ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 19, 2020

ಯುಎಇ ನಿಜಕ್ಕೂ ಅಷ್ಟೊಂದು ಅಸಹಿಷ್ಣು ದೇಶವೇ?

‍ನಿಲುಮೆ ಮೂಲಕ

– ರಾಘವೇಂದ್ರ ಎಮ್‌ ಸುಬ್ರಹ್ಮಣ್ಯ

Arab_Gulf_States_englishಕಳೆದೆರಡು ವಾರದಿಂದ ಗಲ್ಫ್ ದೇಶಗಳಲ್ಲಿರುವ ಹಿಂದೂಗಳ ಕೆಲಸಕ್ಕೆ ಕುತ್ತು ತರುವ ವ್ಯವಸ್ಥಿತ ಸಂಚುಗಳು ನಡೆದಿವೆ. ದೆಹಲಿಯ ತಬ್ಲೀಗೀ ಜಮಾತ್’ನವರ ವರ್ತನೆಯನ್ನು ಖಂಡಿಸಿ ಏನನ್ನಾದರೂ ಬರೆದರೆ ಅದೇ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ, ಪೋಲಿಸರಿಗೆ ದೂರು ನೀಡುವ ಕೆಲಸ ನಡೆದಿದೆ. ಹಾಗಾದರೆ ಯುಎಇಯಲ್ಲಿ ಅಷ್ಟೆಲ್ಲಾ ಸುಲಭಕ್ಕೆ ಯಾರನ್ನಾದರೂ ಅರೆಸ್ಟ್ ಮಾಡಿಸಬಹುದೇ? ಇಸ್ಲಾಂ ಬಗ್ಗೆ ಏನೂ ಕೆಟ್ಟದಾಗಿ ಬರೆಯದೇ, ಭಾರತದ ಕೆಲ ಮುಸ್ಲಿಮರ ತಪ್ಪುಗಳ ಬಗ್ಗೆ ಬರೆದರೆ ಅದು ಶಿಕ್ಷಾರ್ಹ ಅಪರಾಧವೇ?

ಹೆಚ್ಚಿನವರಿಗೆ ಅರಬ್ ರಾಷ್ಟ್ರಗಳೆಂದರೆ ಬಹಳಷ್ಟು ತಪ್ಪು ಅಭಿಪ್ರಾಯಗಳಿವೆ. ತಪ್ಪು ಮಾಡಿದರೆ ಸಾರ್ವಜನಿಕವಾಗಿ ಛಡಿಯೇಟು ಬೀಳುತ್ತದೆ, ಕೈ ಕಾಲು ತಲೆ ಕಡಿಯುತ್ತಾರೆ ಎಂಬೆಲ್ಲಾ ಅನಿಸಿಕೆಗಳಿವೆ. ಆದರೆ ಈ ಎಲ್ಲಾ ಹೆಚ್ಚಿನ ಅಭಿಪ್ರಾಯಗಳು ಬಂದಿರುವುದು ಸೌದಿ ಅರೇಬಿಯಾದಿಂದ. ಯಾಕೆಂದರೆ ಇವೆಲ್ಲಾ ಹೆಚ್ಚಾಗಿ ನಡೆಯುವುದು ಅಲ್ಲಿ ಮಾತ್ರ. ಆದರೆ ಎಲ್ಲಾ ಅರಬ್ ದೇಶಗಳೂ ಹೀಗಿಲ್ಲ. ಇಲ್ಲಿ ಇಸ್ಲಾಂ ನಿಂದನೆಯನ್ನು ಯಾರೂ ಸಹಿಸುವುದಿಲ್ಲವಾದರೂ, ಒಮಾನ್, ಬಹರೈನ್ ಮತ್ತು ಯುಎಇ ದೇಶಗಳು ಸಹಿಷ್ಣುತೆಯಲ್ಲಿ ಹೊಸ ಅಧ್ಯಾಯಗಳನ್ನೇ ಬರೆದಿವೆ.

ಕಳೆದ ವರ್ಷ ಅಂದರೆ 2019ರಲ್ಲಿ ಜಗತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಅಭೂತಪೂರ್ವ ಘಟನೆಯೊಂದು ನಡೆಯಿತು. ಅದೇನೆಂದರೆ ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂಗಳು ಉಗಮವಾದ ನಂತರ ಮೊತ್ತಮೊದಲ ಬಾರಿಗೆ, ಅರೇಬಿಯನ್ ದ್ವೀಪಕಲ್ಪಕ್ಕೆ ಪ್ರಸಕ್ತ‌ ಪೋಪ್ ಒಬ್ಬರು ಮೊದಲ ಬಾರಿಗೆ ಭೇಟಿಕೊಟ್ಟರು. ಈ ಭೇಟಿ ನಡೆದದ್ದು, ಕೊಲ್ಲಿ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸಿನ ರಾಜಧಾನಿಯಾದ ಅಬುಧಾಬಿಯಲ್ಲಿ. ಭೇಟಿ ಕೊಟ್ಟ ಪೋಪ್ ಈಗಿನ ಪೋಪ್ ಫ್ರಾನ್ಸಿಸ್. ಕಳೆದ ಕೆಲ ವರ್ಷಗಳಿಂದ ಪ್ರತೀ ವರ್ಷವನ್ನೂ ಒಂದೊಂದು ವಿಷಯದ ಆಚರಣೆಗಾಗಿ ಮೀಸಲಿಡುತ್ತಿರುವ ಯು.ಎ.ಇ 2019ನ್ನು ‘ಸಹಿಷ್ಣುತೆಯ ವರ್ಷ (Year of Tolerance)’ ಎಂದು ಆಚರಿಸಿತು. ಈ ಸಹಿಷ್ಣುತೆಯ ಆಚರಣೆಯ ಅಂಗವಾಗಿ ಕಳೆದ ವರ್ಷ ಯುಎಇ ಪೋಪ್ ಅವರನ್ನು ಕರೆಸಿತು. ಅಂದಾಜು 180,000 ಜನರಿಗೆ ಪೋಪ್ ಫ್ರಾನ್ಸಿಸ್ ಮಂಗಳವಾರ ಪ್ರಾರ್ಥನಾ ಭಾಷಣ ನೀಡಿದರು. ಝಾಯೆದ್ ‌ಸ್ಪೋರ್ಟ್ ಸಿಟಿ ಯಲ್ಲಿರುವ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಉತ್ಸಾಹ ಮತ್ತು ಅರಬ್ ನೆಲದಲ್ಲಿ ಇಷ್ಟು ದೊಡ್ಡ ಕ್ರಿಶ್ಚಿಯನ್ ಆರಾಧನೆಯ ಮೊದಲ ಪ್ರದರ್ಶನಕ್ಕೆ ಪೋಪ್ ಫ್ರಾನ್ಸಿಸ್‌ ಅವರ ಆಗಮನದ ಸಂಭ್ರಮದಿಂದಾಗಿ ಸುತ್ತಮುತ್ತಲಿನ ನಾಲ್ಕೈದು ಕಿಲೋಮೀಟರ್ ದೂರದವರೆಗೆ ‘ಅಲ್ಲೇಲುಯಾ’ ಘೋಷಣೆಗಳೂ, ‘ಆಮೆನ್’ ಹರ್ಷೋದ್ಘಾರಗಳೂ, ಪ್ರಾರ್ಥನೆಗಳೂ ಅನುರಣಿಸಿದವು. ಪೋಪ್ ಫ್ರಾನ್ಸಿಸ್‌ ಇಟಾಲಿಯನ್ ಭಾಷೆಯಲ್ಲಿ ಮಾಡಿದ ಧರ್ಮೋಪದೇಶದಲ್ಲಿ, ತನ್ನ ಬಹುರಾಷ್ಟ್ರೀಯ ಪ್ರೇಕ್ಷಕರಿಗೆ ಮನೆಯಿಂದ ದೂರದಲ್ಲಿ ಕೆಲಸ ಮಾಡುವ ಕಷ್ಟಗಳ ಬಗ್ಗೆ ಮಾತನಾಡಿದರು. ನೆರೆದಿದ್ದ ವೈವಿಧ್ಯಮಯ ಜನಸಮೂಹವನ್ನು ಗುರುತಿಸಿ ಪ್ರಾರ್ಥನೆಗಳನ್ನು ಫ್ರೆಂಚ್, ಫಿಲಿಪೈನ್ಸ್‌ನ ತಗಲೋಗ್ ಮತ್ತು ಕೊಂಕಣಿಯಲ್ಲೂ ನೀಡಲಾಯಿತು.

ಇದೊಂದೇ ಅಲ್ಲದೇ ಸಹಿಷ್ಣುತಾವರ್ಷದ ಅಂಗವಾಗಿ 2019ರಲ್ಲಿ ಯುಎಇ ಹಲವಾರು ಹೊಸಾ ಕಾರ್ಯಕ್ರಮಗಳನ್ನು ನಡೆಸಿತು. ಕೊಲ್ಲಿರಾಷ್ಟ್ರಗಳಲ್ಲೇ ಅತೀ ದೊಡ್ಡ ಹಿಂದೂದೇವಸ್ಥಾನಕ್ಕೆ ಅನುಮತಿಯೊಂದಿಗೆ 13 ಎಕರೆ ಜಮೀನಿನನ್ನೂ ನೀಡಿತು.. ಮುಂದಿನ ವರ್ಷ ಅಬುಧಾಭಿಯಲ್ಲಿ ತಲೆಯೆತ್ತಲಿರುವ ಸ್ಮಾರಕವೊಂದರಲ್ಲಿ ಚರ್ಚ್, ಮಸೀದಿ ಮತ್ತು ಸಿನಗಾಗ್ (ಯಹೂದಿ ಪ್ರಾರ್ಥನಾ ಸ್ಥಳ) ಮೂರೂ ಒಂದೇ ಕಡೆ ಇರಲಿವೆ. ಇದರೊಂದಿಗೇ ಸರ್ಕಾರ ತನ್ನ ಪಠ್ಯಕ್ರಮದಲ್ಲಿ ಸಹ ಮಕ್ಕಳಿಗೆ ಬಹುಸಂಸ್ಕೃತಿಯ ಅಗತ್ಯತೆಯನ್ನು ಸಾರುವ ಸಂದೇಶಗಳನ್ನು ಸೇರಿಸುವ ನಿರ್ಧಾರ ಮಾಡಿತು. ಸಹಿಷ್ಣುತೆಗೆಂದೇ ಒಂದು ಸಚಿವಾಲಯವನ್ನೂ (Ministry of Tolerance) ತೆರೆಯಿತು. ವಾರ್ಷಿಕ ಎಮಿರಾತಿ-ಫ್ರೆಂಚ್ ಸಾಂಸ್ಕೃತಿಕ ಸಂವಾದ ಮತ್ತು ‘ಯುಎಇ-ಚೀನಾವಾರ’ಗಳನ್ನೂ ಹಮ್ಮಿಕೊಳ್ಳಲಾಯ್ತು. ಹೀಗೆ ಹತ್ತು ಹಲವು ರೀತಿಯಲ್ಲಿ ಸಹಿಷ್ಣುವಾಗಿರುವ ಯುಎಇಗೆ ಕೆಟ್ಟ ಹೆಸರು ತರಲು ಕೆಲ ಕಿಡಿಗೇಡಿಗಳು ಕಳೆದ ಕೆಲ ವಾರದಿಂದ ಪ್ರಯತ್ನಿಸುತ್ತಿದ್ದಾರೆ.

ಯುಎಇಯಲ್ಲಿ ನಿಮಗೆ ಸಿಗುವ ಧಾರ್ಮಿಕ ಆಚರಣೆ ಮತ್ತು ಸ್ವಾತಂತ್ರ್ಯದ ಬಗ್ಗೆ ಮುಖ್ಯವಾದ 5 ವಿಷಯಗಳನ್ನು ತಿಳಿಸಲು ಈ ಲೇಖನ.

(೧) ರಾಷ್ಟ್ರದ ಬಹುಪಾಲು ನಿವಾಸಿಗಳು ಇಲ್ಲಿನ ನಾಗರೀಕತೆ ಪಡೆಯದವರು ಮತ್ತು ವಿವಿಧ ಧರ್ಮಗಳನ್ನು ಆಚರಿಸುವವರು

ಪ್ರಪಂಚದೆಲ್ಲೆಡೆಯಿಂದ ಜನರು ಯುಎಇಗೆ ಬರುತ್ತಾರೆ. ದುಬೈ ಮತ್ತು ಅಬುಧಾಬಿಯ ವಿಸ್ತಾರವಾದ ನಗರಗಳಲ್ಲಿ ಲಭ್ಯವಿರುವ ವ್ಯಾಪಾರ ಮತ್ತು ಕಾರ್ಮಿಕ ಅವಕಾಶಗಳು ಉನ್ನತ ಆಕಾಂಕ್ಷೆಗಳಿರುವವರನ್ನು ತನ್ನೆಡೆಗೆ ಸ್ವಾಭಾವಿಕವಾಗಿಯೇ ಸೆಳೆಯುತ್ತವೆ. ಇದರ ಪರಿಣಾಮವಾಗಿ, ಯುಎಇಯಲ್ಲಿ ವಾಸಿಸುವ ಅಂದಾಜು 9.1 ಮಿಲಿಯನ್ ಜನರಲ್ಲಿ, ಕೇವಲ 11% ಜನರು ಮಾತ್ರ ಇಲ್ಲಿನ ಮೂಲ ನಿವಾಸಿಗಳೂ (ಮತ್ತು ಇಲ್ಲಿನ ನಾಗರಿಕರೂ) ಆಗಿದ್ದಾರೆ. ಇಲ್ಲಿಗೆ ವಲಸಿಗರಾಗಿ ಬಂದವರಿಗೆ ನಾಗರೀಕತೆ ಪಡೆಯುವ ಯಾವುದೇ ಕಾರ್ಯ ವಿಧಾನವಿಲ್ಲ, ಅಂದರೆ ಇಲ್ಲಿನ ಎಲ್ಲಾ ನಾಗರಿಕರು ಕೇವಲ ಇಲ್ಲಿನ ಸ್ಥಳೀಯರಷ್ಟೇ. 2020ರ ಜನಗಣತಿಯ ಪ್ರಕಾರ ಯು.ಎ.ಇಯ ಒಟ್ಟು ನಿವಾಸಿಗಳಲ್ಲಿ 76% ಮುಸ್ಲಿಂ ಮತ್ತು 11% ಕ್ರಿಶ್ಚಿಯನ್ನರು, ಉಳಿದ 13% ಇತರ ಧರ್ಮಗಳಿಂದ ಬಂದವರು – ಮುಖ್ಯವಾಗಿ ಹಿಂದೂಗಳು ಮತ್ತು ಬೌದ್ಧರು ಆದರೆ ಸಿಖ್ಖರು ಮತ್ತು ಯಹೂದಿಗಳು.

(೨) ಇಸ್ಲಾಂಧರ್ಮ ಯುಎಇಯ ಅಧಿಕೃತ ಧರ್ಮವಾಗಿದೆ

ಇಲ್ಲಿನ ಸಂವಿಧಾನವು ಇಸ್ಲಾಂ ಧರ್ಮವನ್ನು ದೇಶದ ಅಧಿಕೃತ ಧರ್ಮವೆಂದು ಪ್ರತಿಪಾದಿಸುತ್ತದೆ ಮತ್ತು ಧರ್ಮ ನಿಂದೆಯ ವಿರುದ್ಧ ಕಾನೂನುಗಳಿವೆ. ಮುಸ್ಲಿಮೇತರರು ಧರ್ಮ ಪ್ರಚಾರ ಅಥವಾ ಮತಾಂತರ ಮಾಡುವಂತಿಲ್ಲ. ಮುಸ್ಲಿಮರು ಸಹಾ ಇಸ್ಲಾಂನಿಂದ ಬೇರೆ ಧರ್ಮಕ್ಕೆ ಮತಾಂತರಗೊಳ್ಳುವಂತಿಲ್ಲ. ಆದರೆ ದೇಶದ ಸಂವಿಧಾನವು ಪ್ರತಿಯೊಬ್ಬ ನಿವಾಸಿಗೂ ಸ್ವೀಕಾರರ್ಹ ವೈಯುಕ್ತಿಕ ಪೂಜಾ ಸ್ವಾತಂತ್ರ್ಯವನ್ನು ನೀಡುತ್ತದೆ. ಸ್ವೀಕಾರಾರ್ಹ ಆರಾಧನಾ ಪ್ರಕಾರಗಳು ಯಾವುವು ಎಂಬುದನ್ನು ಸರ್ಕಾರ ಖಚಿತವಾಗಿ ವ್ಯಾಖ್ಯಾನಿಸಿಲ್ಲವಾದರೂ, ಯಾರೊಬ್ಬರ ಪೂಜಾ ಸ್ವಾತಂತ್ರ್ಯವೂ ಸಹ ದೇಶದ ಸಾರ್ವಜನಿಕ ನೀತಿ ಅಥವಾ ನೈತಿಕತೆಗೆ ವಿರುದ್ಧವಾಗಿರುವಂತಿಲ್ಲ, ಎಂಬುದು ಇಲ್ಲಿನ ಎಲ್ಲರಿಗೂ ಪರಿಚಿತ ವಿಚಾರವೇ. ಕಳೆದ ಹತ್ತು ವರ್ಷಗಳಲ್ಲಿ ನಾನು ಕಂಡಂತೆ “ಇಸ್ಲಾಮೇತರ ನಂಬಿಕೆಗಳಿಗೆ ಸೇರಿದ ವ್ಯಕ್ತಿಗಳು ಸರ್ಕಾರದ ಹಸ್ತಕ್ಷೇಪವಿಲ್ಲದೆ ಖಾಸಗಿಯಾಗಿ ಪೂಜಿಸಬಹುದು. ಸಾರ್ವಜನಿಕವಾಗಿ ತಮ್ಮ ಧರ್ಮವನ್ನು ಆಚರಿಸಲು ನಿರ್ಬಂಧಗಳಿವೆ. ಆದರೆ ಗಣಪತಿ ಇವತ್ತೂ ದುಬೈನ ಕ್ರೀಕಿನಲ್ಲಿ ವಿಸರ್ಜಿತನಾಗುತ್ತಾನೆ. ದೀಪಾವಳಿಯಂದು ಜನರೆಲ್ಲಾ ಒಂದೇ ಕಡೆ ಸೇರಿ ಪಟಾಕಿ ಹೊಡೆಯುತ್ತಾರೆ. ಹೆಚ್ಚಿನ ಕಂಪನಿಗಳಲ್ಲಿ ದೀಪಾವಳಿಯ ದಿನದ ರಂಗೋಲಿಗಳು, ಓಣಂ ಊಟ, ಕ್ರಿಸ್ಮಸ್ ವೈಭವೋಪೇತವಾಗಿ ಆಚರಿಸಲ್ಪಡುತ್ತವೆ”.

(೩) ಕ್ರಿಶ್ಚಿಯನ್ ಚರ್ಚುಗಳು, ಹಿಂದೂ ದೇವಾಲಯಗಳು, ಸಿಖ್ ದೇವಾಲಯಗಳು ಮತ್ತು ಯಹೂದಿ ಪೂಜೆಗಳಿಗೆ ಸ್ಥಳಗಳಿವೆ

ಯುಎಇಯಲ್ಲಿ ಪೌರತ್ವಕ್ಕೆ ಯಾವುದೇ ಮಾರ್ಗವಿಲ್ಲದ ಕಾರಣ, ಧಾರ್ಮಿಕ ಅಲ್ಪಸಂಖ್ಯಾತರು ಭೂಮಿಯ ಒಡೆತನವನ್ನು ಹೊಂದಲು ಅವಕಾಶವಿಲ್ಲ. ದೇವಸ್ಥಾನಗಳನ್ನು ನಿರ್ಮಿಸುವುದು ಕಷ್ಟಕರವಾದರೂ, ಅಸಾಧ್ಯವಲ್ಲ. ಹಲವಾರು ಧಾರ್ಮಿಕ ಗುಂಪುಗಳಿಗೆ ಸರ್ಕಾರಿ ಅಧಿಕಾರಿಗಳು ಭೂಮಿಯನ್ನು ನೀಡಿದ್ದಾರೆ. ಆದರೆ ಮುಸ್ಲಿಮೇತರ ಪೂಜಾಗೃಹಗಳ ವಿಸ್ತರಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ. ಇಲ್ಲಿನ ಚರ್ಚುಗಳಿಗೆ ಬೇರೆ ದೇಶಗಳಲ್ಲಿದ್ದಂತೆ ಬೆಲ್ ಟವರ್‌’ಗಳಿಲ್ಲ. ಮನೆಯ ಛಾವಣಿಗಳ ಮೇಲೆ ಓಂ, ಶಿಲುಬೆಗಳಂತಹ ಚಿಹ್ನೆಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸುವ ಕಾನೂನುಗಳು ಅಸ್ತಿತ್ವದಲ್ಲಿವೆ. ಆದರೆ ಅಂತಹ ಕಾನೂನುಗಳನ್ನು ಕಟ್ಟುನಿಟ್ಟಾಗೇನೂ ಜಾರಿಗೊಳಿಸಲಾಗಿಲ್ಲ. ನಿಮ್ಮ ಮನೆಯ ಗೇಟಿನಲ್ಲಿ ಒಂದು ಶಿಲುಬೆಯಿದ್ದರೆ, ಕಾಪೌಂಡ್ ಹೊರಗಿನ ಕಾಲಿಂಗ್ ಬೆಲ್ಲಿನ ಪಕ್ಕದಲ್ಲಿ ಕೃಷ್ಣನ ವಿಗ್ರಹವಿದ್ದರೆ ಪೋಲೀಸರು ಬಾಗಿಲು ಬಡಿಯುವುದಿಲ್ಲ. ಪ್ರಮುಖ ಕ್ರಿಶ್ಚಿಯನ್ ಮತ್ತು ಹಿಂದೂ ರಜಾದಿನಗಳು ಮತ್ತು ಚೀನೀಯರ ಹೊಸವರ್ಷದಂದು ಸಾರ್ವಜನಿಕ ಆಚರಣೆಗಳು ಸಂಭ್ರಮದಿಂದ ನಡೆಯುತ್ತವೆ. ಮುಸ್ಲಿಮೇತರರ ಧಾರ್ಮಿಕ ಸಭೆಗಳ ಬಗ್ಗೆ ಅಲ್ಲಲ್ಲಿ ಜಾಹೀರಾತುಗಳು ಕಂಡುಬರುತ್ತವೆ. ಆರ್ಟ್ ಆಫ್ ಲಿವಿಂಗ್, ಇಷಾ, ಈಶ್ವರೀಯ ಬ್ರಹ್ಮಕುಮಾರಿ, ಹರೇಕೃಷ್ಣ ಮುಂತಾದವರ ಧಾರ್ಮಿಕಸಭೆಗಳು ನಿಗದಿತ ಸ್ಥಳಗಳಲ್ಲಿ ಎಗ್ಗಿಲ್ಲದೇ ನಡೆಯುತ್ತವೆ. ದೇಶದಲ್ಲಿ 45 ಅಧಿಕೃತವಾಗಿ ಚರ್ಚ್ ಕಟ್ಟಡಗಳಿದ್ದರೂ, ದೇಶಾದ್ಯಂತ 700ಕ್ಕೂ ಹೆಚ್ಚು ಕ್ರಿಶ್ಚಿಯನ್ ಸಭೆಗಳು ಕಾರ್ಯ ನಿರ್ವಹಿಸುತ್ತವೆ. ದೊಡ್ಡ ಗಾತ್ರದ ಲಂಗರ್ ನಡೆಸುವ ಸಿಖ್ ಗುರುದ್ವಾರಗಳಿವೆ. ಶಿಯಾ ಮುಸ್ಲಿಮರ ಮಸೀದಿಗಳೂ, ಇರಾನಿಯನ್ನರೇ ಕಟ್ಟಿಸಿ ನಡೆಸುತ್ತಿರುವ ಹೆಸರಾಂತ ಇರಾನಿ ಆಸ್ಪತ್ರೆ ಮತ್ತು ಇರಾನಿ ಶಾಲೆಗಳಿವೆ. ಯಹೂದಿಯರೂ ಸ್ವೇಚ್ಛೆಯಿಂದ ಹಾಗೂ ಸುರಕ್ಷಿತೆಯಿಂದಲೇ ಇದ್ದಾರೆ.

(೪) ಸಹಿಷ್ಣುತೆಗೆಂದೇ ಅಧಿಕೃತ ಸಚಿವಾಲಯವಿದೆ

ಮುಸ್ಲಿಂ ಬ್ರದರ್’ಹುಡ್ ಮತ್ತು ಇಸ್ಲಾಮಿಕ್ ಸ್ಟೇಟ್ನಂತಹ ಗುಂಪುಗಳ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಯುಎಇ ಮತ್ತಿತರ ಅರಬ್ ರಾಷ್ಟ್ರಗಳು ಜಗತ್ತಿಗೆ ತಮ್ಮ ಸಹಿಷ್ಣುತೆಯ ಚಿತ್ರಣವನ್ನು ಪ್ರದರ್ಶಿಸುವ ಮತ್ತು ತಂತಮ್ಮ ದೇಶದೊಳಗೆ ಉಗ್ರವಾದವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ತಮ್ಮ “ಮಧ್ಯಮಮಾರ್ಗ ಯುಕ್ತ ಇಸ್ಲಾಂ”(Moderate Islam)ನ ವ್ಯಾಖ್ಯಾನವನ್ನು ತಿಳಿಸಲು ಪ್ರಯತ್ನಿಸುತ್ತಿವೆ. ಆದರೆ ಯುಎಇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಹಿಷ್ಣುತೆಯನ್ನು ಆಳವಾಗಿ ಪ್ರತಿಪಾದಿಸುವ ಇಸ್ಲಾಂಧರ್ಮದ ನಿಜವಾದ ಚಿತ್ರಣವನ್ನು ಉತ್ತೇಜಿಸಲು ಸಹಿಷ್ಣುತಾ ಸಚಿವಾಲಯವನ್ನೇ ಸ್ಥಾಪಿಸಿತು. ಇದು ಸಹಬಾಳ್ವೆಯನ್ನು ಸಹಿಸುತ್ತದೆ. ಪ್ರಾಯೋಗಿಕವಾಗಿ, ಯುಎಇ ಕೊಲ್ಲಿಪ್ರದೇಶದಲ್ಲಿ ತನ್ನ ಸಾಮಾಜಿಕ ಮತ್ತು ರಾಜಕೀಯ ಗುರಿಗಳನ್ನು ಸಾಧಿಸಲು “ಮಧ್ಯಮ ಮಾರ್ಗಯುಕ್ತ ಇಸ್ಲಾಂ” ಅನ್ನೇ ಅನುಸರಿಸುತ್ತಿದೆ ಹಾಗೂ ‘ಇದು ನಿಜವಾದ ಇಸ್ಲಾಂ ಅಲ್ಲ’ ಎಂದು ಟೀಕಿಸಿದ ಕಟ್ಟರ್ಪಂಥೀಯ ಮುಸ್ಲಿಮರನ್ನು ಧಾರ್ಮಿಕ ಉಗ್ರಗಾಮಿಗಳೆಂದು ಕರೆಯಲೂ ಹಿಂದೇಟು ಹಾಕಿಲ್ಲ. ಇಸ್ಲಾಂ ಅಂತಲ್ಲ, ಯಾರೂ ಸಹ ಯಾವುದೇ ಧರ್ಮವನ್ನು ನಿಂದಿಸುವಂತಿಲ್ಲ. ಯಾವುದೇ ಧರ್ಮನಿಂದನೆಗೆ ಐದು ವರ್ಷ ಜೈಲು ಮತ್ತು ಒಂದು ಮಿಲಿಯನ್ ದಿರಾಮ್ ದಂಡ‌ ವಿಧಿಸಲಾಗುತ್ತದೆ. (https://gulfnews.com/uae/uae-up-to-dh1m-fine-5-years-in-jail-for-religious-intolerance-1.68820562)
“ಯುಎಇಯ ಆಡಳಿತವೇ ಮಧ್ಯಮ ಮಾರ್ಗಯುಕ್ತ ಇಸ್ಲಾಂ ಧರ್ಮವನ್ನು ಪ್ರತಿನಿಧಿಸುತ್ತಾ ಹಾಗೂ ಇಸ್ಲಾಂನ ಬೇರೆ ಯಾವುದೇ ಪರ್ಯಾಯ ಅಭಿವ್ಯಕ್ತಿಯನ್ನು ಉಗ್ರಗಾಮಿ ಎಂದು ಚಿತ್ರಿಸುವುದನ್ನು ಕಂಡಾಗ, ಧಾರ್ಮಿಕ ದ್ವೇಷಗಳೇ ತುಂಬಿರುವ ಈ ಜಗತ್ತಿಗೆ ಇನ್ನೂ ಭವಿಷ್ಯವಿದೆ ಎಂದೆನಿಸುತ್ತದೆ” ಎಂದು, ರೈಸ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನಿ ಅನ್ನೆಲ್ಶೆಲೈನ್, 2017 ರಲ್ಲಿ ಬರೆದಿದ್ದಾರೆ.

(೫) ಯುಎಇ ತನ್ನ ದೇಶದಲ್ಲಿರುವ ಇತರ ಧರ್ಮಗಳಿಗಿಂತ ಹೆಚ್ಚಾಗಿ ಮುಸ್ಲಿಮರ ಚಟುವಟಿಕೆಯನ್ನು ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.

ಯುಎಇ, ಇಸ್ಲಾಮಿಸ್ಟ್ ಚಳುವಳಿಗಳನ್ನು‌ ತನ್ನ ಪಾರಂಪರಿಕ ಸರ್ಕಾರ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಾಥಮಿಕ ಬೆದರಿಕೆ ಎಂದು ಪರಿಗಣಿಸುತ್ತದೆ. 2011 ರಲ್ಲಿ ನಡೆದ ಅರಬ್ ದಂಗೆ, ಟ್ಯುನೀಶಿಯಾ ಮತ್ತು ಈಜಿಪ್ಟ್‌ನಂತಹ ಸ್ಥಳಗಳಲ್ಲಿ ಕಟ್ಟರ್
ಇಸ್ಲಾಮಿಸ್ಟ್ ರಾಜಕೀಯ ಗುಂಪುಗಳನ್ನು ಅಧಿಕಾರಕ್ಕೇರಿಸಿದ ನಂತರವಂತೂ ಯುಎಇ ಹಿಂದೆಂದಿಗಿಂತಲೂ ಹೆಚ್ಚಿನ ಎಚ್ಚರದಿಂದ ತನ್ನ ಆಂತರಿಕ ಭದ್ರತೆಯನ್ನು ಕಾಪಾಡಿಕೊಂಡಿದೆ. ಮಧ್ಯ ಪ್ರಾಚ್ಯವಲಯದ ಅತಿ ದೊಡ್ಡ ಮತ್ತು ಅತ್ಯಂತ ಸಂಘಟಿತ ರಾಜಕೀಯ ಇಸ್ಲಾಮಿಕ್ ಚಳುವಳಿಯಾದ ಮುಸ್ಲಿಂಬ್ರದರ್‌ಹುಡ್‌ನ್ನು ನಿಷೇಧಿಸಿ, ಧರ್ಮನಿಂದೆಯ ಮತ್ತು ಭಯೋತ್ಪಾದನಾ-ವಿರೋಧಿ ಕಾನೂನುಗಳನ್ನು ಸಮರ್ಥವಾಗಿ ಜಾರಿಗೆ ತಂದು ಮತ್ತು ಬಳಸಿಕೊಂಡು, ತನ್ನ ವಿಮರ್ಶಕರನ್ನು ಸದಾ ಇಕ್ಕಟ್ಟಿನಲ್ಲೇ ಇಟ್ಟಿದೆ.

ಇಷ್ಟೇ ಅಲ್ಲ. ಇಸ್ಲಾಂಧರ್ಮದ ಮೇಲೆ ದೇಶದ ನಿಯಂತ್ರಣ ಯುಎಇಯ ಮುಸ್ಲಿಮರ ದೈನಂದಿನ ಜೀವನದಲ್ಲಿ ಇನ್ನೂ ಆಳವಾಗಿ ವಿಸ್ತರಿಸಿದೆ. ಸರ್ಕಾರವೇ ಖುದ್ದಾಗಿ ಎಲ್ಲಾ ಇಮಾಮ್‌ಗಳನ್ನು ಆಯ್ಕೆ ಮಾಡುತ್ತದೆ ಮತ್ತು ಶುಕ್ರವಾರ ಪ್ರಾರ್ಥನೆ/ಧರ್ಮೋಪದೇಶಗಳಿಗೆ ಸಾಪ್ತಾಹಿಕ ಮಾರ್ಗದರ್ಶನ ನೀಡುತ್ತದೆ. ಅನೌಪಚಾರಿಕವಾದ ಇಸ್ಲಾಮಿಕ್ ಕಲಿಕೆಯನ್ನೂ ಸಹ ಸರ್ಕಾರ ಅನುಮೋದಿಸಬೇಕು. ಅಂದರೆ ಖುರಾನ್ ಕಂಠಪಾಠ ಸ್ಪರ್ಧೆ ಅಥವಾ ಖಾಸಗೀ ಉಪನ್ಯಾಸವನ್ನು ನಡೆಸಲು, ಇಸ್ಲಾಂ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲು ಅಥವಾ ಮಸೀದಿಗಳಲ್ಲಿ ಪುಸ್ತಕಗಳು ಅಥವಾ ಆಡಿಯೊವನ್ನು ವಿತರಿಸಲು ಸರ್ಕಾರದ ಅನುಮತಿ ಅಗತ್ಯವಿದ್ದೇ ಇದೆ. ಮಸೀದಿಯ ನೌಕರರು ಮಸೀದಿಗಳ ಹೊರಗೆ ಧಾರ್ಮಿಕ ಪಾಠಗಳನ್ನು ಬೋಧಿಸುವಂತಿಲ್ಲ.

ಹೀಗಿದ್ದಾಗ ಯಾರೋ ಒಂದಿಬ್ಬರು ಕಟ್ಟರ್ ಹಿಂದೂಗಳು ಮಾಡಿದ ಅತ್ಯುತ್ಸಾಹ ಕಮೆಂಟುಗಳನ್ನು ಹಿಡಿದುಕೊಂಡು, ಅಲ್ಲಾಡದ ಕಾನೂನುಪಟ್ಟು ಹಾಕಿ ಅವರ ಕೆಲಸಕ್ಕೆ ಸಂಚಕಾರ ಬರುವಂತೆ ಮಾಡಿಸಿ, ಒಂದಿಬ್ಬರನ್ನು ಗಡೀಪಾರು ಮಾಡಿದ್ದನ್ನೇ ಸಾಧನೆಯೆಂಬಂತೆ ಬಿಂಬಿಸಿಕೊಂಡು ಕೆಲ ಮುಸ್ಲಿಂ ಸಹೋದರರು ಕೇಕೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಯಾರೋ ಒಬ್ಬ ಬ್ಯುಸಿನೆಸ್ ಮ್ಯಾನ್, ಇನ್ನೊಬ್ಬ ರಾಜಕುಮಾರಿ ಹೇಳಿದ ಎರಡು ಮಾತುಗಳನ್ನೇ ತಮ್ಮ ರಣಕೇಕೆಯನ್ನಾಗಿಸಿಕೊಂಡು ಕುಣಿದಾಡುತ್ತಿರುವವರಿಗೆ ನಾನು ಹೇಳುವುದಿಷ್ಟೇ. ಸಮಾಧಾನ ಮಾಡಿಕೊಳ್ಳಿ ಅಣ್ಣಂದಿರಾ, ಒಬ್ಬಿಬ್ಬರ ಕೆಲಸಕ್ಕೆ ಸಂಚಕಾರ ತಂದಿಟ್ಟು ನೀವು ನಿಜವನ್ನು ಮುಚ್ಚಿಡಲಾಗಿಲ್ಲ. Infact, ನೀವುಗಳು ನಿಜವನ್ನು ಇನ್ನೂ ಗಟ್ಟಿ ಮಾಡಿದ್ದೀರಿ. ಮೊತ್ತ ಮೊದಲಿಗೆ, ಸರ್ಕಾರದ ನಿರ್ಬಂಧವಿದ್ದರೂ ಜಮಾತಿಗಳು ಸಭೆ ಸೇರಿದ್ದು ತಪ್ಪು ಎಂಬುದನ್ನು ಎಲ್ಲರೂ ಒಪ್ಪಬೇಕಾದ ವಿಚಾರ. ತರ್ಕಜ್ ಮುಸ್ಲಿಂಸಮಾಜ ಇದನ್ನು ತಪ್ಪೆಂದು ಒಪ್ಪಿದೆ ಕೂಡಾ. ಜಮಾತಿಗಳು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸಲಾಗುವುದೆಲ್ಲ ಎಂಬುದೆಷ್ಟು ಸತ್ಯವೋ, ಯಾರೋ ಒಂದಿಬ್ಬರು ಮೂರ್ಖ ಹಿಂದುಗಳು ಹೇಳಿದ ಮಾತುಗಳು ಇಡೀ ಹಿಂದೂ ಸಮುದಾಯದ ಮಾತುಗಳಲ್ಲ ಎಂಬುದೂ ಅಷ್ಟೇ ಸತ್ಯ. ನೀವು ಅರ್ಧಸತ್ಯವನ್ನು ಮಾತ್ರ ಒಪ್ಪಿಕೊಳ್ಳುವ ಕಷ್ಟಕ್ಕೆ ಕೈ ಹಾಕಬೇಡಿ. ಇನ್ನೊಬ್ಬರನ್ನು ವಾದದಿಂದ ಗೆಲ್ಲಲ್ಲಾಗದಿದ್ದಾಗ ಅವರಿಗೆ ಜೀವಬೆದರಿಕೆ ಹಾಕುವುದು, ಅವರ ಕುಟುಂಬವನ್ನು ಗುರಿಯಾಗಿಸಿಕೊಳ್ಳುವುದು, ಅವರ ಕೆಲಸಕ್ಕೆ ಸಂಚಕಾರ ತರುವುದು ಅತ್ಯಂತ ನೀಚ ಕೆಲಸ. ನಿಜವಾದ ಮುಸ್ಲಿಂ ಅದನ್ನು ಯಾವತ್ತೂ ಮಾಡಲಾರ. ಯುಎಇ, ಸೌದಿ, ಒಮಾನ್, ಕುವೈತ್, ಬಹರೈನ್ ಮತ್ತು ಕತಾರ್ ದೇಶಗಳಿಗೆ ಕೆಲಸ ಹುಡುಕಿಕೊಂಡು ಬಂದ ನೀವಾಗಲೀ, ಅವರಾಗಲೀ ಅಥವಾ ನಾನಾಗಲೀ ಇದೊಂದು ಮುಸ್ಲಿಂರಾಷ್ಟ್ರ ಎಂಬ ಕಾರಣಕ್ಕೆ ಬಂದಿಲ್ಲ. ಅಥವಾ ಇದೊಂದು ಮುಸ್ಲಿಂರಾಷ್ಟ್ರ ಎಂಬ ಕಾರಣಕ್ಕೆ ಬಿಟ್ಟು ಹೋಗುವುದೂ ಇಲ್ಲ. ಇಲ್ಲಿ ಅವಕಾಶಗಳಿವೆ ಎಂಬ ಕಾರಣಕ್ಕಷ್ಟೇ ಬಂದಿದ್ದೇವೆ. ಜಗತ್ತಿನೆಲ್ಲೆಡೆ ಇರುವ ಹಾಗೆಯೇ ಇಲ್ಲೂ ಅವಕಾಶವಿದೆ ಎಂಬ ಸುದ್ಧಿಯನ್ನರಸಿ ಬಂದಿದ್ದೇವೆ. ಇದೇ ಜಗತ್ತಿನ ಹೆಬ್ಬಾಗಿಲೂ ಅಲ್ಲ, ಇಲ್ಲಿಂದ ಕೆಲಸ ಕಳೆದುಕೊಂಡು ಭಾರತಕ್ಕೆ ಹೋಗುವುದು ಜೀವನದ ಕೊನೆಯೂ ಅಲ್ಲ. ಯಾರದ್ದಾದರೂ ಸದ್ದಡಗಿಸುವುದೇ ನಿಮ್ಮ ಉದ್ದೇಶವಾಗಿದ್ದರೆ, ತಾರ್ಕಿಕವಾಗಿ ಮಾತನಾಡಿ ಅವರ ಸದ್ದಡಗಿಸಿ. ವೈಚಾರಿಕ ಭಿನ್ನಾಭಿಪ್ರಾಯದ ನಡುವೆಯೂ ಬದುಕುವುದನ್ನು ಕಲಿಯಿರಿ. ಪ್ರವಾದಿ ಮಹಮ್ಮದರು ಕೂಡಾ ತಮ್ಮ ಕಾಲಘಟ್ಟದಲ್ಲಿ ನೂರಾರಲ್ಲ ಸಾವಿರಾರು ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಎದುರಿಸಿ, ತಮ್ಮ ತರ್ಕದಿಂದ ಗೆದ್ದು ನಿಂತವರು. ಅವರ ಶಿಷ್ಯರಿಗೆ ಅದು ಸಾಧ್ಯವಾಗದ್ದು ದುರಂತವಷ್ಟೇ.

ಕೊರೋನಾ ಕಾಲದಲ್ಲಿ ಗಾಳಿ ಶುದ್ಧವಾಗಿದೆಯಂತೆ. ಧೀರ್ಘವಾಗಿ ಉಸಿರೆಳೆದುಕೊಂಡು ಜಗತ್ತನ್ನೆದುರಿಸಿ. ನಿಮಗಾಗಲೀ, ನಿಮ್ಮ ಧರ್ಮಗುರುಗಳಿಗಾಗಲೀ, ಸ್ವಾಮೀಜಿಗಳಿಗಾಗಲೀ ಕೊರೋನಾ ಸೋಂಕಿದ್ದರೆ ಮಾಹಿತಿ ತಿಳಿಸಿ. ಚಿಕಿತ್ಸೆ ಪಡೆದುಕೊಳ್ಳಿ. ಜೀವ ಉಳಿಸಿಕೊಳ್ಳಿ, ಉಳಿದವರ ಜೀವವನ್ನೂ ಉಳಿಸಿ.

ಲೇಖನದ ಮೂಲ ಆಶಯ ಫೆ.5, 2019ರಂದು ವಾಷಿಂಟನ್ ಪೋಸ್ಟ್’ನಲ್ಲಿ ಪ್ರಕಟವಾದ ತಾಮಿರ್ ಎಲ್-ಘೋಬಾಷಿ ಅವರ “ಯು ಎ ಇ ಮತ್ತು ಧಾರ್ಮಿಕ ಸ್ವಾತಂತ್ರ್ಯ: ನೀವು ತಿಳಿದಿರಬೇಕಾದ ಐದು ಅಂಶಗಳು” ಎಂಬ ಬರಹದ ಮೇಲೆ ನಿಂತಿದೆ.

(https://www.washingtonpost.com/world/2019/02/05/five-things-know-about-religious-freedom-united-arab-emirates/)

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments