ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 1, 2020

ಭಾರತವನ್ನು ಅರಿಯಲು ಶ್ರೀ ಅರವಿಂದರೆನ್ನುವ ಕೀಲಿ ಕೈ

‍ನಿಲುಮೆ ಮೂಲಕ

– ಡಾ. ರೋಹಿಣಾಕ್ಷ ಶಿರ್ಲಾಲು
ಕರ್ನಾಟಕ ಕೆಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ  ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು ತಿಳಿಯುವುದಾದರೂ ಹೇಗೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದೊಳಗೇ ಇರುವ ಒಂದು ಸಣ್ಣ ಗುಂಪು ಇಲ್ಲಿನ ಭೌತಿಕ – ಲೌಖಿಕ ಅನುಕೂಲತೆಗಳೆಲ್ಲವನ್ನು ಪಡೆದುಕೊಂಡೂ ಬೇರೊಂದು ದೇಶಕ್ಕೆ ಜಯಕಾರವನ್ನು ಹಾಕುವ, ತನ್ನ ದೇಶವನ್ನೆ ಭಂಜಿಸುವ, ತುಂಡರಿಸುವ ಕಾರ್ಯೋದ್ದೇಶವನ್ನೇ ಬಹಿರಂಗವಾಗಿ ಸಾರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಹಾಗಾದರೆ ಈ ಬಗೆಯ ಪ್ರವೃತ್ತಿಗೆ ಮೂಲ ಕಾರಣವಾದರೂ ಏನು ಎಂದು ಯೋಚಿಸಿದರೆ ಈ ವಿಕೃತಿ ಮೆರೆವ ಮನಸುಗಳಿಗೆ ಭಾರತ ಅರ್ಥವಾಗಿಲ್ಲ ಎನ್ನುವುದು ಸ್ಪಷ್ಟ. ಅಥವಾ ಭಾರತವನ್ನು ಭಾರತೀಯ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎನ್ನಬೇಕು. ಹಾಗೆಂದು ಈ ದೇಶವನ್ನು ಅರ್ಥೈಸಿಕೊಳ್ಳಲು ಮಾಡಿದ ಪ್ರಯತ್ನಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಅಂತಹ ಹಲವು ಪ್ರಯತ್ನಗಳ ಪರಿಣಾಮವಾಗಿಯೇ ಭಾರತ ಉಳಿದಿದೆ. ಇಂದಿನ ತಲೆಮಾರಿಗೆ ಭಾರತವನ್ನು ಅದರ ಮೂಲ ಸ್ವರೂಪದಲ್ಲೇ ಗ್ರಹಿಸಲು ಇರುವ ಜ್ಞಾನದ ಆಕರಗಳನ್ನು ಶೋಧಿಸಲು ಹೊರಟರೆ ಕಣ್ಮುಂದೆ ಕಾಣಿಸಿಕೊಳ್ಳುವ ಜ್ಞಾನನಿಧಿ ಸ್ವರೂಪದ ಶಿಖರಗಳಲ್ಲಿ ಶ್ರೀ ಅರಬಿಂದೋ ಅವರ ವಿಚಾರಧಾರೆಯೂ ಒಂದು.

ಒಂದು ಶತಮಾನದ ಹಿಂದೆ ಅಂದರೆ 1920ರಲ್ಲಿ ಪ್ರಕಟವಾದ ಶ್ರೀ ಅರಬಿಂದೋ ಅವರ ಒಂದು ಕಿರು ಗ್ರಂಥ ‘The Renaissance in India’ ಇಂದಿಗೂ ದೃಷ್ಟಿ ಕಳೆದುಕೊಂಡ ಭಾರತೀಯರಿಗೆ ಭಾರತವನ್ನು ಕಾಣಿಸುವ ಜ್ಞಾನದ ಕನ್ನಡಕದಂತಿದೆ. ಈ ಕೃತಿ ಮೂಲತಃ ನಾಲ್ಕು ಪ್ರಬಂಧಗಳ ಸಂಕಲನ. 1920ರಲ್ಲಿ ಪರಿಷ್ಕೃತಗೊಂಡು ಗ್ರಂಥ ರೂಪದಲ್ಲಿ ಪ್ರಕಟವಾಗುವ ಪೂರ್ವದಲ್ಲಿ 1918ರಲ್ಲಿ ‘ಆರ್ಯ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಿ. ಜೇಮ್ಸ್ ಕಝಿನ್ಸ್ ಎಂಬ ವಿದ್ವಾಂಸರು ಬರೆದ ಭಾರತದ ನವೋತ್ಥಾನ ಎನ್ನುವ ವಿಚಾರಪೂರ್ಣ ಗ್ರಂಥದ ಹಿನ್ನೆಲೆಯಲ್ಲಿ ಈ ಪ್ರಬಂಧ ಸರಣಿ ಹುಟ್ಟಿಕೊಂಡು, ಈ ಸರಣಿ ಬೆಳೆದು ಶ್ರೀ ಅರವಿಂದ ವಿಚಾರಧಾರೆಯು ತುಂಬಿ ಹರಿಯಿತು.

