಸಮ್ಮಿಶ್ರ ಸರ್ಕಾರಗಳನ್ನು ತಮ್ಮ ಇಚ್ಛೆಗೆ ತಕ್ಕಂತೆ ಕುಣಿಸುತ್ತಿದ್ದ, ಜಯಲಲಿತಾ ಮತ್ತು ಕರುಣಾನಿಧಿ ಇಂದು ಇಲ್ಲವಾಗಿದ್ದಾರೆ. ಆದರೆ ರಜನಿಕಾಂತ್ ಮತ್ತು ಕಮಲ್ ಹಾಸನ್ ತಮ್ಮದೇ ರೀತಿಯಲ್ಲಿ ರಾಜಕಾರಣ ಪ್ರವೇಶದ ಮುನ್ಸೂಚನೆ ನೀಡುತ್ತಿದ್ದಾರೆ. ಕೆಲವರನ್ನು ಹೊರತುಪಡಿಸಿ ಬಹುತೇಕ ಸಿನಿಮಾ ಮಂದಿಗೆ ವ್ಯವಸ್ಥೆಯ ಅರಿವೇ ಇರುವುದಿಲ್ಲ. ತಮ್ಮ ಜನಪ್ರೀಯತೆಯನ್ನೇ ಬಂಡವಾಳ ಮಾಡಿಕೊಂಡು ಗೆಲ್ಲುವವರು ರಾಷ್ಟ್ರ ರಾಜಕಾರಣದಲ್ಲಿ ದೃಢ ನಿರ್ಧಾರ ಕೈಗೊಳ್ಳಬಲ್ಲರೆಂದು ನಿರೀಕ್ಷಿಸುವುದುಂಟೇ?

ಇವರುಗಳಿಂದ ಸಾಧ್ಯವಿಲ್ಲ ಎಂದಾದರೆ ಉಳಿದವರು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ. 2014ರ ಚುನಾವಣೆ ವೇಳೆಗಾಗಲೇ ಬಹುಪಕ್ಷ ಪದ್ಧತಿಯ ಭಾರತದ ಪ್ರಜಾಪ್ರಭುತ್ವ ಅಮೇರಿಕಾದ ಅಧ್ಯಕ್ಷೀಯ ಮಾದರಿಯ ಚುನಾವಣೆಯಂತೆ ತಿರುವು ಪಡೆದುಕೊಂಡಿತ್ತು. ಅಂದು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಹೆಸರಲ್ಲಿಯೇ ಚುನಾವಣೆ ನಡೆದದ್ದು. ಅಂದೇ ಅಧಿಕಾರದಲ್ಲಿದ್ದ ಪಕ್ಷದವರಾಗಿದ್ದರೂ ರಾಹುಲ್ ಗಾಂಧಿ ನಾಯಕತ್ವಕ್ಕೆ ಜನರು ನೀಡಿದ್ದು 44 ಸಂಸದರನ್ನಷ್ಟೇ. ಇನ್ನು ಈ ನಾಲ್ಕೂವರೆ ವರ್ಷಗಳಲ್ಲಿ ರಾಹುಲ್ ಗಾಂಧಿಯವರಿಗೆ ಪ್ರಬಲ ವಿರೋಧ ಪಕ್ಷದ ನಾಯಕನಾಗಿ ಜನರ ಮನಗೆಲ್ಲುವ ಎಲ್ಲಾ ಅವಕಾಶಗಳು ಇದ್ದವು. 2019ರಲ್ಲಿ ಮತ್ತದೆ ಮೋದಿ ವರ್ಸಸ್ ರಾಹುಲ್ ಎಂದೇ ಜನರ ಮುಂದೆ ಹೋಗಬಹುದಿತ್ತು. ಆದರೆ ಜನರಿರಲಿ ಅವರ ಒಕ್ಕೂಟವೇ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಒಪ್ಪುತ್ತಿಲ್ಲ. ಅಕಸ್ಮಾತ್ 2019ರಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದೇ, ರಾಹುಲ್ ಗಾಂಧಿಯವರೇ ಪ್ರಧಾನಮಂತ್ರಿಯಾದರು ಎಂದುಕೊಳ್ಳೋಣ! ಆಗ ಪರಿಸ್ಥಿತಿ ಹೇಗಿರಬಹುದು? ಅಕಸ್ಮಾತ್ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾದರೆ ಮಾಯವತಿ-ಮಮತಾ ಬ್ಯಾನರ್ಜಿಯ ಮಾಯೆಗಳು ಹೇಗಿರಬಹುದು? ಮುಲಾಯಂಸಿಂಗ್ ಹಚ್ಚುವ ಮುಲಾಮು ಹೇಗೆ ಕೆಲಸ ಮಾಡಬಹುದು? ಚಂದ್ರಬಾಬು ನಾಯ್ಡು ಮತ್ತು ಚಂದ್ರಶೇಖರ ರಾವ್ ಹೇಗೆಲ್ಲಾ ಹಗಲಿರುಳು ಚಂದ್ರನನ್ನು ತೋರಿಸಬಹುದು? ಮತ್ತೆ ಐದು ವರ್ಷಗಳು ಈ ದೊಂಬರಾಟದ್ದೇ ಸುದ್ದಿ! ಅವರಿಗೆ ಬೆಂಬಲ ನೀಡುವ ಪಕ್ಷಗಳು ಏನೆನೆಲ್ಲಾ ತೊಂದರೆ ಕೊಡಬಹುದು ಎನ್ನುವುದು ಒಂದು ಕಡೆಯಾದರೆ, ಅವರದ್ದೇ ಪಕ್ಷದ ನಾಯಕರುಗಳು ಹೇಗೆಲ್ಲಾ ಪೊಲಿಟಿಕಲ್ ಬ್ಲಾಕ್‍ಮೇಲ್ ಮಾಡಬಹುದು? ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಸಂಪುಟ ವಿಸ್ತರಣೆಯ ಕಸರತ್ತನ್ನೇ ನೋಡಿ, ಹಾಲಿ ಕಾಂಗ್ರೆಸ್ ಸಚಿವಾಕಾಂಕ್ಷಿಗಳು ಹೇಗೆಲ್ಲಾ ಪಕ್ಷವನ್ನು, ರೆಸಾರ್ಟ್ ರಾಜಕಾರಣದ ಹೆಸರಿನಲ್ಲಿ ಹೆದರಿಸುತ್ತಿದ್ದಾರೆ! ಇದನ್ನೇ ನಿಬಾಯಿಸಲಾಗದ ರಾಹುಲ್‍ಗಾಂಧಿ ರಾಷ್ಟ್ರಮಟ್ಟದಲ್ಲಿ ಅಧಿಕಾರ ಹಿಡಿದರೆ ತಮ್ಮ ಒಕ್ಕೂಟದ ಇತರ ನಾಯಕರನ್ನು ನಿಯಂತ್ರಿಸಲು ಸಾಧ್ಯವೇ? ಮತ್ತೆ ನಮ್ಮ ಆಯ್ಕೆ!

ಹಿಂದಿನ ಯುಪಿಎ ಅವಧಿಯಲ್ಲಿ ಮತ್ತು ಸದ್ಯ ಎಲ್ಲಾ ರಾಜ್ಯಗಳಲ್ಲಿ ಸರ್ಕಾರ ರಚನೆಯಾಗುವಾಗ ಮತ್ತು ಸಂಪುಟ ವಿಸ್ತರಣೆ/ಪುನರ್ರಚನೆಯ ಸಂಧರ್ಭಗಳಲ್ಲಿ ನಡೆಯುವ ದೊಂಬರಾಟಗಳನ್ನು ಗಮನಿಸಿಯೇ ಇರುತ್ತೇವೆ. ನಾಲ್ಕೂವರೆ ವರ್ಷಗಳ ಮೋದಿ ಸರ್ಕಾರದ ಸಮಯದಲ್ಲಿ ರೆಸಾರ್ಟ್ ರಾಜಕಾರಣ ನೋಡಲಿಲ್ಲ, ತಮ್ಮ ಜಾತಿಯ ನಾಯಕನಿಗೆ ಮಂತ್ರಿಗಿರಿ ನೀಡಿಲ್ಲವೆಂಬ ಪ್ರತಿಭಟನೆ ಕಾಣಲಿಲ್ಲ, ರಾಜೀನಾಮೆ ಬೆದರಿಕೆಗಳು ಕಂಡು ಬರಲಿಲ್ಲ, ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಿ ಸಮಾಧಾನ ಪಡಿಸಿದ ನಿದರ್ಶನಗಳೂ ಕಂಡು ಬರಲಿಲ್ಲ, ಚುನಾವಣೆಗಳಿಗಾಗಿ ಸಂಪುಟ ವಿಸ್ತರಣೆ/ಪುನರ್ರಚನೆಯ ಸರ್ಕಸ್‍ಗಳು ನಡೆಯಲಿಲ್ಲ. ತಮ್ಮ ಸಚಿವರನ್ನು, ಪಕ್ಷದ ಸಂಸತ್ ಸದಸ್ಯರನ್ನು ಸುಭದ್ರವಾಗಿರಿಸಿಕೊಂಡು ನರೇಂದ್ರ ಮೋದಿ ಆಡಳಿತದತ್ತಲೇ ಹೆಚ್ಚು ಗಮನ ಹರಿಸಿ ದಕ್ಷತೆ ತೋರಿದರು. ಇದನ್ನೊಮ್ಮೆ ಗಮನಿಸಿ, ಸಿದ್ದರಾಮಯ್ಯನವರಂತಹ ಸಿದ್ದರಾಮಯ್ಯನವರೇ ಬಹುಮತವಿದ್ದರೂ, ಐದು ವರ್ಷಗಳ ಕಾಲ ಪೊಲಿಟಿಕಲ್ ಕಾರ್ಡ್ ಪ್ಲೇ ಮಾಡುತ್ತಲೇ ಅಧಿಕಾರ ಪೂರೈಸಬೇಕಾಯಿತು.

ಯಾರೇ ಅಧಿಕಾರದಲ್ಲಿದ್ದರೂ ದೇಶದ ಪ್ರಗತಿ ಹಿಮ್ಮುಖವಾಗುವುದಿಲ್ಲ, ಬದಲಿಗೆ ವೇಗ ಕುಂಠಿತಗೊಳ್ಳುತ್ತದೆಯಷ್ಟೇ. ಅದೇ ಸಮರ್ಥ ನಾಯಕತ್ವವಿದ್ದಾಗ ಮಾತ್ರ ಭವಿಷ್ಯದ ಬದಲಾವಣೆಗಳಿಗೆ ದೇಶ ತನ್ನನ್ನು ಒಗ್ಗಿಸಿಕೊಳ್ಳಲು ಆರಂಭಿಸುತ್ತದೆ. 2014ರಿಂದ ಆಗುತ್ತಿರುವುದೂ ಇದೇ. ಅದಕ್ಕೇ ಡಿಮಾನೆಟೈಸೇಷನ್, ಜಿಎಸ್‍ಟಿಯಂತಹ ಕಠಿಣ ನಿರ್ಧಾರಗಳೇ ಸಾಕ್ಷಿ. 2019ರಲ್ಲಿ ನರೇಂದ್ರ ಮೋದಿಗೆ ಬಹುಮತ ದೊರೆಯದಿದ್ದರೆ, 2004ರಂತೆಯೇ ದೇಶ ಒಬ್ಬ ನಾಯಕನನ್ನು ಕಳೆದುಕೊಳ್ಳಲಿದೆ.

ಇವು ರಾಜಕೀಯದ ವಿಚಾರಗಳು, ಆಡಳಿತಾತ್ಮಕ ಸಾಧನೆ ಬಂದರೆ ನರೇಂದ್ರ ಮೋದಿ ಮತ್ತು ಇನ್ನಿತರರಿಗೆ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು. ನಮಗೆ ‘ಮತ್ತೊಮ್ಮೆ ಮೋದಿ’ ಎನ್ನಲು ಇಷ್ಟೇ ಕಾರಣಗಳು ಸಾಕು. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇವರನ್ನು ಹೊರತುಪಡಿಸಿ ಮತ್ತೊಂದು ಹೆಸರು ಹೇಳಲು ಸಾಧ್ಯವಿದೆಯೇ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments