ಹೊಲವನು ಉಳುತಾ ಅಳುವಾ ಯೋಗಿಯ ನೋಡಿಲ್ಲಿ!
– ತುರುವೇಕೆರೆ ಪ್ರಸಾದ್
ಪಂಚವಟಿ
ನಂ.6, 13ನೇ ವಾರ್ಡ್
ಗಾಂಧಿನಗರ
ತುರುವೇಕೆರೆ-572227
ಇಂದು ಮಾಜಿ ಪ್ರಧಾನಿ ಚೌದುರಿ ಚರಣ್‍ಸಿಂಗ್ ಹೆಸರಲ್ಲಿ ನಾವು ಮತ್ತೊಂದು ರಾಷ್ಟ್ರೀಯ ರೈತ ದಿನವನ್ನು ಆಚರಿಸುತ್ತಿದ್ದೇವೆ. ಆದರೆ ಡಿ.23 ರಾಷ್ಟ್ರೀಯ ರೈತ ದಿನ ಎಂದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ನೆಹರು, ಇಂದಿರಾ, ರಾಜೀವ್ ಜಯಂತಿಯಂತೆ ರೈತ ದಿನಾಚರಣೆ ಬಗ್ಗೆ ಯಾವ ಪಠ್ಯಪುಸ್ತಕದಲ್ಲೂ ಉಲ್ಲೇಖವೂ ಇರಲಿಕ್ಕಿಲ್ಲ. ತಮ್ಮ ಹೆಸರಿನಲ್ಲಿ ಈ ರೀತಿ ಸರ್ಕಾರಗಳು, ಜನಪ್ರತಿನಿಧಿಗಳು ದೊಡ್ಡ ಮನುಷ್ಯರು ರೈತದಿನಾಚರಣೆ ಎಂಬ ನಾಮಕಾವಸ್ಥೆ ಆಚರಣೆ ನಡೆಸುತ್ತಾರೆಂಬುದು ಬಹುಶಃ ಲಕ್ಷಾಂತರ ರೈತರಿಗೇ ಗೊತ್ತಿರಲಿಕ್ಕಿಲ್ಲ. ಟಿಪ್ಪು ಜಯಂತಿಗೆ ಮಾಡಿಕೊಂಡಂತೆ ಸರ್ಕಾರವೇನೂ ವಾರಗಟ್ಟಲೆ ಮುಂಚೆ ರೈತ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡ ವರದಿ, ಸುದ್ದಿ ಯಾವ ಪತ್ರಿಕೆಯಲ್ಲೂ ಬರುವುದಿಲ್ಲ. ಇಂತಹ ಒಂದು ದಿನವನ್ನು ಅರ್ಥಪೂರ್ಣವಾಗಿ ಮಾಡಬೇಕು, ಸಂಭ್ರಮದಿಂದ ಆಚರಿಸಬೇಕು, ಅದೊಂದು ರೈತರ ಹಬ್ಬವಾಗಬೇಕು ಎಂದು ಯಾವ ಬುದ್ದಿಜೀವಿಗಳ ದಂಡೂ ಸರ್ಕಾರವನ್ನು ಒತ್ತಾಯಿಸುವುದಿಲ್ಲ. ಅದರ ರೂಪರೇಷೆಗೆ ಸಂವಾದ, ಗೋಷ್ಠಿ, ಚಿಂತನೆಗಳು ನಡೆಯುವುದೂ ಇಲ್ಲ. ಇದೆಲ್ಲಾ ನಮ್ಮ ಅನ್ನದಾತನನ್ನು ನಾವು ಯಾವ ದುಸ್ಥಿತಿಯಲ್ಲಿ ಇಟ್ಟಿದ್ದೇವೆ ಮತ್ತು ಅವನಿಗೆ ನಾವು ಯಾವ ಗೌರವ ಸಲ್ಲಿಸುತ್ತಿದ್ದೇವೆ ಎಂಬುದರ ದ್ಯೋತಕ.
ನಮ್ಮದು ಕೃಷಿ ಪ್ರಧಾನ ದೇಶ, ರೈತ ನಮ್ಮ ದೇಶದ ಬೆನ್ನೆಲುಬು, ಜೈ ಕಿಸಾನ್ ಎಂಬುದು ಭಾಷಣ, ಪರಾಕ್‍ಗಳಿಗೇ ಸೀಮಿತಗೊಂಡಿದೆ. ಆದರೆ ರೈತನ ಬೆನ್ನೆಲುಬು ಮುರಿದು ಹೋಗಿ ಎಷ್ಟೋ ವರುಷಗಳಾದವು. ತನ್ನ ಹೊಲದ ದನಗಳಿಗಿಂತ ಹೆಚ್ಚು ಭಾರದ, ಕಷ್ಟ ಕಾರ್ಪಣ್ಯದ ನೊಗ ಹೊತ್ತು ಅವನ ಕುತ್ತಿಗೆ ಮುರಿದು ಹೋಗಿದೆ. ಅವನು ನಿರಂತರವಾಗಿ ಅಭದ್ರತೆ, ಅಪೌಷ್ಠಿಕತೆ, ರೋಗ ರುಜಿನ ಸಾಲದ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದಾನೆ. ‘ನೇಗಿಲು ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ‘ ಎಂದು ನಾವು ಎಸಿ ಕಾರುಗಳಿಂದ, ಹೆಲಿಕಾಪ್ಟರ್‍ಗಳಿಂದ ಅನ್ನದಾತನನ್ನು ನಮ್ಮ ಮಕ್ಕಳಿಗೆ ತೋರಿಸುವುದನ್ನು ಕಲಿತಿದ್ದೇವೆ. ಅವನನ್ನು ಯೋಗಿಯೆಂದು ಕರೆದು ಹೊಟ್ಟೆಗೆ ಹಿಟ್ಟಿಲ್ಲದಂತೆ ಮಾಡಿ ನಾವು ಭೋಗಿಗಳಾಗಿ ಕಂಠಮಟ್ಟ ತಿಂದುಂಡು ಸಕಲ ಸೌಭಾಗ್ಯಗಳನ್ನು ಅವನ ಬೆವರು, ನಿಟ್ಟುಸಿರ ಮೇಲೆ ಯಾವ ಆತ್ಮಸಾಕ್ಷಿಗೂ ಅಂಜದೆ, ಅಳುಕದೆ,ನಿರ್ಲಜ್ಜರಾಗಿ, ಭಂಡರಾಗಿ ಅನುಭವಿಸುತ್ತಿದ್ದೇವೆ. ಸಗಣಿ ಬಾಚುವ ಕೈ ಅವನದು, ಬೆರಣಿ ತಟ್ಟುವ ಕೈ ಅವನದು, ನಾವು ಅವನ ಮೊಸರಿನ ಭರಣಿಗೆ, ಬೆಣ್ಣೆ ಮುದ್ದೆಗೆ ಅಧಿಕಾರಯುತವಾಗಿ ಕೈ ಹಾಕುತ್ತೇವೆ. ಹಸು ಸಾಕುವ ರೈತರ ಮಕ್ಕಳಿಗೆ ಹಾಲಿಲ್ಲ, ಪೇಡ ಇಲ್ಲ, ಕೋವ ಇಲ್ಲ, ಐಸ್‍ಕ್ರೀಂ ಇಲ್ಲ. ಆದರೆ ಹಾಲು, ಮೊಸರು ತುಪ್ಪವನ್ನು ಅಜೀರ್ಣವಾಗುವಂತೆ ತಿಂದ ಜನ ಪಾರ್ಕುಗಳಲ್ಲಿ ಬೊಜ್ಜು ಕರಗಿಸಲು ಜಾಗಿಂಗ್ ಮಾಡುತ್ತಾರೆ. ಈ ದೇಶದ ವ್ಯವಸ್ಥೆ ಹೇಗಿದೆ ನೋಡಿ. ಇಲ್ಲಿ ಶ್ರಮ ಪಡದವರಿಗೂ ವೇತನ, ಗೌರವ ಇದೆ. ಮೂರೇ ತಿಂಗಳಿಗೆ ಕಿತ್ತು ಹೋಗುವ ರಸ್ತೆ, 6 ತಿಂಗಳಿಗೆ ಉದುರಿ ಬೀಳುವ ಸೇತುವೆ ಕಟ್ಟುವವರಿಗೆ ಸರ್ಕಾರ ಸಂಬಳ ಕೊಡುತ್ತದೆ, ಕಾಮಗಾರಿಗಿಷ್ಟು ಎಂದು ಮೇಲೆ ಲಂಚವೂ ಸಿಗುತ್ತದೆ. ರೈತರ ಪಹಣಿ, ಪಟ್ಟಾ ದಾಖಲೆ ಕೊಡಲು ಗಂಟೆಗಟ್ಟಲೆ ಕಾಯಿಸುವ ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ, ಇನ್‍ಕ್ರಿಮೆಂಟ್ ಸಿಗುತ್ತದೆ. ಜೊತೆಗೆ ಗಿಂಬಳವೂ ಸಿಗುತ್ತದೆ. ಬರೀ ವಿಚಾರವಾದದ ಬರುಡೆ ಬಿಡುತ್ತಾ ಜಾತಿ, ಧರ್ಮಗಳನ್ನು ಎತ್ತಿ ಕಟ್ಟುವ, ರಾಷ್ಟ್ರೀಯತೆ, ಹಿಂದುತ್ವವನ್ನು ಬೈಯ್ಯುವ ಕಂಟ್ರಾಕ್ಟ್ ತೆಗೆದುಕೊಂಡಿರುವ ವಿಶ್ವವಿದ್ಯಾಲಯದ ಪಂಡಿತರಿಗೆ ಲಕ್ಷ ಲಕ್ಷ ಪಗಾರ ಸಿಗುತ್ತದೆ. ಇವರಿಗೆ ವೇತನ ಹೆಚ್ಚಿಸಲು ಆಯೋಗದ ಮೇಲೆ ಆಯೋಗ.. ರೈತನ ಆದಾಯ ಹೆಚ್ಚಿಸಲು, ಅವನನ್ನು ಸ್ವಾವಲಂಭಿಯಾಗಿಸಲು, ಅವನ ಬದುಕು ಹಸನು ಮಾಡಲು ರಚಿಸುವ ಆಯೋಗದ ವರದಿಗಳು ವರುಷಗಟ್ಟಲೆ ಧೂಳು ತಿನ್ನುತ್ತಾ ಬಿದ್ದಿರುತ್ತವೆ. ಅವನು ಚಳುವಳಿ ಮಾಡಿ ಗುಂಡು ಹಾರಿ ಸತ್ತರೆ ಮಾತ್ರ ತನಿಖಾ ಆಯೋಗ. ಇಲ್ಲದಿದ್ದರೆ ಇದ್ದಾಗ ಭಿಕ್ಷೆಯ ಆಹಾರ, ಸತ್ತಮೇಲೊಂದು ಹಾರ, ಅವನ ಹೆಸರಲ್ಲಿ ಮನೆಯವರಿಗೆ ಪರಿಹಾರ.
ಖುಷಿಯಿಂದ ಹಾಡಿಕೊಂಡು ಉಳುವ ರೈತನನ್ನ ನೋಡಿ ಯಾವ ಜನ್ಮವಾಯಿತೋ? ಇವತ್ತು ಕುವೆಂಪು ಅವರ ರೈತಗೀತೆಯನ್ನು ‘ನೇಗಿಲು ಹಿಡಿದು ಹೊಲದೊಳು ಅಳುತಾ ಉಳುವಾ ಯೋಗಿಯ ನೋಡಲ್ಲಿ’ ಎಂದು ಬದಲಾಯಿಸಿ ಹೇಳಬೇಕಿದೆ. ಅಸಲಿ ಒಂದು ನೇಗಿಲು ಕೊಳ್ಳಲೂ ಸಣ್ಣ ಪುಟ್ಟ ರೈತರ ಬಳಿ ದುಡ್ಡಿಲ್ಲ. ಅದೂ ಸರ್ಕಾರದ ಭಾಗ್ಯ. ಬೀಜಕ್ಕೆ ಸರ್ಕಾರದ ಮುಂದೆ ಕೈ ಒಡ್ಡಬೇಕು, ಪಹಣಿಗೆ ಸರ್ಕಾರಿ ಕಛೇರಿಯ ಮುಂದೆ ಅವರ ಮರ್ಜಿಗೆ ಕಾದು ನಿಲ್ಲಬೇಕು, ಗೊಬ್ಬರಕ್ಕೆ ಕೈ ಒಡ್ಡಬೇಕು, ವಿಮಾ ಕಂತು ತುಂಬಲು ಅಕ್ಕ ಪಕ್ಕದವರ ಬಳಿ ಸಾಲಮಾಡಬೇಕು, ಭಾಗ್ಯದ ಅಕ್ಕಿಗೆ ಮನಸೋತು ತಿಂದುಂಡು ಮೂಲೆಯಲ್ಲಿ ಮಲಗಿರುವವರನ್ನು ಕಾಡಿ ಬೇಡಿ ಕೂಲಿಗೆ ಕರೆತರಬೇಕು, ಮತ್ತೊಬ್ಬರ ಕಣದಲ್ಲಿ ಹುಲ್ಲು ಒಟ್ಟಬೇಕು, ಮೆದೆ ಹಾಕಬೇಕು, ತೆನೆ ಬಡಿಯುವ ತನಕ ಸುಡವ ಮಾಗಿ ಬಿಸಿಲಲ್ಲಿ, ಕೊರೆವ ಚಳಿಯಲ್ಲಿ ಮೆದೆ ಕಾಯಬೇಕು. ಅಕಸ್ಮಾತ್ ಏನಾದರೂ ಅವನ ಅದೃಷ್ಟ ಕೆಟ್ಟು ಒಂದೆರಡು ಹನಿ ಅಕಾಲಿಕ ಮಳೆ ಉದುರಿತೋ, ಮುಗಿಯಿತು ರೈತನ ಕತೆ. ಮೆದೆ ನೆಂದು ಹೋಗುತ್ತದೆ. ವರ್ಷವೆಲ್ಲಾ ಪಾಡು ಪಟ್ಟ ಬೆಳೆದ ಬೆಳೆ ಮುಗ್ಗುಲಾಗಿ ಸಾಲದ ಉರುಳು ಅವನ ಕೊರಳಿಗೆ ಬೀಳುತ್ತದೆ. ಜೀವನದುದ್ದಕ್ಕೂ ರೈತನದ್ದು ಇದೇ ರೀತಿ ದೈನೇಶೀ ಬೇಡುವ ಬದುಕು ಎನ್ನುವಂತೆ ಮಾಡಿದ್ದು ಯಾರು? ಒಂದು ಕಾಳು ಬಿತ್ತಿ ನೂರಾರು ಕಾಳು ಬೆಳೆದು ಜನರ ಹೊಟ್ಟೆ ತುಂಬಿಸುವ ರೈತನ ಬಾಳು ಮಾತ್ರ ಸದಾ ಗೋಳಾದದ್ದು ಏಕೆ? ಎಸಿ ರೂಮಿನಲ್ಲಿ ಕುಳಿತು ಕೆಲಸ ಮಾಡುವವರಿಗೆ ಟಿಪ್ಪು ಜಯಂತಿ, ಆ ಜಯಂತಿ, ಈ ಜಯಂತಿ ಎಂದು ವರ್ಷಕ್ಕೆ ನೂರೆಂಟು ರಜೆ. ರೈತನಿಗೆ ಎಲ್ಲಿದೆ ರಜೆ? ಅವನ ಉಸಿರು ನಿಂತಾಗಷ್ಟೇ ಅವನಿಗೆ ರಜೆ. ನಮ್ಮ ಜನಪ್ರತಿನಿಧಿಗಳಿಗೆ ಅವರ ಕುಟುಂಬಗಳಿಗೆ ಸವಲತ್ತಿನ ಮೇಲೆ ಸವಲತ್ತು, ಟಿ.ಎ, ಡಿಎ,ಫೋನ್ ,ಫ್ಯಾನ್ ಎಲ್ಲಾ ಉಚಿತ. ರೈತನ ಪಂಪ್‍ಸೆಟ್‍ಗೆ ರಾತ್ರಿ 6 ಗಂಟೆ ಕರೆಂಟ್ ಕೊಡಲೂ ಕಷ್ಟ. ಇದು ನಮ್ಮ ರೈತನ ಸ್ಥಿತಿ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅಧಿಕಾರ ಹೋದ ನಂತರವೂ ಕೈ ತುಂಬಾ ಪೆನ್ಶನ್. ರೈತನಿಗೆ ಇಡೀ ಜನ್ಮವೇ ಟೆನ್ಶನ್ ಟೆನ್ಶನ್ ಟೆನ್ಶನ್ ಮತ್ತು ಹೈಪರ್ ಟೆನ್ಶನ್, ಅವನಿಗೆ ಸಿಗುವುದು ಮಾತ್ರ 10 ಕೆಜಿ ಅಕ್ಕಿ, ವಯಸ್ಸಾದ ಮೇಲೆ ಹಾಫ್ ಬಸ್ ಟಿಕೆಟ್..!
ರೈತರಿಗೆ ಹಲವು ಯೋಜನೆಗಳು, ಪ್ಯಾಕೇಜ್‍ಗಳನ್ನು ಘೋಷಿಸಲಾಗಿದೆ. ಕೃಷಿ ಜೊತೆಗೆ ಪಶು ಸಂಗೋಪನೆ, ಡೈರಿ ಉದ್ಯಮ, ಪರ್ಯಾಯ ಬೆಳೆ, ಹನಿ ನೀರಾವರಿ, ಗಂಗಾಕಲ್ಯಾಣ ಒಂದೇ ಎರಡೇ! ಆದರೂ ರೈತನ ಪರಿಸ್ಥಿತಿ ಸುಧಾರಿಸಿಲ್ಲ, ರೈತ ಸಾಲದ ಉರುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ನಿಂತಿಲ್ಲ. ಇದಕ್ಕೆ ಕಾರಣ ರೈತನನ್ನು ಸಾಲಮುಕ್ತನನ್ನಾಗಿಸಿ ಹೊಸ ಬದುಕು ನೀಡುವ ಯಾವ ಶಾಶ್ವತ ಯೋಜನೆಗಳೂ ಸರ್ಕಾರದ ಬಳಿ ಇಲ್ಲ. ಏಕೆಂದರೆ ಮೀಸಲಾತಿ, ಅಲ್ಪಸಂಖ್ಯಾತ ಸ್ಥಾನಮಾನ ಕೊಡಲು ರೈತ ಎನ್ನುವುದು ಒಂದು ಜಾತಿ, ಧರ್ಮವಲ್ಲ. ಅದೊಂದು ಯಾರಿಗೂ ಬೇಡದ ಕರ್ಮ. ಹಾಗಾಗಿ ಸರ್ಕಾರಗಳು ರೈತರನ್ನು ನಿರ್ಜೀವ ಬೆದರು ಬೊಂಬೆ ಮಾಡಿ ಶೋಕೇಸಲ್ಲಿ ಪ್ರದರ್ಶನ ಬೊಂಬೆಯಾಗಿ ನಿಲ್ಲಿಸಿ ಪ್ಯಾಕೇಜ್ ನೀಡುತ್ತವೆ. ಇವೆಲ್ಲಾ ಚುನಾವಣಾ ಸಮಯದಲ್ಲಿ ರೈತರ ಓಟು ಗಿಟ್ಟಿಸಲು ರೈತರ ಕಣ್ಣೊರೆಸುವ ನಾಟಕವಾಡುವ ತೇಪೆ ತಂತ್ರಗಳು.
ಕರ್ನಾಟಕದಲ್ಲಿ ಪ್ರತಿ ಚುನಾವಣೆ ಬಂದಾಗಲೂ ರೈತರ ಸಾಲಾ ಮನ್ನಾ ವಿಷಯ ಮುನ್ನೆಲೆಗೆ ಬರುತ್ತದೆ. ರೈತರ ಸಾಲ ಮನ್ನಾ ಆಗಲು ಚುನಾವಣೆಯೆಂಬ ಪ್ರಜಾಪ್ರಭುತ್ವದ ಕಾಲಶ್ರಾದ್ಧಕ್ಕಾಗಿ ರೈತ ಕಾಯುತ್ತಾ ಕೂರಬೇಕು. ರೈತರು ಸಾಲ ಮನ್ನಾಗೆ ಆಗ್ರಹಿಸುವುದೇ ದೊಡ್ಡ ಅಪರಾಧ ಎಂದು ದೂರಲಾಗುತ್ತದೆ. ನಿಜ! ಯಾವುದೇ ಸಾಲ ಮನ್ನಾ ದೇಶದ ಆರ್ಥಿಕತೆ ಮತ್ತು ಜಿಡಿಪಿ ಮೇಲೆ ಬೀಳುವ ದೊಡ್ಡ ಹೊಡೆತವೇ ಸರಿ! ಅದನ್ನು ಸ್ವಾಭಿಮಾನವಿರುವ ಯಾವುದೇ ರೈತ ಸಹ ವಿರೋಧಿಸುತ್ತಾನೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕ್ರಮವಾಗಿ 36359 ಕೋಟಿ ಮತ್ತು 30,000 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಪಂಜಾಬ್, ಮಧ್ಯಪ್ರದೇಶ್, ಗುಜರಾತ್, ಹರ್ಯಾಣ ರಾಜ್ಯಗಳಿಂದಲೂ 188 ಸಾವಿರ ಕೋಟಿಗಳಷ್ಟು ಸಾಲ ಮನ್ನಾಮಾಡಲು ಒತ್ತಡವಿದೆ. ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಸರ್ಕಾರ ರೈತರ ಸುಮಾರು 39ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.
2016ರ ಆರ್ಥಿಕ ಸಮೀಕ್ಷೆ ಪ್ರಕಾರ ರೈತ ಕುಟುಂಬಗಳ ತಲಾ ವಾರ್ಷಿಕ ಆದಾಯ ರೂ.20ಸಾವಿರ ಮಾತ್ರ. ರೈತರನ್ನು ಉದ್ದೇಶಪೂರ್ವಕವಾಗಿಯೇ ಬಡತನದಲ್ಲಿ ಇರಿಸಲಾಗಿದೆ. ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಅವರು ಸಾಲಗಾರರಾಗಿಯೇ ಉಳಿದಿದ್ದಾರೆ ಎಂಬುದನ್ನು ರೈತರನ್ನು ದೂರುವವರೆಲ್ಲೂ ಜ್ಞಾಪಕ ಇಟ್ಟುಕೊಳ್ಳಬೇಕು. ದೇಶದ ಒಟ್ಟು ರೈತರ ಸಾಲ ಮನ್ನಾ ಮಾಡಲು 3.1ಲಕ್ಷ ಕೋಟಿ ಹಣ ಬೇಕಾಗುತ್ತದೆ. ಇದು ಭಾರತದ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ವೆಚ್ಛವಾಗುವ 16 ಪಟ್ಟು, ಸುಮಾರು 4,43000 ಗೋದಾಮುಗಳನ್ನು ಕಟ್ಟುವಷ್ಟು ಎಂದು ಆರ್ಥಿಕತಜ್ಞರು ಹೇಳುತ್ತಾರೆ. ಆದರೆ ರಸ್ತೆ, ಗೋದಾಮು ನಿರ್ಮಾಣಕ್ಕೆ ಶೇಕಡಾ ಎಷ್ಟು ಹಣ ಕಮಿಶನ್, ಲಂಚವಾಗಿ ಹೋಗುತ್ತದೆ ಎಂದು ಹೇಳಿಲ್ಲ. ಹೀಗೆ ಕಾಂಕ್ರೀಟಿಕರಣದ ಅಭಿವೃದ್ಧಿಯ ಮಾನದಂಡಗಳ ಜೊತೆ ರೈತರ ಬವಣೆಯನ್ನು ಥಳುಕು ಹಾಕುವುದು ಮೂರ್ಖತನವಾಗುತ್ತದೆ. ಏಕೆಂದರೆ ಬ್ಯಾಂಕುಗಳು ಉದ್ದಿಮೆದಾರರಿಗೆ ಸಾವಿರಾರು ಕೋಟಿ ಸಾಲ ಕೊಟ್ಟಿವೆ. ಇವುಗಳ ಒಟ್ಟಾರೆ ಪ್ರಮಾಣ ಸುಮಾರು 6.84ಲಕ್ಷ ಕೋಟಿ ರೂಪಾಯಿ. ಅಂದರೆ ರೈತರ ಸಾಲ ಮನ್ನಾ ಬೇಡಿಕೆಯ ಎರಡರಷ್ಟು! ಬ್ಯಾಂಕುಗಳ ಎನ್‍ಪಿಎ ಕಳೆದ ಸಾಲಿನಲ್ಲಿ ಶೇ.147ರಷ್ಟು ಹೆಚ್ಚಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು 2016ನೇ ಸಾಲಿನಲ್ಲಿ ಕೇವಲ 19,757 ಕೋಟಿ ಮಾತ್ರ ಸಾಲ ವಸೂಲಿ ಮಾಡಿವೆ. ಔದ್ಯಮಿಕ ರಂಗ ಬಾಕಿ ಉಳಿಸಿಕೊಂಡ ಹಣ ರೈತರ ಸಾಲವನ್ನೂ ಮೀರಿಸಿದೆ. ಉದಾಹರಣಗೆ ಇಡೀ ಪಂಜಾಬ್ ರೈತರ ಸಾಲ ಮನ್ನಾಗೆ ಬೇಕಾದ ಹಣ ರೂ.36ಸಾವಿರ ಕೋಟಿ, ಭೂಷಣ್ ಸ್ಟೀಲ್ ಕಂಪನಿ ಒಂದೇ 44 ಸಾವಿರ ಕೋಟಿ ಸಾಲ ಮಾಡಿ ಪಾಪರ್ ಚೀಟಿ ಕೈಲಿ ಹಿಡಿದು ನಿಂತಿದೆ. ಮಲ್ಯ ಭಾರತದ ಬ್ಯಾಂಕ್‍ಗಳಿಗೆ ಹಾಕಿ ಹೋಗಿರುವ ನಾಮದ ಪ್ರಮಾಣ 9 ಸಾವಿರ ಕೋಟಿ. 2008-09ನೇ ಸಾಲಿನಲ್ಲಿ ಕೈಗಾರಿಕಾಕ್ಷೇತ್ರಕ್ಕೆ ಸುಮಾರು 3 ಲಕ್ಷ ಕೋಟಿ ರೂಗಳ ಪ್ಯಾಕೇಜ್ ನೀಡಲಾಯಿತು. ಅದೇ ರೀತಿ ಈಗ ರೈತರ ಸಾಲ ಯಾಕೆ ಮನ್ನಾ ಮಾಡಬಾರದು ಎಂದು ಕೃಷಿ ನೀತಿ ವಿಶ್ಲೇಷಕ ದೇವಿಂದರ್ ಶರ್ಮ ಕೇಳುವುದರಲ್ಲಿ ತಪ್ಪೇನಿದೆ?
ಸಾಲ ಮನ್ನಾ ಮಾಡಿಯೂ, ಏನೆಲ್ಲಾ ಸೌಲಭ್ಯ ನೀಡಿಯೂ ರೈತರ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಹಲವು ಕಾರಣಗಳಿಗಾಗಿ ಭೂಮಿ ಕಳೆದುಕೊಂಡಿರುವ ಶೇ. 56ರಷ್ಟು ರೈತರು 0.15 ಹೆಕ್ಟೇರ್‍ಗಳಷ್ಟು ಚಿಕ್ಕ ವಿಸ್ತೀರ್ಣದ ಭೂಮಿಯನ್ನು ತಮ್ಮ ಜೀವನೋಪಾಯಕ್ಕೆ ನಂಬಿದ್ದಾರೆ. ಇಂತಹ ಚಿಕ್ಕ ಹೊಲಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಬೆಳೆ ತೆಗೆಯಲು ಸಾಧ್ಯವಿಲ್ಲ, ಹಾಗಾಗಿ ಅವರು ದುಬಾರಿ ಎನಿಸುವ ಸಾಂಪ್ರದಾಯಿಕ ವಿಧಾನಗಳನ್ನೇ ಅನುಸರಿಸಬೇಕಾಗುತ್ತದೆ ಮತ್ತು ಈ ರೈತರಿಗೆ ಬ್ಯಾಂಕ್ ಸಾಲ ಸಿಗದ ಕಾರಣ ಇವರು ಖಾಸಗಿ ಲೇವಾದೇವಿಗಾರರನ್ನು ಆಶ್ರಯಿಸಬೇಕಾಗುತ್ತದೆ. ಹೀಗಾಗಿ 8 ರಾಜ್ಯಗಳ 32.8 ಮಿಲಿಯನ್ ರೈತರ ಸಾಲದಲ್ಲಿ ಕೇವಲ 10.6 ಮಿಲಿಯನ್ ರೈತರಷ್ಟೇ ಸಾಲ ಮನ್ನಾದ ಸೌಲಭ್ಯ ಪಡೆಯುತ್ತಾರೆ. ಉಳಿದ 22.1 ಮಿಲಿಯನ್ ರೈತರು ಈ ಸಾಲ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ನೀತಿ ಆಯೋಗದ ರಮೇಶ್ ಚಂದ್ ಮತ್ತು ಶ್ರೀವಾತ್ಸವ್ ಅಂಕಿ ಅಂಶ ನೀಡುತ್ತಾರೆ. ಎಡಿಡಬ್ಲ್ಯುಡಿಆರ್( ಕೃಷಿ ಸಾಲ ಮನ್ನಾ ಮತ್ತು ಸಾಲ ಪರಿಹಾರ ಯೋಜನೆ)ಯ ಕುರಿತು ಸಿಎಜಿ ನೀಡಿದ ವರದಿ ಪ್ರಕಾರ ಸಾಲ ಮನ್ನಾಗೆ ಅರ್ಹವಾಗಿದ್ದ ಶೇ.13.46ರಷ್ಟು ರೈತರನ್ನು ಬ್ಯಾಂಕುಗಳು ಪಟ್ಟಿ ಮಾಡಿರಲೇ ಇಲ್ಲ. ಸಾಲಮನ್ನಾಗೆ ಅನರ್ಹರಾದ ಶೇ.8.5 ರೈತರೆಂದು ಹಣೆಪಟ್ಟಿ ಅಂಟಿಸಿಕೊಂಡವರಿಗೆ ಸಾಲ ಮನ್ನಾ ಭಾಗ್ಯ ಸಿಕ್ಕಿತ್ತು. ಸುಮಾರು ಶೇ.35 ಜನರಿಗೆ ಋಣ ತೀರಿದ ಪತ್ರ ನೀಡಿರದ ಕಾರಣ ಅವರು ಹೊಸ ಕೃಷಿ ಸಾಲ ಪಡೆಯಲಾಗಲಿಲ್ಲ. ಹೀಗಾದರೆ ಎಷ್ಟು ಸಾಲ ಮನ್ನಾ ಮಾಡಿ ಏನು ಪ್ರಯೋಜನ?
ಹಾಗಾಗಿ ಸಾಲ ಮನ್ನಾ ಮಾಡುವುದಷ್ಟೆ ಅಲ್ಲ, ರೈತರ ಸಮಗ್ರ ಅಭಿವೃದ್ಧಿಗೆ, ಅವರ ಭದ್ರತೆಗೆ, ಅವರ ವಿಶ್ರಾಂತ ಬದುಕಿಗೆ ಸರ್ಕಾರಗಳು ರೂಪರೇಷೆಗಳನ್ನು ಯೋಜಿಸಬೇಕು. ರೈತರ ದಿನಾಚರಣೆಗೂ ರಜಾ ಕೊಡಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ಕಡ್ಡಾಯವಾಗಿ ರೈತರ ಹೊಲಗಳಿಗೆ ಹೋಗಿ ಅವರು ಪಡುವ ಬವಣೆಯನ್ನು ಪ್ರತ್ಯಕ್ಷವಾಗಿ ನೋಡುವಂತಾಗಬೇಕು. ರೈತ ಸುರಿಸುವ ಬೆವರು, ಅವನ ಕಣ್ಣೀರ ಅಶೃತರ್ಪಣಕ್ಕೆ ಒಂದು ಹನಿ ಕಣ್ಣೀರು ಹಾಕಬೇಕು. ಕೂಳೆ, ಮುಳ್ಳು ತುಳಿದು ಸುರಿಯವ ರೈತನ ರಕ್ತ ಹೇಗೆ ಈ ಮಣ್ಣಿಗೆ ರಕ್ತತರ್ಪಣವಾಗುತ್ತಿದೆ ಎಂದು ನೋಡಬೇಕು. ಆ ಮಣ್ಣನ್ನು ಕಣ್ಣಿಗೊತ್ತಿಕೊಂಡು ರೈತನಿಗೂ ಒಂದು ಘನತೆಯ ಬದುಕು ನೀಡುವ ಸಂಕಲ್ಪ ಮಾಡಬೇಕು.