ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 29, 2019

2019 : ನವಭಾರತ Vs ಬ್ರಿಟಿಷ್ ಇಂಡಿಯಾ ನಡುವಿನ ಚುನಾವಣೆ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

೨೦೧೯ ಚುನಾವಣೆಯ ದಿನಾಂಕ ಘೋಷಣೆಯಾಗಿ ಮೊದಲ ಹಂತದ ಚುನಾವಣೆಯೂ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದೂ ಹೋಗಲಿದೆ. ಈ ಬಾರಿಯ ಚುನಾವಣೆಯ ಮೇಲೆ ಇಡೀ ದೇಶ ಮಾತ್ರವಲ್ಲ ಜಗತ್ತಿನ ಕಣ್ಣೂ ಇದೆ. ೨೦೧೪ರ ಚುನಾವಣೆಯೂ ಹೀಗೆಯೇ ಇತ್ತು.೨೦೧೪ರ ಚುನಾವಣೆ ಭಾರತದ ರಾಜಕೀಯದಲ್ಲಿ ಢಾಳಾಗಿ ಮಿಳಿತವಾಗಿರುವ  ಜಾತಿ,ಹಣ,ರಿಲಿಜಿಯನ್,ಓಲೈಕೆ ಇತ್ಯಾದಿಗಳನ್ನು ಜನತೆಯೇ ನಿವಾಳಿಸಿ ಬಿಸಾಡಿದ,ದೇಶದ ಚಿಂತನೆಯ ದಿಕ್ಕನ್ನು ಬದಲಿಸಿದ ಚುನಾವಣೆ ಎನ್ನಬಹುದು.

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದ ಚುನಾವಣಾ ರಾಜಕೀಯವನ್ನು ಬಹುಶಃ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.ಮೊದಲನೆಯದು ೪೭ ರಿಂದ ೭೦ರ ದಶಕದವರೆಗಿನ ನೆಹರೂ ಕುಟುಂಬದ ರಾಜಕಾರಣ (ಶಾಸ್ತ್ರೀಜಿಯವರ ಸಮಯ ಬಿಟ್ಟು). ೭೦ರ ದಶಕದ ಆದಿಯಿಂದ ೯೦ರ ದಶಕದವರೆಗಿನ ಇಂದಿರಾ ಕಾಂಗ್ರೆಸ್ಸಿನ ಸರ್ವಾಧಿಕಾರಿ ತುರ್ತುಪರಿಸ್ಥಿತಿ ವಿರೋಧಿ ಹಾಗೂ ರಾಮಜನ್ಮಭೂಮಿ ಚಳವಳಿಯರವರೆಗಿನ ರಾಜಕಾರಣ. ೯೦ರ ದಶಕದ ಆದಿಯಿಂದ – ೨೦೧೩ರ ಕೊನೆಯವರೆಗಿನ ಸೆಕ್ಯುಲರಿಸಂ-ಹಿಂದುತ್ವದ ರಾಜಕಾರಣ. ಈ  ನಾಲ್ಕು ಭಾಗಗಳಲ್ಲಿ ನಿಚ್ಚಳ ಬಹುಮತದ ಸರ್ಕಾರಗಳು ರೂಪುತಳೆದಿದ್ದು ನೆಹರೂ ಕಾಲದ ಸ್ವಾತಂತ್ರ್ಯ ಹೋರಾಟದ ಹ್ಯಾಂಗ್ ಓವರ್ ಹಾಗೂ ವಿರೋಧ ಪಕ್ಷಗಳಿಲ್ಲದ ಕಾಲದಲ್ಲಿ,ಇಂದಿರಾ  ಹತ್ಯೆಯ ನಂತರದ ಚುನಾವಣೆಯಲ್ಲಿ ಹಾಗೂ ಕಳೆದ ೨೦೧೪ ರ ಚುನಾವಣೆಯಲ್ಲಿ.

ಮೊದಲ ಎರಡು ಚುನಾವಣೆಯ ವಿಷಯಗಳೇನೂ ಚರ್ಚಿಸ ಬೇಕಾದ ವಿಷಯಗಳೇನೂ ಅಲ್ಲ. ಇನ್ನುಳಿಯುವುದು ೨೦೧೪ರ ಚುನಾವಣೆಯ ವಿಷಯ. ಯಾಕೆ ೨೦೧೪ರ ಚುನಾವಣೆಯ ವಿಷಯ ಮುಖ್ಯವಾಗುತ್ತದೆ ಎಂದರೇ,ಯಾವುದೇ ಜಾತಿ-ರಿಲಿಜಿಯನ್-ಓಲೈಕೆ-ಬಿಟ್ಟಿ ಭಾಗ್ಯ ಯೋಜನೆಗಳಿಲ್ಲದೇ, ಗುಜರಾತಿನಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಅಭಿವೃದ್ಧಿಯ,ನವಭಾರತದ ಕನಸು ಕಟ್ಟಿಕೊಟ್ಟಿದ್ದರು ನರೇಂದ್ರ ಮೋದಿಯವರು.ಆದರೆ ವಿಪಕ್ಷಗಳಿಗೆ ಮೋದಿಯವರ ಅಭಿವೃದ್ಧಿ ಅಜೆಂಡದ ಅಸ್ತ್ರ್ರಕ್ಕೆ ಪ್ರತಿಯಾಗಿ ವಿಭಿನ್ನವಾದ ಅಥವಾ ಅದಕ್ಕಿಂತಲೂ ಉತ್ತಮವಾದ ಅಜೇಂಡಾವನ್ನು ಸೆಟ್ ಮಾಡಲಾಗಲೇ ಇಲ್ಲ. ಅವರು ೨೦೦೨ರ ಗುಜಾರಾತಿನಲ್ಲೇ ಉಳಿದುಹೋದರು. ಇತ್ತ ಮೋದಿಯವರು ನವಭಾರತದ ಅಲೆಯಲ್ಲಿ ೨೦೧೪ರ ಮೇ ತಿಂಗಳಲ್ಲಿ ಸಂಸತ್ತಿಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು.

ಅವರು ಪ್ರಧಾನಿಯಾದ ಈ ೫ ವರ್ಷಗಳಲ್ಲಿ ಗಂಗೆಯಲ್ಲಿ ಬಹಳಷ್ಟು ನೀರು ಹರಿದಿದೆ. ಒಂದು ಕಾಲದಲ್ಲಿ ಗಂಗೆ ಎಂದರೆ ಮಲಿನ ಎನ್ನುವ ಮಾತು ಕೇಳಿಬರುತ್ತಿತ್ತು. ಪ್ರಧಾನಿಯಾದ ನಂತರ ಮೋದಿ ಸರ್ಕಾರ ಗಂಗೆಯನ್ನು ಸ್ವಚ್ಛಗೊಳಿಸಲು ಶುರುಮಾಡಿದ ‘ನಮಾಮಿ ಗಂಗೆ’ ಪ್ರಾಜೆಕ್ಟ್ ಎಷ್ಟು ಫಲ ನೀಡಿದೆ ಎನ್ನಲಿಕ್ಕೆ ಉದಾಹರಣೆಯಾಗಿ, ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರದಲ್ಲಿ ಪ್ರಿಯಾಂಕಾ ರಾಬರ್ಟ್ ವಾಧ್ರಾ ತಾವಾಗಿಯೇ ಗಂಗೆಯ ಶುದ್ಧ ನೀರು ಕುಡಿದು ಸಾಬೀತು ಮಾಡಿದ್ದಾರೆ. ಇಡೀ ಜಗತ್ತೇ ತಿರುಗಿ ನೋಡುವಂತೆ ಕುಂಭ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಉತ್ತರ ಪ್ರದೇಶದ ಯೋಗಿ ಸರ್ಕಾರಕ್ಕೆ ದೇಶದ ಮೂಲೆ ಮೂಲೆಗಳಿಂದ ಬಂದ ಸಾಧು-ಸಂತರು-ಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸುವಾಗ ಗಂಗೆ ಮೊದಲಿಗಿಂತ ಶುದ್ಧವಾಗಿದ್ದಾಳೆ ಎಂದು ಬೆನ್ನು ತಟ್ಟುವುದನ್ನು ಮರೆಯಲಿಲ್ಲ. ನಮಾಮಿ ಗಂಗೆ ಯೋಜನೆ ಮೋದಿಯವರ ಕಾಲದಲ್ಲಿ ಅಸಾಧ್ಯ ಎನ್ನುವಂತಹ ಕೆಲಸಗಳು ಸಾಧ್ಯವಾಗಿವೆ ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗುತ್ತದೆ.

ಇದನ್ನು ಬರೆಯುವ ಸಮಯಕ್ಕೆ ಸರಿಯಾಗಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿ, DRDO ವಿಜ್ಞಾನಿಗಳು ಅಭಿವೃದ್ಧಿಪಡಿಸಿ, ಸಫಲವಾಗಿ ಪರೀಕ್ಷಿಸಿದ ಉಪಗ್ರಹ ವಿರೋಧಿ ಕ್ಷಿಪಣಿ (anti-satellite missile)ಯ ಬಗ್ಗೆ ಹೇಳಿದ್ದಾರೆ.ಈ ಸಾಧನೆಯ ಮೂಲಕ ಅಂತರಿಕ್ಷದಲ್ಲಿ ಗೂಢಚಾರಿಕೆ ಮಾಡುವ ಶತ್ರು ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಭಾರತಗಳಿಸಿಕೊಂಡು,ಅಮೇರಿಕಾ,ರಷ್ಯಾ ಮತ್ತು ಚೀನಾದ ಎಲೈಟ್ ಕ್ಲಾಸಿಗೆ ಸೇರಿಕೊಂಡಿದೆ.ಗಮನಿಸಬೇಕಾದದ್ದು ಇಡೀ ಭಾಷಣದಲ್ಲಿ ನರೇಂದ್ರ ಮೋದಿಯವರೆಲ್ಲೂ ಇದು ನಮ್ಮ ಸರ್ಕಾರದ ಸಾಧನೆ ಎನ್ನಲಿಲ್ಲ. ಸಂಪೂರ್ಣ ಶ್ರೇಯಸ್ಸನ್ನು ಅವರು ವಿಜ್ಞಾನಿಗಳಿಗೇ ನೀಡಿದರು.ಹಾಗೆ ನೋಡಿದರೆ ಅವರು ಕ್ರೆಡಿಟ್ ತೆಗೆದುಕೊಳ್ಳಬಹುದಿತ್ತು. ೨೦೧೨ರಲ್ಲೇ ಇಂತಹದ್ದೊಂದು ತಂತ್ರಜ್ಞಾನ ನಮ್ಮಲ್ಲಿದೆ ಸರ್ಕಾರ ಅನುಮತಿ ಬೇಕಿದೆ ಅಂದು ಆಗಿನ DRDO ಮುಖ್ಯಸ್ಥರಾಗಿದ್ದ ಸಾರಸ್ವತ್ ಅವರು ಹೇಳಿದ್ದರು. ಭೂಮಿಯ ಮೇಲಿನ ರಕ್ಷಣೆಗೆ ಒತ್ತು ಕೊಡದ ದರಿದ್ರ ಸರ್ಕಾರವಿದ್ದ ಕಾಲವದು. ಅಂತರಿಕ್ಷದ ರಕ್ಷಣೆ/ಪರೀಕ್ಷೆಗೆ ಒಪ್ಪುತ್ತಿದ್ದರೇ? ಊಹುಂ ,ಭಾರತಕ್ಕೆ ಈ ತಂತ್ರಜ್ಞಾನದ ಅವಶ್ಯಕತೆಯಿಲ್ಲ ಎಂದಿತ್ತು ಸೋನಿಯಾ ಸರ್ಕಾರ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಮತ್ತೆ ಈ ಕೆಲಸಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. ಇವತ್ತು ಮಿಷನ್ ಶಕ್ತಿ ಯಶಸ್ವಿಯಾಗಿದೆ.ಹಾಗೆ ನೋಡಿದರೆ ಕಳೆದ ೫ ವರ್ಷಗಳಲ್ಲಿ ಭಾರತ ಹಲವು ರಂಗಗಲ್ಲಿ ಯಶಸ್ಸು ಕಂಡಿದೆ. ಈ ಭಾರತವನ್ನು “ನವ ಭಾರತ” ಎಂದೇ ಕರೆಯಬೇಕು. ಏಕೆ ಹಾಗೆ ಕರೆಯಬೇಕೆಂದರೇ, ತೀರಾ ೨೦೧೩ರವರೆಗೂ ನಾವು ಬೇಕೋ ಬೇಡದೆಯೋ ಬ್ರಿಟಿಷ್ ಇಂಡಿಯಾದ ಪಳೆಯುಳಿಕೆಯಂತೆಯೇ ಬದುಕಿದ್ದೆವು.

ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿಯೂ ಭಾರತ ಯೋಚಿಸುವ,ಕಾರ್ಯನಿರ್ವಹಿಸುವ ಶೈಲಿ ಕಾಂಗ್ರೆಸ್ಸಿಗಿಂತ ತೀರಾ ಭಿನ್ನವಾಗೇನೂ ಇರಲಿಲ್ಲ,ಬಹುಶಃ ಅದು ಸಮ್ಮಿಶ್ರ ಸರ್ಕಾರದ ಅನಿವಾರ್ಯತೆಯಿದ್ದಿರಬಹುದು.ಆದರೆ,ನರೇಂದ್ರ ಮೋದಿಯವರ ಸರ್ಕಾರದ ಯೋಚನಾ ಶೈಲಿ,ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸಿದ ರೀತಿ ಭಾರತದ ರಾಜಕಾರಣಕ್ಕೆ ಹೊಸತು. ಗಮನಾರ್ಹವೆಂದರೆ ಹೀಗೆ ಮೋದಿ ಸರ್ಕಾರದ ಅವಧಿಯಲ್ಲಿ ಮುಗಿಸಿದ ಯೋಜನೆಗಳು ನೆಹರೂ ಕಾಲದಿಂದ ಶುರುವಾಗಿ ಮನಮೋಹನ್ ಸಿಂಗ್ ಕಾಲದವರೆಗಿನ ಪ್ಲಾನಿಂಗ್ ಗೆ ಸೀಮಿತವಾಗಿದ್ದ ಯೋಜನೆಗಳೂ ಸೇರಿದ್ದವು. ಒಂದೆಡೆ ದೇಶದೊಳಗೆಲ್ಲ ಅಭಿವೃದ್ಧಿಯ ಪರ್ವವಾದರೇ, ಮತ್ತೊಂದು ಕಡೆ ಮತ್ತದೇ ನೆಹರೂ ಕಾಲದಿಂದ ಮೌನ್ ಮೋಹನ್ ಸಿಂಗ್ ಕಾಲದವರೆಗೆ ವಿದೇಶಾಂಗ ನೀತಿಯಲ್ಲಿ ಆಗಿರುವ ಎಡವಟ್ಟುಗಳನ್ನು ಸರಿಪಡಿಸುವ ಕೆಲಸವು ಸಮರೋಪಾದಿಯಲ್ಲಿ ನಡೆದಿದೆ.ಕಳೆದ ೭೦ ವರ್ಷಗಳಲ್ಲಿ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎನ್ನುವುದು ನಮ್ಮ ಎಡಬಿಡಂಗಿ ವಿದೇಶಾಂಗ ನೀತಿಗೆ ಹಿಡಿದ ಕನ್ನಡಿ. ಇಸ್ರೇಲಿನ ಜೊತೆಗೆ ಮಾತನಾಡಿದರೆ ಅರಬ್ ರಾಷ್ಟ್ರಗಳು ಬೇಸರ ಮಾಡಿಕೊಳ್ಳುತ್ತವೆ ಎಂಬ ನೆಹರೂ ಕಾಲದ “ಬ್ರಿಟಿಷ್ ಇಂಡಿಯಾ” ಮನಸ್ಥಿತಿಯ ನೀತಿಯನ್ನು ತಿಪ್ಪೆಗೆಸೆದು, ಏಕಕಾಲದಲ್ಲಿ ಅರಬ್ ಮತ್ತು ಇಸ್ರೇಲಿನೊಂದಿಗೆ ಗರಿಷ್ಟ ಸೌಹಾರ್ದ ಸಂಬಂಧಗಳನ್ನು ಭಾರತ ಸಾಧಿಸಬಲ್ಲದು ಎಂದು ಭಾರತ ತೋರಿಸಿದ್ದು ತನ್ನ “ನವ ಭಾರತ” ಚಿಂತನೆಯ ಮೂಲಕ.

ನೆಹರೂ ಪ್ರಣಿತ “ಬ್ರಿಟಿಷ್ ಇಂಡಿಯಾ” ಕಾಲದ ತಗಡು ಸೆಕ್ಯುಲರಿಸಂ ಚಿಂತನೆಗಳು ನಮ್ಮಲ್ಲಿ ಯಾವ ಪರಿ ಆವರಿಸಿಕೊಂಡಿತ್ತೆಂದರೇ,  ಪ್ರಧಾನಿಯಾದವರು ಬಹಿರಂಗವಾಗಿ ತಮ್ಮ ಇಷ್ಟ ದೈವ,ದೇವಸ್ಥಾನಗಳಿಗೆ ಹೋಗಿದ್ದನ್ನು ನೋಡಿರಲಿಲ್ಲ. ಹೋದರೂ ತೀರಾ ಮೀಡಿಯಾಗಳಲ್ಲಿ ಸುದ್ದಿಯಾಗದಂತೆ ತಣ್ಣಗೆ ಮುಗಿಸಿಕೊಳ್ಳುವ ಉಮೇದಿ ತೋರುತ್ತಿದ್ದರು.ಆದರೆ ನರೇಂದ್ರ ಮೋದಿ ಪ್ರಧಾನಿಯಾದವರೇ ದೊಡ್ಡ ಮಟ್ಟದಲ್ಲಿ ಗಂಗೆಯ ಎದುರಿಗೆ ಹೋಗಿ ನಿಂತರು. ಕಾಶಿ ವಿಶ್ವನಾಥನೆದುರು ಸಂಪ್ರದಾಯ ಬದ್ಧ ಉಡುಪು ಧರಿಸಿ ನಿಲ್ಲಲ್ಲು ಅವರಿಗೆ ಬ್ರಿಟಿಷ್ ಇಂಡಿಯಾ ಚಿಂತನಗೆಳು ಅಡ್ಡಬರಲಿಲ್ಲ. ಕುಂಭ ಮೇಳವೆನ್ನುವುದು ಭಾರತದ ಸಂಸ್ಕೃತಿ ಮತ್ತು ಅಧ್ಯಾತ್ಮ ಪರಂಪರೆಯ ಹೆಮ್ಮೆಯ ಆಚರಣೆ.ಅಂತಹ ಆಚರಣೆಗೆ ಭೇಟಿ ನೀಡಿದ ಎರಡನೇ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಎಂದರೇ ನೀವು ನಂಬಲೇಬೇಕು. ಉಳಿದೆಲ್ಲ ರಾಷ್ಟ್ರಪತಿಗಳನ್ನು ಬ್ರಿಟಿಷ್ ಇಂಡಿಯಾದ ಸೆಕ್ಯುಲರಿಸಂ ಕಟ್ಟಿ ಹಾಕಿತ್ತು. ಪ್ರಧಾನಿ ಮೋದಿಯವರು ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡುವುದರ ಮೂಲಕ ತಮ್ಮ ನವಭಾರತ ಅಸ್ಮಿತೆಯನ್ನು ಮತ್ತೊಮ್ಮೆ ಬಹಿರಂಗವಾಗಿಯೇ ತೋರಿಸಿದರು. ಭಾರತದ ಮೂಲ ಸಂಸ್ಕೃತಿ-ಸಂಪ್ರದಾಯಗಳನ್ನು ಆಚರಿಸುತ್ತಲೇ, ಅಭಿವೃದ್ಧಿಯ ಜಪವನ್ನು ಮುಂದುವರಿಸಿದ್ದಾರೆ.

ದೇಶದ ರಕ್ಷಣೆಯ ವಿಚಾರಕ್ಕೆ ಬಂದರೆ,ಮತ್ತದೇ ನೆಹರೂ ಕಾಲದ ಬ್ರಿಟಿಷ್ ಇಂಡಿಯಾ ಮೈಂಡ್ ಸೆಟ್ಟಿನಲ್ಲಿ ಕಳೆದು ಹೋಗಿದ್ದ ನವಭಾರತವನ್ನು ಹುಡುಕಿ ತೆಗೆದವರು ನರೇಂದ್ರ ಮೋದಿಯವರು. ಅಧಿಕಾರ ವಹಿಸಿಕೊಂಡಾಗ ಪಾಕಿಸ್ತಾನದ ಪ್ರಧಾನಿಯವರಿಗೆ ಆಹ್ವಾನ ನೀಡಿದ್ದರು,ಆಗಿನ ಪ್ರಧಾನಿ ನವಾಜ್ ಷರೀಫ್ ಅವರ ಮಗಳ ಮದುವೆಗೆ ಧುತ್ತನೇ ಪಾಕಿಸ್ತಾನಕ್ಕೆ ಹೋಗಿ ಜಗತ್ತಿನ ಇತರೇ ದೇಶಗಳ ಮೆಚ್ಚುಗೆಗೂ ಪಾತ್ರರಾದರು.ಶಾಂತಿಗಾಗಿ ಇಷ್ಟೆಲ್ಲಾ ಮಾಡಿದಾಗಲೂ ಪಾಕಿಸ್ತಾನ ವಾಪಸ್ಸು ಕೊಟ್ಟಿದ್ದು ಉಗ್ರರ ದಾಳಿಗಳನ್ನೇ. ಕಾಂಗ್ರೆಸ್ ಕಾಲದಲ್ಲಾದರೇ, ಮುಂಬೈ ನಗರದ ಮೇಲೆ ನಡೆದ ದಾಳಿಗೂ ಪ್ರತ್ಯತ್ತರವಿರಲಿಲ್ಲ. ಆದರೆ ಇದು ಮೋದಿಯವರ ನವಭಾರತ ಪಠಾಣ್ ಕೋಟಿನ ಮಿಲಿಟರಿ ನೆಲೆಯ ಮೇಲೆ ನಡೆದ ದಾಳಿಗೆ ಸರ್ಜಿಕಲ್ ಸ್ಟ್ರೈಕಿನ ಉತ್ತರ ಕೊಟ್ಟಿತು ನಮ್ಮ ಸೇನೆ. ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯೊಳಗಿನ ಬಾಲಕೋಟ್ ನಲ್ಲಿನ ಜೈಷೆ ಮಹಮ್ಮದನ ಉಗ್ರರ ಅಡಗುದಾಣವನ್ನೇ ರಾತ್ರೋರಾತ್ರಿ ಭಾರತೀಯ ವಾಯುಸೇನೆ ಧ್ವಂಸ ಮಾಡಿತ್ತು. ಪ್ರತಿಬಾರಿ ಉಗ್ರದಾಳಿ ನಡೆಸಿ ಭಾರತದ ಪ್ರತಿಕಾರದ ಮಾತನಾಡಿದಾಗಲೂ ಅಣ್ವಸ್ತ್ರದ ಹೆಸರೇಳಿ ಬಾಯಿ ಮುಚ್ಚಿಸುತ್ತಿದ್ದ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಹೇಳುವ ಪ್ರಧಾನಿಗಾಗಿ ಈ ದೇಶ ೬೫ ವರ್ಷ ಕಾಯಬೇಕಾಗಿ ಬಂದಿತ್ತು. ಮತ್ತೊಂದು ಮುಖ್ಯ ಅಂಶವೆಂದರೆ, ವಿರೋಧಪಕ್ಷಗಳು ಮೋದಿಯವರು ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ ಎಂದು ಆರೋಪ ಮಾಡುತ್ತಿವೆ.ಆದರೆ ನೀವು ಗಮನಿಸಿ ನೋಡಿ. ಸರ್ಜಿಕಲ್ ಸ್ಟ್ರೈಕಿನ ನಂತರ ಮಾಧ್ಯಮಗಳ ಮುಂದೆ ಬಂದಿದ್ದು ಸೇನೆಯ ಅಧಿಕಾರಿಗಳೇ ಹೊರತು ಸರ್ಕಾರದ ಮಂತ್ರಿಯಲ್ಲ. ಬಾಲಕೋಟ್ ಮೇಲೆ ನಡೆಸಿದ ಏರ್ ಸ್ಟ್ರೈಕಿನ ಮಾಹಿತಿ ನೀಡಿದ್ದು ಸರ್ಕಾರಿ ಅಧಿಕಾರಿಗಳೇ ಹೊರತು ಮಂತ್ರಿಗಳಲ್ಲ.ಹೀಗಿದ್ದಾಗ ಮೋದಿಯಯವರ ಮೇಲಿನ ಆರೋಪಕ್ಕೇನಾದರೂ ತಲೆ ಬುಡವಿದೆಯೇ? ಮತ್ತೊಂದು ವಿಷಯವಿದೆ. ಸೈನ್ಯದ ಪರಾಕ್ರಮ,ವಿಜ್ಞಾನಿಗಳ ಸಾಧನೆಯಾದಾಗ, ವಿಪಕ್ಷಗಳು ಇದು ಅವರ ಸಾಧನೆ ಮೋದಿ ಸರ್ಕಾರದಲ್ಲ ಎನ್ನುತ್ತವೆ. ಆದರೆ,ಪ್ರಶ್ನೆ ಏನೆಂದರೆ, ಕಾಂಗ್ರೆಸ್ಸಿನ ಬ್ರಿಟಿಷ್ ಇಂಡಿಯಾ ಸರ್ಕಾರದಲ್ಲೂ ಇದೇ ಪರಾಕ್ರಮಿ ಸೇನೆಯಿತ್ತು.ಇಷ್ಟೇ ಸಮರ್ಥ ವಿಜ್ಞಾನಿಗಳೂ ಇದ್ದರು. ಆದರೂ ಏಕೆ ಈ ಸಾಧನೆಗಳು ಮೋದಿಯವರ ಕಾಲದಲ್ಲೇ ಆದವು? ಏಕೆಂದರೆ ನವಭಾರತದ ಸಮರ್ಥ ರಾಜಕೀಯ ನಾಯಕತ್ವ ತೋರಿಸಿದವರು ಮೋದಿಯವರು. ನೀವು ಮುನ್ನುಗ್ಗಿ ನಿಮ್ಮ ಹಿಂದೆ ನಾನಿದ್ದೇನೆ ಎನ್ನುವ ಪೊಲಿಟಿಕಲ್ ರಿಸ್ಕ್ ತೆಗೆದುಕೊಂಡವರು ನರೇಂದ್ರ ಮೋದಿ.

ಈ ಯಶಸ್ಸು ಕೇವಲ ಕಾಶ್ಮೀರ-ಪಾಕಿಸ್ತಾನದ ಕತೆಯಲ್ಲ.ಈಶಾನ್ಯ ಭಾರತದ ರಾಜಕೀಯ ಹಾಗೂ ಕಾನೂನು ಸುವ್ಯವಸ್ಥೆಯಲ್ಲೂ ಮೋದಿ ಸರ್ಕಾರದ ಸಾಧನೆ ಅಮೋಘವಾಗಿದೆ. ರಾಜಕೀಯವಾಗಿದೆ ಇಡೀ ಈಶಾನ್ಯ ರಾಜ್ಯಗಳನ್ನು ಕಾಂಗ್ರೆಸ್,ಕಮ್ಯುನಿಸ್ಟ್ ಮುಕ್ಗೊಳಿಸುತ್ತಲೇ, ಪ್ರತ್ಯೇಕತಾವಾದಿಗಳನ್ನು ಹೆಚ್ಚು ಕಡಿಮೆ ಮುಗಿಸಲಾಗಿದೆ. ಪಕ್ಕದ ಮಯನ್ಮಾರ್ ದೇಶದೊಳಗಿದ್ದ ಉಗ್ರರ ಅಡಗುದಾಣಗಳನ್ನು ಎರಡು ಸರ್ಜಿಕಲ್ ಸ್ಟ್ರೈಕ್ ಗಳ ಮೂಲಕ ಭಾರತೀಯ ಸೇನೆ ಧ್ವಂಸ ಮಾಡಿದೆ.ದೋಖ್ಲಾಂ ಗಡಿ ತಗಾದೆಯ ವಿಷಯದಲ್ಲಿ ಚೀನಾದಂತಹ ರಾಷ್ಟ್ರದ ಜೊತೆಗೂ ಬಡಿದಾಡುವ ಎದೆಗಾರಿಕೆ ತೋರಿಸಿದ್ದು ಮೋದಿಯವರ ನವಭಾರತದ ಸಾಧನೆ.

ಬ್ರಿಟಿಷ್ ಇಂಡಿಯಾದ ಚಿಂತನೆ ಭಾರತವನ್ನು ಒಳಗಿನಿಂದಲೇ ದುರ್ಬಲಗೊಳಿಸಿತ್ತು. ಆತ್ಮಗೌರವವನ್ನೇ ಅಡಮಾನವಿಟ್ಟಂತಹ ರಾಜಕೀಯ ನಾಯಕತ್ವದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತನಗೇ ನ್ಯಾಯಯುತವಾಗಿ ದಕ್ಕಬೇಕಿದ್ದ ಸ್ಥಾನಮಾನದಿಂದ ವಂಚಿತವಾಗಿತ್ತು.ಆದರೆ ಮೋದಿಯವರ ನವಭಾರತದ ಚಿಂತನೆ ಯಾವ ಪರಿವ್ಯಾಪಿಸಿದೆಯಿಂದರೆ, ಭಾರತದ ರಾಜಕಾರಣಿಯೊಬ್ಬರನ್ನು ವಿದೇಶದವರು ಕುತೂಹಲದಿಂದ ನೋಡುತ್ತಿದ್ದಾರೆ.ಅದೂ ಕೂಡ ಒಳ್ಳೆಯ ಕಾರಣಕ್ಕೆ. ಕಳೆದ ೫ ವರ್ಷಗಳಲ್ಲಿ ಮೋದಿಯವರ ನೇತೃತ್ವದಲ್ಲಿ ನವಭಾರತ ಹೊಸ ದಿಕ್ಕಿನೆಡೆಗೆ ಸಾಗಲು ಹೆಜ್ಜೆಯಿಟ್ಟಿದೆ. ಈಗಿನದು ಇನ್ನೂ ಆರಂಭದ ಕಾಲ, ಭಾರತೀಯರ ಈ ನವ ಅಸ್ಮಿತೆ ಉಳಿಯಬೇಕಾದರೇ ಮತ್ತೊಮ್ಮೆ ಮೋದಿಯವರೇ ಬರಬೇಕು, ಬಂದು ತಾವು ಬಿಟ್ಟಿರುವ ನವಭಾರತದ ಹಾದಿಯಲ್ಲಿ ಈ ದೇಶವನ್ನು ಇನ್ನಷ್ಟು ದೂರ ಕೊಂಡೊಯ್ಯಬೇಕಿದೆ. ಒಂದು ವೇಳೆ ಮೋದಿಯವರಲ್ಲದೇ ಬೇರೆ ಯಾರಾದರೂ ಅಧಿಕಾರಕ್ಕೆ ಬಂದರೆ ಮತ್ತದೇ ಬ್ರಿಟಿಷ್ ಇಂಡಿಯಾಕ್ಕೆ ಮರಳುವ ಅಪಾಯವೂ ಇದೆ. ಭಾರತೀಯರ ಮಟ್ಟಿಗೆ ಅದಕ್ಕಿಂತ ದೊಡ್ಡ ಆತ್ಮಘಾತುಕ ನಿರ್ಧಾರ ಮತ್ತೊಂದಿರಲಾರದು.  ಈ ಕಾರಣದಿಂದಲೇ ೨೦೧೯ರ ಲೋಕಸಭಾ ಚುನಾವಣೆ ಕೇವಲ ಮತ್ತೊಂದು ಚುನಾವಣೆಯಲ್ಲ. ಇದು ನವಭಾರತ Vs ಬ್ರಿಟಿಷ್ ಇಂಡಿಯಾ ನಡುವಿನ ಹೋರಾಟ. ನಿಮಗೆ ನರೇಂದ್ರರ  ನವಭಾರತ ಬೇಕೋ,ನೆಹರೂ ಕಾಲದ ಬ್ರಿಟಿಷ್ ಇಂಡಿಯಾ ಬೇಕೋ ನಿರ್ಧಾರ ನಿಮಗೆ ಬಿಟ್ಟದ್ದು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments