ವಿಷಯದ ವಿವರಗಳಿಗೆ ದಾಟಿರಿ

ಜೂನ್ 5, 2020

1

ಮೌಲ್ಯಾಧಾರಿತ ಪತ್ರಿಕೋದ್ಯಮ ಮೌಲ್ಯಾಧಾರಿತ ರಾಜಕಾರಣಿಯನ್ನು ಕಾಣಬೇಕಾದುದು ಹೇಗೆ?

‍ನಿಲುಮೆ ಮೂಲಕ

– ವಿನುತಾ ಗೌಡ

ಕೆಲವು ದಿನಗಳ ಹಿಂದೆ ಕನ್ನಡದ ಸುದ್ದಿವಾಹಿನಿಯೊಂದು ತಿಪಟೂರಿನ ಶಾಸಕ ಬಿ.ಸಿ.ನಾಗೇಶ್‌ರ ಬಗ್ಗ ಕಾರ‍್ಯಕ್ರಮವೊಂದನ್ನು ಪ್ರಸಾರ ಮಾಡಿ ಅವರ ತೇಜೋವಧೆಯ ಪ್ರಯತ್ನವನ್ನು ನಡೆಸಿತ್ತು. ಆ ಸಂದರ್ಭದಲ್ಲಿ ತಿಪಟೂರು ಮಾತ್ರವಲ್ಲ, ಶಾಸಕರನ್ನು ಅರಿತಿದ್ದ, ಮೌಲ್ಯಾಧಾರಿತ ರಾಜಕಾರಣವೆಂದರೇನೆಂದು ಅರಿವಿದ್ದ ನಾಗರಿಕರು ಆ ವಾಹಿನಿಯ ಕ್ರಮಕ್ಕೆ ಅಪಾರವಾಗಿ ನೊಂದುಕೊಂಡರು. ಪಕ್ಷ ಭೇದವಿಲ್ಲದೆ ಶಾಸಕ ನಾಗೇಶ್ ಅವರ ಬೆಂಬಲಕ್ಕೆ ನಿಂತರು. ವೈಚಾರಿಕವಾಗಿ ಅವರನ್ನು ಪನಿಧಿಸುವ ಸಂಘಟನೆಯನ್ನು ವಿರೋಧಿಸುವ ಸಮಾಜದ ಅನೇಕ ಪ್ರಮುಖರೂ ಅವರ ಬೆಂಬಲಕ್ಕೆ ನಿಂತರು. ಇಂತಹವರೆಲ್ಲರುಗಳ ಬೆಂಬಲ ಅದೆಷ್ಟು ತೀವ್ರವಾಗಿತ್ತೆದರೆ ಇವರುಗಳೆಲ್ಲರೂ ಶಾಸಕ ನಾಗೇಶ್ ಅವರ ವಕ್ತಾರರಂತೆ ಅವರನ್ನು ಸಮರ್ಥಿಸಿಕೊಂಡರು. ಶಾಸಕರ ತೇಜೋವಧೆಯ ಹುನ್ನಾರವಿದ್ದ ಈ ಘಟನೆ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಯಿತು. ಈ ಘಟನೆಯ ಮೂಲಕ ಇಂತಹ ಒಬ್ಬ ಶಾಸಕರಿದ್ದಾರೆಂಬುದೂ ಜನಜನಿತವಾಯಿತು.

ನಾನೇನು ತಿಪಟೂರಿನ ಮತದಾರಳಲ್ಲ, ನಾಗೇಶ್ ಅವರಿಂದ ಪ್ರಯೋಜನ ಪಡೆದುಕೊಂಡವಳೂ ಅಲ್ಲ. ಆದರೆ ಗಾಂಧೀಜಿ ಹೇಳಿದ, ಅಂಬೇಡ್ಕರ್ ಭೋದಿಸಿದ, ಪಂಡಿತ್ ದೀನದಯಾಳ ಉಪಾಧ್ಯಾಯರು ಜೀವನದಲ್ಲಿ ಅಳವಡಿಸಿಕೊಂಡ ಮೌಲ್ಯಾಧ್ಯಾರಿತ ರಾಜಕಾರಣದ ಬಗ್ಗೆ ಒಂದಿಷ್ಟು ಓದಿಕೊಂಡಿದ್ದೇನೆ. ಹಾಗಾಗಿ ಒಂದಷ್ಟು ವಿಷಯವನ್ನು ಹೇಳಲೇಬೇಕೆನಿಸುತ್ತದೆ. ಜೊತೆಗೆ ನಾಗೇಶ್ ಅವರು ಯಾವ ಪಕ್ಷದವರೆನ್ನುವುದೂ ಅವರ ವ್ಯಕ್ತಿತ್ವದ ಎದುರಲ್ಲಿ ನಗಣ್ಯವಾಗಿ ಬಿಡುತ್ತದೆ. ಎಲ್ಲಾ ಪಕ್ಷಗಳಲ್ಲಿ ಇವರಂತಹ ರಾಜಕಾರಣಿಗಳಿರಬೇಕು ಎನಿಸತೊಡಗುತ್ತದೆ. ಅಂತಹವರುಗಳೇ ಜನಪ್ರತಿನಿಧಿಗಳಾಗಬೇಕು ಎನಿಸುತ್ತದೆ. ಸಂಧಿಗ್ಧತೆಯಲ್ಲೂ ಬಹುಜನರು ತಮ್ಮೆಲ್ಲಾ ಗಡಿಗಳನ್ನು ದಾಟಿ ನಾಗೇಶ್ ಪರ ನಿಂತಿದ್ದಕ್ಕೆ ಕಾರಣ ಇಂತಹುದೊಂದು ವ್ಯಕ್ತಿತ್ವವೇ ಕಾರಣ ಎಂದೂ ಅನಿಸುತ್ತದೆ.

ದೇಶದ ಕೆಲವು ರಾಜಕಾರಣಿಗಳ ಬಗ್ಗೆ ಎಲ್ಲರಂತೆ ನನಗೂ ಕುತೂಹಲವಿದೆ.ರಾಜ್ಯದ ಅಂಥಾ ಕೆಲವರನ್ನು ಸುಮ್ಮನೆ ಕುತೂಹಲಕ್ಕೆಂದೇ ಭೇಟಿಯಾಗಿದ್ದೇನೆ. ನಾನು ನಾಗೇಶ್ ಅವರನ್ನು ಭೇಟಿಯಾಗಿದ್ದು ಕೂಡಾ ಹಾಗೆಯೇ. ಆ ಪರಿಚಯ, ಕಂಡ ವಿಶೇಷತೆ, ಆ ವಿಶೇಷತೆಯಿಂದ ಕಂಡರಿದ ಕೆಲವು ಸಂಗತಿಗಳನ್ನು ಬಿಚ್ಚಿಡಬೇಕೆನಿಸುತ್ತದೆ.

ನಾಗೇಶ್ ಅವರ ತಂದೆ ಚಂದ್ರಶೇಖರಯ್ಯನವರು ಒಂದು ಕಾಲದ ಹಿರಿಯ ಮುತ್ಸದ್ಧಿಯಾಗಿದ್ದವರು. ಹಿಂದಿನಿಂದಲೇ ಸಾಕಷ್ಟು ಶ್ರೀಮಂತಿಕೆಯನ್ನೂ, ಕ್ಷೇತ್ರದ ಜನ ಗೌರವಾದರಗಳನ್ನು ನೀಡುತ್ತಿದ್ದ ಮನೆತನ ಕೂಡಾ ಅವರದ್ದು. ಅಂದಿನ ಕಾಲದಲ್ಲೇ ಅವರು ಜನತಾ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದವರು. ಆದರೆ ನಾಗೇಶ್ ಅವರನ್ನು ಸೆಳೆದಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಗಳು. ನಂತರ ಎಂದೂ ಅವರು ಹಿಂತಿರುಗಿ ನೋಡಲಿಲ್ಲ. ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಸಂದರ್ಭವೇ ಬರಲಿಲ್ಲ.

1999ರ ವಿಧಾನಸಭಾ ಚುನಾವಣೆ ಅವರ ಸಿದ್ಧಾಂತ ನಿಷ್ಠೆಗೆ ಅಗ್ನಿಪರೀಕ್ಷೆಯೊಂದನ್ನು ಒಡ್ಡಿತ್ತು. ಆ ಸಮಯದಲ್ಲಿ ಅವರು ತುಮಕೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಾಗಾಗಿ ರಾಜ್ಯ ಕಚೇರಿಯಿಂದ ನಾಗೇಶ್‌ರವರ ಮೂಲಕ ಜಿಲ್ಲಾ ಕಚೇರಿಗೆ ತುಮಕೂರು ಜಿಲ್ಲೆಯ ಎಲ್ಲಾ 13 ಕ್ಷೇತ್ರಗಳ ಬಿ. ಫಾರಂಗಳನ್ನು ಕಳುಹಿಸಲಾಗಿತ್ತು. ಇವುಗಳಲ್ಲಿ ಯಾವುದೇ ಹೆಸರುಗಳನ್ನು ನಮೂದಿಸಿರಲಿಲ್ಲ. ಅಭ್ಯರ್ಥಿಗಳ ಪಟ್ಟಿ ಪೂರ್ಣಗೊಂಡ ಬಳಿಕ ಅರ್ಜಿಗಳನ್ನು ಭರ್ತಿ ಮಾಡುವ ಸ್ವಾತಂತ್ರ‍್ಯವನ್ನು ರಾಜ್ಯ ಕಚೇರಿ ನಾಗೇಶ್ ಅವರಿಗೆ ಕೊಟ್ಟಿತ್ತು. ಅಂದರೆ ಪಾರ್ಟಿ ವಿತ್ ಡಿಫರೆನ್‌ಸ್‌ ಎಂದುಕೊಂಡ ಪಕ್ಷದಲ್ಲಿ ಕೆಲವು ಸಂಗತಿಗಳು ನಂಬಿಕೆಯ ಆಧಾರದಲ್ಲೇ ನಡೆದುಬಿಡುತ್ತಿದ್ದವು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ, ರಾಮಕೃಷ್ಣ ಹೆಗಡೆಯವರ ಲೋಕಶಕ್ತಿಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಣಯ ಕೈಗೊಂಡಿತ್ತು. ಅದು ಎಷ್ಟು ಕೊನೆಯ ಹಂತದಲ್ಲಿ ತೀರ್ಮಾನವಾಗಿತ್ತೆಂದರೆ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಅದಿನ್ನೂ ನಿಶ್ಚಯವಾಗಿರಲಿಲ್ಲ.

ಆದರೆ ಪಕ್ಷದೊಳಗೆ ಇಂತಿಂಥವರಿಗೆ ಟಿಕೆಟ್‌ಗಳನ್ನು ನೀಡಲಾಗುವುದೆಂದು ಬಹುತೇಕ ತೀರ್ಮಾನವಾಗಿ ಹೋಗಿತ್ತು. ಇನ್ನೇನು ನಾಮಪತ್ರ ಸಲ್ಲಿಸಲು ಕೆಲವೇ ಗಂಟೆಗಳಿವೆ ಎನ್ನುವಾಗ ಅಂದಿನ ಬೆಳ್ಳಾವಿ ಕ್ಷೇತ್ರವನ್ನು ಲೋಕಶಕ್ತಿಗೆ ಬಿಟ್ಟುಕೊಡಬೇಕೆಂಬ ಸೂಚನೆ ರಾಜ್ಯ ಬಿಜೆಪಿ ನಾಯಕರಿಂದ ಬಂತು. ಆ ಹೊತ್ತಿನವರೆಗೂ ಬೆಳ್ಳಾವಿ ಕ್ಷೇತ್ರಕ್ಕೆ ನಿಶ್ಚಯವಾಗಿದ್ದ ವ್ಯಕ್ತಿ ಜಿಲ್ಲಾ ಕಾರ್ಯಾಲಯಕ್ಕೆ ತನ್ನ ಬೆಂಬಲಿಗರೊಂದಿಗೆ ಜಮಾಯಿಸಿಯೂ ಬಿಟ್ಟಿದ್ದರು. ಆತ ಪಕ್ಷದ ಸೂಚನೆಯನ್ನು ತಾನೂ ಕೂಡಾ ಪಾಲಿಸುವುದಾಗಿಯೂ, ಕ್ಷೇತ್ರವನ್ನು ಲೋಕಶಕ್ತಿಗೆ ತ್ಯಾಗ ಮಾಡುವುದಾಗಿಯೂ ಸದ್ಯ ನೆರೆದಿರುವ ಕಾರ್ಯಕರ್ತರನ್ನು ಸಂಭಾಳಿಸುವುದಕ್ಕಾದರೂ ಬಿ. ಫಾರಂ ಅನ್ನು ತನಗೆ ನೀಡಬೇಕೆಂದು ನಾಗೇಶ್ ಅವರಲ್ಲಿ ಬೇಡಿಕೊಂಡರು. ಕಾರ್ಯಕರ್ತರ ಒತ್ತಡಕ್ಕೆ, ಭಾವನೆಗಳಿಗೆ ಬೆಲೆ ಕೊಟ್ಟ ನಾಗೇಶ್ ಬಿ.ಫಾರಂ ಅನ್ನು ಅವರಿಗೆ ವಾಪಸ್ ತೆಗೆದುಕೊಳ್ಳುತ್ತಾರೆಂಬ ಭರವೆಸೆಯೊಂದಿಗೆ ನೀಡಿಯೂ ಬಿಟ್ಟರು. ಆದರೆ ಆ ವ್ಯಕ್ತಿ ನಾಮಪತ್ರ ಸಲ್ಲಿಸಿ ಹೋದವರು ಅದನ್ನು ಹಿಂಪಡೆಯುವ ಕೊನೆ ದಿನದವರೆಗೂ ನಾಪತ್ತೆಯಾಗಿಬಿಟ್ಟರು. ಆ ಕಡೇ ದಿನ ನಾಗೇಶ್ ಅವರು, ತನ್ನಿಂದ ಸಂಘಟನೆಗಾದ ತೊಂದರೆಗೆ ಹಾಗೂ ನಂಬಿಸಿ ಮೋಸ ಮಾಡಿದ ಕಾರ್ಯಕರ್ತನ ಬಗ್ಗೆ ನೆನೆದು ಜಿಲ್ಲಾ ಕಾರ್ಯಾಲಯದಲ್ಲಿ ಒಬ್ಬರೇ ಅಳುತ್ತಾ ಕುಳಿತು ಬಿಟ್ಟಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳುವವರು ಇಂದು ಕೇವಲ ತಿಪಟೂರಿನಲ್ಲಲ್ಲ, ಸಮಸ್ತ ತುಮಕೂರು ಜಿಲ್ಲೆಯಲ್ಲಿ ಸಿಗುತ್ತಾರೆ. ಸಿದ್ಧಾಂತ ನಿಷ್ಠ ಪಕ್ಷದಲ್ಲಿ ಈ ರೀತಿಯ ಘಟನೆಗಳು ಬದ್ಧತೆ, ನಂಬಿಕೆಗಳನ್ನು ಆಧಾರವಾಗಿಸಿಕೊಂಡ ನಾಯಕರನ್ನೇ ಅದರೂ ಕುಗ್ಗಿಸಿಬಿಡುತ್ತವೆ. ನಾಗೇಶ್ ಅವರೂ ಕೆಲ ಸಮಯ ಹಾಗೆ ಕುಗ್ಗಿಹೋದರು.

ತಿಪಟೂರಿನ ಆಧುನಿಕ ಇತಿಹಾಸವನ್ನು ಕೊಂಚವಾದರೂ ಅಧ್ಯಯನ ಮಾಡಿದರೆ ನಾಗೇಶ್ ಅವರ ಜನಪ್ರಿಯತೆಯ ಹಿಂದಿರುವ ಶಕ್ತಿ ಅದೆಂಥಾದ್ದು ಎಂಬುದು ಅರಿವಾಗುತ್ತದೆ. ಏಕೆಂದರೆ ತುಮಕೂರು ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳದ್ದು ಒಂದು ತೂಕವಾದರೆ ತಿಪಟೂರಿನದ್ದು ಇನ್ನೊಂದು ತೂಕ. ಏಕೆಂದರೆ ತಿಪಟೂರು ಆಧುನಿಕ ಜಗತ್ತಿಗೆ ಯಾವತ್ತೋ ತೆರೆದುಕೊಂಡಿತ್ತು. ಅತೀ ದೊಡ್ಡ ಕೊಬ್ಬರಿ ಮಂಡಿಯಿರುವ ತಿಪಟೂರಿನ ಪರಿಚಯ ಸಮಸ್ತ ಏಷ್ಯಾ ಖಂಡಕ್ಕೇ ಇದೆ. ಅದರ ಕಾರಣದಿಂದ ಶತಮಾನಗಳ ಹಿಂದಿನಿಂದಲೇ ತಿಪಟೂರು ರಾಜ್ಯದಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರ. ಅಭಿವೃದ್ಧಿಯೂ ಹೆಚ್ಚು. ಯಾವತ್ತೂ ಅಂಥಾ ಪ್ರದೇಶದಲ್ಲಿ ಜನರು ದಡ್ಡರಾಗಿರುವುದಿಲ್ಲ. ಅಂದರೆ ನಾಗೇಶ್ ಅವರನ್ನು ಗೆಲ್ಲಿಸಿದ ಜನ ಬುದ್ಧಿವಂತರು. ಅಲ್ಲದೆ ರಾಜಕಾರಣದ ಚುನಾವಣಾ ಲೆಕ್ಕಾಚಾರದಲ್ಲಿ ಕಡ್ಡಾಯವಾಗಿ ಪರಿಗಣನೆಗೆ ಬರುವ ಜಾತಿಯ ಲೆಕ್ಕ ಈ ರಾಜಕಾರಣಿಯ ವಿಷಯದಲ್ಲಿ ಗಣನೆಗೆ ಬರುವುದೇ ಇಲ್ಲ. ಏಕೆಂದರೆ ತಿಪಟೂರು ವಿಧಾನಸಭಾ ವ್ಯಾಪ್ತಿಯಲ್ಲಿ ನಾಗೇಶ್ ಅವರ ಜಾತಿ ಬೆರಳೆಣಿಕೆಯ ಸಂಖ್ಯೆಯಲ್ಲಿರುವಂಥವರು. ಅಂದರೆ ಅವರು ಜಾತಿಗೂ ಮೀರಿ ಜನನಾಯಕರಾದದ್ದು ಹೇಗೆ? ಈ ವಿಷಯ ಅವರ ಬಗ್ಗೆ ಅಬದ್ಧ ಕಾರ್ಯಕ್ರಮ ಮಾಡಿದ ವಾಹಿನಿಗೆ ತಿಳಿಯದಿದ್ದಿದ್ದು ಹೇಗೆ? ಮೌಲ್ಯಾಧಾರಿತ ಪತ್ರಿಕೋದ್ಯಮ ಮೌಲ್ಯಾಧಾರಿತ ರಾಜಕಾರಣವನ್ನು ಬೆಂಬಲಿಸಬೇಕೋ ಅಥವಾ ವಿರೋಧಿಸಬೇಕೋ?

ಬೀದಿ ಬದಿಗಳಲ್ಲಿನ ಫ್ಲೆಕ್ಸ್ ನಲ್ಲಿ ರಾರಾಜಿಸದೆ, ಪತ್ರಿಕೆಗಳ ಮುಖಪುಟದಲ್ಲಿ ಕುಕ್ಕರೋ, ನೋಟ್ ಪುಸ್ತಕಗಳನ್ನೋ ಹಿಡಿದು ಫೋಸ್ ಕೊಡದೆ, ಭಯಂಕರ ಭಾಷಣಗಳನ್ನು ಮಾಡದೆ, ಪದೇ ಪದೇ ಸುದ್ದಿಯಲ್ಲಿರದೆ, ವಿಧಾನ ಮಂಡಲದಲ್ಲಿ ಗುಡುಗದೆ ಓರ್ವ ಜನನಾಯಕ ಉದಿಸಬಲ್ಲ ಎಂಬುದನ್ನು ತೋರಿಸಿಕೊಟ್ಟವರು ಬಿ.ಸಿ.ನಾಗೇಶ್. ಬೆಂಗಳೂರಿಗೆ ಬಸ್ಸಿನಲ್ಲಿ ಸಂಚರಿಸುವ, ತನ್ನೆದುರು ಕುಳಿತ ಕಾರ್ಯಕರ್ತನನ್ನು “ಇಷ್ಟಕ್ಕೆ ಇಲ್ಲಿಗೇಕೆ ಬರಲು ಹೋದಿರಿ, ಫೋನ್‌ನಲ್ಲಿ ಹೇಳಿದ್ದರೆ ಸಾಕಾಗಿತ್ತು’’ ಎಂದು ಕಾರ್ಯಕರ್ತರ ಸಮಯ, ಆರ್ಥಿಕ ಪರಿಸ್ಥಿತಿ ಮತ್ತು ಅನವಶ್ಯಕ ವೆಚ್ಚಗಳೆಲ್ಲದರ ಬಗ್ಗೆ ಕಾಳಜಿ ವ್ಯಕ್ತಪಡಿಸುವ, ಭೈರಪ್ಪನವರ ಕಾದಂಬರಿಗಳಲ್ಲಿ ಕಾಣುವ ತಿಪಟೂರು ಮಂಡಿಯನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವ ನಾಗೇಶ್‌ರಂತಹ ಸಂವೇದನಾ ಶೀಲರನ್ನು ರಂಜಿತ ವರದಿಗಳ ಬೆನ್ನತ್ತಿ ಹೋಗುವ ದೃಶ್ಯ ಮಾಧ್ಯಮಗಳು ಅರ್ಥ ಮಾಡಿಕೊಳ್ಳದೆ ಹೋಯಿತೇಕೋ ಗೊತ್ತಿಲ್ಲ?

ಮನೆಯಂಗಳದಲ್ಲಿ ಹತ್ತು ಕಾರುಗಳನ್ನು ನಿಲ್ಲಿಸಿಕೊಳ್ಳದ, ಹಿಂದು ಮುಂದು ಸಫಾರಿ ಸೂಟುಧಾರಿಗಳೊಂದಿಗೆ ಅಡ್ಡಾಡದ, ನೋಡಿದರೆ ಯಾರೋ ಆರೆಸ್ಸೆಸ್ ಪ್ರಚಾರಕರಿರಬೇಕು ಎನ್ನುವಂತೆ ಕಾಣುವ ಆ ಸಜ್ಜನ ವ್ಯಕ್ತಿಯನ್ನು ಅದು ಅನ್ಯತಾ ಚಿತ್ರಿಸಲು ಸಾಧ್ಯವಾದದ್ದು ಹೇಗೆ? ಅಷ್ಟಕ್ಕೂ ತಿಪಟೂರು ಅವರನ್ನು ಮರೆಯುವುದಾದರೂ ಹೇಗೆ? ಸರ್ಕಾರಿ ಇಲಾಖೆಗಳ ಸವಾಲುಗಳ ನಡುವೆಯೂ ಎಲ್ಲಾ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಜನರಿಗೆ ಉತ್ತಮ ಆಡಳಿತಕ್ಕೆ ಆದ್ಯತೆ ನೀಡಿದ, ಅಭಿವೃದ್ಧಿ ಕೆಲಸಗಳಲ್ಲಿ ಸ್ಥಳೀಯರನ್ನು ಸೇರಿಸಿಕೊಂಡು ಕಾರ್ಯನಿರ್ವಹಿಸುವ ಅಪರೂಪದ ವ್ಯಕ್ತಿತ್ವ ನಾಗೇಶ್ ಅವರದ್ದು. ಇನ್ನು ಕ್ಷೇತ್ರದ ನಾಗರಿಕರನ್ನು ಮಾತನಾಡಿಸಿದರೆ ಅಲ್ಲಿನ ಜನಸ್ನೇಹಿ ವಾತವರಣವಿರುವ ಪೋಲಿಸ್ ಠಾಣೆಗಳು, ಉತ್ತಮ ಆಸ್ಪತ್ರೆ ಸೌಲಭ್ಯ, ಕುಡಿಯುವ ನೀರಿನ ಪೂರೈಕೆ, ಮಾದರಿ ದೇವಸ್ಥಾನಗಳತ್ತ ಬೊಟ್ಟು ಮಾಡುತ್ತಾರೆ. ಹೂಳೆತ್ತಿದ ಕೆರೆಗಳಲ್ಲಿ ತುಂಬಿದ ಜಲ ಸಮೃದ್ಧಿ ನಾಗೇಶ ಅವರ ಜನಸ್ನೇಹದ ಕಥೆಯನ್ನು ಹೇಳುತ್ತದೆ. ಮಣ್ಣಿನ ರಸ್ತೆಗಳೇ ಹೆಚ್ಚಿದ್ದಂತಹ ಕ್ಷೇತ್ರದಲ್ಲಿ ಈಗ 90% ಡಾಂಬರಿಕರಣಗೊಂಡಿರುವ ರಸ್ತೆಗಳು ಕಾಣಸಿಗುತ್ತವೆ. ಜಾತಿ ಆಧಾರಿತ ರಾಜಕೀಯ ಪ್ರವೃತ್ತಿ ಚಾಲ್ತಿಯಲ್ಲಿರುವ ಈ ಕಾಲದಲ್ಲಿಯೂ ನಾಗರಿಕರೆಲ್ಲರೂ ಅವರ ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತದ ಕಾರಣಕ್ಕೆ ಕೈ ಹಿಡಿದಿದ್ದಾರೆ. ಜನರ ಕುಂದುಕೊರತೆಗಳನ್ನು ಆಲಿಸುವ, ತಕ್ಷಣಕ್ಕೆ ಕೈಗೆ ಸಿಗುವ ಸೇವಾ ಮನೋಭಾವ, ಬೇಡಿಕೆ ಆಧಾರಿತ ಕೆಲಸಗಳಿಗೆ ಒತ್ತನ್ನು ನೀಡದೇ ಅವಶ್ಯಕತೆಗೆ ಅನುಗುಣವಾಗಿ ಕೆಲಸ ಮಾಡುವ ಅವರ ಶೈಲಿ ಅವರನ್ನು ವಿಭಿನ್ನ ರಾಜಕಾರಣಿಯಾಗಿ ನಿಲ್ಲಿಸುತ್ತದೆ.

ಇಂಜಿನಿಯರಿಂಗ್ ಪದವೀಧರರಾದರೂ ಸರಳತೆ, ಸುಸಂಸ್ಕೃತ ನಡೆಗೆ ಹೆಸರಾದ ನಾಗೇಶ್ ಅವರು ಯಾವಾಗಲೂ ತಮ್ಮ ಕೆಲಸಗಳಲ್ಲಿ ಹೊಸತನ್ನು ಅಳವಡಿಸಿಕೊಂಡು, ತಂತ್ರಜ್ಞಾನ, ಗುಣಮಟ್ಟಕ್ಕೆ ಆದ್ಯತೆ ನೀಡಿ, ಯೋಜಿತವಾಗಿ ಕಾರ್ಯಕ್ರಮ ರೂಪಿಸುವ ಪ್ರವೃತ್ತಿ ಹೊಂದಿರುವವರು. ಅವರ ಎಂಜಿನಿಯರಿಂಗ್ ಕ್ಷೇತ್ರದುದ್ದಕ್ಕೂ ಕಾಣಸಿಗುತ್ತದೆ. ಹೇಳುತ್ತಾ ಹೋದರೆ ಓರ್ವ ಮೌಲ್ಯಾಧಾರಿತ ರಾಜಕಾರಣಿಯ, ಸಿದ್ಧಾಂತ ನಿಷ್ಠ ಕಾರ್ಯಕರ್ತನೊಬ್ಬನ, ಗಾಂಧಿವಾದಿಯೊಬ್ಬನ ಪುಟಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಇಂದಿನ ಜಮಾನದಲ್ಲೂ ಇಂಥವರಿದ್ದಾರಲ್ಲ ಎಂಬ ಅಚ್ಚರಿಯೊಂದಿಗೆ ಇಂಥವರ ತೇಜೋವಧೆಯನ್ನು ಮಾಡುವವರೂ ಇರುವರಲ್ಲಾ ಎಂದು ವಿಷಾದವೂ ಆಗುತ್ತದೆ.

1 ಟಿಪ್ಪಣಿ Post a comment
  1. ಜುಲೈ 29 2021

    I have been impressed by his character.
    Close to all who approached him
    For help. It is pleasure to have
    Report that better person in
    Tumkur MP constituency.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments