ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 27, 2019

3

ಆಕಾಶದಿಂದ ಅಂತರಿಕ್ಷದೆಡೆಗೆ ತಲೆಯೆತ್ತಿದ ಭಾರತ

‍raghavendra1980 ಮೂಲಕ

– ರಾಘವೇಂದ್ರ ಎಮ್‌ ಸುಬ್ರಹ್ಮಣ್ಯ

ASATಸರಿ, ಇವತ್ತು ಭಾರತ ತನ್ನದೇ ಒಂದು ಉಪಗ್ರಹವನ್ನ, ತನ್ನದೇ ಮಿಸೈಲ್ ಉಪಯೋಗಿಸಿ ಹೊಡೆದುರುಳಿಸ್ತು. “ಮಿಷನ್ ಶಕ್ತಿ”ಯನ್ನು ಒಂದು ಅಭೂತಪೂರ್ವ ಸಾಧನೆ ಎಂದು ಹೊಗಳಲಾಯ್ತು. ಏನಿದು ಮಿಷನ್ ಶಕ್ತಿ? ಯಾಕೆ ಈ ಪ್ರಾಜೆಕ್ಟ್’ಗೆ ಇಷ್ಟು ಮಹತ್ವ? ಮಿಸೈಲ್ ತಂತ್ರಜ್ಞಾನ ಜಗತ್ತಿನ ಎಲ್ಲರ ಬಳಿಯೂ ಇದೆ. ಪಾಕಿಸ್ಥಾನದ ಬಳಿಯೂ ಇದೆ. ಮೊನ್ನೆಯಷ್ಟೆ ನಾವು SPICE ಮಿಸೈಲ್ ಬಳಸಿ, ಬಾಲಾಕೋಟ್’ನಲ್ಲಿ ಭಯೋತ್ಪಾದಕರ ಬಾಲ ಕಟ್ ಮಾಡಿದ್ದೀವಲ್ಲ. ಇದೂ ಇನ್ನೊಂದು ಅಂತಹದ್ದೇ ಸಾಧನೆ ತಾನೆ? ಅದಕ್ಕೆ ಇಷ್ಟು ದೊಡ್ಡ ಗಲಾಟೆಯಾಕೆ? ಮಿಸೈಲ್ ಒಂದಕ್ಕೆ ಸಂಬಂಧಿಸಿದ ಈ ಪ್ರಕಟಣೆಯನ್ನ ರಕ್ಷಣಾ ಇಲಾಖೆಯ ಬದಲು, ಪ್ರಧಾನಿ ಯಾಕೆ ಕೊಟ್ಟದ್ದು? ಈ ಪ್ರಶ್ನೆಗಳು ನಿಮ್ಮ ತಲೆಯಲ್ಲಿದ್ದರೆ, ಈ ಲೇಖನ ನಿಮಗೆ ಸಹಾಯಕವಾಗಲ್ಲದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ. ಚರ್ಚೆ ಮಾಡೋಣ.

ಮೊದಲನೆಯದಾಗಿ, ಇದು ಅಂತಿಂತಾ ಮಿಸೈಲ್ ಅಲ್ಲ. ಉಪಗ್ರಹ ವಿರೋಧಿ ಕ್ಷಿಪಣಿ (anti-satellite missile). ಅಂದರೆ ಇದನ್ನ ನೀವು ಗಡಿಯಾಚೆಗಿನ ಬಂಕರ್ ನಾಶಗೊಳಿಸೋಕೆ ಅಥವಾ ಖಂಡಾಂತರ ಶತ್ರುಶಮನಕ್ಕೆ ಬಳಸುವ ಕ್ಷಿಪಣಿಯಲ್ಲ. ನೆಲದಿಂದ ಹಾರಿ ಅಥವಾ ನೌಕೆ/ವಿಮಾನದಿಂದ ಉಡಾಯಿಸಲ್ಪಟ್ಟು ನೆಲ, ಜನ ಅಥವಾ ಆಕಾಶದಲ್ಲಿರುವ ಗುರಿಯೊಂದನ್ನು ನಾಶಮಾಡುವುದು ನಾವು ನೀವು ಇದುವರೆಗೂ ಕಂಡು ಕೇಳಿದ ಕ್ಷಿಪಣಿಗಳ ಕೆಲಸ. ಆಕಾಶ್, ತ್ರಿಶೂಲ್, ನಾಗ್, ಪೃಥ್ವಿ, ಅಗ್ನಿ, ಕೆ-ಮಿಸೈಲ್, ನಿರ್ಭಯ್, ಪ್ರಹಾರ್, ಬ್ರಹ್ಮೋಸ್, ಅಸ್ತ್ರ, ಹೆಲೀನಾ ಇವೆಲ್ಲವುದರ ಪ್ರತಾಪವೂ ಭೂಮಿ ಅಥವಾ ಆಕಾಶದಲ್ಲಿ. ಭಾರತದ ಬಲಿಯಿರುವ ಅತ್ಯಂತ ದೂರಕ್ರಮಿಸಬಲ್ಲ ಕ್ಷಿಪಣಿ ಸಧ್ಯಕ್ಕೆ ಅಗ್ನಿ-5 (ಸುಮಾರು 5,000 ಕಿಮೀ ಕ್ರಮಿಸಬಲ್ಲದು, ಜೊತೆಗೆ 1000 ಕೆಜೆ ತೂಕದ ಅಸ್ತವನ್ನೂ ಕೊಂಡೊಯ್ಯಬಲ್ಲದು). ಇದರ ನಂತರ ಭಾರತ ಅಗ್ನಿ-6ರ ಅಭಿವೃದ್ಧಿಯನ್ನೂ ಶುರುಮಾಡಿದ್ದು, ಇದು 10,0000 ಕಿಮೀವರೆಗೂ ಪ್ರಯಾಣಿಸಬಲ್ಲದು. ಅದರೊಂದಿಗೇ K-15, K-5, K-4, ಕ್ಷಿಪಣಿಗಳು 1 ಟನ್ ಭಾರದ ಅಸ್ತ್ರವನ್ನು ಹೊತ್ತು, 750ರಿಂದ 6,0000 ಕಿಮೀವರೆಗೂ ಪ್ರಯಾಣಿಸಬಲ್ಲವು. ತನ್ನ ಶತ್ರುಗಳನ್ನು ಅಂಕೆಯಲ್ಲಿಟ್ಟುಕೊಳ್ಳಲು ಸಧ್ಯಕ್ಕೆ ಭಾರತಕ್ಕೆ ಇಷ್ಟು ಸಾಕು.

ಆದರೆ ಇವತ್ತು ನಡೆದದ್ದು ಇನ್ನೂ ಎತ್ತರದ ಸಾಧನೆ. Literally “ಎತ್ತರದ” ಸಾಧನೆ. ಯಾಕೆಂದರೆ ಇವತ್ತಿನ ಈ ಕ್ಷಿಪಣಿ ಆಕಾಶಕ್ಕೆ ಸಂಬಂಧಿಸಿದ್ದಲ್ಲ. ಅಂತರಿಕ್ಷಕ್ಕೆ ಸಂಬಂಧಿಸಿದ್ದು!! ಆಕಾಶಕ್ಕೂ, ಅಂತರಿಕ್ಷಕ್ಕೂ ಏನು ವ್ಯತ್ಯಾಸ ಅಂತಾ ಕೇಳ್ತೀರಾ? ಮೇಲೆ ಹೇಳಿದ ಎಲ್ಲಾ ಮಿಸೈಲ್’ಗಳ (ಅಗ್ನಿ ಒಂದನ್ನು ಬಿಟ್ಟು) ಆಟ ನಡೆಯುವುದು ಸಮುದ್ರಮಟ್ಟದಿಂದ ಸುಮಾರು 18 ಕಿಮೀ ಎತ್ತರದವರೆಗೆ. ನಮಗೆ ಮಳೆ ಕೊಡುವ ಕ್ಯುಮಲೋನಿಂಬಸ್ ಮೋಡಗಳು ಇರೋದು ಸುಮಾರು 25 ಕಿಮೀ ಎತ್ತರದಲ್ಲಿ. ಉಲ್ಕೆಗಳು ಉರಿಯುವ ಸ್ಟ್ರಾಟೋಸ್ಪಿಯರ್ ಶುರುವಾಗೋದು ಸುಮಾರು ಐವತ್ತು ಕಿಮೀ ಎತ್ತರದಲ್ಲಿ. ‘ಕಾರ್ಮನ್ ಲೈನ್’ ಶುರುವಾಗುವುದು ಸಮುದ್ರಮಟ್ಟದಿಂದ 100 ಕಿಮೀ ಎತ್ತರದಲ್ಲಿ. ಈ ಕಾರ್ಮನ್ ಲೈನ್ ಆಕಾಶ ಮತ್ತು ಅಂತರಿಕ್ಷದ ಗಡಿ ಇದ್ದಂಗೆ. ಇಲ್ಲಿಂದ ಮೇಲೆ ಇರುವ ಜಾಗ ಯಾವ ದೇಶಕ್ಕೂ ಸೇರಿದ್ದಲ್ಲ. ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ (ISS) ಇರೋದು 400 ಕಿಮೀ ಎತ್ತರದಲ್ಲಿ. ಮನುಷ್ಯನ ಯುದ್ಧಗಳೆಲ್ಲಾ ನಡೆಯೋದು ಹೆಚ್ಚೆಂದರೆ ಸಮುದ್ರಮಟ್ಟದಿಂದ 35ಕಿಮೀ ಕೆಳಗೇನೇ. ಇದುವರೆಗೂ ರೆಕಾರ್ಡ್ ಆಗಿರುವ ಫೈಟರ್ ಜೆಟ್ ಹಾರಿರುವ ಎತ್ತರ 37.6 ಕಿಮೀ (ರಷ್ಯನ್ ಪೈಲಟ್ ಅಲೆಕ್ಸಾಂಡರ್ ಫೆಡಟೋವ್, ತನ್ನ ಮಿಗ್-25 ವಿಮಾನದಲ್ಲಿ ಹಾರಿದ್ದು). ಇನ್ನು ನಾನು ನೀವು ಓಡಾಡೋ ನಾಗರಿಕ ವಿಮಾನಗಳೆಲ್ಲಾ ಹಾರೋದು ಎಂಟರಿಂದಾ ಹತ್ತು ಕಿಮೀ ಎತ್ತರದಲ್ಲಷ್ಟೇ. ಕಾನ್ಕೊರ್ಡ್ ವಿಮಾನಗಳು 18ಕಿಮೀ ಎತ್ತರದಲ್ಲಿ ಹಾರಿದ್ದವು. ಈಗ ಅವಿಲ್ಲ. ವಿಮಾನ ಹಾರೋಕೆ ಗಾಳಿ/ವಾತಾವರಣದ ಅಗತ್ಯವಿರೋದ್ರಿಂದ ತೀರಾ ಮೇಲೆಲ್ಲಾ ವಿಮಾನಗಳಿಗೆ ಹಾರೋಕೆ ಆಗೋದೇ ಇಲ್ಲ.

ಬಿಡಿ, ಒಟ್ಟಿನಲ್ಲಿ ನಮ್ಮ ವಿಮಾನಗಳು, ಫೈಟರ್ ಜೆಟ್ಟುಗಳು, ಕ್ಷಿಪಣೆಗಳದ್ದೆಲ್ಲಾ ಇಲ್ಲೇ ಕಾರ್ಮನ್ ಲೈನ್’ನಿಂದ ಕೆಳಗಷ್ಟೇ. ಇಲ್ಲಿಂದ ಮೇಲೆ ಅಂತರಿಕ್ಷ ಅಂತಾ ಗುರುತಿಸಲ್ಪಟ್ಟಿರೋದ್ರಿಂದ, ಇಲ್ಲಿ ಯಾವುದೇ ಯುದ್ಧಗಳೂ ನಡೆಯುವಂಗಿಲ್ಲ (ಅಂದರೆ ಇಲ್ಲಿಂದ ಮೇಲೆ ಆಯುಧಗಳನ್ನೆಲ್ಲಾ ಕೂಡಿ ಇಡುವ ಹಾಗಿಲ್ಲ, ಅಲ್ಲಿಂದಾ ಆಯುಧ ಪ್ರಯೋಗ ಮಾಡುವ ಹಾಗಿಲ್ಲ) ಅಂತಾ ರಾಷ್ಟ್ರಗಳ ನಡುವೆ ಒಂದು ಜೆಂಟಲ್-ಮೆನ್ ಅಗ್ರೀಮೆಂಟ್ ಇದೆ. ಇಲ್ಲಿಂದ ಮೇಲೆ ಬಿಡಿ, ಇಲ್ಲಿಯವರೆಗೆ ಹೋಗೋದೇ ಎಷ್ಟೋ ದೇಶಗಳಿಗೆ ಕನಸಿನ ವಿಷಯವಾದ್ದರಿಂದ ಯಾರೂ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಲ್ಲ. ಆದರೆ, ತಾನೇ ವಿಧಿಸಿಕೊಂಡ ಮಿತಿಯನ್ನ ಮೀರಿ ಸಾಧಿಸುವುದೇ ಮನುಷ್ಯನ ಸ್ಪೂರ್ತಿಯಾದ್ದರಿಂದ ಕೆಲವರು ಇದಕ್ಕೂ, ಅಂದರೆ ಕಾರ್ಮನ್ ಲೈನ್’ನಿಂದ ಮೇಲೆ ಆಕ್ರಮಣ ಮತ್ತು ಪ್ರತಿಕ್ರಮಣಕ್ಕಾಗಿ, ಪ್ರಯತ್ನಿಸಿದ್ದಿದ್ದೆ. ಇದುವರೆಗೂ ಈ ಪ್ರಯತ್ನಗಳನ್ನು ಮಾಡಿ ಯಶ ಸಾಧಿಸಿರುವುದು ಅಮೇರಿಕಾ, ರಷ್ಯಾ ಮತ್ತು ಚೀನಾ ಮಾತ್ರ. ಆದರೆ ಮೇಲೆ ಹೋದಷ್ಟೂ ನಿಮ್ಮ ಪ್ರಯತ್ನಗಳು ಅತೀ ಕರಾರುವಕ್ಕಾಗಿರಬೇಕಾದದ್ದು ತೀರಾ ಅತ್ಯಗತ್ಯ. ಈಗ ನೋಡಿ, ಇವತ್ತು ನಾವು ಪ್ರಯೋಗಿಸಿರುವ ರಾಕೆಟ್ಟಿನ ವೇಗ ತನ್ನ ಗುರಿಮುಟ್ಟುವ ಕೊನೆಯಕ್ಷಣಗಳಲ್ಲಿ ಸೆಕೆಂಡಿಗೆ 8 ಕಿಮೀ ಇರುತ್ತದೆ. ಅಂದರೆ ಕಣ್ಣೆವೆ ಮುಚ್ಚುವುದರಲ್ಲಿ ಸಿಲ್ಕ್-ಬೋರ್ಡಿನಿಂದ ಮೆಜೆಸ್ಟಿಕ್ ತಲುಪಿದಂಗೆ!! ಆ ವೇಗದಲ್ಲಿರುವಾಗ ಸ್ವಲ್ಪ ಹೆಚ್ಚುಕಮ್ಮಿಯಾದರೂ ನಿಮ್ಮ ಆಯುಧ, ಬೇಧಿಸಬೇಕಾದ ಗುರಿಯನ್ನು ಒಂದಿಂಚಿನಿಂದ ಮಿಸ್ ಮಾಡಿಕೊಂಡರೂ ಇಡೀ ಕಥೆ ಮುಗಿದಂತೆ. ಸಾಮಾನ್ಯವಾಗಿ, ಒಮ್ಮೆ ಈ ಕ್ಷಿಪಣಿ ಅಂತರಿಕ್ಷ ತಲುಪಿದನಂತರ Free-Flight ಮೋಡ್’ಗೆ ಹೋಗುತ್ತದೆ. ಅಂದರೆ ಯಾವುದೇ ರಾಕೆಟ್ ಉರಿಸದೇ, ಕೇವಲ ಟರ್ಬೋಫ್ಯಾನ್’ಗಳನ್ನು ಬಳಸಿ ಕ್ಷಿಪಣಿಯನ್ನು ಮುನ್ನಡೆಸಲಾಗುತ್ತದೆ. ಸೆಕೆಂಡಿಗೆ ಎಂಟು ಕಿಮೀ ವೇಗದಲ್ಲಿರುವ, ಟರ್ಬೋಫ್ಯಾನ್ ಚಾಲಿತ ಕ್ಷಿಪಣಿಗೆ “ಅಲ್ಲೇ ಮುಂದೆ ಹೋಗಿ ರೈಟ್ ಟರ್ನ್ ತಗಂಡೂ ವಾಪಸ್ ಬಂದು ಇನ್ನೊಮ್ಮೆ ಹೊಡಿ” ಅಂತಾ ಹೇಳೋಕಾಗಲ್ಲ. ಅಂದರೆ ಈ ಕ್ಷಿಪಣಿಗಳು ಸಮುರಾಯ್ ಖಡ್ಗವಿದ್ದಂಗೆ. ಒಂದ್ಸಲ ಹೊರಟ ಮೇಲೆ ಕೆಲಸ ಮುಗಿಸಲೇ ಬೇಕು. ಇಲ್ಲಾಂದರೆ ಅದರ ಕಥೆ ಮುಗಿದಂಗೆ (ಸಮುರಾಯ್’ಗಳು ಒಮ್ಮೆ ಖಡ್ಗ ಹೊರತೆಗೆದಮೇಲೆ, ಅದಕ್ಕೆ ಎದುರಾಳಿಯ ರಕ್ತದ ರುಚಿ ತೋರಿಸದೇ ವಾಪಾಸು ಇಡುವಂಗಿಲ್ಲ. ಎದುರಾಳಿ ಬದುಕುಳಿಬಿಟ್ಟರೆ, ಆ ಸಮುರಾಯ್ ತನ್ನನ್ನು ತಾನೇ ಕೊಂದುಕೊಳ್ಳುತ್ತಾನೆ ಅಂತಾ ಕಥೆಗಳಿವೆ). ಗುರಿತಪ್ಪಿದ ಇಂತಹಾ ಕ್ಷಿಪಣಿಯನ್ನ ವಾಪಾಸು ಭೂಮಿಗಿಳಿಸಿ ಇನ್ನೊಮ್ಮೆ ಬಳಸೋಕೂ ಆಗಲ್ಲ. ಅದರ Free Flight ಹಾದಿ ಮುಗಿದನಂತರ ಇನ್ನೆಲ್ಲೋ ಬಿದ್ದು (ಆ ಎತ್ತರದಿಂದ ಬೀಳುವಾಗ ಯಾವ ದೇಶದ ಮೇಲೆ ಬೀಳುತ್ತೋ ಯಾರಿಗ್ಗೊತ್ತು!) ಅನಗತ್ಯ ತೊಡಕುಗಳನ್ನು ಸೃಷ್ಟಿಸುತ್ತದೆ. ಅದೂ ಅಲ್ಲದೇ ಸ್ಪೋಟಗೊಂಡ ಕ್ಷಿಪಣಿ ಹಾಗೂ ನಾಶವಾದ ಗುರಿ ಎರಡರದ್ದೂ ಪೀಸುಗಳು, ಅಲ್ಲಿಂದ ಭೂಮಿಗೆ ಬೀಳುವಾಗ ಅತ್ಯಂತ ವೇಗದಲ್ಲಿ ಬೀಳುವುದರಿಂದ ದೊಡ್ಡಮಟ್ಟದ ಅನಾಹುತವನ್ನೇ ಮಾಡಬಹುದು. ಅದೂ ಸಹ ಎಲ್ಲಿ ಬೀಳುತ್ತೆ ಅಂತಾ ಹೇಳೋಕಾಗಲ್ಲ. ಹಾಗಾಗಿ ಅತೀ ಕರಾರುವಕ್ಕಾಗಿ ಒಂದೇಬಾರಿಗೆ ಮುಗಿಸಬೇಕಾದ ಕೆಲಸ ಇದು. ಇವತ್ತು ಭಾರತ ತನ್ನ ಮೊದಲ ಪ್ರಯತ್ನದಲ್ಲೇ, ಸಂಪೂರ್ಣ ಭಾರತೀಯ ತಂತ್ರಜ್ಞಾನವನ್ನು ಬಳಸಿ ಸಮುದ್ರಮಟ್ಟದಿಂದ 300 ಕಿಮೀ ಎತ್ತರದಲ್ಲಿ ತನ್ನದೆ ಒಂದು ಉಪಗ್ರಹವನ್ನು ಹೊಡೆದುರುಳಿಸಿ ಯಾವುದೇ ಕಸಕಡ್ಡಿಗಳು ಎಲ್ಲೂ ಮನುಷ್ಯರು ವಾಸಿಸುವ ಪ್ರದೇಶದ ಮೇಲೆ ಬಿದ್ದು ಅವಗಡಗಳಾಗಂತೆ ಪ್ಲಾನ್ ಮಾಡಿ, ಈ ಮಹತ್ಸಾಧನೆ ಮಾಡಿದೆ.

ಈಗ ಎರಡನೇ ಪ್ರಶ್ನೆ, ಇದರಲ್ಲಿ ಮಹತ್ಸಾಧನೆ ಏನು? ಮೊದಲನೆಯದಾಗಿ ಈ ತಂತ್ರಜ್ಞಾನ ಭಾರತದ ಬಳಿ 2012ರಿಂದಲೇ ಇದ್ದರೂ ಸಹ, ಅಂದಿನ ಸರ್ಕಾರ ಈ ತಂತ್ರಜ್ಞಾನದ ಅಭಿವೃದ್ಧಿಗೆ ಹಾಗೂ ಅದರ ಪ್ರಯೋಗದ ಪ್ರಯತ್ನಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹೀಗಂತಾ ನಾನು ಹೇಳ್ತಿಲ್ಲ. DRDOನ ಮುಖ್ಯಸ್ಥ ವಿಕೆ ಸಾರಸ್ವತ್ ಅವರದ್ದೇ ಹೇಳಿಕೆ.

ವಿಜ್ಞಾನಿಗಳಿಗೆ ಇದಕ್ಕೆ ಬೇಕಾದ ರಾಜಕೀಯ ಒಪ್ಪಿಗೆ ಮತ್ತು ಹಣಕಾಸಿನ ನೆರವು ಸಿಕ್ಕಿದ್ದು ಪ್ರಧಾನಿ ಮೋದಿ “ಅಂತರಿಕ್ಷ ಸಚಿವಾಲಯದ ಮುಖ್ಯಸ್ಥ”ರಾದ (Department of Space) ಮೇಲೆ. ಹೌದು, ಮೋದಿ ಕೇವಲ ಪ್ರಧಾನಿ ಮಾತ್ರವಲ್ಲ, ದೇಶದ ಅಂತರಿಕ್ಷ ವಿಭಾಗದ ಕ್ಯಾಬಿನೆಟ್ ಸಚಿವ ಹಾಗೂ, “ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ” (Ministry of Personnel, Public Grievances and Pensions) ಹಾಗೂ ಪರಮಾಣು ಶಕ್ತಿ ಇಲಾಖೆ (Department of Atomic Energy)ಗೂ ಕ್ಯಾಬಿನೆಟ್ ಸಚಿವನೂ ಹೌದು.

ಇದು ರಕ್ಷಣಾ ಇಲಾಖೆಗೆ ಸಂಬಂಧಪಟ್ಟದ್ದಲ್ಲ. ಹೌದು, ಮುಂದಿನ ವರ್ಷಗಳಲ್ಲಿ ತಂತ್ರಜ್ಞಾನ ಮುಂದಿವರೆದಂತೆ ಇದೂ ರಕ್ಷಣಾ ಇಲಾಖೆಯಡಿ ಬರಬಹುದು. ಆದರೆ ಸಧ್ಯಕ್ಕೆ ಅಂತರಿಕ್ಷವನ್ನು ಯುದ್ಧ-ಬಾಹಿರ ಜಾಗ ಎಂದು ಘೋಷಿಸಿರುವುದರಿಂದ ಇದರಲ್ಲಿ ರಕ್ಷಣಾ ಇಲಾಖೆಯ ಯಾವುದೇ ಸಹಯೋಗ ಇರುವುದಿಲ್ಲ. ಸಂಪೂರ್ಣವಾಗಿ ಅಂತರಿಕ್ಷ ಇಲಾಖೆಯದ್ದೇ ಕಾರುಬಾರು. ಇದೇ ಕಾರಣಕ್ಕೆ ಈ ಪ್ರಕಟಣೆಯನ್ನು ಸ್ವತಃ ಮೋದಿ ಮಾಡಿದ್ದು. ಮೋದಿಯ ಪ್ರಕಟಣೆಯ ಬಗ್ಗೆಯಿದ್ದ ಪ್ರಶ್ನೆಗೂ ಇದರಿಂದ ಉತ್ತರ ಸಿಕ್ಕಿದೆ ಅಂದ್ಕೊಳ್ತೀನಿ.

VKS3

ಮುಂದೇನು?
ಪ್ರಪಂಚದಲ್ಲಿ ಬಹಳಷ್ಟು ದೇಶಗಳ ಬಳಿ ICBM (ಖಂಡಾಂತರೀ ಕ್ಷಿಪಣಿ)ಗಳಿದ್ದರೂ ಸಹ, ಕೆಲವರನ್ನು ಬಿಟ್ಟು ಯಾರ ಬಳಿಯೂ ತಮ್ಮೆಡೆಗೆ ಧಾವಿಸಿ ಬರುತ್ತಿರುವ ಕ್ಷಿಪಣಿಗಳನ್ನು ತಡೆಯಲು ಯಾವ ದಾರಿಯೂ ಇಲ್ಲ. ಯಾಕೆಂದರೆ ICBMಗಳು ಕೂಡಾ ಅತೀ ಎತ್ತರದಿಂದ ಹಾರಿಬರುವ ಸಾಮರ್ಥ್ಯವುಳ್ಳವು. ಈಗ, ಈ ಪ್ರಯೋಗದ ಬಳಿಕ ನಮ್ಮೆಡೆಗೆ ಬರುತ್ತಿರುವ ಖಂಡಾಂತರ ಕ್ಷಿಪಣಿಗಳನ್ನು ನಾವು ಅಂತರಿಕ್ಷದಲ್ಲೇ ತಡೆಯಬಹುದು. ಎರಡನೆಯದಾಗಿ, ಭಾರತ ಈ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ, ಅಂತರಿಕ್ಷದಲ್ಲೇ ಇವನ್ನು install ಮಾಡಿ ಇಡಬಹುದಂತಾ ಸ್ಥಿತಿಗೆ ತಲುಪಿದರೆ, ಯಮಗಾತ್ರದ ಖಂಡಾಂತರೀ ಕ್ಷಿಪಣಿಗಳ ಬದಲು, ಅಂತರಿಕ್ಷದಿಂದಲೇ ಶತ್ರುಗಳೆಡೆಗೆ ಪ್ರಯೋಗಿಸಬಹುದಾದ ಇವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.

ಈ ತಂತ್ರಜ್ಞಾನದಿಂದ ಕಲಿತಿರುವ ಪಾಠಗಳು ಸಾವಿರವಿದೆ. DRDO ತನ್ನ ಖಂಡಾಂತರೀ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಇದನ್ನು ಬಳಸಿಕೊಳ್ಳಲಿದೆ. ಮೊನ್ನೆಯಷ್ಟೇ ಅರಿಹಂತ್ ಜಲಾಂತರ್ಗಾಮಿ ನೌಕೆಗೆ K-4 ಮಿಸೈಲ್ ಅಳವಡಿಸಿ, Nuclear Triad ಎಂಬ ಅತ್ಯುನ್ನತ ಕ್ಲಬ್’ಗೆ (ಅಂದರೆ ಭೂಸೇನೆ, ನೌಕಾದಳ ಮತ್ತು ವಾಯುದಳ ಮೂರೂ ಸಹ ಅಣ್ವಸ್ತ್ರಗಳ ಹೊಂದಿರುವುದು) ಅರ್ಹತೆ ಪಡೆದಿದ್ದ ಭಾರತಕ್ಕೆ, ಈಗ ನೆಲ, ಜನ ಮತ್ತು ಆಕಾಶ ಮಾತ್ರವಲ್ಲ, ಅಂತರಿಕ್ಷದಲ್ಲೂ ಯುದ್ಧನಡೆಸುವ ಕ್ಷಮತೆ ಬಂದಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಈ ತಂತ್ರಜ್ಞಾನ ಸಂಪೂರ್ಣ ಸ್ವದೇಶಿ. ಯಾರ ಮುಲಾಜೂ ಬೇಕಾಗಿಲ್ಲ. ಸ್ವಶಕ್ತಿಯಿಂದ ಮಂಗಳನನ್ನೂ ತಲುಪಿ, ಸ್ವಶಕ್ತಿಯಿಂದ ತ್ರಿಮುಖ ಅಣ್ವಸ್ತ್ರ ಶಕ್ತಿಯಾದ ಭಾರತಕ್ಕೆ, ಇದೀಗ ಸ್ವಶಕ್ತಿಯಿಂದ ಅಂತರಿಕ್ಷ ಯುದ್ಧಕ್ಕೂ ಸೈ ಎಂಬ ಮಜಲಿಗೆ ಕೊಂಡೊಯ್ದ ದೇಶದ ವಿಜ್ಞಾನಿಗಳಿಗೂ, ಇದಕ್ಕೆ ಬೆನ್ನೆಲುಬಾಗಿ ನಿಂತ ನಾಯಕರಿಗೂ ಧನ್ಯವಾದಗಳನ್ನು ಹೇಳಬೇಕಾದದ್ದು ನಮ್ಮ ಧರ್ಮ. ಇವತ್ತಿನ ಭಾಷಣದಲ್ಲಿ ಮೋದಿ ಎಲ್ಲೂ ಸಹ ‘ಬಿಜೆಪಿ’ ಅಥವಾ ‘ನನ್ನ ಸರ್ಕಾರ’ ಅಂತಾ ಹೇಳದೇ, ಪೂರ್ತಿ ಯಶಸ್ಸನ್ನು ವಿಜ್ಞಾನಿಗಳಿಗೆ ಅರ್ಪಿಸಿದ ರೀತಿ ಶ್ಲಾಘನೀಯ.

#ಮಿಷನ್_ಶಕ್ತಿ
#MissionShakti

3 ಟಿಪ್ಪಣಿಗಳು Post a comment
  1. ಸಂದೀಪ್
    ಮಾರ್ಚ್ 27 2019

    ಅದ್ಬುತ ಲೇಖನ ರಾಘವೇಂದ್ರ ಜಿ

    ಉತ್ತರ
  2. ಕಾಮ್ರೆಡ್ ಕೃಷ್ಣ
    ಮಾರ್ಚ್ 27 2019

    ಇದರಿಂದ ಬಡವರ ಹೊಟ್ಟೆ ತುಂಬುತ್ತದೆಯೇ?

    ಉತ್ತರ
  3. Paramathma
    ಮಾರ್ಚ್ 28 2019

    ಇಲ್ಲ, ಕಾಮ್ರೆಡ್ ರ .ಕ ಉರಿತದೆ. ಅಷ್ಟು ಸಾಕು 😃

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments