ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 20, 2019

1

ನೋಡಿ ಸ್ವಾಮಿ .. ನಾವಿರೋದು ಹೀಗೆ.. !!

‍ನಿಲುಮೆ ಮೂಲಕ

-‌ ಸುಜಿತ್‌ ಕುಮಾರ್

downloadಮೊನ್ನೆ ಆ ದೃಶ್ಯಗಳನ್ನು ನೋಡಿ ಯಾಕೋ ನಮ್ಮ ಶಂಕರ್ ನಾಗ್ ನೆನಪಾದ್ರು. ಅದು ಶಂಕರ್ ನಾಗ್ ಅನ್ನೋದಕ್ಕಿಂತ ಶಂಕರ್ ನಾಗ್ ಅಭಿನಯದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಚಿತ್ರದ ಟೈಟಲ್ ಹಾಡು ನೆನಪಾಯಿತು ಎನ್ನಬಹುದು. ನಗರದ ಗಲ್ಲಿಮೂಲೆಗಲ್ಲಿ ತನ್ನ MAT ಬೈಕಿನ ಮೇಲೆ ಕೂತು ಹಾಡುತ್ತಾ ಸಾಗುವ ಚಿತ್ರದ ದೃಶ್ಯದ ತುಣುಕು, ದಿನ ಬೆಳಗಾದರೆ ಬೆಳ್ಳನೆಯ ಬಟ್ಟೆಗಳನ್ನು ತೊಟ್ಟು ‘ನಾನೇ ಸಾಚಾ ಆತ ಮಾತ್ರ ನೀಚ’ ಎಂಬಂತೆ ಎಲ್ಲೆಂದರಲ್ಲಿ ಬೈಯುವ ಭಾಷಣಗಳನ್ನು ಮಾಡುತ್ತಾ ಓಟಿಗಾಗಿ ಊರೂರು ಸುತ್ತುತ್ತಾ ಕೊನೆಗೆ ಅಪ್ಪಿ ತಪ್ಪಿ ಆತನೇ ಎದುರಿಗೆ ಪ್ರತ್ಯಕ್ಷವಾದರೆ ‘ಹಿಂದಿ ಚೀನೀ ಬಾಯಿ ಬಾಯಿ’ ಎಂಬುವಂತೆ ತಬ್ಬಿಕೊಂಡು ಮುತ್ತಿಡುವುದೊಂದೇ ಬಾಕಿ ಏನೋ ಎಂಬ ಧಾಟಿಯಲ್ಲಿ ನಟಿಸುತ್ತಾ ನಿಲ್ಲುವ ರಾಜಕಾರಣಿಗಳನ್ನು ನೆನೆಪಿಸುತ್ತಿತ್ತು. ಅವರುಗಳ ಹಿಂದೆಯೇ ನಮ್ಮ ಶಂಕರ್ ಗುರು ‘ನೋಡಿ ಸ್ವಾಮಿ ಇವ್ರ್ ಇರೋದೇ ಹೀಗೆ’ ಎಂದು ಹಾಡಿದಂತೆ ಭಾಸವವಾಗುತ್ತಲಿತ್ತು. ನಿಂತ ನೆರಳಿಗೆ ಆಗದ ಮಾಜಿ ಸಿಎಮ್ ಗಳಿಬ್ಬರು ವೇದಿಕೆಯೊಂದರ ಮೇಲೆ ಕೈ ಕೈ ಕುಲುಕುತ್ತಾ ‘ಪಾಲಿಟಿಕ್ಸ್ ಅಪಾರ್ಟ್, ನಾವಿಬ್ಬರು ಅತ್ಯುತ್ತಮ ಸ್ನೇಹಿತರು’ ಎಂದಾಗ ನೆರೆದಿದ್ದ ನೂರಾರು ಅಭಿಮಾನಿಗಳು ತಲೆಯನ್ನು ಕೆರೆದುಕೊಳ್ಳುತ್ತಾ ಒಬ್ಬರನ್ನೊಬ್ಬರು ಮಿಕ ಮಿಕ ನೋಡತೊಡಗಿದಂತೂ ಸುಳ್ಳಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳಾಗಿ ಅಂತವರ ಬಾಯಿಂದ ಇಂಥ ಹಿರಿಯ ಮಾತುಗಳು ಬರುವುದು ತಪ್ಪೇನಿಲ್ಲ. We Should Appreciate that. ಆದರೆ ಇಂದು ಹೀಗಂದು ನಾಳೆ ಮತ್ತದೇ ಮೈ ಮೈ.. ತು ತು .. ಎಂದು ಬೆಂಕಿಕಾರುವ ಮಾತುಗಳಾದರು ಏತಕ್ಕೆ ಸ್ವಾಮಿ? ಮಿಗಿಲಾಗಿ ಇಂತಹ ಪೊಳ್ಳು ಮಾತುಗಳ ಸರದಾರರಾಗಿ ಅವರುಗಳಿಗೇ ಇರದ ವೈರತ್ವವನ್ನು ಒಬ್ಬ ಕಾಮನ್ ಸಿಟಿಸನ್ ಆಗಿ ನಾವ್ಯಕ್ಕೆ ಕಟ್ಟಿಕೊಳ್ಳಬೇಕು ಹೇಳಿ?

ಅದು ಐವತ್ತನೇ ದಶಕದ ಕೊನೆಯ ವರ್ಷಗಳು. ನೆಹರು ನಾಯಕತ್ವದ ಸರ್ಕಾರದ ನಡೆಗಳೆಲ್ಲವೂ ಸುದ್ದಿಯಷ್ಟೇ ಆಗುತ್ತಿರಬೇಕಾದರೆ ಇತ್ತ ಕಡೆ ಪಾರ್ಲಿಮೆಂಟಿನಲ್ಲಿ ತನ್ನ ಮೂವತ್ತು ವರ್ಷದ ಆಸುಪಾಸಿನ ಯುವಕನೊಬ್ಬ ಅಂತಹ ಗಟ್ಟಿ ಸರ್ಕಾರದ ವಿರುದ್ಧವೇ ಅಬ್ಬರದ ಪ್ರಶ್ನೆಗಳನ್ನು ಸುರಿಸುತ್ತಿರುತ್ತಾನೆ. ದೇಶ ನೆಲ ಜಲ ಎನುತ ಮುಂದಿರುವವರ ಬೆವರನ್ನು ಇಳಿಸುತ್ತಿದ್ದ ಆತ ಪತ್ರಕರ್ತನಲ್ಲದೆ ಒಬ್ಬ ಕವಿಯೂ ಹೌದು. ಸಂಸತ್ತಿನ ಮೂಲೆ ಮೂಲೆಗಳಲ್ಲಿ ಮಾರ್ಧನಿಸುತ್ತಿದ್ದ ಆತನ ಧ್ವನಿ ಪ್ರಧಾನಿ ನೆಹರುರವರ ಕಿವಿಯನ್ನು ಮುಟ್ಟಲು ಹೆಚ್ಚು ಸಮಯ ಹಿಡಿಯಲಿಲ್ಲ. ಅವರೂ ನೋಡಿದರು. ಕೇಳಿದರು. ಪ್ರತಿಪಕ್ಷದವನಾದರೂ ಆತನ ಪ್ರತಿ ಪ್ರಶ್ನೆಯ ಆಳವನ್ನು ಅರಿತರು. ಕೆಲ ಸಮಯದ ನಂತರ ಆತನ ಗುಣನಡತೆಗೆ ಆಲ್ಮೋಸ್ಟ್ ಇಂಪ್ರೆಸ್ ಆಗಿದ್ದ ನೆಹರು ವಿದೇಶೀಯರೊಬ್ಬರಿಗೆ ಈ ಯುಂಗ್ ವ್ಯಕ್ತಿಯನ್ನು ಪರಿಚಯಿಸುತ್ತಾ ‘ನೋಡಿ ಸ್ವಾಮಿ, ಈತ ಮುಂದೊಂದು ದಿನ ನಮ್ಮ ದೇಶದ ಪ್ರಧಾನಿಯಾಗುತ್ತಾನೆ’ ಎಂದು ಹೆಮ್ಮೆಯಿಂದ ಹೇಳುತ್ತಾರಂತೆ. ಅದು ನೆಹರುರವರ ಮಾತಿನ ಜಾದುವೋ ಏನೋ ಅದಾದ ನಾಲ್ಕು ದಶಕಗಳ ನಂತರ ಆತ ಹತ್ತನೇ ಪ್ರಧಾನಿಯಾಗಿ ದೇಶದ ಚುಕ್ಕಾಣಿಯನ್ನು ಹಿಡಿದಿದ್ದ! ಅಂತಹ ಪಕ್ಷಾತೀತ ಗೌರವವನ್ನು ಗಳಿಸಿದ್ದ ಈ ನಾಯಕ 1971 ರ ಬಾಂಗ್ಲಾ ವಿಮೋಚನೆಯಲ್ಲಿ ಇಂದಿರಾ ಗಾಂಧಿಯವರ ದೃಢನಿರ್ಧಾರಕ್ಕೆ ಮೆಚ್ಚಿ ತಾನು ಜನಸಂಘದ ನಾಯಕನಾದರೂ ಈಗಿನ ರಾಜಕಾರಣಿಗಳಂತೆ ‘ಪ್ರೂಫ್ ಕೊಡ್ರಪ್ಪ’ ಎಂಬುದ ಬಿಟ್ಟು ಆಕೆಯನ್ನು ಮುಕ್ತವಾಗಿ ಬೆಂಬಲಿಸಿರುವುದೂ ಉಂಟು. ಎಂಬತ್ತರ ದಶಕದಲ್ಲಿ ರಾಜೀವ್ ಗಾಂಧಿ ಪ್ರೈಮ್ ಮಿನಿಸ್ಟರ್ ಆಗಿದ್ದ ಕಾಲವದು. ಅದಾಗಲೇ ತನ್ನ ಒಂದು ಕಿಡ್ನಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಈ ನಾಯಕನಿಗೆ ಉಳಿದ ಮತ್ತೊಂದು ಕಿಡ್ನಿಯೂ ಸಮಸ್ಯೆಯನ್ನು ಕೊಡತೊಡಗಿತು. ಇಲ್ಲಿಯೇ ಚಿಕಿತ್ಸೆ ಏನುತಾ ಸೂಜಿಮೊನೆಯಷ್ಟೂ ಎಡವಟ್ಟಾದರೆ ಇರುವ ಒಂದು ಕಿಡ್ನಿಗೂ ಆಪತ್ತು. ಆಗ ನಮ್ಮ ದೇಶ ಸ್ವಾವಲಂಬಿಯಾಗಲು ಸೂಪರ್ ಕಂಪ್ಯೂಟರನ್ನು ಸಿದ್ಧಪಡಿಸುವ ಗುಂಗಿನಲ್ಲಿತ್ತು. ಆದರೆ ಕಿಡ್ನಿಯನ್ನು ರೀಪೇರಿ ಮಾಡುವ ಸೂಪರ್ ತಂತ್ರಜ್ಞಾನಗಳಿಗಾಗಿ ಮತ್ತದೇ ಅಮೇರಿಕಾದ ಕದವನ್ನೇ ತಟ್ಟಬೇಕಿದ್ದಿತು. ಹಾಗಾಗಿ ಈತ ಶತಾಯ ಗತಾಯ ಅಂದು ಅಮೆರಿಕವನ್ನು ತಲುಪಬೇಕಿದ್ದಿತು. ಅಮೇರಿಕಾದ ಪ್ರವಾಸ, ಮೆಡಿಕಲ್ ಬಿಲ್ಲುಗಳು, ಊಟ ತಿಂಡಿಯ ಖರ್ಚು ಏನು ಸಾಮಾನ್ಯದ ಮಾತೆ? ಮೇಲಾಗಿ ಹೆಂಡತಿ ಮಕ್ಕಳಿಲ್ಲದ ಈ ಆಸಾಮಿ ತನ್ನೆಲ್ಲವನ್ನು ದೇಶಕ್ಕೆ ಸಮರ್ಪಿಸಿದ ರಾಜಕೀಯ ಸನ್ಯಾಸಿ. ಸಮಸ್ಯೆ ಉಲ್ಬಣಿಸತೊಡಗಿತು. ಇನ್ನೇನು ಕಾಲ ಮಿತಿಮೀರಿತು ಎನ್ನುವಾಗ ಈತನ ನೆರವಿಗೆ ಬಂದವರೇ ಪ್ರಧಾನಿ ರಾಜೀವ್ ಗಾಂಧಿ! ಭಾರತದಿಂದ ವಿಶ್ವಸಂಸ್ಥೆಗೆ ಹೋಗುವ ಸದಸ್ಯರ ಪಟ್ಟಿಯಲ್ಲಿ ಈತನ ಹೆಸರನ್ನು ಸೇರಿಸಿ ಅವರನ್ನು ಅಮೇರಿಕಾದ ವಿಮಾನವನ್ನು ಹತ್ತಿಸಿದರಂತೆ. ಅಲ್ಲದೆ ಇವರು ಸಂಪೂರ್ಣ ಗುಣಮುಖರಾದ ಮೇಲೆಯೇ ವಾಪಸ್ಸು ಕರೆತರುವಂತೆಯೂ ಸೂಚಿಸಿದರಂತೆ. ಪಕ್ಷ ಪ್ರತಿಪಕ್ಷಗಳೆಂದರೆ ಸಾವು, ಕೊಲೆ, ಒಡೆತ, ಬಡಿತ ಎಂದಾಗಿರುವ ಪ್ರಸ್ತುತ ಕಾಲದಲ್ಲಿ ಇಂತಹ ನಾಯಕರುಗಳ ಅಭಾವ ಬಹಳಷ್ಟು ಇದೆ. ಮುಂದೆ 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ಮಾತಾಡಿದ ಈ ನಾಯಕ ‘ಇಂದು ನಾನು ಜೀವಂತವಾಗಿರಲು ಕಾರಣ ನನ್ನ ತಮ್ಮನಂತಿದ್ದ ದಿವಗಂತ ರಾಜೀವ್ ಗಾಂಧಿ’ ಎಂದು ಕೆಲವರ್ಷಗಳ ಹಿಂದೆ ಜರುಗಿದ ಘಟನೆಯನ್ನು ಮೆಲುಕು ಹಾಕಿದರಂತೆ. ಒಹ್, ಹಾಗಂತ ಈ ನಾಯಕ ಯಾರೆಂದು ಹೇಳಲೇ ಇಲ್ಲ. ಆತ ಮತ್ಯಾರು ಅಲ್ಲ. ಕಳೆದ ವರ್ಷ ಇಹಲೋಕ ತ್ಯಜಿಸಿದ ಸರ್ವಪಕ್ಷಗಳಿಂದಲೂ ಅಜಾತಶತ್ರುವೆನಿಸಿಕೊಂಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ.

ಇಂತಹ ಲೋಕಮೆಚ್ಚಿದ ನಾಯಕರ ಅಭಾವ ಹೆಚ್ಚಿದೆ… ದೇಶ ಇಂದು ಜಾತಿ ರಾಜಕಾರಣದಲ್ಲಿ ಒಡೆದು ಚೂರಾಗಿದೆ… ಯಾವೊಬ್ಬ ನಾಯಕನಲ್ಲೂ ನಾನು ನಾನೆಂಬ ಅಹಂ ಬಿಟ್ಟರೆ ನಾವು ನಾವೆಂಬ ಮಾತಂತೂ ಕೇಳುವುದೇ ಇಲ್ಲ… ಅಂತೆಲ್ಲಾ ನಾವುಗಳು ಗೊಣಗುತ್ತಲೇ ಇರುತ್ತೇವೆ. ರಾಜಕಾರಣಿಗನ್ನು ಜರಿಯುತ್ತಲೇ ಇರುತ್ತಿವೆ. ಅಲ್ಲೇ ಇರುವುದು ನೋಡಿ ನಮ್ಮ ತಪ್ಪು. ಜನ್ಮವಿತ್ತ ಅಪ್ಪ ಅಮ್ಮಂದಿರ ಮಾತಿಗೇ ಮೂರುಕಾಸಿನ ಬೆಲೆ ಕೊಡದ ಈ ಕಾಲದಲ್ಲಿ ಹೆರದೆ, ಒರದೆ, ಸಾಕದೆ, ಸಾಲುಹದೆ ಬಿಳಿಬಟ್ಟೆಯನ್ನು ತೊಟ್ಟು ತಿರುಗುವ ವ್ಯಕ್ತಿಗಳಿಗೇಕೆ ಈ ಮಟ್ಟಿನ ಪ್ರಾಮುಖ್ಯತೆ? ಅವರ ಮಾತುಗಳಿಗೇಕೆ ವೇದವಾಕ್ಯಗಳಂತಹ ಬಿಲ್ಡಪ್ಪು? ತನ್ನ ಜೀವಮಾನದಲ್ಲೇ ಮೂರಕ್ಷರ ಓದದ, ಯಾವುದಾದರೊಂದು ವಿಷಯದಲ್ಲಿ ಎಳ್ಳಷ್ಟೂ ಜ್ಞಾನ ಸಂಪಾದಿಸದ, ಸುಟ್ಟು ಕರಕಲಾದ ಮಸಿಯಂತಹ ಸಾರ್ವಜನಿಕ ಜೀವನದ ಹಿಸ್ಟರಿಯನ್ನು ಹೊಂದಿರುವ ವ್ಯಕ್ತಿಗಳು ಕಣ್ಣು ಮುಚ್ಚಿ ಒದರುವ ಮಾತುಗಳನ್ನು ಕಣ್ಣು ಮುಚ್ಚಿಯೇ ಪಾಲಿಸುವ ಸುಶಿಕ್ಷಿತ ವರ್ಗಗಳೇ ಇಂದಿವೆ. ಅದರಲ್ಲೇನು ತಪ್ಪಿದೆ? ದೇಶ ನಡೆಸಲು ಡಿಗ್ರಿ ಸರ್ಟಿಫಿಕೇಟುಗಳಿಗಿಂತ ರಾಜಕೀಯ ನೈಪುಣ್ಯತೆ, ದೇಶಪ್ರೇಮ, ಧೈರ್ಯ ಹಾಗು ಅಧಮ್ಯ ಛಲವೂ ಬೇಕಲ್ರಿ ಎನ್ನಬಹುದು, That’s right. ಈ ಮಾತು ನೂರಕ್ಕೆ ನೂರು ಸತ್ಯ. ಆದರೆ ಅಂತಹ ದೇಶ ನಡೆಸುವ ಸುಕುಮಾರರು ದೇಶದ ಹೆಸರಿನಲ್ಲಿಯೇ ಒಬ್ಬರಿಗೊಬ್ಬರು ಸಾರ್ವಜನಿಕವಾಗಿಯೇ ಬೈದುಕೊಳ್ಳುತ್ತಾ, ಚಪ್ಪಲಿಗಳಲ್ಲಿ ಬಡಿದೊಳ್ಳುತ್ತಾ, ತಾನು ಹುಟ್ಟುವಾಗಲೇ ಜಾತಿ ಧರ್ಮದ ಚರ್ಮವನ್ನು ಧರಿಸಿ ಬಂದವನೇನೋ ಎನುತ ಅನ್ಯಧರ್ಮಿಯರನ್ನು ಚೈಲ್ಡಿಶ್ ಕಾರಣಗಳಿಂದ ಜರಿಯುತ್ತಾ, ಪುಕ್ಸಟೆಯಾಗಿ ಸಿಗುವ ಫೇಮ್ ಹಾಗು ನೇಮ್ ಎನುತ ತನ್ನ ಇಡೀ ಸಂಸಾರದ ತಲೆಗಳನ್ನೆಲ್ಲಾ ರಾಜಕೀಯದ ಅಖಾಡದೊಳಗೆ ತೂರುತ್ತ, ತಾನೇ ತನ್ನ ಹೆಸರಿನ ಪ್ರತಿಮೆಗಳನ್ನು ನಿರ್ಮಿಸಿ ತಾನಾಗಿಯೇ ಪ್ರತಿಷ್ಠಾಪಿಸಿಕೊಳ್ಳುತ್ತಾ, ಒಕ್ಕೂಟ ವ್ಯವ್ಯಸ್ಥೆಯನ್ನೇ ಧಿಕ್ಕರಿಸುತ್ತಾ, ಅಂದು ಉಗಿದು ತೆಗಳಿದ ಪಕ್ಷಗಳನ್ನೇ ಇಂದು ಮೂರು ಬಿಟ್ಟು ಸೇರಿಕೊಳ್ಳುತ್ತಾ, ಒಟ್ಟಿನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ತಲೆಯನ್ನು ತಗ್ಗಿಸುವಂತಹ ಕಾರ್ಯಗಳನ್ನು ಮಾಡುವ ಇಂತಹ ರಾಜಕಾರಣಿಗಳನ್ನು ಬೆಂಬಲಿಸಬೇಕೇ? ಹಿಂಬಾಲಿಸಬೇಕೇ? ಇಂತಹ ವ್ಯಕ್ತಿನಿಷ್ಠ ಸಮಾಜಭ್ರಷ್ಟ ನಾಯಕರುಗಳಿಂದ ಸಮಾಜದ ಸ್ವಾಯತ್ತತೆಯಂತೂ ಕೆಡುವುದು ಇದ್ದದ್ದೇ ಆದರೆ ನಾವುಗಳೇಕೆ ನಮ್ಮ ಸ್ವಾಯತ್ತತೆಯನ್ನು ಕೆಡಿಸಿಕೊಳ್ಳಬೇಕು? ಅವರಾಡುವ ಉಡಾಫೆಯ ಮಾತುಗಳನ್ನು ಸೀರಿಯಸ್ಸಾಗಿ ಪರಿಗಣಿಸಿ ಉತ್ತಮ ನಾಯಕನನ್ನೂ ಸದ್ದಾಂ ಹುಸೇನ್ ಗಳಾಗಿ ಏಕೆ ಪರಿವರ್ತಿಸಬೇಕು. ಸ್ಟೇಜಿನ ಮೇಲೆ ಇಷ್ಟೆಲ್ಲಾ ಅರಚುವ ಇವರು ಕೆಲವೊಮ್ಮೆ ಸದನದ ಒಳಗೆ ಹೆಗಲ ಮೇಲೆ ಹೆಗಲಾಕಿಕೊಂಡು ಮುಸಿ ಮುಸಿ ನಗುವುದ ನೋಡಬೇಕು ಸ್ವಾಮಿ. ದ್ವೇಷದ ಪಾಪ ಮಾತ್ರ ಪಾಪದ ಹಿಂಬಾಲಕರಿಗೆ, ‘ಪಾಲಿಟಿಕ್ಸ್ ಅಪಾರ್ಟ್, ನಾವೆಲ್ಲ ಫ್ರೆಂಡ್ಸ್’ ಎಂಬ ಅವಕಾಶವಾಗಿ ಮಾತುಗಳು ಮಾತ್ರ ಇಂತಹ ನಾಯಕರಿಗೆ!.

ಇಂತಹ ಪರಿಸರದಲ್ಲಿ ಬದಲಾವಣೆ ಎಂಬುದು ಸಾಧ್ಯಕ್ಕೆ ದೂರವಾದ ಮಾತು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹುತ್ತದ ಒಳಗಿನ ವಿಷಭರಿತ ಹಾವುಗಳಂತೆ ಒಂದೊಂದಾಗಿಯೇ ಹೊರಬರುವ ಇವರುಗಳ ನಾಲಿಗೆಗಳು ಸಮಾಜದ ಕಷ್ಟ ನೋವುಗಳಿಗೆ ಮತ್ತಷ್ಟು ಹುಳಿ ಹಿಂಡುವ ಕಾರ್ಯವನ್ನು ಮಾಡುತ್ತವೆ. ಚುನಾವಣೆಯ ಪ್ರಕ್ರಿಯೆ ಇವಕ್ಕೆ ಭಯೋತ್ಪಾದಕರ ವಿರುದ್ಧ ಹೊರಾಡುವ ಯುದ್ಧವೇನೋ ಎಂಬ ಮಟ್ಟಕ್ಕೆ ಮಾರ್ಪಾಡಾಗುತ್ತದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರೆಯುತ್ತದೆ. ನಮ್ಮಂತ ಹಲವರಿಗೆ ಹೀಗಾದ ಪ್ರತಿಭಾರಿಯೂ ಶಂಕರ್ ನಾಗ್ರ MAT ಬೈಕು ನೆನಪಾಗುತ್ತಲೇ ಇರುತ್ತದೆ!

1 ಟಿಪ್ಪಣಿ Post a comment
  1. Krishna
    ಮಾರ್ಚ್ 21 2019

    ಒಂದೇಒಂದು ಕರೆಕ್ಷನ್… ಅದು MAT ಬೈಕ್ ಅಲ್ಲ… ಅದು ಲೂನಾ TFR ಪ್ಲಸ್…:-)

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments