ವಿಷಯದ ವಿವರಗಳಿಗೆ ದಾಟಿರಿ

ಜೂನ್ 1, 2020

ಅಷ್ಟಕ್ಕೂ ಆಗಬೇಕಿರುವುದು ಅವರಿಗೇನೂ ಇಲ್ಲ!

‍ನಿಲುಮೆ ಮೂಲಕ

– ಸಂಕೇತ್ ಡಿ ಹೆಗಡೆ

ಕಳೆದೆರಡು ದಿನಗಳಿಂದ ಸಾವರ್ಕರ್ ಕುರಿತ ಬರಹಗಳಿಂದ ಫೇಸ್ಬುಕ್ ತುಂಬಿ ಹೋಗಿದೆ. ಬಹಳ ಒಳ್ಳೆಯ ವಿಷಯ.

ಅಷ್ಟಕ್ಕೂ ಸಾವರ್ಕರ್ ರಿಗೆ ನಮ್ಮ-ನಿಮ್ಮ ಪ್ರೀತಿ ಬೇಕಿಲ್ಲ. ಸ್ವಾತಂತ್ರ್ಯ ಒಂದು ಮುಗಿದ ವಿಷಯ. ನೀವು ಈಗ ಅವರಿಗೆ ಎಷ್ಟು ಗೌರವ ತೋರಿಸುತ್ತೀರಿ ಎಂಬುದರ ಮೇಲೆ ಅವರ ಬದುಕು ಬದಲಾಗುವುದಿಲ್ಲ. ನೀವು ಫ಼್ಲೈ-ಓವರ್ ಗೆ ಹೆಸರಿಟ್ಟ ಮಾತ್ರಕ್ಕೆ ಅವರ ಗೌರವ ಏರುವುದೋ ಅಥವಾ ತಗ್ಗುವುದೋ ಆಗುವುದಿಲ್ಲ.

ಆದರೆ ನಾವು ಇವತ್ತು ಹೀಗೆ ಬದುಕುತ್ತಿರಲು ಕಾರಣವಾದ ಅಸಂಖ್ಯಾತ ಜೀವಿಗಳ ಬಗ್ಗೆ ಚೂರು ಗೌರವಾದಾರಗಳಿಲ್ಲದೇ ಬದುಕಿದರೆ, ನಷ್ಟವಾಗುವುದು ನಮಗೆ. ಸೃಷ್ಟಿ ನಮಗೆ ಇಂಥದ್ದೊಂದು ಹೃದಯ, ಇಂಥದ್ದೊಂದು ತಲೆ, ನೆನಪಿನ ಶಕ್ತಿ, ಭಾವಿಸುವ ಶಕ್ತಿ ಇದನ್ನೆಲ್ಲ ಧಾರೆಯೆರೆಯಿತಲ್ಲ? ಅದನ್ನೆಲ್ಲ ಮೊಟಕುಗೊಳಿಸಿ, ಅಂಥವರ ಕುರಿತು ಚೂರು ಕೃತಜ್ಞತೆಯಿಲ್ಲದೇ ಬದುಕಿದರೆ, ನಷ್ಟವಾಗುವುದು ನಮಗೆ.

ಸಾವರ್ಕರ್ ಒಬ್ಬ ದೇಶಭಕ್ತಿಯ, ದೇಶಕ್ಕಾಗಿ ಮಾಡಬಲ್ಲ ತ್ಯಾಗದ, ಇತರರ ಒಳಿತಿಗಾಗಿ ಒಬ್ಬ ಮನುಷ್ಯ ಹೋಗಬಲ್ಲ ತೀವ್ರತೆಯ ಕುರಿತು ಒಂದು ಅಪ್ರತಿಮ ಉದಾಹರಣೆಯಷ್ಟೇ. ನೀವು ಗೌರವ ಕೊಡುವುದರಿಂದ ಅಥವಾ ಕೊಡದಿರುವುದರಿಂದ ಅವರಲ್ಲೇನು ಬದಲಾಗುವುದಿಲ್ಲ. ಬದಲಾಗುವುದು ನಮ್ಮ ಪ್ರಜ್ಞೆಯಲ್ಲಿ ಮತ್ತು ನಾವು ಬದುಕುತ್ತಿರುವ ಮಟ್ಟದಲ್ಲಿ ಅಷ್ಟೇ.

ಅಷ್ಟಕ್ಕೂ ಈ ದೇಶದ ಇತಿಹಾಸವನ್ನು ನಮಗೆ ಕಲಿಸಿದವರ್ಯಾರು? ಬ್ರೀಟೀಷರು ಬಿಟ್ಟುಹೋದ ಹಾಳುಮೂಳನ್ನೇ ಹೌದೌದೆಂದು ನಂಬಿಕೊಂಡು ಬರುತ್ತಿರುವ ಜನಸಮೂಹವಲ್ಲವೇ ನಾವು? ಊಹೂಂ, ನಾವು ಹೀಗೆ ಇರಲಿಲ್ಲ. ಈ ದೇಶದ ಕಾಲಮಾನದಲ್ಲಿ ಸ್ವಲ್ಪವೇ ಹಿಂದೆ ಹೋದರೆ, ನಾವು ಹೀಗಿರಲಿಲ್ಲ.

ಜಗತ್ತಿನ ಬೇರೆಡೆಗಳಲ್ಲಿ ಇನ್ನೂ ನಾಗರೀಕತೆಗಳ ಶುರುವಿಲ್ಲದಾಗ – ಅಧ್ಯಾತ್ಮ, ವಿಜ್ಞಾನ. ಗಣಿತ, ಖಗೋಳ, ವೈದ್ಯಕೀಯ, ಯೋಗ ಶಾಸ್ತ್ರಗಳಲ್ಲಿ ಔನ್ನತ್ಯವನ್ನು ಸಾಧಿಸಿದ್ದ ನೆಲವಿದು. ವಿಶ್ವವೇ ನಿಬ್ಬೆರಗಾಗುವಂತ ಸಾಮ್ರಾಜ್ಯಗಳು, ರಾಜಾಡಳಿತ ಪರಂಪರೆಗೆ ಮುಕುಟವಾಗಬಲ್ಲ ರಾಜರುಗಳು, ಮಾನವ ವ್ಯವಸ್ಥೆಯನ್ನು ಪರಿಶೋಧಿಸಿದ ಅತ್ಯುತ್ಕೃಷ್ಟ ಯೋಗಿಗಳು, ವಿಜ್ಞಾನಿಗಳು ಆಗಿಹೋದ ನೆಲವಿದು. ಮಾರ್ಕ್ ಟ್ವೇನ್ ಒಂದು ಕಡೆ ‘Anything that can ever be done either by man or God has been done in this land’ ಎಂದಿದ್ದ ಈ ದೇಶದ ಕುರಿತು!

ಹೀಗಿದ್ದಿದ್ದ ಈ ದೇಶ, ಕಳೆದ ಸಹಸ್ರಮಾನದಲ್ಲಿ ತೀವ್ರ ಆಕ್ರಮಣಗಳಿಗೆ, ಲೂಟಿಗಳಿಗೆ, ಹೇರಿಕೆಗಳಿಗೆ ಒಳಗಾಯಿತು. ಜೇನು ಸವಿಯಲು ಜಂತುಗಳು ಬರುವುದು ಸಾಮಾನ್ಯವಲ್ಲವೇ? ತೀವ್ರ ದಾಳಿಗಳಿಗೆ ಒಳಗಾಗಬೇಕಾಯಿತು. Exploration ಮನಸ್ಥಿತಿಯಿದ್ದ ಇಂಥ ದೇಶ, ಇಂಥ ಖಂಡ ಭಾರತ ಮೇಲೆ ಆಕ್ರಮಣ ಮಾಡಿಲ್ಲ ಅಂತ ಇಲ್ಲ. ಅಷ್ಟು ದೇಶಗಳ ಜನರು ಇಲ್ಲಿ ಬಂದು ತಮ್ಮ ನೆಲೆ ಸ್ಥಾಪಿಸಲು ಪ್ರಯತ್ನಿಸಿದರು.

ಅದರಲ್ಲೆಲ್ಲ ಅತ್ಯಂತ ನಿರ್ದಯಿ, ಕ್ರೂರಿ ಸಾಮ್ರಾಜ್ಯಗಳಲ್ಲಿ ಆಂಗ್ರರ ದಂಡೂ ಒಂದು. ಇವರದ್ದು sophesticated ತಂತ್ರಗಾರಿಕೆ. ತಮ್ಮ ಸೈನಿಕರನ್ನೇ ತಂದು, ಅದೆಂಥದೋ ಯುದ್ಧವಾಡಿ, ಒಂದಷ್ಟು ಕಬಳಿಸಿ, ಲೂಟಿ ಹೊಡೆದು ಹೋಗುವ ಕ್ರೂಡ್ ಜನರಲ್ಲ. ಸಣ್ಣಗೆ ಒಳನುಸುಳುತ್ತಾರೆ. ನಿಧಾನವಾಗಿ ಪೂಸಿಹೊಡೆಯುತ್ತಾರೆ. ನಮ್ಮವರನ್ನೇ ನಮ್ಮ ವಿರುದ್ಧವಾಗಿ ತಿರುಗಿಸುತ್ತಾರೆ. ನಮ್ಮ ನಮ್ಮಲ್ಲೇ ಜಗಳ ಹಚ್ಚುತ್ತಾರೆ. ನಮ್ಮ ಸಂಸ್ಕೃತಿಯನ್ನು ವಿವಿಧ ಹಂತಗಳಲ್ಲಿ ನಾಶ ಮಾಡಲು ಪ್ರಯತ್ನಿಸುತ್ತಾರೆ. ವಿವಿಧ ಮಾರ್ಗಗಳಲ್ಲಿ ನಾವು ತುಚ್ಛರು, ಅವರು ಶ್ರೇಷ್ಠರು ಎಂದು ನಮ್ಮನ್ನೇ ನಂಬಿಸುತ್ತಾರೆ. ನಮ್ಮನ್ನು ಉಪವಾಸ ಕೆಡುಗಿ ತಮ್ಮ ದೇಶದಲ್ಲಿ ಐಶಾರಾಮಿ ಜೀವನ ನಡೆಸುತ್ತಾರೆ. ಇದು ನಯವಂಚಕ ಸಾಮ್ರಾಜ್ಯ!

ಇದು ಭಾರತೀಯರಿಗೆ ಅರ್ಥವಾದರೂ, ಅವರ ತಂತ್ರಗಾರಿಕೆಯ ಮುಂದೆ ವ್ಯವಸ್ಥಿತವಾದ ಹೋರಾಟ ಮಾಡಿ ಅವರನ್ನು ಓಡಿಸಲು ಎಷ್ಟು ವರ್ಷ ಬೇಕಾಯಿತು ನೋಡಿ. ಅದು ಆ ಸಾಮ್ರಾಜ್ಯದ ‘ಹರಿತ’ಕ್ಕೆ ಹಿಡಿದ ಕನ್ನಡಿ.

ಹಾಗಂತ ಭಾರತೀಯರೇನು ಸುಮ್ಮನೆ ಕುಳಿತಿರಲಿಲ್ಲ. ಎಲ್ಲರೂ ಅವರವರಿಗೆ ತೋಚಿದ ಮಾರ್ಗದಲ್ಲಿ ಪ್ರತಿಭಟನೆಗೆ ಇಳಿದರು. ಕೆಲವರು ಕ್ರಾಂತಿಕಾರಿಗಳಾದರು, ಕೆಲವರು ರಾಜಕೀಯ ಚಳುವಳಿಗಳ ನೇತಾರರಾದರು, ಕೆಲವರು ಜಾಗತಿಕ ಮಟ್ಟದಲ್ಲಿ ಶಮಿಸಿದರು. ಇನ್ನು ಕೆಲವರು ಬಂದ್, ಹರತಾಳ, ಉಪವಾಸಗಳ ರೂಪದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿದರು. ಅವರವರು ಅವರವರಿಗೆ ಅತ್ಯುತ್ತಮ ಅನ್ನಿಸಿದ ಮಾರ್ಗದಲ್ಲಿ ರಕ್ತ ಕೊಟ್ಟರು.

ಸಾವರ್ಕರ್ ಅಂದಾಗ ನೆನಪಿಗೆ ಬರುವುದೇ ಅವರು ಅನುಭವಿಸಿದ ಕರಾಳ ಕಷ್ಟಗಳು. 50 ವರ್ಷ ಕಾಲಾಪಾನಿ! ಇದು ಆಂಗ್ಲರು ಅವರಿಗೆ ವಿಧಿಸಿದ ಶಿಕ್ಷೆ. ಸರಿಯಾದ ಊಟವಿಲ್ಲ, ನಿದ್ದೆಯಿಲ್ಲ, ಗಾಣಕ್ಕೆ ಎತ್ತು ಕಟ್ಟಿದಂತೆ ಕಟ್ಟಿ ಎಣ್ಣೆ ತೆಗೆಯುವ ಕೆಲಸ. ಇಷ್ಟೇ ನೀರು ಕುಡಿಯಬೇಕು, ಇಷ್ಟೇ ತಿನ್ನಬೇಕು, ನಿದ್ದೆಯೋ ದೇವರಿಗೇ ಪ್ರೀತಿ. ಬೆಳಿಗ್ಗೆ ತಿಂಡಿ ತಿನ್ನದೇ ಮಧ್ಯಾಹ್ನವಾಗುವಷ್ಟರಲ್ಲಿ ಹಸಿಯುತ್ತೇವೆ ನಾವು. ಮಧ್ಯಾಹ್ನವೂ ಏನಾದರೂ ತಪ್ಪಿಹೋಯಿತು ಅಂದುಕೊಳ್ಳಿ. ಅಷ್ಟೇ! ಸಂಜೆಯಾಗುವಷ್ಟರಲ್ಲಿ ಹೈರಾಣಾಗುತ್ತೇವೆ ನಾವು. ’ಗಾಣ ತಿರುಗಿಸಿ ಇಷ್ಟು ಎಣ್ಣೆ ತೆಗೆಯಬೇಕು, ಇಲ್ಲವಾದರೆ ನಿನಗೆ ಊಟವಿಲ್ಲ’ ಅಂದರೆ ಹೇಗಿರುತ್ತೆ ಹೇಳಿ? ಸಾವರ್ಕರ್ ಅನುಭವಿಸಿದ್ದು ಅದನ್ನು. ಎರಡು ಸೊಳ್ಳೆಗಳು ಹಾರಾಡುತ್ತಿದ್ದರೆ ಮಲಗುವುದು ಕಷ್ಟ. ಸಾವರ್ಕರ್ ಮಲಗಿದ್ದು ಎಂಥ ಪರಿಸ್ಥಿತಿಯಲ್ಲಿರಬಹುದು ಹೇಳಿ? ಅದೂ ಒಂದೆರಡು ದಿನವೇ?

ಇಲ್ಲ, ಅವರ ಕಷ್ಟಗಳನ್ನು ಹೇಳಲು ಇದನ್ನೆಲ್ಲ ಹೇಳುತ್ತಿಲ್ಲ. ಅವರಿಂದ ಸ್ವಾತಂತ್ರ್ಯ ಪೂರ್ಣವಾಗಿ ಬಂತು ಎಂಬ ಲೋಕವನ್ನೂ ನಿಮ್ಮ ಮುಂದೆ ತೆರೆದಿಡುತ್ತಿಲ್ಲ. ಆದರೆ ಒಬ್ಬ ಮನುಷ್ಯ ತನ್ನ ದೇಶಕ್ಕಾಗಿ, ತನ್ನ ದೇಶದ ಜನರಿಗಾಗಿ ಈ ರೀತಿಯ ಬದುಕನ್ನು ತನ್ನದಾಗಿಸಿಕೊಳ್ಳುತ್ತಾನೆ ಅಂದರೆ ನಿಮಗೆ ಊಹಿಸಲು ಸಾಧ್ಯವೇ? ಸಾವರ್ಕರ್ ಮಾಡಿದ್ದು ಅದನ್ನ. ತಮ್ಮ ಸಾಮರ್ಥ್ಯದಲ್ಲಿ ಏನೇನನ್ನೆಲ್ಲ ಮಾಡಬಹುದೋ, ಅದನ್ನ ಶಕ್ತಿ ಮೀರಿ ಮಾಡಿದರು. ಮನುಷ್ಯರು ಒಳಹೋಗಬಾರದ ಕಷ್ಟಗಳನ್ನೆಲ್ಲ ತಮ್ಮದಾಗಿಸಿಕೊಂಡರು.

‘ಅವರು ಕ್ಷಮಾಪಣೆ ಪತ್ರ ಬರೆದರು’ ಅನ್ನುತ್ತಾರೆ. ಮೇಲಿನ ಸ್ಥಿತಿಯಲ್ಲಿ 9 ವರ್ಷ ಜೈಲಿನಲ್ಲಿದ್ದರೆ ನೀವೇನು ಮಾಡುತ್ತಿದ್ದಿರಿ? ನಾನೇನು ಮಾಡುತ್ತಿದ್ದೆ? ಇಲ್ಲ, ಅವರು ಕ್ಷಮಾಪಣೆಯನ್ನು ಕೇಳಿದರು ಎಂದು ನಾನು ಹೇಳುತ್ತಿಲ್ಲ. ಅದು ತಂತ್ರಗಾರಿಕೆಯ ನಡೆ. ಅದು ಬಿಡಿ, ಕಾಂಗ್ರೆಸ್ ಮುಟ್ಠಾಳರಿಗೆ ಎಂದಿಗೂ ಅರ್ಥವಾಗುವುದಿಲ್ಲ. ಸಾವರ್ಕರ್ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ಟಿವಿ ಸ್ಟುಡಿಯೋಗಳಲ್ಲಿ ಬಂದು ಮಾತನಾಡುವುದು ಸುಲಭ. ಆದರೆ ಇವರುಗಳೇ ಆ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದರು?

ಬಿಡಿ, ಇದಕ್ಕೆಲ್ಲ ಅರ್ಥವಿಲ್ಲ. ನೂರುವರ್ಷದ ಹಿಂದೆ ಇದ್ದ ಸ್ವಾತಂತ್ರ್ಯ ಹೋರಾಟಗಾರನನ್ನು ಗೌರವಿಸುವುದೋ, ಬೇಡವೋ ಎಂಬ ದ್ವಂದ್ವದಲ್ಲೇ ನನಗೆ ಹುರುಳು ಕಾಣಿಸುತ್ತಿಲ್ಲ. It’s a shame we’re still thinking about it. ಅವರನ್ನು ಹೃದಯದಲ್ಲಿಟ್ಟುಕೊಂಡು, ಕೃತಜ್ಞರಾಗಿ, ದೇಶದ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವುದನ್ನು ನೋಡುವ ಬದಲು ಇದನ್ನು ಒಂದು ವಿವಾದವನ್ನಾಗಿ ಮಾಡಿ ಎಲ್ಲರ ಸಮಯ ವ್ಯರ್ಥಮಾಡುತ್ತಿದ್ದೀರಲ್ಲ, ನಿಮಗೆ ಏನು ಹೇಳುವುದು? ಸಾವಿರಾರು ಸ್ಮಾರಕಗಳು , ಫ್ಲೈ ಓವರ್ ಗಳು ಇವೆ. ಗೌರವಾರ್ಥವಾಗಿ ನಾವು ಹೆಸರುಗಳನ್ನು ಇಡುತ್ತೇವೆ. ಇದಕ್ಕೆ ಸಾವರ್ಕರ್ ಹೆಸರಿಡುತ್ತಿದ್ದೇವೆ. ಮತ್ತೊಂದಕ್ಕೆ ಗಾಂಧಿ ಹೆಸರಿಡುತ್ತೇವೆ. ಇದು ನಮ್ಮ ಕೃತಜ್ಞತಾ ಭಾವದ ಸಮರ್ಪಣೆಯೇ ಹೊರತು, ಅವರಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಇಟ್ಟು ಮುಂದೆ ಸಾಗುತ್ತೇವೆ. ದೇಶದ ಇತರ ಸವಾಲುಗಳ ಬಗ್ಗೆ ಗಮನಹರಿಸುತ್ತೇವೆ. ಊಹೂಂ, ಇದಿಲ್ಲ! ಇದು ನಿಜವಾಗಿಯೂ ಶೋಚನೀಯ.

ನಾವು ಇಂಥವುಗಳಿಗೆ ಸೊಪ್ಪು ಹಾಕಬಾರದು. ಇಲ್ಲವಾದರೆ 10 ವರ್ಷಗಳಲ್ಲಿ ಸಾಧಿಸಬಹುದಾದ ಪ್ರಗತಿಯನ್ನು ಸಾಧಿಸಲು 100 ವರ್ಷಗಳು ಬೇಕಾಗುತ್ತವೆ!

 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments