ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 7, 2019

1

‘ನಿಧಿ’ಗಿಂತ ‘ದನಿ’ನೀಡುವ ಸಂಸದರು ಬೇಕು – ಸಂಸದರ ಕಾರ್ಯಕ್ಷೇತ್ರದ ಅರಿವೂ ಇರಬೇಕು!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

ಉತ್ತರಕನ್ನಡದ ಸಂಸದರಾದ ಅನಂತ್ ಕುಮಾರ್ ಹೆಗಡೆ ಮಾತನಾಡಿದರೆ ವಿವಾದವಾಗುತ್ತದೆ ಎಂದು ತಿಳಿದವರೇ ಹೆಚ್ಚು. ಹೆಗಡೆಯವರು ನಮ್ಮ ಸಂಸ್ಕೃತಿ, ಪರಂಪರೆ, ಸಂವಿಧಾನ ಹಾಗೂ ಸಂಸದರ ಜವಾಬ್ಧಾರಿಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ, ತರ್ಕಬದ್ಧವಾಗಿ ಮಾತನಾಡಬಲ್ಲರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇತ್ತೀಚೆಗೆ ಅನಂತಕುಮಾರ ಹೆಗಡೆಯವರು ಸಂಸದರ ಜವಾಬ್ಧಾರಿಗಳ ಬಗ್ಗೆ ಮಾತಾಡಿರುವ ಒಂದು ಪುಟ್ಟ ವೀಡಿಯೋ ನೋಡಿದೆ. ಆ ಪುಟ್ಟ ವೀಡಿಯೋದಲ್ಲಿ ಹೆಗಡೆಯವರು ಸಂಸದರ ಕಾರ್ಯವ್ಯಾಪ್ತಿಯ ಬಗ್ಗೆ ಬಹಳ ಅದ್ಭುತವಾಗಿ ಮಾತನಾಡಿದ್ದಾರೆ. ಅಭಿವೃದ್ಧಿಯ ಅತ್ಯಂತ ಮಾರ್ಮಿಕ ವಿಶ್ಲೇಷಣೆ ಮಾಡಿದ್ದಾರೆ. ಅವರ ಪ್ರಕಾರ ಅಭಿವೃದ್ಧಿಯೆಂದರೆ ಕೇವಲ ಕಾಮಗಾರಿಗಳಲ್ಲ, ಕಾಮಗಾರಿಗಳು ಕೇವಲ ಅಭಿವೃದ್ಧಿಯ ಒಂದು ಭಾಗವಷ್ಟೇ. ಸಮುದಾಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಲ್ಕು ವಿಧಗಳಿವೆ. ಮೂಲಭೂತ ಅಭಿವೃದ್ಧಿ, ಸಾಂಸ್ಕøತಿಕ ಅಭಿವೃದ್ಧಿ,ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ. ಅಭಿವೃದ್ಧಿ ನಿರಂತರ ಪ್ರಕ್ರಿಯೆ, ಅದಕ್ಕೆ ಅಂತ್ಯವಿಲ್ಲ. ಕಾಮಗಾರಿಗೆ ಮಾತ್ರ ಅಂತ್ಯವಿದೆ. ಜನಸಾಮಾನ್ಯರಿಗೆ ಮೂಲಭೂತ ಅಭಿವೃದ್ಧಿಯಷ್ಟೇ ಕಾಣುತ್ತದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಅವರು ಹೆಚ್ಚು ಒತ್ತು ಕೊಡುವುದಿಲ್ಲ. ಸಮುದಾಯದ ಅಭಿವೃದ್ದಿಯ ಅಂತರಾಳ ಅಡಗಿರುವುದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ! ಇದರ ಒಂದು ಭಾಗ ಮಾತ್ರ ಮೂಲಭೂತ ಅಭಿವೃದ್ಧಿ. ಇದು ಅವರ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ.ಕೇಂದ್ರ ಯಾವ ಮೂಲಭೂತ ಅಭಿವೃದ್ಧಿಗೆ ಒತ್ತು ಕೊಡಬೇಕು? ಒಂದು ಗ್ರಾಮೀಣ ಕಾಮಗಾರಿಗೆ ಗ್ರಾ.ಪಂ. ಜಿ.ಪಂ ಸದಸ್ಯರಷ್ಟೇ ಮಹತ್ವವನ್ನು ಸಂಸದರೂ ಕೊಡಬೇಕಾ?ಆ ಮಟ್ಟದಲ್ಲಿ ರಾಜಕಾರಣವನ್ನು ಒಬ್ಬ ಸಂಸದ ಮಾಡಬಾರದು.ಸಂಸದರ ಕಾರ್ಯವ್ಯಾಪ್ತಿಯ ಅರಿವೇ ಇಲ್ಲದೆ ಅತ್ಯಂತ ಕೆಳಹಂತಕ್ಕೆ ಇಳಿದು ರಾಜಕಾರಣ ಮಾಡುವುದು ಮತ್ತು ಹಾಗೆ ನಿರೀಕ್ಷಿಸುವುದು ದುರ್ದೈವ ಎನ್ನುತ್ತಾರೆ.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವ ನಾವು ಅನಂತಕುಮಾರ್ ಹೆಗಡೆಯವರ ಅಭಿವೃದ್ದಿಯ ವಿಶ್ಲೇಷಣೆ ಮತ್ತು ಸಂದದರ ಕಾರ್ಯವ್ಯಾಪ್ತಿ ಮತ್ತು ಜವಾಬ್ಧಾರಿಗಳ ಬಗ್ಗೆ ಚರ್ಚಿಸಲು ಇದು ಅತ್ಯಂತ ಸೂಕ್ತ ಸಂದರ್ಭ ಎನಿಸುತ್ತದೆ. ಸಂವಿಧಾನದ 111ನೇ ಪರಿಚ್ಛೇದದ ಪ್ರಕಾರ ಸಂಸದರು ದೇಶದ ಕಾನೂನು ರೂಪಿಸುವ ಮೂಲಭೂತ ಜವಾಬ್ಧಾರಿಯನ್ನು ಹೊಂದಿರುತ್ತಾರೆ. ಇದೊಂದು ಸಾಮೂಹಿಕ ಜವಾಬ್ಧಾರಿ.ವೈಯಕ್ತಿಕವಾಗಿ ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಜವಾಬ್ಧಾರಿ ಹೊಂದಿರುತ್ತಾರೆ. ಇದರಲ್ಲಿ ಪ್ರದೇಶಾಭಿವೃದ್ದಿ ನಿಧಿಯ ಸಮರ್ಪಕ ಬಳಕೆ,ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವುದು, ಕೇಂದ್ರದ ಯೋಜನೆಗಳನ್ನು ನಿಯಂತ್ರಿಸುವುದು ಮತ್ತು ಅವುಗಳ ಸಮರ್ಪಕ ಅನುಷ್ಠಾನದ ಮೇಲೆ ಹದ್ದಿನ ಕಣ್ಣಿಡುವುದು ಮುಖ್ಯವಾಗುತ್ತದೆ.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ(ಎಂಪಿಎಲ್‍ಎಡಿಎಸ್) ಪ್ರತಿ ಸಂಸದರಿಗೆ ವಾರ್ಷಿಕ ರೂ.5 ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಈ ಹಣ ಸಂಬಂಧಿಸಿದ ಕ್ಷೇತ್ರವ್ಯಾಪ್ತಿಯ ಜಿಲ್ಲಾಧಿಕಾರಿಗಳ ಮೂಲಕ ವಿನಿಯೋಗಿಸಲ್ಪಡುತ್ತದೆ. ಬಹುತೇಕ ಸಂಸದರು ಈ ಹಣವನ್ನು ಖರ್ಚು ಮಾಡಿಬಿಟ್ಟರೆ ತಮ್ಮ ಜವಾಬ್ಧಾರಿ ಮುಗಿಯಿತು ಎಂದೇ ಭಾವಿಸಿದ್ದಾರೆ. ಈ 5 ಕೋಟಿ ಹಣವನ್ನು ಸಂಸದರು ಹೇಗೆ ಬಳಸಬೇಕು ಎಂಬುದರ ಬಗ್ಗೆ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದಿಂದ ವಿಸೃತ ನಿರ್ದೇಶನವಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳ ರಿಪೇರಿ ಕೆಲಸಗಳಿಗೆ, ಪ್ರತಿಮೆ, ನಾಮಫಕಗಳಿಗೆ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಕಛೇರಿ ಮತ್ತು ವಸತಿ ನಿರ್ಮಾಣಕ್ಕೆ,ಧಾರ್ಮಿಕ ಹಿನ್ನಲೆಯ ಭೂ ಅಭಿವೃದ್ದಿಗೆ,ಭೂಸ್ವಾಧೀನ ಮತ್ತು ಪರಿಹಾರ ನೀಡಲು,ರಾಜ್ಯ ಮತ್ತು ಕೇಂದ್ರ ಪರಿಹಾರ ನಿಧಿಗಳಿಗೆ ಈ ಅನುದಾನ ಬಳಸಲು ಅವಕಾಶವಿರುವುದಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಎಷ್ಟೋ ಜನ ಸಂಸದರಿಗೇ ಗೊತ್ತಿಲ್ಲ. ಈ ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಜಾರಿಗೆ ಬಂದು 25 ವರ್ಷಗಳಾಗಿವೆ. ಈಗಲೂ ಈ ನಿಧಿಯನ್ನು ದೇಶದ ಎಲ್ಲಾ ಸಂಸದರು ಪೂರ್ಣವಾಗಿ ಬಳಸಿದ ಉದಾಹರಣೆಯಿಲ್ಲ,( ಮಾಜಿ ಪ್ರಧಾನಿ ದೇವೇಗೌಡರು ಒಮ್ಮೆ ಶೇ.100 ಈ ನಿಧಿಯನ್ನು ಬಳಸಿದ್ದರೆ, ಹಿಂದೆ ಸಂಸದರಾಗಿದ್ದ ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಶೇ.7ರಷ್ಟು ಮಾತ್ರ ಬಳಸಿದ್ದರು) ಸಾಂಖ್ಯಿಕ ಹಾಗು ಯೋಜನಾ ಅನುಷ್ಠಾನ ಸಚಿವಾಲಯವೇ ಒಪ್ಪಿಕೊಂಡಿರುವಂತೆ ಹಾಲಿ ಸಂಸದರು ಒಟ್ಟಾರೆ ರೂ.3000 ಕೋಟಿಗಳಷ್ಟು ಅನುದಾನವನ್ನು ಬಳಸದೇ ಉಳಿಸಿದ್ದಾರೆ. ಈ ನಿಧಿಯ ಬಗ್ಗೆ ಸಂಸದರಿಗೆ ಕಳೆದ 25 ವರ್ಷಗಳಲ್ಲಿ ತಿಳುವಳಿಕೆ ನೀಡಲು ಒಂದು ಸಭೆಯೂ ನಡೆದಿಲ್ಲ. ಅಂತಹ ಒಂದು ಮೊದಲ ಸಭೆ ಮೋದಿಯವರ ಕಾಲದಲ್ಲಿ ಕಳೆದ ಜನವರಿಯಲ್ಲಿ ನಡೆದಿದೆ ಎಂಬುದೇ ಹೆಗ್ಗಳಿಕೆಯ ಸಂಗತಿ. ಇಂತಹ ಒಂದು ಮಹತ್ವಪೂರ್ಣ ಸಭೆಗೆ ಹಾಜರಾಗಿರುವ ಲೋಕಸಭಾ ಸದಸ್ಯರ ಸಂಖ್ಯೆ ಕೇವಲ 49.

ಇನ್ನು ಈ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ದಿಗೆ ಸಂಬಂಧಿಸಿದಂತೆ ಅಭಿವೃದ್ದಿ ಕಾರ್ಯಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಆಯಾ ಪ್ರದೇಶದ ಅವಶ್ಯಕತೆಗಳ ಬಗ್ಗೆ ಸಂಸದರಿಗೆ ಚೆನ್ನಾಗಿ ಮನವರಿಕೆ ಆಗಿರಬೇಕು. ಸಿಎಜಿ ವರದಿ ಸಮುದಾಯದ ಪಾಲ್ಗೊಳ್ಳುವಿಕೆಯ ಬಗ್ಗೆಯಾಗಲೀ, ಪ್ರಾದೇಶಿಕ ಅವಶ್ಯಕತೆಗಳನ್ನು ಅರಿಯಲು ಜನ ಮತ್ತು ಸಂಸ್ಥೆಗಳನ್ನು ಗಣನೆಗೆ ತೆಗೆದುಕೊಂಡ ಬಗ್ಗೆಯಾಗಲೀ ತೃಪ್ತಿ ವ್ಯಕ್ತಪಡಿಸಿಲ್ಲ. ಸಂಸದರು ಈ ನಿಧಿಯನ್ನು ಆರಂಭಿಕ ವರ್ಷಗಳಲ್ಲಿ ಪೂರ್ಣವಾಗಿ ಬಳಸದೆ ತಮ್ಮ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಚುನಾವಣಾ ಕೊಡುಗೆಗಳನ್ನಾಗಿ ಬಳಸುತ್ತಿರುವ ಬಗ್ಗೆಯೂ ಸಿಎಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿರುವುದರಿಂದ ಈ ಅಭಿವೃದ್ಧಿ ಕಾಮಗಾರಿಗಳ ಮೇಲೆ ಆಡಳಿತಗಳು ನಿರೀಕ್ಷಿತ ಪ್ರಮಾಣದ ನಿಯಂತ್ರಣ ಹೊಂದಿ ಗುಣಮಟ್ಟ ಮತ್ತು ಉದ್ದೇಶ ಕಾಪಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಉದಾಹರಣೆಯೆಂದರೆ ಯುಪಿಎ ಸರ್ಕಾರವಿದ್ದಾಗ ದೇಶದ ನೂರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸರ್ಕಾರಿ/ಖಾಸಗಿ ಆಡಳಿತ ಕಛೇರಿಗಳನ್ನು ನಿರ್ಮಿಸಲಾಗಿದೆ. ಧರ್ಮಾಧಾರಿತ ಮಂದಿರಗಳನ್ನು ನಿರ್ಮಿಸಲಾಗಿದೆ, ವಿಶ್ವಸ್ಥ ಸಂಸ್ಥೆಗಳು ಮತ್ತು ಸೊಸೈಟಿಗಳಿಗೆ 25ಲಕ್ಷಕ್ಕೂ ಹೆಚ್ಚು ಅನುದಾನ ನೀಡಲಾಗಿದೆ.ಇವೆಲ್ಲಾ ಸಂಸದರ ನಿಧಿಗೆ ಇರುವ ನಿರ್ಬಂಧಗಳು. 23 ರಾಜ್ಯಗಳ 36 ಜಿಲ್ಲೆಗಳಲ್ಲಿ ಜಿಲ್ಲಾಡಳಿತ 2004 ರಿಂದ 2009ರವರೆಗೆ ಎಂಪಿಎಲ್‍ಎಡಿಎಸ್ ಯೋಜನೆಯಡಿ ನಿರ್ವಹಿಸಲಾದ ಯಾವುದೇ ಕಾಮಗಾರಿಯ ಪರಿಶೀಲನೆ ನಡೆಸಿರಲಿಲ್ಲ. ಇದೆಲ್ಲಾ ಸಂಸದರ ನಿಧಿಯ ಸಮರ್ಪಕ ಬಳಕೆಯ ಬಗ್ಗೆಯೇ ಅನುಮಾನ ಮೂಡಿಸುವಂತಿದೆ.

ಅನಂತಕುಮಾರ್ ಹೆಗಡೆ ಅವರು ಅಭಿಪ್ರಾಯ ಪಡುವಂತೆ ಸಂಸದರು ತೀರಾ ಕೆಳಹಂತಕ್ಕಿಳಿದು ರಾಜಕೀಯ ಮಾಡುವ ಅಗತ್ಯ ಇರುವುದಿಲ್ಲ, ಹಾಗೆ ಮಾಡಲೂಬಾರದು. ಒಂದು ಚರಂಡಿ, ರಸ್ತೆಯನ್ನು ಸ್ಥಳೀಯ ಗ್ರಾ,ಪಂಚಾಯಿತಿ ಅಥವಾ ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಸದಸ್ಯರೇ ನಿರ್ಮಿಸಬಹುದು. ಅದಕ್ಕೆ ಸಂಸದರೇ ಆಗಬೇಕೆಂದಿಲ್ಲ. ಸಂಸದರು ತಮ್ಮ ಕ್ಷೇತ್ರವ್ಯಾಪ್ತಿಯ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರಬೇಕು. ಆ ಪ್ರದೇಶದ ಆರ್ಥಿಕ ಅಭಿವೃದ್ಧಿ, ಒಟ್ಟಾರೆ ಸಾಮಾಜಿಕ ಸ್ಥಿತಿಗತಿಯ ಸುಧಾರಣೆ, ಮಾನವಸಂಪನ್ಮೂಲದ ಅಭಿವೃದ್ಧಿ, ಕೌಶಲ ಅಭಿವೃದ್ಧಿ, ಯವಶಕ್ತಿಯ ಸದ್ಭಳಕೆ, ತಂತ್ರಜ್ಞಾನದ ಸುಧಾರಣೆ ಇಂತಹ ವಿಷಯಗಳಲ್ಲಿ ಕ್ರಿಯಾಶೀಲರಾಗಿರಬೇಕು. ಉದಾಹರಣೆಗೆ ಮೋದಿಯವರು ತಮ್ಮ 5 ವರ್ಷಗಳ ಅವಧಿಯಲ್ಲಿ ಸುಮಾರು 45ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವುಗಳಲ್ಲಿ ಪ್ರಧಾನಮಂತ್ರಿ ಜನಧನ್ ಯೋಜನೆ, ಮುದ್ರಾ ಯೋಜನೆ, ಜೀವಜ್ಯೋತಿ ಭೀಮಾ ಯೋಜನೆ, ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸಂಸದ್ ಆದರ್ಶ ಗ್ರಾಮ ಯೋಜನೆ,ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಯುವಕರಿಗಾಗೇ ರೂಪಿಸಿದ ಉಡಾನ್ ಯೋಜನೆ,ಡಿಜಿಟಲ್ ಇಂಡಿಯಾ,ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್, ಆಯುಷ್ಮಾನ್ ಯೋಜನೆ ಇವು ಪ್ರಮುಖವಾದವುಗಳು. ಈ ಯೋಜನೆಗಳನ್ನು ಎಷ್ಟು ಜನ ಸಂಸದರು ಜನರಿಗೆ ತಲುಪಿಸಲು ಪ್ರಯತ್ನಿಸಿದ್ದಾರೆ ಎಂಬುದು ಗೊತ್ತಿಲ್ಲ. ಏಕೆಂದರೆ ಕೆಲವು ಸಂಸದರಿಗೇ ಈ ಎಲ್ಲಾ ಯೋಜನೆಗಳ ಪೂರ್ಣ ಮಾಹಿತಿ ಇಲ್ಲ. ಗೊತ್ತಿದ್ದರೂ ತಮ್ಮ ಪಕ್ಷದ್ದಲ್ಲದ ಸರ್ಕಾರದ ಯೋಜನೆಗಳ ಬಗ್ಗೆ ಏಕೆ ಮಾತಾಡಬೇಕು? ಅನಗತ್ಯ ಪ್ರಚಾರ ಏಕೆ ನೀಡಬೇಕು? ಎಂಬ ದಿವ್ಯ ತಿರಸ್ಕಾರ ಇರುತ್ತದೆ. ಇದರಿಂದ ನಷ್ಟ ಉಂಟಾಗುವುದು ಜನರಿಗೆ. ಸಾಮಾನ್ಯ ಜನರು ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಯುವಕರು ಶಿಕ್ಷಣ,ಕೌಶಲ ಮತ್ತು ಉದ್ಯೋಗದ ಅವಕಾಶಗಳಿಂದ ವಂಚಿತರಾಗುತ್ತಾರೆ. ಜನರಿಗೆ ಅಗತ್ಯ ಮಾಹಿತಿ ನೀಡುವುದು, ಅವರನ್ನು ಮುಖ್ಯವಾಹಿನಿಯ ಯೋಜನೆಯ
ಫಲಾನುಭವಿಗಳನ್ನಾಗಿಸುವುದು ಐದು ವರ್ಷಕ್ಕೆ 20 ಕೋಟಿ ಪೂರಾ ಎಂಪಿಎಲ್‍ಎಡಿಎಸ್ ಅನುದಾನ ಖರ್ಚು ಮಾಡುವುದಕಿಂತ ಮುಖ್ಯವಾದುದು. ಇದೇ ಸಾಂಸ್ಕøತಿಕ, ಸಾಮಾಜಿಕ ಅಭಿವೃದ್ಧಿ. ಒಮ್ಮೆ ಸಂಸದನಾಗಿ ಆಯ್ಕೆಯಾದ ವ್ಯಕ್ತಿ ಪಕ್ಷಾತೀತವಾಗಿ ಕೆಲಸ ಮಾಡಬೇಕು.ಕೇಂದ್ರದ ಜನಪರ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸಿ ಅದರ ಸದುಪಯೋಗ ಪಡೆಯುವಂತೆ ಮಾಡಬೇಕಾದ ಜವಾಬ್ಧಾರಿ ಸಂಸದರ ಮೇಲೇ ಇರುತ್ತದೆ. ಆ ಮಟ್ಟಿಗೆ ಅವರು ಜನರಿಗೆ ಉತ್ತರದಾಯಿತ್ವ ಹೊಂದಿರುತ್ತಾರೆ ಎಂಬುದನ್ನು ಅವರು ಮರೆಯಬಾರದು.

ಸಂಸದರ ನಿಧಿಯ ಹೆಚ್ಚಿನ ಪ್ರಾತಿನಿಧ್ಯ ಕುಡಿಯುವ ನೀರಿಗೇ ಸಿಕ್ಕಿದೆ.ಶಿಕ್ಷಣ ಕ್ಷೇತ್ರ ಎರಡನೇ ಸ್ಥಾನದಲ್ಲಿದೆ.ಇದರ ನಂತರದ ಸ್ಥಾನ ವಿದ್ಯುತ್, ಆರೋಗ್ಯ ಮತ್ತು ನೀರಾವರಿಗೆ ದಕ್ಕಿದೆ. ಬಿಹಾರ ರಾಜ್ಯ ಆರೋಗ್ಯ ಸೇವೆಗೆ ಹೆಚ್ಚಿನ ಒತ್ತು ನೀಡಿದ್ದರೆ ಇಡೀ ದೇಶದಲ್ಲಿ ಪುಟ್ಟ ರಾಜ್ಯ ಸಿಕ್ಕಿಂ ಮಾತ್ರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀರಾವರಿಗೆ ಮಹತ್ವ ನೀಡಿದ ಏಕಮೇವ ರಾಜ್ಯ ಎನಿಸಿದೆ. ಕರ್ನಾಟಕವೂ ಸೇರಿದಂತೆ ಛತ್ತೀಸ್‍ಗಡ್, ಕೇರಳ, ಒಡಿಸ್ಸಾ, ಉತ್ತರ ಪ್ರದೇಶ್,ರಾಜಾಸ್ತಾನ್ , ಮೇಘಾಲಯ, ಅಸ್ಸಾಂ ರಾಜ್ಯಗಳ ಸಂಸದರು ಶಿಕ್ಷಣಕ್ಕಾಗಿ ಹೆಚ್ಚು ಸಂಸದರ ಪ್ರದೇಶಾಭಿವೃದ್ಧಿ ಹಣ ಖರ್ಚು ಮಾಡುತ್ತಿದ್ದಾರೆ. ಈ ಒಟ್ಟಾರೆ ಮೊತ್ತ ಸುಮಾರು 4500 ಲಕ್ಷ ಮೀರುತ್ತದೆ. ಶಿಕ್ಷಣಕ್ಕಾಗಿ ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿಯೂ ನಾವು ಪ್ರಜ್ಞಾವಂತ ಮತದಾರರನ್ನು ಸೃಷ್ಟಿಸಲಾಗುತ್ತಿಲ್ಲವಲ್ಲ ಎಂಬುದೇ ಒಂದು ದೊಡ್ಡ ದುರಂತವೆನಿಸಿದೆ. ನಮಗೆಂತಹ ನಾಯಕ ಬೇಕು, ಎಂತಹ ಸಂಸದರು ಬೇಕು ಎಂಬುದನ್ನು ನಾವೀಗ ಸ್ಪಷ್ಟವಾಗಿ ತೀರ್ಮಾನಿಸಬೇಕಿದೆ! ಆ ನಿಧಿ, ಈ ನಿಧಿ ಕೊಡುವುದಕ್ಕಿಂತ ನಮ್ಮ ಆಶೋತ್ತರಗಳಿಗೆ ದನಿ ನೀಡುವ ಸಂಸದರು ನಮ್ಮ ಆಯ್ಕೆ ಆಗಬೇಕಲ್ಲವೇ?

1 ಟಿಪ್ಪಣಿ Post a comment
  1. ನರಸಿಂಹ ರಾಯಚೂರ
    ಏಪ್ರಿಲ್ 8 2019

    ಒಳ್ಳೆಯ ಮಾಹಿತಿ ಒಬ್ಬ ಸಂಸದ ಏನು ಮಾಡಬೇಕು ಯಾವುದಕ್ಕೆ ಪ್ರಾಶಸ್ತ್ಯ ಕೊಡಬೇಕು ಯಾವುದನ್ನು ಗಮನಿಸಬೇಕು ಯಾವುದನ್ನು ಮಾಡಬಾರದು
    ಒಳ್ಳೆಯ ಮಾಹಿತಿಗಾಗಿ ವಂದನೆ ಅಭಿನಂದನೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments