ಅಥೆನ್ಸ್‌ನಲ್ಲಿಲ್ಲದ ಒಂದು ಅಯೋಧ್ಯೆಯಲ್ಲಿತ್ತು! ಅದೇ ಧರ್ಮ
– ಸಂತೋಷ್ ತಮ್ಮಯ್ಯ
ಆಧುನಿಕ ವಾಸ್ತು ಪ್ರಾಕಾರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಗಳಿಸಿರುವ ಶೈಲಿಗಳಲ್ಲಿ ಗ್ರೀಕ್ ಶೈಲಿಯೂ ಒಂದು. ಅಮೆರಿಕಾದ ವೈಟ್ ಹೌಸಿನಿಂದ ಹಿಡಿದು ಕರ್ನಾಟಕದ ಮಹಾನಗರಗಳ ಪುರಭವನಗಳವರೆಗೂ ಗ್ರೀಕ್ ವಾಸ್ತುಶೈಲಿ ತನ್ನ ಛಾಪನ್ನು ಒತ್ತಿದೆ. ಬೃಹದಾಕಾರದ ಉದ್ದನೆಯ ಕಂಬಗಳು, ಏನೋ ಒಂದು ಗಾಂಭೀರ್ಯವನ್ನೂ ರಾಜಕಳೆಯನ್ನೂ ಒಡಲಲ್ಲಿಟ್ಟುಕೊಂಡ ಈ ಶೈಲಿಯ ಕಟ್ಟಡಗಳು ಕೊಂಚ ಅಧ್ಯಾತ್ಮದ ಭಾವವನ್ನೂ, ಕೊಂಚ ಭೀತಿಯ ಲಕ್ಷಣವನ್ನೂ ಸೂಸುತ್ತಿರುವಂತೆ ಕಾಣಿಸುತ್ತವೆ. ಇಂಥ ಕಟ್ಟಡಗಳು ಇಂದು ಜಗತ್ತಿನ ಸಾಮಾಜಿಕ ಸಂರಚನೆಯನ್ನೂ ಮೀರಿ, ರಾಜಕೀಯ ವಾತಾವರಣವನ್ನೂ ದಾಟಿ, ಪ್ರಾದೇಶಿಕತೆಯ ಶೈಲಿಗಳೆಡೆಯಲ್ಲೂ ಜನಪ್ರೀಯತೆಯನ್ನು ಪಡೆದುಕೊಂಡಿವೆ. ಪುರಾತನ ಗ್ರೀಕ್ ಸಂಸ್ಕೃತಿಗೆ ಮೆರುಗನ್ನೂ ಆಧುನಿಕ ವಾಸ್ತುಶೈಲಿಗೆ ಸವಾಲನ್ನೂ ಒಡ್ಡಿರುವ ಈ ಶೈಲಿ ಗ್ರೀಕ್ ನಾಗರಿಕತೆ ಅಳಿದರೂ ತಾನು ಅಳಿಯದೆ ಉಳಿದುಕೊಂಡಿದೆ. ಅಷ್ಟೇನೂ ಸೂಕ್ಷ್ಮತೆಯಿಲ್ಲದ, ನಾಜೂಕುತನವಿಲ್ಲದ, ಹೆಚ್ಚೇನೂ ಕೌಶಲ್ಯವಿಲ್ಲದಂತೆ ಕಾಣುವ ಗ್ರೀಕ್ ಶೈಲಿ ತನ್ನ ಸರಳತೆಯಿಂದಲೂ ಯೂರೋಪನ್ನು ದಾಟಿ ದೂರದ ಕೊಡಗು-ಚಿಕ್ಕಮಗಳೂರಿನ ಕಾಫಿ ಪ್ಲಾಂಟರುಗಳ ಬೃಹತ್ ಬಂಗಲೆಗಳಲ್ಲೂ ಪ್ರಾತಿನಿಧ್ಯವನ್ನು ಪದೆದುಕೊಂಡಿವೆ. ಜಗತ್ತಿನ ಚಿತ್ರರಂಗದ ಸಿನೆಮಾ ಸೆಟ್ಟುಗಳಲ್ಲಿ, ಕಾವ್ಯ-ಕಥೆಗಳಲ್ಲಿ ರೂಪಕದಂತೆಯೂ ಬಳಕೆಯಾಗಿದೆ. ಭಗ್ನ ಪ್ರೇಮದ ಸಂಕೇತಗಳಂತೆಯೂ ಬಳಕೆಯಾಗಿದೆ ಎಂದರೆ ಅದರ ಜನಪ್ರೀಯತೆಯನ್ನು ಅಂದಾಜಿಸಬಹುದು. ವಸಹಾತುಷಾಹಿ ಬುದ್ಧಿಯ ಬ್ರಿಟಿಷ್,ಫ್ರೆಂಚ್,ಡಚ್ ಜನಗಳ ಕಡಲು ದಾಟಿ ಮೆರೆಯುವ ಜಾಯಮಾನಗಳಿಂದ ಆ ಶೈಲಿ ವಿಶ್ವವ್ಯಾಪಿಯಾಗಿದ್ದೇನೋ ನಿಜ. ಆದರೆ ಅದನ್ನು ಜಗತ್ತು ಗುರುತಿಸುವುದು ಗ್ರೀಕ್ ಶೈಲಿ ಎಂದೇ.
ಇಂಥಾ ವಿಖ್ಯಾತ ವಾಸ್ತು ಶೈಲಿಯ ಮೂಲವಿರುವುದು ಪುರಾತನ ಅಥೆನ್ಸಿನ ಪಾರ್ಥೆನಾನ್ ದೇವಿ ಮಂದಿರದಲ್ಲಿ. ತನ್ನ ಶೈಲಿ ಜಗತ್ತಿನಾದ್ಯಂತ ಹರಡಿದ್ದರೂ ಇಂದಿಗೂ ಪಾರ್ಥೆನಾನ್ ಒಂದು ಮುರುಕು ಮಂಟಪವೇ. ತನ್ನತನವನ್ನು ಜಗತ್ತಿಗೆ ಹರಡಿದ ಮೇಲೆ ಇನ್ನು ಕೆಲಸವೇನಿದೆ ಎಂಬಂತೆ ಒಂದು ಕಾಲದ ಪಾರ್ಥೆನಾನ್ ಅದೇ ಗ್ರೀಸಿನ ಅಕ್ರೊಪೊಲೀಸ್ ಬೆಟ್ಟದ ಮೇಲೆ ನಿಡುಸುಯ್ಯುವಂತೆ ಬಿದ್ದುಕೊಂಡಿದೆ. ಇಷ್ಟೇ ಆಗಿದ್ದರೆ ಅದರಲ್ಲೇನೋ ವಿಶೇಷವಿರುತ್ತಿರಲಿಲ್ಲ. ಕೇವಲ ವಾಸ್ತು ಶಾಸದ ಶೈಲಿಯೊಂದರ ಬಣ್ಣನೆ ಸದ್ಯದ ಆವಶ್ಯಕತೆಯಂತೂ ಖಂಡಿತಾ ಅಲ್ಲ.
ಆದರೆ ಪಾರ್ಥೆನಾನ್‌ನ ಇತಿಹಾಸ ಯಾಕೋ ಸದ್ಯದ ವಾತಾವರಣದ, ಪ್ರಸ್ತುತ ಭಾರತದ ಕೆಲವು ಬೆಳವಣಿಗೆಗಳೊಂದಿಗೆ ತುಲನೆ ಮಾಡಬಹುದು ಎಂಬಂತಿದೆ. ಆ ಕಾರಣಕ್ಕೆ ಪಾರ್ಥೆನಾನ್ ನೆನಪಾಗುತ್ತದೆ.ರೋಮನ್ನರಿಗೆ ಬೆಲ್ಲೋನಾ ಹೇಗೆ ಸಮರ ದೇವತೆಯೋ, ಹಾಗೆ ಗ್ರೀಕರಿಗೆ ಅಥೆನಾ ಸಮರ ದೇವತೆ. ಅವರಿಗದು ಭಕ್ತಿ-ಭಾವದ ಪೂಜನೀಯ ದೇವಿ. ಅಂಥಾ ಅಥೆನಾಳ ಬೃಹತ್ ಗುಡಿಯನ್ನು ಸೌಂದರ್ಯದ ಖನಿಯಂತಿದ್ದ ಅಕ್ರೊಪೊಲೀಸ್ ಎಂಬ ಕಲ್ಲಿನ ಬೆಟ್ಟದಲ್ಲಿ ಕಡೆದ ಗ್ರೀಕರು ಅಥೆನಾಳ ಪ್ರೇರಣೆ, ನಾಮಬಲದಿಂದ ಅಥೆನ್ಸ್ ಅನ್ನು ಕಟ್ಟಿದರು, ಕಟ್ಟಿ ಅಥೆನಾಳಿಗರ್ಪಿಸಿದರು. ಅದನ್ನು ತಮ್ಮ ಜನಾಂಗದ ಅಸ್ಮಿತೆ ಎಂದು ಪೂಜಿಸಿದರು. ಇಡೀ ಜಗತ್ತು ಅಥೆನ್ಸ್ ಅನ್ನು ದಿಟ್ಟಿಸಿ ನೋಡಬೇಕೆಂದು ಶ್ರಮಿಸಿದರು, ಅದನ್ನು ಸಾಧಿಸಿ ತೋರಿಸಿದರು ಕೂಡಾ. ಅಥೆನಾಳ ಪ್ರೇರಣೆಯಿಂದ ಗ್ರೀಕ್ ಕಲೆ, ಸಾಹಿತ್ಯ, ತತ್ತ್ವಶಾಸ, ಕಾವ್ಯ, ನಾಟಕ, ಕ್ರೀಡೆ, ನ್ಯಾಯ, ಇತಿಹಾಸ, ವಿಜ್ಞಾನಗಳ ಭಂಡಾರವಾಗಿ ಬೆಳೆಯಿತು. ಆ ಮೂಲಕ ಸಭ್ಯತೆಯ ಹೊಸ ಪರಿಭಾಷೆಯೊಂದನ್ನು ಗ್ರೀಕರು ಜಗತ್ತಿಗೆ ಕೊಟ್ಟರು. ತನ್ನ ಕೊಡುಗೆಗಳನ್ನು ಜಗತ್ತು ಸೂರ್ಯ ಚಂದ್ರರಿರುವವರೆಗೆ ನೆನಪಿಟ್ಟುಕೊಳ್ಳುವಂತೆ ಮಾಡಿದರು. ಎಲ್ಲವೂ ಚೆನ್ನಾಗಿದ್ದ ಗ್ರೀಕಿನಲ್ಲಿ ಶ್ರೀಮಂತಿಕೆಯ ಅಡ್ಡಪರಿಣಾಮಗಳನೇಕ ಕಂಡುಬಂದರೂ ಅದೇನೂ ಅಪಾಯಕಾರಿಯಲ್ಲ ಎಂದೇ ಗ್ರೀಸಿನ ಜನರು ನಂಬಿದ್ದರು. ಏಕೆಂದರೆ ಅಕ್ರೊಪೊಲೀಸ್ ಬೆಟ್ಟದ ಮೇಲೆ ತಾಯಿ ಅಥೆನಾ ಇದ್ದಳು! ಆಕೆಯಿರುವವರೆಗೂ ಗ್ರೀಸ್ ಉಳಿಯುತ್ತದೆ ಎಂಬ ಅಧಮ್ಯ ಭರವಸೆ ಅವರಲ್ಲಿತ್ತು.
ಆದರೆ ಯಾವಾಗ ಮರುಭೂಮಿಯಲ್ಲಿ ಹುಟ್ಟಿದ ಮತವೊಂದರ ಉತ್ಮತ್ತತೆ ರಾಜಕೀಯ ವಿಸ್ತರಣಾವಾದವಾಗಿ ಶಕ್ತಿಯನ್ನು ವರ್ಧಿಸಿಕೊಂಡಿತೋ ಆಗ ಗ್ರೀಸಿಗೂ, ಗ್ರೀಕರಿಗೂ ಕೇಡುಗಾಲ ಆರಂಭವಾಯಿತು. ಮತೀಯ ಅಸಹನೆಯ ಒಟ್ಟೋಮನ್ ತುರ್ಕರ ಪಡೆಯ ಅಟ್ಟಹಾಸಕ್ಕೆ ಗ್ರೀಸ್ ಮೊದಲ ಬಲಿಯಾಯಿತು. ಅಷ್ಟರಲ್ಲಾಗಲೇ ಮೋಜು ಮಸ್ತಿಗಳಿಗೆ ಬಲಿಯಾಗಿ ವಿಸ್ಮೃತಿಯತ್ತ ಸಾಗುತ್ತಿದ್ದ ಗ್ರೀಸ್ ಯಾವ ಹಂತದಲ್ಲೂ ತುರ್ಕರ ಪಡೆಗಳಿಗೆ ಸವಾಲೊಡ್ಡುವ ಸ್ಥಿತಿಯಲ್ಲಿರಲಿಲ್ಲಘಿ. ಒಟ್ಟೋಮನ್ ತುರ್ಕರು ಗ್ರೀಸ್ ಅನ್ನು ಮನಸೋ ಇಚ್ಛೆ ಕೊಳ್ಳೆಹೊಡೆದರು. ತುರ್ಕರು ಯಾವ ದೇಶದಲ್ಲೇ ಇರಲಿ, ಯಾವ ಕಾಲದಲ್ಲೇ ಇರಲಿ ತಮ್ಮದು ಅದೇ ಬುದ್ಧಿ ಎಂಬುದನ್ನು ತೋರಿಸಿಕೊಟ್ಟಿದ್ದರು. ಹೀಗೆ ಗ್ರೀಸನ್ನು ವಶಪಡಿಸಿಕೊಂಡ ತುರ್ಕರಿಗೆ ಮೊದಲು ಕಣ್ಣು ಕುಕ್ಕಿದ್ದೇ ಅಕ್ರೊಪೊಲೀಸ್ ಬೆಟ್ಟದ ಮೇಲಿದ್ದ ಅಥೆನಾ ಮಂದಿರ. ತುರ್ಕರು ಒಂದು ಕ್ಷಣವೂ ತಡ ಮಾಡಲಿಲ್ಲ. ಯಾವ ಮುಲಾಜೂ ಇಲ್ಲದೆ ಅಥೆನಾ ಮೇಲೆ ದಾಳಿಯಾಯಿತು. ಆಕರ್ಷಕ ಸ್ತಂಬಗಳನ್ನು ಒರಟರು ನಿರ್ಭಾವುಕವಾಗಿ ಮುರಿದರು. ದೇವಸ್ಥಾನದ ಸಂಪತ್ತನ್ನು ದೋಚಿದ ಮೇಲೆ ತುರ್ಕರಿಗೆ ಅದನ್ನು ಮಸೀದಿಯನ್ನಾಗಿ ಪರಿವರ್ತಿಸಿ ಗ್ರೀಕರನ್ನು ನೋಯಿಸಬೇಕು ಎನಿಸಿತು. ಪಾರ್ಥೆನಾನ್ ಅವೈಜ್ಞಾನಿಕವಾಗಿ ದುರಸ್ತಿಯಾಯಿತು. ಸುಂದರ ನಿರ್ಮಿತಿಯನ್ನು ವಿಚಿತ್ರವಾಗಿಸಿದರು. ಮಸೀದಿ ಆರಂಭವಾಯಿತು, ಆಜಾನ್ ಮೊಳಗಿತು. ನಮಾಜ್ ನಡೆಯಿತು. ಹೀಗೆ ಶತಮಾನಗಳಿಂದ ಅಥೆನಾಳನ್ನು ಪೂಜಿಸುತ್ತಿದ್ದ ಪಾರ್ಥೆನಾನ್ ನಾಮಾವಶೇಷವಾಯಿತು. ಗ್ರೀಸಿನ ಅಸ್ಮಿತೆಯೇ ಉಳಿಯದಿದ್ದ ಮೇಲೆ ಇನ್ನು ಗ್ರೀಕರಾದರೂ ಹೇಗೆ ಉಳಿದಾರು? ಅದಾಗಲೇ ವಿಸ್ಮೃತಿಯತ್ತ ಸಾಗುತ್ತಿದ್ದ ಗ್ರೀಕರು ಒಂದೊಂದಾಗಿ ತಮ್ಮತನವನ್ನು ಕಳೆದುಕೊಳ್ಳತೊಡಗಿದರು. ಅಥೆನಾಳನ್ನು ಕಳೆದುಕೊಂಡ ನಂತರ ಗ್ರೀಸಿನಲ್ಲಿ ಮತ್ತೆಂದೂ ಮಹಾಪುರುಷರು, ವಿದ್ವಾಂಸರು ಹುಟ್ಟಲೇ ಇಲ್ಲ!
ಕಾಲ ಉರುಳುತ್ತಿತ್ತು, ಯೂರೋಪಿನಲ್ಲಿ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳು ಸಂಭವಿಸಿದವು. ಒಟ್ಟೋಮನ್ ತುರ್ಕರ ಶಕ್ತಿ ಕುಂದಿದಾಗಲೂ ಗ್ರೀಸಿಗೆ ತನ್ನತನವನ್ನು ಮರಳಿ ಗಳಿಸಿಕೊಳ್ಳುವ ಕೊನೆಯ ಅವಕಾಶವೊಂದಿತ್ತು. ಆದರೆ ವಿಸ್ಮೃತಿಯಿಂದ ಹೊರಬರದ ಗ್ರೀಕರು ಆ ಸಾಹಸಕ್ಕೆ ಕೈಹಾಕುವ ಬದಲು ಕ್ಯಾಥೋಲಿಕ್ ಮತಕ್ಕೆ ತಮ್ಮನ್ನು ಸುಲಭವಾಗಿ ಅರ್ಪಿಸಿಕೊಂಡುಬಿಟ್ಟರು. ಕ್ರಿಶ್ಚಿಯನ್ನರು ಕಾಲಿಟ್ಟ ಗ್ರೀಸ್ ಮತ್ತೆಂದೂ ಮರಳಿ ಬರುವಂತಿರಲಿಲ್ಲ. ಏಕೆಂದರೆ ಕ್ರಿಶ್ಚಿಯನ್ನರಿಗೂ ಆಕ್ರೊಪೊಲೀಸ್ ಬೆಟ್ಟ ಕಣ್ಣುಕುಕ್ಕಿತ್ತು. ಬಹುಹಿಂದೆಯೇ ಗ್ರೀಕ್ ವಾಸ್ತುಶೈಲಿಯ ಕಟ್ಟಡಗಳಿಗೆ ಮನಸೋತಿದ್ದ ವ್ಯಾಟಿಕನ್‌ಗೆ ಅಕ್ರೊಪೊಲೀಸ್ ಬೆಟ್ಟದ ಮೇಲಿದ್ದ, ಮಸೀದಿಯಾಗಿ ಪರಿವರ್ತಿತವಾಗಿದ್ದ, ಹಳೆಯ ದೇಗುಲವನ್ನು ಚರ್ಚ್ ಆಗಿ ಪರಿವರ್ತಿಸಬೇಕೆನ್ನುವ ದುರುಳ ಚಿಂತನೆ ಮೊಳೆಯಿತು. ವ್ಯಾಟಿಕನ್ ಅನ್ನು ಹೋಲುವ ಮತ್ತೊಂದು ತೀರ್ಥಕ್ಷೇತ್ರವಿದ್ದರೆ ಒಳ್ಳೆಯದು ಎಂದು ಚಿಂತಿಸುತ್ತಿದ್ದವರಿಗೆ ಅಥೆನಾ ಸ್ಪಷ್ಟತೆಯನ್ನು ಕೊಟ್ಟಿತ್ತು. ಮುಸ್ಲಿಮರ ಕಾಲದಲ್ಲಿ ಮಸೀದಿಯಾಗಿದ್ದ ಪಾರ್ಥೆನಾನ್ ಕ್ರಿಶ್ಚಿಯನ್ನರ ಕಾಲದಲ್ಲಿ ‘ವರ್ಜಿನ್ ಮೇರಿ’ಚರ್ಚ್ ಆಗಿ ಬದಲಾಯಿತು. ಯೂರೋಪಿನೆಲ್ಲೆಡೆಯಿಂದ ಬರುತ್ತಿದ್ದ ಕ್ಯಾಥೊಲಿಕರು ಅಕ್ರೊಪೊಲೀಸ್ ಏರಿ ಕನ್ಯೆ ಮೇರಿಯ ದರ್ಶನ ಮಾಡತೊಡಗಿದರು. ಇದು ೧೬೮೭ರಿಂದ ಎರಡನೆ ಮಹಾಯುದ್ಧ ತಾರಕಕ್ಕೇರುವವರೆಗೂ ನಿರಂತರ ನಡೆಯಿತು.
ವಿಶ್ವವೇ ರಣರಂಗವಾದರೆ ಜಗತ್ತೆಲ್ಲವೂ ಮಸಣದ ದಾರಿ ಕಾಯುತ್ತಿರುತ್ತವೆ ಎಂಬಂತೆ ವಿಶ್ವ ತಲ್ಲಣಗೊಂಡಿತ್ತು. ಕನ್ಯೆ ಮೇರಿ ಚರ್ಚ್ ಆಗಿದ್ದ ಪಾರ್ಥೆನಾನ್ ಮೇಲೂ ಬಾಂಬುಗಳು ಬಿದ್ದವು. ಮತ್ತೆ ಕಂಬಗಳು ಧ್ವಂಸಗೊಂಡವು. ಸ್ವರೂಪ ಬದಲಿಸಿಕೊಂಡು ಅಸ್ತಿಪಂಜರದಂತಾಯಿತು. ಯುದ್ಧದ ನಂತರ ಪಾರ್ಥೆನಾನ್‌ಗೆಷ್ಟು ಹಾನಿಯಾಯಿತೆಂದರೆ ಮತ್ತೆಂದೂ ಅದನ್ನು ಮೂಲಸ್ವರೂಪಕ್ಕೆ ತರಲಾಗದೆಂದು ಕ್ರಿಶ್ಚಿಯನ್ನರೇ ಕೈಚೆಲ್ಲುವಷ್ಟು! ಒಂದಿಷ್ಟು ಕಾಲ ಹಾಳುಸುರಿಯುತ್ತಿದ್ದ ಪಾರ್ಥೆನಾನ್ ಅನ್ನು ಯುದ್ಧ ಮುಗಿದ ಅದೆಷ್ಟೋ ವರ್ಷಗಳ ನಂತರ ಗ್ರೀಸ್ ಸರ್ಕಾರವೇ ಅದನ್ನು ವಸ್ತುಸಂಗ್ರಹಾಲಯವೆಂದು ಘೋಷಿಸಿತು! ಇಂದಿಗೂ ಅಥೆನಾ ದೇವಿಯ ದೇಗುಲ, ಗ್ರೀಕ್ ನಾಗರಿಕತೆಯ ಗರ್ಭಗುಡಿ ಒಂದು ಮ್ಯೂಸಿಯಂ! ಪಾಳುಬಿದ್ದ ಮಂಟಪ ಎಂಬ ಹಣೆಪಟ್ಟಿಯನ್ನು ಮ್ಯೂಸಿಯಂ ಎಂಬ ಮುಖವಾಡ ಮರೆಮಾಚಬಹುದೇನೋ, ಆದರೆ ವಾಸ್ತವವಾಗಿ ಮ್ಯೂಸಿಯಂ ಸೇರಿದ್ದು ಯಾವುದು? ಪಾರ್ಥೆನಾನ್‌ನ ಚಿತ್ರ ಇಂದು ವಿಶ್ವವಿಖ್ಯಾತವೇ ಆಗಿರಬಹುದು, ಆದರೆ ನಿಜಕ್ಕೂ ಪಾರ್ಥೆನಾನ್ ಯಾವುದರ ಸ್ಮಾರಕ? ತನ್ನ ಪಾಡಿಗೆ ತಾನು ಪೂಜಿಸಿಕೊಳ್ಳುತ್ತಿದ್ದ ಅಥೆನಾ ಮುಸಲ್ಮಾನರಿಗೇನು ಮಾಡಿದ್ದಳು? ಒಂದು ಕಾಲದಲ್ಲಿ ಮಸೀದಿಯಾಗಿ ಪರಿವರ್ತಿತವಾಗಿದ್ದ ಪಾರ್ಥೆನಾನ್‌ನ ಇತಿಹಾಸ ಅರಿತಿದ್ದ ಕ್ರಿಶ್ಚಿಯನ್ನರೇಕೆ ಅದನ್ನು ಮರಳಿ ಅಥೆನಾಗರ್ಪಿಸಲಿಲ್ಲ? ಅಥೆನಾ ಕನ್ಯೆ ಮೇರಿಯಾದಳೇಕೆ? ಪಾರ್ಥೆನಾನ್ ಮರೆಯಾದ ಮೇಲೆ ಗ್ರೀಕರ ಸಂಸ್ಕೃತಿ ಅವಸಾನವಾಯಿತೇಕೆ? ಇಂದು ಗ್ರೀಕರ ಸಂಖ್ಯೆ ಸ್ವತಃ ಗ್ರೀಸಿನಲ್ಲೇ ಶೇ.೨ಕ್ಕಿಂತ ಕಡಿಮೆಯಾಗಿದ್ದೇಕೆ? ಅದಕ್ಕೆ ಹೊಣೆಗಾರರು ಯಾರು? ಒಟ್ಟೋಮನ್ ತುರ್ಕರೇ? ಕ್ಯಾಥೋಲಿಕ್ ಕ್ರಿಶ್ಚಿಯನ್ನರೇ? ಅಥವಾ ತನ್ನತನವನ್ನು ಮರೆತ ಗ್ರೀಕರೇ? ೨೦೧೯ರಲ್ಲೂ ಆ ಶೇ.೨ರಷ್ಟು ಗ್ರೀಕರ ಅಥೆನಾ ಮಂದಿರದ ಬೇಡಿಕೆ ಅರಣ್ಯರೋಧನವಾಗುತ್ತಿದೆಯೇಕೆ?
ಇಂಥ ಪ್ರಶ್ನೆಗಳ ಜೊತೆ ಜೊತೆಗೆ ಮತ್ತೊಂದು ಮಹತ್ವದ ಪ್ರಶ್ನೆಯೂ ಕಾಡುತ್ತದೆ. ಏಕೆಂದರೆ, ಅಥೆನಾದ ಕಥೆ ಕೇಳತೊಡಗಿದರೆ ಹಿಂದುಗಳಿಗೆ ಅಯೋಧ್ಯೆ-ಕಾಶಿ-ಮಥುರಾಗಳೇ ನೆನಪಾಗುತ್ತವೆ. ಏಕೆ ಅವುಗಳ ನೆನಪಾಗುತ್ತವೆ?
ನಿನ್ನೆ ರಾಮಜನ್ಮಭೂಮಿ ಪ್ರಕರಣದ ತೀರ್ಪು ಹೊರದಿದ್ದೆ.ಶತಮಾನಗಳ ಕಾಲದ ನೋವು,ಸ್ವಾಭಿಮಾನ,ಅಸ್ಮಿತೆ ಎಂದು ಆರಾಧಿಸಿಕೊಂಡು ಬಂದವರ ಕಾಯುವಿಕೆ ಕೊನೆಗೊಳ್ಳುವ ನಿರೀಕ್ಷೆಗಳು ಈಡೇರಿವೆ.ಗ್ರೀಸ್ ಮತ್ತು ಅಯೋಧ್ಯೆ ಪ್ರಕರಣಗಳನ್ನು ತೌಲನಿಕವಾಗಿ ನೋಡಿದರೆ ಮತಾಂಧತೆಯ ಬಗೆಗಿನ ಹೊಸ ವ್ಯಾಖ್ಯಾನವೊಂದು ಹುಟ್ಟುತ್ತದೆ. ಯಾವುದು ತನ್ನದಲ್ಲವೋ ಅದನ್ನು ತನ್ನದನ್ನಾಗಿಸಿಕೊಳ್ಳುವ ಹಪಾಹಪಿಗೆ ಅಯೋಧ್ಯೆಯೂ ಬಲಿಯಾಯಿತು, ಗ್ರೀಸ್ ಕೂಡಾ ಬಲಿಯಾಯಿತು. ಕ್ರಿಶ್ಚಿಯನ್ ಮತಾವಲಂಭಿಗಳಿಗೆ ಎರಡನ್ನೂ ಪುನರ್ ನಿರ್ಮಿಸಬಲ್ಲ ಎಲ್ಲಾ ಅವಕಾಶಗಳಿದ್ದವು. ಆದರೆ ಎರಡೂ ಪ್ರಕರಣಗಳಲ್ಲಿ ಅವು ನಿರಾಸಕ್ತಿಯನ್ನು ತಾಳಿದವು. ಗ್ರೀಸಿನಲ್ಲಂತೂ ಅದು ತನ್ನ ಮತವನ್ನು ಹೇರಿ ತಾನು ಕೂಡಾ ಮುಸಲ್ಮಾನ ಮಾನಸಿಕತೆಯ ತದ್ರೂಪು ಎನಿಸಿಕೊಂಡಿತು. ಹಲವು ಕಾರಣಗಳಿಂದ ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಕಾಣಿಸಿದರೂ ಅಥೆನ್ಸಿನಲ್ಲಿ ಕಾಣದ ಒಂದು ಶಕ್ತಿ ಅಯೋಧ್ಯೆಯಲ್ಲಿರುವುದು ಕಾಣಿಸುತ್ತದೆ. ತನ್ನ ಆರಾಧನಾ ಸ್ಥಳವನ್ನು ಕಳೆದುಕೊಂಡ ಗ್ರೀಕರು ನಾಮಾವಶೇಷವಾದರೆ ಅಯೋಧ್ಯೆ ಮಾತ್ರ ಶತಶತಮಾನಗಳಿಂದ ಒಂದು ಧ್ಯೇಯವನ್ನು, ಒಂದು ಗುರಿಯನ್ನು, ಒಂದು ಭಕ್ತಿಯನ್ನು ಅಗ್ನಿದಿವ್ಯವೆಂಬಂತೆ ಹೊತ್ತುಕೊಂಡೇ ಬಂದಿದೆ. ಎದೆಯಲ್ಲಿ ನೂರು ನೋವುಗಳನ್ನು, ಲಕ್ಷಾಂತರ ಬಲಿದಾನಗಳನ್ನು, ಕೊಟ್ಯಂತರ ನಿಟ್ಟುಸಿರುಗಳನ್ನು ಹೊತ್ತು ಹಿಂದೂ,ರಾಮನನ್ನು ಇನ್ನೂ ಕಾಪಿಟ್ಟುಕೊಂಡು ಬಂದಿದ್ದಾನೆ.
ರಾಮಜನ್ಮಭೂಮಿ ೧೫೨೮ರಲ್ಲೇ ನಾಶವಾಗಿರಬಹುದು. ಆದರೆ ರಾಮ ಎಂದೂ ನಾಶವಾಗಲಿಲ್ಲ.ಅಥೆನಾಳಿಗೆ ಬಂದ ದುರ್ಗತಿ ಭಾರತಕ್ಕೆ ಬರಲಿಲ್ಲ.ರಾಮಾಯಣವನ್ನೆಂದೂ ಜನ ಮರೆಯಲಿಲ್ಲ.ಅದು ಇನ್ನೂ ಬತ್ತಲಾರದ ಒರತೆಯಾಗಿ ಹರಿಯುತ್ತಲೇ ಇದೆ. ಅದೇ ಭಾರತೀಯತೆ,ಅದೇ ಹಿಂದುತ್ವ.ಅದೇ ಇಂದು ಅಯೋಧ್ಯೆಯನ್ನೂ ಪಡೆದುಕೊಂಡಿದೆ.
ಅಂಕಣ ತುಂಬಾ ಚೆನ್ತಾಂನಾಗಿದೆ
ಮತಾಂತರ ನಿಷೇಧ ಕಾಯಿದೆ..ಆದಷ್ಟು ಬೇಗ ಜಾರಿ ಆಗ ಬೇಕು….
ಗ್ರೀಕರು ತನ್ನ ತನವನ್ನು ಮರೆತಂಗೆ, ನಮ್ಮ ಹಿಂದೂಗಳು ಮರೆಯುತ್ತಾರೆ ಅನ್ನುವ ಕಲ್ಪನೆಯನ್ನು ಮಾಡಲು ಸಾದ್ಯವಿಲ್ಲ….