ಮತದಾರರ ಮೋದಿ Vs ಬೆಂಗಳೂರು ಮಾಫಿಯಾ
– ರಾಕೇಶ್ ಶೆಟ್ಟಿ
‘ನಾವು ಗೆದ್ದಿರುವ ಕ್ಷೇತ್ರಗಳನ್ನು ಕಳೆದುಕೊಳ್ಳಬಾರದು ಅಣ್ಣ. ಈ ಹಿಂದೆ ಯುಟಿ ಖಾದರ್ ಅಪ್ಪನ ಕಾಲದಲ್ಲೇ ಉಳ್ಳಾಲದಲ್ಲಿ ಬಿಜೆಪಿಯಿಂದ ಜಯರಾಮ ಶೆಟ್ಟರು ಗೆದ್ದಿದ್ದರು. ನಂತರದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕೋಪಿಸಿಕೊಂಡು ದಳಕ್ಕೆ ಹೋಗಿ ಸ್ಪರ್ಧಿಸಿ ವೋಟ್ ಡಿವೈಡ್ ಮಾಡಿದರು.ಹಾಗೆ ಕಾಂಗ್ರೆಸ್ಸಿನ ಯು.ಟಿ ಫರೀದ್ ಗೆದ್ದರು. ಉಳ್ಳಾಲ ನಮ್ಮ ಕೈ ಬಿಟ್ಟು ಹೋಯಿತು. ಅಲ್ಲಿಂದ ಇಲ್ಲಿನವರೆಗೆ ನಮಗೆ ಆ ಕ್ಷೇತ್ರವನ್ನು ಮತ್ತೆ ಗೆಲ್ಲಲಿಕ್ಕಾಗಿಲ್ಲ ನೋಡಿ’ ನನ್ನ ತಮ್ಮನಂತಹ ಮಿತ್ರ ರಾಜೇಶ್ ನರಿಂಗಾನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ ಮಾತು ನನಗೀಗ ನೆನಪಾಯ್ತು. ನೆನಪು ಮಾಡಿಸಲು ಕಾರಣವಾಗಿದ್ದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಒಳಬೇಗುದಿ.
ಬೆಂಗಳೂರು ದಕ್ಷಿಣದ ಬಗ್ಗೆ ಮಾತನಾಡುವ ಮೊದಲು, ರಾಜರಾಜೇಶ್ವರಿ ನಗರ,ಜಯನಗರದ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಬೇಕು.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಅತಿ ಪ್ರಮುಖ ನಾಯಕರು ಹಠಾತ್ ನಿಧನರಾಗುವ ಮೂಲಕ ಪಕ್ಷಕ್ಕೆ ನಷ್ಟವಾಗಿದೆ. ಆದರೆ ಈ ರೀತಿಯ ಹಠಾತ್ ಆಘಾತಗಳು ಈ ಪಕ್ಷದ ಆರಂಭದಿಂದಲೇ ಶುರುವಾಗಿದೆ. ಪಕ್ಷದ ಆಧಾರ ಸ್ತಂಭದಂತಿದ್ದ ಶ್ಯಾಂ ಪ್ರಸಾದ್ ಮುಖರ್ಜಿ,ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕೊಲೆಗಳು ಮೊದಲನೇ ಆಘಾತಗಳು. ಅದರಿಂದ ಚೇತರಿಸಿಕೊಂಡೇ ಪಕ್ಷ ಇಲ್ಲಿವರೆಗೂ ಬಂದು ನಿಂತಿದೆ. ಪ್ರಮೋದ್ ಮಹಾಜನ್,ಗೋಪಿನಾಥ್ ಮುಂಡೆ,ಪರಿಕ್ಕರ್, ಅನಂತಕುಮಾರ್,ವಿಜಯಕುಮಾರ್ ಇವೆಲ್ಲ ಇತ್ತೀಚಿನ ಆಘಾತಗಳು.
ಸರಳ,ಸಜ್ಜನ ಮತ್ತು ಅಪ್ಪಟ ಕೆಲಸಗಾರ, ಜಯನಗರ ಶಾಸಕರಾಗಿದ್ದ ವಿಜಯಕುಮಾರ್ ಅವರ ಧಿಡೀರ್ ಮರಣ ರಾಜ್ಯದ ರಾಜಕಾರಣದ ಪಾಲಿಗೆ ದೊಡ್ಡ ನಷ್ಟ. ತಾನೊಬ್ಬ ಶಾಸಕನೆಂಬ ಯಾವ ಕೋಡು-ಕೊಂಬುಗಳಿಲ್ಲದೇ ಜನರ ಕೈಗೆ ಸಿಗುತ್ತಿದ್ದ,ಜನರ ಜೊತೆಗೆ ಬೆರೆಯುತ್ತಿದ್ದ ಪುಣ್ಯಾತ್ಮ ಅವರು. ಅವರ ನಿಧನದಿಂದ ತೆರವಾದ ಜಾಗಕ್ಕೆ ಅವರ ಸಹೋದರ ಸಂಘದ ಸ್ವಯಂಸೇವಕರಾದ ಪ್ರಹ್ಲಾದ್ ಅವರನ್ನು ಪಕ್ಷ ಆಯ್ಕೆ ಮಾಡಿತ್ತು. ಆದರೆ ಪಕ್ಷದ ಈ ಆಯ್ಕೆ ಬಿಜೆಪಿಯ ‘ಬೆಂಗಳೂರು ಮಾಫಿಯಾ’ ಗ್ಯಾಂಗಿಗೆ ಸುತರಾಂ ಒಪ್ಪಿಗೆಯಿರಲಿಲ್ಲ. ಅಸಲಿಗೆ ಈ ಗ್ಯಾಂಗಿಗೆ ವಿಜಯಕುಮಾರ್ ಅವರೇ ಸರಿಹೊಂದುತ್ತಿರಲಿಲ್ಲ. ಇವರಂತೆ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡಿಕೊಳ್ಳದ ಕಾರಣಕ್ಕೋ. ಏನೋ? ಆದರೆ ವಿಜಯಕುಮಾರ್ ಅವರು ಈ ಗ್ಯಾಂಗ್ ಚಿಗುರುವ ಮುನ್ನವೇ ತಮ್ಮ ಸ್ಥಾನ ಗಳಿಸಿಕೊಂಡಿದ್ದರಿಂದ ಸಹಿಸಿಕೊಳ್ಳದೇ ವಿಧಿಯಿರಲಿಲ್ಲ. ಅಂತಹ ಗ್ಯಾಂಗಿಗೆ ವಿಜಯಣ್ಣನ ಹಠಾತ್ ನಿರ್ಗಮನ ಬೆಂಗಳೂರಿನ ಮತ್ತೊಂದು ಕ್ಷೇತ್ರ ನಮ್ಮ ತೆಕ್ಕೆಗೆ ಬಂತೆಂಬ ಸಂತಸ ತಂದಿತ್ತು. ಆದರೆ ಪಕ್ಷದ ನಿರ್ಧಾರ ಬಿಸಿತುಪ್ಪವಾಯಿತು.
ಬೆಂಗಳೂರು ಬಿಜೆಪಿಯ ಪ್ರಮುಖ ನಾಯಕರೊಬ್ಬರ ಕುಮ್ಮಕ್ಕಿನಿಂದ ಕಾರ್ಪೋರೆಟರ್ ಒಬ್ಬರು ಬಹಿರಂಗವಾಗಿಯೇ ಕಾಂಗ್ರೆಸ್ ಬೆಂಬಲಕ್ಕೆ ನಿಂತರು. ಹಾಗೆ, ಬಿಜೆಪಿಯ ಪಾಲಿನ ಭದ್ರ ಕ್ಷೇತ್ರವಾಗಿದ್ದ ಜಯನಗರ ಕಳೆದ ಚುನಾವಣೆಯಲ್ಲಿ ಕೈ ಪಾಲಾಯಿತು. ಇನ್ನದು ಮರಳುವುದು ಯಾವಾಗಲೋ? ಬೆಂಗಳೂರು ಬಿಜೆಪಿ, ತಮ್ಮ ಅಡ್ಜಸ್ಟ್ಮೆಂಟ್ ರಾಜಕೀಯದ ಹಿಡಿತದಲ್ಲೇ ಇರಬೇಕೆಂಬ ‘ಬೆಂಗಳೂರು ಮಾಫಿಯಾ’ ಎಷ್ಟು ಪವರ್ ಫುಲ್ ಎಂದರೇ,ಪಕ್ಷದ ವಿರುದ್ಧ ಬಹಿರಂಗ ಬಂಡಾಯ ತೋರಿದ ಆ ಕಾರ್ಪೋರೇಟರ್ರಿಗೆ ಒಂದು ನೋಟಿಸ್ ಕೂಡ ಕೊಡಲು ಬಿಡಲಿಲ್ಲ.
ಬಿಜೆಪಿಯ ಬೆಂಗಳೂರು ಮಾಫಿಯಾ ಪಕ್ಷವನ್ನು ಸೋಲಿಸಿದ ಮತ್ತೊಂದು ಕ್ಷೇತ್ರ RR ನಗರ. ಪಕ್ಷದ ಪುರಾತನ ರಾಜಕಾರಣಿಗಳ ವಿರೋಧದ ನಡುವೆಯೂ ಯುವ ರಾಜಕಾರಣಿ ತುಳಸಿ ಮುನಿರಾಜು ಗೌಡ ಅವರಿಗೆ ಅಲ್ಲಿಯ ಟಿಕೆಟ್ ನೀಡಲಾಗಿತ್ತು. ಡಿಕೆ ಸಹೋದರರ ವಿರುದ್ಧ ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ ಬಾರಿ ಒಳ್ಳೆಯ ಫೈಟ್ ನೀಡಿದ್ದವರು ಮುನಿರಾಜು ಗೌಡ. ಹಾಗೆ ನೋಡಿದರೆ, RR ನಗರದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಜನ ಹೊಸ ಮುಖಕ್ಕೆ ಅವಕಾಶ ಕೊಡಲು ತಯಾರಾಗಿದ್ದರು. ಅದರಲ್ಲೂ ಮುನಿರಾಜು ಗೌಡರ ಯುವಪಡೆ, ಅಲ್ಲಿನ ಶಾಸಕರ ಚುನಾವಣ ಅಕ್ರಮಗಳ ಮೇಲೆ ಮುರಕೊಂಡು ಬಿದ್ದ ರೀತಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಸಾವಿರಾರುಗಟ್ಟಲೇ ಮತದಾರರ ಚೀಟಿಯನ್ನು ಸಂಗ್ರಹಿಸಿಟ್ಟ ಅಕ್ರಮ ರಾಜ್ಯದ ಚುನಾವಣ ಇತಿಹಾಸದಲ್ಲೊಂದು ಕಪ್ಪುಚುಕ್ಕೆ. ಬೇಸರದ ಸಂಗತಿಯೆಂದರೆ ಇಂತಹದ್ದೊಂದು ಸಾಹಸ ತೋರಿದ ಮುನಿರಾಜು ಗೌಡರ ತಂಡದ ಜೊತೆಗೆ ಬೆಂಗಳೂರು ಮಾಫಿಯಾ ನಿಲ್ಲಲೇ ಇಲ್ಲ. ಬದಲಿಗೆ ಮತ್ತದೇ ತಮ್ಮ ನಟೋರಿಯಸ್ ಅಡ್ಜಸ್ಟ್ಮೆಟ್ ರಾಜಕೀಯಕ್ಕೆ ಗಂಟುಬಿದ್ದು ಬಿಜೆಪಿಯ ಟಿಕೆಟ್ ಆಕಾಂಕ್ಷಿಯೊಬ್ಬರಿಗೆ ಮತ್ತೊಂದು ಪಕ್ಷದ ಟಿಕೆಟ್ ಕೊಡಿಸಿ ಮತವಿಭಜನೆ ಮಾಡಿಸಿ ಬಿಜೆಪಿಗೆ ಸೋಲುಂಟಾಗುವಂತೆ ಮಾಡಿದರು.
ಬೆಂಗಳೂರು ಮಾಫಿಯಾ ಇಷ್ಟೆಲ್ಲಾ ಮಾಡಲು 2 ಮುಖ್ಯ ಕಾರಣಗಳಿವೆ. ಒಂದು, ಬೆಂಗಳೂರು ಬಿಜೆಪಿ ರಾಜಕೀಯ ಎಂದಿಗೂ ಅವರ ಕಪಿಮುಷ್ಟಿಯಲ್ಲೇ ಇರಬೇಕು ಎನ್ನುವುದು. ಎರಡನೆಯದು, ಹೊಸ ತಲೆಮಾರಿನ, ತತ್ವ-ಸಿದ್ಧಾಂತಕ್ಕೆ ಬದ್ಧರಾದ ನಾಯಕರು ಇವರ ಅಡ್ಜಸ್ಟ್ಮೆಂಟ್ ರಾಜಕೀಯಕ್ಕೆ ತಡೆಯಾಗುತ್ತಾರೆ ಎನ್ನುವುದು. ಅಸಲಿಗೆ, ಬೆಂಗಳೂರು ಮಾಫಿಯಾಕ್ಕೆ ತಮ್ಮ ಸಾಮ್ರಾಜ್ಯದ ಸಾಮ್ರಾಟ ಕಿರೀಟ ಮುಖ್ಯವೇ ಹೊರತು ಪಕ್ಷ,ಸಿದ್ಧಾಂತ ಮತ್ತು ಪ್ರಾಮಾಣಿಕ ರಾಜಕಾರಣವಲ್ಲ.
ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಕಡೆಗೆ ಬಂದರೆ, ಅನಂತಕುಮಾರ್ ಅವರಂತಹ ಡೈನಾಮಿಕ್ ಲೀಡರ್ ಅವರನ್ನು ಕಳೆದುಕೊಂಡ ಆಘಾತ ಪಕ್ಷಕ್ಕಾದರೇ, ಬೆಂಗಳೂರು ಬಿಜೆಪಿ ಈಗ ಸಂಪೂರ್ಣ ನನ್ನದು ಎನ್ನುವ Opportunity ಬೆಂಗಳೂರು ಮಾಫಿಯಾದ ಪಾಲಿಗೆ. ಆ ಕಾರಣಕ್ಕೇ ಮೊದಲಿಗೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಲೂ ಮಾಫಿಯಾ ಒಪ್ಪಿರಲಿಲ್ಲ. ಆ ನಂತರ ಅದ್ಯಾರು ಕರೆದು ಏನು ಬುದ್ಧಿ ಹೇಳಿದರೋ ಗೊತ್ತಿಲ್ಲ.ತೇಜಸ್ವಿನಿಯವರನ್ನು ಅಭ್ಯರ್ಥಿಯನ್ನಾಗಿ ಮಾಫಿಯಾ ಒಪ್ಪಿತ್ತು!
No Doubt. ಅನಂತಕುಮಾರರ ಸ್ಥಾನವನ್ನು ಸಮರ್ಥವಾಗಿ ತುಂಬುವ ಸಾಮರ್ಥ್ಯವಿದ್ದವರು ತೇಜಸ್ವಿನಿ ಅನಂತಕುಮಾರ್ ಅವರು. ತಮ್ಮ ಅದಮ್ಯ ಚೇತನ ಸಂಸ್ಥೆಯಲ್ಲಿ ಅವರು ಮಾಡುತ್ತಿರುವ ಕೆಲಸಗಳು ಅದಕ್ಕೆ ಉದಾಹರಣೆ. ಇತ್ತೀಚಿನ ರಾಜಕಾರಣಿಗಳಲ್ಲಿ ಅಪರೂಪವಾದ ಪರಿಸರ ಪ್ರೇಮ ಉಳ್ಳವರು ತೇಜಸ್ವಿನಿಯವರು.ಅನಂತಕುಮಾರರ ಪ್ರತಿ ಚುನಾವಣೆಯಲ್ಲಿ,ಅವರು ದೆಹಲಿಯಲ್ಲಿದ್ದಾಗ ಕ್ಷೇತ್ರದ ಜನರ ಸಮಸ್ಯೆ ಆಲಿಸಿದ ಅನುಭವಿಯೂ ಹೌದು. ಇಷ್ಟು ಕ್ವಾಲಿಫಿಕೇಶನ್ನು ಇದ್ದು ಅವರಿಗೆ ಅಂತಿಮ ಹಂತದಲ್ಲಿ ಟಿಕೆಟ್ ನಿರಾಕರಿಸಿದ ರೀತಿ ಖುದ್ದು ತೇಜಸ್ವಿನಿಯವರೂ ಸೇರಿದಂತೆ ಪಕ್ಷದ ರಾಜ್ಯ ನಾಯಕರು ಮತ್ತು ಆ ಕ್ಷೇತ್ರದ ಬಿಜೆಪಿ ಬೆಂಬಲಿಗರಿಗೂ ಆಘಾತ ನೀಡಿದ್ದು ವಾಸ್ತವ. ಮಧ್ಯರಾತ್ರಿ ಪ್ರಕಟವಾದ ಹೆಸರಲ್ಲಿ ಅಚ್ಚರಿಯೆಂಬಂತೆ 28ರ ಹುಡುಗ ತೇಜಸ್ವಿ ಸೂರ್ಯ ಹೆಸರು ಹೊರಹೊಮ್ಮಿತು. ತೇಜಸ್ವಿ ನನಗೆ ಪರಿಚಿತ. ಅವರೊಂದಿಗೆ ಬೇರೆ ಬೇರೆ ವಾಹಿನಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಯಾವುದೇ ವಿಷಯವನ್ನು ಸಮರ್ಥ ಹಾಗೂ ತರ್ಕಬದ್ಧವಾಗಿ ಮಂಡಿಸುವ ಸಾಮರ್ಥ್ಯ ಉಳ್ಳವ ತೇಜಸ್ವಿ. ಸದ್ಯದ ರಾಜ್ಯ ಬಿಜೆಪಿಗೆ ಅತ್ಯಗತ್ಯವಾಗಿ ಬೇಕಾದ ಕ್ವಾಲಿಟಿಯದು. ವಿರೋಧ ಪಕ್ಷಗಳು ಶಿಶುಪಾಲನಂತೆ ತಪ್ಪು ಮಾಡುತ್ತಿದ್ದರೂ ಅದನ್ನು ಸಮರ್ಥವಾಗಿ ಜನರ ಮುಂದಿಡುವ ಸಾಮರ್ಥ್ಯವೇ ಇಲ್ಲದವರೇ ಈಗಿನ ಬಿಜೆಪಿಯ ಆಸ್ತಿ. ಇನ್ನು ರಾಷ್ಟ್ರಮಟ್ಟದಲ್ಲಿ ಹಿರಿಯ ನಾಯಕರ ನಿಧನ, ವಯೋ ಸಹಜ ಆರೋಗ್ಯ ಸಮಸ್ಯೆ,ನಿವೃತ್ತಿಯಿಂದಾಗಿ ಹೊಸ ರಾಜಕಾರಣಿಗಳು ಒಳಬರಬೇಕಾದ ಮನ್ವಂತರದ ಸಮಯವಿದು.ಹೀಗಿರುವಾಗ, ನವಭಾರತ/ನವಕರ್ನಾಟಕ ರಾಜಕಾರಣಕ್ಕೆ ಇಂತಹ ಹೊಸಮುಖದ ಅವಶ್ಯಕತೆ ಖಂಡಿತ ಇತ್ತು.ಬಹುಶಃ ಇದೆಲ್ಲವನ್ನು ಮನದಲ್ಲಿಟ್ಟುಕೊಂಡೇ ಕೇಂದ್ರದ ಬಿಜೆಪಿ ತೇಜಸ್ವಿಯನ್ನು ಕಣಕ್ಕಿಳಿಸಿರಬಹುದು.
ಯಥಾ ಪ್ರಕಾರ, ಬೆಂಗಳೂರು ಮಾಫಿಯಾಕ್ಕೇ ಈ ನಿರ್ಧಾರ ಮರ್ಮಾಘಾತ ತಂದೊಡ್ಡಿದೆ. ಎದುರಿಗೆ ತೇಜಸ್ವಿನಿಯವರಿಗೆ ಅನ್ಯಾಯವಾಯಿತೆಂದು ತೋರಿಸಿಕೊಳ್ಳುತ್ತಿದ್ದರೂ ಆಳದಲ್ಲಿ, ಮೇಲೆ ಹೇಳಿದಂತೆ ತಮ್ಮ ಗ್ಯಾಂಗಿಗೆ ಸೇರದ ಈ ಹೊಸ ಹುಡುಗ ತಮಗೆಲ್ಲಿ ಅಡ್ಡಗಾಲಾಗುತ್ತಾನೋ ಎಂಬ ಶುದ್ಧ ವ್ಯಾವಾಹರಿಕ ಸಮಸ್ಯೆ ಬೆಂಗಳೂರು ಮಾಫಿಯಾದ್ದು. ತಮ್ಮ ಉದ್ದೇಶ ಸಾಧನೆಗಾಗಿ ಇವರು ಬೆಂಗಳೂರು ದಕ್ಷಿಣವನ್ನು ಕಾಂಗ್ರೆಸ್ ಮಡಿಲಿಗೆ ಒಪ್ಪಿಸಲು ಹೇಸದವರಲ್ಲ. ಸದ್ಯದ ಬೆಳವಣಗೆಗಳೆಲ್ಲ ಅದೇ ರೀತಿಯಲ್ಲಿವೆ.
ಒಂದು ಕಡೆ ಸಮಸ್ತ ದೇಶ,ದೇಶದ ಯುವಜನತೆ, ಒಂದೊಂದು ಮತ,ಒಂದೊಂದು ಕ್ಷೇತ್ರವೂ ಮುಖ್ಯವೆಂದು #ಮೋದಿಮತ್ತೊಮ್ಮೆ ಎನ್ನುವ ಘೋಷಣೆಯೊಂದಿಗೆ ಕೆಲಸ ಮಾಡುತ್ತಿದ್ದರೇ, ಇತ್ತ ಬೆಂಗಳೂರು ಮಾಫಿಯಾ ಕ್ಷೇತ್ರವನ್ನು ಬಲಿಕೊಡಲು ಹೊರಟುನಿಂತಂತಿದೆ.
ಮೊದಲೇ ಹೇಳಿದಂತೆ ತೇಜಸ್ವಿನಿಯವರಿಗೆ ಟಿಕೆಟ್ ನಿರಾಕರಿಸಿದ ರೀತಿ ಸರಿಯಲ್ಲ.ಮುಂದೆ ಅವರಿಗೆ ಸೂಕ್ತ ಸ್ಥಾನಮಾನವನ್ನು ಬಿಜೆಪಿ ನೀಡಲೂಬಹುದು ಮತ್ತು ನೀಡಬೇಕು ಕೂಡ. ಆದರೆ ಸದ್ಯದ ತುರ್ತು, ಪ್ರತಿಯೊಂದು ಕ್ಷೇತ್ರವನ್ನು ಮೋದಿಯವರಿಗಾಗಿ,ದೇಶಕ್ಕಾಗಿ ಗೆಲ್ಲಿಸಿಕೊಡಬೇಕು. ತೇಜಸ್ವಿನಿ ಅನಂತಕುಮಾರ್ ಅವರ ದನಿಯಲ್ಲೇ ಹೇಳುವುದಾದರೇ “ದೇಶ ಮೊದಲು”.
ನೆನಪಿಡಿ- ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ನರೇಂದ್ರ ಮೋದಿ Vs ಬೆಂಗಳೂರು ಮಾಫಿಯಾ ಹೋರಾಟ. ದೇಶದ ಹಲವು ಮಾಫಿಯಾಗಳನ್ನು ಮುರಿದುಹಾಕಿರುವ ಮೋದಿಯವರು ಬೆಂಗಳೂರು ಮಾಫಿಯಾವನ್ನು ಮುರಿಯಬಲ್ಲರು. ಮತದಾರರಾಗಿ ಮೋದಿಯವರಿಗೆ ಮತ ನೀಡುವುದೇ ನಾವೀಗ ಮಾಡಬೇಕಾದ ಕೆಲಸ.
ದೇಶ ಗೆಲ್ಲಲಿ. ನರೇಂದ್ರ ಮೋದಿಯವರು ಗೆಲ್ಲಲಿ. ಬೆಂಗಳೂರು ಮಾಫಿಯಾ ಸೋತು ನವಭಾರತ/ನವಕರ್ನಾಟಕದ ರಾಜಕಾರಣ ಚಿಗುರೊಡೆಯಲಿ.
ಯಾವ ಮಾಪಿಯಾ ಅನ್ನುವದನ್ನು ತಿಳಿಸಬೇಕು ಹಾಗೆ ಈ ಮಾಪಿಯಾ ಪಕ್ಷದ ಒಳಗಿನವರೊ ಅಥವಾ ಹೊರಗಿನವರೊ ಅದರ ಮೇಲೆ ಬೆಳಕು ಚಲ್ಲಿ
ಬೆಂಗಳೂರು ಬಿಜೆಪಿಯ ಸಾಮ್ರಾಟರ ಪರಿಚಯ ನಿಮಗಿಲ್ಲವೇನು ರಾಯರೇ?