ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 25, 2019

ಕೇರಳ ವರ್ಮ ಪಳಸಿ ರಾಜ.

‍ನಿಲುಮೆ ಮೂಲಕ

– ವರುಣ್ ಕುಮಾರ್

(ವಾರಕ್ಕೊಂದು ವೀರರು)

220px-Veera_Kerala_Varma_Pazhassi_Raja೧೭೯೭, ಕೇರಳದ ವಯನಾಡಿನ ಪೆರಿಯಪಾಸ್ ಎಂಬ ಪ್ರದೇಶವನ್ನು ಬ್ರಿಟೀಷ್ ಕರ್ನಲ್ ಡೋ ಮತ್ತು ತುಕಡಿಯು ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದಿಂದ ಕಾಡಿನ ಮಧ್ಯೆ ಪಯಣವನ್ನು ಮುಂದುವರೆಸಿದರು. ಆದರೆ ಅಂತಹ ದಟ್ಟ ಅರಣ್ಯವಾದಲ್ಲಿ ಒಂದು ಸಣ್ಣ ಶಬ್ದ ಕೇಳಿ ಬಂದರೂ ಎಂತಹವರ ಎದೆಯನ್ನು ಒಂದು ಕ್ಷಣ ನಡುಗಿಸದೇ ಬಿಡದು. ಅಂತಹ ಭಯ ಕರ್ನಲ್ ಡೋ ಅವನಲ್ಲಿಯೂ ಇತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಕೇರಳದ ಸಿಂಹದ ಬಗ್ಗೆ ಭಯವಿತ್ತು. ಇಂತಹ ಭಯದಲ್ಲಿ ಮುಂದುವರೆಯುತ್ತಿರುವಾಗ ಅನಿರೀಕ್ಷಿತವಾದ ದಾಳಿ ತನ್ನ ತಂಡದ ಮೇಲೆ ಶುರುವಾಯಿತು. ನೋಡನೋಡುತ್ತಿದ್ದಂತೆಯೇ ನೂರಕ್ಕೂ ಅಧಿಕ ತನ್ನ ಸೈನಿಕರನ್ನು ಕರ್ನಲ್ ಕಳೆದುಕೊಂಡನು. ‌ಈ ಭಯಂಕರ ಕಾದಾಟದಲ್ಲಿ ೩೦೦ಕ್ಕೂ ಮಿಕ್ಕಿ ಸೈನಿಕರು ಗಾಯಾಳಾದರು. ದಾಳಿ ನಡೆಸಿದ ತಂಡ ಬ್ರಿಟೀಷರಿಗೆ ದಾಳಿ ಎಲ್ಲಿಂದ ನಡೆಯುತ್ತಿದೆ ಎಂಬ ಸಣ್ಣ ಊಹೆಯೂ ಸಿಗದ ರೀತಿಯಲ್ಲಿ ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿದ್ದರು. ದೇಶಾದ್ಯಂತ ಆನೆ ನಡೆದಿದ್ದೇ ಹಾದಿ ಎಂಬಂತೆ ಮೆರೆಯುತ್ತಿದ್ದ ಬ್ರಿಟೀಷ್ ಸಾಮ್ರಾಜ್ಯಕ್ಕೆ ದೊರೆತ ದೊಡ್ಡ ಮರ್ಮಾಘಾತವಾಗಿತ್ತು. ಈ ರೀತಿ ಗೆರಿಲ್ಲಾ ಮಾದರಿ ದಾಳಿಯನ್ನು ರೂಪಿಸಿ ಬ್ರಿಟೀಷರ ಬೆನ್ನೆಲುಬಲ್ಲಿ ಚಳುಕು ಹುಟ್ಟಿಸಿದ ವೀರ ಕೇರಳದ ಸಿಂಹ ಕೇರಳ ವರ್ಮ ಪಳಸಿ ರಾಜ.

೧೭೫೩ ರಂದು ಕೇರಳದ ಪಳಸಿ ಎಂಬಲ್ಲಿ ಜನಿಸಿದ ʼಕೇರಳವರ್ಮʼ ಮಲಬಾರ್ ಪ್ರಾಂತ್ಯದ ರಾಜನಾಗಿದ್ದರು. ೧೮೦೩ ರಲ್ಲಿ ನಡೆದ ಕೊಟ್ಟಿಯೂರ್ ಯುದ್ಧದಲ್ಲಿ ಲಾರ್ಡ್ ಅರ್ಥರ್ ವೆಲ್ಲೆಸ್ಲಿಯನ್ನು ಸೋಲಿಸಿದ ಭಾರತದ ಏಕೈಕ ವೀರ ಕೇರಳಮರ್ಮ. ತನ್ನ ಜನಪರ ಆಡಳಿತ, ಯುದ್ದ ನೈಪುಣ್ಯತೆಯಿಂದಾಗಿ ಕೇರಳದ ಜನತೆ ಇವರನ್ನು ಕೇರಳದ ಸಿಂಹ ಎಂದು ಬಿರುದನ್ನು ನೀಡಿ ಗೌರವಿಸಿದ್ದರು.

ವಯನಾಡ್, ಕೊಟ್ಟಾಯಂ, ಭಾಗಗಳು ಆಗಿನ ಕಾಲದಲ್ಲಿ ಸಾಂಬಾರ ಪದಾರ್ಥಗಳಿಗೆ ಹೆಸರುವಾಸಿಯಾಗಿತ್ತು. ಆದ್ದರಿಂದ ಈ ಭಾಗಗಳಲ್ಲಿ ಬ್ರಿಟೀಷರು ತನ್ನ ಹಿಡಿತವನ್ನು ಬಿಗಿಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಆದರೆ ಅದಕ್ಕೆ ಹೈದರ್ ಅಲಿಯು ಅಡ್ಡಗಾಲಿಟ್ಟಿದ್ದನು, ಮಾತ್ರವಲ್ಲ ಹೈದರ್ ಅಲಿಯು ತನ್ನ ವ್ಯಾಪ್ತಿಯನ್ನು ವಯನಾಡ್ ಭಾಗಗಳಿಗೆ ವಿಸ್ತರಿಸಿದ್ದರಿಂದಾಗಿ ಬ್ರಿಟೀಷರಿಗೆ ಈ ಭಾಗಗಳ ನಿಯಂತ್ರಣ ಮರಿಚೀಕೆಯಾಗಿಯೇ ಉಳಿದಿತ್ತು. ಆದರೆ ಪಳಸಿ ರಾಜನಿಗೆ ಹೈದರ್ ಅಲಿಯ ಬಗ್ಗೆ ಇನ್ನಿಲ್ಲದ ದ್ವೇಷವಿತ್ತು. ವಯನಾಡ್ ಪ್ರದೇಶದಲ್ಲಿ ಬಲವಂತದ ಮತಾಂತರ, ಸುಲಿಗೆ ಹಾಗೂ ಅತ್ಯಾಚಾರಗಳು ಎಗ್ಗಿಲ್ಲದೆ ನಡೆಯುತ್ತಿದ್ದರಿಂದ ಹೈದರ್ ಅಲಿಯನ್ನು ಕೊನೆಗಾಣಿಸಬೇಕಾಗಿತ್ತು. ಇದಕ್ಕಾಗಿ ೧೭೭೪ ರಲ್ಲಿ ತನ್ನ ೨೧ ನೇ ವಯಸ್ಸಿನಲ್ಲಿಯೇ ಆಡಳಿತದ ಚುಕ್ಕಾಣಿಯನ್ನು ಹಿಡಿದುಕೊಂಡು ತನ್ನ ಗೆರಿಲ್ಲಾ ಸೈನಿಕರನ್ನು ವಯನಾಡ್ ಭಾಗಗಳಿಗೆ ಛೂ ಬಿಟ್ಟು ಹೈದರ್ ಅಲಿಯನ್ನು ನಿರಂತರವಾಗಿ ಕಾಡತೊಡಗಿದನು. ನಿರಂತರವಾದ ದಾಳಿಗಳಿಂದಾಗಿ ಹೈದರ್ ಅಲಿಯನ್ನು ಕೇವಲ ಮೈಸೂರು ಪ್ರಾಂತ್ಯಕ್ಕೆ ಸೀಮಿತಗೊಳಿಸಿದ ʼಕೇರಳವರ್ಮʼ ವಯನಾಡನ್ನು ಹೈದರ್ ನ ತೆಕ್ಕೆಯಿಂದ ಬಿಡಿಸಿಕೊಂಡರು. ಮುಂಜಾಗ್ರತಾ ಕ್ರಮವಾಗಿ ವಯನಾಡು ಭಾಗದಲ್ಲಿ ಬುಡಕಟ್ಟು ಜನಾಂಗದ ಪಳೆಯವೀಡನ್ ಚಂದುವನ್ನು ನೇಮಿಸಿ ಹೈದರ್ ಅಲಿಯ ಸೇನೆಗೆ ನಿರಂತರವಾಗಿ ದಾಳಿಯನ್ನು ನಡೆಸುವ ಮೂಲಕ ಹೈರಾಣಾಗಿಸಿದ್ದರು.

ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ʼಕೇರಳವರ್ಮʼ ತನ್ನ ಚಿಕ್ಕಪ್ಪನಾದ ವೀರವರ್ಮನ ಜೊತೆ ಮುನಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತು. ಈ ಕಡೆ ಬ್ರಿಟೀಷರಿಗೆ ಮೈಸೂರು ಪ್ರಾಂತ್ಯದಲ್ಲಿ ಹೈದರ್ ಅಲಿಯು ತಲೆನೋವಾಗಿ ಪರಿಣಮಿಸಿದ್ದನು‌. ಈ ಸಂಧರ್ಭದಲ್ಲಿ ಬ್ರಿಟೀಷರು ಪಳಸಿರಾಜನ ಸಹಾಯವನ್ನು ಯಾಚಿಸಿದರು. ಪಳಸಿರಾಜರಿಗೆ ಹೈದರ್ ಅಲಿಯು ಯಾವತ್ತಿದ್ದರೂ ಅಪಾಯವೇ ಎಂಬುದನ್ನು ಅರಿತು ಬ್ರಿಟೀಷರಿಗೆ ಯುದ್ಧದಲ್ಲಿ ಸಹಾಯ ಮಾಡುವೆನೆಂದು ಭರವಸೆ ಕೊಟ್ಟನು. ಯುದ್ಧದಲ್ಲಿ ಹೈದರ್ ಅಲಿಗೆ ಸೋಲಾಯಿತು. ಆದರೆ ೧೭೭೯ ರಲ್ಲಿ ಹೈದರ್ ಅಲಿಯು ಸೇನಾಧಿಕಾರಿ ಸರ್ದಾರ್ ಖಾನನನ್ನು ಪಳಸಿಯ ಜೊತೆ ಸಂಧಾನಕ್ಕೆ ಕಳುಹಿಸಿ ಕಪ್ಪದ ಬೇಡಿಕೆಯನ್ನು ಇಟ್ಟು ತಲಶೇರಿ ಭಾಗವನ್ನು ಮೈಸೂರು ಭಾಗಕ್ಕೆ ಸೇರಿಸಬೇಕೆಂದು ಬೇಡಿಕೆಯನ್ನು ಮುಂದಿಟ್ಟನು. ಈ ಷರತ್ತನ್ನು ಒಪ್ಪದ ಪಳಸಿಯು ಇದರ ಬದಲು ಯುದ್ಧವೇ ಲೇಸೆಂದು ತಿಳಿದು ಸರ್ದಾರ್ ಖಾನ್ ನೇತೃತ್ವದ ಹೈದರ್ ಸೇನೆಯನ್ನು ಬಗ್ಗುಬಡಿದು ಹೈದರ್ ಅಲಿಯ ಜಂಘಾಬಲವನ್ನು ಉಡುಗಿಸಿದರು. ಆದರೆ ಇತ್ತ ಕೆಲ ಸಮಯದಲ್ಲೇ ಹೈದರ್ ಅಲಿಯು ರೋಗಗಳ ಭಾದೆಯಿಂದ ಸಾವನ್ನಪ್ಪಿದನು.
ಹೀಗಾಗಿ ಬ್ರಿಟೀಷರಿಗೆ ತಕ್ಕ ಮಟ್ಟಿನ ಸಮಾಧಾನ ಮೈಸೂರು ಪ್ರಾಂತ್ಯದಲ್ಲಿ ಉಂಟಾಯಿತು.

ಈ ಸಂತೋಷ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಟಿಪ್ಪು ಸುಲ್ತಾನ್ ತನ್ನ ತಂದೆಯ ಮರಣಾನಂತರ ಅಧಿಕಾರದ ಗದ್ದುಗೆಯನ್ನು ಹಿಡಿದು ತಂದೆಯ ಕ್ರೌರ್ಯಗಳನ್ನು ಈತನೂ ಮುಂದುವರೆಸಿದನು. ಅದರಲ್ಲಿಯೂ ಮಂಗಳೂರಿನ ಪ್ರಾಂತ್ಯದಲ್ಲಿ ನಡೆದ ನೆತ್ತರಕೆರೆಯಂತಹ ದುರಂತದ ಕತೆಗಳು ದೂರದ ಮಲಬಾರಿಗೂ ಕೇಳಿಬರುತ್ತಿತ್ತು. ಒಂದನೇ ಆಂಗ್ಲೋ- ಮೈಸೂರು ಯುದ್ಧದ ಗೆಲುವು ಟಿಪ್ಪುವಿನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿ ವಯನಾಡ್ ಪ್ರಾಂತ್ಯದ ಭಾಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬ್ರಿಟೀಷರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದನು. ಅಲ್ಲದೆ ಪಳಸಿರಾಜನಿಗೂ ಆಗಾಗ್ಗೆ ಟಿಪ್ಪುವಿನ ಕ್ರೌರ್ಯಗಳ ಬಗ್ಗೆ ತಿಳಿಯುತ್ತಿದ್ದರಿಂದ ಅವನ ಆಡಳಿತವನ್ನು ಹೇಗಾದರೂ ಕೊನೆಗಾಣಿಸಬೇಕೆಂದು ತೀರ್ಮಾನಿಸಿದರು. ಬ್ರಿಟೀಷರು ಮತ್ತೊಮ್ಮೆ ಪಳಸಿಯ ಮೊರೆ ಹೋದರು. ಆದರೆ ಈ ಬಾರಿ ಪಳಸಿಯು ಯುದ್ಧದಲ್ಲಿ ಗೆದ್ದರೆ ವಯನಾಡು ಭಾಗಗಳನ್ನು ತನಗೆ ನೀಡಬೇಕೆಂದು ಬ್ರಿಟೀಷರಿಗೆ ಷರತ್ತು ವಿಧಿಸಿದರು. ಷರತ್ತಿಗೆ ಒಪ್ಪಿದ ಬ್ರಿಟೀಷರು ಪಳಸಿಯ ಜೊತೆಗೂಡಿ ೨ನೇ ಮೈಸೂರು ಯುದ್ಧದಲ್ಲಿ ಟಿಪ್ಪುವಿಗೆ ಸೋಲುಣಿಸಿದರು. ಸೋಲುಂಡ ಟಿಪ್ಪು ವಯನಾಡ್ ಭಾಗಗಳನ್ನು ಕಪ್ಪ ಕಾಣಿಕೆಯ ಭಾಗವಾಗಿ ಕೊಡಬೇಕಾಗಿ ಬಂತು‌. ಆದರೆ ಬ್ರಿಟೀಷರು ಮಾತ್ರ ತನ್ನ ತೆಕ್ಕೆಯಲ್ಲಿ ವಯನಾಡನ್ನು ಇರಿಸಿ ಪಳಸಿಯು ಹಾಕಿದ ಕರಾರನ್ನು ಮುರಿದರು. ಇತ್ತ ವೀರವರ್ಮನ ಜೊತೆ ಪಳಸಿಯ ಸಂಬಂಧ ಹದಗೆಟ್ಟಿದ್ದರಿಂದ ಸಂಧರ್ಭದ ಲಾಭವನ್ನು ಪಡೆದ ಬ್ರಿಟೀಷರು ವೀರವರ್ಮನನ್ನು ಕೊಟ್ಟಾಯಂ ಭಾಗದ ಮುಖ್ಯಸ್ಥರನ್ನಾಗಿ ನೇಮಿಸಿ ಆ ಭಾಗದಲ್ಲಿ ತೆರಿಗೆ ವಸೂಲಿಯ ಜವಾಬ್ದಾರಿಯನ್ನು ವೀರವರ್ಮನಿಗೆ ವಹಿಸಿದರು. ಇದರಿಂದ ಕುಪಿತಗೊಂಡ ಪಳಸಿಯು ತನ್ನ ಸೇನಾ ತುಕಡಿಯೊಂದಿಗೆ ತೆರಳಿ ಅಲ್ಲಿಯ ಜನರಿಗೆ ಯಾವುದೇ ತೆರಿಗೆಯನ್ನು ನೀಡಬಾರದಾಗಿ ಆಜ್ಞೆಯನ್ನು ಕೊಟ್ಟು ವೀರವರ್ಮನ ಆಟಾಟೋಪಗಳಿಗೆ ಅಲ್ಪವಿರಾಮ ಹಾಕಿದರು. ಆದರೆ ೧೭೯೫ರಲ್ಲಿ ಬ್ರಿಟೀಷರು ವೀರವರ್ಮನ ಕರಾರನ್ನು ವಿಸ್ತರಿಸಿ ಮತ್ತೊಮ್ಮೆ ತೆರಿಗೆಯನ್ನು ವಿಧಿಸಿ ಜನರು ದುಡಿದ ಕೃಷಿ ಬೆಳೆಗಳನ್ನು ವಸೂಲಿ ಮಾಡಲಾರಂಭಿಸಿದರು‌, ಪಳಸಿಗೆ ಕೊಲೆಗಾರನ‌ ಪಟ್ಟವನ್ನು ಕೊಟ್ಟು ಬಂಧನಕ್ಕೆ ಆದೇಶಿಸಿದರು. ೧೭೯೬ ರ ಮಧ್ಯ ಭಾಗದಲ್ಲಿ ನೇರವಾಗಿ ಪಳಸಿರಾಜನ ಅರಮನೆಗೆ ದಾಳಿ ನಡೆಸಿ ಅಲ್ಲಿಯ ಆಭರಣಗಳು, ಸ್ವತ್ತುಗಳನ್ನು ವಶಪಡಿಸಿಕೊಂಡರು. ಆದರೆ‌‌ ಪಳಸಿ ಮಾತ್ರ ಇವರ ಕೈಗೆ ಸಿಗದೆ ವಯನಾಡಿನ ಭಾಗಕ್ಕೆ ಪರಾರಿಯಾಗಿ ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಸಜ್ಜಾಗಲು ತಯಾರಾದರು.

೧೭೯೭-೧೮೦೦ ರ ಸಮಯದಲ್ಲಿ ಬ್ರಿಟೀಷರಿಗೆ ಪಳಸಿರಾಜ ಸಿಂಹಸ್ವಪ್ನವಾಗಿಯೇ ಕಾಡಿರುವುದರಲ್ಲಿ ಸಂಶಯವಿಲ್ಲ. ಪೆರಿಯಪಾಸ್ ನಲ್ಲಿ ನಡೆದ ಅನಿರಿಕ್ಷೀತ ದಾಳಿಯಿಂದ ಬ್ರಿಟೀಷರು ಇನ್ನಿಲ್ಲದಂತೆ ಕಂಗೆಟ್ಟಿದ್ದರು, ಅಲ್ಲದೆ ಪಳಸಿರಾಜನಿಗೆ ಬ್ರಿಟೀಷರ ಬಗೆಗಿನ ಮಾಹಿತಿಗಳನ್ನು ಗೂಢಾಚಾರಿಕೆ ಮೂಲಕ ಬಹಳ ಸುಲಭವಾಗಿ ಸಿಗುತ್ತಿದ್ದರಿಂದ ಗೆರಿಲ್ಲಾ ಆಕ್ರಮಣಕ್ಕೆ ಗುರಿಯಾಗಿಸಿ ಬ್ರಿಟೀಷರನ್ನು ದುರ್ಬಲರನ್ನಾಗಿ ಮಾಡಿತ್ತು. ಇದೀಗ ಬ್ರಿಟೀಷರ ನಡುವೆ ಒಂದೇ ಮಾರ್ಗವಿತ್ತು. ಅದು ಶಾಂತಿ ಒಪ್ಪಂದ. ಈ ಒಪ್ಪಂದದಲ್ಲಿ ತಾನು ವಶಪಡಿಸಿಕೊಂಡ ಕೋಟೆ ಹಾಗೂ ಅರಮನೆಯಲ್ಲಿ ಸಿಕ್ಕ ಎಲ್ಲಾ ಆಭರಣಗಳು, ಸ್ವತ್ತುಗಳನ್ನು ಹಿಂದಿರುಗಿಸುವುದಾಗಿ ಸಹಿ ಹಾಕಿದರು. ಜೊತೆಗೆ ಕೊಟ್ಟಾಯಂ ಭಾಗದ ಕೃಷಿ ಸಂಬಂಧಿತ ತೆರಿಗೆಗಳನ್ನು ಜಂಟಿಯಾಗಿ ಹಂಚುವುದಾಗಿ ಕರಾರಿನಲ್ಲಿ‌ ಸೇರಿಸಲಾಗಿತ್ತು. ಆದರೆ ಇದಾವುದನ್ನು ಪಾಲಿಸಲಾಗಲಿಲ್ಲ. ೧೭೯೯ ರ ಹೊತ್ತಿಗೆ ಟಿಪ್ಪುವಿನ ಸೋಲು ಹಾಗೂ ಮರಣ ನಂತರ ಬ್ರಿಟೀಷರು ತಮ್ಮ ಸಂಪೂರ್ಣ ಗಮನ ತಲಶೇರಿ ಭಾಗಕ್ಕೆ ಹಾಕಿ ಪಳಸಿಯನ್ನು ಹೇಗಾದರೂ ಸೋಲಿಸಬೇಕೆಂದು ತೀರ್ಮಾನಿಸಿದರು. ಇದಕ್ಕಾಗಿ‌ ಮದರಾಸ್ ಪ್ರಾಂತ್ಯವು ಲಾರ್ಡ್ ಅರ್ಥರ್ ವೆಲ್ಲೆಸ್ಲಿಯನ್ನು ಪಳಸಿಯ ವಿರುದ್ಧ ಯುದ್ಧಕ್ಕಾಗಿ ನೇಮಕಗೊಳಿಸಿದರು‌. ೧೦೦೦೦ರ ಸೈನಿಕರ ನೆರವಿನೊಂದಿಗೆ ವಯನಾಡ್ ಹಾಗೂ ಕೊಟ್ಟಾಯಂನ ಭಾಗಕ್ಕೆ ತೆರಳಿ ಪಳಸಿಯ ಹತೋಟಿಯಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಂಡನು, ಅಷ್ಟೇ ಅಲ್ಲದೆ ಪಳಸಿಯ ಹಿತೈಷಿಯಾದ ಕನವತ್ ನಂಬಿಯಾರ್ ಹಾಗೂ ಮಗನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಪರಿಣಾಮ ಜನರಲ್ಲಿ ಭಯದ ವಾತವರಣವನ್ನು ಹುಟ್ಟಿಸಿ ಯುದ್ಧದ ವಾತವರಣ ಬೆಳೆಯದಂತೆ ಮಾಡಿಕೊಂಡರು. ಆದರೆ ೧೮೦೩ರಲ್ಲಿ ಪಳಸಿರಾಜನು ಕೈತೇರಿ ಅಂಬು, ಕುಂಗನ್ ಜೊತೆಗೂಡಿ ಪನಮಾರನ್ ಕೋಟೆಯನ್ನು ವಶಪಡಿಸಿ ಅಲ್ಲಿದ್ಧ ಯುದ್ದ ಕೈದಿಗಳನ್ನು ಬಿಡುಗಡೆಗೊಳಿಸಿ ಬ್ರಿಟೀಷರ ದಾಸ್ತಾನಿಗೆ ಲಗ್ಗೆ ಇಟ್ಟು ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿ ಬ್ರಿಟೀಷರಿಗೆ ಸವಾಲೆಸೆದರು. ೧೮೦೩ ರಲ್ಲಿ ಕೊಟ್ಟಿಯೂರಿನಲ್ಲಿ ಕುಂಗನ್ ನೇತೃತ್ವದಲ್ಲಿ ರಾತ್ರೋ ರಾತ್ರಿ ದಾಳಿ ನಡೆಸಿ ವೆಲ್ಲೆಸ್ಲಿಯ ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಿ ವೆಲ್ಲೆಸ್ಲಿಯ ಪಡೆಗೆ ಸೋಲುಣಿಸಿದರು. ಈ ಸೋಲಿನ‌ ಬಳಿಕ ವೆಲ್ಲೆಸ್ಲಿಯನ್ನು ಯುರೋಪಿಗೆ ವರ್ಗಾವಣೆಯಾಯಿತು.

೧೮೦೩ ರ ಹೊತ್ತಿಗೆ ಬೇಬರ್ ಎಂಬ ಬ್ರಿಟೀಷ್ ಅಧಿಕಾರಿಯನ್ನು ಕರ್ನಲ್ ಆಗಿ ನೇಮಿಸಿದರು. ಈತ ಯುದ್ಧದ ಬದಲಾಗಿ ಸ್ಥಳೀಯರ ಜೊತೆ ಸ್ನೇಹ ಸಂಪರ್ಕವನ್ನು ಬೆಳೆಸಿ ಪಳಸಿಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಶುರು ಹಾಕಿದರು. ಆದರೆ ಯಾರೊಬ್ಬರು ಮಾಹಿತಿಯನ್ನು ಕೊಡಲು ನಿರಾಕರಿಸಿದರು. ಯಾಕೆಂದರೆ ಪಳಸಿಯ ಬಗ್ಗೆ ಜನರಿಗೆ ಅಷ್ಟೊಂದು ಅಭಿಮಾನ ಹಾಗೂ ಪ್ರೀತಿ ಇತ್ತು.

ಇತಿಹಾಸದ ಒಂದು ಮಾಹಿತಿಯ ಪ್ರಕಾರ ಪಳೆಯವೀಡನ್ ಚಂದು ಸೈನ್ಯದ ಮಾಹಿತಿಯನ್ನು ಬ್ರಿಟೀಷರಿಗೆ ಒದಗಿಸಿ ಪಳಸಿಯ ಸೇನಾ ನೆಲೆಗಳಿಗೆ ನೇರವಾಗಿ ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಪಳಸಿಯನ್ನು ಸೆರೆ ಹಿಡಿಯಲು ನೆರವಾದ ಎನ್ನುತ್ತಾರೆ; ಇದರ ಬಗ್ಗೆ ವೈರುಧ್ಯಗಳಿವೆ. ಇನ್ನೊಂದು ಮಾಹಿತಿಯ ಪ್ರಕಾರ ಬ್ರಿಟೀಷರ ಸಲಹೆಗಾರನಾಗಿದ್ದ ಚೆಟ್ಟಿಯು ಬುಡಕಟ್ಟು ಜನಾಂಗದ ಸ್ನೇಹವನ್ನು ಸಂಪಾದಿಸಿ ಪಳಸಿಯ ಮಾಹಿತಿಯನ್ನು ಕಲೆ ಹಾಕಿ ಮಾವಿಳ್ಳ ತೋಡು(ಕೇರಳ ಕರ್ನಾಟಕದ ಗಡಿ ಭಾಗ) ಎಂಬಲ್ಲಿ ಬ್ರಿಟೀಷರ ಸೇನೆ ದಾಳಿ ಮಾಡಿತು‌. ಸಾವು ಹತ್ತಿರದಲ್ಲಿದ್ದರೂ ಸೇನೆಯ ಮೇಲೆ ಪಲಸಿಯವರ ಸೇನೆ ಪ್ರತಿದಾಳಿಯನ್ನು ನಡೆಸಿತು. ಈ ಹೋರಾಟದಲ್ಲಿ ಪಳಸಿಯೂ ಗುಂಡೇಟಿನಿಂದ ಹುತಾತ್ಮನಾದರು. ಇತಿಹಾಸದ ಇನ್ನೊಂದು ಕತೆಯ ಪ್ರಕಾರ ಸೇನೆಗೆ ಸಿಗಬಾರದೆಂಬ ಉದ್ದೇಶದಿಂದ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡನೆಂಬುದಾಗಿಯೂ ಇದೆ‌‌.

ಲಾರ್ಡ್ ವೆಲ್ಲೆಸ್ಲಿಯು ಕೊಟ್ಟಿಯೂರು ಯುದ್ಧದ ಸೋಲಿನ ನಂತರ ನಾವು ೧೦೦೦ ರ ಸೈನಿಕರ ವಿರುದ್ದ ಹೋರಾಡಿ ಸೋಲುಂಡವರಲ್ಲ, ನಾವು ಸೋತಿದ್ಧು ಪಳಸಿ ರಾಜನೆಂಬ ಒಬ್ಬನ ವಿರುದ್ಧ ಎಂದು ಪಳಸಿಯ ಹೋರಾಟವನ್ನು ಶ್ಲಾಘಿಸಿದ್ದರು.

ಇಂತಹ ವೀರ ಕೇರಳ ವರ್ಮ ಕೇರಳದ ಜನತೆಗೆ ಹಾಗೂ ಯುವ ಜನಾಂಗಕ್ಕೆ ಮಾದರಿಯಾಗಬೇಕಾಗಿತ್ತು. ಅಲ್ಲಿಯ ಸರ್ಕಾರ ತನ್ನ ಪಠ್ಯಪುಸ್ತಕದಲ್ಲಿ ಕೇರಳ ವರ್ಮನ ಇತಿಹಾಸವನ್ನು ದಾಖಲಿಸದೆ ಹೋದದು ದುರ್ದೈವದ ಸಂಗತಿ.

ಕಮ್ಯೂನಿಸ್ಟ್ ವಿಷವನ್ನು ಅಲ್ಲಿಯ ಯುವಜನತೆಗೆ ಉಣಿಸಿದ ಪರಿಣಾಮ ಅಲ್ಲಿಯ ಜನತೆಗೆ ಚೆಗುವೆರಾ, ಲೆನಿನ್, ಕಾರ್ಲ್ ಮಾರ್ಕ್ಸ್ ಎಂಬ ಢೋಂಗಿ ಸಮಾಜವಾದಿಗಳು ಆದರ್ಶವಂತೆ.

ಮುಂದಿನ ವಾರ ಮತ್ತೊಂದು ವೀರನೊಂದಿಗೆ

ವಂದೇ ಮಾತರಂ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments