ವಿಷಯದ ವಿವರಗಳಿಗೆ ದಾಟಿರಿ

ಜೂನ್ 19, 2020

ಅಂದು ಇತಿಹಾಸ ಬದಲಿಸಬಲ್ಲ ತಿಮ್ಮಯ್ಯನಿದ್ದರು, ಆದರೆ ಮೋದಿಯಂಥಾ ಪ್ರಧಾನಿಯಿರಲಿಲ್ಲ!

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

೧೫೮೦ರಿಂದಲೂ ಲಡಾಕ್ ಭಾರತೀಯ ಬುಡಕಟ್ಟು “ಸ್ಕಾರ್ಡೋ” ಜನಾಂಗದ ಅಧೀನದಲ್ಲಿದ್ದ ಪ್ರದೇಶ. ಟಿಬೇಟಿನೊಂದಿಗೆ ನಡೆಯುತ್ತಿದ್ದ ನಿರಂತರ ಯುದ್ಧಗಳಿಗೆ ಕೊನೆ ಹಾಡಬೇಕೆಂಬ ಉದ್ದೇಶದಿಂದ ೧೬೮೪ರಲ್ಲಿ ಲಡಾಕ್ ಮತ್ತು ಟಿಬೇಟ್ ಟಿಂಗ್ ಮೋಸ್ಗಂಗ್‌ನಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಒಪ್ಪಂದದ ಪ್ರಕಾರ ಪಾಂಗಾಂಗ್ ತ್ಸು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳೆಲ್ಲವೂ ಲಡಾಕಿನದ್ದು ಎಂದು ತೀರ್ಮಾನವಾಗಿತ್ತು. ಮುಂದೆ ಲಡಾಕ್ ಸಿಕ್ಖರ ಆಳ್ವಿಕೆಗೆ ಒಳಪಟ್ಟಾಗ ಮಹಾರಾಜ ಗುಲಾಬ್ ಸಿಂಗ್ ತನ್ನ ಸರದಾರ ಜೊರಾವರ ಸಿಂಹನನ್ನು ದಂಡಯಾತ್ರೆಗೆ ಕಳುಹಿಸಿದಾಗ ನಡೆದ ಒಂದು ಘಟನೆ ಅತ್ಯಂತ  ಕುತೂಹಲಕಾರಿಯಾಗಿದೆ.

ದಂಡಯಾತ್ರೆಗೆ ಹೊರಟ ಜೊರಾವರ ಸಿಂಹ ಸುಂದರ ಸರೋವರದ ದಂಡೆಯಲ್ಲಿ ಬೀಡುಬಿಟ್ಟಿದ್ದ. ಆದರೆ ಕುದುರೆಗಳು ಆ ನೀರನ್ನು ಕುಡಿಯದಿದ್ದಾಗ ಪ್ರತಿಜ್ಞೆಯೊಂದನ್ನು ಕೈಗೊಂಡು ಇದಕ್ಕಿಂತಲೂ ಸುಂದರವೂ, ವಿಶಾಲವೂ ಆದ ಸರೋವರದಲ್ಲಿ ನೀರು ಕುಡಿಸುತ್ತೇನೆ ಎಂದು ಆತ ಸಂಕಲ್ಪ ಮಾಡಿದನಂತೆ! ಅದರಂತೆ ಜೊರಾವರ ಸಿಂಹ ಮುಂದುವರಿದು ಕೈಲಾಸ ಮಾನಸ ಸರೋವರದಲ್ಲಿ ಮನಸೋ ಇಚ್ಛೆ ಮಿಂದನಂತೆ. ಇವು ಸಿಕ್ಖ್ ಲಾವಣಿಗಳಲ್ಲಿ ಮಾತ್ರವಲ್ಲ, ಆಧುನಿಕ ಮಿಲಿಟರಿ ಇತಿಹಾಸದಲ್ಲೂ ದಾಖಲಾಗಿದೆ(Prepare Or Perish-page76). ಅಂದರೆ ಪಾಂಗಾಂಗ್ ಮಾತ್ರವಲ್ಲ ಮಾನಸ ಸರೋವರವೂ ಒಂದು ಕಾಲದಲ್ಲಿ ಭಾರತೀಯರ ಅನದಲ್ಲಿದ್ದ ಭೂಭಾಗವಾಗಿತ್ತು ಎನ್ನುವುದಕ್ಕೆ ಭರಪೂರ ಸಾಕ್ಷಿಗಳಿವೆ ಎಂದಾಯಿತು. ಅಷ್ಟೇ ಅಲ್ಲ, ೧೮೪೨ರಲ್ಲಿ ಜೊರಾವರ ಸಿಂಹನಿಗೆ ಹೆದರಿದ ಟಿಬೇಟ್ ಶಾಂತಿ ಮಾತುಕತೆಗೆ ಮುಂದಾಯಿತು. ಜೊತೆಗೆ ಟಿಬೇಟ್ ಎಡವಟ್ಟೊಂದನ್ನು ಮಾಡಿಕೊಂಡಿತು. ಏಕೆಂದರೆ ಮಾತುಕತೆಯಲ್ಲಿ ಒಂದೆಡೆ ಜೊರಾವರ ಸಿಂಹ ಕುಳಿತಿದ್ದರೆ ಇನ್ನೊಂದೆಡೆ ಲ್ಹಾಸಾದ ದಲೈ ಲಾಮಾನೊಂದಿಗೆ ಸ್ವತಃ ಚೀನಾದ ಅರಸ ಕುಳಿತಿದ್ದ! ಇದು ಮುಂದಿನ ಭಯಾನಕ ಇತಿಹಾಸವೊಂದಕ್ಕೆ ಸಾಕ್ಷಿಯಾಗಲಿದೆ ಎಂಬುದು ಅಂದು ಟಿಬೇಟಿನ ಲಾಮಾನಿಗೂ ಗೊತ್ತಿರಲಿಲ್ಲ, ಜೊರಾವರ ಸಿಂಹನಿಗೂ ಗೊತ್ತಿರಲಿಲ್ಲ. ಚೀನಾದ ಅರಸ ಮಾತುಕತೆಯನ್ನು ಎಷ್ಟೊಂದು ಎಳೆದನೆಂದರೆ ಶ್ರೀನಗರದಿಂದ ದಿವಾನ್ ಹರಿಚಂದ್ ಮತ್ತು ವಜೀರ ರತನು ಆಗಮಿಸಿ ಟಿಬೇಟಿನ ಹಕ್ಕನ್ನು ಸಂಪೂರ್ಣ ಬಿಟ್ಟುಕೊಡಬೇಕಾಯಿತು. ಭಾರತ ಹಾಗೆ ಮಾಡಲು ಇದ್ದ ಏಕೈಕ ಕಾರಣ ಟಿಬೇಟಿನ ಸಾಂಸ್ಕೃತಿಕ ಬೇರುಗಳು ಮತ್ತು ಲಾಮಾನ ಸಾತ್ವಿಕತೆ. ಮುಂದೆ ಬ್ರಿಟಿಷ್ ಆಳ್ವಿಕೆಯಲ್ಲಿ ಕೂಡಾ ಲಡಾಕಿನ್ನು ಕಾಶ್ಮೀರದ್ದು ಎಂದು ತೀರ್ಮಾನಿಸಿ ಗಡಿ ಕೂಡಾ ನಿರ್ಧರಿಸಲಾಗಿತ್ತು. ಅದಕ್ಕೆ ಆಸ್ಥೆ ವಹಿಸಿದ್ದವನು ಬ್ರಿಟಿಷ್ ಕಮಿಷನರ್ ಕನ್ನಿಂಗ್ ಹ್ಯಾಂ. ಅಲ್ಲಿಗೆ ಎಲ್ಲವೂ ಮುಗಿಯಿತು ಎಂದು ಭಾರತ ಭಾವಿಸಿತ್ತು. ಆದರೆ ಅಸಲಿ ಸಂಗತಿ ಆರಂಭವಾಗಿದ್ದೇ ಅಲ್ಲಿಂದ.

ಏಕೆಂದರೆ ಚೀನಾ ಟಿಬೇಟ್ ಮತ್ತು ಲಡಾಕಿನ ಮೇಲೆ ಒಂದು ಕಣ್ಣಿಟ್ಟಿತ್ತು. ಟಿಬೇಟಿನ ಯಾವುದೋ ಒಂದು ಜುಟ್ಟು ಚೀನಾದ ಕೈಯಲ್ಲಿತ್ತು. ಅಥವಾ ಚೀನಾದ ಮುಂದೆ ಟಿಬೇಟ್ ಗುಬ್ಬಿಮರಿಯಾಗಿತ್ತು. ಟಿಬೇಟಿನ ಮೂಲಕ ಲಡಾಕನ್ನೂ ವಶಪಡಿಸಿಕೊಳ್ಳುವ ಆಸೆ ಚೀನಾಕ್ಕೆ ದಿನದಿಂದ ದಿನಕ್ಕೆ ಮೊಳೆಯುತ್ತಲೇ ಇತ್ತು. ಚೀನಾದ ಈ ಆಸೆಗೆ ಇದ್ದ ಮುಖ್ಯ ಕಾರಣಗಳು ಮೂರು. ಲ್ಹಾಸಾ, ಮಾನಸ ಸರೋವರ ಮತ್ತು ಗಲ್ವಾನ್ ಕಣಿವೆ/ಪಾಂಗಾಂಗ್ ತ್ಸು. ಇವು ಮೂರೂ ಸಾಮರಿಕ ದೃಷ್ಟಿಯಿಂದ ಆಯಕಟ್ಟಿನವು. ಆದರೆ ಉಪ್ಪುನೀರಿನ ಪಾಂಗಾಂಗ್ ತ್ಸು ಕಣಿವೆ ಮೂಲಕ ಸ್ಕಾರ್ಡೋ ಬುಡಕಟ್ಟು, ಸಿಕ್ಖ್, ಮೊಘಲ್ ಮತ್ತು ಬ್ರಿಟಿಷರು ಶ್ರೀಮಂತರಾಗಿದ್ದಾರೆ ಎಂದು ಚೀನಾ ಭಾವಿಸಿತ್ತು. ಲಡಾಕ್ ಮೂಲಕ ಚೀನಾ ಗಿಲ್ಗಿಟ್-ಬಾಲ್ಟಿಸ್ಥಾನ್ ಮತ್ತು ಮತ್ತು ಏಷ್ಯಾದವರೆಗೂ ಮುಂದುವರಿಯಬಹುದಿತ್ತು. ಶ್ರೀಮಂತಿಕೆ ತರಬಲ್ಲ ಈ ದಾರಿ ಚೀನಾಕ್ಕೆ ಲ್ಹಾಸಾಕ್ಕಿಂತಲೂ ಮುಖ್ಯವಾಗಿತ್ತು. 

ಸ್ವಾತಂತ್ರ್ಯಾನಂತರ ಚೀನಾದ ಈ ತಂತ್ರವನ್ನು ಮೊಟ್ಟಮೊದಲ ಬಾರಿಗೆ ಅರಿತವರು ಜನರಲ್ ಕೆ.ಎಸ್. ತಿಮ್ಮಯ್ಯನವರು ಮತ್ತು ಕೊನೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್! ಮೌಂಟ್‌ಬ್ಯಾಟನನಿಗೆ ಈ ಸಂಗತಿಯಿಂದ ಆಗಬೇಕಾದುದೇನೂ ಇರಲಿಲ್ಲ. ಹಾಗಾಗಿ ಲಡಾಕನ್ನು ಉಳಿಸಬಲ್ಲವರೊಬ್ಬರೇ ತಿಮ್ಮಯ್ಯ! 

೧೯೫೩ರ ಜನವರಿಯಲ್ಲಿ ತಿಮ್ಮಯ್ಯನವರು ಲೆ.ಜ. ರ್ಯಾಂಕಿಗೇರಿ ಶಿಮ್ಲಾದಲ್ಲಿ ಕೇಂದ್ರ ಕಛೇರಿ ಹೊಂದಿದ್ದ ಟ್ರೈನಿಂಗ್ ಕಮಾಂಡಿಗೆ ತೆರಳಿದರು. ಶಿಮ್ಲಾದಲ್ಲಿ ತಿಮ್ಮಯ್ಯನವರಿಗೆ ಉತ್ತರಖಂಡ್ ಮತ್ತು ಕಾಶ್ಮೀರದ ಗಡಿಯ ಹೆಚ್ಚುವರಿ ಹೊಣೆಯನ್ನೂ ನೀಡಲಾಗಿತ್ತು. ಒಂದು ದಿನ ಕಡತಗಳ ಅಧ್ಯಯನ ಮಾಡುತ್ತಿದ್ದಾಗ ಮೊಟ್ಟಮೊದಲು ಅವರಿಗೆ ಗೋಚರಿಸಿದ್ದು ಈ ಪಾಂಗಾಂಗ್ ತ್ಸು ಮತ್ತು ಗಲ್ವಾನ್ ಕಣಿವೆಯ ಮಹತ್ವ ಮತ್ತು ಚೀನಾದೊಂದಿಗೆ ಗಡಿ ಹಂಚಿಕೊಂಡ ಪ್ರದೇಶಗಳಲ್ಲೆವೂ ಸಮಸ್ಯೆಗಳ ಆಗರಗಳಾಗುತ್ತಿವೆ ಎಂಬುದು. ಆ ಸಂಗತಿಯನ್ನು ತಿಮ್ಮಯ್ಯನವರು ತನ್ನ ಸಹ ಅಕಾರಿಗಳೊಂದಿಗೆ, “ನನಗೆ ಪರಿಸ್ಥಿತಿ ಎರಡನೆಯ ಮಹಾಯುದ್ಧದ ಬರ್ಮಾ ಯುದ್ಧದ ಪರಿಸ್ಥಿತಿಗಿಂತ ಭಿನ್ನವಾಗೇನೂ ಕಾಣಿಸುತ್ತಿಲ್ಲ” ಎಂದು ಹೇಳಿಕೊಂಡಿದ್ದರು (Thimmayya: An Amazing Life, Brig. Chandra B. Khanduri, page 208). ಅದರಲ್ಲೂ ಅವರಿಗೆ ಅತ್ಯಂತ ಸವಾಲಾಗಿ ಕಂಡಿದ್ದು ಲಡಾಕ್ ಭಾಗದಲ್ಲಿ ಚೀನಾದ ಕಲರವ.

ತಿಮ್ಮಯ್ಯನವರಿಗೆ ಇತಿಹಾಸ ಪ್ರಜ್ಞೆಯಿತ್ತು, ಗಡಿಯ ಬಗ್ಗೆ ಸ್ಪಷ್ಟತೆಯಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಟಿಬೇಟಿನವರೆಗೂ ಭಾರತ ಚಾಚಿಕೊಂಡಿದೆ ಎನ್ನುವುದಕ್ಕೆ ಅವರ ಬಳಿ ಸಾಕ್ಷಿಗಳಿದ್ದವು. ಹಾಗಾಗಿ ಅವರಿಗೆ ಟಿಬೇಟನ್ನು ದಾಳವಾಗಿ ಬಳಸಿಕೊಂಡ ಚೀನಾ ಲಡಾಕನ್ನು ನುಂಗಲು ಹೊಂಚುಹಾಕುತ್ತಿದೆ ಎನ್ನುವ ವಾಸನೆ ಸುಲಭವಾಗಿ ಹತ್ತಿತು. ತಿಮ್ಮಯ್ಯ ಅಂದಾಜಿಸಿದಂತೆಯೇ ಚೀನಾ ಕೆಲವೇ ತಿಂಗಳುಗಳಲ್ಲಿ ಅಕ್ಸಾಯ್ ಚಿನ್ ಭಾಗದಲ್ಲಿ ಕಾಮಗಾರಿಗಳನ್ನು ನಡೆಸಲಾರಂಭಿಸಿಯೇಬಿಟ್ಟಿತು. ಸರಿಯಾಗಿ ಅದೇ ಹೊತ್ತಿನಲ್ಲಿ ಮೌಂಟ್‌ ಬ್ಯಾಟನ್‌ನಿಂದ ಒಂದು ಪತ್ರವೂ ತಿಮ್ಮಯ್ಯನವರಿಗೆ ಬಂತು! ಅದರಲ್ಲಿ “ಯಾವುದೇ ಕಾರಣಕ್ಕೂ ಚೀನಾವನ್ನು ನಂಬುವಂತಿಲ್ಲ, ಎಚ್ಚರಿಕೆಯಿಂದಿರಿ” ಎಂಬ ಸಂದೇಶವಿತ್ತು. ವಿಚಿತ್ರವೆಂದರೆ ಮೌಂಟ್‌ಬ್ಯಾಟನ್ ತನ್ನ ನೆಚ್ಚಿನ ಗೆಳೆಯನಿಗೆ ಹೇಳದ ಸಂಗತಿಯನ್ನು ತಿಮ್ಮಯ್ಯನವರಿಗೆ ಹೇಳಿದ್ದರು! ಹಾಗಾದರೆ ಮೌಂಟ್‌ ಬ್ಯಾಟನನಿಗೂ ನೆಹರೂ ದಡ್ಡತನದ ಅರಿವಿತ್ತೇ? ಆತನಿಗೆ ಹೇಳಿದರೂ ವ್ಯರ್ಥ ಎನ್ನುವ ಭಾವನೆಯಿತ್ತೇ? ಅಥವಾ ವೈಯಕ್ತಿಕವಾದ ದ್ವೇಷವೇನಾದರೂ ಇತ್ತೇ? ಏನೇ ಇರಲಿ, ಅಂದಿನ ಸರ್ಕಾರ “ಪಂಚಶೀಲ”ದ ಅಮಲಿನಲ್ಲಿ ತೇಲಾಡುತ್ತಿತ್ತು ಮತ್ತು ಕಮ್ಯುನಿಸ್ಟರನ್ನು ಇನ್ನಿಲ್ಲದಂತೆ ಕೊಂಡಾಡುತ್ತಿತ್ತು. ಅದರೆ ತಿಮ್ಮಯ್ಯನವರಿಗೆ ಸಿದ್ಧಾಂತಗಳ ಅಮಲಿಗಿಂತ ದೇಶ ಮತ್ತು ಸೈನಿಕ ಮುಖ್ಯನಾಗಿದ್ದ. ನೇರವಾಗಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಲಡಾಕಿನ ಸಮಗ್ರ ಪರಿಸ್ಥಿತಿಯನ್ನು ವಿವರಿಸಿ ಕೆಲವು ಬೇಡಿಕೆಗಳನ್ನು ಮುಂದಿಟ್ಟರು. ಆದರೆ ನೆಹರೂ ತಿಮ್ಮಯ್ಯನವರಿಗೆ ಪ್ರತ್ಯುತ್ತರ ಬರೆಯುವ ಬದಲು ಚೌ ಎನ್ ಲಾಯ್‌ಗೆ ಪತ್ರ ಬರೆದರು! ಏಕಾಏಕಿ ತಿಮ್ಮಯ್ಯನವರನ್ನು ದಕ್ಷಿಣ ಕಮಾಂಡಿನ ಮುಖ್ಯಸ್ಥರಾಗಿ ಪುಣೆಗೆ ವರ್ಗಾಯಿಸಿದರು! ಮೂರು ಬಾರಿ ಚೌ ಎನ್ ಲಾಯ್‌ನನ್ನು ದೆಹಲಿಗೆ ಆಮಂತ್ರಿಸಿ ಪಾರ್ಟಿ ಕೊಟ್ಟರು. ಈ ಮೂರೂ ಭೇಟಿಗಳಲ್ಲಿ ನೇಫಾದ ಬಗ್ಗೆ ಮಾತುಕತೆಗಳು ನಡೆದವೇ ಹೊರತು ಲಡಾಕಿನ ಪ್ರಸ್ಥಾಪವೇ ಆಗಲಿಲ್ಲ. (Thimayya of india;Humphery evans)

ಎರಡು ವರ್ಷಗಳ ಕಾಲ ದಕ್ಷಿಣ ಕಮಾಂಡಿನಲ್ಲಿದ್ದ ತಿಮ್ಮಯ್ಯನವರು ೧೯೫೭ರಲ್ಲಿ ಸೇನಾ ಮುಖ್ಯಸ್ಥರಾದರು. ದೆಹಲಿಗೆ ಬಂದು ಲಡಾಕಿನತ್ತ ಕಣ್ಣುಹಾಯಿಸಿದಾಗ ಅವರಿಗೆ ಕಂಡಿದ್ದು ಭೀಕರವಾದ ದೃಶ್ಯ. ಗಲ್ವಾನ್ ಮತ್ತು ಪಾಂಗಾಂಗ್ ಸರೋವರದ ಆಸುಪಾಸಿನಲ್ಲಿ ಚೀನಾ ಬರೋಬ್ಬರಿ ೧೦ ಡಿವಿಶನ್‌ಗಳನ್ನು (೧೦ ಡಿವಿಶನ್ ಎಂದರೆ ಕನಿಷ್ಠ ಒಂದು ಲಕ್ಷ ಸೈನಿಕರು) ಗಳನ್ನು ಮತ್ತು ಒಂದು ಸಂಪೂರ್ಣ ಸ್ಕ್ವಾಡ್ರನ್ ಅನ್ನು ಜಮಾವಣೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳುತ್ತಿತ್ತು. ತಿಮ್ಮಯ್ಯನವರು ನೇರವಾಗಿ ಪ್ರಧಾನ ಮಂತ್ರಿಗಳಿಗೆ ಫೋನ್ ಮಾಡಿ ಭೇಟಿಗೆ ಸಮಯ ಕೇಳಿದರು. ನೆಹರೂ ಸಮಯವನ್ನೇನೋ ಕೊಟ್ಟರು. ಆದರೆ ಸಭೆಯಲ್ಲಿ ಎಲ್ಲವನ್ನೂ ಕೇಳಿಸಿಕೊಂಡರೂ ನೆಹರೂ ತುಟಿಪಿಟಿಕ್ಕೆನ್ನದೆ ಸುಮ್ಮನೆ ಕುಳಿತರು. ಆದರೆ ರಕ್ಷಣಾ ಸಚಿವ ಕೃಷ್ಣ ಮೆನನ್ The enemy is on other side. ignore China ಎಂಬ ಮಹಾನ್ ಬುದ್ಧಿವಾದವನ್ನು ತಿಮ್ಮಯ್ಯನವರಿಗೆ ಕೊಟ್ಟ. ನೋವಿನಿಂದ ಹೊರಬಂದ ತಿಮ್ಮಯ್ಯ ಗಡಿಯುದ್ದಕ್ಕೂ ಪ್ರವಾಸ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಜಮ್ಮುವಿನಲ್ಲಿದ್ದ ೨೬ನೇ ಇನೆಂಟ್ರಿ ಡಿವಿಶನ್ ಮತ್ತು ಅಂದು ಶ್ರೀನಗರದಲ್ಲಿದ್ದ (ಇಂದು ಜಲಂಧರ್ ನಲ್ಲಿದೆ) ೧೧ನೇ ಕೋರ್ ಅನ್ನು ಲಡಾಕಿಗೆ ರವಾನಿಸಿದರು. ಐಬಿ ಮತ್ತು ಪೊಲೀಸ್ ವ್ಯವಸ್ಥೆಗಳು ಮಿಲಿಟರಿಯ ಅಡಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ತಾಕೀತು ಮಾಡಿದರು. ಪಾಂಗಾಂಗ್ ಮತ್ತು ಸ್ಪಂಗುರ್ ಸರೋವರದತ್ತ ನಿಯಂತ್ರಣ ಸಾಸಲು ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ಶ್ರೀನಗರದಿಂದ ಸಿ೧೧೯ ಟ್ಯಾಂಕರುಗಳನ್ನು ರವಾನಿಸಿದರು. 

ಅಷ್ಟರಹೊತ್ತಿಗೆ ವಿರೋಧ ಪಕ್ಷಗಳು ನೆಹರೂ ನಡೆಯನ್ನು ಟೀಕಿಸಲಾರಂಭಿಸಿದವು. ಆಗ ನೆಹರೂ, “ಭಾರತಕ್ಕೆ ಆಕ್ರಮಣದ ಭೀತಿಯೇನೂ ಇಲ್ಲ, ನಮ್ಮ ನೆರೆಹೊರೆ ಹಾಗೆಂದೂ ಮಾಡದು ಎಂಬ ಗ್ಯಾರಂಟಿಯನ್ನು ನಾನು ಕೊಡುತ್ತೇನೆ” ಎಂದು ಸಂಸತ್ತಿನಲ್ಲಿ ಘೋಷಿಸಿದ್ದರು. ಕೆಲ ದಿನಗಳ ನಂತರ ಬಿಬಿಸಿಗೆ ಪ್ರತಿಕ್ರಯಿಸುತ್ತಾ, “ನಾವು ಶಾಂತಿಯಲ್ಲಿ ನಂಬಿಕೆ ಇರಿಸಿದ್ದೇವೆ. ಆಯುಧಗಳಿಲ್ಲದೆಯೇ ನಾವು ಗೆಲ್ಲಬಲ್ಲೆವು” ಎಂದು ತತ್ತ್ವಶಾಸಜ್ಞನಂತೆ ಮಾತಾಡಲಾರಂಭಿಸಿದರು! ನೆಪ ಮಾತ್ರಕ್ಕೆ ಮೆ.ಜ. ಜೆ.ಎನ್ ಚೌಧರಿ, ಕಮಾಡೋರ್ ಚತುರ್ವೇದಿ ಮತ್ತು ಏರ್ ಕಮಾಡೋರ್ ಪಿ.ಎಲ್ ಲಾಲ್ ಅವರನ್ನೊಳಗೊಂಡ ನಿಯೋಗವನ್ನು ಚೌ ಎನ್ ಲಾಯ್ ಮತ್ತು ಚೀನಾ ಸೇನಾ ಮುಖ್ಯಸ್ಥ ಚಿಯಾನ್ ಯಿ ಅವರೊಂದಿಗೆ ಮಾತುಕತೆ ನಡೆಸುವ ನಾಟಕವಾಡಿದರು. ಆದರೆ ಮಾತುಕತೆ ಮುಗಿಸಿದ ನಂತರ ಈ ಅಧಿಕಾರಿಗಳು ತಿಮ್ಮಯ್ಯನವರ ಮುಂದೆ, “ಚೀನಾ ನಮ್ಮ ಗೆಳೆಯನಾದರೆ ಸಂತೋಷ. ಆದರೆ ಅವರು ವಿಧ್ವಂಸಕ ಮನಃಸ್ಥಿತಿಯ ಜನರು” ಎಂದಿದ್ದರು. ಇಷ್ಟೆಲ್ಲಾ ಅದ ನಂತರ ಕೂಡಾ ನೆಹರೂ ೧೯೬೦ರಲ್ಲಿ ಮತ್ತೊಮ್ಮೆ ಚೌ ಎನ್ ಲಾಯ್‌ನನ್ನು ದೆಹಲಿಗೆ ಕರೆಸಿ ಊಟ ಹಾಕಿಸಿದರು. ಎರಡೇ ವರ್ಷದಲ್ಲಿ ಚೀನಾ ಭಾರತಕ್ಕೆ ಗೂಟ ಇಟ್ಟಿತು. ಅಷ್ಟರ ಹೊತ್ತಿಗೆ ತಿಮ್ಮಯ್ಯ ನಿವೃತ್ತರಾಗಿ ವಿಶ್ವಸಂಸ್ಥೆಯ ಜನರಲ್ ಆಗಿದ್ದರು. ಪಾಂಗಾಂಗ್ ಸರೋವರದ ನಡುಮಧ್ಯೆ ಗಡಿರೇಖೆ ಎಂಬ ರಾಜಿಗೆ ನೆಹರೂ ಒಪ್ಪಿಕೊಂಡೂಬಿಟ್ಟಿದ್ದರು. ಜೊರಾವರ ಸಿಂಹನ ಪ್ರತಿಜ್ಞೆಯನ್ನು ನೆಹರೂ ಮಣ್ಣುಪಾಲು ಮಾಡಿದ್ದರು.

ಇವುಗಳನ್ನು ಇತಿಹಾಸದ ತಥ್ಯಗಳೆನ್ನಿ, ಮೊನ್ನೆಯ ಘಟನೆಗೆ ಕಾರಣವಾದವುಗಳೆನ್ನಿ, ಸಮಸ್ಯೆಯ ಮೂಲಗಳೆನ್ನಿ ಅಥವಾ ಸಮಸ್ಯೆಯನ್ನು ಸರಿಪಡಿಸುವ ಹೊತ್ತಲ್ಲಾಗುವ ಕಳೆದುಕೊಳ್ಳುವಿಕೆಯೆಂದೇ ಎನ್ನಿ. ಆದರೆ ತಿಮ್ಮಯ್ಯನೊಬ್ಬನಿದ್ದಂತೆ ಅಂದು ಮೋದಿಯಂಥಾ ಪ್ರಧಾನಿಯೊಬ್ಬನಿದ್ದಿದ್ದರೆ ಎನ್ನುವ ಕಾರಣಕ್ಕೆ ಈ ಇತಿಹಾಸ ನೆನಪಾಗುತ್ತವೆ. ಪ್ರಸ್ತುತವೂ ಆಗುತ್ತದೆ. 

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments