ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 23, 2019

ಮಾಧ್ಯಮಗಳೇ‌ ಸಾಕು ನಿಲ್ಲಿಸಿ‌ ನಿಮ್ಮ‌ ಬೂಟಾಟಿಕೆಯ..

‍ನಿಲುಮೆ ಮೂಲಕ

– ವರುಣ್ ಕುಮಾರ್

vol-21-no-20ಕಾರ್ಯಾಂಗ,‌ ನ್ಯಾಯಾಂಗ, ಶಾಸಕಾಂಗ ಇವು ಪ್ರಜಾಪ್ರಭುತ್ವ‌ ವ್ಯವಸ್ಥೆಯ ಬಹುಮುಖ್ಯ ಆಧಾರ ಸ್ತಂಭಗಳು. ಇವುಗಳಲ್ಲಿ ಯಾವುದಾದರೊಂದು ಅಂಗ ನಿಷ್ಕ್ರೀಯಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೀಡಾಗುವ ಸಾಧ್ಯತೆಗಳಿರುತ್ತದೆ. ಇಂತಹ ನಿಷ್ಕ್ರೀಯ ವ್ಯವಸ್ಥೆಗಳಿಗೆ ಚುರುಕು ಮುಟ್ಟಿಸಲು, ನಿದ್ದೆಯಲ್ಲಿರುವ ಅಧಿಕಾರಿಗಳನ್ನು ಎಬ್ಬಿಸಲು ಜನತೆ ಹಾಗೂ ಆಡಳಿತ ವ್ಯವಸ್ಥೆಯ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಲು ಸುದ್ದಿ ಮಾದ್ಯಮಗಳ ಪಾತ್ರ ಬಹುಮುಖ್ಯವಾದುದು‌. ಅದಕ್ಕಾಗಿ ಮಾದ್ಯಮಕ್ಕೆ ೪ ನೇ ಆಧಾರಸ್ತಂಭವೆಂಬ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ.

ಈ ಸ್ಥಾನವನ್ನು ಮಾದ್ಯಮ ರಂಗದವರು ಕಾಪಾಡಿಕೊಂಡಿದ್ದಾರೆಯೇ?, ಇವರ ಕಾರ್ಯಶೈಲಿ, ನಿರ್ವಹಣೆ ಹಾಗೂ ಅವರ ನಡವಳಿಕೆಗಳು ಇದರ ಬಗ್ಗೆ ಸಣ್ಣ ವಿಶ್ಲೇಷಣೆಯನ್ನು ನಡೆಸೋಣ.

ಕೆಲ ದಶಕಗಳ ಹಿಂದೆ ಹೋದರೆ ಸುದ್ದಿ ವಾಹಿನಿಗಳ‌ ಆರ್ಭಟ ಇಷ್ಟೊಂದಿರಲಿಲ್ಲ. ಆಯಾ ದಿನಗಳಲ್ಲಿ ನಡೆದಂತಹ ಸುದ್ದಿಗಳನ್ನು‌ ಕೇವಲ ೨೦ ಅಥವಾ ೩೦ ನಿಮಿಷಗಳಲ್ಲಿ ಎಲ್ಲ ಪ್ರಮುಖ ವಾರ್ತೆಗಳನ್ನು ಪ್ರಸಾರ ಮಾಡುತ್ತಿದ್ದವು. ಆದರೆ ಯಾವಾಗ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಭಾರತ ಸಾಧಿಸಿದಾಗ ಎಲ್ಲ ವಿಭಾಗಗಳಲ್ಲಿ ಮಹತ್ತರ ಬದಲಾವಣೆಗಳು ಕಾಣಲಾರಂಭಿಸಿದರು. ಒಂದೆರಡು ವಾಹಿನಿಗಳಿದ್ದಲ್ಲಿ ನೂರಾರು ವಾಹಿನಿಗಳು ಟಿ.ವಿ.ಪರದೆಯಲ್ಲಿ ಕಾಣತೊಡಗಿಸಿದವು. ಅದರಲ್ಲೂ ಮುಖ್ಯವಾಗಿ ೨೪*೭ ಘಂಟೆ ಸುದ್ದಿಗಳನ್ನು ಬಿತ್ತರಿಸುವ ವಾಹಿನಿಗಳೆಂದರೆ ಅದೊಂದು ಪ್ರತಿಷ್ಠೆಯ ವಿಷಯವೇ ಆಗಿತ್ತು. ಇಲ್ಲಿಂದ ಸುದ್ದಿಗಳನ್ನು ಕೊಡುವ ವ್ಯಾಖ್ಯೆಯೇ ಬದಲಾಗತೊಡಗಿತು, ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯೂಸ್ ಈ ರೀತಿಯಾಗಿ ಪ್ರತಿ‌ ಕ್ಷಣದಲ್ಲೂ ಸುದ್ದಿಯನ್ನು ಬಿತ್ತರಿಸುವ ರೀತಿಯಲ್ಲಿ ವಾಹಿನಿಗಳು ಬಂದುಬಿಟ್ಟವು. ಆದರೆ ಯಾವಾಗ ತಮ್ಮ ಲಾಭಕ್ಕೋಸ್ಕರ, ವಾಣಿಜ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹಿನಿಗಳು ಕೆಲಸ ಮಾಡತೊಡಗಿದಾಗ ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಅಲುಗಾಡುವ ಪರಿಸ್ಥಿತಿಗೆ ಬರತೊಡಗಿತು.

ನಿಮಗೆಲ್ಲಾ ನೆನಪಿರಬಹುದು, ಸುಮಾರು ವರ್ಷಗಳ ಹಿಂದೆ ನಮ್ಮ ಕರ್ನಾಟಕದಲ್ಲಿ ಒಬ್ಬ ಪುಟ್ಟ ಬಾಲಕ ಕೊಳವೆ ಬಾವಿಗೆ ಬಿದ್ದು ಸಿಲುಕಿಕೊಂಡಿದ್ದ ಸುದ್ದಿಯು ಬಹುಬೇಗನೆ ಎಲ್ಲಾ ವಾಹಿನಿಗಳು ಪ್ರಸಾರ ಮಾಡತೊಡಗಿದವು. ಕ್ಷಣಕ್ಷಣದ ಮಾಹಿತಿಗಳನ್ನು ಕಾರ್ಯಚರಣೆಯ ಬೆಳವಣಿಗೆಗಳನ್ನು ನಿಖರವಾಗಿ ವಾಹಿನಿಗಳಲ್ಲಿ ನೇರಪ್ರಸಾರ ಮಾಡಿದರು. ಇವೆಲ್ಲ ಜನಸಾಮಾನ್ಯರಿಗೆ ಈ ಬಾಲಕನ ಬಗ್ಗೆ ಕನಿಕರ ಹುಟ್ಟುವ ಹಾಗೆ ವಾಹಿನಿಗಳು ಕಾರ್ಯಕ್ರಮಗಳನ್ನು ಮಾಡಲಾರಂಭಿಸಿದವು. ಬಾಲಕ‌ ಬದುಕಿ ಬರಲೆಂದು ಎಲ್ಲ ಕಡೆಗಳಿಂದಲೂ ಹಾರೈಸತೊಡಗಿದರು. ಆದರೆ ಬಾಲಕ ಮಾತ್ರ ಬದುಕಿ ಬರಲಿಲ್ಲ. ಆದರೆ ಇದರ ನಂತರ ಏನಾಯಿತು ಎನ್ನುವ ಕುತೂಹಲ ಯಾವ ವಾಹಿನಿಗಳಿಗೂ ಬರಲೇ ಇಲ್ಲ. ತೆರೆದ ಕೊಳವೆ ಬಾವಿಗಳಿಗೆ ಕಾರಣವನ್ನು ಹುಡುಕುವ ಪ್ರಯತ್ನ ಮಾಡಲೇ ಇಲ್ಲ, ಮೃತ ಕುಟುಂಬಕ್ಕೆ ಏನಾದರೂ ಪರಿಹಾರ ಲಭಿಸಿದೆಯೇ ಮಾಹಿತಿ ಇಲ್ಲ. ಇಷ್ಟೆಲ್ಲಾ ಸುದ್ದಿ ಮಾಡಿದ ನಂತರವೂ ಕೊಳವೆ ಬಾವಿಗಳಿಗೆ ಬೀಳುವ ಮಕ್ಕಳ ಸಂಖ್ಯೆಯಲ್ಲೇನೂ ಕಡಿಮೆಯಾಗಲಿಲ್ಲ. ಈ ಕಾರ್ಯಚಾರಣೆಗೆ ಆದಂತಹ ಖರ್ಚುವೆಚ್ಚಗಳ ಮಾಹಿತಿಯನ್ನು ಸರ್ಕಾರ ಕೊಡಲೇ ಇಲ್ಲ. ಒಟ್ಟಾರೆಯಾಗಿ ಮೂರ್ನಾಲ್ಕು ದಿನಗಳ ಕಾಲ ಸುದ್ದಿ ವಾಹಿನಿಗಳಿಗೆ ಮಾತ್ರ ಭರಪೂರ ಸುದ್ದಿಯೇ ಸಿಕ್ಕಿತ್ತು.

೨೦೦೮ ರ ಮುಂಬೈ ಮೇಲಿನ ಉಗ್ರರ ದಾಳಿಯನ್ನು ಯಾರು ಮರೆಯುತ್ತಾರೆ ಹೇಳಿ. ಆದರೆ ಸುದ್ದಿ ವಾಹಿನಿಗಳ ಆಟಾಟೋಪದಿಂದ ಹಲವಾರು ಸಾವು ನೋವುಗಳು ನಷ್ಟಗಳು ಸಂಭವಿಸಿತ್ತು. ಯಾಕೆಂದರೆ ಪೋಲೀಸರ N.S.G. ಕಾಮಾಂಡೋಗಳ ಕಾರ್ಯಚರಣೆಯ ಯೋಜನೆಗಳನ್ನು ಸಹ ನೇರಪ್ರಸಾರವಾಗಿ ಬಿತ್ತರಿಸುತ್ತಿದ್ದವು, ಅಲ್ಲದೆ ಭಾರತದಲ್ಲಿ ಸಿಗುವಂತಹ ಎಲ್ಲಾ ವಾಹಿನಿಗಳು ಪಾಕಿಸ್ತಾನದಲ್ಲೂ ನೇರಪ್ರಸಾರವಾಗುತ್ತಿದ್ದವು. ಇವುಗಳ ಎಲ್ಲಾ ಮಾಹಿತಿಗಳನ್ನು ಪಾಕಿಸ್ತಾನದಿಂದಲೇ ನೇರವಾಗಿ ಉಗ್ರರಿಗೆ ತಲುಪಿಸಿ ಪೋಲಿಸರ ಕಾರ್ಯಾಚರಣೆಗಳನ್ನು ವಿಫಲಗೊಳಿಸಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದರು. ಇವೆಲ್ಲವು ತದನಂತರದ ತನಿಖೆಗಳಲ್ಲಿ ಬಯಲಾದರೂ ಈ ಮಂದಬುದ್ದಿ ವಾಹಿನಿಗಳಿಗಂತೂ ಅರಿಯಲೇ ಇಲ್ಲ. ಕೊನೆಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ಕಾರ್ಯಚರಣೆಯಾಗಿರಲಿ ಅದರ ನೇರಪ್ರಸಾರಕ್ಕೆ ಸ್ವತಃ ಸರ್ಕಾರವೇ ಕಡಿವಾಣ ಹಾಕಬೇಕಾಗಿ ಬಂತು.

ಕೆಲ ತಿಂಗಳುಗಳ ಹಿಂದೆ ಕೇರಳ ರಾಜ್ಯವು ಪ್ರವಾಹಕ್ಕೆ ತುತ್ತಾಗಿ ಹಲವಾರು ಕಷ್ಟ ನಷ್ಟಗಳು ಸಂಭವಿಸಿ ರಾಜ್ಯದ ಪರಿಸ್ಥಿತಿಯು ಹದಗೆಟ್ಟಿತ್ತು. ಎಲ್ಲಾ ಕಡೆಗಳಿಂದಲೂ ಸಾಗಾರೋಪಾದಿಯಲ್ಲಿ ನೆರವುಗಳು ಬರಲಾರಂಭಿಸಿದವು. ಕೇಂದ್ರ ಸರ್ಕಾರವು ತತ್ ಕ್ಷಣದ ಪರಿಹಾರವಾಗಿ ಸುಮಾರು ೬೦೦ ಕೋಟಿ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡಿತು. ಪ್ರವಾಹದ ನಂತರ ಕೇರಳ ಮುಖ್ಯಮಂತ್ರಿ ಸುದ್ದಿಗೋಷ್ಠಿಯನ್ನು ಕರೆದು ಯು.ಎ.ಇ. ದೇಶಗಳಿಂದ ಸುಮಾರು ೭೦೦ ಕೋಟಿ ರೂ.ಗಳ ಪರಿಹಾರವನ್ನು ಕೇರಳಕ್ಕೆ ಬಿಡುಗಡೆ ಮಾಡುತ್ತಿದ್ದಾರೆಂದು ಘೋಷಿಸಿದಾಗ ಸುದ್ದಿ ವಾಹಿನಿಗಳು ಎಚ್ಚೆತ್ತುಕೊಂಡು ಬಿಟ್ಟವು. ಇದರ ಬಗ್ಗೆ ಚರ್ಚೆಯನ್ನು ಇಡಲಾರಂಭಿಸಿದವು, ಭಾರತಕ್ಕಿಂತ ವಿದೇಶಿಗರೇ ಎಷ್ಟೋ ವಾಸಿ ಎಂದು ಜರೆಯಲಾರಂಭಿಸಿದವು, ಎಲ್ಲಿಯವರೆಗೆ ಎಂದರೆ ಪರಿಹಾರ ಹಣ ಇಲ್ಲವೆಂದಾದರೆ ಭಿಕ್ಷೆಯನ್ನು ಬೇಡಿಯಾದರೂ ರಾಜ್ಯಕ್ಕೆ ಪರಿಹಾರವನ್ನು ಕೊಡಿಸಿ ಎಂದು ಸರ್ಕಾರಕ್ಕೆ ವಾಹಿನಿಗಳು ಉಪದೇಶವನ್ನು ಕೊಡಲಾರಂಭಿಸಿದವು. ಸರ್ಕಾರವನ್ನು ದೂರುವ ಭರದಲ್ಲಿ ಭಾರತದ ಮಾನ‌ಹರಾಜು ಹಾಕುತ್ತಿದ್ದೇವೆ ಎಂಬ ಸಣ್ಣ ಅರಿವು ಇರಲಾರದೇ ಹೋಯಿತು. ವಾಸ್ತವದಲ್ಲಿ ಕೇರಳಕ್ಕೆ ಭಾರತ ಸರ್ಕಾರವು ಎರಡು ವರ್ಷಗಳ‌ ಕಾಲ ಎಲ್ಲಾ ಉತ್ಪನ್ನಗಳಿಗೂ ತರಿಗೆ ವಿನಾಯಿತಿಯನ್ನು ಹಾಗೂ ಮೂಲಭೂತ ಸೌಕರ್ಯಕ್ಕೆ ಬೇಕಾದ ಎಲ್ಲಾ ಸಹಾಯಗಳನ್ನು ಮಾಡುತ್ತೇವೆಂದು ಭರವಸೆಯನ್ನು ನೀಡಿದ್ದವು. ಇವೆಲ್ಲವೂ ವಾಹಿನಿಗಳಿಗೆ ಕಾಣದಾಯಿತು. ಆದರೆ ಯಾವಾಗ ಸ್ವತಃ ಯು.ಎ.ಇ. ದೇಶಗಳ‌ ಒಕ್ಕೂಟವು ಅಂತಹ ಯಾವುದೇ ಸಹಾಯದ ಅಲೋಚನೆ ನಮ್ಮಲ್ಲಿಲ್ಲ ಎಂದಾಗ ಇಲ್ಲಿಯ ವಾಹಿನಿಗಳು ಮೌನಕ್ಕೆ ಶರಣಾದರು.

ಇತ್ತೀಚಿಗೆ ಕರ್ನಾಟಕದಲ್ಲಿ‌ ನಡೆಯುತ್ತಿರುವ ರಾಜಕೀಯ ಡೊಂಬರಾಟಗಳನ್ನು ಎಲ್ಲಾ ವಾಹಿನಿಗಳಲ್ಲಿ‌ ಸುಮಾರು‌ ತಿಂಗಳುಗಳಿಂದ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಸರ್ಕಾರ ಬೀಳುತ್ತೋ‌ ಇಲ್ಲವೋ, ಪ್ರತಿಪಕ್ಷ ಆಡಳಿತಕ್ಕೆ‌ ಬರುತ್ತಾ ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡೇ ಚರ್ಚೆಗಳನ್ನು ಅದೇ ರೀತಿ ವಿಶೇಷ ಕಾರ್ಯಕ್ರಮಗಳನ್ನು ಇಟ್ಟು ರಾಜ್ಯದಲ್ಲಿ ಇದಕ್ಕಿಂತ ದೊಡ್ಡ‌ ಸಮಸ್ಯೆಗಳೇ ಇಲ್ಲ‌ ಎನ್ನುವ ರೀತಿಯಲ್ಲಿ ಪ್ರಾಮುಖ್ಯತೆಯನ್ನು ಕೊಡುತ್ತಿರುವುದು ದುರ್ದೈವದ ಸಂಗತಿ.

ಇನ್ನು ಪತ್ರಿಕಾ ಮಾದ್ಯಮಗಳ ಕತೆ ಏನೂ ಭಿನ್ನವಾಗಿಲ್ಲ. ಮುಂಜಾನೆ ಎದ್ದು ಸುದ್ದಿಯನ್ನು ಓದೋಣವೆಂದರೆ ಪತ್ರಿಕೆ ತುಂಬೆಲ್ಲಾ ಜಾಹೀರಾತುಗಳು ಅವುಗಳ ಮಧ್ಯೆ ನಾವು ಸುದ್ದಿಗಳನ್ನು ಹುಡುಕಬೇಕಷ್ಟೆ. ಹಿಂದೆ I.A.S. K.A.S. ಪರೀಕ್ಷೆಗಳಿಗೆ ತೇರ್ಗಡೆ ಹೊಂದಬೇಕಾದರೆ ಪತ್ರಿಕೆಗಳನ್ನು ಓದಿ ಎಂಬ ಸಲಹೆಗಳನ್ನು‌ ನೀಡುತ್ತಿದ್ದರು, ಆದರೆ ಅದೇ ಸಲಹೆಗಳನ್ನು ತೆಗೆದುಕೊಂಡು ಓದಿದರೆ ಇದ್ದಂತಹ ಸಾಮಾನ್ಯ ಜ್ಞಾನವು ಹೋಗಿಬಿಡಬಹುದೆಂಬ ಆತಂಕ ಇದೆ.

ಸುದ್ದಿಗಳೆಂದರೆ ಕೇವಲ ಕೊಲೆ, ರಾಜಕೀಯ, ಸಿನೆಮಾ, ಕ್ರೀಡೆ ಇವುಗಳ ವೈಭವಿಕರಣದಲ್ಲಿ ನಮ್ಮ ಎಲ್ಲಾ ಮಾದ್ಯಮರಂಗದವರು ಇರುವುದು ನಾಚಿಕೆಗೇಡಿನ ಸಂಗತಿ.

ರೈತರ ಸಮಸ್ಯೆ ಎಂದರೆ ಕೇವಲ‌ ಸಾಲಮನ್ನಾ ಮಾತ್ರ ಎಂಬ ನಿರ್ಧಾರಕ್ಕೆ ತಾವೇ ಬಂದು ಒಂದೆರಡು ದಿನಗಳ‌ ಚರ್ಚೆಯನ್ನು ನಡೆಸುತ್ತಾರೆ. ಅದರ ಬದಲಿಗೆ ಕೃಷಿಯನ್ನೇ ಕಾಯಕವಾಗಿರಿಸಿಕೊಂಡು ಅದನ್ನೇ ಲಾಭದಾಯಕ ವೃತ್ತಿಯನ್ನಾಗಿ ಮಾಡಿಕೊಂಡ ಕೃಷಿಕರನ್ನು ಕರೆಸಿ ಒಂದೆರಡು ಗಂಟೆಗಳ ಕಾರ್ಯಕ್ರಮ, ಚರ್ಚೆ ಸಂವಾದವನ್ನು ಈ ಮಾಧ್ಯಮದವರಿಗೆ ಏರ್ಪಡಿಸಬಹುದಲ್ಲವೇ. ಯಾಕೆಂದರೆ ರೈತರಿಗೆ ಬೇಕಾಗಿರುವುದು ತಾನು ಬೆಳೆಯುವ ಬೆಳೆಗಳ ಬಗ್ಗೆ ಮಾಹಿತಿ ಹಾಗೂ ಇತರೆ ಕೃಷಿ ಮಾಹಿತಿಗಳು ಇದನ್ನು ನಿಖರವಾಗಿ ಮಾದ್ಯಮದವರು ನಿರ್ವಹಿಸಿದರೆ‌ ಎಷ್ಟೋ‌‌ ಕೃಷಿ ಕುಟುಂಬಗಳಿಗೆ ಸಹಾಯವಾಗಬಹುದು ನೀವೇ ಅಲೋಚಿಸಿ.

ಇನ್ನೊಂದೆಡೆ ಕನ್ನಡ ಮಾಧ್ಯಮ ಶಾಲೆಗಳ ಮುಚ್ಚಿ ಹೋಗುವ ಆತಂಕವನ್ನೇನೋ ಮಾದ್ಯಮದವರು ಹೊರಹಾಕುತ್ತಿದ್ದಾರೆ. ಆದರೆ ಅದಕ್ಕೆ ಪರಿಹಾರವೇನು ಎಂಬುದಾಗಿ ಇದುವರೆಗೆ ಯಾವುದೇ ಚರ್ಚೆಗಳನ್ನು ಯಾವುದೇ ವಾಹಿನಿಯವರು ಮಾಡಲೇ ಇಲ್ಲ. ಇದರ ಬದಲಾಗಿ ಎಲ್ಲಾ ವಾಹಿನಿಯವರು ಒಂದೇ ವೇದಿಕೆಯಲ್ಲಿ ಸಾಹಿತಿಗಳನ್ನು, ರಾಜಕೀಯ ವ್ಯಕ್ತಿಗಳನ್ನು ಉದ್ಯಮಿಗಳನ್ನು ಕರೆಸಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಒಂದು ನಿರ್ಧಾರವನ್ನು ತೆಗೆಯಲು ದಾರಿಯಾಗುವುದಿಲ್ಲವೇ‌.

ಆದರೆ ಇವರು ಮಾಡುವುದೇನು ಮುಂಜಾನೆಯಿಂದಲೇ ಶುರುವಾಗುವ ಚರ್ಚೆಗಳಿಗೆ ವಿಷಯದ ಬಗ್ಗೆ ಅರಿವೇ ಇಲ್ಲದ ವ್ಯಕ್ತಿಯನ್ನು ಕರೆಸುತ್ತಾರೆ, ಆತ ತನ್ನ ಮಾತನ್ನು ಮುಗಿಸುವ ಹೊತ್ತಿಗೆ ಪ್ರಶ್ನೆಗಳ ಸುರಿಮಳೆಗೈದು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಸಾಧಿಸಿದ್ದೇನೆಂಬ ಖುಷಿಯಲ್ಲಿ ಈ ವಾಹಿನಿಗಳ ಆಂಕರ್ ಗಳು ಇರುತ್ತಾರೆ. ಇಂತಹ ಚರ್ಚೆಗಳಿಂದ ನಮ್ಮ ಟಿ.ಆರ್.ಪಿ. ಗಿಟ್ಟಿಸಿಕೊಂಡು ನಾವೇ ಕರ್ನಾಟಕದ ನಂ.೧ ಎಂದು ತಮಗೆ ತಾವೇ ಬೆನ್ನು ತಟ್ಟಿಕೊಂಡು ಬೀಗುತ್ತಾರೆ. ತಮಾಷೆಯ ವಿಚಾರವೆಂದರೆ ಈ ರೀತಿಯಾಗಿ ಎಲ್ಲಾ ವಾಹಿನಿಗಳು ನಾವೇ ನಂ೧. ಎಂದು ಬೀಗುತ್ತಿರುತ್ತಾರೆ. ನಿಜವಾದ ನಂ.೧ ಯಾರೆಂದು ಈಗಲೂ ಯಕ್ಷ ಪ್ರಶ್ನೆಯೇ ಅಲ್ಲವೇ.

ಕೊನೆಯ ಮಾತು: ಅಬ್ದುಲ್‌ ಕಲಾಂರವರು ಒಂದು‌ ಸಂದರ್ಶನದಲ್ಲಿ ಹೇಳಿದ ಮಾತು.

ತಾನು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಇಸ್ರೇಲಿಗೆ ಭೇಟಿ ಕೊಡುವ ಹಿಂದಿನ‌‌ ದಿನ ಪಾಲೆಸ್ತೇನಿಯರಿಂದ ಉಗ್ರರ ದಾಳಿ ನಡೆದಿತ್ತು. ಈ ಸುದ್ದಿ ದಿನಪತ್ರಿಕೆಯಲ್ಲಿ ಪ್ರಮುಖ ಸುದ್ದಿಯಾಗಬಹುದೆಂದು ಅಂದುಕೊಂಡರಂತೆ. ಮಾರನೇ ದಿನ ಪತ್ರಿಕೆ ತೆಗೆದು ಈ ಸುದ್ದಿಯ ಬಗ್ಗೆ ತಡಕಾಡಲು ಪ್ರಾರಂಭಿಸಿದಾಗ ಎಲ್ಲೋ ಒಂದು‌ ಮೂಲೆಯಲ್ಲಿ ಇದರ ಬಗ್ಗೆ ವಿವರ ಲಭಿಸಿತು. ಆದರೆ ಅದೇ ಪತ್ರಿಕೆಯ ಮೊದಲ ಪುಟದಲ್ಲಿ ಇಸ್ರೇಲ್ ದೇಶದ ಬಂಜರು ಭೂಮಿಯಲ್ಲಿ ಹನಿ ನೀರಾವರಿ ಪದ್ದತಿಯಲ್ಲಿ ತನ್ನ ಕೃಷಿಯನ್ನು ಅಭಿವೃದ್ದಿ ಪಡಿಸಿದ ಒಬ್ಬ ಕೃಷಿಕನ‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅದರಲ್ಲಿ ಬಿತ್ತರಿಸಿದ್ದರಂತೆ. ನಮ್ಮಲ್ಲೂ ಉಗ್ರರ ದಾಳಿಗಳು ಆಗುತ್ತಿವೆ ಅದರ ಬಗ್ಗೆ ಚರ್ಚೆಗಳೂ ನಡೆಯುತ್ತವೆ, ವಿಪರ್ಯಾಸವೆಂದರೆ ಇಂತಹ ದಾಳಿಗಳಿಗೆ ಬೆಂಬಲ ನೀಡುವ ಕೆಲ ವ್ಯಕ್ತಿಗಳನ್ನು ಕೂರಿಸಿ ಚರ್ಚೆ ಮಾಡುತ್ತಾರಲ್ಲವೇ‌. ಅವರ ಬೆಂಬಲಕ್ಕೆ ನಿಂತೇ ಕೆಲ ಮಾಧ್ಯಮದವರು ಮಾತನಾಡುವುದಿಲ್ಲವೇ ಇದು ನೈತಿಕ ಅಧಃಪತನವಲ್ಲದೆ ಮತ್ತೇನು. ಇಂತಹ ಲಂಗುಲಗಾಮಿಲ್ಲದೆ ವರ್ತಿಸುವ ಮಾದ್ಯಮಗಳಿಗೆ ಮೂಗುದಾರ ಹಾಕುವ ಪ್ರಯತ್ನ ಖಂಡಿತವಾಗಬೇಕು, ಇದರ ಬಗ್ಗೆ ಆರೋಗ್ಯಕರ ಚರ್ಚೆಯಾಗಬೇಕಾದುದು ಅವಶ್ಯಕವಾಗಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments