ವಿಷಯದ ವಿವರಗಳಿಗೆ ದಾಟಿರಿ

ಜನವರಿ 13, 2019

1

ಒಂಟಿತನ – ಮುಕ್ತಿ

‍ನಿಲುಮೆ ಮೂಲಕ

– ಗೀತಾ ಜಿ. ಹೆಗಡೆ.

boy-sitting-aloneಬದುಕನ್ನು ಒಂಟಿಯಾಗಿ ಎದುರಿಸುತ್ತಿದ್ದೇವಾ? ನಿಜಕ್ಕೂ ನಮಗೆ ಏನು ಬೇಕು ಜೀವಿಸಲು ? ಯಾರ ಅಗತ್ಯ ನಮಗೆ ಹೆಚ್ಚು ? ಒಂಟಿತನ ಕಾಡುವುದು ಯಾವಾಗ ? ಅಥವಾ ಒಂಟಿತನ ಕಾಡಿದಾಗಲೆಲ್ಲ ನಮ್ಮ ಜೊತೆಗಿರುವವರು ಯಾರು ಗಂಡನಾ, ಮಕ್ಕಳಾ, ಸ್ನೇಹಿತರಾ ಬಂಧುಗಳಾ ಅಥವಾ ನೆರೆಹೊರೆಯವರಾ ? ಇದರಿಂದ ಹೇಗೆ ಮುಕ್ತಿ ಹೊಂದಬೇಕು ? ಇವೆಲ್ಲ ಆಗಾಗ ಕಾಡುವ ಪ್ರಶ್ನೆ.

ಇವೆಲ್ಲವೂ ಸತ್ಯವಾಗಿ ಅರಿವಾಗಬೇಕೆಂದರೆ ಕೆಲವು ಸಂದರ್ಭದಲ್ಲಿ ಮಾತ್ರ ಸಾಧ್ಯ. ಅದು ಕಷ್ಟ ಕಾಲದಲ್ಲೂ ಅಲ್ಲ ಅಥವಾ ಕಾಯಿಲೆ ಬಿದ್ದು ನರಳುವಾಗಲೂ ಅಲ್ಲ.

1) ಕೇವಲ ಒಂಟಿಯಾಗಿರಬೇಕು. ಅಂದರೆ ಇರುವ ಮನೆಯಲ್ಲಿ ಯಾರೂ ಇರಬಾರದು. ಎಲ್ಲಾದರೂ ಹೋಗಲೇಬೇಕಾದ ಸಂದರ್ಭದಲ್ಲಿ, ಯಾವ ಕೆಲಸ ಮಾಡಿಕೊಳ್ಳಲೂ ನಿಷ್ಯಕ್ತರಾದಾಗ, ಬೇಕೆನ್ನುವುದನ್ನು ತಿನ್ನಬೇಕು ಅನಿಸುತ್ತದೆ ಆದರೆ ಮಾಡಿಕೊಳ್ಳುವ ಉತ್ಸಾಹವೇ ಉಡುಗಿಹೋದ ಸಂದರ್ಭದಲ್ಲಿ, ಕಾಲು ದೇಹವೆಲ್ಲ ಒಂದು ರೀತಿ ನಿತ್ರಾಣ; ಯಾರಾದರೂ ಸ್ವಲ್ಪ ನೀವಿ ಸೇವೆ ಮಾಡುವವರಿದ್ದರೆ ಎಷ್ಟು ಚೆನ್ನಾಗಿ ಇತ್ತು ಅಂತನ್ನುವ ಸಂದರ್ಭದಲ್ಲಿ ಮನಸ್ಸು ತನ್ನ ಅನಿಸಿಕೆಗಳನ್ನು ಬೇರೆಯವರೊಂದಿಗೆ ತೋಡಿಕೊಳ್ಳಬೇಕು ಎಂದು ಹಠ ಶುರು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೋಡಿ ನಿಜವಾದ ಒಂಟಿತನದ ಅರಿವು ಬಿಚ್ಚಿಕೊಳ್ಳುತ್ತದೆ.

2) ಹೇಳಬೇಕೆಂಬ ಮನಸ್ಸಿಗೆ ಅದರಲ್ಲೂ ಯಾವಾಗಲೂ ಸ್ವತಂತ್ರ ವ್ಯಕ್ತಿತ್ವ ಇರುವ ಮನಸ್ಥಿತಿಯವರಿಗೆ ದೇಹದಲ್ಲಿ ಕಸುವಿರುವಾಗ ಎಲ್ಲವನ್ನೂ ತನ್ನಲ್ಲೇ ನುಂಗಿಕೊಂಡಿದ್ದವರು ಬೇರೆಯವರಿಗೆ ತನ್ನ ಪೀಕಲಾಟ ಹೇಳಿಕೊಳ್ಳುವಾಗ ತನ್ನಿಂದ ಅವರಿಗೆ ತೊಂದರೆ ಆಗುತ್ತಿದೆ, ಆದರೆ ಹೇಳದೇ ಗತ್ಯಂರವಿಲ್ಲ ಅನ್ನುವಷ್ಟು ಮನಃಸ್ಥಿತಿಗೆ ತಲುಪಿದಾಗ ಮಾತ್ರ ಇನ್ನೊಬ್ಬರ ಸಹಾಯಕ್ಕಾಗಿ ಹಾತೊರೆಯುತ್ತಾನೆ. ಅಲ್ಲಿ ಆಗ ತೀವ್ರವಾಗಿ ಒಂಟಿತನ ಕಾಡುತ್ತದೆ.

3) ದಾಂಪತ್ಯ ಸುಗಮವಾಗಿ ಸಾಗುತ್ತದೆ, ಎಲ್ಲಿಯವರೆಗೆ? ತನ್ನ ಹೆಂಡತಿ/ಗಂಡ ತನ್ನ ಬೇಕು ಬೇಡಾದ್ದೆಲ್ಲ ಚಾಚೂ ತಪ್ಪದೆ ಅಚ್ಚುಕಟ್ಟಾಗಿ ಮಾಡುವವರೆಗೆ ಮಾತ್ರ. ಆ ನಂತರ ಸಂಸಾರದಲ್ಲಿ ಜಟಾಪಟಿ, ಒಂದಲ್ಲಾ ಒಂದು ಕಿರಿಕಿರಿ, ನೀನು-ನಾನು, ನಾ ಮಾಡಿದೆ -ನೀ ಹೀಂಗೆ ಮಾಡಿದೆ. ಮುಗಿಯದ ರಾಮಾಯಣ. ಹೆಚ್ಚಿನ ದಿನಗಳು ಒಬ್ಬರ ಮುಖ ಒಂದು ಕಡೆ ಇನ್ನೊಬ್ಬರ ಮುಖ ಇನ್ನೊಂದು ಕಡೆ. ಸಮಾಜದ ಮುಂದೆ ತೋರುಗಾಣಿಕೆ ಸಂಸಾರ. ಏಕೆಂದರೆ ಆಗಲೇ ಮಕ್ಕಳು ಹುಟ್ಟಿ ಎದೆಯೆತ್ತರ ಬೆಳೆದು ನಿಂತಿರುತ್ತಾರೆ. ನೆಂಟರು ಇಷ್ಟರು, ನೆರೆ ಹೊರೆಯವರೆದುರು ಮರ್ಯಾದೆ ಕಳೆದುಕೊಳ್ಳಲು ಸುತಾರಾಂ ಇಬ್ಬರೂ ಒಪ್ಪೋದಿಲ್ಲ. ಕೆಲವು ಸಂಸಾರ ಎಲ್ಲೋ ಅಪವಾದಕ್ಕೆ ಒಂದೆರಡು ಇದ್ದರೂ ಹೆಚ್ಚಿನ ಸಂಸಾರದಲ್ಲಿ ಇದೆಲ್ಲಾ ಮಾಮೂಲಿ. ಏನೂ ಇಲ್ಲದಿದ್ದರೂ ಎಲ್ಲಾ ಇದೆಯೆಂಬಂತೆ ಬದುಕುವ ಸಂಸಾರಗಳು ಎಷ್ಟಿವೆಯೋ!!

ಕಟ್ಟಿಕೊಂಡ ಗಂಡ/ಹೆಂಡತಿ ನಿಜವಾದ ಮನಸ್ಸು ಇಂತಹ ಸಂದರ್ಭದಲ್ಲಿ ಇಲ್ಲಿ ಅನಾವರಣಗೊಳ್ಳುತ್ತದೆ. ಎಲ್ಲರೂ ಮನೆಯೊಳಗಿದ್ದೂ ಒಂಟಿ ಭಾವ ಕಾಡೋದು ಇದ್ದೂ ಇಲ್ಲದಂತಾದಾಗ. ಈ ಇದ್ದೂ ಇಲ್ಲದಂತೆ ಬದುಕುವ ಸ್ಥಿತಿ ಇದೆಯಲ್ಲಾ ಭಯಂಕರ ಕಷ್ಟ ಮನುಷ್ಯನಿಗೆ. ಯಾವ ಮನುಷ್ಯನೂ ಒಂಟಿಯಾಗಿ ಬದುಕಲಾರ. ಇಂತಹ ಸ್ಥಿತಿಯಲ್ಲಿ ಅತೀವ ಒಂಟಿತನ ಕಾಡಿ ಮನಸ್ಸು ವಿಕಾರಗೊಳ್ಳಲು ಶುರುವಾಗುತ್ತದೆ.

4) ಎಷ್ಟೋ ಜನರ ಬಾಯಲ್ಲಿ ನೀವು ಕೇಳಿರಬಹುದು ; ಓಹ್! ನನಗೇನು ಕಡಿಮೆ ಎಲ್ಲರೂ ಇದ್ದಾರಪ್ಪಾ. ನನಗೆ ಒಂಟಿತನದ ಸಂದರ್ಭವೇ ಬರೋದಿಲ್ಲ. ಈ ನಂಬಿಕೆ ಬುಡ ಸಮೇತ ಉರುಳೋದು ನಂಬಿಕೊಂಡವರಿಂದ ಅಂತ್ಯ ಕಾಲದಲ್ಲಿ ಬರುವ ಪ್ರತಿಕ್ರಿಯೆ ಕಾರಣವಾಗುತ್ತದೆ. ಆಗ ಯಾವ ದುಡ್ಡು, ಆಸ್ಥಿ, ಅಂತಸ್ತು ಅವರಿಗೆ ಬೇಡಾಗಿರುತ್ತದೆ. ಪ್ರೀತಿಯ ಜೊತೆ, ಜೊತೆಗೊಂದಿಷ್ಟು ಸಾಂತ್ವನ, ತನ್ನ ಜೊತೆಗೇ ಇರಬೇಕು, ಇದು ಕೇವಲ ನನ್ನದು ಎನ್ನುವ ಒಳ ತುಡಿತ ಆಂತರಿಕ ಭಾವ ಬಯಸುವ ಕಾಲ. ಅಲ್ಲಿ ಈ ನಂಬಿಕೆಗೆ ಅರ್ಹನಾದ ವ್ಯಕ್ತಿ ಮೊದಲಿನಂತೆ ಕೊನೆವರೆಗೂ ಇದ್ದರೆ ಪರವಾಗಿಲ್ಲ. ಆದರೆ ಮನುಷ್ಯ ಹೀಗೆಯೇ ಇರುತ್ತಾನೆ ಅಂತ ಹೇಳಲು ಸಾಧ್ಯವೇ ಇಲ್ಲ. ಯಾರೇ ಆಗಿರಬಹುದು ಕೆಲವೊಂದು ಸಂದರ್ಭದಲ್ಲಿ ಬದಲಾಗಿಬಿಡುತ್ತಾರೆ. ಒಂದಾ ತನ್ನದೇ ಆದ ಪರಿಧಿಯಲ್ಲಿ ಜೀವಿಸೋದು ಇಲ್ಲಾ ನನಗ್ಯಾಕೆ ಈ ಉಸಾಪರಿ ಎಂದು ಪಲಾಯನವಾದ. ಆದರೆ ಇಂತಹ ನಡೆ ಗೊತ್ತಾದ ಮನಕ್ಕೆ ಜೀವನದಲ್ಲಿ ಎಷ್ಟೆಲ್ಲ ಹೋರಾಡಿದೆ, ದುಡಿದೆ, ಸಂಪಾದನೆ ಮಾಡಿದೆ, ಮನೆ ಕಟ್ಟಿದೆ, ಮಕ್ಕಳು ಮೊಮ್ಮಕ್ಕಳು ಎಲ್ಲಾ ಎಲ್ಲಾ ಪಡೆದೆ. ಆದರೆ ನಿಜವಾಗಿ ನನಗೇನು ಬೇಕು? ಎಂಬುವುದರತ್ತ ಗಮನವನ್ನೇ ಕೊಡಲಿಲ್ಲ. ಇದಲ್ಲ ಜೀವನ. ಇದರಾಚೆ ನೆಮ್ಮದಿ ಕೊಡುವ ನನ್ನದು, ನನಗಾಗಿ ಅನ್ನುವ ಒಂದು ಜೀವ ಸಂಪಾದನೆ ಮಾಡಲು ಸೋತೆನಲ್ಲಾ. ನನ್ನ ನಂಬಿಕೆ ಸುಳ್ಳಾಯಿತಲ್ಲಾ ಅನ್ನುವ ಕೊರಗು ಕಾಡಲು ಶುರುವಾಗುತ್ತದೆ. ಈ ಸೋಲು ಅರಿವಾದಾಗಲೇ ಮನುಷ್ಯನಿಗೆ ತಾನು ಒಂಟಿ ಅನ್ನುವ ಭಾವ ಉಕ್ಕಲು ಶುರುವಾಗುತ್ತದೆ.