ಭಾರತೀಯ ನವಜನ್ಮದ ಲಕ್ಷಣಗಳನ್ನು ವಿಚಾರಪೂರ್ಣವಾಗಿ ಮಂಡಿಸುತ್ತದೆ. ಪಶ್ಚಿಮವನ್ನು ಎದುರಾಗಿರಿಸಿಕೊಂಡು ಭಾರತೀಯ ಸಮಾಜ, ಸಂಸ್ಕೃತಿ, ಲೋಕದೃಷ್ಟಿ ಹೇಗೆ ಭಿನ್ನವೂ, ವಿಶಿಷ್ಟವೂ ಆಗಿದೆ ಎನ್ನುವುದನ್ನು ತೋರಿಸಿ ಕೊಡುತ್ತಾರೆ. ಪಶ್ಚಿಮದ ಪ್ರಭಾವದಿಂದ ಭಾರತದ ಚಿತ್ರಣ ಮಸುಕಾಗುತ್ತಿದ್ದ ಕಾಲಕ್ಕೆ ಭಾರತ ಎನ್ನುವ ಲೋಕವಿಶಿಷ್ಟ ರತ್ನಕ್ಕೆ ಆವರಿಸಿದ್ದ ಕೊಳೆ ತೊಳೆದು ಅದರ ಹೊಳಪನ್ನು ಮತ್ತೆ ತೋರಿಸಿಕೊಟ್ಟ ಕೀರ್ತಿ ಶ್ರೀ ಅರವಿಂದರ ಈ ಪ್ರಬಂಧ ಮಾಲೆಗಿದೆ. ನವಜನ್ಮವನ್ನು ಪಡೆಯುತ್ತಿರುವ ಭಾರತದಲ್ಲಿ ಲೋಕಹಿತ – ಮನುಕುಲದ ಹಿತ ಅಡಗಿರುವುದನ್ನು ಗುರುತಿಸುತ್ತಾರೆ. “ The beginning of this process of original creation in every sphere of her national activity will be the sign of the integral self – finding of her renaissance” ಎನ್ನುತ್ತಾರೆ.

ಭಾರತದ ನವಜನ್ಮವು ಪಶ್ಚಿಮ ದೇಶಗಳಲ್ಲಿ ನಡೆದ ನವಜನ್ಮದ ಚಳವಳಿಗಳಿಗಿಂತ ಭಿನ್ನ ಎನ್ನುವುದನ್ನು ಗುರುತಿಸುತ್ತಲೇ, ಭಾರತ ತನ್ನ ಮೇಲೆ ಹೇರಿದ ಪರಕೀಯತೆಯ ಭಾರದ ನಡುವೆಯೂ ತನ್ನ ಜೀವಸತ್ವವನ್ನು ಉಳಿಸಿಕೊಂಡಿರುವುದನ್ನು, ಸ್ವತ್ವದ ಸತ್ವವನ್ನು ಕಳೆದುಕೊಳ್ಳದೆ ಬದುಕುಳಿದುದನ್ನು ಗುರುತಿಸುತ್ತಲೇ, ಒಂದು ವೇಳೆ ಇಂತಹುದೇ ಭಾರದ ಕೆಳಗೆ ಜಗತ್ತಿನ ಬೇರೆ ಯಾವುದಾದರು ದೇಶ ಸಿಲುಕಿಕೊಂಡಿದ್ದರೆ ಅಂತಹ ದೇಶಗಳ ಅಸ್ತಿತ್ವವೇ ಕರಗಿ ಹೋಗಿರುತ್ತಿತ್ತು ಎನ್ನುತ್ತಾರೆ. ಹಾಗಾದರೆ ಭಾರತವನ್ನು ಉಳಿಸಿದ ಶಕ್ತಿ ಯಾವುದು? “Spirituality is indeed the master-key of the Indian mind” ಎನ್ನುತ್ತಾರೆ. ತನ್ನ ಅಂತರ್ದೃಷ್ಟಿಯನ್ನು ಕುರುಡಾಗಿಸದ ಪರಿಣಾಮವೇ ಭಾರತ ಲೋಕಬದುಕಿನ ಎಚ್ಚರವನ್ನು ಕಳೆದುಕೊಳ್ಳಲಿಲ್ಲ. ಭಾರತದ ಪಾರಮಾರ್ಥಿಕತೆ ನೆಲದ ಆಧಾರವಿಲ್ಲದ ಮೋಡದೊಳಗಿನ ಗಿರಿಶಿಖರವಲ್ಲ, ಕನಿಷ್ಟ ಮೂರು ಸಾವಿರ ವರ್ಷಗಳಿಗೂ ಹೆಚ್ಚುಕಾಲ ಅವಿಶ್ರಾಂತವಾಗಿ ನಡೆಸಿದ ಸೃಷ್ಟಿಕಾರ್ಯದ ಫಲವೇ ಇಲ್ಲಿನ ಸಾಮ್ರಾಜ್ಯಗಳು, ವಿಜ್ಞಾನ – ಶಾಸ್ತçಗಳು, ಕಲೆ – ಕಾವ್ಯಗಳು, ಮಂದಿರ – ದೇವಾಲಯಗಳು, ಯೋಗ – ಮನೋವಿಜ್ಞಾನ, ರಾಜನೀತಿ- ಅರ್ಥಶಾಸ್ತçಗಳ ಬೆಳವಣಿಗೆ . ಇಷ್ಟಕ್ಕೆ ಭಾರತ ದಣಿಯಲಿಲ್ಲ, ವಿಶ್ವಕ್ಕೆಲ್ಲಾ ತನ್ನ ಜ್ಞಾನವನ್ನು ಹಂಚಿತು. “ India has been preeminently the land of the Dharma and the Shastra” ಎನ್ನುತ್ತಾರೆ. ಭಾರತದ ಬೌದ್ಧಿಕ ಪ್ರವೃತ್ತಿಗೆ ಸರಸಾಟಿಯೇ ಇಲ್ಲ. ಅತ್ಯುನ್ನತ ವಾಙ್ಮಯ ಸೃಷ್ಟಿ, ಅರವತ್ತನಾಲ್ಕು ಕಲೆಗಳ ಸಹಿತ ಬೆಳೆದ ಜ್ಞಾನ ಸೃಷ್ಟಿಯೇ ಇಲ್ಲಿನ ನಿರ್ಮಾಣ ಶಕ್ತಿಗೆ ಅತ್ಯುನ್ನತ ನಿದರ್ಶನ ಎಂದು ತೋರಿಸಿಕೊಡುತ್ತಾರೆ.

ಭಾರತೀಯ ಚಿತ್ತದ ವೈಶಿಷ್ಟ್ಯವನ್ನು ಗುರುತಿಸುತ್ತಾ, ಭಾರತದ ಪಾರಮಾರ್ಥಿಕತೆಯು ಅಭಾವದಲ್ಲಿ ರೂಪುಗೊಂಡುದುದಲ್ಲ. ಪಾರಮಾರ್ಥಿಕ, ಬೌದ್ಧಿಕ, ನೈತಿಕ, ಪ್ರಾಪಂಚಿಕ ಸರಣಿಯ ತುಟ್ಟತುದಿಗೆ ಹೋಗಿಯೂ,ಆಳದ ನೆಲದ ನೆಲೆ ಮುಟ್ಟಿ ನೋಡಿಯೂ ಬರಬೇಕೆಂಬ ಪ್ರಚೋದನೆಯೂ ನಮ್ಮ ಚಿತ್ತದ ನೆಲೆ ಎನ್ನುತ್ತಾರೆ. ಯಾವುದು ಭಾರತದ ನಿಜ ಚಿತ್ರಣ? ಎಂದು ಹುಡುಕುವುದಾದರೆ “ For the Indian mind is not only spirtitual and ethical, but intellectual and artistic” ಎಂದು ತೋರಿಸುತ್ತಾರೆ. ಅದರ ಒಂದು ತುದಿ ರಾಜವೈಭವವಾದರೆ, ಇನ್ನೊಂದು ತುದಿ ದಿಗಂಬರತೆಯಾಗಿದೆ. ಅದರ ಶ್ರೇಷ್ಟತೆ ನರನಲ್ಲಿ ನಾರಾಯಣನನ್ನು ಕಾಣುವ ಸ್ವರೂಪದಲ್ಲಿ ಪ್ರಕಟವಾಗುತ್ತದೆ.

ಪಾರಮಾರ್ಥಿಕತೆ ಮತ್ತು ಇಂದ್ರಿಯ ಭೋಗಗಳನ್ನು ವಿರೋಧದ ಅತಿರೇಕದಲ್ಲಿ ಲೋಕ ತಾಳತಪ್ಪದಂತೆ ನೋಡಿತು. ಪ್ರತಿ ಅತಿರೇಕದಲ್ಲೊಂದು ಧರ್ಮವನ್ನು, ಅದರ ಪ್ರಯೋಗದಲ್ಲಿ ಒಂದು ನಿಯಮವನ್ನು ಅದು ಹುಡುಕಿಕೊಂಡಿತು. ಪರಕೀಯ ಕೈಗೆ ಸಿಲುಕಿ ಭಾರತ ಅನುಭವಿಸಿದ ಅವನತಿಯು ಒಂದು ನಿದ್ರಾಕಾಲದಂತೆ. ಆದರೆ ನಿಜವಾದ ಭಾರತ ಅದರ ಎಚ್ಚರದ ಕಾಲ. ಭಾರತ ಪಡೆಯುವ ನವಜನ್ಮಕ್ಕೂ ಆಧ್ಯಾತ್ಮವೇ ಶ್ರುತಿಯಾಗಬೇಕು. ಯಾಕೆಂದರೆ ಅದು ಭಾರತದ ತಪಸ್ಸಿನ ಫಲ. ಎಂಥಾ ಅವನತಿಯ ಕಾಲಕ್ಕೂ ಭಾರತ ಕಳೇದುಕೊಳ್ಳದ ಆಸ್ತಿ ಎಂದರೆ ಆಧ್ಯಾತ್ಮವೇ ಎನ್ನುತ್ತಾರೆ. ಇದರ ನೆರಳಿನಲ್ಲೇ ಭಾರತದ ಸಕಲ ಜ್ಞಾನವೂ ಬೆಳಗಿದ್ದು. ಇಂಥ ಶ್ರೀಮಂತ ಸಂಸ್ಕೃತಿ ಒಂದೊಮ್ಮೆ ಕುಂಟಿದೆಯಾದರೂ, ಮತ್ತೆ ಅದು ಬೆಳಗುವ ಜ್ಯೋತಿಯಾಗುತ್ತದೆ ಎನ್ನುವ ಭರವಸೆಯನ್ನು ಮೂಡಿಸುತ್ತಾರೆ.

ಯುರೋಪಿನ ಪ್ರಭಾವಕ್ಕೆ ಸಿಲುಕಿದ ಭಾರತ ಎದುರಿಸಿದ ಗಂಡಾಂತರ ಕಿರಿದಲ್ಲ. ನಿಜವಾದ ಸತ್ವ ಪರೀಕ್ಷೆಯ ಕಾಲವದು. ಒಂದು ವೇಳೆ ಸತ್ವ ಹೀನವಾದುದಾದರೆ ಈ ಹೋರಾಟದಲ್ಲಿ ಉಳಿದು ಬಾಳಲು ಸಾದ್ಯವಾಗುತ್ತಿರಲಿಲ್ಲ. ಚರಿತ್ರೆಯಲ್ಲಿ ಅನೇಕ ನಾಗರಿಕತೆಗಳು, ರಾಷ್ಟ್ರಗಳು ಇಂತಹ ಸಂಕಷ್ಟಕ್ಕೆ ಸಿಲುಕಿ ನಾಶವಾದ ಉದಾಹರಣೆಗಳಿವೆ. ಆದರೆ ಭಾರತದ ಸಂದರ್ಭದಲ್ಲಿ ಅದರ ಸುಪ್ತ ಪ್ರಾಣಶಕ್ತಿ ಮತ್ತೆ ಪ್ರಕಟವಾಯಿತು. “But fortunately the energy of life was there, sleeping only the moment, not dead, and, given that energy, the evil carried within itself its own cure” ಎಂದು ಭಾರತ ಪಾರಾದ ಬಗೆಯನ್ನು ನಿರೂಪಿಸುತ್ತಾರೆ. ಭಾರತ ತನ್ನ ಶಕ್ತಿಯನ್ನು ಮರಳಿ ಪಡೆದು ಮುಂದಡಿಯಿಟ್ಟಿತು. ಪಶ್ಚಿಮವನ್ನು ಕುರುಡಾಗಿ ಅನುಸರಿಸಲು ಹೊರಟವರಿಗೆ ಭಾರತದ ಅತಃಸತ್ವ ಹೇಗೆ ಭಿನ್ನವೆನ್ನುತ್ತಾ , ಅದರ ಅನುಕರಣೆ ತನ್ನ ಬೇರುಗಳಿಂದ ಕಳಚಿಕೊಂಡಂತೆ ಎಂದು ಎಚ್ಚರಿಸುತ್ತಾರೆ. ಅದಕ್ಕಾಗಿ ಭಾರತೀಯ ನವ ಜನ್ಮವೆನ್ನುವುದು “ The beginning of this process of original creation in every sphere of her national activity will be the sign of the integral self – finding of her renaissance” ಎನ್ನುತ್ತಾರೆ.

ಯುರೋಪ್ ತಾನು ವಸಾಹತುಗಳನ್ನು ಸ್ಥಾಪಿಸಿದ್ದಲ್ಲೆಲ್ಲಾ ಅಲ್ಲಿನ ಸಂಸ್ಕೃತಿಯನ್ನು ನಾಶಮಾಡಿದೆ. ವಿಜ್ಞಾನ – ತಂತ್ರಜ್ಞಾನದ ಮೋಹದೊಳಗೆ ಸೆಳೆದು ಸಾಂಸ್ಕೃತಿಕ ಅಸ್ಮಿತೆಯನ್ನು ನಾಶಮಾಡುತ್ತಾ ಬಂದಿದೆ. ಆದರೆ ಅದೇ ಯುರೋಪ್‌ಗೆ ಬೇಡವೆಂದು ಬಿಸಾಕಿದ ಕೊಳೆ ಕಸಗಳನ್ನು ನಾವು ರಸವಾಗಿ ಸ್ವೀಕಾರ ಮಾಡುತ್ತಿರುವ ಪ್ರವೃತ್ತಿಯ ಬಗ್ಗೆ ಶ್ರೀ ಅರವಿಂದರು ಒಂದು ಶತಮಾನದ ಹಿಂದೆಯೇ ಎಚ್ಚರಿಸಿದ್ದರು.ನಮ್ಮ ಸಾಂಸ್ಕೃತಿಕ ಅಸ್ತಿತ್ವಕ್ಕೆ ಧಕ್ಕೆಯಾಗುವಂತೆ ಪಶ್ಚಿಮವನ್ನು ಅನುಕರಣೆ ಮಾಡುವುದು ಅಪಾಯಕಾರಿ. ನಮ್ಮ ಧರ್ಮ, ಸಂಸ್ಕೃತಿ, ಭಾರತೀಯತೆ ಕೇವಲ ಅಲಂಕಾರಿಕ ಅಥವಾ ಪ್ರದರ್ಶನದ ಸರಕುಗಳಲ್ಲ. ಅದು ಬಾಳಿಗೆ ಬೇಕಾದ ಸೂತ್ರ. ಆದರೆ ಭಾರತೀಯತ್ವವನ್ನು ಅಲಂಕಾರಿಕವಾಗಿ ಬಳಸಿ, ಜೀವನ ವ್ಯವಹಾರಕ್ಕೆ ಪಶ್ಚಿಮವನ್ನು ಶ್ರೇಷ್ಟವೆನ್ನುವುದು ಸರಿಯಲ್ಲ ಎನ್ನುತ್ತಾರೆ. ನಮ್ಮಲ್ಲಿ ಉಂಟಾಗಬೇಕಾದ ಬದಲಾವಣೆ ಪಶ್ಚಿಮದ ಪಡಿಯಚ್ಚು ಆಗಬೇಕಾಗಿಲ್ಲ. ನಮ್ಮದೇ ಸಾಂಸ್ಕೃತಿಕ ಎರಕದಲ್ಲಿ ಅದು ರೂಪುಗೊಳ್ಳಬೇಕು. ಆಗ ಮಾತ್ರ ನಿಜವಾದ ಭಾರತ ಕಾಣಿಸಿಕೊಳ್ಳುತ್ತದೆ.

ಸಾವಿರಾರು ವರ್ಷಗಳ ಅವಿಚ್ಛಿನ್ನ ಸಾಂಸ್ಕೃತಿಕ ಪರಂಪರೆ ಇದ್ದರೂ ದೇಶ ಅನ್ಯರ ವಶವಾಯಿತು. ತನ್ನತನವನ್ನು ಮರೆತಿತು. ಪರಿಣಾಮ ಗುಲಾಮಿತನವೂ ಅವಮಾನವಾಗಿ ಬಾಧಿಸಲಿಲ್ಲ. ಇಂತಹ ಸನ್ನಿವೇಶದಲ್ಲಿ ಭಾರತವನ್ನು ಎಚ್ಚರಿಸುವ, ಅದರ ನಿಜ ಸ್ವರೂಪವನ್ನು ಪರಿಚಯಿಸಿ ಕೊಡುವಂಥ ಕೆಲಸವನ್ನು ಶ್ರೀ ಅರವಿಂದರು ಮಾಡುತ್ತಾರೆ. ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಕಂಡುಕೊಳ್ಳುವುದೇ ಭಾರತಕ್ಕೆ ತನ್ನನ್ನು ತಾನು ಕಂಡುಕೊಳ್ಳಲು ಇರುವ ದಾರಿ ಎನ್ನುವುದನ್ನು ಒಂದು ಶತಮಾನದ ಹಿಂದೆಯೆ ಎಚ್ಚರಿಸಿದ್ದರು. ದುರಂತವೆAದರೆ ಇಂದಿಗೂ ಭಾರತಕ್ಕಿರುವ ನಿಜವಾದ ಸಮಸ್ಯೆ ಎಂದರೆ ತನ್ನನ್ನು ತಾನು ಯಾವ ಸ್ವರೂಪದಲ್ಲಿ ಗುರುತಿಸಿಕೊಳ್ಳಬೇಕೆನ್ನುವುದೇ ಆಗಿದೆ. ಸ್ವಾತಂತ್ರ್ಯಾ ನಂತರವೂ ನಮ್ಮ ದೇಶದ ಮೂಲಭೂತ ಸಂಗತಿಗಳಲ್ಲಿ ನಾವು ನಮ್ಮತನದ ಹುಡುಕಾಟಕ್ಕೆ ಇಳಿಯದ ಪರಿಣಾಮ ಬುದ್ಧಿ – ಮನಸುಗಳಿಂದ, ಕನಸು – ಅಭಿಲಾಷೆಗಳಿಂದ ಬ್ರಿಟಿಷರಾಗಿ, ಚರ್ಮದ ಬಣ್ಣದಿಂದ ಮಾತ್ರ ಭಾರತೀಯರಾಗಿರುವ ಮೆಕಾಲೇ ಪ್ರಣೀತ ಅಸ್ತಿತ್ವದಲ್ಲೆ ಸಂಭ್ರಮಿಸುತ್ತಿದ್ದೇವೆ. ಹೀಗಾಗಿ ದೇಶವೆಂದರೆ ಮಣ್ಣಿನ ತುಂಡಾಗಿ, ಸಂದರ್ಭ ಬಂದರೆ ಅದನ್ನು ತುಂಡರಿಸುವ, ಇಲ್ಲಿ ಹುಟ್ಟಿರುವುದಕ್ಕಾಗಿ ಪರಿತಪಿಸುತ್ತಾ ಮುಂದಿನ ಜನ್ಮವಾದರೂ ಯುರೋಪಿನಲ್ಲಾಗಲೀ ಎಂದು ಮನಸಿನಲ್ಲೆ ಅರ್ಜಿ ಸಲ್ಲಿಸುತ್ತಾ ಬದುಕುತ್ತಿರುವ, ಮಾನಸಿಕವಾಗಿ ಭಾರತೀಯರಾಗಿ ಉಳಿಯದ ಜನರ ನಡುವೆ ಶ್ರೀ ಅರವಿಂದರ ಭಾರತ ದರ್ಶನದ ದಾರಿಯೊಂದಿದೆ ಎನ್ನುವುದನ್ನು ನೆನಪಿಸಿಕೊಳ್ಳಬೇಕಾಗಿದೆ. ನೈಜ ಭಾರತವನ್ನು ಅರಿಯುವ ಅಕ್ಷಯ ಭಂಡಾರ ಎನ್ನಬಹುದು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments