ಮಯಾಂಕ್ ಅಗರ್ವಾಲ್ – ಚುಕ್ಕೆಗಳ ನಡುವೆಯ ಚಂದ್ರಮ
– ಪ್ರಶಾಂತ ಮಾಸ್ತಿಹೊಳಿ
ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯದ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ , ಭಾರತ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿತು. ಎಲ್ಲ ಕ್ರಿಕೆಟ್ ಪ್ರೇಮಿಗಳ ಗಮನ ಆ ಪಂದ್ಯದಲ್ಲಿ ರೋಹಿತ ಶರ್ಮ ಮೇಲೆ ನೆಟ್ಟಿತ್ತು . ಮೊದಲ ಬಾರಿಗೆ ರೋಹಿತ ಆರಂಭಿಕ್ ಆಟಗಾರರಾಗಿ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತಿದ್ದರು. ರೋಹಿತ ಎರಡೂ ಇನ್ನಿಂಗ್ಸನಲ್ಲಿ ಶತಕ ದಾಖಲಿಸುವ ಮೂಲಕ ತಮ್ಮಲ್ಲಿಟ್ಟಿದ್ದ ನೀರಿಕ್ಷೆಯನ್ನು ಹುಸಿಗೊಳಿಸಲಿಲ್ಲ. ಇವೆಲ್ಲ ಘಟನೆಗಳ ನಡುವೆಯೇ ಮತ್ತೊಬ್ಬ ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಕೂಡ ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದ್ದರು। ಆದರೆ ರೋಹಿತ್ ಮೇಲಿನ ಎಲ್ಲರ ಗಮನದಿಂದಾಗಿ , ಅಗರ್ವಾಲ್ ಅವರ ಮೇಲೆ ಒತ್ತಡ ಸ್ವಲ್ಪ ಕಡಿಮೆಯೇ ಆಗಿತ್ತು. ಮಾಯಾಂಕ್ ಶಾಂತವಾಗಿಯೇ ತಮ್ಮ ಜೀವನದ ಮೊದಲ ಶತಕ ದಾಖಲಿಸಿದರು. ಶತಕವನ್ನು ದ್ವೀಶತಕವಾಗಿ ಪರಿವರ್ತನೆ ಮಾಡಿ ದಾಖಲೆಯನ್ನೂ ಮಾಡಿದರು. ಈ ಮೂಲಕ ಭಾರತ ಎದುರಿಸುತ್ತಿರುವ ಆರಂಭಿಕ ಆಟಗಾರರ ಸಮಸ್ಯೆಯನ್ನು ತಾತ್ಕಾಲಿಕ ಮಟ್ಟಿಗೆ ನಿವಾರಿಸಿದರು ಎಂದೇ ಹೇಳಬಹುದು.
ಮಯಾಂಕ್ ಅಗರ್ವಾಲ್ ಮತ್ತು ರೋಹಿತ್ ಶರ್ಮ ಅವರ ಕ್ರಿಕೆಟ್ ಜೀವನದ ಬಗ್ಗೆ ಹಲವು ಸಾಮ್ಯತೆಗಳಿವೆ. ಸಾಕಷ್ಟು ಪ್ರತಿಭೆ ಎದ್ದರೂ ಕೂಡ ಆರಂಭದ ದಿನಗಳಲ್ಲಿ ರೋಹಿತ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿರಲಿಲ್ಲ. ಇದರಿಂದ ತಂಡದಲ್ಲಿ ಅವರ ಸ್ಥಾನ ಭದ್ರವಾಗಿರಲಿಲ್ಲ. ಆಯ್ಕೆ ಸಮೀತಿ ರೋಹಿತಗೆ ಹಲವು ಅವಕಾಶಗಳನ್ನು ನೀಡಿದ ನಂತರ ತಮ್ಮ ಲಯ ಕಂಡುಕೊಂಡರು. ಮಯಾಂಕ್ರ ಮೊದಲ ದರ್ಜೆಯ ವೃತ್ತಿ ಜೀವನ ಕೂಡ ಹಲವು ಏಳುಬೀಳುಗಳನ್ನು ಕಂಡಿದೆ. ಅವರಿಂದ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಬಂದಿದ್ದು ಕಡಿಮೆಯೇ. ಉತ್ತಮವಾಗಿಯೇ ಆಟ ಆರಂಭಿಸುತಿದ್ದ ಮಯಾಂಕ್ ಅಷ್ಟೇ ವೇಗವಾಗಿ ವಿಕೆಟ್ ಒಪ್ಪಿಸುತ್ತಿದ್ದರು. ಆದ್ದರಿಂದ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗದೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುತಿದ್ದರು.
ಚಿಕ್ಕಂದಿನಲ್ಲಿ ಶಾಲಾ ಮಾದರಿಯ ಕ್ರಿಕೆಟಿನಲ್ಲಿ ಮಯಾಂಕ್ ಉತ್ತಮವಾಗಿ ರನ್ ಗಳಿಸುತ್ತಿದ್ದರು. ಆದರೆ ಹದಿಮೂರು ವರ್ಷದ ಒಳಗಿನವರ ಕರ್ನಾಟಕ ತಂಡಕ್ಕೆ ಆಯ್ಕೆಯಾಗುವ ಮೊದಲು ಕ್ರಿಕೆಟನ್ನು ವ್ರತ್ತಿಜೀವನವನ್ನಾಗಿ ಸ್ವೀಕರಿಸುವ ಬಗ್ಗೆ ಅಷ್ಟೊಂದು ಗಂಭೀರವಾಗಿರಲಿಲ್ಲ. ನಂತರ ಹತ್ತೊಂಬತ್ತು ವರ್ಷದ ಒಳಗಿನವರ ತಂಡದಲ್ಲಿ ಆಯ್ಕೆಯಾಗಿ ೨೦೦೮-೦೯ರಲ್ಲಿ ಕೂಚ ಬಿಹಾರ್ ಟ್ರೋಫಿಯಲ್ಲಿ ೪೩೨ ರನ್ನು ಬಾರಿಸಿದರು. ೨೦೦೯ರಲ್ಲಿ ಹತ್ತೊಂಬತ್ತು ವರ್ಷದ ಒಳಗಿನ ಭಾರತ ತಂಡಕ್ಕೆ ಆಯ್ಕೆಯಾಗಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲು ಪಂದ್ಯದಲ್ಲಿಯೇ ೧೬೦ ರನ್ ಬಾರಿಸಿ ಮೊದಲಿಗೆ ಎಲ್ಲರ ಗಮನ ತಮ್ಮತ್ತ ಸೆಳೆದರು. ಮಯಾಂಕ್ ಅವರ ಪ್ರಕಾರ ಈ ಇನ್ನಿಂಗ್ಸ್ ಅವರ ಜೀವನದ ಅತ್ತ್ಯಂತ ಮಹತ್ವದ ಪ್ರದರ್ಶನವಾಗಿದೆ. ನಂತರ ಐಪಿಎಲ್ ನಲ್ಲಿ ಕೊಚ್ಚಿ ತಸ್ಕರ ಪರ ಆಡುವ ಅವಕಾಶ ೨೦೧೧ರಲ್ಲಿ ದೊರೆಯಿತು. ೨೦೧೩-೧೪ರಲ್ಲಿ ರಣಜಿ ಋತುವಿನಲ್ಲಿ ಕರ್ನಾಟಕದ ಪರವಾಗಿ ಚೊಚ್ಚಲ ಪಂದ್ಯವನ್ನಾಡಿದ ಮಯಾಂಕ್ , ಮೊದಲ ಎರಡು ರಣಜಿ ಋತುವಿನಲ್ಲಿ ಗಳಿಸಿದ್ದು ಕ್ರಮವಾಗಿ ೩೮೦ ಮತ್ತು ೨೧೭ ರನ್ನುಗಳು. ದೇಶಿಯ ಒಂದು ದಿನದ ಪಂದ್ಯಗಳಲ್ಲಿ ಪ್ರದರ್ಶನ ಸ್ವಲ್ಪ ಸ್ಥಿರವಾಗಿತ್ತು. ಆದರೆ ಅವರ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಸಾಧ್ಯವಾಗಿರಲಿಲ್ಲ. ಸಾಕಷ್ಟು ಪ್ರತಿಭೆ ಇದ್ದರೂ ಅದರ ಅನಾವರಣವಾಗಿರಲಿಲ್ಲ. ಆದ್ದರಿಂದ ಅವರ ಸಾಮರ್ಥ್ಯದ ಬಗ್ಗೆಯೇ ಹಲವರಿಂದ ಪ್ರಶ್ನೆಗಳಿದ್ದವು.
೨೦೧೭-೧೮ ರ ರಣಜಿ ಋತು ಅವರ ಜೀವನವನ್ನೇ ಬದಲಾಯಿಸಿತು. ಋತುವಿನ ಆರಂಭವೇನೂ ಭರವಸೆಯದ್ದಾಗಿರಲಿಲ್ಲ. ಮೊದಲ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ೩೧ ರನ್ ಗಳಿಸಿದ್ದರು. ನಂತರದ ಹೈದೆರಾಬಾದ್ ವಿರುದ್ದದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸಗಲ್ಲಿ ಸೊನ್ನೆ ಸಂಪಾದಿಸುವ ಮೂಲಕ ಮುಂದಿನ ಪಂದ್ಯದಲ್ಲಿ ಆಡುವದೂ ಅನುಮಾನವಾಗಿತ್ತು. ಈ ಸಂಧರ್ಭದಲ್ಲಿ ಮಯಾಂಕ್ ಅವರೇ ಹೇಳಿದಂತೆ ಅವರ ನೆರವಿಗೆ ಬಂದಿದ್ದು ಕರ್ನಾಟಕ ತಂಡದ ಅಂದಿನ ನಾಯಕ ವಿನಯ ಕುಮಾರ ಮತ್ತು ಸಹಾಯಕ ತರಭೇತುದಾರ ಜಿ ಕೆ ಅನಿಲಕುಮಾರ. ವಿನಯಕುಮಾರ ಮುಂದಿನ ದಿನಗಳಲ್ಲಿಯೂ ಅವಕಾಶ ಕೊಡುವದಾಗಿ ಭರವಸೆ ನೀಡಿದ್ದರು. ನಂತರ ನಡೆದಿದ್ದು , ಮಾಯಾಂಕ್ ತಮ್ಮ ಕನಸಿನಲ್ಲಿಯೂ ಊಹಿಸದ ಪವಾಡ। ದೆಹಲಿ ವಿರುದ್ದದ ಪಂದ್ಯದಲ್ಲಿ ತ್ರಿಶತಕ ಸಂಪಾದಿಶಿ ಮರಳಿ ಫಾರ್ಮ ಕಂಡುಕೊಂಡರು. ಮುಂದಿನ ಪಂದ್ಯಗಳಲ್ಲಿ ಮಯಾಂಕ್ರ ಸ್ಕೋರುಗಳು ೧೭೬, ೨೩, ೯೦, ೧೩೩, ೧೭೩, ೧೩೪, ೭೮, ೧೫ ಮತ್ತು ೩. ಒಂದು ತಿಂಗಳ ಅಂತರದಲ್ಲಿ ೧೦೦೦ ಕ್ಕಿಂತಲೂ ಹೆಚ್ಚಿನ ರನ್ ಮಾಡಿ , ದೇಶೀಯ ಕ್ರಿಕೆಟಿನಲ್ಲಿ ಯಾರೂ ಮಾಡದ ಸಾಧನೆ ಮಾಡಿದರು. ಈಡೀ ರಣಜಿ ಋತುವಿನಲ್ಲಿ ೧೦೫ ಸರಾಸರಿಯಿಂದ ಒಟ್ಟು ೧೧೬೦ ರನ್ ಗಳಿಸಿ , ಆ ಋತುವಿನಲ್ಲಿ ಗರಿಷ್ಟ ರನ್ ಗಳಿಸಿದ ದಾಖಲೆ ಮಯಾಂಕ್ ಪಾಲಿಗೆ ಬಂದಿತ್ತು.
ಇದು ಮಯಾಂಕ್ ಜೀವನದ ನಿರ್ಣಾಯಕ ಘಟ್ಟವೆಂದೇ ಹೇಳಬಹುದು. ಹೈದೆರಾಬಾದ್ ವಿರುದ್ಧದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ನಲ್ಲಿ ಸೊನ್ನೆ ಸಂಪಾದಿಶಿದ ನಂತರ ಅವರ ಬಗ್ಗೆ ಅವರಿಗೆ ಸಂಶಯಗಳಿದ್ದವು. “CricBuzz” ಕ್ರೀಡಾ ಚಾನೆಲ್ಲಿಗೆ ಅವರೇ ಹೇಳಿದಂತೆ ಈ ಘಟನೆಯಿಂದ ಅವರ ಮನಸ್ಸಿನಲ್ಲಿದ್ದ ಸೋಲುವ ಭಯವೇ ಮಾಯವಾಗಿತ್ತು. ಏಕೆಂದರೆ ಇದಕ್ಕಿಂತಲೂ ಹೆಚ್ಚಾಗಿ ಕಳೆದುಕೊಳ್ಳುವದಕ್ಕೆ ಇನ್ನೇನೂ ಉಳಿದಿರಲಿಲ್ಲ. ಇನ್ನೇನಿದ್ದರೂ ಮೇಲೇರುವ ಏಕೈಕ ಮಾರ್ಗ ಒಂದೇ. ಹೀಗೆ ಅಸಫಲತೆಯಲ್ಲೂ ಧನಾತ್ಮಕ ಮನಸ್ಥಿತಿಯೊಂದಿಗೆ ಮುಂದಿನ ಪಂದ್ಯಕ್ಕೆ ತಯಾರಿ ಮಾಡಿಕೊಂಡಿದ್ದರು. ಆದರೆ ಮುಂದಿನ ಇನ್ನಿಂಗ್ಸ್ ತ್ರಿಶತಕವಾಗಿರುತ್ತದೆ ಎಂದು ಕನಸಿನಲ್ಲಿಯೂ ಕಂಡಿರಲಿಲ್ಲ. ಈ ಋತುವಿನ ಆರಂಭದಲ್ಲಿ ಮಯಾಂಕ್ ತಮ್ಮ ತರಭೇತುದಾರರಾದ ಮುರಳೀಧರ ಅವರಿಂದ ಕೌಶಲ್ಯ ಆಧಾರಿತ ತರಭೇತಿಗೆ ಹೆಚ್ಚಿನ ಗಮನ ಹರಿಸಿದ್ದರು. ಆ ತರಭೇತಿ ಅವರ ಯಶಸ್ಸಿಗೆ ಬಹು ಸಹಕಾರಿಯಾಯಿತು. ದೇಶೀಯ ಏಕ ದಿನಗಳ ಪಂದ್ಯಾವಳಿ “ವಿಜಯ ಹಜ್ಹಾರೇ” ಟ್ರೊಫಿಯಲ್ಲಿಯೂ ಅಧ್ಭೂತ ಪ್ರದರ್ಶನ ಮುಂದುವರಿಯಿತು. ಒಟ್ಟು ೭೨೩ ರನ್ ಗಳಿಸಿ ವಿಜಯ ಹಜ್ಹಾರೇ ಟ್ರೋಫಿಯ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಬರೆದರು.
ಈ ಎಲ್ಲ ಪ್ರದರ್ಶನಗಳಿಂದ ಭಾರತದ ತಂಡದಲ್ಲಿ ಕೂಡಲೇ ಅವಕಾಶ ಕೊಡಬೇಕೆಂಬ ಕೂಗು ಕೇಳಿ ಬಂದರೂ ಆಯ್ಕೆ ಸಮಿತಿ ಮನಸ್ಸು ಮಾಡಲಿಲ್ಲ. ನಂತರ ಭಾರತ ‘ಏ’ ತಂಡದಲ್ಲಿ ದೊರೆತ ಅವಕಾಶದಲ್ಲಿ, ಇಂಗ್ಲೆಂಡ್ ಲಯನ್ಸ್ , ದಕ್ಷಿಣ ಆಫ್ರಿಕಾ ‘ಏ’ ತಂಡಗಳ ವಿರುದ್ಧ ವಿದೇಶಿಯ ಪೀಚುಗಲ್ಲಿಯೂ ಗಮನೀಯ ಸಾಧನೆಗೈದು ನಿರಂತರವಾಗಿ ಆಯ್ಕೆ ಮಂಡಳಿಯ ಬಾಗಿಲು ತಟ್ಟುತಿದ್ದರು. ಅವಕಾಶ ದೊರೆತದ್ದು ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ. ಈ ಸರಣಿಗೆ ಮುರಳಿ ವಿಜಯ ಮತ್ತು ಕೆ ಎಲ್ ರಾಹುಲ್ ಮೊದಲ ಆಯ್ಕೆಯ ಆರಂಭಿಕ ದಾಂಡಿಗರಾಗಿದ್ದರೆ, ಪ್ರತ್ವಿ ಶಹಾ , ಮೂರನೆಯ ಆಯ್ಕೆಯಾಗಿದ್ದರು. ಅಭ್ಯಾಸ ಪಂದ್ಯದಲ್ಲಿ ಪ್ರತ್ವಿ ಶಾ ಗಾಯಾಳುವಾದ ನಂತರ, ಮೂರನೆಯ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ಗೆ ಅವಕಾಶ ಕಲ್ಪಿಸಲಾಯಿತು. ಈ ಪಂದ್ಯಕ್ಕೆ ಮುರಳಿ ವಿಜಯ್ ಮತ್ತು ಕೆ ಎಲ್ ರಾಹುಲ್ ಇಬ್ಬರನ್ನೂ ಕೈ ಬಿಟ್ಟು ಮಯಾಂಕ್ ಜೊತೆಗೆ ಹನುಮ ವಿಹರಿಗೆ ಆರಂಭಿಕರಾಗಿ ಬಡ್ತಿ ನೀಡಿ, ಹೊಸ ಜೋಡಿಯೊಂದಿಗೆ ಭಾರತ ಕಣಕ್ಕಿಳಿಯಿತು. ಹೀಗೆ ಮೆಲ್ಬೋರ್ನ್ ದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ನಲ್ಲಿ ಅವಕಾಶ ಪಡೆದು, ೭೬ ರನ್ ಗಳಿಸಿ ತಮ್ಮ ಮೇಲಿನ ನೀರಿಕ್ಷೆಗೂ ಮೀರಿ ಮಾಯಾಂಕ್ ಯಶಶ್ವಿಯಾದರು. ಎರಡನೆಯ ಇನ್ನಿಂಗ್ಸನಲ್ಲಿಯೂ ೪೨ ರನ್ ಮಾಡಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪ್ಯಾಟ್ ಕಮ್ಮಿನ್ಸ್, ಹ್ಯಾಝೆಲ್ವುಡ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ ಲಯನ್ ಒಳಗೊಂಡ ಬೌಲಿಂಗನ್ನು ಸಮರ್ಥವಾಗಿ ಎದುರಿಸಿ, ತಾವು ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಶಸ್ವಿಯಾಗುವ ದೂರದ ಓಟದ ಕುದುರೆ ಎಂದು ಸಾಭೀತು ಮಾಡಿದರು. ಅದರಲ್ಲೂ “ಶಾರ್ಟ್ ಬಾಲ್” ಗಳನ್ನು ಎದುರಿಸಿದ ರೀತಿ ಅದ್ಭುತವಾಗಿತ್ತು. ಮುಂದಿನ ಸಿಡ್ನಿ ಟೆಸ್ಟನಲ್ಲಿಯೂ ಅವರ ಬ್ಯಾಟ್ನಿಂದ ೭೭ ರನ್ನುಗಳು ಹರಿದು ಬಂದವು. ಭಾರತ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಜಯ ದಾಖಲಿಸಿತು. ವೆಸ್ಟ್ ಇಂಡೀಸ್ ಸರಣಿಯಲ್ಲಿ ಅಷ್ಟೇನೂ ಗಮನ ಸೆಳೆಯದಿದ್ದರೂ ಅಲ್ಲಿನ ಕ್ರಿಕೆಟ್ ಪರಿಸ್ಥಿತಿ ತಿಳಿಯಲು ಒಂದು ಅವಕಾಶ ಒದಗಿತು. ಈಗ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ದ್ವಿಶತಕ ಬಾರಿಸಿ ಎರಡನೆಯ ಟೆಸ್ಟನಲ್ಲಿ ಮತ್ತೊಂದು ಶತಕ ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಮೋಘ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಏಕದಿನ ಪಂದ್ಯಗಳಲ್ಲಿ ವಿಶ್ವಕಪ್ ನಲ್ಲಿ ತಂಡದಲ್ಲಿ ಸ್ಥಾನ ದೊರೆತರೂ ಆಡುವ ಹನ್ನೊಂದರಲ್ಲಿ ಅವಕಾಶ ದೊರೆಯಲಿಲ್ಲ. ದೇಶಿಯ ಮೊದಲ ದರ್ಜೆ ಪಂದ್ಯದಗಳಲ್ಲಿ ಮತ್ತು ಐಪಿಎಲ್ ನಲ್ಲಿ ಮಾಯಾಂಕ್ ಆಡುವ ರೀತಿ ನೋಡಿದವರಿಗೆ ಅವರೊಬ್ಬ ಸೀಮಿತ ಓವರಿನ ಪಂದ್ಯಗಳಿಗೆ ಮಾತ್ರ ಸೂಕ್ತ ಎಂಬ ಅಭಿಪ್ರಾಯಗಳಿದ್ದವು. ಆದರೆ ತಮ್ಮ ಸಹನೆ ಮತ್ತು ಕೌಶಲ್ಯಗಳಿಂದ ತಾವು ಎಲ್ಲ ಮಾದರಿಯ ಕ್ರಿಕೆಟ್ ಆಡಲು ಸಾಮರ್ಥ್ಯವಿರುವವರು ಎಂದು ಸಾಭೀತು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟಿನಲ್ಲಿ ವೀರೇಂದ್ರ ಸೆಹವಾಗ್ ಆರಂಭಿಕರಾಗಿ ಯಶಸ್ವಿಯಾದ ನಂತರ ಅವರ ಆಟದ ಛಾಪನ್ನು ಮುಂದಿನ ಪೀಳಿಗೆಯ ಎಲ್ಲ ಆರಂಭಿಕ ಆಟಗಾರರಲ್ಲೂ ಕಾಣಬಹುದು. ಅದರಲ್ಲಿಯೂ ಮಾಯಾಂಕ್ ಹೇಳಿಕೊಂಡಂತೆ ಸೆಹವಾಗ್ ಅವರ ಅಚ್ಚುಮೆಚ್ಚಿನ ಆಟಗಾರ. ಮಾಯಾಂಕ್ ಆಟದಲ್ಲಿ ಸೆಹವಾಗರ್ ವೈಖರಿ ಮತ್ತು ಕ್ಲಾಸಿಕ್ ಆಟದ ಮಿಶ್ರಣವನ್ನು ಅನುಭವಿಸಬಹಹುದು. ಮಯಾಂಕ್ ಬೆಳವಣಿಗೆಯಲ್ಲಿ ರಾಹುಲ್ ದ್ರಾವಿಡರ ಪಾತ್ರವೂ ಮುಖ್ಯವಾಗಿದೆ. ಭಾರತ ಏ ತಂಡಕ್ಕೆ ಆಯ್ಕೆಯಾದಾಗ ದ್ರಾವಿಡ ಆ ತಂಡದ ಮುಖ್ಯ ತರಭೇತುದಾರರಾಗಿದ್ದರು. ದ್ರಾವಿಡ ನೀಡಿದ ಸಲಹೆಗಳು ಆಟವನ್ನು ಸುಧಾರಿಸಿಕೊಳ್ಳಲು ಬಹಳ ಸಹಾಯಕಾರಿಯಾಗಿದ್ದವು.
ಮಯಾಂಕ್ ಆಡುವ ದೀರ್ಘಾವಧಿಯ ಇನ್ನಿಂಗ್ಸಗಳ ಹಿಂದೆ ಅಪಾರವಾದ ಸಹನೆ ಅಡಗಿದೆ. ಇದನ್ನು ಗಳಿಸಿಕೊಂಡಿದ್ದು “ವಿಪಾಸನಾ” ಎಂಬ ಧ್ಯಾನದ ಮೂಲಕ. ತಮ್ಮ ಹದಿನೆಂಟನೆಯ ವಯಸ್ಸಿನಿಂದಲೂ ದಿನಕ್ಕೆ ೨೫ ರಿಂದ ೩೦ ನಿಮಿಷಗಳ ಈ ಅಭ್ಯಾಸವನ್ನು ಕ್ರಮವಾಗಿ ರೂಢಿಸಿಕೊಂಡಿದ್ದಾರೆ. ಇದರಿಂದ ತನ್ನನ್ನು ತಾನು ಅರಿಯಲು ಮತ್ತು ಆಟದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಣಗೊಳಿಸಲು ಸಾಧ್ಯವಾಗುತ್ತದೆ. ಪ್ರತಿಭೆಯ ಹೊರತಾಗಿಯೂ ಹಲವಾರು ಆಟಗಾರರು ಅವಕಾಶ ವಂಚಿತರಾಗಿದ್ದಾರೆ. ಅದರಲ್ಲಿ ಕರ್ನಾಟಕದವರೇ ಆದ ಕರುಣ ನಾಯರ ಮತ್ತು ಮನೀಶ್ ಪಾಂಡೆ ಕೂಡ ಇದ್ದಾರೆ. ಕೆ ಎಲ್ ರಾಹುಲ್ ಅಪಾರ ಅವಕಾಶಗಳ ಹೊರತಾಗಿಯೂ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ವಿಫಲರಾಗಿ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ರಾಹುಲ ಹಾಗೂ ಮಾಯಾಂಕ್ ಇಬ್ಬರೂ ನೆಚ್ಚಿನ ಗೆಳೆಯರು. ಇಬ್ಬರ ಆಟದ ಬಗ್ಗೆ ಅವರಿಬ್ಬರಿಗೂ ಪರಸ್ಪರ ಗೌರವವಿದೆ. ಕಾಕತಾಳೀಯವಾಗಿ ಮಯಾಂಕ್ ಟೆಸ್ಟನಲ್ಲಿ ಅವಕಾಶ ಪಡೆಯುವಾಗ ,ರಾಹುಲ್ರನ್ನು ತಂಡದಿಂದ ಕೈ ಬಿಡಬೇಕಾಯಿತು. ಇಬ್ಬರ ಕ್ರಿಕೆಟ್ ಬೆಳವಣಿಗೆಗೆ ಈ ಆರೋಗ್ಯಕರ ಸ್ಪರ್ಧೆ ಅನಿವಾರ್ಯವಾಗಿದೆ. ಮಾಯಾಂಕ್, ಬೇಗನೆ ಎಲ್ಲ ಮಾದರಿ ಕ್ರಿಕೆಟಗಳಲ್ಲಿ ತಮ್ಮ ಸ್ಥಾನ ಪಡೆದು ಭಾರತಕ್ಕಾಗಿ ಹಲವಾರು ವರ್ಷಗಳವರೆಗೆ ಆಡಿ ರನ್ ಹೊಳೆಯನ್ನೇ ಹರಿಸಲೆಂದು ಆಶಿಸೋಣ.