ಸಾಮಾನ್ಯವಾಗಿ ಮನುಷ್ಯ ತಾನು, ತನ್ನದು, ತನ್ನವರು ಎಂಬ ಜೀವ ಇದೆಯೆಂಬ ನಂಬಿಕೆಯಲ್ಲಿ ಆ ಒಳ ಜೀವ ಸಮಾಧಾನದಿಂದ ಬದುಕುತ್ತ ತನ್ನದೇ ಕಾರ್ಯದಲ್ಲಿ ಮುಳುಗಿರುತ್ತದೆ. ಒಂದು ಬೆಳಗಿನಿಂದ ಸಾಯಂಕಾಲದವರೆಗೆ ಕೆಲವರದು ತಡರಾತ್ರಿಯವರೆಗೂ ದುಡಿದು ಮನೆ ಆಸ್ತಿ ಮಾಡಬೇಕೆನ್ನುವ ತೀವ್ರ ಸಂಪಾದನೆಯ ತುಡಿತ. ಬರೀ ಕೂಡಾಕುವುದರಲ್ಲೇ ತನ್ನ ಆಯುಷ್ಯ ಕಳೆಯುತ್ತ ಇರುತ್ತಾನೆ. ನಾಳೆಯ ಬಗ್ಗೆ ಇನ್ನಿಲ್ಲದ ಕನಸು. ಬೇಕು ಇನ್ನೂ ಬೇಕೆನ್ನುವ ದುರಾಸೆಗೆ ಬಲಿಯಾದ ಮನುಷ್ಯ ಜೀವನವನ್ನು ಸಂಪೂರ್ಣ ಅನುಭವಿಸದೇ ಕಾಲ ಸರಿಯುತ್ತಿದ್ದಂತೆ ಜನರ ನಡೆ, ಒಡ ಹುಟ್ಟಿದವರ, ಬಂಧುಗಳ, ಸಂಸಾರದಲ್ಲಿಯ ಅನುಭವ ಛೆ! ನಾ ಯಾಕೆ ಇಷ್ಟು ವರ್ಷ ಹೋರಾಡಿದೆ ? ನನಗೇನು ಬೇಕು ಅಂತನಿಸಿದ್ದಕ್ಕೆಲ್ಲ ಕಡಿವಾಣ ಹಾಕಿ ಇಷ್ಟೆಲ್ಲಾ ಮಾಡಿ ಏನು ಬಂತು ಪ್ರಯೋಜನವಾಯಿತು?

ವ್ಯಥೆಯ ಹಾದಿ ಹಿಡಿಯುತ್ತದೆ ಮನಸ್ಸು‌. ಕಳೆದು ಹೋದ ಕಾಲಕ್ಕೆ ಚಿಂತಿಸಿ ಫಲವೇನು ಎಂಬುದು ಮನಸ್ಸಿಗೆ ಗೊತ್ತಾದರೂ ಮನಸ್ಸಿಗಾದ ವ್ಯಥೆ ದೂರಮಾಡಿಕೊಳ್ಳಲು ಸಾಧ್ಯವಾಗದ ಮಾತು. ದೇಹದಲ್ಲಿ ಶಕ್ತಿ ಉಡುಗುವ ಕಾಲ. ಮನಸ್ಸು ವಿಶ್ರಾಂತಿ ಬಯಸುತ್ತದೆ. ಜೊತೆಗೆ ನಂದೂ ಅನ್ನುವ ವ್ಯಾಮೋಹ ಅನುರಾಗ ತಳೆದು ನಂದಿಲ್ಲೇನಿದೆ ? ಮನೆನಾ, ಆಸ್ತಿ, ದುಡ್ಡು ಊಹೂಂ ಯಾವುದರಲ್ಲೂ ಸಮಾಧಾನ ಇಲ್ಲ. ಕೇವಲ ತನಗಾಗಿ, ತನ್ನದು ಅನ್ನುವ ಜೀವಕ್ಕಾಗಿ ಪರದಾಟ. ಸಿಗದಾಗ, ತನಗಿಲ್ಲ ಅನ್ನುವ ಸತ್ಯ ಮನಸ್ಸು ಮ್ಲಾನ ಒತ್ತರಿಸುವ ದುಃಖ ಜೀವ ಹಿಡಿಗಂಟು.

ಮನುಷ್ಯನಿಗೆ ಈ ನಂಬಿಕೆ ಎನ್ನುವುದು ಬಲು ದೊಡ್ಡ ಶಕ್ತಿ. Willpower. ಅದು ಎಷ್ಟೇ ತೀವ್ರವಾಗಿ ಇರಲಿ ಬದುಕಿನ ಕೊನೆಯ ಹಂತದಲ್ಲಿ ಅತೀವವಾಗಿ ಕಾಡುವುದೇ ಈ ಒಂಟಿತನ. ಹಾಗಾದರೆ ಈ ಒಂಟಿತನಕ್ಕೆ ಪರಿಹಾರವೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದರೆ ಇದೆ. ಮತ್ತದೇ ನಂಬಿಕೆ. ಇಲ್ಲದಿರುವುದನ್ನು, ಸಿಗದಿರುವುದನ್ನು, ಕಣ್ಣಿಗೆ ಕಾಣದಿರುವುದನ್ನು ಇದೆಯೆಂದು ಸಕಾರಾತ್ಮಕವಾಗಿ ಸ್ವೀಕರಿಸಿಬಿಡಿ. ಅಂದರೆ ತನ್ನ ಕಂಡರೆ ಎಲ್ಲರಿಗೂ ಇಷ್ಟ, ತನ್ನನ್ನು ಎಲ್ಲರೂ ಪ್ರೀತಿಸುತ್ತಾರೆ ಏನೋ ಅವರವರ ಕೆಲಸದಲ್ಲಿ ಅಥವಾ ಇನ್ನಾವುದೋ ಕಾರಣಕ್ಕೆ ಸ್ವಲ್ಪ ನನ್ನನ್ನು ನೆಗೆಲೆಕ್ಟ್ ಮಾಡಿದ್ದಾರೆ, ಪರವಾಗಿಲ್ಲ ನಾನೂ ಸ್ವಲ್ಪ ಹೊಂದಿಕೊಳ್ಳಬೇಕಲ್ವಾ ? ನನ್ನದೂ ತಪ್ಪಿರಬಹುದು, ನನ್ನಂತೆ ಪರರೂ ಅಂತ ನಾನ್ಯಾಕೆ ಯೋಚಿಸ್ತಿಲ್ಲ, ಈಗೇನಪ್ಪಾ ನಾನೇ ಅವರನ್ನು ಮಾತಾಡಿಸಿ ಬಂದರಾಯಿತು ಇತ್ಯಾದಿ. ಹೀಗೆ ನಿಮಗೆ ನೀವೇ ಸತ್ಯವೋ ಸುಳ್ಳೋ ಒಟ್ಟಿನಲ್ಲಿ ಮನಸ್ಸು ಖುಷಿಯ ಹಂತಕ್ಕೆ ಬರುವವರೆಗೂ ಮೌನವಾಗಿ ಒಳಗೊಳಗೇ ಒಂದಷ್ಟು ಮಾತಾಡಿಕೊಳ್ಳುವ ರೂಢಿ ಬೆಳೆಸಿಕೊಳ್ಳುವುದು ಉತ್ತಮ. ಏಕೆಂದರೆ ಮನಸ್ಸು ಈ ಆತ್ಮ ಇಲ್ಲಾ ಅನ್ನುವುದನ್ನು ಖಂಡಿತಾ ಸ್ವೀಕರಿಸೋದೇ ಇಲ್ಲ. ಅದೇ ಇಲ್ಲದಿದ್ದರೂ ಇದೆಯೆಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದರೆ ಸಂತೋಷದಿಂದ ಇರುತ್ತದೆ.

ಬದುಕಿನ ಮುಂದಿನ ಹೆಜ್ಜೆ ಸಾವು ಅಂತ ಗೊತ್ತಿದ್ದರೂ ಎಲ್ಲಾ ಬಿಟ್ಟು ಬರಿಗೈಯ್ಯಲ್ಲಿ ಹೋಗಬೇಕು ಅಂತ ಗೊತ್ತಿದ್ದರೂ ಮರೆತು ಜೀವಿಸುತ್ತೇವಲ್ಲ ಹಾಗೆ ಈ ಒಂಟಿತನದ ಭಾದೆಯಿಂದ ಮುಕ್ತಿ ಪಡೆಯಲು ನಮ್ಮನ್ನು ನಾವೇ ಸಮಾಧಾನ ಮಾಡಿಕೊಳ್ಳುತ್ತ ಆ ನಿಟ್ಟಿನಲ್ಲಿ ಯೋಚಿಸುತ್ತ ಇರುವಷ್ಟು ಕಾಲ ನೆಮ್ಮದಿಯಿಂದ ಬದುಕಿಬಿಡೋಣವಲ್ಲವೇ?

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments