ವಿಷಯದ ವಿವರಗಳಿಗೆ ದಾಟಿರಿ

ಜನವರಿ 16, 2019

ಭಗವದ್ಗೀತೆ ಬರ್ನ್, ವಿಚಾರಕ್ರಾಂತಿಯ ಯೂ ಟರ್ನ್?

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್
ತುರುವೇಕೆರೆ-572227

kuvempuಇಂದು ನಾವು ಕುವೆಂಪುರವರ 114ನೇ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಕುವೆಂಪುರವರು ಶ್ರೇಷ್ಠ ಕವಿ, ನಾಟಕಕಾರ, ಕಾದಂಬರಿಕಾರ ಎಲ್ಲವೂ ಆಗಿದ್ದರು. ಭಾವ, ಶ್ರದ್ಧೆ,ಆಧ್ಯಾತ್ಮ ಹಾಗೂ ನವರಸಗಳ ವಿಕಾರ, ವಿಕೃತಿ, ಅಬ್ಬರ, ಆಕ್ರೋಶವಿಲ್ಲದ ಸಮನ್ವಯದ ಅಭಿವ್ಯಕ್ತಿಯ ಸಂತರೆಂದೇ ಅವರನ್ನು ರಸಋಷಿ ಎಂದು ಕರೆಯುವುದು. ಇವೆಲ್ಲಕ್ಕಿಂತ ಹೆಚ್ಚಾಗಿ ಕುವೆಂಪು ತೀವ್ರ ವಿಚಾರವಾದಿಯಾಗಿದ್ದರು. ವಿಚಾರವಾದಿಯಾಗಿದ್ದುಕೊಂಡೇ ಅವರು ಆಧ್ಯಾತ್ಮ ಜೀವಿಯೂ, ಆಧ್ಮಾತ್ಮವಾದಿಯೂ ಆಗಿದ್ದರೆಂಬುದು ಅತ್ಯಂತ ಶ್ರೇಷ್ಠ ಹಾಗೂ ಹೆಗ್ಗಳಿಕೆಯ ಸಂಗತಿ. ವಿಚಾರವಾದಿಯಾಗಿ ಅವರು ಜಾತಿಧರ್ಮ, ವರ್ಣಾಶ್ರಮ ಪದ್ಧತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಅರ್ಥಹೀನ ಆಚರಣೆ, ಮೌಢ್ಯ, ಕಂದಾಚಾರಗಳನ್ನು ಧಿಕ್ಕರಿಸುತ್ತಿದ್ದರು.

‘ಗುಡಿ, ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮುಟ್ಟಿ ಕೀಳಬನ್ನಿ, ಮೌಢ್ಯತೆಯ ಮಾರಿಯನು ಹೊರದೂಡಲೈ ತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ, ಓ ನನ್ನ ಸೋದರರೇ ಬೇಗ ಬನ್ನಿ’ ಎಂದು ಬಹಳಷ್ಟು ಹಿಂದೆಯೇ ಕುವೆಂಪು ಕರೆಕೊಟ್ಟಿದ್ದರು. ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರ ಮುಂದಿನ ದೃಷ್ಟಿಯಾಗಬೇಕಿದೆ. ನಮಗೆ ಬೇಕಾದುದು ಆ ಮತ, ಈ ಮತ ಅಲ್ಲ, ಮನುಜ ಮತ, ವಿಶ್ವಪಥ, ಒಬ್ಬರ, ಇಬ್ಬರ ಉದಯವಲ್ಲ, ಸರ್ವರ ಉದಯ, ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ, ಸಮನ್ವಯಗೊಳ್ಳುವುದು, ಭೌತಿಕ, ಪಾರಮಾರ್ಥಿಕ ಎಂಬ ಭಿನ್ನದೃಷ್ಟಿಯಲ್ಲ, ಎಲ್ಲವನ್ನು ಭಗವತ್ ದೃಷ್ಟಿಯಿಂದ ನೋಡುವ ಪೂರ್ಣದೃಷ್ಟಿ ಎಂದಿದ್ದರು.

ಆದರೆ ಇವತ್ತು ಏನಾಗಿದೆ ನೋಡಿ, ಕುವೆಂಪುರವರು ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ ಎಂದಿದ್ದರು. ಆದರೆ ನಮ್ಮ ವಿಚಾರವಾದಿಗಳು, ಸರ್ಕಾರಗಳು ಹಳೇ ಗುಡಿ ಛಾವಣಿ ಎಲ್ಲಿ ತಲೆ ಮೇಲೆ ಬೀಳುತ್ತದೋ ಎಂದು ಧಾವಂತದಲ್ಲಿ ಓಡಿಬಂದಿದ್ದಾರೆ, ಆ ಗುಡಿಗಳಲ್ಲಿರುವ ದೇವರುಗಳನ್ನು ವಾಚಾಮಗೋಚರವಾಗಿ ಬೈಯ್ಯುವ ಕಲೆ ಸಿದ್ಧಿಸಿಕೊಂಡಿದ್ದಾರೆ. ಗುಡಿಗಳಿಂದ ಓಡಿ ಬಂದು ಚರ್ಚು, ಮಸೀದಿಗಳಲ್ಲಿ ಬಾಗಿಲು ಹಾಕಿಕೊಂಡು ಕೂತಿದ್ದಾರೆ. ಇನ್ನೂ ಚರ್ಚು, ಮಸೀದಿ ಬಿಟ್ಟು ಹೊರಬಂದಿಲ್ಲ, ಬರುವುದೂ ಇಲ್ಲ, ನೂರಾರು ಮಸೀದಿ, ಚರ್ಚುಗಳಿಗೆ ಕೋಟಿ ಕೋಟಿ ಅನುದಾನ ಕೊಟ್ಟು ಓಲೈಸುತ್ತಿದ್ದಾರೆ. ಮನುಜಮತ ಎನ್ನುವುದು ‘ಮನುಷ್ಯನಿಗಿರುವ ಓಟಿನ ಬೆಲೆ’ ಎಂದಾಗಿದೆ. ಇನ್ನು ಅವನನ್ನು ವಿಶ್ವಮಾನವತೆಯತ್ತ ಕೊಂಡೊಯ್ಯುವ ಮಾತೆಲ್ಲಿಂದ ಬಂತು ? ವಿಶ್ವಪಥ ಎನ್ನುವುದು ಸರ್ಕಾರವೆಂಬ ಅಂಬಾರಿ ಹೊತ್ತುಕೊಂಡು ವಿಚಾರವಾದಿಗಳೆಂಬ ಆನೆ ತುಳಿದದ್ದೇ ದಾರಿ ಎಂಬಂತಾಗಿದೆ. ಸರ್ವರ ಉದಯ ಎಂಬುದು ಸರ್ಕಾರದ ‘ಸರ್ವರ್’ಗಳಂತಿರುವ ಬಾಲಬುಡಕರ ಉದಯ ಎಂಬಂತಾಗಿದೆ. ಸರ್ಕಾರಗಳೇ ಜನರನ್ನು ಆ ಜಾತಿ, ಈ ಜಾತಿ, ಆ ಧರ್ಮ, ಈ ಧರ್ಮ ಎಂದು ಒಡೆಯಲು ನಿಂತಿರುವಾಗ ಸಮನ್ವಯ ಎಲ್ಲಿಂದ ಬರಬೇಕು? ಯಾವುದೂ ಭಿನ್ನವಲ್ಲ ಎಂದು ನೋಡುವ ಪೂರ್ಣದೃಷ್ಟಿ ಎಂಬ ಭಗವತ್ ದೃಷ್ಟಿ ದೇವರು, ನಂಬಿಕೆ, ಶ್ರದ್ಧೆ ಎಲ್ಲವನ್ನೂ ತುಂಡು ತುಂಡಾಗಿಸುವ ’ಭಗವಾನ್’ ವಕ್ರದೃಷ್ಟಿಯಾಗಿದೆ.

ಕುವೆಂಪುವರರು ಎಷ್ಟು ವಿಚಾರವಾದಿಯಾಗಿದ್ದರೋ ಅಷ್ಟೇ ಆಧ್ಯಾತ್ಮವಾದಿಯಾಗಿದ್ದರು. ಆಧ್ಯಾತ್ಮ ಎಂದರೆ ‘ಇಮ್ಮಿಡಿಯೇಟ್ ಫೀಲಿಂಗ್ ಆಫ್ ಯೂನಿಟಿ ಆಫ್ ದಿ ಸೆಲ್ಫ್ ವಿತ್ ಗಾಡ್’ ಎಂದು ಹೇಳಲಾಗುತ್ತದೆ. ದೇವರೊಂದಿಗಿನ ಆತ್ಮದ ಅನುಸಂಧಾನವೇ ಆಧ್ಯಾತ್ಮ. ನಿಸರ್ಗ, ಪಂಚಭೂತಗಳು, ಕಾಯಕ ಶ್ರದ್ಧೆ, ಜೀವನ ಪ್ರೀತಿ, ನೈತಿಕತೆ ಮೊದಲಾದ ಯಾವುದೇ ಸ್ಥಾಯೀ ಮೌಲ್ಯವೂ ದೇವರೇ! ಅದರೊಂದಿಗಿನ ಅನುಸಂಧಾನವೂ ಆಧ್ಯಾತ್ಮ ಎನಿಸಬಹುದು. ಕುವೆಂಪು ಆಧ್ಯಾತ್ಮವಾದಿಯಾಗಿದ್ದರೆಂದು ಅವರು ಮಠಗಳನ್ನು, ಡಾಂಬಿಕ ಸ್ವಾಮಿಗಳನ್ನು ಪ್ರೀತಿಸುವ ಭಕ್ತರಾಗಿರಲಿಲ್ಲ, ಕರ್ಮಠರಾಗಿರಲಿಲ್ಲ ಅಥವಾ ವಿಚಾರವಾದಿಯೆಂದು ಕಂಡ ಕಂಡ ದೇವರು, ಹಿಂದೂಧರ್ಮವನ್ನು ಬೈಯ್ಯುವ ಕೆಲಸ ಮಾಡಲಿಲ್ಲ. ಕುವೆಂಪು ಒಂದು ಅನಿರ್ವಚನೀಯ, ಅತ್ಯಂತ ಅಂತರತಮ, ಸತ್ಯಸ್ಯ ಸತ್ಯವಾದ ಸನಾತನ ತತ್ವಕ್ಕೆ ಆಧ್ಮಾತ್ಮ ಎಂದು ಭಾವಿಸಿದ್ದರು. ಅದರ ಜೊತೆ ಮತ ಎನ್ನುವ ಭಾವರೂಪೀ ಅಮೂರ್ತ ವಸ್ತು ತಳುಕು ಹಾಕಿಕೊಂಡು ಪ್ರಚ್ಚನ್ನ ವಂಚನೆಯಾಗುತ್ತಿದೆ ಎಂದಿದ್ದರು.(ಅದಕ್ಕೆ ಈಗ ಓಟ್ ಎನ್ನುವ ಮತವೂ ಸೇರಿಕೊಂಡಿದೆ) ಇಂದು ನಮ್ಮ ಬಹುತೇಕ ಸ್ವಾಮಿಗಳು ಮಾಡುತ್ತಿರುವುದು ಈ ವಂಚನೆಯನ್ನೇ! ಇಲ್ಲವಾದರೆ ಬಿಜೆಪಿ ಸ್ವಾಮಿಗಳು, ಕಾಂಗ್ರೆಸ್ ಸ್ವಾಮಿಗಳು ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ಸ್ವಾಮಿಗಳು ಹೋಗುತ್ತಿದ್ದರಾ? ಕುವೆಂಪುರವರ ಆಧ್ಮಾತ್ಮದ ಅನುಭವವಾಗಲಿ, ಅನುಭಾವವಾಗಲೀ, ಸಾಕ್ಷಾತ್ಕಾರವಾಗಲೀ ಅವರಿಗೆ ಆಗಿರಲಿಕ್ಕಿಲ್ಲ. ಆಧ್ಯಾತ್ಮದ ಸಿಪ್ಪೆಯ ಮೇಲೆ ಮತವೆಂಬ ತಿರುಳಿಟ್ಟುಕೊಂಡು ದೊಡ್ಡ ಸುಧಾರಕರಂತೆ ವರ್ತಿಸುತ್ತಿದ್ದಾರೆ. ಆಧ್ಯಾತ್ಮದ, ಸಂಸ್ಕೃತಿಯ ಉದ್ಧಾರಕರಾಗುವುದಕ್ಕಿಂತ ಅವರು ತಮ್ಮ ತಮ್ಮ ಜಾತಿ, ಮತಗಳ ಸಾಮ್ರಾಜ್ಯ ವಿಸ್ತರಿಸಿ ಕೋಟೆಕೊತ್ತಲ ಕಟ್ಟಿಕೊಳ್ಳುವ ಪಾಳೇಗಾರರಾಗುತ್ತಿದ್ದಾರೆ. ಹಾಗಾಗಿಯೇ ಇಂದು ಜಾತಿಗೊಂದು ಮಠ, ಧರ್ಮಕ್ಕೆ ಹತ್ತಾರು ಮಠಗಳು! ತಮ್ಮ ಅನುಕೂಲ, ಸ್ವಾರ್ಥಕ್ಕಾಗಿ ಧರ್ಮವನ್ನೇ ಒಡೆಯಲು ನಿಂತಿರುವವರಿಗೆ ಸಮನ್ವಯ, ಸರ್ವೋದಯ, ಪೂರ್ಣದೃಷ್ಟಿ ಇದೆ ಎಂದು ಯಾರಾದರೂ ಹೇಳಬಹುದಾ? ಅಂತಹ ಯೋಚನೆ ಇಲ್ಲದಿದ್ದರೆ ಸ್ವಾಮಿಗಳಿಗೆ ಮಠದ ಅಂಬಲಿ ಬಿಟ್ಟು ಮಂತ್ರಿಗಳ ಹಂಗಿನ ಜಹಾಂಗೀರು ಯಾಕೆ? ಯಾವ ಜಹಗೀರು ಆಳಲು ಎಲ್ಲಾ ಜಾತಿಯ ಮಠಗಳಿಗೆ ಬೆಂಗಳೂರಲ್ಲೇ ಸೈಟು ಕೊಡಬೇಕು ? ವಿಶ್ವಮಾನವತೆಗೆ ಎಲ್ಲಾ ಶ್ರೀಗಳು ಅಂದರೆ ದೇಹ ಶ್ರೀ, ಭಾವ ಶ್ರೀ, ಬುದ್ದಿ ಶ್ರೀ, ಆತ್ಮಶ್ರೀ ಮುಖ್ಯ. ಇವೆಲ್ಲಾ ಅಂತಃಕರಣ ಪೂರ್ತಿ ಕ್ರಿಯಾಶೀಲವಾಗಿದೆಯೇ ಎಂದು ನಮ್ಮ ಶ್ರೀ ಶ್ರೀ ಶ್ರೀಗಳೆಲ್ಲರೂ ಕೇಳಿಕೊಳ್ಳಬೇಕಿದೆ.

ಆಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಪ್ರಭುತ್ವ, ಸಮಾಜವಾದ, ಸಮಾನತೆಯ ಸ್ಥಾಪನೆ ಎಂದಿಗೂ ಸಾಧ್ಯವಿಲ್ಲ ಎಂದು ಕುವೆಂಪು ಹೇಳಿದ್ದರು. ಮತಭಾವನೆ ಪ್ರಚೋದಿಸುವ ಜಾತಿಭೇದ ಬುದ್ದಿ ಮತ್ತು ಚುನಾವಣೆ ಅನುಸರಿಸುತ್ತಿರುವ ಕುಟಿಲ ನೀತಿ ಈ ಎರಡು ಜನಕ ಅನಿಷ್ಠಗಳನ್ನು ತೊಲಗಿಸಿದರೆ ಇತರೆ ಎಲ್ಲಾ ಜನ್ಯ ಅನಿಷ್ಟಗಳನ್ನು ತೊಲಗಿಸಬಹುದು ಎಂದಿದ್ದರು. ಅದು ನಿಜವಾದ ಅರ್ಥದಲ್ಲಿ ಸಾಕಾರಗೊಂಡಿದೆಯೇ? ಮತಭಾವನೆ ಪ್ರಚೋದಿಸುವ ಜಾತಿಭೇದ ಬುದ್ದಿ ಮತ್ತು ಚುನಾವಣಾ ಕುಟಿಲ ನೀತಿ ನಮ್ಮ ರಾಜಕೀಯದಿಂದ ಮರೆಯಾಗಿದೆಯೇ? ಖಂಡಿತಾ ಇಲ್ಲವೇ ಇಲ್ಲ.

ಇನ್ನು ನಮ್ಮ ವಿಚಾರವಾದವೆಂದರೆ ಆಧ್ಮಾತ್ಮವನ್ನು ಮತ್ತು ಅದಕ್ಕೆ ಸಂಬಂಧಿಸಿದ ಶ್ರದ್ಧೆ, ಭಕ್ತಿ, ನಂಬಿಕೆಗಳನ್ನು ಹೀಯಾಳಿಸುವುದೇ ಆಗಿದೆ. ಗೀತೆಯನ್ನು ಪ್ರಪಂಚದ ಮಹೋನ್ನತವಾದ ಆಧ್ಯಾತ್ಮಿಕ ಕೃತಿಯೆಂದು ಎಲ್ಲರೂ ಭಾವಿಸುತ್ತಾರೆ. ಶ್ರೀ ಅರವಿಂದರು ಚಾತುರ್ವಣ್ಯ ಮನಃಶಾಸ್ತ್ರಕ್ಕೆ ಸಂಬಂಧಪಟ್ಟುದೇ ಹೊರತು ಮನುಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟುದಲ್ಲ ಎನ್ನುತ್ತಾರೆ. ಉಪನಿಷತ್ತಿನಲ್ಲಿ ವಿಶ್ವತತ್ವಗಳಿವೇ ಹೊರತು ಯಾವುದೋ ಒಂದು ಕಾಲಕ್ಕೆ, ಧರ್ಮಕ್ಕೆ ಮತಕ್ಕೆ ಸಂಬಂಧಿಸಿದ್ದಿಲ್ಲ. ಅಂತಹ ವಿಶ್ವತತ್ವವನ್ನು ಇಡೀ ಲೋಕ, ಬುದ್ದಿವಂತ ಜನತೆ ಮಾನ್ಯ ಮಾಡುತ್ತದೆ. ಈ ಚಾತುರ್ವಣ್ಯ ಉಲ್ಲೇಖಕ್ಕಾಗಿ ಇಡೀ ಗೀತೆಯನ್ನೇ ಎಸೆಯುವುದು ಮೂರ್ಖತನ ಎಂದಿದ್ದರು ಕುವೆಂಪು. ಆದರೆ ನಮ್ಮ ವಿಚಾರವಾದಿಗಳು ಭಗವದ್ಗೀತೆ, ರಾಮಾಯಣವನ್ನೇ ಸುಡುವ ಮಟ್ಟಕ್ಕೆ ಹೋಗಿದ್ದಾರೆ. ಹೀಗೆ ಮಹಾಕಾವ್ಯಗಳನ್ನು ಸುಡುವ ವಿಕೃತ ಜನಕ್ಕೆ ಕುವೆಂಪು ಕೇಳಿದ್ದರು: ನೀವು ಆಧುನಿಕರಾದರೆಂದು ನಿಮ್ಮಜ್ಜಿ ಒಡವೆಯನ್ನೂ ಸುಟ್ಟು ಹಾಕುತ್ತೀರಾ? ಇಲ್ಲವಲ್ಲ, ಅದನ್ನು ಕರಗಿಸಿ ಹೊಸ ಒಡವೆ ಮಾಡಿಸುವಂತೆ ಈ ಗ್ರಂಥಗಳಲ್ಲಿನ ಸಾರವನ್ನು ರೂಪಾಂತರಿಸಿ ಹೊಸ ಧ್ಯೇಯ, ಹೊಸ ಇಷ್ಟಗಳಿಗೆ ಅನುಸಾರವಾಗಿ ನಿಮ್ಮ ಸಾಹಿತ್ಯದಲ್ಲಿ ಎರಕ ಹುಯ್ಯಬೇಕು, ಇಲ್ಲದಿದ್ದರೆ ನಮ್ಮ ಸಂಸ್ಕೃತಿಗೇ ನಷ್ಟವಾಗುತ್ತದೆ ಎಂದು ತಮ್ಮ ಶೂದ್ರತಪಸ್ವಿ ನಾಟಕದ ಉದಾಹರಣೆ ನೀಡಿದ್ದರು. ಕುವೆಂಪುರವರು ಯಾವುದನ್ನೂ ತಿರಸ್ಕರಿಸದೆ ಪ್ರತಿಕೃತಿ ದೃಷ್ಟಿಯಿಂದ ನೋಡದೆ ಪ್ರತಿಮಾ ದೃಷ್ಟಿಯಿಂದ ಅಧ್ಯಯನ ಮಾಡಿ ದರ್ಶನ ಧ್ವನಿಯಿಂದ ವ್ಯಾಖ್ಯಾನ ಮಾಡಿ, ಬೇಡವಾದದ್ದನ್ನು ತ್ಯಜಿಸಿ ನಿಮ್ಮದೇ ಹೊಸ ರೂಪಾಂತರ ಸೃಷ್ಟಿಸಿ ಎಂದಿದ್ದರು. ಇದು ನಮ್ಮ ಪ್ರಕಾಂಡ ವಿಚಾರವಾದಿಗಳಿಗೆ ಅನುಕರಣೆಯ ಮಾರ್ಗವಲ್ಲವೇ?

ಹಿಂದೂ ಧರ್ಮವು ಐತಿಹಾಸಿಕ ಧರ್ಮಗಳಲ್ಲಿ ವಿಶಿಷ್ಟವಾದುದು. ಅದರ ದೃಷ್ಟಿಯಲ್ಲಿ ಎಲ್ಲಾ ಮಾರ್ಗಗಳೂ ಸತ್ಯದೃಷ್ಟಿಗಳೇ ಮತ್ತು ಸತ್ಯಮಾರ್ಗಗಳೇ! ಅವೆಲ್ಲಾ ಸರ್ವಸಮಾನವಾಗಿ ಮಾನವ ವರ್ಗಕ್ಕೆ ಬೇಕಾದವುಗಳೇ ಎಂದಿದ್ದರು ಕುವೆಂಪು. ಆದರೆ ಬೇರೆ ಧರ್ಮಗಳನ್ನು ಮತಕ್ಕಾಗಿ ಓಲೈಸಲು ಹಿಂದೂಧರ್ಮವನ್ನು ಶೋಷಕ ಧರ್ಮ, ಜೀವವಿರೋಧಿ ಧರ್ಮ ಎಂದು ಬೊಬ್ಬೆರಿಯುವ ಈ ವಿಚಾರವಾದಿಗಳು ಕುವೆಂಪು ಅವರಿಗಿಂತ ಯಾವಾಗ ಶ್ರೇಷ್ಠರಾದರೋ ದೇವರಿಗೇ ಗೊತ್ತು.

‘ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ’ ಎಂದಿದ್ದರು ಕುವೆಂಪು. ಧರ್ಮಗಳಿಗೆ ಸಾವಿರಾರು ಮತಗಳು, ಅದರೊಳಗೆ ನೂರಾರು ಪಂಗಡಗಳು, ಅವಕ್ಕೆಲ್ಲಾ ಸಾವಿರ ಸಾವಿರ ದೇವರುಗಳು, ದೇವರ ಹೆಸರುಗಳಲ್ಲಿ ವಂಚನೆ, ಶೋಷಣೆಯಿಂದ ಬೇಸತ್ತ ಕುವೆಂಪು ಈ ಮಾತು ಹೇಳಿರಬಹುದು. ಆದರೆ ಅವರು ಭಾರತಾಂಬೆಯನ್ನೂ ಒಂದು ಸಮಗ್ರತೆಯ, ಅಖಂಡತೆಯ ದೇವಿ ಎಂದೇ ಪರಿಕಲ್ಪಿಸಿದ್ದರು. ಅಂತಹದ್ದೊಂದು ಪವಿತ್ರ ರಾಷ್ಟೀಯತೆಯನ್ನು ಉದ್ದೀಪಿಸುವ ಅಮೂರ್ತ ಕಲ್ಪನೆಯ ಭಾವ ಅವರಿಗಿತ್ತು. ಆದರೆ ಇಂದು ನಮ್ಮ ವಿಚಾರವಾದಿಗಳಿಗೆ ರಾಷ್ಟ್ರೀಯತೆ ಎಂದರೆ ಮೈಮೇಲೆ ಮುಳ್ಳು ಎದ್ದಂತಾಗುತ್ತದೆ. ಅವರು ನಾಡು, ದೇಶ ಯಾವುದನ್ನೂ ದೇವಿ ರೂಪದಲ್ಲಿ ನೋಡಲು ಸಿದ್ಧರಿಲ್ಲ, ಕುವೆಂಪು ಹೆಸರು ಹೇಳಿಕೊಂಡೇ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗಳನ್ನು ಗಿಟ್ಟಿಸಿದ ಎಷ್ಟೋ ಜನ ಕನ್ನಡಾಂಬೆ ಎಂದರೆ ಮುಖ ಮುರಿಯುತ್ತಾರೆ. ಕನ್ನಡಮ್ಮನ ದೇವಾಲಯಕ್ಕೆ ಕಾಲಿಡುವುದೇ ತಮ್ಮ ವಿಚಾರವಂತಿಕೆಯ ಸೋಲು ಎಂದುಕೊಂಡವರಿಗೆ ಕುವೆಂಪು ವಿಚಾರಗಳ ಬಗ್ಗೆ ಯಾವ ಗೌರವವಿದ್ದೀತು?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments