ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 10, 2019

ಅಯೋಧ್ಯೆ : ಸೆಕ್ಯುಲರ್ ಮಾರೀಚರಿಗೆ ಸುಪ್ರೀಂ ರಾಮಬಾಣ

‍ನಿಲುಮೆ ಮೂಲಕ

ರಾಕೇಶ್ ಶೆಟ್ಟಿ

ನವೆಂಬರ್ ೯,೨೦೧೯ರ ಶನಿವಾರದ ದಿನಕ್ಕೂ,ಸೆಪ್ಟಂಬರ್ ೩೦,೨೦೧೦ರ ಗುರುವಾರದ ದಿನಕ್ಕೂ ಸಾಮ್ಯತೆಯಿದೆ. ಆ ಎರಡು ದಿನಗಳು ೪೯೧ ವರ್ಷಗಳಷ್ಟು ಹಳೆಯದಾದ ರಾಮಜನ್ಮಭೂಮಿಯ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಕೇಸಿನ ತೀರ್ಪು ಬರುವ ದಿನಗಳಾಗಿದ್ದವು.

“ವಿವಾದಿತ 2.7 ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ,ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ,ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು” ಎಂದು ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ ತೀರ್ಪು ಯಾವ ಗುಂಪಿಗೂ ಒಪ್ಪಿಗೆಯಾಗಲಿಲ್ಲ.ಆ ನಂತರ ೨೦೧೧ರ ಅಕ್ಟೋಬರ್ ತಿಂಗಳಿನಲ್ಲಿ,ಸುಪ್ರೀಂ ಕೋರ್ಟು,ಅಲಹಬಾದ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು.

ಅದಾದ ನಂತರ ಈ ಕೇಸಿಗೆ ಪೂರಕವಾಗಿ ಬಂದ ಮತ್ತೊಂದು ಬಹುಮುಖ್ಯ ತೀರ್ಪು, 1994ರ ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ ಹಾಗೂ ನಮಾಜ್ ಮಾಡಲು ಅದೇ ಜಾಗ ಆಗಬೇಕೆಂದೇನಿಲ್ಲ, ಬಯಲು ಪ್ರದೇಶವೊಂದರಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು ಹಾಗೂ ಈ ವಿವಾದ ವಿಚಾರಣೆಗೆ ಸಾಂವಿಧಾನಿಕ ಪೀಠದ ಅಗತ್ಯವಿಲ್ಲ ಎನ್ನುವುದಾಗಿತ್ತು.

ಇದಾದ ನಂತರ ಅರ್ಜಿದಾರರು ಹಾಗೂ ಮಧ್ಯಸ್ಥಿಕೆದಾರರ ಜೊತೆಗೂಡಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರಕ್ಕೂ ಸುಪ್ರೀಂ ಕೋರ್ಟ್ ಮಾರ್ಚ್ ತಿಂಗಳಲ್ಲಿ ಅವಕಾಶ ನೀಡಿತ್ತು. ಅಂತಿಮವಾಗಿ ಸತತ ೪೦ ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿತ್ತು.ಕಡೆಯ ದಿನ ಮತ್ತಷ್ಟು ಸಮಯ ಕೋರಿದ ಅರ್ಜಿದಾರರಿಗೆ,ಮುಖ್ಯನ್ಯಾಯ ಮೂರ್ತಿಗಳಾದ ರಂಜನ್ ಗೋಗೋಯ್ ಅವರು ‘Enough is Enough’ ಎಂದಿದ್ದರು.ಎಲ್ಲರ ಚಿತ್ತ ನವೆಂಬರ್ ತಿಂಗಳಲ್ಲಿ ಬರಲಿರುವ ತೀರ್ಪಿನ ಮೇಲೆಯೇ ಇತ್ತು. ನವೆಂಬರ್ ೯ನೇ ತಾರೀಕು ಐತಿಹಾಸಿಕ ತೀರ್ಪು ಹೊರಬಿದ್ದಿದೆ. ವಿವಾದಿತ ೨.೨೭ ಎಕರೆ ಜಾಗವು ರಾಮ್ ಲಲ್ಲಾನಿಗೆ ಸೇರಿದ್ದು ಎಂದು ಕೋರ್ಟ್ ತೀರ್ಪಿತ್ತಿದೆ. ಸುನ್ನಿ ವಕ್ಫ್ ಬೋರ್ಡಿಗೆ ಬೇರೆ ಜಾಗದಲ್ಲಿ ೫ ಎಕರೆ ಭೂಮಿಯನ್ನು ಇನ್ನು ೩-೪ ತಿಂಗಳಲ್ಲಿ ನೀಡುವಂತೆಯೂ ಸೂಚಿಸಿದೆ. ಮಂದಿರ ನಿರ್ಮಾಣದ ಹೊಣೆಯನ್ನು ಹಾಗೂ ನಿರ್ವಹಣೆಗಾಗಿ ಟ್ರಸ್ಟ್ ರಚನೆಯ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿದೆ.ಬಾಬ್ರಿ ಮಸೀದಿಯು ಖಾಲಿ ಜಾಗದಲ್ಲಿ ನಿರ್ಮಾಣವಾಗಿಲ್ಲ ಎನ್ನುವುದನ್ನು ಕೋರ್ಟ್ ಒಪ್ಪಿದೆಯಾದರೂ, ಮಂದಿರವನ್ನು ಕೆಡವಿ ಕಟ್ಟಿರುವುದುಕ್ಕೆ ಪುರಾವೆ ಇಲ್ಲವೆಂದಿದೆ.ಹಾಗೆಯೇ ಮಸೀದಿಯ ಕೆಳಗೆ ಎಎಸ್ಐ ಉತ್ಖನನ ನಡೆಸಿ ನೀಡಿದ ವರದಿಯನ್ನು ಪುರಸ್ಕರಿಸಿ ಅಲ್ಲಿ ಇಸ್ಲಾಮೇತರ ಮಂದಿರದ ಅವಶೇಷ ಸಿಕ್ಕಿರುವುದನ್ನು ಒಪ್ಪಿಕೊಂಡಿದೆ. ಜೊತೆಗೆ ವಿವಾದಿತ ಜಾಗವು ರಾಮ ಜನ್ಮಸ್ಥಳ ಎನ್ನುವ ಹಿಂದೂಗಳ ವೈಯುಕ್ತಿಕ ನಂಬಿಕೆಯು ವಿವಾದರಹಿತವಾದದ್ದು ಎಂದಿದೆ.ಇದಿಷ್ಟು ತೀರ್ಪಿನ ಸಾರಾಂಶ.

ಈಗ ಪ್ರಶ್ನೆ,ಮುಂದೇನಾಗಬಹುದು ಎನ್ನುವುದರ ಬಗ್ಗೆ. ಈಗಾಗಲೇ ತೀರ್ಪಿನ ಬಗ್ಗೆ ಮುಸ್ಲಿಂ ಲಾ ಬೋರ್ಡ್ ಅಸಮಾಧಾನ ವ್ಯಕ್ತಪಡಿಸಿದ್ದು,ಮೇಲ್ಮನವಿ ಅರ್ಜಿ ಸಲ್ಲಿಸುವ ಪ್ರತಿಕ್ರಿಯೆ ನೀಡಿದೆ. ಮುಂಬರುವ ದಿನಗಳಲ್ಲಿ ನಿಲುವನ್ನು ಬದಲಿಸಬಹುದಾ? ಗೊತ್ತಿಲ್ಲ.ಪ್ರಕರಣದ ಮತ್ತೊಬ್ಬ ಪ್ರಮುಖ ಅರ್ಜಿದಾರರಾಗಿದ್ದ ಇಕ್ಬಾಲ್ ಅನ್ಸಾರಿಯವರು ಮಾತ್ರ ಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದಾರೆ. ೧೯೪೯ರಲ್ಲಿ ಕೇಸು ಹಾಕಿದ್ದ ಏಳು ಮಂದಿ ಅಯೋಧ್ಯಾ ನಿವಾಸಿಗಳ ಪೈಕಿ ಹಿರಿಯರಾದ ಅರ್ಜಿದಾರ ಮೊಹಮ್ಮದ್ ಫರೂಕ್ ಅವರು ೨೦೧೪ರಲ್ಲಿ ನಿಧನರಾದರು.ಅವರೂ ಕೂಡ ಈ ಸಮಸ್ಯೆ ಸೌಹಾರ್ದಯುತವಾಗಿ ಪರಿಹಾರವಾಗಬೇಕೆಂದೇ ಬಯಸಿದ್ದರು.ಹಾಗೆ ನೋಡಿದರೇ, ಸಮಸ್ಯೆಯ ಪರಿಹಾರಕ್ಕೆ ತೊಡಕಾಗಿದ್ದು ಈ ದೇಶದ ಸೋಕಾಲ್ಡ್ ಸೆಕ್ಯುಲರ್ ರಾಜಕಾರಣ ಹಾಗೂ ಮಾರ್ಕಿಸ್ಟ್ ಇತಿಹಾಸಕಾರರು. ಅವರಿಗೆ ಹೆಗಲು ಕೊಟ್ಟು ನಿಂತವರು ಕೆಲವು ಮೂಲಭೂತವಾದಿಗಳು.ಈ ವಿವಾದವನ್ನು ಆರೆಸ್ಸೆಸ್ ಹಾಗೂ ಬಿಜೆಪಿಯ ‘ರಾಜಕೀಯ’ಕ್ಕೆ ತಳುಕು ಹಾಕಲು ಇವರು ಪ್ರಯತ್ನಿಸಿದ್ದರು.

ಬಾಬರ್ ಈ ಜಾಗವನ್ನು ಆಕ್ರಮಿಸಿಕೊಂಡಿದ್ದು ೧೫೨೮ರಲ್ಲಿ.ಅಲ್ಲಿಂದ ೧೯೩೪ರವರೆಗೂ ವಿವಾದಿತ ಜಾಗವನ್ನು ಮರಳಿ ಪಡೆಯಲಿಕ್ಕೆ ೭೬ ಬಾರಿ ಕದನಗಳಾಗಿವೆ.ಬಾಬರನ ಕಾಲದಿಂದ ಶುರುವಾದ ಈ ಕದನ ಬ್ರಿಟಿಷರ ಕಾಲವನ್ನೂ ದಾಟಿ ಸ್ವತಂತ್ರ ಭಾರತದವರೆಗೂ ಸಾಗಿ ಬಂದಿದೆ.ಇಷ್ಟೂ ಸುಧೀರ್ಘ ಕಾಲದ ಹೋರಾಟವನ್ನು ರಾಜಕೀಯ ಪ್ರೇರಿತ ಎಂಬ ತಿಪ್ಪೆಸಾರಿಸುವ ಹೇಳಿಕೆ ಕೊಡಲಿಕ್ಕೆ ಭಾರತೀಯ ರಾಜಕೀಯ ಪಕ್ಷಗಳು ಆಯಸ್ಸು ಈ ವಿವಾದದ ಮುಂದೇ ತೀರಾ ಎಳಸು.

ವಾಸ್ತವದಲ್ಲಿ,ಈ ದೇಶದ ಮೂಲೆ ಮೂಲೆಗಳಲ್ಲಿರುವ, ಸಾವಿರಾರು ಇತರೆ ಮಸೀದಿಗಳಂತೆ ಬಾಬರಿ ಮಸೀದಿಯೂ ಒಂದಾಗಿತ್ತೇ ಹೊರತು ಅದೇನು ಸಮಸ್ತ ದೇಶದ ಮುಸ್ಲಿಮರ ಪವಿತ್ರ ಕ್ಷೇತ್ರವೇನೂ ಆಗಿರಲಿಲ್ಲ. ಹಿಂದೂಗಳಿಗೆ ಅಯೋಧ್ಯೆ ಸೇರಿದಂತೆ ಈ ದೇಶದಲ್ಲಿರುವ ಪವಿತ್ರ ತೀರ್ಥ ಕ್ಷೇತ್ರಗಳ ಮೇಲೆ ಯಾವ ರೀತಿಯ ಭಕ್ತಿ ಭಾವನೆ ಇದೆಯೋ ಆ ರೀತಿಯ ಭಾವನೆ ಮುಸಲ್ಮಾನರಿಗೆ ಇರುವುದು ಮೆಕ್ಕಾ,ಮದೀನ,ಅಲ್ ಅಕ್ಷಾದ ಮೇಲೆ.ಅವೇ ಅವರ ಪಾಲಿನ ತೀರ್ಥ ಕ್ಷೇತ್ರಗಳು.ಅಸಲಿಗೆ,ಬಾಬರಿ ವಿವಾದ ಮುಸ್ಲಿಮರ ಮಟ್ಟಿಗೆ ಒಂದು ಲೋಕಲ್ ಇಶ್ಯೂ ಆಗಿತ್ತು ಅಷ್ಟೇ.ಹಿಂದೂಗಳ ಮಟ್ಟದಲ್ಲಿ ಆಗಿನ ಕಾಲದಲ್ಲಿ ಅದು ಹೆಚ್ಚೆಂದರೆ ಉತ್ತರ ಭಾರತದ ರಾಜ್ಯಗಳ ಮಟ್ಟಿಗಿತ್ತು.ಬಾಬರನ ಕಾಲದಿಂದಲೂ ಆ ಜಾಗವನ್ನು ವಾಪಸ್ ಪಡೆಯಲು ಸಂಘರ್ಷಗಳಾಗಿದ್ಧವಾದರೂ, ಆಗೆಲ್ಲ ಅವು ‘ನಂಬಿಕೆ’ಯ ಸಂಘರ್ಷಗಳಾಗಿದ್ದವೇ ಹೊರತು ‘ರಾಜಕೀಯ’ ಸ್ವರೂಪವನ್ನು ಪಡೆದುಕೊಂಡಿರಲಿಲ್ಲ. ಘಟನೆಗೆ ನಿಜವಾಗಿಯೂ ರಾಜಕೀಯ ಬಣ್ಣ ಬಳಿದಿದ್ದು ಈ ದೇಶದ ಸೆಕ್ಯುಲರ್ ರಾಜಕಾರಣ.

ಸೆಕ್ಯುಲರ್ ಓಲೈಕೆಯು ಪರಾಕಾಷ್ಟೆ ತಲುಪಿದ್ದು ನೆಹರೂ ಮೊಮ್ಮಗ ರಾಜೀವ್ ಗಾಂಧಿ ಕಾಲದಲ್ಲಿ. ಶಾ ಬಾನು ಪ್ರಕರಣದಲ್ಲಿ,ಮುಸ್ಲಿಂ ಸಮುದಾಯವನ್ನು ಒಲಿಸಿಕೊಳ್ಳಲಿಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು,ಸುಪ್ರೀಂ ಕೋರ್ಟ್ ತೀರ್ಪೇ ಜಾರಿಯಾಗದಂತೆ ನೋಡಿಕೊಂಡ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯ ವಿರುದ್ಧ ಸಹಜವಾಗಿಯೇ ಹಿಂದೂ ಸಮುದಾಯ ದನಿಯೆತ್ತಿತು.ಕಡೆಗೆ ಹಿಂದೂಗಳನ್ನು ಸಮಾಧಾನಪಡಿಸಲಿಕ್ಕಾಗಿ ಅಯೋಧ್ಯೆಯ ರಾಮ ಮಂದಿರದ ಬಾಗಿಲು ತೆಗೆಸಿದ ರಾಜೀವ್ ಗಾಂಧಿ ಮುಂದೆ ನಡೆದ ಎಲ್ಲಾ ಘಟನೆಗಳಿಗೆ ಮುನ್ನುಡಿ ಬರೆದಿದ್ದರು.

ಅದಾದ ನಂತರವಾದರೂ,ಸಮಸ್ಯೆಯನ್ನು ಪರಿಹರಿಸುವುದನ್ನು ಬಿಟ್ಟ ಸೆಕ್ಯುಲರ್ ರಾಜಕೀಯ ಪಕ್ಷಗಳು,ಸೆಕ್ಯುಲರ್ ಇತಿಹಾಸಕಾರರನ್ನು ಮುಂದೆ ಬಿಟ್ಟುಕೊಂಡು ಪೊಳ್ಳು ಇತಿಹಾಸಗಳ ಮೂಲಕ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟನ್ನಾಗಿಸಿ,ಈ ದೇಶದ ಮೇಲೆ ಶಾಶ್ವತ ಗಾಯವಾಗಿ ಈ ವಿವಾದ ಉಳಿಯಬೇಕು ಎನ್ನುವ ಹುನ್ನಾರ ನಡೆಸಿದ್ದರು. ಮಾರ್ಕ್ಸಿಸ್ಟ್ ಇತಿಹಾಸಕಾರರ, ಹಿಂದೂ ದ್ವೇಷಿ  ಮುಖವಾಡವನ್ನು ಕಳಚುವಲ್ಲಿ ಪ್ರಮುಖ ಪಾತ್ರವಹಿಸಿದವರು,ಖುದ್ದು ಮುಸಲ್ಮಾನರೇ ಆದ ಕೆ,ಕೆ ಮೊಹಮ್ಮದ್. ಭಾರತೀಯ ಪುರಾತತ್ವ ಇಲಾಖೆಯ ಉತ್ತರ ಪ್ರಾಂತ್ಯದ ನಿರ್ದೇಶಕರಾಗಿ ನಿವೃತ್ತರಾದ ಮೊಹಮ್ಮದ್ ಅವರು ವಿವಾದಿತ ಜಾಗದಲ್ಲಿ, ನ್ಯಾಯಾಲಯದ ಆದೇಶದಂತೆ ನಡೆಸಲಾದ ಉತ್ಖನನದಲ್ಲಿ ಹಾಗೂ ಅಂತಿಮ ವರದಿ ತಯಾರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದವರು.’ನಾನೆಂಬ ಭಾರತೀಯ’ ಎಂದು ಮಲಯಾಳಂನಲ್ಲಿ ಬರೆದ ಪುಸ್ತಕದಲ್ಲಿ (ಕನ್ನಡ ಅನುವಾದ : ಬಿ.ನರಸಿಂಗರಾವ್)   ವಿವಾದದ ಸೌಹಾರ್ದಯುತ ಪರಿಹಾರಕ್ಕೆ ನಿಜವಾಗಿ ಅಡ್ಡಿಯಾದವರು ಮೂಲಭೂತವಾದಿಗಳ ಜೊತೆಗೆ ನಿಂತ,ಮಾರ್ಕ್ಸಿಸ್ಟ್ ಇತಿಹಾಸಕಾರರು ಎನ್ನುವುದನ್ನು ಮೊಹಮ್ಮದ್ ಅವರು ವಿವರಿಸುತ್ತಾರೆ. ಅಷ್ಟೂ ಮಾತ್ರವಲ್ಲದೇ,ಆ ವಿವಾದಿತ ಭೂಮಿ ನ್ಯಾಯಯುತವಾಗಿ ಹಿಂದೂಗಳಿಗೇ ಸೇರಿದ್ದು ಎಂದು ಪ್ರಮುಖವಾಗಿ ಪ್ರತಿಪಾದಿಸಿದವರು ಮೊಹಮ್ಮದ್. ಇವತ್ತಿಗೂ ಈ ತೀರ್ಪಿನ ಬಗ್ಗೆ ದೇಶದ ಸಾಮಾನ್ಯ ಮುಸಲ್ಮಾನನಿಗೆ ಏನೂ ತಗಾದೆಯಿರುವುದಿಲ್ಲ.ಆದರೆ ಮಾರ್ಕ್ಸಿಸ್ಟ್ ಇತಿಹಾಸಕಾರರಿಗೆ ಮತ್ತು ಸೆಕ್ಯುಲರ್ ಗಳೆಂದು ಕರೆದುಕೊಳ್ಳುವವರು ಮಾತ್ರ,ಈ  ಅಂತಿಮ ತೀರ್ಪಿನ  ನಂತರವೂ ಗಾಯವನ್ನು ಕೆದಕಲು ಏನೇನು ಮಾಡಬಹುದು ಅದೆಲ್ಲವನ್ನೂ ಪ್ರಯತ್ನಿಸುವುದು ಖಂಡಿತ.

ಈಗಲಾದರೂ,ಈ ದೇಶದಮುಸಲ್ಮಾನರು,ಕಿಡಿಹೊತ್ತಿಸುವ ಮಾರ್ಕ್ಸಿಸ್ಟ್ ಮಾರೀಚರು,ಸೆಕ್ಯುಲರ್ ರಾವಣರಂತ ರಾಜಕೀಯ ಪಕ್ಷಗಳನ್ನು ಬದಿಗಿಟ್ಟು ಸುಪ್ರೀಂ ಕೋರ್ಟಿನ ತೀರ್ಪನ್ನು ಗೌರವಿಸಬೇಕಾಗಿದೆ. ನೆನಪಿರಲಿ,ಭಾರತೀಯರ ಪಾಲಿಗೆ “ರಾಮ” ಕೇವಲ ಒಬ್ಬ ಕಥಾ ಪುರುಷನಲ್ಲ.ಅವನು ಈ ದೇಶದ ಸಾಮಾನ್ಯ ಜನರ ಉಸಿರಿನ ಭಾಗ,ಅಂತವನ ಮಂದಿರವಿದ್ದ ಜಾಗವನ್ನು,ಈ ತೀರ್ಪಿನ ನಂತರವಾದರೂ,ಮುಸ್ಲಿಂರೇ ಮುಂದೇ ನಿಂತು ಕಟ್ಟಿಸಬೇಕು. ಹಾಗೆ ಮಾಡುವುದರಿಂದ ಈ ದೇಶದ ಕೋಮು-ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದಂತೆಯೂ ಆಗುತ್ತದೆ,ಹಾಗೆಯೇ ವೋಟ್ ಬ್ಯಾಂಕ್ ನೆಪದಲ್ಲಿ ಹಿಂದೂ-ಮುಸ್ಲಿಮರ ನಡುವೆ ಶಾಶ್ವತ ಗೋಡೆ ಕಟ್ಟಿ ನಿಲ್ಲಸಲು ಯತ್ನಿಸುತ್ತಿರುವ ಸೆಕ್ಯುಲರ್ ರಾಜಕೀಯದಾಟಗಳಿಗೂ, ಮಾರ್ಕ್ಸಿಸ್ಟ್ ಇತಿಹಾಸಕಾರ,ಸೆಕ್ಯುಲರ್ ದುರ್ಬುದ್ಧಿ ಜೀವಿಗಳ ಅನಾಚಾರಗಳಿಗೂ ಕೊನೆ ಬೀಳುತ್ತದೆ.ಅಂತದ್ದೊಂದು ಪ್ರಯತ್ನಕ್ಕೆ ಎರಡೂ ಸಮುದಾಯದ ಮುಖಂಡರು, ಜನಸಾಮಾನ್ಯರು  ಯತ್ನಿಸುವಂತಾಗಬೇಕು.

ಇಡೀ ದೇಶವೇ ಅಯೋಧ್ಯ ವಿವಾದದ ಬಿಸಿಯಲ್ಲಿದ್ದಾಗ,ಕರ್ನಾಟಕದ ಮೂಲೆಯ ಹಿಂದೂಗಳೇ ಹೆಚ್ಚಿರುವ ಊರಿನಲ್ಲಿ,ಕೂಲಿ ಮಾಡಿ ಜೀವನ ಸಾಗಿಸುವ ಮುಸ್ಲಿಂ ಬಾಂಧವರಿಗೊಸ್ಕರ ಖುದ್ದು ನಿಂತು ಮಸೀದಿ ಕಟ್ಟಿಸಿಕೊಟ್ಟ ಹಿಂದೂಗಳಿರುವ ಮತ್ತು ಕಾಶ್ಮೀರದ ಅಗ್ನಿ ಕುಂಡದೊಳಗೆ,ನಿಷೇಧಾಜ್ಞೆಯ ಸಮಯದಲ್ಲೂ, ಉಗ್ರರಿಗೆ ಅಂಜದೆ ಪಕ್ಕದ ಮನೆಯ ಕಾಶ್ಮೀರಿ ಪಂಡಿತರ ಅಂತ್ಯ ಸಂಸ್ಕಾರವನ್ನು ಹಿಂದೂ ಧರ್ಮದ ಶೈಲಿಯಲ್ಲಿ ಮಾಡಿದ್ದ ಮುಸ್ಲಿಂ ಹೃದಯಗಳೂ ಈ ದೇಶದಲ್ಲಿವೆ.ಅಷ್ಟಕ್ಕೂ ಈ ಸೆಕ್ಯುಲರಿಸಂನ ತುಷ್ಟೀಕರಣದ ಭೂತ ಬರುವ ಮೊದಲಿಗೆ ಸಹಸ್ರ ವರ್ಷಗಳ ಕಾಲ ಈ ದೇಶದಲ್ಲಿ ಹಿಂದೂ ಸಂಪ್ರದಾಯ ಮತ್ತು ಇಸ್ಲಾಂ ರಿಲಿಜನ್ನು ಒಟ್ಟಿಗೆ ಬದುಕತ್ತಲಿರಲ್ಲವೇ? ಈ ತೀರ್ಪು ಒಂದರ್ಥದಲ್ಲಿ ಮಾರ್ಕಿಸ್ಟ್ ಇತಿಹಾಸಕಾರರ ಪೊಳ್ಳು ಇತಿಹಾಸಕ್ಕೂ ಸಮಾಧಿ ಕಟ್ಟಿದೆ.ಈ ಸತ್ಯವನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕಿದೆ.

ಈಗಲಾದರೂ,ಇತಿಹಾಸದಲ್ಲಿ ಆಗಿರುವ ತಪ್ಪನ್ನು ತಾವಾಗಿಯೇ ಮುಂದೆ ನಿಂತು ಸರಿಪಡಿಸುವ ಬಗ್ಗೆ ಮುಸ್ಲಿಂ ಸಮುದಾಯ ಯೋಚಿಸಬೇಕಿದೆ.ಇಲ್ಲವಾದರೆ ಮತ್ತಿವೆ ಸೆಕ್ಯುಲರ್ ಮಾರೀಚರು ಉರಿವ ಮನೆಯಲ್ಲಿ ಗಳ ಹಿರಿಯಲು ಹಿಂಜರಿಯುವುದಿಲ್ಲ. ಭೂತಕಾಲದಲ್ಲಾದ ತಪ್ಪುಗಳನ್ನೇ ಹಳಿಯುತ್ತ ಕೂರುವ ಬದಲು ವರ್ತಮಾನದಲ್ಲಿ ಆ ತಪ್ಪನ್ನು ಸರಿಪಡಿಸುವ ಮೂಲಕ ಭವಿಷ್ಯದ ಜನಾಂಗಕ್ಕಾದರೂ ಇಂತಹ ವಿವಾದಗಳ ಭಾರವನ್ನು ಹೊರಿಸದಿರುವುದು ಜಾಣತನವಲ್ಲವೇ? ಭಾರತವೀಗ ವಿಶ್ವಗುರುವಾಗುತ್ತ ದಾಪುಗಾಲಿಟ್ಟಿದೆ. ಭಾರತವೆಂದರೇ, ಈ ದೇಶದ ಅಷ್ಟೂ ಸಂಪ್ರದಾಯ,ಸಮುದಾಯ,ಮತಗಳು,ರಿಲಿಜನ್ನುಗಳಿಂದ ರೂಪಿತವಾಗಿರುವಂತವು.ಎಲ್ಲರೂ ಒಗ್ಗೂಡಿ, ವಿದೇಶಿ ಮಾರ್ಕ್ಸಿಸ್ಟ್ ಮಾರೀಚರನ್ನು,ಸೆಕ್ಯುಲರ್ ರಾವಣರನ್ನು ಹೊರಗಿಟ್ಟು ಅಯೋಧ್ಯೆಗೆ ಮರ್ಯಾದ ಪುರುಷೋತ್ತಮ ಶ್ರೀರಾಮನ ಪುನಾರಗಮನವನ್ನು ಸ್ವಾಗತಿಸಲು ನಿಂತಾಗ ಮಾತ್ರ ಆ ಕನಸು ನನಸಾಗಲು ಸಾಧ್ಯ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments