ಪರ್ವ-40; ಪತ್ರಿಕೆಗಳಿಗೆ ಮರೆತುಹೋಯಿತೆ?
– ಎಂ.ಎ. ಶ್ರೀರಂಗ
ಸೃಜನಶೀಲ ಪ್ರತಿಭೆಯ ಸಾಹಸ ಎನ್ನಬಹುದಾದ ಭೈರಪ್ಪನವರ ಪರ್ವ ಕಾದಂಬರಿ(ವ್ಯಾಸರು ಸಂಸ್ಕೃತದಲ್ಲಿ ಬರೆದಿದ್ದ ಮಹಾಭಾರತವನ್ನು ಆಧರಿಸಿ ಬರೆದದ್ದು) ಪ್ರಕಟವಾಗಿ ನಲವತ್ತು ವರ್ಷಗಳಾಯಿತು. ನಮ್ಮ ಪತ್ರಿಕೆಗಳಿಗೆ ಇದರ ಜ್ಞಾಪಕ ಬರಲಿಲ್ಲವೆ? ಇನ್ನು ನನ್ನಂತಹ ಹವ್ಯಾಸಿಗಳು ಬರೆದ ಲೇಖನಗಳು ಪತ್ರಿಕೆಗಳ ಸಂಪಾದಕರ ಕಸದ ಬುಟ್ಟಿ ಸೇರಿವೆ. ನನ್ನ ಇನ್ನೊಬ್ಬ ಸ್ನೇಹಿತರು ಬರೆಯುವ ಮುನ್ನ ಮಾಸ ಪತ್ರಿಕೆಯೊಂದರ ಸಂಪಾದಕರಿಗೆ ಸಂದರ್ಭ ವಿವರಿಸಿ ಒಂದು ಲೇಖನ ಬರೆದು ಕಳಿಸಲೆ ಎಂದು ಕೇಳಿದಾಗ ಮುಖಕ್ಕೆ ಹೊಡೆಯುವ ರೀತಿಯಲ್ಲಿ ‘ಬೇಡ’ ಎಂದರಂತೆ. ನಮ್ಮಂಥ ಹೆಸರಿಲ್ಲದವರು ಬರೆದಿದ್ದು ಪ್ರಕಟಣೆಗೆ ಅರ್ಹವಾಗಿಲ್ಲದಿದ್ದರೆ ಬೇಡ. ಕೊನೆಯ ಪಕ್ಷ ನಾವುಗಳು ಒಂದು ಸಂದರ್ಭವನ್ನು ಜ್ಞಾಪಿಸಿದೆವು; ಚೆನ್ನಾಗಿ ಬರೆಯುವವರಿಂದಲೇ ಬರೆಸಬಹುದಾಗಿತ್ತು. ಅದೂ ಮಾಡಲಿಲ್ಲ. ಏಕೆ? ಭೈರಪ್ಪನವರು ಜನಪ್ರಿಯ ಕಾದಂಬರಿಕಾರರು ಎಂಬುದೇ ಶಾಪವಾಗಿಹೋಗಿದೆಯೇನೋ? ಅವರ ಕೃತಿಗಳ ಬಗ್ಗೆ ಏನು ಬರೆಸುವುದು ಎಂಬ ಉಢಾಫೆಯ ಧೋರಣೆಯನ್ನು ಇದು ತೋರಿಸುತ್ತದೆ ಅಲ್ಲವೇ? ನಮ್ಮ ಕನ್ನಡ ವಿಮರ್ಶಕರು, ಲೇಖಕರು ಕೇವಲ ಮೂರ್ನಾಲಕ್ಕು ಕಾದಂಬರಿಗಳನ್ನು ‘ಈ ಶತಮಾನದ ಅದ್ಭುತ ಕೃತಿಗಳು’ ಎಂದು ಈಗಾಗಲೇ ತೀರ್ಮಾನಿಸಿಬಿಟ್ಟಿದ್ದಾರೆ.
ಭೈರಪ್ಪನವರ ‘ಪರ್ವ’ದ ಬಗ್ಗೆ ಬರೆಯುವುದು ಅವರುಗಳ ಘನತೆಗೆ, ಸಮಾಜಮುಖಿ ಚಿಂತನೆಗಳಿಗೆ ಕೊನೆಗೆ ಅವರ ಲೇಖನಿಗೆ ಕೂಡ ಅವಮಾನ ಎಂದು ಭಾವಿಸಿರಬಹುದು. ‘ಪರ್ವ: ಒಂದು ಸಮೀಕ್ಷೆ’ (ಸಂ|| ವಿಜಯಾ :ಮೊದಲ ಮುದ್ರಣ 1983) ಒಂದೇ ಈಗ ಕನ್ನಡದಲ್ಲಿ ಪರ್ವದ ಬಗ್ಗೆ ಬಂದಿರುವ ಪ್ರಾತಿನಿಧಿಕ ಎನ್ನಬಹುದಾದ ಲೇಖನಗಳ ಸಂಗ್ರಹ. ಪರ್ವ ಪ್ರಕಟವಾದ ನಾಲ್ಕು ವರ್ಷಗಳ ನಂತರ ಪ್ರಕಟವಾಗಿದ್ದು. ಅದರ ಮುನ್ನುಡಿಯಲ್ಲಿ ವಿಜಯಾ ಅವರು ‘ ……’ಪರ್ವ’ ಕುರಿತ ಚರ್ಚೆ ಇನ್ನೂ ವ್ಯಾಪಕವಾಗಬೇಕಿತ್ತು. ಆಗಲಿಲ್ಲ. ಜನ ಮರೆತೂಬಿಟ್ಟರು ಅನ್ನಿಸುತ್ತದೆ. ಅಲ್ಲವೆ?’ ಎಂದು ಹೇಳಿದ್ದಾರೆ. ಕನ್ನಡ ಸಾಹಿತ್ಯಲೋಕದ ನಾಡಿ ಮಿಡಿತವನ್ನು ಅವರು ಆಗಲೇ ಅರಿತಿದ್ದರು ಅನ್ನಿಸುತ್ತದೆ. ಆದರೆ ಒಂದೇ ಸಮಾಧಾನವೆಂದರೆ ಪರ್ವ ಕಾದಂಬರಿ ಇದುವರೆಗೆ 20 ಸಲ ಮರುಮುದ್ರಣವಾಗಿದೆ. ಓದುಗರು ಕೊಂಡು ಓದಿದ್ದಾರೆ. ಅದೇ ಸಮಾಧಾನ.
ಬುದ್ಧಿಜೀವಿಗಳು ‘ಪರ್ವ’ದ ಬಗ್ಗೆ ನೆನಪಾದಾಗಲೆಲ್ಲ ಆಕ್ಷೇಪಣೆಗಳನ್ನು ಎತ್ತುತ್ತಿರುತ್ತಾರೆ.ಇತಿಹಾಸ, ಕಾವ್ಯ ಮತ್ತು ಪುರಾಣಗಳು ಬೆರೆತಿರುವ ಮಹಾಭಾರತದ ಕತೆಯನ್ನು ಈಗ ಚಾಲ್ತಿಯಲ್ಲಿರುವ ವಿಮರ್ಶೆಯ ಅಳತೆಗೋಲಿನಿಂದ ಅಳೆದು ಬೆಲೆ ಕಟ್ಟುವ ಕ್ರಿಯೆಯೇ ಸರಿಯಾದುದಲ್ಲ. ಇಂದು ನಮ್ಮ ಸಾಹಿತ್ಯದ ವಿಮರ್ಶಕ ಮತ್ತು ವಿಮರ್ಶಕಿಯರಿಗೆ ಹಿಂದಿನ ಮತ್ತು ಇಂದಿನ ಕೃತಿಗಳಿಗೆ (ಅದು ಸಾಮಾಜಿಕ/ಐತಿಹಾಸಿಕ/ಪೌರಾಣಿಕ ಯಾವುದೇ ಆಗಿರಲಿ) ಪ್ರಗತಿಗಾಮಿ.ಪ್ರತಿಗಾಮಿ,ಮಹಿಳಾ ವಿರೋಧಿ,ವೈದಿಕ ಶಾಹಿ ಇತ್ಯಾದಿ ಹಣೆ ಪಟ್ಟಿಗಳನ್ನು ಕಟ್ಟಿ ಆ ಕೃತಿಗಳ ಲೇಖಕರನ್ನು ಏರಿಸುವುದೋ ಇಳಿಸುವುದೋ ಮಾಡುವುದು ತುಂಬಾ ಖುಷಿ ಕೊಡುವ ಕೆಲಸವಾಗಿದೆ. ಹಾಗೆ ನೋಡಿದರೆ ಇಂತಹ ವಿದ್ಯಮಾನ ಮೂವತ್ತು ನಲವತ್ತು ವರ್ಷಗಳಷ್ಟು ಹಳೆಯದೇ.ಈಗ ಈ ಕೆಲಸ ಇನ್ನೂ ಜೋರಾಗಿದೆ ಅಷ್ಟೇ. ವಿಮರ್ಶೆಯ ಪರಿಭಾಷೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ; ಬದಲಾಗಬೇಕು ಎಂಬುದರ ಬಗ್ಗೆ ಯಾರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ಬದಲಾಗುತ್ತಿರುವ ವಿಮರ್ಶೆಯ ಪರಿಭಾಷೆಗಳನ್ನು ಸಾಹಿತ್ಯ ಕೃತಿಯೊಂದಕ್ಕೆ ನಾವು ಯಾವ ರೀತಿ apply ಮಾಡಬೇಕು? ಆ ಪರಿಭಾಷೆಗಳ limits ಏನು? ಎಂಬುದರ ಬಗ್ಗೆ ನಾವು ಯೋಚಿಸದಿದ್ದರೆ ಆಭಾಸವಾಗುತ್ತದೆ. ಸ್ಪೂರ್ತಿಗೌಡ ಅವರು ಪರ್ವದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮೂಲ ಕಾರಣ ಹೊಸ ವಿಮರ್ಶೆಯ ಪರಿಭಾಷೆಗಳ wrong application.
ಪರ್ವ ವ್ಯಾಸರ ಸಂಸ್ಕೃತ ಮಹಾಭಾರತದ ಕಥಾ ಚೌಕಟ್ಟಿನಲ್ಲಿ ರಚಿತವಾಗಿರುವ ಕಾದಂಬರಿ. ಆ ಕಥಾ ಚೌಕಟ್ಟಿನ ಒಳಗೆ ವ್ಯಾಸರ ಮೂಲ ಕೃತಿಗೆ ಚ್ಯುತಿ ಬಾರದಂತೆ ಅಲ್ಪ ಸ್ವಲ್ಪ ಬದಲಾವಣೆಗಳು . ಪಾಂಡವ-ಕೌರವರ ಕಥನಕ್ಕೆ ಅಷ್ಟೇನೂ ಅನಿವಾರ್ಯವಲ್ಲದ ನೂರಾರು ಉಪಕಥೆಗಳು, ಪ್ರಸಂಗಗಳನ್ನು ಬಿಟ್ಟುಬಿಡುವುದು ಮತ್ತು ‘ಪರ್ವ’ ಕಾದಂಬರಿಯ ತಂತ್ರದ ಅನುಕೂಲಕ್ಕಾಗಿ ಒಂದೆರೆಡು ಹೊಸ ಪಾತ್ರಗಳ ಸೃಷ್ಟಿ (ದಾಸಿ, ಸೇವಕ, ಸಾರಥಿ ಇತ್ಯಾದಿ) ಇವುಗಳನ್ನು ಮಾಡಬಹುದೇ ಹೊರತು ಪೂರ್ತಿ ಕಥೆಯನ್ನೇ ಬದಲಾಯಿಸಿದರೆ ಅದು ವ್ಯಾಸರ ಕಥಾ ಚೌಕಟ್ಟನ್ನು ಮೀರಿದಂತೆ ಆಗುತ್ತದೆ.ಹಾಗಾದರೆ ದಾಸಿ, ಸೇವಕ ಸಾರಥಿ ಇವರುಗಳು ಕೀಳು ಪಾತ್ರಗಳೋ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ನಾವು ಇಂದು ದಿನ ನಿತ್ಯ ಪ್ರಯಾಣಿಸುವ ಬಸ್ಸಿನ ಡ್ರೈವರ್ , ರಿಕ್ಷಾ ಚಾಲಕರು ಇರುವಂತೆ ಹಿಂದೆ ರಥಕ್ಕೆ ಸಾರಥಿಗಳಿದ್ದರು ಅಷ್ಟೇ.ಒಮ್ಮೆ ಭೀಮ ಪ್ರಯಾಣಿಸುವಾಗ ತನ್ನ ಯೋಚನೆಗಳನ್ನು, ಹಿಂದಿನ ಕಥೆಯನ್ನು ತನ್ನ ರಥದ ಸಾರಥಿಗೆ ಹೇಳುತ್ತಾ ಹೋಗುತ್ತಾನೆ. ಕೆಲವೊಮ್ಮೆ ತಾನೇ ಯೋಚಿಸುತ್ತಾ ಹೋಗುತ್ತಾನೆ. ವ್ಯಾಸ ಭಾರತದಲ್ಲೂ ಭೀಮ ರಾಕ್ಷಸರನ್ನು ಕೊಂದಿದ್ದು,ರಾಕ್ಷಸ ಕುಲದ ಸಾಲಕಟಂಕಟಿಯನ್ನು ಮದುವೆಯಾಗಿದ್ದು ಅವರಿಬ್ಬರಿಗೆ ಘಟೋದ್ಗಜ ಹುಟ್ಟಿದ ಪ್ರಸಂಗ ಬರುತ್ತದೆ. ಆ ನಂತರ ಅಲ್ಲಿಂದ ಭೀಮ ಹೊರಟುಹೋಗಿದ್ದೂ ಇದೆ. ಇದನ್ನು ಪುರುಷ ಪ್ರಧಾನ ಸಮಾಜ, ಮನು ಶಾಸ್ತ್ರ ವೇದ ಪುರಾಣ ಇತ್ಯಾದಿಗಳನ್ನೆಲ್ಲಾ ಹೇಳಿ ಸಾಲಕಟಂಕಟಿಗೆ ಮೋಸ ಆಯ್ತು ಎಂದು ಸ್ಫೂರ್ತಿ ಗೌಡ ಅವರು ಟೀಕಿಸುವುದರಲ್ಲಿ ಅರ್ಥವಿಲ್ಲ. ಇಂದು ಜಾತಿ ಜಾತಿಗಳಿಗೆ, ಬುಡಕಟ್ಟು ಜನತೆಗೆ ತಮ್ಮ ತಮ್ಮ ಆಚಾರ ವಿಚಾರಗಳಲ್ಲಿ ಭಿನ್ನತೆ ಇರುವಂತೆ ಹಿಂದೆಯೂ ಇದ್ದವು.ಈ ಜಾತಿ ಬೇಧ ತಪ್ಪು, ಇದು ಶೋಷಣೆ ಎಂಬ ಮಾತುಗಳು ಪರ್ವ ಕಾದಂಬರಿಯ ವಿಮರ್ಶೆಯ ಚೌಕಟ್ಟನ್ನು ಮೀರಿದ್ದು. ಅದಕ್ಕೆ ಬೇರೆ ವೇದಿಕೆ ಇದೆ. ಅದೇ ರೀತಿ ದ್ರಾವಿಡ ವರ್ಣ, ಮೀನು ಹಿಡಿಯುವ ಜಾತಿ ಕೀಳೆ ಎಂಬ ಮಾತುಗಳೂ ಅರ್ಥವಿಲ್ಲದ್ದು.
ಮಹಾಭಾರತ ಮತ್ತು ಪರ್ವದಲ್ಲಿ ಆರ್ಯ ಮತ್ತು ಆರ್ಯೇತರ ಎಂದು ಹೇಳಿರುವುದನ್ನು ಬುದ್ಧಿಜೀವಿಗಳು ಆರ್ಯ ಮತ್ತು ದ್ರಾವಿಡ ಎಂದು ತಮ್ಮ ವಾದಕ್ಕೆ ತಕ್ಕಂತೆ ಬದಲಾಯಿಸಿಕೊಂಡರೆ ಅದು ಭೈರಪ್ಪನವರ ತಪ್ಪೇ? ಬಡತನ, ಗುಡಿಸಲು,ಕಪ್ಪು ವರ್ಣದ ಹೆಂಗಸಿನ ಮೇಲೆ ತಿರಸ್ಕಾರವೇಕೆ ಎಂಬ ಮಾತುಗಳೂ ಇದೇ ರೀತಿ context ಅನ್ನು ಮರೆತು ಇಂದಿನ ವಿಮರ್ಶೆಯ ಪರಿಭಾಷೆಯಲ್ಲಿ ಆಡಿದ ಮಾತುಗಳು. ಪರ್ವದಲ್ಲಿ ಭೈರಪ್ಪನವರು ಮಹಾಭಾರತ ಮತ್ತು ನಮ್ಮ ಭಾರತ ದೇಶದ ಜಾತಿ ಪದ್ಧತಿ ಸರಿಯೋ ತಪ್ಪೋ ಎಂಬುದರ ಮೇಲೆ ವ್ಯಾಖ್ಯಾನ ಮಾಡಿಲ್ಲ. ಸುಮಾರು ಮೂರ್ನಾಲಕ್ಕು ಸಾವಿರದಷ್ಟು ಹಿಂದಿನ ಕಥೆಯನ್ನು ನಮ್ಮ ಇಂದಿನ ಜೀವನದ ದೃಷ್ಟಿಕೋನದಿಂದ ಅಳೆಯುವುದೇ ತಪ್ಪಾಗುತ್ತದೆ.
ಕೊನೆಯದಾಗಿ ಒಂದೆರೆಡು ಮಾತು. ಪರ್ವವನ್ನು ಪೂರ್ತಿ ಓದಿರುವವರು ಆ ಕಾದಂಬರಿಯ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿಯುವ ಆಸಕ್ತಿ ಇದ್ದರೆ ಈ ಕೆಳಗಿನ ಪುಸ್ತಕಗಳನ್ನು ಓದಬಹುದು.
೧. ಯುಗಾಂತ –ಇರಾವತಿ ಕರ್ವೆ ( ಪ್ರಕಾಶಕರು- ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ) — ಇದರ ಕನ್ನಡ ಅನುವಾದ ಇದೆ.
೨. ಎಸ್ ಎಲ್ ಭೈರಪ್ಪನವರ ಪರ್ವ ಒಂದು ಸಮೀಕ್ಷೆ–ಸಂಪಾದಕಿ ವಿಜಯಾ (ಪ್ರಕಾಶಕರು–ಇಳಾ ಪ್ರಕಾಶನ. ಬೆಂಗಳೂರು-೧೮)
೩. ಎಸ್ ಎಲ್ ಭೈರಪ್ಪನವರ ‘ನಾನೇಕೆ ಬರೆಯುತ್ತೇನೆ? ಕೃತಿಯಲ್ಲಿರುವ ಪರ್ವ ಬರೆದಿದ್ದು ಎಂಬ ಲೇಖನ. (ಪ್ರಕಾಶಕರು -ಸಾಹಿತ್ಯ ಭಂಡಾರ ಬೆಂಗಳೂರು–೫೩)