ಬದುಕುವ ಹಾದಿಯ ತೋರಿಸಿ ಹೋದ ಮಹಾನಾಯಕ
– ರಾಕೇಶ್ ಶೆಟ್ಟಿ
ಹಿಂದೊಮ್ಮೆ ಗೆಳೆಯರ ಜೊತೆಗೆ ರಾಜಕೀಯ ಮಾತನಾಡುವಾಗ,ನರೇಂದ್ರ ಮೋದಿಯವರ ನಂತರ ಆ ಜಾಗಕ್ಕೆ ಅವರಷ್ಟೇ ಸಮರ್ಥ ಹಾಗೂ ಅವರಂತಹದ್ದೇ ವ್ಯಕ್ತಿತ್ವವುಳ್ಳ ಮತ್ತೊಬ್ಬ ವ್ಯಕ್ತಿ ಬಿಜೆಪಿಯಲ್ಲಿದ್ದಾರೆಯೇ? ಎಂಬ ಪ್ರಶ್ನೆ ಬಂದಿತ್ತು. ಇದ್ದಾರೆ! ಆ ವ್ಯಕ್ತಿಯ ಹೆಸರು ಮನೋಹರ್ ಪರಿಕ್ಕರ್ ಎಂದಿದ್ದೆ. ಬೆಂಗಳೂರಿನಲ್ಲಿ ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಿದ್ದಾಗ ಅವರನ್ನು ಹತ್ತಿರದಿಂದ ನೋಡುವ,ಒಡನಾಡುವ ಅವಕಾಶ ಸಿಕ್ಕಿತ್ತು. ಯಾವುದೇ ಹಮ್ಮುಬಿಮ್ಮಿಲ್ಲದ ಸರಳ ವ್ಯಕ್ತಿತ್ವ ಅವರದ್ದು.
ಪ್ರಧಾನಿ ಮೋದಿಯವರು, ಪರಿಕ್ಕರ್ ಅವರಿಗೆ ತಮ್ಮ ಸಂಪುಟದ ಅತಿ ಮಹತ್ವದ ರಕ್ಷಣಾ ಖಾತೆಯನ್ನು ನೀಡಿದ್ದರು. ಪರಿಕ್ಕರ್ ಅವರು ಒಲ್ಲದ ಮನಸ್ಸಿನಿಂದಲೇ ತಮ್ಮ ರಾಜಕೀಯ ಅಖಾಡ ಗೋವಾವನ್ನು ಬಿಟ್ಟು ದೆಹಲಿಗೆ ಬಂದಿದ್ದರು.ಒಳ್ಳೆಯ ಪ್ಯಾಕೇಜುಗಳು ಯಾವಾಗಲೂ ಲಿಮಿಟೆಡ್ ಎಡಿಷನ್ನಿನಲ್ಲಿ ಬರುತ್ತವಂತೆ. ಪರಿಕ್ಕರ್ ಅವರ ವಿಷಯದಲ್ಲಿ ಈ ಮಾತು ನಿಜವಾಗಿ ಹೋಯಿತು. ೬೩ ನಿಜಕ್ಕೂ ಸಾಯುವ ವಯಸ್ಸಲ್ಲ. ವರ್ಷದ ಹಿಂದೆ ಅವರಿಗೆ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಇದೆ ಎಂದಾಗಲೇ ಸ್ವಚ್ಛ ಹಾಗೂ ದಕ್ಷ ರಾಜಕಾರಣದೆಡೆಗೆ ಆಸಕ್ತಿಯಿರುವವರ ಮನಸ್ಸುಗಳು ಮುದುಡಿ ಹೋಗಿತ್ತು. ಒಂದು ವರ್ಷ ಕ್ಯಾನ್ಸರಿನೊಂದಿದೆ ಬಡಿದಾಡುತ್ತಲೇ ಇದ್ದರೂ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಅವರು ಮರೆಯಲೇ ಇಲ್ಲ.ತೀರಾ ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯದ ನಡುವೆಯೇ ದೈನಂದಿನ ಕೆಲಸಗಳನ್ನು ನಿರ್ವಹಿಸಿದ್ದರು.ಸದನದಲ್ಲಿ ಬಜೆಟ್ ಕೂಡ ಮಂಡಿಸಿದ್ದರು ಪುಣ್ಯಾತ್ಮ.
ಬೆಂಗಳೂರಿನಲ್ಲಿರುವ ಸೈನ್ಯದ ಜಾಗದ ಸ್ವಲ್ಪ ಭಾಗವನ್ನು ಅಭಿವೃದ್ಧಿ ಕಾರ್ಯಕ್ಕಾಗಿ ಬಳಸಲು ರಾಜ್ಯ ಸರ್ಕಾರ ಕೇಳಿತ್ತು. ೪೦ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಆ ಸಮಸ್ಯೆಯನ್ನು ಕೇವಲ ೪೦ ನಿಮಿಷಗಳಲ್ಲಿ ಬಗೆಹರಿಸಿಕೊಟ್ಟಿದ್ದವರು ಮನೋಹರ್ ಪರಿಕ್ಕರ್.ರಾಜಕಾರಣಿಯಾದವನಿಗೆ ಇಚ್ಛಾಶಕ್ತಿ ಎಲ್ಲಕ್ಕಿಂತ ಮುಖ್ಯವಾದದ್ದು.ಶಾಲಾ ದಿನಗಳಿಂದಲೇ ಸಂಘದ ಗರಡಿಯಲ್ಲಿ ಪಳಗಿದವರು ಪರಿಕ್ಕರ್.೭೦ರ ದಶಕದ ಐಐಟಿಯ ಎಂಜಿನಿಯರ್ ಪದವೀಧರ ಮನಸ್ಸು ಮಾಡಿದ್ದರೆ ಆ ಕಾಲದಲ್ಲೇ ವಿದೇಶಕ್ಕೆ ಹೋಗಿ ಸೆಟಲ್ ಆಗಬಹುದಿತ್ತು. ಆದರೆ ಪರಿಕ್ಕರ್ ಅವರು ಆರಿಸಿಕೊಂಡಿದ್ದು ಸಮಾಜ ಸೇವೆಯನ್ನು. ಸಂಘದ ಅಣತಿಯಂತೆ ೯೦ರ ದಶಕದಲ್ಲಿ ಗೋವಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಪರಿಕ್ಕರ್ ಅವರು, ಕ್ರಿಶ್ಚಿಯನ್ ಮತದಾರರು ಗಣನೀಯವಾಗಿರುವ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ನಿಲ್ಲಿಸಿದವರು.೪ ಬಾರಿ ಮುಖ್ಯಮಂತ್ರಿಯಾಗಿ,ಕೇಂದ್ರ ರಕ್ಷಣಾ ಸಚಿವರಾಗಿ ಅವರು ಜನರನ್ನು ಸೆಳೆದಿದ್ದು ತಮ್ಮ ಸರಳ ನಡೆನುಡಿ ಜೀವನ ಶೈಲಿಯ ಮೂಲಕ. ಮುಖ್ಯಮಂತ್ರಿಯಾದಾಗಲೇ ಕಾರಿನ ಮೇಲಿನ ಕೆಂಪು ದೀಪವನ್ನು ತೆಗೆಸುವುದಿರಲಿ,ಮನೆಯಿಂದ ಕಚೇರಿಗೆ ಹೊರಟಾಗ ರಸ್ತೆ ಬದಿಯ ಯಾವುದೋ ಚಹಾ ಅಂಗಡಿಗೆ ಹೋಗುವಿದಿರಲಿ.ಸಂಘದಲ್ಲಿ ಕಲಿತ ಆ ಸರಳತೆಯನ್ನು ಅಧಿಕಾರದ ಕಾರಿಡಾರಿಗೆ ಕಿತ್ತುಕೊಳ್ಳಲಾಗಲಿಲ್ಲ. ದಿನಕ್ಕೆ ೧೬-೧೮ ಗಂಟೆ ಕೆಲಸ ಮಾಡುತಿದ್ದಂತಹ ವ್ಯಕ್ತಿ ಪರಿಕ್ಕರ್. ೨೦೦೧ರಲ್ಲಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಕೆಲವೇ ತಿಂಗಳ ಮೊದಲು ಅವರ ಧರ್ಮಪತ್ನಿಯವರು ಕ್ಯಾನ್ಸರ್ ಮಾರಿಗೆ ಬಲಿಯಾಗಿದ್ದರು. ಈಗ ೧೯ವರ್ಷಗಳ ನಂತರ ಪರಿಕ್ಕರ್ ಅವರನ್ನು ಕೂಡ ಅದೇ ಮಾರಿ ಸೆಳೆದೊಯ್ಯಿತು.
ಗೋವಾ ಬಿಜೆಪಿಯಲ್ಲಿ ಆಳವಾಗಿ ಬೇರೂರುತ್ತ ಹೋದಂತೆಯೇ ಅವರು ಕೇಂದ್ರದ ಬಿಜೆಪಿಯಲ್ಲೂ ಸ್ಥಾನ ಉಳಿಸಿಕೊಂಡಿದ್ದವರು. ನೇರ ನಡೆನುಡಿಯ ವ್ಯಕ್ತಿತ್ವದಿಂದ ದೆಹಲಿಯ ಲಾಭಿ ಅವರನ್ನು ಹತ್ತಿರ ಬಿಟ್ಟುಕೊಳ್ಳಲು ಹಿಂದೆ ಮುಂದೆ ನೋಡುತ್ತಿತ್ತು. ನೆನಪಿರಲಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಗಾದಿಗೆ ಬಹಿರಂಗವಾಗಿ ಮೊದಲು ಘೋಷಿಸಿದ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು. ನಂತರ ಗೋವಾದಲ್ಲೇ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಮೋದಿಯವರ ಬೆನ್ನಿಗೆ ಹೆಬ್ಬಂಡೆಯಂತೆ ನಿಂತು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸುವಲ್ಲೂ ಪರಿಕ್ಕರ್ ಪಾತ್ರ ಪ್ರಮುಖವಾದದ್ದು.ಸಹಜವಾಗಿಯೇ ಮೋದಿಯವರು ಪ್ರಧಾನಿಯಾದ ನಂತರ ಮಹತ್ವದ ರಕ್ಷಣಾ ಖಾತೆಗೆ ಬಂದು ಕುಳಿತರು.ದಶಕಗಳ ಕಾಲ ಕಾಂಗ್ರೆಸ್ ಕಸದ ಬುಟ್ಟಿಯಲ್ಲಿ ಕೊಳೆಯುತ್ತಿದ್ದ OROP,Rafale ಒಪ್ಪಂದಗಳು ಆಗಿದ್ದು ಇವರ ಸಮಯದಲ್ಲೇ.ಅಷ್ಟು ಮಾತ್ರವಲ್ಲ ಇಡೀ ಜಗತ್ತೇ ಭಾರತದೆಡೆಗೆ ಬೆರಗಿನಿಂದ ನೋಡಿದ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ಪರಿಕ್ಕರ್ ಅವರು ಸಚಿವರಾಗಿದ್ದಾಗಲೇ.ರಕ್ಷಣಾ ಸಚಿವರಾಗಿ ಖ್ಯಾತಿಯ ಉತ್ತುಂಗದಲ್ಲಿ ಇದ್ದಾಗಲೇ,
ಗೋವಾದಲ್ಲಿ ಸೃಷ್ಟಿಯಾದ ಅತಂತ್ರ ಸರ್ಕಾರದ ನೊಗ ಹೊರಲಿಕ್ಕೆ ಕೇಂದ್ರದ ಬಿಜೆಪಿ ಅವರನ್ನು ಒಲ್ಲದ ಮನಸ್ಸಿನಿಂದ ಕಳುಹಿಸಿ ಕೊಟ್ಟಿತು. ಬಿಜೆಪಿ ಮತ್ತಿತರ ಸಣ್ಣಪುಟ್ಟ ಸಮ್ಮಿಶ್ರ ಸರ್ಕಾರದ ಸ್ಥಾಪನೆಯಾಗುವಾಗ ಇತರೇ ಪಕ್ಷಗಳು ಬಿಜೆಪಿಗೆ ಹಾಕಿದ ಒಂದೇ ಕಂಡೀಷನ್ ಅದು ಪರಿಕ್ಕರ್ ಅವರೇ ಮುಖ್ಯಮಂತ್ರಿಯಾಗಬೇಕು ಎನ್ನುವುದು. ತನ್ನ ದಕ್ಷತೆ, ಪ್ರಾಮಾಣಿಕತೆ ,ಭ್ರಷ್ಟಾಚಾರ ವಿರೋಧಿ ನೀತಿಯಿಂದ ಅವರು ರಾಜ್ಯದಲ್ಲಿ ಪಕ್ಷಾತೀತವಾಗಿ ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಎನ್ನಲಿಕ್ಕೆ ಸ್ಪಷ್ಟ ಉದಾಹರಣೆ. ಆದರೆ ವಿಧಿಯ ಆಟ ಬೇರೆಯದೇ ಇತ್ತು. ಮುಖ್ಯಮಂತ್ರಿಯಾಗಿ ಗೋವಾಗೆ ಬಂದ ಒಂದೇ ವರ್ಷದಲ್ಲಿ ಕ್ಯಾನ್ಸರ್ ಮಾರಿ ಅವರನ್ನು ಆವರಿಸಿಕೊಂಡಿತು.ರಾಜಕೀಯ ಹೋರಾಟದಲ್ಲಿ ಜಯಗಳಿಸಿ ಗೋವಾದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಿದ,ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗುವಲ್ಲೂ ಪ್ರಮುಖ ಪಾತ್ರವಹಿಸಿದ ಪರಿಕ್ಕರ್ ಅವರು ಜೀವನದ ಕೊನೆಯ ಆಟದಲ್ಲಿ ವಿಧಿಗೆ ತಲೆಬಾಗಲೇಬೇಕಾಯಿತು. ನಿನ್ನೆ ಅವರು ನಮ್ಮನ್ನು ಅಗಲಿದ್ದಾರೆ. ಆದರೆ,ಹೊರಡುವ ಮುನ್ನ ರಾಜಕಾರಣದೆಡೆಗೆ ಆಸಕ್ತಿಯಿರುವ ಯುವ ಜನಾಂಗಕ್ಕೆ ರಾಜಕಾರಣಿಯಾಗಿ ಬದುಕಬೇಕಾದ ರೀತಿ ಹೇಗೆ ಎನ್ನುವುದನ್ನು ತಾವೇ ಸ್ವತಃ ನಡೆದು ತೋರಿಸಿಕೊಟ್ಟು ಹೋಗಿದ್ದಾರೆ. ಆ ದಾರಿಯಲ್ಲಿ ನಡೆಯುವುದೇ ನಾವು ಪರಿಕ್ಕರ್ ಅವರಂತಹ ಉನ್ನತ ಆತ್ಮಗಳಿಗೆ ಸಲ್ಲಿಸುವ ಗೌರವ.
ಚಿತ್ರಕೃಪೆ: https://economictimes.indiatimes.com