ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 1, 2019

ಕಾಲು ಶತಮಾನ ಜನಮಾನಸವನ್ನು ಆಳಿದ ಕತೆಯೊಂದರ ಕತೆ!

‍ನಿಲುಮೆ ಮೂಲಕ

– ಸುಜಿತ್‌ ಕುಮಾರ್‌

Yash-Chopra-SRKಭಾರತೀಯರ ಸಿನಿಮಾ ಕ್ರೆಝೇ ಅಂತಹದ್ದು.  ಜನಜೀವನದ ವಿವಿಧ ಸ್ತರಗಳಲ್ಲಿ ಸಿಕ್ಕಾಪಟ್ಟೆ ಹಾಸುಹೊಕ್ಕಿರುವ ಈ ಸಿನಿಮಾ ಎಂಬ ಮಾಯೆ ಒಂಥರ ಊಟಕ್ಕೆ ಬೇಕಾದ ಉಪ್ಪಿನಕ್ಕಾಯಿಯಂತೆ. ಉಪ್ಪಿನಕ್ಕಾಯಿ ಇಲ್ಲದೆಯೇ ಊಟ ಮಾಡಬಹುದಾದರೂ ನಮ್ಮಲ್ಲಿ ಕೆಲವೆಡೆ ಅದೇ ಊಟವಾಗಿಬಿಡುತ್ತದೆ! ಜೀವನದ ಅಷ್ಟೂ ಸಂಕಷ್ಟಗಳಿಗೆ ಆಧ್ಯಾತ್ಮದ ಮೊರೆ ಹೋಗುವ ಗುಂಪು ಒಂದೆಡೆಯಾದರೆ ಅದಕ್ಕಿಂತಲೂ ನೂರು ಪಟ್ಟು ದೊಡ್ಡ ಗುಂಪು ತಮ್ಮ ತಮ್ಮ ಕಷ್ಟ ದುಃಖಗಳಿಗೆ ಆ ಸಿನಿಮಾಗಳ ಹಿಂದೆ ಬೀಳುವುದನ್ನು ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ. ಅದ್ಯಾವುದೋ ಕ್ರಿಸ್ತ ಪೂರ್ವ ಜಮಾನದಲ್ಲಿ ಕೈಕೊಟ್ಟ ಹುಡುಗಿಯ ನೆನಪಲ್ಲಿ ಮೀಯಲು ಅಥವಾ ಗುಡುಗು ಸಿಡಿಲುಗಳ ಆರ್ಭಟದ ನಡುವೆಯೂ ಕಿಲೋಮೀಟರ್ಗಟ್ಟಲೆ ದೂರ ನಿಂತು ಪ್ರೀತಿ ನಿವೇದನೆ ಮಾಡುವ ಮ್ಯಾಜಿಕನ್ನು ಕಂಡು ಬೆರಗಾಗಲು ಅಥವ ಪಠ್ಯ ಪುಸ್ತಕಗಳ ಬದನೇಕಾಯಿ ಎನುತ ಮೂರು ನಿಮಿಷದಲ್ಲಿ ಕೋಟ್ಯಾದಿಪತಿಯಾಗುವ ‘ಇಸ್ಟೈಲ’ನ್ನು ನೋಡಿ inspire ಆಗಲು ಅಥವಾ ಆಫೀಸಿನಲ್ಲಿ ತನ್ನ ಬಾಸಿನ ಮೇಲಿನ ಸಿಟ್ಟನ್ನು ಇಲ್ಲಿ ಹೀರೊ ವಿಲನ್ಸ್ ಗಳಿಗೆ ತದುಕುವ ಪೆಟ್ಟುಗಳಲ್ಲಿ ದಮನಮಾಡಿಕೊಳ್ಳಲು ಅಥವಾ ವಯಸ್ಸಿನ ಹುಡುಗ ಹುಡುಗಿಯರಿಗೆ ಆ ಹೊರಗಿನ ಕೆಟ್ಟ ಜಗತ್ತಿನಲ್ಲಿ  ಕಪ್ಪುಕೋಣೆಯ ನಾಲ್ಕಡಿ ಜಾಗ ಸ್ವರ್ಗಲೋಕವಾಗಲು.. ಒಂದೇ ಎರಡೇ ಇಂತಹ ಹಲವಾರು ಕಾರಣಗಳಿಂದ ಸಿನಿಮಾ ಹಾಗು ಥಿಯೇಟರ್ ಗಳು ನಮ್ಮವರಿಗೆ ವಿಪರೀತ ಹತ್ತಿರವಾಗಿವೆ. ಇನ್ನು ನಟ ನಟಿಯರ ವಿಚಾರಕ್ಕೆ ಬಂದರಂತೂ ಕತೆಬರೆದು, ಸೆಟ್ ಹಾಕಿ, ಸಂಗೀತ ಕರೆದು, ಹಾಡಿ, ಹಣ ಸುರಿದು, ಬೆಳಕಿಡಿದು ದುಡಿಯುವ ನೂರಾರು ಜನರನ್ನೂ ಮರೆತು ಕ್ಯಾಮರಾದ ಮುಂದೆ ಕಾಣುವ ಆ ಒಂದು ಚಹರೆಗೆ ಕಠೋರ ತಪಸ್ಸಿಗೆ ದೊರಕುವ ಭಗವಂತನ ದರ್ಶನದಂತೆ ಆಡುವ ಜನರ ಗುಂಪು ಒಂದೆಡೆಯಾದರೆ ಕೆಲವೆಡೆ ಅಂತಹ ಚಹರೆಗಳು ಅಂತಹ ದೇವರೆಂಬ ಪವರ್ಫುಲ್ ಶಕ್ತಿಗೇ ಒಂದು ಗೇಣು ಕೀಳು! ಇಂತಹ ಹತ್ತಾರು ನೂರಾರು ಕಾರಣಗಳಿಂದಲೇ ಇಂದು ಭಾರತೀಯ ಸಿನಿಮಾ ಇಂಡಸ್ಟ್ರಿ ಇಡೀ ವಿಶ್ವದಲ್ಲಿಯೇ ಅತಿ ಶ್ರೀಮಂತ ಇಂಡಸ್ಟ್ರಿ ಎನಿಸಿಕೊಂಡಿದೆ. ಇದು ವಿಪರ್ಯಾಸವೋ, ಹಾಸ್ಯವೋ ಅಥವಾ ಆಯಾಸವವೋ ಹೇಳುವುದು ಕಷ್ಟ. ಆದರೆ ಒಂದು ಮಾತ್ರ ಸತ್ಯ. ಒಂದು ಕಾಲು ಬಿಲಿಯನ್ ಜನರ ನಮ್ಮ ದೇಶದಲ್ಲಿ ಒಬ್ಬೊಬ್ಬರಿಗೆ ಇರುವ ಹತ್ತಾರು ಕನಸುಗಳು ನನಸಾಗದ ನೋವುಗಳಿಗೆ, ಹತಾಶೆಗಳಿಗೆ ತೆರೆಯ ಮೇಲೆ ಕಾಣುವ ಆ ಕಾಲ್ಪನಿಕ ಚಿತ್ರ ಒಂದು ಬಗೆಯ ಸಾಂತ್ವಾನವನ್ನು ನೀಡಬಲ್ಲದು. ಅದಕ್ಕೆ ಆ ಶಕ್ತಿ ಇದೆ! ಕೆಲಚಿತ್ರಗಳನಂತೂ ನಮ್ಮವರು ಅದ್ಯಾವ ಪರಿ ಹಚ್ಚಿಕೊಳ್ಳುತ್ತಾರೆ ಎಂದರೆ ದಶಕಗಳವರೆಗೂ ಅದನ್ನು ಥಿಯೇಟರ್ ಗಳಿಂದ ತೆಗೆಯಲು ಬಿಡುವುದಿಲ್ಲ. ಯಸ್ ದಶಕ I mean ಡೇಕೇಡ್ಸ್!

ಈ ಚಿತ್ರ ರಿಲೀಸಾಗಿ ಇಂದಿಗೆ ಹೆಚ್ಚು ಕಡಿಮೆ 25 ವರ್ಷಗಳಾಗಿವೆ. ಇಲ್ಲಿ ಮೇಲೆ ಹೇಳಿದ ಪವರ್ ಫುಲ್ ಚಹರೆಗಳಾಗಲಿ, ಕಾಲಿಟ್ಟ ಮಾತ್ರಕ್ಕೆ ಇಡೀ ಭೂಮಂಡಲವೇ ನಡುಗಿ ಗುಡುಗಿ ಸಿಡಿಯುವ ದೃಶ್ಯಗಳಾಗಲಿ ಅಥವಾ Massness ನ ಮತ್ಯಾವುದೇ ಅಂಶಗಳಾಗಲಿ ಇರಲಿಲ್ಲ. ತೊಂಬತ್ತರ ದಶಕದಲ್ಲಿ ಇಂತಹ ಎಲಿಮೆಂಟ್ಸ್ ಗಳು ಇಲ್ಲದೆಯೇ ಒಂದು ಚಿತ್ರವನ್ನು ಗೆಲ್ಲಿಸುವುದು ಸಾಧ್ಯಕ್ಕೆ ದೂರವಾದ ಮಾತಾಗಿದ್ದಿತು. ದೂರವೇನು, ಅಸಾಧ್ಯವೆಂದೇ ಹೇಳಬಹುದಿತ್ತು. ಆದರೆ ಸೋಜಿಗದ ಸಂಗತಿ ಎಂದರೆ ಈ  ಚಿತ್ರ ಮಾತ್ರ ಗೆದ್ದಿತು! ಆ ಗೆಲುವಿನ ಕಂಪು ದೇಶ ವಿದೇಶಗಳೆಲ್ಲೆಲ್ಲೂ ಪಸರಿಸಿತು. ತಿಂಗಳು, ವರ್ಷ, ದಶಕಗಳಾಚೆಗೂ ಅದು ತನ್ನ ಛಾಪನ್ನು ಮೂಡಿಸಿತು. ಚಿತ್ರ ನಿರ್ಮಾಣದಲ್ಲಿ ಈ ಸಿನಿಮಾ ಟ್ರೆಂಡ್ ಸೆಟ್ಟರಾಯಿತು. ತೀರಾ ಸಾಧಾರಣವೆನಿಸಿಕೊಂಡಿದ್ದ ಇಂಡಸ್ಟ್ರಿಯ ಯಂಗ್ ಗ್ರೂಪೊಂದು ಅಂದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿತು.

ಹಾಗಾದರೆ ಅಂತಹ ಯಾವ ಅಂಶ ಚಿತ್ರವನ್ನು ಈ  ಪರಿಯಾಗಿ ಗೆಲ್ಲಿಸಿತು? ಇಷ್ಟು ಕಾಲ ನೋಡಿದರೂ ಏಕೆ ಜನರ ಬಯಕೆ ಇನ್ನೂ ಕೊನೆಗೊಳ್ಳುತ್ತಿಲ್ಲ? ಅಂದಿನ ಜನರಿಗಷ್ಟೇ ಅಲ್ಲದೆ ಟಿಂಡರ್, ಇನ್ಸ್ಟಾ ಎನುವ ಪ್ರಸ್ತುತ ಯುವಪೀಳಿಗೆಗೂ ಈ ಚಿತ್ರ ಇಷ್ಟವಾಗಲು ಕಾರಣವೇನು?

ಚಿತ್ರಕಥೆ. ಚಿತ್ರರಸಿಕರ ಮನಸ್ಥಿತಿಯನ್ನು ಅರಿತು ಹದವಾಗಿ ಹಣೆದಿದ್ದ ಕಥೆ ಚಿತ್ರವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಗೊತ್ತು ಗುರಿ ಇಲ್ಲದ ನಾಯಕ ರಾಜ್,  ಕಪ್ಪೆಚಿಪ್ಪಿನ ಮುತ್ತಿನಂತೆ ವಿದೇಶದಲ್ಲಿದ್ದೂ ಆಚಾರವಿಚಾರಗಳ ಗೊಡೊಳಗಿರುವ ಮುದ್ದಾದ ಹೆಸರಿನ ನಾಯಕಿ, ವಿದೇಶದ ಲವ್ ಸ್ಟೋರಿ, ವಿರುದ್ಧ ಧ್ರುವಗಳಂತಹ ಹೀರೊ ಹಾಗು ಹೀರೋಯಿನ್ ನ ಅಪ್ಪಂದಿರು ಹಾಗು ಚಿತ್ರದ ಕೊನೆಯವರೆಗೂ ನೋಡುಗರನ್ನು ಕತೆಯಲ್ಲಿ ಹಿಡಿದಿಡುವ ಆ ಚಿತ್ರಕಥೆ ಆಗಿನ ಕಾಲಕ್ಕೆ ಅತಿ ಭಿನ್ನ ಹಾಗು ಶುದ್ಧ ಚಿನ್ನದಂತಿದ್ದಿತು. ಇಲ್ಲಿ ನಿರ್ಮಲ ಪ್ರೀತಿಯಿದೆ, ಅತ್ತು ಸುಖಪಡುವ ದುಃಖವಿದೆ, ತನ್ನ ಯವ್ವನವನ್ನು ನನ್ನ ಮಗ ಅನುಭವಿಸಲಿ ಎಂಬ ಅಪ್ಪ ಒಂದೆಡೆಯಾದರೆ, ತನ್ನ ಜೀವಮಾನದಲ್ಲೇ ಎಂದಿಗೂ ಕಾಣದ ಹುಡುಗನಿಗೆ ತನ್ನ ಮಗಳನ್ನು ಕಟ್ಟಲಿಚ್ಚಿಸುವ ಅಪ್ಪ ಇನ್ನೊಂದೆಡೆ. ಇಲ್ಲಿ ಕುಣಿದು ಕುಪ್ಪಳಿಸುವಂತಹ ಸಂಗೀತವಿದೆ, ಯೂರೋಪಿನ ಚಳಿಯಲ್ಲಿ ಕಾಲೆಳೆದು, ಬೈದಾಡಿ, ಗುಂಪಿನಿಂದ ಬೇರೆಯಾಗಿ, ನಡೆಯುತ್ತಲೇ ಸಾಗುವ ಮುದ್ದಾದ ಜೋಡಿಯಿದೆ, ಎಲ್ಲಕ್ಕೂ ಮಿಗಿಲಾಗಿ ಅತಿರೇಕವೆನಿಸದ ಸಹಜತೆ ಚಿತ್ರದ ಪ್ರತಿ ಫ್ರೇಮಿನಲ್ಲೂ ಬೇರುಬಿಟ್ಟಿದೆ. ಮಾನವ ಜೀವನದ ಎಲ್ಲ ಭಾವಗಳು ಮಿಳಿತಗೊಂಡಿರುವ ಸುಂದರ ಕಲ್ಪನೆಯ ಕತೆಯಿರದೆ ಹೋಗಿದ್ದರೆ ಚಿತ್ರ ಈ ಮಟ್ಟಿನ ಯಶಸ್ಸನ್ನು ಗಿಟ್ಟಿಸಿಕೊಳ್ಳುತ್ತಿರಲಿಲ್ಲವೇನೋ.  ಪೀಳಿಗೆಗಳನ್ನು ಮರೆತು ಎಲ್ಲರಲ್ಲಿ ಬೆರೆಯುತ್ತಿರಲಿಲ್ಲವೇನೋ?

ಈ ಚಿತ್ರದ ಕತೆ, ನಿರ್ದೇಶನ, ನಿರ್ಮಾಣ ಎಲ್ಲವೂ ಹಿಂದಿ ಚಿತ್ರರಂಗದ ದಂತಕತೆ ಯಶ್ ಚೋಪ್ರರ ಮಗ ಆದಿತ್ಯ ಚೋಪ್ರಾನದು. ಮೊದಲು ಹಾಲಿವುಡ್ ನ ಟಾಮ್ ಕ್ರೂಸ್ ನನ್ನು ನಾಯಕನನ್ನಾಗಿ ಮಾಡಲು ಯೋಚಿಸಿದ್ದ ಆದಿ (!) ಒಂದು ಟ್ರೆಂಡ್ ಸೆಟ್ಟಿಂಗ್ ಚಿತ್ರವನ್ನು ಮಾಡಲೆಂದೇ ಆಕ್ಷನ್ ಕಟ್ ಹೇಳಿದಂತಿದೆ. ಕೇವಲ ಮೂರ್ನಾಲ್ಕು ವಾರದಲ್ಲೇ ಬರೆದು ಮುಗಿಸಿದ ಕತೆ ಅಂದು ಚಿತ್ರದಲ್ಲಿ ತೊಡಗಿದ ಅಷ್ಟೂ ಜನರ ಜೀವನನ್ನೇ ಬದಲಿಸಿತು. ಶಾರುಖ್ ಖಾನ್, ಕಾಜೋಲ್ರ ಜೋಡಿ ಭಾರತೀಯರ ಮಗಳು ಅಳಿಯರಂತಾದರು. ನಾಲ್ಕು ಕೋಟಿ ಸುರಿದು ನಿರ್ಮಿಸಿದ ಸಿನಿಮಾ ನೂರು ಕೋಟಿಗೂ ಹೆಚ್ಚಿನ ವಹಿವಾಟನ್ನು ನಡೆಸಿತು. ಚಿತ್ರದ ಹುಚ್ಚು ಅದ್ಯಾವ ಮಟ್ಟಿಗೆ ಜನಮಾನಸದಲ್ಲಿ ಹಬ್ಬಿತೆಂದರೆ ಚಿತ್ರದ ನಾಯಕ ನಾಯಕಿಯರು ಬಳಸಿದ ಬಟ್ಟೆಯ ಶೈಲಿಗಳೆಲ್ಲವೂ ‘ಸಿಮ್ರಾನ್’ ಹಾಗು ‘ರಾಜ್’ ನ ಹೆಸರಿನ ಬ್ರಾಂಡ್ಗಳಾಗಿ ಮಾರುಕಟ್ಟೆಗೆ ಬಂದವು. ಮುಂಬೈ ಸೆಂಟ್ರಲ್ ನ ಬಳಿ ಇರುವ ಮರಾಠ ಮಂದಿರ್ ಚಿತ್ರಮಂದಿರದಲ್ಲಿ ಚಿತ್ರ ಕಳೆದ ವರ್ಷದವರೆಗೂ ಓಡಿತು. ಈ ಪರಿ ಬರೋಬ್ಬರಿ 22 ವರ್ಷಗಳ ಕಾಲ ಚಿತ್ರವೊಂದು ನಡೆದಿರುವ ಉದಾಹರಣೆ ಭಾರತದಲ್ಲೇನು ಇಡೀ ವಿಶ್ವದಲ್ಲಿಯೇ ಇಲ್ಲ! ಕತೆ, ನಿರ್ದೇಶನ, ಸಂಗೀತ ಹಾಗು ನಟನೆ ಇತ್ತಕಡೆ ಹೆಚ್ಚೆನಿಸದೆ ಅತ್ತಕಡೆ ಕಡಿಮೆಯೂ ಎನಿಸದ ಫಾರ್ಮುಲಾ ಚಿತ್ರವನ್ನು ಗೆಲ್ಲಿಸಿತು. ಜನರ ಮನವನ್ನುಗೆದ್ದಿತು. ಸ್ಕೂಲು ಕಾಲೇಜು Function ಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ಜಾತ್ರೆ ಹಬ್ಬಗಳಲ್ಲಿ ಮೂಡುವ ಈ ಚಿತ್ರದ ಹಾಡುಗಳು ತಿಳಿದೋ ತಿಳಿಯದೆಯೋ ನೂರಾರು ಕೋಟಿ ಜನರ ತುಟಿಗಳಲ್ಲಿ ರಾರಾಜಿಸಿರುವುದಂತೂ ಸುಳ್ಳಲ್ಲ.

‘ಜಾ .. ಸಿಮ್ರಾನ್ .. ಜಾ .. ಜೀಲೇ Apni ಜಿಂದಗಿ’ ಎಂಬ ಅಂಬರೀಷ್ ಪೂರಿಯ ಡೈಲಾಗ್ ತೆರೆಯ ಮೇಲೆ ಬರುವವರೆಗೂ ಪಿನ್ ಡ್ರಾಪ್ ಸೈಲೆಂಟ್ ಆಗುವ ಚಿತ್ರಮಂದಿರ, ಸಿಮ್ರಾನ್ ಓಡಿ ರಾಜ್ ನ ತೆಕ್ಕೆಯನ್ನು ಸೇರಿದಾಗಂತೂ ಸಿಳ್ಳೆ ಚಪ್ಪಾಳೆಗಳ ಕಹಳೆಯನ್ನು ಎಲ್ಲೆಲ್ಲೂ ಮೂಡಿಸುತ್ತದೆ. ಎಲ್ಲರ ಮನದೊಳಗೂ ಅಡಗಿರುವ ಒಂದೊಂದು ಬಗೆಯ ರಾಜ್ ಹಾಗು ಸಿಮ್ರಾನ್ ರ ಕ್ಯಾರೆಕ್ಟರ್ ಹೊರಬಂದು ಅಲ್ಲಿ ನಲಿಯತೊಡಗುತ್ತದೆ. ‘ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಎಂದು ಹಾಡುತ್ತದೆ!

 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments