ವಿಷಯದ ವಿವರಗಳಿಗೆ ದಾಟಿರಿ

ಜೂನ್ 14, 2019

1

ಕೆಲವು ವ್ಯಕ್ತಿತ್ವಗಳು ಅರ್ಥವಾಗಬಾರದು, ಅಮಿತ್ ಶಾರಂತೆ!

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

೨೦೧೫ರ ಅಕ್ಟೋಬರಿನಲ್ಲಿ ದೆಹಲಿಯ ಶ್ಯಾಮ್‌ಪ್ರಸಾದ್ ಮುಖರ್ಜಿ ಅಧ್ಯಯನ ಕೇಂದ್ರ ಯುವ ಬರಹಗಾರರನ್ನು ಕರೆಸಿ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಆಯೋಜಿಸಿತ್ತು. ದೇಶದ ಮೂಲೆಮೂಲೆಗಳಿಂದ ಆಗಮಿಸಿದ್ದ ಬರಹಗಾರರು ದೆಹಲಿಯ ಪಾಲಿಕಾ ಭವನದಲ್ಲಿ ಕಿಕ್ಕಿರಿದು ತುಂಬಿದ್ದರು. ಎರಡು ದಿನ ಪೂರ್ತಿ ರಾಷ್ಟ್ರೀಯತೆ, ರಾಜಕೀಯ ಸಿದ್ಧಾಂತಗಳು, ರಾಷ್ಟ್ರೀಯತೆಯ ಸವಾಲುಗಳು ಮತ್ತು ಅಪಾಯಗಳ ಬಗೆಗಿನ ಗೋಷ್ಠಿಗಳು ನಡೆದವು. ಅನಿರ್ಬನ್ ಗಂಗೂಲಿ, ವಿವೇಕ್ ಅಗ್ನಿಹೋತ್ರಿ, ಆರೆಸ್ಸೆಸ್ಸಿನ ನಂದಕುಮಾರ್ ಮುಂತಾದ ಖ್ಯಾತ ಚಿಂತಕರ ಗೋಷ್ಠಿಗಳು ಜರುಗಿದವು. ಸಮಾರೋಪ ಸಮಾರಂಭಕ್ಕೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾರವರು ಆಗಮಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಲಾಯಿತು. ಅಲ್ಲಿಯವರೆಗೂ ವೈಚಾರಿಕತೆಯ ಗುಂಗಲ್ಲಿದ್ದ ಕೆಲ ಯುವ ಬರಹಗಾರರು ಸಣ್ಣಗೆ ಗೊಣಗಲಾರಂಭಿಸಿದರು. ಇಷ್ಟು ಹೊತ್ತು ಚಿಂತಕರಿಂದ ಉಪನ್ಯಾಸ ಮಾಡಿಸಿದ ಕೇಂದ್ರದವರು ಈಗ ರಾಜಕಾರಣಿಯನ್ನೇಕೆ ಕರೆಸಿದ್ದಾರೆ? ಅದೂ ರಾಜಕಾರಣ ಮತ್ತು ರಾಜಕೀಯ ಸಿದ್ಧಾಂತಗಳ ಬಗ್ಗೆ ಅಮಿತ್ ಶಾರೇನು ಮಾತಾಡಬಲ್ಲರು? ಹೆಚ್ಚೆಂದರೆ ಜನಸಂಘದ ಒಂದೆರಡು ಕಥೆಗಳನ್ನು ಹೇಳಿ ಮುಗಿಸಬಲ್ಲರಷ್ಟೆ ಎಂದುಕೊಂಡರು. ಸಂಜೆಯಾಯಿತು. ಎಂದಿನಂತೆ ಮುಖ ಗಂಟಿಕ್ಕಿಕೊಂಡ ಅಮಿತ್ ಶಾ ವೇದಿಕೆಗೆ ಹತ್ತಿದರು. ಪೋಡಿಯಂ ಮುಂದೆ ನಿಂತರು.ಇದ್ದಕ್ಕಿದ್ದಂತೆ ಪಿಸುಗುಡುತ್ತಿದ್ದ ಪಾಲಿಕಾ ಭವನದ ಸಭಾಂಗಣ ಸೂಜಿ ಬಿದ್ದರೂ ಸದ್ದಾಗುವಷ್ಟು ಮೌನವಾಯಿತು, ಗಡಸು ಧ್ವನಿಗೆ ಸಭೆ ಸಮ್ಮೋಹನಕ್ಕೊಳಗಾಯಿತು. ಮುಂದಿನ ಒಂದೂವರೆ ಗಂಟೆ ಅಮಿತ್ ಶಾ ಅದೆಂಥಾ ವಾಗ್ಝರಿ ಹರಿಸಿದರೆಂದರೆ ತಿಲಕರು, ಸಾವರ್ಕರರು ಬಂದುಹೋದರು. ಗಾಂಧಿ ಚಳವಳಿ ಮತ್ತು ಸ್ವಾತಂತ್ರ್ಯಪೂರ್ವದ ಕಾಂಗ್ರೆಸಿನ ವಿಶ್ಲೇಷಣೆಯಾಯಿತು. ಲೋಹಿಯಾ ವಾಕ್ಯಗಳ ಉಲ್ಲೇಖವಾಯಿತು. ಜೆಪಿ ನುಸುಳಿದರು, ಹಳೆಯ ಯುಎಸ್‌ಎಸ್‌ಆರ್‌ನ ಪ್ರಾರಬ್ಧಗಳ ಮಂಡನೆಯಾಯಿತು. ನೆಹರೂ ಯುಗದ ಅದ್ವಾನಗಳು ಎಳೆಎಳೆಯಾಗಿ ಬಿಚ್ಚಲ್ಪಟ್ಟವು. ಮುಖರ್ಜಿ, ಉಪಾಧ್ಯಾಯರ ಆದರ್ಶಮಯ ಸಿದ್ಧಾಂತಗಳು ತೇಲಿಬಂದವು. ಅಟಲ್-ಅಧ್ವಾನಿಯವರ ರಾಜಕೀಯ ಬದ್ಧತೆಯವರೆಗೂ ಮಾತು ಸಾಗಿತು. ಕೆಲ ಚಿಂತಕರು ಘನಗಂಭೀರವಾಗಿ ತಲೆತೂಗುತಿದ್ದರೆ, ಇನ್ನು ಕೆಲವರು ಟಿಪ್ಪಣಿ ಮಾಡಿಕೊಳ್ಳತೊಡಗಿದರು! ಅಂದರೆ ಅಮಿತ್ ಶಾ ಸಂಶೋಧಕರಂತೆ, ಇವೆಲ್ಲಕ್ಕೂ ಪುರಾವೆ ಅಂಗೈಯಲ್ಲಿದೆ ಎನ್ನುವಂತೆ ಅಧಿಕಾರಯುತವಾಗಿ ಮಾತಾಡುತ್ತಿದ್ದರು. ಅವರು ಕಮ್ಯುನಿಸ್ಟ್ ಸಿದ್ಧಾಂತವನ್ನು, ಸಮಾಜವಾದವನ್ನು, ರಾಷ್ಟ್ರೀಯತೆಯ ಮಜಲುಗಳೆಲ್ಲವನ್ನೂ ಅರೆದು ಕುಡಿದಿದ್ದರು. ಅವರ ಅಂದಿನ ಮಾತುಗಳು ಸಭಿಕರಲ್ಲಿ ಎಂಥಾ ಗುಂಗು ಹಿಡಿಸಿತ್ತೆಂದರೆ ಭಾಷಣದ ನಂತರ ಆಯೋಜಕರು ಪ್ರಶ್ನೆಗಳಿಗೆ ಅವಕಾಶವಿದೆ ಎಂದು ಘೋಷಿಸಿದರು. ಆದರೆ ಯಾರಲ್ಲೂ ಪ್ರಶ್ನೆಗಳು ಉಳಿದಿರಲಿಲ್ಲ.

ಹಾಗೆ ನೊಡಿದರೆ ಅಮಿತ್ ಶಾ ಅಂದು ಹಾಗೆ ಕಂಡಿದ್ದು ನಮಗೆ ಮಾತ್ರವೇನೂ ಅಲ್ಲ, ಅವರು ಹಾಗೆ ಕಾಣುವುದು ಮೊದಲೂ ಆಗಿರಲಿಲ್ಲ!

ವಿಚಿತ್ರವೆಂದರೆ ಅವರು ಯಾವಾಗಲೂ ದೇಶಕ್ಕೆ ಕಂಡಿದ್ದು ಹಾಗೆಯೇ, ಇಂದು ಕಾಣುತ್ತಿರುವುದೂ ಹಾಗೆಯೇ. ಈ ಮನುಷ್ಯ ಜೀವನದಲ್ಲಿ ಒಮ್ಮೆಯಾದರೂ ನಗಾಡಿರಬಹುದೇ ಎಂದುಕೊಂಡರೆ ಮರುಕ್ಷಣದಲ್ಲೇ ಎಲ್ಲೋ ಕುಗ್ರಾಮದ ಮನೆಯಲ್ಲಿ ನಗುನಗುತ್ತಾ ಊಟ ಮಾಡುತ್ತಿರುತ್ತಾರೆ, ಇವರು ಚುನಾವಣಾ ಪ್ರಚಾರದ ಚಪ್ಪಾಳೆ ಭಾಷಣಗಳಿಗೆ ಮಾತ್ರ ತಕ್ಕವರು ಎಂದುಕೊಳ್ಳುತ್ತಿದ್ದಂತೆ ಮರುದಿನವೇ ಎಲ್ಲೋ ಒಂದೆಡೆ ಕಠೋಪನಿಷತ್ತಿನ ಉಪನ್ಯಾಸದ ವರದಿಯಾಗಿರುತ್ತದೆ! ಸಂಜೆಯ ಹೊತ್ತಿಗೆ ತೂತ್ತುಕುಡಿಯಲ್ಲಿದ್ದವರು ರಾತ್ರಿ ಬೈಠಕನ್ನು ಗಾಂಧಿನಗರದಲ್ಲಿ ತೆಗೆದುಕೊಂಡಿರುತ್ತಾರೆ. ಹೀಗೆ ಅಮಿತ್ ಶಾ ಎಂದರೆ ರಾಷ್ಟ್ರ ರಾಜಕಾರಣದಲ್ಲಿ ಏಕಕಾಲಕ್ಕೆ ಕೌತುಕದ, ಅಚ್ಚರಿಯ ಮತ್ತು ಅರ್ಥವಾಗದ ವ್ಯಕ್ತಿತ್ವ. ಅಂಥ ವ್ಯಕ್ತಿತ್ವದ ಬಗ್ಗೆ ಬರಹಗಳೂ ಹೆಚ್ಚಿಲ್ಲ ಎನ್ನುವುದು ಮತ್ತೊಂದು ಅಚ್ಚರಿ. ಹಾಗಾಗಿ ಅವರ ಬಗ್ಗೆ ವಿಪರೀತ ದಂತಕಥೆಗಳಿವೆ. ಅವು ಅವರ ಜನಪ್ರೀಯತೆಯಿಂದ ಹುಟ್ಟಿಕೊಂಡವೇ ಹೊರತು ಅಮಿತ್ ಶಾ ಹೋರಾಟದ ಬದುಕಿನ ಬಗ್ಗೆ ಹೆಚ್ಚಿನದೇನನ್ನೂ ಬಿಚ್ಚಿಡುವುದಿಲ್ಲ.

ಅಂಥ ಅಚ್ಚರಿಯ ವ್ಯಕ್ತಿತ್ವದ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ಪುಸ್ತಕ ಕೂಡಾ ಅವರ ಬಗೆಗಿನ ಕುತೂಹಲವನ್ನು ಸಂಪೂರ್ಣ ತಣಿಸುವುದಿಲ್ಲ. ಅನಿರ್ಬನ್ ಗಂಗೂಲಿಯವರಂಥ ಮಹಾನ್ ಚಿಂತಕ, ಸಮಾಜಶಾಸ್ತ್ರಜ್ಞ ಬರೆದ ‘ಅಮಿತ್ ಶಾ; ಅಂಡ್ ದಿ ಮಾರ್ಚ್ ಆಫ್ ಬಿಜೆಪಿ’ಯಲ್ಲಿ ಕಾಣುವ ಅಮಿತ್ ಶಾ ಅಂಥವರೇ. ಕೆಲವೇ ದಿನಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿರುವ ಈ ಪುಸ್ತಕ ಶಾ ಬಗೆಗಿನ ಅಪರೂಪದ ಮಾಹಿತಿಯನ್ನು ದಾಖಲಿಸಿದರೂ ಉಳಿದಿದ್ದೇ ಹೆಚ್ಚು ಎಂಬ ಭಾವನೆ ಮೂಡುತ್ತದೆ. ಅದರಲ್ಲೂ ಪುಸ್ತಕಕ್ಕೆ ಮುನ್ನುಡಿ ಬರೆದ, ರಾಜಕಾರಣಿಗಳನ್ನು “ಅದಾಲತ್’ನಲ್ಲಿ ನಿಲ್ಲಿಸಿ ನೀರು ಕುಡಿಸುವ ಚಾಣಾಕ್ಷ್ಯ ರಜತ್ ಶರ್ಮಾ ಅವರೇ, ‘ಅಮಿತ್ ಶಾ ಸಂಪೂರ್ಣವಾಗಿ ಅರ್ಥವಾಗದ ಮನುಷ್ಯ, ಅವರ ಎಲ್ಲಾ ರಾಜಕೀಯ ನಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೂ ಅವರ ವ್ಯಕ್ತಿತ್ವವನ್ನು ಸಂಪೂರ್ಣ ತೆರೆದಿಡಲು ಅಸಾಧ್ಯ’ಎಂದರೆ ಅಮಿತ್ ಶಾ ಅದೆಂಥಾ ಶಕ್ತಿಯಾಗಿರಬಹುದು? ಅವರದ್ದೆಂಥಾ ಹೋರಾಟದ ವ್ಯಕ್ತಿತ್ವವಾಗಿರಬಹುದು?

ಅಮಿತ್ ಶಾ ಬದುಕಿನ ಕೆಲವು ಪುಟಗಳನ್ನು ನೋಡಿದರೂ ಶಕ್ತಿ ಮತ್ತು ಶಕ್ತಿ ಸಂಚಯನದ ಹಲವು ಉದಾಹರಣೆಗಳು ಸಿಗುತ್ತವೆ.

ಶಾ ಆಗ ಗುಜರಾತಿನ ಗೃಹ ಸಚಿವರಾಗಿದ್ದರು. ಆದರೆ ಅಮಿತ್ ಶಾ ಅವರನ್ನು ಬಿಜೆಪಿಗಿಂತಲೂ ಹೆಚ್ಚಾಗಿ ಕಾಂಗ್ರೆಸಿಗರು ತಿಳಿದುಕೊಂಡಿದ್ದರು! ಮುಂದೊಂದು ದಿನ ಈ ಮನುಷ್ಯ ತಮಗೆ ಅಡ್ಡಿಯಾಗಲಿದ್ದಾನೆ ಎಂಬ ಮುನ್ಸೂಚನೆ ಕಾಂಗ್ರೆಸಿಗೆ ಹೇಗೆ ಸಿಕ್ಕಿತೋ ಗೊತ್ತಿಲ್ಲ, ಶಾ ಅವರನ್ನು ಹಣಿಯಲು ತಂತ್ರ ರೂಪಿಸಿದರು. ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಯಿತು. ವೊಟ್ಟವೊದಲ ಬಾರಿಗೆ ದೇಶದಲ್ಲಿ ರಾಜ್ಯದ ಗೃಹಸಚಿವರೊಬ್ಬರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾದೆವೆಂದು ಕಾಂಗ್ರೆಸಿಗರು ಹಿಗ್ಗಿದರು. ಜೈಲಿಂದ ಹೊರಬಂದ ಶಾರನ್ನು ರಾಜ್ಯದಿಂದ ಗಡಿಪಾರು ಮಾಡಲಾಯಿತು. ಶಾ ದೆಹಲಿ ಸೇರಿದರು. ಯೋಚಿಸಿ, ಒಂದು ರಾಜ್ಯದ ಗೃಹ ಸಚಿವರಾಗಿದ್ದವರು ಹಿಂದೆ ಮುಂದೆ ಸುತ್ತಾಡುತ್ತಿದ್ದ ಜನಗಳನ್ನು, ತನ್ನ ರಾಜ್ಯವನ್ನು ಬಿಟ್ಟು ದೆಹಲಿ ಸೇರಿ ಏಕಾಂಗಿಯಾದರು. ಕಾಂಗ್ರೆಸಿಗರು ಅವರಿಗೆಷ್ಟು ಮಾನಸಿಕ ಹಿಂಸೆ ಕೊಟ್ಟರೆಂದರೆ ಅಮಿತ್ ಶಾ ಅವರು ಫೋನಿನಲ್ಲಿ ಮಾತಾಡಲಾರದಂತೆ ಮಾಡಿಬಿಟ್ಟಿದ್ದರು. ಸಮೀಪದಲ್ಲಿ ಕುಟುಂಬವಿಲ್ಲ, ಏನೆಂದರೆ ಏನೂ ಇಲ್ಲ. ಎಂಥವರೂ ಖಿನ್ನತೆಗೆ ಹೊರಟುಹೋಗಬಹುದಾದ ಸಂದರ್ಭ. ಆ ಹೊತ್ತನ್ನು ಈ ಮನುಷ್ಯ ಅದ್ಯಾವ ರೀತಿಯಲ್ಲಿ ಆತ್ಮಾವಲೋಕನ ಮಾಡಿಕೊಂಡರೋ ಏನೋ. ಹಣ್ಣಾದರು, ಗಟ್ಟಿಯಾದರು, ಪಕ್ವವಾದರು. ಮುಂದಿನ ದಿನಗಳಿಗೆ ಸಿದ್ಧವಾದರು. ಅಂತಿಮವಾಗಿ ನಾವಿಂದು ಕಾಣುವ ಅಮಿತ್ ಶಾ ಅಲ್ಲಿ ತಯಾರಾದರು.

ಅವರ ಬದುಕಿನ ಎಲ್ಲಾ ನಡೆಗಳನ್ನು ನೋಡಿದರೂ ಕಾಣುವುದು ಸಂಪೂರ್ಣ ಅರ್ಥವಾಗದ ಅದೇ ವ್ಯಕ್ತಿತ್ವ! ಬಿಜೆಪಿಯ ಗಂಧ ಗಾಳಿ ಇಲ್ಲದಿದ್ದ ಪೂರ್ವಾಂಚಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದರಿಂದ ತೊಡಗಿ ಉತ್ತರ ಪ್ರದೇಶದಲ್ಲಿ ೭೩ ಲೋಕಸಭಾ ಸೀಟುಗಳನ್ನು ಗೆಲ್ಲಿಸಿದ ತಂತ್ರಕ್ಕೆ ಯಾರೊಬ್ಬರೂ ಇದಮಿತ್ಥಂ ಎಂದು ಕಾರಣಗಳನ್ನು ಹುಡುಕಲಾಗದು. ಯಾವ ರಾಜಕೀಯ ಪಂಡಿತನೂ ಒಂದು ಹಂತದವರೆಗೆ ಮಾತ್ರ ಉತ್ತರ ಪ್ರದೇಶದ ಗೆಲುವಿಗೆ ಕಾರಣಗಳನ್ನು ಕೊಡಬಲ್ಲನೇ ಹೊರತು ಅಂತಿಮ ಉತ್ತರವನ್ನು ನೀಡಲಾರ. ಅದರಲ್ಲೂ ಅವರೆಲ್ಲರೂ ನೀಡುವ ಉತ್ತರಗಳು, ಹಾಥಿ ನಹೀ ಗಣೇಶ್ ಹೈ ಎನ್ನುವ ಘೋಷಣೆಗಳಿಗೆ ಸರ್ಕಾರ ಬದಲಿಸುವ ಉತ್ತರ ಪ್ರದೇಶದ ಜಾಯಮಾನಕ್ಕೆಂದೂ ಸರಿಹೊಂದುವುದೂ ಇಲ್ಲ. ತಳಮಟ್ಟದಲ್ಲಿ ಸಂಘಟನೆ ಎಂಬ ಕಾರಣ ಕೊಟ್ಟರೂ ಎಸ್ಪಿ, ಬಿಎಸ್ಪಿಗಳ ಕೋಟೆಯಲ್ಲಿ ಅದು ಹೇಗೆ ಸಾಧ್ಯವಾಯಿತು ಎನ್ನುವುದಕ್ಕೆ ಉತ್ತರವಿಲ್ಲ. ರಾಜಕೀಯ ವಿಶ್ಲೇಷಕರು ಶಾರನ್ನು ಹಲವು ಕೋನಗಳಿಂದೇನೋ ವಿಮರ್ಶೆಗೊಡ್ಡಬಲ್ಲರು. ಆದರೆ ಇಂದಿಗೂ ಶಾ ಅವರ ವ್ಯಕ್ತಿತ್ವ ಮತ್ತು ನಡೆ ಹಿಡಿತಕ್ಕೆ ಸಿಕ್ಕಿಲ್ಲ. ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವೊಂದರ ಅಧ್ಯಕ್ಷ, ಅದರಲ್ಲೂ ರಾಷ್ಟ್ರೀಯತೆಯನ್ನು ಪ್ರಬಲವಾಗಿ ಪ್ರತಿಪಾದಿಸುವ ಪಕ್ಷದ ನಾಯಕನೊಬ್ಬನ ದಿಗ್ವಿಜಯ ಸದೃಶವಾದ ಕಾರ್ಯವೈಖರಿ ಯಾವ ವಿದ್ವಾಂಸನ ತರ್ಕಕ್ಕೂ ನಿಲುಕಿಲ್ಲ! ಅಮಿತ್ ಶಾ ಸಂಮಿಶ್ರ ಸರ್ಕಾರ ರಚಿಸುವಲ್ಲಿ ನಿಷ್ಣಾತ ಎಂದು ನಾಲ್ಕು ಉದಾಹರಣೆಗಳನ್ನೇನೋ ವಿಶ್ಲೇಷಕರು ನೀಡಬಲ್ಲರು, ಆದರೆ ಗೋವಾದಂಥಾ ರಾಜ್ಯದಲ್ಲಿ ಸಂಮಿಶ್ರ ಸರ್ಕಾರ ನಿರ್ಮಿಸಿದ ಶಾ ಕರ್ನಾಟಕದಲ್ಲೇಕೆ ಸರ್ಕಾರ ನಿರ್ಮಿಸಲಿಲ್ಲ ಎಂಬುದಕ್ಕೆ ರಾಜಕೀಯ ಪರಿಣಿತರು ಉತ್ತರ ಕಂಡುಕೊಳ್ಳಲು ಇನ್ನೂ ಆಗಿಲ್ಲ. ಅಮಿತ್ ಶಾ ಎಂದರೆ ಅಡಿಗಡಿಗೆ ಹೀಗೆಯೇ. ರಾಜ್ಯಗಳ ಮೇಲೆ ರಾಜ್ಯಗಳನ್ನು ಗೆದ್ದ ಶಾ ಎಲ್ಲೂ ಸರ್ಕಾರಗಳನ್ನು ಉರುಳಿಸಿದ ನಿದರ್ಶನಗಳಿಲ್ಲ. ಅಂದರೆ ಧರ್ಮಬಿಟ್ಟು ಹೋದ ಉದಾಹರಣೆ ಅಮಿತ್ ಶಾ ಜೀವನದಲ್ಲಿ ಎಲ್ಲೂ ಇಲ್ಲ.

ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದ ಒಂದು ಚಿತ್ರವನ್ನು ಬಹುತೇಕರು ನೋಡಿರುತ್ತಾರೆ. ದೊಡ್ಡ ಕುರ್ಚಿಯ ತುಂಬಾ ಕುಳಿತ ಶಾ ಅವರ ಹಿಂದಿನ ಗೋಡೆಯಲ್ಲಿ ನೇತು ಹಾಕಿದ ಚಾಣಕ್ಯ ಮತ್ತು ಸಾವರ್ಕರರ ಭಾವಚಿತ್ರಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚಿತವಾಗಿದ್ದವು. ಚಾಣಕ್ಯನೇನೋ ರಾಜಕೀಯ ರಣತಂತ್ರಗಾರ. ಆದರೆ ಸಾವರ್ಕರರ ಭಾವಚಿತ್ರದ ಅರ್ಥವೇನು ಎಂಬುದನ್ನು ಕೆದಕಲು ಕೆಲವರು ಪ್ರಯತ್ನಪಟ್ಟರು. ಆದರೆ ಅಮಿತ್ ಶಾರ ರಾಜಕೀಯ ನಡೆಯಲ್ಲಿ ಸಾವರ್ಕರತನ ಢಾಳಾಗಿ ಗೋಚರಿಸದೆ ಕೆದಕಲು ಹೋದವರೆಲ್ಲಾ ತಲೆಕೆಡಿಸಿಕೊಂಡರು. ಚಾಣಕ್ಯನನ್ನು ಅನುಸರಿಸುವ ಶಾ ಸಾವರ್ಕರರ ಯಾವ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂಬುದಕ್ಕೆ ಸಾವರ್ಕರರ ಸಿದ್ಧಾಂತಗಳೊಂದು ಮಾತ್ರ ಉತ್ತರ ನೀಡಬಲ್ಲದು. ಇದನ್ನರಿಯದ ವಿರೋಧಿಗಳು ಇನ್ನೂ ದಾರಿಗಾಣದೆ ತೊಳಲಾಡುತ್ತಿದ್ದಾರೆ!

ನಾನು ಸಾಯುವವರೆಗೂ ಶೇ. ನೂರರಷ್ಟು ರಾಜಕಾರಣವನ್ನು ಮಾಡುತ್ತೇನೆ ಎನ್ನುವ ಶಾ, ಮಗ ರಾಜಕಾರಣದ ಆಸೆಪಟ್ಟಾಗ ನಾನು ರಾಜಿನಾಮೆ ಕೊಟ್ಟನಂತರ ನೀನು ರಾಜಕೀಯ ಮಾಡು ಎಂದ ಶಾ, ದೀನದಯಾಳ ಉಪಾಧ್ಯಾಯರಂತೆ ಪ್ರಯಾಣದುದ್ದಕ್ಕೂ ಸರಣಿ ಬೈಠಕ್‌ಗಳನ್ನು ನಡೆಸುವ ಶಾ, ಮೂರು ವರ್ಷಗಳಲ್ಲಿ ೯ ಕೋಟಿ ಕಾರ್ಯಕರ್ತರನ್ನು ನಿರ್ಮಿಸಿದ ಶಾ, ರಾಯ್‌ಬರೈಲಿಯ ಶೆಡ್‌ನಲ್ಲಿ ಮಲಗಿದ ಶಾ, ಕೈಗಡಿಯಾರ ಹಾಕದ ಶಾ, ೨೦೧೬ರವರೆಗೂ ಖಾತೆ ತೆರೆಯದ ಬಂಗಾಳದಲ್ಲಿ ೧೮ ಲೋಕಸಭಾ ಸೀಟುಗಳನ್ನು ಗೆಲ್ಲಿಸಿಕೊಟ್ಟ ಶಾ ಮಹಾಭಾರತದ ಕೃಷ್ಣನಂತೆ ಸಂಪೂರ್ಣ ಅರ್ಥವಾಗದ ವ್ಯಕ್ತಿತ್ವ. ಆ ಕೃಷ್ಣನಿಗೆ ಪಿಳ್ಳಂಗೋವಿಯೂ ಗೊತ್ತಿತ್ತು, ಚಕ್ರವೆತ್ತಲೂ ಗೊತ್ತಿತ್ತು!  ಹಾಗೆಯೇ ಈ ಶಾರಿಗೂ ಏನೇನೋ ಗೊತ್ತಿದೆ! ಕೊನೆಗೆ ಇಷ್ಟನ್ನು ಮಾತ್ರ ಹೇಳಬಹುದು. ಕಾಲಕಾಲಕ್ಕೆ ಅಂಥ ಅರ್ಥವಾಗದ ವ್ಯಕ್ತಿತ್ವಗಳು ಲೋಕದಲ್ಲಿರಬೇಕು. ಕೆಲವರು ಅರ್ಥವಾಗಲೇಬಾರದು. ಲೋಕನಿಯಮಗಳು ಸುಸೂತ್ರವಾಗಿ ನಡೆಯಲು ಅವು ಬೇಕು. ಅಂತಿಮವಾಗಿ ಅಮಿತ್ ಶಾ ಎಂಬ ವ್ಯಕ್ತಿತ್ವವನ್ನು ಹೀಗೆ ಮಾತ್ರ ವರ್ಣಿಸಬಹುದು, “ಪ್ರಾಮಾಣಿಕತೆಯನ್ನು ಜತನದಿಂದ ಕಾಪಾಡಿಕೊಂಡ ಮನುಷ್ಯನನ್ನು ಕೆಣಕಲು ಹೋಗಬಾರದು. ಅದು ಕೆರಳಿದರೆ ಪ್ರಳಯಾಂತಕ!” ಸಾವಿರದೈನೂರು ವರ್ಷ ಯಹೂದಿಗಳನ್ನು ಕೆಣಕಿದ ಜಗತ್ತು ಇಂದು ಯಹೂದಿಗಳಿಗೆ ಹೆದರುತ್ತಿದೆ! ಅಮಿತ್ ಶಾರನ್ನು ಕೆಣಕಿದ ಕಾಂಗ್ರೆಸಿನ ಸ್ಥಿತಿ ಕೂಡಾ ಈಗ ಇಸ್ರೇಲಿಗೆ ಹೆದರುವ ಮಧ್ಯಪ್ರಾಚ್ಯದಂತಾಗಿದೆ. ಅಮಿತ್ ಶಾರ ವ್ಯಕ್ತಿತ್ವ ರಾಜಕೀಯೇತರವಾಗಿ ಕೂಡಾ ಮಹತ್ವದ ಸಂದೇಶವೊಂದನ್ನು ನೀಡುತ್ತದೆ, “ಮನುಷ್ಯ ಸೋಲಬೇಕು, ಮುಂದೊಂದು ದಿನ ಸೋಲನ್ನೇ ಸೋಲಿಸಲು ಆತ ಸಾಕಷ್ಟು ಸೋತಿರುವ ಅನುಭವ ಹೊಂದಿರಬೇಕು.”

ಇಂಥಾ ಸೋಲಿನ, ಸೋಲನ್ನು ಸೋಲಿಸಿದ, ಅರ್ಥವಾಗದ ವ್ಯಕ್ತಿತ್ವದ ಅನೇಕ ಪ್ರಸಂಗಗಳು ಈ ಪುಸ್ತಕದಲ್ಲಿವೆ.

1 ಟಿಪ್ಪಣಿ Post a comment
  1. Rajarama Shetty U
    ಜೂನ್ 14 2019

    Great reading.. !!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments