ಕ್ಯಾರೆಟ್ ಅಂದ್ರೆ ಕ್ಯಾ ಅನ್ನುತ್ತಿದ್ದವರನ್ನು, ವಾಹ್ ಎನ್ನಿಸಿದ ವಲ್ಲಭಬಾಯಿ
– ರಾಘವೇಂದ್ರ ಎಮ್ ಸುಬ್ರಹ್ಮಣ್ಯ
ನಿಮಗ್ಗೊತ್ತೇ! 1940ರ ಆಸುಪಾಸಿನಲ್ಲಿ ಕ್ಯಾರೆಟ್ ಅನ್ನೋದನ್ನ ಮನುಷ್ಯರೂ ತಿನ್ನಬಹುದು ಅನ್ನೋ ವಿಷಯ ಗುಜರಾತಿನ ಜನರಿಗೆ ತಿಳಿದೇ ಇರಲಿಲ್ಲ. ಆಗೆಲ್ಲ ಜಮೀನಿನಲ್ಲಿ ಬೆಳೆದ ಕ್ಯಾರೆಟ್ ಅನ್ನು ಬರೀ ದನ-ಕರುಗಳಿಗೆ ತಿನ್ನಲಷ್ಟೇ ಕೊಡುತ್ತಿದ್ದರು. ಜಮೀನಿನಲ್ಲಿ ತನ್ನಷ್ಟಕ್ಕೇ ತಾನೇ ಬೆಳೆಯುತ್ತಿದ್ದ ಕ್ಯಾರೆಟ್ ಅನ್ನು, ಹುಲ್ಲು, ಕಲಗಚ್ಚಿನ ನೀರಿನೊಂದಿಗೆ ಸೇರಿಸಿ ಜಾನುವಾರುಗಳಿಗೆ ಆಹಾರವಾಗಿ ಕೊಡುತ್ತಿದ್ದರು.
ಗುಜರಾತಿನ ಜುನಾಗಡ್ ಜಿಲ್ಲೆಯ ಖಾಮ್ಡ್ರೋಲ್ ಎಂಬ ಗ್ರಾಮದ ವಲ್ಲಭಭಾಯ್ ಎಂಬ ಹುಡುಗ, ತನ್ನಮನೆಯಲ್ಲೂ ಹೀಗೇ ಕ್ಯಾರೆಟ್ ಅನ್ನು ಜಾನುವಾರಿಗೆ ತಿನ್ನಿಸುವಾಗ, ಒಂದು ದಿನ ಆಕಸ್ಮಿಕವಾಗಿಯೋ ಅಥವಾ ವಯೋಸಹಜ ಕುತೂಹಲದಿಂದಲೋ ಒಂಚೂರು ಕ್ಯಾರೆಟ್ ಅನ್ನು ತಾನೇ ತಿಂದ. ಸಿಹಿಸಿಹಿಯಾಗಿದ್ದ ಆ ಕ್ಯಾರೆಟ್ ಆತನ ಕಣ್ಣರಳಿಸಿತು. ಅಪ್ಪನಿಗೆ “ನಾವು ನಮ್ಮ ಹೊಲದಲ್ಲಿ ಬರೀ ಬೇಳೆ, ಶೇಂಗಾ, ಜೋಳ, ನವಣೆ ಮತ್ತು ರಜ್ಕೋ (ಮೇವಿಗೆ ಬಳಸುವ ಹುಲ್ಲು) ಮಾತ್ರ ಬೆಳೀತಾ ಇದ್ದೀವಿ. ಈ ಇದಿದೆಯಲ್ಲಾ ಕೆಂಪನೆ ಈ ಉದ್ದನೆಯದ್ದು, ಇದನ್ನ ಇನ್ನೂ ಹೆಚ್ಚೆಚ್ಚು ಬೆಳೆದು ಜನರಿಗೆ ಮಾರಬೇಕಪ್ಪಾ. ಚೆನ್ನಾಗಿದೆ ಇದು” ಅನ್ನೋ ಸಲಹೆ ಕೊಟ್ಟದ್ದಕ್ಕೆ, ಅಪ್ಪನಿಂದ ತಲೆಮೇಲೊಂದು ಪಟಕ್ಕನೆ ಪೆಟ್ಟು ಬಿತ್ತಷ್ಟೇ. ಈತನ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ಅಪ್ಪನ ಲೇವಡಿಯನ್ನ ಇವನೂ ಅಷ್ಟೇನೂ ಸೀರಿಯಸ್ಸಾಗಿ ತೆಗೆದುಕೊಳ್ಳದೆ, ಮರುದಿನ ಬೆಳಿಗ್ಗೆ ತಾನೇ ಕ್ಯಾರೆಟ್ಟುಗಳನ್ನ ಅಗೆದು, ತೊಳೆದು ಎರಡು ಚೀಲದಲ್ಲಿ ತುಂಬಿ ಮಾರುಕಟ್ಟೆಗೆ ತೆಗೆದುಕೊಂಡು ಹೋದ. ಇದು 1943ರ ಕಥೆ. ಆಗಿನ್ನೂ ಅವನಿಗೆ 13 ವರ್ಷ ವಯಸ್ಸು. ಐದನೇ ಕ್ಲಾಸಿಗೇ ಶಾಲೆಗೆ ಹೋಗುವುದನ್ನ ನಿಲ್ಲಿಸಿದ್ದ ವಲ್ಲಭನಿಗೆ, ತಮ್ಮ 5 ಎಕರೆ ಜಮೀನಿನಲ್ಲಿ ಅಪ್ಪನಿಗೆ, ಮನೆಯಲ್ಲಿ ಅಮ್ಮನಿಗೆ ಸಹಾಯಮಾಡುವುದೇ ಕೆಲಸವಾಗಿತ್ತು. ಕ್ಯಾರೆಟ್ಟಲ್ಲದಿದ್ದರೆ ರಜ್ಕೋ ಮೂಟೆ ಹೊತ್ತು ಮಾರಲು ಹೋಗುತ್ತಿದ್ದವ, ಇವತ್ತು ಕ್ಯಾರೆಟ್ ಮೂಟೆ ಹಿಡಿದುಹೊರಟ.
ಮಾರುಕಟ್ಟೆ ತಲುಪಿದ ಹುಡುಗ, ಹೋಗುವ ಬರುವವರಿಗೆಲ್ಲಾ ಒಂದೊಂದು ಕ್ಯಾರೆಟ್ ಚೂರು ಕೊಟ್ಟು ತಿನ್ನಲು ಹೇಳತೊಡಗಿದ. ಒಂದಿಬ್ಬರು ಮೂಗು ಮುರಿದರು, ಕೆಲವರು ಇಷ್ಟಪಟ್ಟರು, ಆದರೆ ಯಾರೂ ಖರೀದಿಸಲು ಮುಂದೆ ಬರಲಿಲ್ಲ. ಒಬ್ಬ ನಿತ್ಯದ ಗಿರಾಕಿ ಮಾತ್ರ ರುಚಿ ನೋಡಿದವರೇ “ಹ್ವಾಯ್ ಇದು ಚಂದ ಉಂಟು ಮಾರ್ರೆ! ಎಂತದಿದು!?” ಅಂತಾ ಪೂರ್ವಾಪರ ವಿಚಾರಿಸಿದವರೇ, ಸುಮಾರು ಐದು ಕೇಜಿಯಿದ್ದ ಒಂದು ಚೀಲ ಪೂರ್ತಿ ಕ್ಯಾರೆಟ್ ಅನ್ನು 4 ರೂಪಾಯಿ ಕೊಟ್ಟು ಕೊಂಡುಹೋದರು. ಅಷ್ಟೇ ಅಲ್ಲದೇ ಇನ್ನೊಬ್ಬ ಗಿರಾಕಿಯನ್ನೂ ಕರೆದುಕೊಂಡು ಬಂದು, ಅವರು ಆ ಎರಡನೇ ಚೀಲವನ್ನೂ ತೆಗೆದುಕೊಂಡು ಹೋದರು. ಮಾರುಕಟ್ಟೆಗೆ ಹೋದ ಎರಡೇ ಗಂಟೆಯಲ್ಲಿ 8 ರೂಪಾಯಿ ದುಡಿದ ವಲ್ಲಭ ಸಂತೋಷದಿಂದಲೇ ಮನೆಗೆ ಹೊರಟ. ಅವತ್ತಿನ ಕಾಲಕ್ಕೆ 50 ಪೈಸೆಯೆಂದರೇ ದೊಡ್ಡ ಮೊತ್ತದ ಹಣ. ಮಾರುಕಟ್ಟೆಗೆ ಹೋಗೋಕೆ ಟಾಂಗಾವಾಲಾನಿಗೆ 25 ಪೈಸೆ ಕೊಡಬೇಕಾದಲ್ಲಿ, ವಾಪಾಸು ಬರುವಾಗ ವಲ್ಲಭಭಾಯಿ 50 ಪೈಸೆ ಕೊಟ್ಟರಂತೆ. ಅವತ್ತು ಟಾಂಗಾವಾಲನ ಮುಖದಲ್ಲಿ ನೋಡಿದ ಸಂತೋಷ ಮರೆಯಲಾಗದ್ದು ಅಂತಾರೆ ವಲ್ಲಭಭಾಯಿ. ಮನೆ ತಲುಪಿ 8 ರೂಪಾಯಿಗೆ ಎರಡು ಮೂಟೆ ಕ್ಯಾರೆಟ್ ಮಾರಾಟವಾದ ಕಥೆ ಹೇಳಿದರೆ, ಅಪ್ಪ ನಂಬಲಿಕ್ಕೇ ರೆಡಿಯಿಲ್ಲ. ಎಷ್ಟೋ ಬಾರಿ ಅಪ್ಪನಿಗೆ ತಿಂಗಳಿಡೀ ಕಷ್ಟಪಟ್ಟರೂ 8 ರೂಪಾಯಿ ದುಡಿಯೋದು ಕಷ್ಟವಾಗ್ತಾ ಇತ್ತು. ಅಂತಾದ್ರಲ್ಲಿ ಎರಡೇ ಗಂಟೆಗೆ ಎಂಟು ರೂಪಾಯಿ ದುಡಿಮೆ ಅಂದ್ರೆ ಎಂತಾ ಹುಡುಗಾಟವಾ!? ಯಾರೋ ಹಳೇ ಗಿರಾಕಿ ಕೊಡಬೇಕಿದ್ದ ಬಾಕಿ ಚುಕ್ತಾ ಮಾಡಿರಬೇಕು ಅಂತಾ ಅವರ ವಾದ. ಕೊನೆಗೆ ನಂಬಿದ ಅಪ್ಪ, ಕ್ಯಾರೆಟ್ ಬೆಳೆಯೋಕೆ ಒಪ್ಪಿದರು.
ನಿಧಾನಕ್ಕೆ ವಲ್ಲಭಭಾಯಿ ಬೆಳೆಯುತ್ತಿದ್ದ ಈ ಹೊಸಾ ತರಕಾರಿಯ ಕಥೆ ಹಳ್ಳಿಗಳಲ್ಲಿ ಹರಡುತ್ತಿತ್ತು. “ಸಿಹಿಯಾಗಿದೆಯಂತೆ, ಗಟ್ಟಿಯಾಗಿದೆಯಂತೆ, ಅಷ್ಟೇ ಅಲ್ಲದೇ ಬೇಯಿಸದೇ ಹಾಗೇ ತಿನ್ನಬಹುದಂತೆ” ಅಂತೆಲ್ಲಾ ಕಥೆ ಕೇಳಿದ ಜನ ಇಷ್ಟಪಟ್ಟು ಕೊಳ್ಳತೊಡಗಿದರು. ಕೆಲವರು “ಇದೆಂತಾ ಮಾರ್ರೆ! ತಿನ್ನೋಕೆ ಮುಂಚೆ ಇಷ್ಟೆಲ್ಲಾ ಕಟ್ ಮಾಡಬೇಕು. ಅಲ್ಲಲ್ಲಿ ಬೇರುಗಳುಂಟು, ಅವೆಲ್ಲಾ ವೇಸ್ಟೇಜು, ಕಷ್ಟದ ಕೆಲಸ” ಅಂತೆಲ್ಲಾ ಟಿಪಿಕಲ್ ಗುಜರಾತಿ ಕಂಪ್ಲೆಂಟುಗಳನ್ನೂ ಮಾಡಿದರು. ವಲ್ಲಭಭಾಯಿ ಅದಕ್ಕೂ ಉಪಾಯಗಳನ್ನು ಕಂಡುಹಿಡಿದರು. ಬೇರೆ ಬೇರೆ ರೀತಿಯ ಸಾಗುವಳಿ ವಿಧಾನಗಳನ್ನು ಅನುಸರಿಸಿ, ಒಳ್ಳೆಯ ತಳಿಗಳನ್ನೇ ಮುಂದುವರಿಸಿ ಕಸಿಮಾಡಿ ಬೇರುಗಳನ್ನು ಕಡಿಮೆ ಮಾಡಿದರು. ನಿಧಾನವಾಗಿ ಕೀಳುವುದರ ಮೂಲಕ ಇಡೀ ಕ್ಯಾರೆಟ್ಟಿನ ಆಕಾರವೂ ಹಾಳಾಗದಂತೆ ನೋಡಿಕೊಂಡರು. ಕೆಲ ತಿಂಗಳುಗಳಲ್ಲೇ ಜನರ ಕಂಪ್ಲೆಂಟುಗಳು ನಿಂತವು. ವ್ಯಾಪಾರವೂ ಹೆಚ್ಚಿತು.
ಹೀಗಿದ್ದಾಗ ಒಂದು ದಿನ, ಜುನಾಗಡದ ನವಾಬರಾದ ಮುಹಮ್ಮದ್ ಮಹಾಬತ್ ಖಾನ್ – 3 ಬಳಿ ವಲ್ಲಭಭಾಯಿಯ ಈ ಹೊಸಾ ತರಕಾರಿಯ ವಿಷಯ ತಲುಪಿತು. ತರಕಾರಿಯನ್ನು ಬಹು ಇಷ್ಟಪಟ್ಟ ನವಾಬ್, ತಮ್ಮ ಮಹಲಿನಲ್ಲಿ ನಡೆಯುತ್ತಿದ ದೈನಂದಿನ ಲಂಗರ್’ಗೆ ಕ್ಯಾರೆಟ್ ಸರಬರಾಜು ಮಾಡುವಂತೆ ಆದೇಶಿಸಿದರು. ವಲ್ಲಭಭಾಯಿಯ ಅದೃಷ್ಟ ಅಲ್ಲಿಂದ ಮುಂದೆ ಖುಲಾಯಿಸಿತು. ನವಾಬನೇ ಇವರ ರೆಗ್ಯುಲರ್ ಕಸ್ಟಮರ್ ಅಂದ್ರೆ ಸುಮ್ನೆಯಾ? ನಾಲ್ಕೇ ವರ್ಷದಲ್ಲಿ “ವಲ್ಲಭಭಾಯಿ ವಸ್ರಾಂಭಾಯಿ ಮರ್ವಾನಿಯ” ಕ್ಯಾರೆಟ್ ಕಿಂಗ್ ಆದರು. 1947ರ ದೇಶ ವಿಭಜನೆಯ ನಂತರ ಮಹಾಬತ್ ಖಾನ್, ಜುನಾಗಡ್ ಬಿಟ್ಟು ಕರಾಚಿಯಲ್ಲಿ ನೆಲೆಸಲು ತೆರಳಿದರು. ಇವತ್ತಿಗೂ “ಜುನಾಗಡದ ನವಾಬರು ನನಗೆ ನನ್ನ ಕ್ಯಾರೆಟ್ಟಿನ 42 ರೂಪಾಯಿ ಕೊಡಲಿಕ್ಕುಂಟು” ಅಂತಾ ಬೊಚ್ಚುಬಾಯಿ ಬಿಟ್ಟು ನಗ್ತಾರೆ, ವಲ್ಲಭಭಾಯಿ. ಲಂಗರಿನ ಕಾಂಟ್ರಾಕ್ಟ್ ಕಳೆದುಕೊಂಡ ವಲ್ಲಭಭಾಯಿಗೆ ಮತ್ತೆ ತಮ್ಮ ಮೊದಲ ಮಾರುಕಟ್ಟೆಯನ್ನೇ ಅವಲಂಬಿಸಬೇಕಾಯ್ತು. ಆದರೆ ಅಷ್ಟರಲ್ಲಾಗಲೇ ಹೆಸರು ಎಲ್ಲೆಡೆ ಹರಡಿದ್ದರಿಂದ, ಬಿಸಿನೆಸ್ ನಿಲ್ಲಲಿಲ್ಲ.
ಮುಂದೆ ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡಿ, ವಲ್ಲಭಭಾಯಿ ಮತ್ತು ಅಣ್ಣ-ತಮ್ಮಂದಿರು ತಮ್ಮ ಕ್ಯಾರೆಟ್ಟಿನ ಇಳುವರಿಯನ್ನು ಹೆಚ್ಚಿಸಿದರು. ಹನಿನೀರಾವರಿ, ಹಸಿಗೊಬ್ಬರ ಮುಂತಾದ ವಿಧಾನಗಳಿಂದ ಒಳ್ಳೆಯ ಬೆಳೆ ಬೆಳೆದರು. 4 ಎಕರೆಯಲ್ಲಿದ್ದ ವ್ಯವಸಾಯವನ್ನು 40 ಎಕರೆಗೆ ವಿಸ್ತರಿಸಿದರು. ಸಾವಯವ ಕೃಷಿಯನ್ನು ಎಂದೂ ಕೈಬಿಡದ ವಲ್ಲಭಭಾಯಿ ಸುತ್ತಲಿನ ರೈತರಿಗೂ ಸಾವಯವ ಕೃಷಿಯ ಹುಚ್ಚು ಹಿಡಿಸಿದರು. ಬರೇ ಕ್ಯಾರೆಟ್ ಬೆಳೆಯುವುದು ಮಾತ್ರವಲ್ಲದೇ, 1985ರಲ್ಲಿ ತಮ್ಮಲ್ಲಿದ್ದ ಅತ್ಯುತ್ತತ್ತಮ ತಳಿಯ ಕ್ಯಾರೆಟ್ಟಿನ ಬೀಜವನ್ನು ಅಭಿವೃದ್ಧಿಪಡಿಸಿ ರೈತರಿಗೆ ಹಂಚಲಾರಂಭಿಸಿದರು. ಅವರು ಕ್ಯಾರೆಟ್ ಬೆಳೆಯ ಬೇಡಿಕೆಯ ಅರಿವಿದ್ದ ರೈತರು, ನಿಧಾನಕ್ಕೆ ತಮ್ಮ ಜಮೀನಿನಲ್ಲೂ ವಲ್ಲಭಬಾಯಿಯವರ ಕ್ಯಾರೆಟ್ ತಳಿಯನ್ನು ಬೆಳೆಯಲಾರಂಭಿಸಿದರು. ನಿಧಾನಕ್ಕೆ ಬೀಜದ ಬೇಡಿಕೆಯೂ ಹೆಚ್ಚಿತು. ಆ ನಿರ್ದಿಷ್ಟ ತಳಿಯ ಬೀಜ ಅಭಿವೃದ್ಧಿಪಡಿಸಲು ಆರಂಭಿಸಿದ ನಂತರ, ಜಮೀನಿನ ಸುತ್ತಮುತ್ತ ಜೇನುಹುಳಗಳ ಸಂಖ್ಯೆ ಗಣನೀಯವಾಗಿ ಏರಲಾರಂಭಿಸಿದ್ದರಿಂದ, ವಲ್ಲಭಭಾಯಿ ಈ ಕ್ಯಾರೆಟ್ ತಳಿಗೆ ‘ಮಧುವನ ಗಜ್ಜರಿ’ ಎಂಬ ಹೆಸರಿಟ್ಟರು. ಇಂದಿಗೂ ವಲ್ಲಭಭಾಯಿಯವರ ಕುಟುಂಬ ಈ ತಳಿಯನ್ನು ಸಂರಕ್ಷಿಸಿ, ಬೆಳೆಸಿಕೊಂಡು ಬಂದಿದೆ. ಈ ಮಧುವನ ಗಾಜರ್’ನ ಇಂದಿನ ತಳಿ, ತನ್ನ ತೂಕ, ಉದ್ದ ಮತ್ತು ಸಿಹಿಗೆ ಹೆಸರುವಾಸಿ. ಹೆಕ್ಟೇರಿಗೆ 40ರಿಂದ 50 ಟನ್ ಇಳುವರಿ ಕೊಡುತ್ತದೆ. ಗುಜರಾತ್, ರಾಜಾಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ರೈತನ ಕೈಹಿಡಿದ ಈ ಬೆಳೆ, ಬಹಳ ಯಶಸ್ಸುಕಂಡಿದೆ.
2016-17ರ ಖಾರಿಫ್ ಸಮಯದಲ್ಲಿ National Innovation Foundation of India, ವಲ್ಲಭಭಾಯಿಯವರ ಮಧುವನ್ ಗಾಜರ್ ತಳಿಯ ಬೇರೆ ಬೇರೆ ಸ್ಥಳಗಳ ಇಳುವರಿಯ ಮೇಲೆ ಸಂಶೋಧನೆ ನಡೆಸಿ, ಬೇರೆಲ್ಲಾ ಕ್ಯಾರೆಟ್ ತಳಿಗಳಿಗಿಂತಾ ಹೆಚ್ಚು ಇಳುವರಿ (ಹೆಕ್ಟೇರಿಗೆ 74.2 ಟನ್) ಮತ್ತು ಪ್ರತಿಗಿಡಕ್ಕೆ ಅತೀ ಹೆಚ್ಚು ತೂಕದ ಕಾಯಿಪಲ್ಲೆ (ಗಿಡಕ್ಕೆ 275 ಗ್ರಾಂ) ಬೆಳೆಯುತ್ತದೆಂದು ಘೋಷಿಸಿತು. ಹಾಗೂ ಈ ಸುಧಾರಿತ ತಳಿಯ ಬೆಳವಣಿಗೆಯಲ್ಲಿ ವಲ್ಲಭಭಾಯಿಯವರ ಪರಿಶ್ರಮವನ್ನು ಅಂಗೀಕರಿಸುತ್ತಾ 2017ರ National Grassroots Innovation ಪ್ರಶಸ್ತಿಯನ್ನು ನೀಡಿತು.
ಎರಡು ವರ್ಷದ ಬಳಿಕ ಅಂದರೆ 2019ರಲ್ಲಿ ವಲ್ಲಭಭಾಯಿ ಪದ್ಮಶ್ರೀ ಪುರಸ್ಕೃತರಾದರು.
ಅಂದಹಾಗೆ ಬರೀ ಸಾವಯುವ ಕೃಷಿಯನ್ನು ಮಾಡಿದ್ದಷ್ಟೇ ಅಲ್ಲ, ವಲ್ಲಭಭಾಯಿ ಮತ್ತವರ ಕುಟುಂಬ ತಮ್ಮ ಹೊಲದಲ್ಲಿ ಕೆಲಸ ಮಾಡೋಕೆ ಇದುವರೆಗೂ ಯಾವ ಕೆಲಸಗಾರರನ್ನೂ ನೇಮಿಸಿಕೊಂಡಿಲ್ಲ. ಮನೆಯವರಷ್ಟೇ ಹಾಗೂ ಮನೆಯವರೆಲ್ಲರೂ ತಮ್ಮನ್ನು ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅರವಿಂದ್ ಭಾಯಿಯವರ ಪ್ರಕಾರ ಅವರ ಕುಟುಂಬ, ಈ ಕ್ಯಾರೆಟ್ ಕೃಷಿಯಿಂದ ಎಕರೆಗೆ ಒಂದು ಲಕ್ಷದವರೆಗೂ ದುಡಿಯುತ್ತಿದೆ. ಇದನ್ನು ಬೆಳೆಯುವ ಆಸಕ್ತಿಯುಳ್ಳವರು ಯಾರೇ ಬಂದರೂ, ಈ ಕ್ಯಾರೆಟ್ ಬೆಳೆಯ ಬಗ್ಗೆ ತಿಳಿಸಿಕೊಡಲು ಉತ್ಸುಕರಾಗಿದ್ದಾರೆ. 95ರ ವಯಸ್ಸಿನ ವಲ್ಲಭಭಾಯಿ ಈಗಲೂ ವಾರಕ್ಕೆರಡು ಬಾರಿ ತನ್ನ ಹೊಲಗದ್ದೆಗಳಿಗೊಂದು ಬೀಟ್ ಹಾಕುತ್ತಾರೆ. ಇವರ ಮುಂದಾಳತ್ವದಲ್ಲಿ, ಮಗ ಅರವಿಂದ್’ಭಾಯಿ ಮತ್ತವರ ಕುಟುಂಬ ಈಗಲೂ ಕ್ಯಾರೆಟ್ ವ್ಯವಸಾಯವನ್ನು ಮುಂದುವರಿಸಿದ್ದಾರೆ.
ಲೇಖನ ಓದಿದೆ, ಒಂದೇ ಉಸಿರಿಗೆ ಓದಿಸಿಕೊಂಡು ಹೋಯಿತು. ನಿರೂಪಣೆ ಚೆನ್ನಾಗಿದೆ.