ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 27, 2019

2

ಗುಡಿಯಿಂದ ಮನೆಕಾಯುವವನು ದೇವರಾದರೆ ಗಡಿಯಿಂದ ದೇಶ ಕಾಯುವವನು ..

‍ನಿಲುಮೆ ಮೂಲಕ

– ಸುಜಿತ್‌ ಕುಮಾರ್‌

hqdefaultಉರಿಯುವ ಬಿಸಿಲಾಗಲಿ ಅಥವಾ ಕೊರೆಯುವ ಚಳಿಯಾಗಲಿ, ಹಸಿವು ಕೂಗುತ್ತಿರಲಿ ಅಥವಾ ದುಃಖ ಮಡುಗಟ್ಟಿರಲಿ, ದೇಹ ಸಾಕೆನ್ನುತ್ತಿರಲಿ ಅಥವಾ ಭಯ ಮನೆಮಾಡಿರಲಿ, ಹಗಲಿರಲಿ, ಇರುಳಿರಲಿ, ಕೇವಲ ದೇಶ ದೇಶ ದೇಶವೆನುತ ಜೀವ ತೆತ್ತುವ ಆ ಹುಚ್ಚು ಪ್ರೇಮಿಗಳಿಗೆ ಅರ್ಥಾತ್ ನಮ್ಮ ಧೀರ ಸೈನಿಕರನ್ನು ಸ್ಮರಿಸುತ್ತಾ, ಗೌರವಿಸುತ್ತಾ ಹಾಗು ಶ್ರದ್ದಾಂಜಲಿಯನ್ನು ಅರ್ಪಿಸುತ್ತಾ… ಜೊತೆಗೆ ನೆನ್ನೆ ಇಡೀ ದೇಶಕ್ಕೆ ಸರ್ಪ್ರೈಸ್‌ ನೀಡಿ ಭಾರತದ ವಿರಾಟ್‌ ರೂಪವನ್ನು‌ ವಿಶ್ವಕ್ಕೆ ಪರಿಚಯಿಸಿದ ಸೈನಿಕರಿಗೆ ಮತ್ತು ಸದಾ ಕಾಲ ನಮ್ಮ ಸೈನಿಕರಿಗೆ ಹಿರಿಯಣ್ಣನಂತೆ ಜೊತೆ ನೀಡುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಸೆಲ್ಯೂಟ್..

ನಾನಿಂದು ಹೇಳಹೊರಟಿರುವುದು ಒಬ್ಬ ಪಾಪ್ಯುಲರ್ ಪತ್ತೇದಾರಿಯ ಬಗ್ಗೆ. ‘ದಿ ಬ್ಲಾಕ್ ಟೈಗರ್’ ಎಂಬ ಹುಲಿಯ ವರ್ಚಸ್ಸಿನ ಈತ ಭಾರತ ನೆಲದ ವೀರಪುತ್ರ. ಜೀವ ಹೋದರೂ ದೇಶದ ಮಾಹಿತಿಯನ್ನು ಬಿಡದ ಒಬ್ಬ true ಹೀರೋ. ತನ್ನ ಬದುಕಿನ ಅರ್ಧದಷ್ಟು ಕಾಲವನ್ನು ದೇಶ ಹಾಗು ದೇಶದ ನೆಲಕ್ಕೆ ಮುಡಿಪಾಗಿಟ್ಟ ಈತನ ಜೀವನದ ಕೊನೆಯ ದಿನಗಳು ದುಃಖಾಂತ್ಯ ಕಂಡದ್ದು ಮಾತ್ರ ವಿಪರ್ಯಾಸವೇ ಸರಿ.

ಮಕಾಡೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನದ ಪಾಕಿಸ್ತಾನ ಮೂರು ಮೂರುಬಾರಿ ಸೋತು ಸುಣ್ಣವಾದರೂ ನಾಲ್ಕನೇ ಬಾರಿಗೆ ಒಳನುಗ್ಗುವ ಕುತಂತ್ರವನ್ನು ರೂಪಿಸುತ್ತಿದ್ದ ಕಾಲವದು. ತೀವ್ರವಾದಿಗಳೆಂಬ ಆಂತರಿಕ ಭಯೋತ್ಪಾದಕರ ಬಲದಲ್ಲಿ ನಡೆಯುವ ದೇಶಗಳು ಮಾತ್ರ ಹೀಗೆ ತಿನ್ನಲು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜಗತ್ತನ್ನು ಗೆಲ್ಲುವ ದುಸ್ಸಾಹಸಕ್ಕೆ ಕೈಹಾಕುವುದು. ಮೆಷಿನ್ ಗನ್ನುಗಳನ್ನು ಹಿಡಿದಿರುವ ಮಂಗಗಳ ಗುಂಪು ಜಗತ್ತನ್ನು ಗೆಲ್ಲುವುದುಂಟೆ ಎನ್ನುತ್ತಾ ಸುಮ್ಮನಿರಲೂ ಇತ್ತಕಡೆ ಸಾದ್ಯವಿರಲಿಲ್ಲ. ಭಾರತ ಆ ಮಿಲಿಟರಿ ಕಮಂಗಿಗಳ ನಾಲ್ಕನೇ ಆಕ್ರಮಣಕ್ಕೂ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಸೋಲೋ ಗೆಲುವೋ, ಯುದ್ದವೆಂಬುದು ದೇಶವನ್ನು ಹಲವಾರು ವರ್ಷಗಳಿಗೆ ಹಿಂಬಡ್ತಿಯನ್ನು ನೀಡುವುದಂತೂ ಸುಳ್ಳಲ್ಲ. ಆದ ಕಾರಣ ಈ ಬಾರಿ ಸಾವು ನೋವುಗಳಿಲ್ಲದ ಸೈಲೆಂಟ್ ಯುದ್ಧವನ್ನು ಮಾಡಬೇಕಿದ್ದಿತು. ಕಾಲ ಮೀರುವ ಮೊದಲೇ ದೇಶಕ್ಕೆ ಅವರುಗಳ ಚಲನವಲನಗಳಲ್ಲದೆ, ತಂತ್ರ ಕುತಂತ್ರಗಳ ಬಗ್ಗೆಯೂ ತಿಳಿಯಬೇಕಿದ್ದಿತು. ಹಾಗಾಗಿ ನಮ್ಮವರಲ್ಲೊಬ್ಬ ಅವರ ಮನೆಯಲ್ಲಿದ್ದೆ ವಿಷಯಗಳನ್ನು ಸಂಗ್ರಹಿಸಬೇಕಿದ್ದಿತು. ಅವುಗಳನ್ನು ಅಲ್ಲಿಂದ ಇಲ್ಲಿಗೆ ಕಳುಹಿಸಬೇಕಿದ್ದಿತು. ಅರ್ತಾಥ್ County Needed a Smart & Powerful  Spy!

ಅದು ಅರವತ್ತನೇ ದಶಕದ ಕೊನೆಯ ವರ್ಷಗಳು. ರಾಜಸ್ತಾನದ ಗಂಗಾನಗರದಲ್ಲಿ ನೋಡಲು ಏಕ್ದಂ ಅಂದಿನ ಸೂಪರ್ಸ್ಟಾರ್ ವಿನೋದ್ ಖನ್ನಾನಂತೆ  ಕಾಣುತಿದ್ದ ಚಿಗುರುಮೀಸೆಯ ಯುವಕನೊಬ್ಬ ಥಿಯೇಟರ್ ನ ಸ್ಟೇಜಿನ ಮೇಲೆ ತನ್ನ ನಟನಾ ಚತುರತೆಯಿಂದ ಮಿಂಚುತ್ತಿರುತ್ತಾನೆ. ಬೆಳ್ಳನೆಯ ಆರಡಿ ಎತ್ತರದ ದೇಹಾಕಾಯ ಹೊರಗಡೆಯಾದರೆ ದೇಶ ಹಾಗು ದೇಶಕ್ಕಾಗಿ ಏನಾದರೊಂದು ಮಾಡಲೇಬೇಕೆಂಬ ಹಪಾಹಪಿ ಆತನ ಒಳಗಡೆ. ಹಾಗಾಗಿ ತಾನು ನಟಿಸುತ್ತಿದ್ದ ನಾಟಕಗಳಲ್ಲಿ ತನಗೆ ಅಂತಹದ್ದೇ ಯಾವುದಾದರೊಂದು ಪಾತ್ರವನ್ನು ಗಿಟ್ಟಿಸಿಕೊಂಡು ಅದಕ್ಕೆ ಜೀವ ತುಂಬುತ್ತಿದ್ದ ಆತ. ಅದು ನೋಡುಗರಲ್ಲಿ ನಾಟಕವೂ, ನಿಜ ಜೀವನವೋ ಎಂಬ ಭ್ರಮೆಯನ್ನು ಮೂಡಿಸುವಂತಿತ್ತು ಆತನ ನಟನೆ. ಹೆಸರು ರವೀಂದ್ರ ಕೌಶಿಕ್ ಉರ್ಫ್ ನಬಿ ಅಹ್ಮದ್ ಶಾಕಿರ್!

ಆ ದಿನ ಭಾರತದ ಏಜೆಂಟ್ ಒಂದರ ಪಾತ್ರವನ್ನು ನಟಿಸುತ್ತಿದ್ದ ಈತನ ನಟನೆಯನ್ನು ನೋಡಿ ಅಲ್ಲಿ ಬೆರಗಾಗದಿರುವವರೇ ಇರಲಿಲ್ಲ. ದೇಶದ ಮುಂದಿನ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳಿದ್ದ ಆತನ ನಟನೆಯನ್ನು ಅಂದು ನೋಡಲು ಬಂದಿದ್ದವರ ಗುಂಪಿನಲ್ಲಿ ಕೇವಲ ಪ್ರೇಕ್ಷಕರಷ್ಟೇ ಅಲ್ಲದೆ ಭಾರತ ದೇಶದ ಗುಪ್ತಚರ ಸಂಸ್ಥೆಯ ಅಧಿಕಾರಿಗಳೂ ಇದ್ದರು. ಅಧಿಕಾರಿಗಳೇನು ನಾಟಕ ನೋಡಬಾರದೇ ಸ್ವಾಮಿ, ಅದರಲ್ಲೇನಿದೆ ಅಂಥಹದ್ದು ಎನ್ನಬಹುದು. ಆದರೆ ಅಂದು ಅಲ್ಲಿಗೆ ಬಂದಿದ್ದ ಅಧಿಕಾರಿಗಳು ನಾಟಕವನ್ನು ಅದೆಷ್ಟು ಆಸ್ವಾದಿಸಿದರೋ ಗೊತ್ತಿಲ್ಲ ಆದರೆ ತಾವು ವರುಷಗಳಿಂದ ಅರಸುತ್ತಿದ್ದ ವ್ಯಕ್ತಿಯೊಬ್ಬನನ್ನು ಆ ಯಂಗ್ ಸೂಪರ್ ಸ್ಟಾರ್ನಲ್ಲಿ ಅವರು ಕಂಡರು! ಕೂಡಲೇ ಆತನನ್ನು ಭೇಟಿಯಾಗಿ ಆತ ದೇಶದ ಹಿತರಕ್ಷಣೆಗೆ, ದೇಶದ ಜನರ ಒಳಿತಿಗೆ ಇಲಾಖೆಯನ್ನು ಸೇರಬೇಕೆಂಬ ಜಾಬ್ ಆಫರನ್ನೂ ಕೊಟ್ಟರು. ಅಲ್ಲದೆ ಪಕ್ಕದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದ ಸೀಕ್ರೆಟ್ ಇನ್ಫಾರ್ಮಶನ್ ಗಳನ್ನು ಇಲ್ಲಿಗೆ ರವಾನಿಸುವುದು ಎಂದರು. ಬೇರೆಯವರಾಗಿದ್ದರೆ ಬಹುಷಃ ಕಡ್ಡಿ ಮುರಿದಂತೆ ಇಲ್ಲವೆನ್ನುತ್ತಿದ್ದರೋ ಅಥವಾ ಯೋಚಿಸಲು ಸಮಯಾವಕಾಶ ಕೇಳುತ್ತಿದ್ದರೊ ಏನೋ ಆದರೆ ಬಿಸಿರಕ್ತದ ದೇಶಭಕ್ತ ರವೀಂದ್ರ ಕೌಶಿಕ್ ನಿಂತ ಜಾಗದಲ್ಲೇ ಆ ಕಾರ್ಯಕ್ಕೆ ಸಮ್ಮತಿಸಿಯೇ ಬಿಟ್ಟ!

ಮುಂದಿನ್ನೇನು, ಮನೆಯಲ್ಲಿ ಇದು ದೇಶದ ಕೆಲಸ, ಸರ್ಕಾರಿ ಕೆಲಸವೆಂದಷ್ಟೇ ಹೇಳಿ ತರಬೇತಿಯಲ್ಲಿ ತೊಡಗೇಬಿಟ್ಟ. ಆ ಯಂಗ್ ವಿನೋದ್ ಖನ್ನಾ. ಅದು ಬರೋಬ್ಬರಿ ಎರಡು ವರ್ಷಗಳ ತರೆಬೇತಿ. ಪಾಕಿಗಳ ಮದ್ಯೆ ಪಾಕಿಯೊಬ್ಬನಾಗುವ ಪ್ರಕ್ರಿಯೆ. ಉರ್ದು, ಪಂಜಾಬಿ ಭಾಷೆಗಳ ತಿಳಿವಳಿಕೆ ಹಾಗು ಉಚ್ಚಾರಣೆಗಳ ಜೊತೆಗೆ ಒಬ್ಬ ಅತ್ಯುನ್ನತ ಸೈನಿಕನನ್ನೂ ಅಲ್ಲಿ ನಿರ್ಮಿಸಲಾಗುತ್ತಿತ್ತು. ಯಾವುದೇ ಸಮಯದಲ್ಲಿ ಅದೆಂಥಹ ಕ್ಲಿಷ್ಟಕರ ಸನ್ನಿವೇಶಗಳೂ ಎದುರಾದರೂ ಧೈರ್ಯವಾಗಿ ಎದುರಿಸುವ ಯೋಧನಾಗಿ ರವೀಂದ್ರ ಕೌಶಿಕ್ ಅಂದು ಮಾರ್ಪಾಡಾಗಿದ್ದ. 1975 ರ ಮುಂಜಾವಿನ ಒಂದು ದಿನ ಮನೆಯನ್ನು ಬಿಟ್ಟ ಕೌಶಿಕ್ ದೇಶಕ್ಕಾಗಿ ತನ್ನ ಸೇವೆಯನ್ನು ಆರಂಭಿಸಿಯೇ ಬಿಟ್ಟ. ಅಬುಧಾಬಿ, ದುಬೈ ಮಾರ್ಗದ ಮೂಲಕ ಪಾಕಿಸ್ತಾನವನ್ನು ತಲುಪಿದ ಈತ ಮೊದಲು ಮಾಡಿದ ಕೆಲಸ ಕರಾಚಿ ಯೂನಿವರ್ಸಿಟಿಯಲ್ಲಿ ಅಡ್ಮಿಶನ್. ಆಗ ಆತನ ಹೆಸರು ನಬಿ ಅಹ್ಮದ್ ಶಾಕಿರ್. ಅಲ್ಲಿ LLB ಯನ್ನು ಓದಲು ಶುರುಮಾಡಿದ ಈತನ ಗುರಿ ಪಾಕಿಸ್ತಾನದ ಸೈನ್ಯವನ್ನು ಸೇರುವುದು ಹಾಗು ಕ್ರಮೇಣವಾಗಿ ಮುಂಬಡ್ತಿಯನ್ನು ಪಡೆಯುವುದು. ಅಂತೆಯೇ ಡಿಗ್ರಿಯನ್ನು ಪೂರ್ಣಗೊಳಿಸಿ ಆಡಿಟರ್ ಆಗಿ ಪಾಕಿಸ್ತಾನ ಆರ್ಮಿಯನ್ನು ಸೇರಿದ ಕೌಶಿಕ್ ತನ್ನ ಚತುರತೆಯನ್ನು ನಮ್ಮಯ ಅಧಿಕಾರಿಗಳಿಗೆ ತೋರಿಸಿಬಿಟ್ಟ. ದೇಶಕ್ಕೆ ಬೇಕಾಗಿದ್ದ ಹಲವಾರು ಉಪಯುಕ್ತ ಮಾಹಿತಿಗಳು ಅಂದು ಒಂದೊಂದಾಗಿಯೇ ನಮ್ಮವರ ಕೈ ಸೇರತೊಡಗಿದವು. ಅಲ್ಲದೆ ಆತ ತನ್ನ ಈ ಕಾರ್ಯದಲ್ಲಿ ಅದೇಷ್ಟು ನೈಪುಣ್ಯನಾಗಿದ್ದನೆಂದರೆ ಕುತಂತ್ರಿ ಪಾಕ್ ಸೈನ್ಯದ ಅಧಿಕಾರಿಗಳಿಂದಲೇ ಶಹಬಾಸ್ಗಿರಿಯನ್ನು ಪಡೆಯುತ್ತಾ ಮುಂಬಡ್ತಿಯನು ಪಡೆದು ಮುಂದೊಂದು ದಿನಪಾಕಿಸ್ತಾನ ಆರ್ಮಿಯ ಮೇಜರ್ನ ಹುದ್ದೆಗೂ ಏರಿದ ಎಂದರೆ ನಾವು ನಂಬಲೇ ಬೇಕು. ಆತನ ಆ ಸಾಹಸದ ಕೆಲಸಕ್ಕೆ ಮೆಚ್ಚಿ ನಮ್ಮವರು ‘ಬ್ಲಾಕ್ ಟೈಗರ್’ ಎಂದು ನಾಮಕರಣ ಮಾಡಿರುವುದೂ ಉಂಟು.

ಏತನ್ಮದ್ಯೆ ತನ್ನ ಸಹೋದ್ಯೋಗಿಯ ಮಗಳೊಬ್ಬಳನ್ನು ಮದುವೆಯಾದ ಟೈಗರ್ ತನ್ನ ಸೂಕ್ಷ್ಮ ಕಾರ್ಯಾಚರಣೆಯನ್ನು ಮುಂದುವರೆಸಿಯೇ ಇದ್ದ. ಇದು ಆತನ ಪ್ಲಾನಿನ ಒಂದು ಭಾಗವೋ ಅಥವಾ ಆಕಸ್ಮಿಕವಾಗಿ ಜರುಗಿದ ಸಹಜ ಪ್ರೀತಿಯೋ ಗೊತ್ತಿಲ್ಲ. ಆದರೆ ಈ ಮನುಷ್ಯ ತನ್ನ ಹೆಂಡತಿ ಹಾಗು ನಂತರ ಜನಿಸಿದ ಮಗುವಿಗೂ ತನ್ನ ನಿಜ ಕಾರ್ಯದ ಬಗ್ಗೆ ತಿಳಿಸಲಿಲ್ಲ. ಅಲ್ಲದೆ ಇತ್ತಕಡೆ ಭಾರತದಲ್ಲಿ ಮನೆಯವರೊಟ್ಟಿಗೆ ನಿರಂತರ ಪತ್ರ ವ್ಯವಹಾರವನ್ನು ಹೊಂದಿದ್ದ ಆತ ಒಂದೆರೆಡು ಬಾರಿ ಮನೆಗೆ ಬಂದು ಹೋಗಿರುವುದೂ ಉಂಟು. ಹೀಗೆ ಬಂದಾಗಲೆಲ್ಲ ಮತ್ತದೇ ದೇಶದ ಕೆಲಸ, ಸರ್ಕಾರೀ ವೃತ್ತಿ ಎಂದಷ್ಟೇ ಹೇಳಿ ಒಬ್ಬ ಪಕ್ಕಾ ದೇಶಭಕ್ತ ಸೇವಕನಿಗೆ ಇರಬೇಕಾದ ಪ್ರೌಢಿಮೆಯನ್ನು ಮೆರೆದಿದ್ದ. ಅಲ್ಲದೆ ತಾನು ಪಕ್ಕದ ದೇಶದಲ್ಲಿ ಒಬ್ಬಾಕೆಯನ್ನು ಮದುವೆಯಾಗಿರುವಾದಾಗಲಿ ಹಾಗು ತನಗೊಬ್ಬ ಮಗನಿರುವ ಬಗ್ಗೆಯೂ ಆತ ಮೌನ ಮುರಿಯುವುದಿಲ್ಲ. ಹೀಗೆ ಬರೋಬ್ಬರಿ ಎಂಟು ವರ್ಷಗಳ ಕಾಲ ರಹಸ್ಯವಾಗಿ ನಮಗಾಗಿ ಶ್ರಮಿಸಿದ ಕೌಶಿಕ್ ಬಹುಷಃ ದೇಶದ ಇತಿಹಾಸದಲ್ಲಿಯೇ ತಾಯ್ನಾಡಿಗೆ ಬೇರ್ಯಾರೂ ಮಾಡದ ಪರಾಕ್ರಮವನ್ನು ಮಾಡಿರುವುದಂತೂ ಸುಳ್ಳಲ್ಲ.

ಅದು 1983ರ ಸೆಪ್ಟೆಂಬರ್ ನ ಸಮಯ. ನಮ್ಮಯ ಗುಪ್ತಚರ ಅಧಿಕಾರಿಗಳು ಇನಾಯತ್ ಎಂಬ ಏಜೆಂಟ್ ಒಬ್ಬನನ್ನು ಕೌಶಿಕ್ ನನ್ನು ಕಾಣಲು ಪಾಕಿಸ್ತಾನದ ಗಡಿಯನ್ನು ದಾಟಿಸಿದರು. ಆದರೆ ವಿಧಿಯಾಟವೋ ಏನೋ ಆ ಇನಾಯತ್ ಅಂದು ಪಾಕಿಸ್ತಾನಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ. ಅಷ್ಟೇ . ಮುಂದೆ ನೆಡೆದ ಘಟನೆಗಳೆಲ್ಲ ಕೌಶಿಕ್ ನ ಜೀವನದ ಕಾರಾಳ ಕಡೆಯ ಪುಟಗಳನ್ನು ತೆರೆಯತೊಡಗಿದವು. ಪಾಕಿಗಳ ಚಿತ್ರಹಿಂಸೆಯನ್ನು ತಾಳಲಾರದೆ ಇನಾಯತ್ ಅಲ್ಲಿಯವರೆಗೂ ಗೌಪ್ಯವಾಗಿದ್ದ ವಿಷಯವನ್ನು ಕೊನೆಗೆ ಹೇಳಿಯೇ ಬಿಟ್ಟ. ಕೌಶಿಕ್ ಉರ್ಫ್ ನಬಿ ಅಹ್ಮದ್ ಭಾರತದಿಂದ ಬಂದು ಪಾಕಿಸ್ತಾನವನ್ನು ಪ್ರವೇಶಿಸಿ ಸಾಲು ಸಾಲು ಇನ್ಫಾರ್ಮಶನ್ ಗಳನ್ನು ರವಾನಿಸುತ್ತಿದ್ದ ಬಗೆಯೆಲ್ಲವನ್ನೂ ಒಂದಿಷ್ಟು ಬಿಡದೆ ಆತ ತೆರೆದಿಟ್ಟ. ಆತ ಹೇಳಿ ಸುಮ್ಮನಾಗುವ ಮೊದಲೇ ಇತ್ತಕಡೆ ಕೌಶಿಕ್ ನ ಗಟ್ಟಿ ಕೈಗಳ ಮೇಲೆ ಕೋಡಿಗಳು ಬಿದ್ದುಬಿಟ್ಟಿದ್ದವು.

ಭಾರತ ಹಾಗು ಭಾರತೀಯರು ಎಂದರೆ ನಿಂತ ನೆರಳಿಗೆ ಆಗದ ಪಾಕಿಸ್ತಾನ, ಅಲ್ಲಿಯ ಒಬ್ಬ ನಮ್ಮಲಿಗೆ ಬಂದು ನಮಗೇ ಚಳ್ಳೆಹಣ್ಣು ತಿನ್ನಿಸಿದನೆಂದರೆ ಸುಮ್ಮನಿರಬೇಕೇ. ಬಗೆ ಬಗೆಯ ಚಿತ್ರ ಹಿಂಸೆಯನ್ನು ನೀಡಿಯೂ ಕೊನೆಗೆ 1985 ರಲ್ಲಿ ಆತನಿಗೆ ಮರಣದಂಡನೆಯನ್ನು ನೀಡಲಾಯಿತು. ಆದರೆ ಮುಂದೆ ಅದನ್ನು ಕೊಂಚ ಸಡಿಲಿಸಿ ಜೀವಾವಧಿ ಶಿಕ್ಷೆಯೆಂದು ತಿದ್ದಲಾಯಿತಾದರೂ ಮುಂದೆ ಆತ ಅನುಭವಿಸದ ಯಾತನೆಯನ್ನು ನೋಡಿದರೆ ಅಂದೇ ಆತನಿಗೆ ಸಾವನ್ನು ಕರುಣಿಸಿದರೆ ಚೆನ್ನಾಗಿರುತ್ತಿತ್ತೇನೋ ಎಂದೆನಿಸದಿರದು!

ಇತ್ತ ಕಡೆ ಭಾರತ ಸರ್ಕಾರಕ್ಕೂ ಒಂತರ ಬಿಸಿತುಪ್ಪವನ್ನು ಗಂಟಲಿಗಿಟ್ಟ ಸಂಧರ್ಭ. ಸುದ್ದಿ ಅದಾಗಲೇ ಅಂತರಾಷ್ಟ್ರೀಯ ವೇದಿಕೆಯನ್ನು ತಲುಪಿದ ಕಾರಣ ಬಹಿರಂಗವಾಗಿ ಬೇರೊಂದು ದೇಶದ ಮೇಲೆ ಗೂಢಚಾರಿಕೆಯನ್ನು ನಡೆಸಿದೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವುದು ಆಗಿನ ಕಾಲಕ್ಕೆ ಸುತರಾಂ ಸಹಿಸಿಕೊಳ್ಳದ ವಿಷಯವಾಗಿದ್ದಿತು. ಅಲ್ಲದೆ ಗೂಡಾಚಾರಿ ಗುಂಪಿನಲ್ಲಿ ಹೀಗೆ ವ್ಯಕ್ತಿಯೊಬ್ಬ ಕೆಲಸದ ನಿಮಿತ್ತಾ ಬೇರೊಂದು ದೇಶದಲ್ಲಿ ಸಿಕ್ಕಿಬಿದ್ದರೆ ಖುದ್ದು ಕಳಿಸಿದ ದೇಶವೇ ನಿರಾಕರಿಸುತ್ತದೆ ಎಂಬ ನಿಯಮವಿದೆಯಂತೆ. ಈ ನಿಯಮವೇನು ನಮ್ಮ ಟೈಗರ್ ಗೆ ತಿಳಿದಿರಲಿಲ್ಲವೆಂದೆನಲ್ಲ. ಆದರೂ ಸಹ ಆ ವೀರಯೋಧ ದೇಶದ ರಕ್ಷಣೆಗೆ ತನ್ನ ಜೀವದ ಹಂಗುಬಿಟ್ಟು ಹೋಗಿದ್ದ. ವರ್ಷಗಳ ಕಾಲ ತಾನು, ತನ್ನ ಹೆಸರು, ತಮ್ಮವರು, ನೆಲ, ದೇಶವನ್ನಷ್ಟೇ ಅಲ್ಲದೆ ತನ್ನ ಧರ್ಮವನ್ನೂ ಬಿಟ್ಟು ದೇಶಕ್ಕಾಗಿ ಶ್ರಮಿಸಿದ. ಅಂತಹ ವೀರಪುರುಷನನ್ನು ಅಂದು ಕೈಹಿಡಿದು ಮೇಲೆತ್ತುವರಿರಲಿಲ್ಲ. 1985 ರಿಂದ ಶುರುವಾದ ಆತನ ನರಕಹಿಂಸೆ ಮುಂದಿನ ಒಂದೂವರೆ ದಶಕಗಳವರೆಗೂ ನೆಡೆಯಿತು. ದಿನಕ್ಕೆ ಒಪ್ಪೊತ್ತು ಊಟ. ಆ ಊಟದ ತುತ್ತು ಗಂಟಲೊಳಗೆ ಇಳಿಯುವ ಮೊದಲೇ ಮತ್ತೊಬ್ಬ ಅಧಿಕಾರಿ ತನ್ನ ಲಾಠಿಯನ್ನು ಹಿಡಿದು ಅವನ ಮುಂದೆ ಹಾಜರು. ಹೀಗೆ ಆಹಾರ, ನಿದ್ರೆ, ಗಾಳಿ, ಬೆಳಕು ಕಾಣದೆ ದಿನದಿಂದ ದಿನಕ್ಕೆ ಕೌಶಿಕ್ ಕುಂದತೊಡಗಿದ. ಕಲ್ಲುಗುಂಡಿನಂತಿದ್ದ ವ್ಯಕ್ತಿ ಮರದ ಚಕ್ಕೆಯಂತೆ ಮಾರ್ಪಾಡಾದ.

ಆಗಲೂ ಸಹ ಹೇಗೋ ಜೈಲಿನ ಆಧಿಕಾರಿಗಳ ಕಣ್ತಪ್ಪಿಸಿ ಮನೆಗೆ ಕಾಗದವನ್ನು ಬರೆಯುತ್ತಿದ್ದ. ತನ್ನ ನೋವು ಸಂಕಟವನ್ನು ತೋಡಿಕೊಳ್ಳುತ್ತಿದ್ದ. ಅಲ್ಲಿಂದ ಯಾವುದೇ ಪ್ರತ್ಯುತ್ತರ ಬಾರದು ಎಂದು ತಿಳಿದ್ದಿದ್ದರೂ ಪತ್ರವನ್ನು ಬರೆಯುವುದ ನಿಲ್ಲಿಸಿರಲಿಲ್ಲ. ‘ನಾನಿಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇನೆ, ನನಗೆ ಕಡೆ ಪಕ್ಷ ಒಂದಿಷ್ಟು ಔಷಧಿಗಳನ್ನಾದರೂ ತಲುಪಿಸುವ ವ್ಯವಸ್ಥೆಯನ್ನು ಮಾಡಿರಿ’ ಎಂದು ಅಂಗಲಾಚಿಕೊಂಡು ಕೆಲವೊಮ್ಮೆ ಬರೆಯುತ್ತಿದ್ದ. ಒಂಬತ್ತು ತಿಂಗಳು ಹೊತ್ತು, ಹೆತ್ತು, ಎದೆಹಾಲ ಕುಡಿಸಿ ಮುದ್ದಾಗಿ ಬೆಳೆಸಿದ ಮಗ ಇಂದು ಜೈಲಿನಲ್ಲಿ ಊಟ ತಿಂಡಿಯಿಲ್ಲದೆ ಖಾಯಿಲೆಯಿಂದ ನರಳುತ್ತಿದ್ದಾನೆ ಎಂದರೆ ಆ ತಾಯಿಗೆ ಅದೆಂತಹ ನೋವು ಸಂಕಟವಾಗಿರಬಹುದು ಯೋಚಿಸಿ. ವರ್ಷಗಳ ಕಾಲ ಆತ್ತು ಅತ್ತು ಕೊನೆಗೆ ಆಕೆಯ ಕಣ್ಣೀರೆ ಹಿಂಗಿ ಹೋದವೇನೋ? ಆದರೆ ನಮ್ಮಲ್ಲಿ ? ಕೆಲ ವರ್ಷಗಳ ಹಿಂದಿನವರೆಗೂ ಅತ್ತಕಡೆಯಿಂದ ಪಿಕ್ ನಿಕ್ ಗೆ ಬಂದು ಮೋಜು ಮಸ್ತಿ ಮಾಡುವಂತೆ ಮುಂಬೈನ ಗಲ್ಲಿ ಗಲ್ಲಿಗಲ್ಲಿ ನರಮೇಧವನ್ನೇ ನೆಡಸಿ ಅಟ್ಟಹಾಸವನ್ನು ಮೆರೆದಿದ್ದ ಪಾಪಿಗಳಿಗೆ ವರ್ಷಗಳ ಕಾಲ ರಾಜಾತಿಥ್ಯ ಸಿಗುತ್ತಿತ್ತು. ಆಗ ಅಂತವರಿಗೆ ನೀಡುವ ಕೋಟಿ ಕೋಟಿ ಮೊತ್ತದ ಭದ್ರತೆಗಳೇನು ? ಅವರ ಪರವಾಗಿ ವಾದಿಸುವ ಮೂರು ಬಿಟ್ಟ ವಕೀಲರ ಗುಂಪೆನು ? ನಾಚಿಕೆಯೇ ಆಗುತಿತ್ತು ನಮ್ಮ ಮೇಲೆ ನಮಗೆ!

ಅದೊಂದು ದಿನ ಮಗನ ಪತ್ರವೊಂದು ಮನೆಯವರ ಕೈ ಸೇರಿತು. ಅದನ್ನು ತೆರೆದು ಓದಿದರೆ ಅದರಲ್ಲಿ ಬರೆದಿದ್ದ ಮಾತುಗಳು ಮಾತ್ರ ಎಂತವರ ಮನವನ್ನು ಚುಚ್ಚುವುದಂತೂ ಸುಳ್ಳಲ್ಲ. ‘ನಾನು ಭಾರತದವನಾದ ಮಾತ್ರಕ್ಕೆ ನನ್ನನು ಬಿಡಿಸಲು ಸಾಧ್ಯವಾಗುತ್ತಿಲ್ಲ. ಅದೇ ನಾನೊಬ್ಬ ಅಮೇರಿಕದವನಾಗಿದ್ದರೆ ಮೂರೇ ಮೂರು ದಿನದಲ್ಲಿ ಹೊರಬರುತ್ತಿದ್ದನೇನೋ ಏನೋ?!’ ಎಂದು ಆತ ಬರೆದಿದ್ದ. ಇದಾದ ಕೆಲವೇ ದಿನಗಳಲ್ಲಿ ಭಾರತದ ಬ್ಲಾಕ್ ಟೈಗರ್ ಟಿಬಿ ಖಾಯಿಲೆಯಿಂದ ಸತ್ತನೆಂಬ ಸುದ್ದಿ ಬಂದಿತು. ಅದನ್ನು ಕೇಳಿ ಆತನ ತಂದೆ ಕೆಲವೇ ದಿನಗಳಲ್ಲಿ ಅಸುನೀಗಿದರೆ ಅಮ್ಮ ನಂತರದ ಕೆಲವರ್ಷಗಳ ಒಳಗೆ ಇಹಲೋಕ ತ್ಯೆಜಿಸಿದರು.

ನಂಬಿದರೆ ನಂಬಿ, ಅಷ್ಟೆಲ್ಲ ಚಿತ್ರಹಿಂಸೆಯನ್ನು ಅನುಭವಿಸಿದರೂ ಸಹ ನಮ್ಮ ಯಾವೊಂದೂ ಸಿಕ್ರೆಟ್ ಇನ್ಫಾರ್ಮಶನ್ಗಳನ್ನೂ ಕೌಶಿಕ್ ಅವರುಗಳಿಗೆ ಬಿಟ್ಟುಕೊಡಲಿಲ್ಲವಂತೆ!!ಇದೆಂತಹ ದೇಶಭಕ್ತಿ ಸ್ವಾಮಿ? ಗುಡಿಗೋಪುರಗಳಲ್ಲಿ ಕಾಣುವ ದೇವರು ನಮ್ಮ ಮನೆಯನ್ನು ಕಾಯ್ದರೆ, ಮಳೆಗಾಳಿಯೆನ್ನದೆ ಎಲ್ಲೆಂದರಲ್ಲಿ ಎದ್ದು ಬಿದ್ದು ಹೋರಾಡುವ ಈ ದೇವಮಾನವರು ನಮ್ಮ ದೇಶವನ್ನು ಕಾಯುವರು. ಅಂತಹ ಕೆಲವರು ನಮ್ಮ ಕಣ್ಣ ಮುಂದೆ ಇದ್ದರೆ ಇಂತಹ ಕೆಲವರು ಇದ್ದೂ ಕಾಣದಾಗುವರು. ಆದರೆ ಯೋಗ್ಯತೆಗೆಟ್ಟ ಮೂರುಕಾಸಿನ ಗುಂಪುಗಳಿಗಷ್ಟೇ ಇಂತಹ ವೀರಸೇನೆ ಹಾಗು ಸೈನಿಕರ ಮೇಲೆ ಪ್ರಶ್ನೆಯನ್ನು ಮಾಡಲು ಸಾಧ್ಯ..!

2 ಟಿಪ್ಪಣಿಗಳು Post a comment
 1. sudarshana gururajarao
  ಫೆಬ್ರ 27 2019

  ಮನ ಕಲಕುವ ಬರವಣಿಗೆ.

  ಉತ್ತರ
 2. shripad
  ಮಾರ್ಚ್ 7 2019

  ನಮ್ಮ ನಾಗಶೆಟ್ಟರು ಎಲ್ಲಿದ್ದರೂ ಹೊರಬರತಕ್ಕದ್ದು

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments