ವಿಷಯದ ವಿವರಗಳಿಗೆ ದಾಟಿರಿ

ಜೂನ್ 19, 2020

1

ಗಲ್ವಾನ್ ಗಲಾಟೆ – ಭಾರತ ಚೀನಾ ತಗಾದೆಯ ಒಳಸುಳಿಗಳು

‍ನಿಲುಮೆ ಮೂಲಕ

– ರಾಘವೇಂದ್ರ ಸುಬ್ರಹ್ಮಣ್ಯ

1962 ಭಾರತಕ್ಕೆ ಕಹಿನೆನಪುಗಳನ್ನು ಕೊಟ್ಟ ವರ್ಷ. 1950ರ ಟಿಬೇಟ್ ಆಕ್ರಮಣದ ಕೆಲವೇ ದಿನಗಳನಂತರದ ಪತ್ರದಲ್ಲೇ ಸರ್ದಾರ್ ಪಟೇಲರು ನೆಹರೂಗೆ ನಮ್ಮ ನಿಜವಾದ ಶತ್ರು ಯಾರು ಅಂತಾ ತಿಳಿಸಿಕೊಟ್ಟಿದ್ದರೂ (7 November 1950ರ ಪತ್ರ, ಲಿಂಕ್ ಕಮೆಂಟಿನಲ್ಲಿದೆ), ನೆಹರೂ ನಿರ್ಲಕ್ಷ್ಯದಿಂದಾಗಿ ಚೀನಾ ಬೆಳೆಯುತ್ತಲೇ ಹೋಯಿತು, ತನ್ನ ಬೇಳೆ ಬೆಳೆಸಿಕೊಳ್ಳುತ್ತಲೇ ಹೋಯಿತು. 62ರ ಯುದ್ಧವೂ ನಡೆಯಿತು. ನಮ್ಮ ದುರಾದೃಷ್ಟವೋ, ಅಥವಾ ಚೀನಾದ ಅಪಾರ ಆಳದ ಇಂಟೆಲಿಜೆನ್ಸೋ, ಅಥವಾ ಕಾಕತಾಳಿಯವೋ ಎಂಬಂತೆ ಅಮೇರಿಕಾ ಮತ್ತು ರಷ್ಯಾ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಇಲ್ಲವಾದಲ್ಲಿ ಬೇರೇನಲ್ಲದಿದ್ದರೂ ನಾನೇ ದೊಡ್ಡಣ್ಣ ಅಂತಾ ತಿಳಿಸಿಕೊಡಲಿಕ್ಕೆ ಅಮೇರಿಕವೂ, ನೆಹರೂವಿನ ಖಾಸಾ ದೋಸ್ತು ಅಂತೆನಿಸಿಕೊಂಡಿದ್ದ ನಿಖಿತಾ ಕ್ರುಶ್ಚೇವನ ರಷ್ಯಾವೂ ಖಂಡಿತಾ ಭಾರತದ ಪರವಾಗಿ ನಿಲ್ಲುತ್ತಿದ್ದವು. ಡ್ರಾಗನ್ ತನ್ನ ಬಾಲ ಮುದುರಲೇಬೇಕಿತ್ತು. (ಚೀನಾ ತನ್ನ ಆಕ್ರಮಣವನ್ನು ಕ್ಯೂಬನ್ ಮಿಸೈಲ್ ಕ್ರೈಸಿಸ್ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಿದ್ದು ಕಾಕತಾಳಿಯವಲ್ಲ, ಅದಕ್ಕೆ ಕ್ಯೂಬಾದ ಕಥೆಯ ಬಗ್ಗೆ ಮೊದಲೇ ಗೊತ್ತಿತ್ತು ಎಂಬುದೊಂದು ಕಾನ್ಸ್ಪಿರಸಿ ಥಿಯರಿ).

ಹೋಗಲಿ ಬಿಡಿ. ಆದದ್ದಾಯಿತು. ಭಾರತಕ್ಕೆ 62ರ ರಕ್ತದ ಕಲೆಯಂತೂ ಮಾಸಲಿಲ್ಲ. ಆದರೆ ನನಗೆ ಬೇಸರ ಅದಲ್ಲ. ನಮ್ಮ ನೆನಪೂ ಸಹ 62ಕ್ಕೇ ಮೀಸಲಾಗಿ ನಿಲ್ಲುತ್ತದೆಯೇ ಹೊರತು ಅದಾದ ಮೇಲೆ ನಾವು ಅಂದರೆ ಭಾರತದವರು ಕಡಿದುಕಟ್ಟೆಹಾಕಿದ್ದು ಏನೂ ಇಲ್ಲ. ನೆಹರೂನನ್ನೇ ಬೈಕಂಡು ಕೂತಿದ್ದೇವೆಯೇ ಹೊರತು ರಾಜತಾಂತ್ರಿಕವಾಗಿ, ಆರ್ಥಿಕವಾಗಿ, ವೈಜ್ಞಾನಿಕವಾಗಿ ಚೀನಾಕ್ಕೆ ಎದುರೇಟು ಕೊಟ್ಟಿದ್ದೇನೂ ಇಲ್ಲ. 1950ರ ಚೀನಾದ ಟಿಬೇಟ್ ಆಕ್ರಮಣವನ್ನು ಟೀಕಿಸಿದ ನೆಹರೂವನ್ನು ಶಿಕ್ಷಿಸಲು ಚೀನಾ 1962ರ ಆಕ್ರಮಣ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿತು. 1966ರಲ್ಲಿ ಚೀನಾ ಭೂತಾನ್ ಅನ್ನು ಆಕ್ರಮಿಸಲು ಪ್ರಯತ್ನಿಸಿದಾಗ ಚೀನಾದ ಪ್ರಯತ್ನವನ್ನು ಟೀಕಿಸಿದ ಮತ್ತು ಭೂತಾನ್ ಪರವಾಗಿ ಹೋರಾಡಲು ತನ್ನ ಸೈನ್ಯ ಕಳಿಸಿದ್ದ ಇಂದಿರಾಳನ್ನು ಶಿಕ್ಷಿಸಲು ಚೀನಾ ಪ್ರಯತ್ನ ಮಾಡುತ್ತಲೇ ಹೋಯಿತು. ಇಂದಿಗೂ ಮಾಡುತ್ತಲೇ ಇದೆ. ಡೋಕ್ಲಾಮ್ ಚಕಮಕಿ ಬಗ್ಗೆ ಸ್ವಲ್ಪವಾದರೂ ರೀಸರ್ಚ್ ಮಾಡಿದವರಿಗೆ ಇದರಬಗ್ಗೆ ಗೊತ್ತಿರುತ್ತೆ. ಹೌದು, ಡೋಕ್ಲಾಮ್ ಗಲಾಟೆ ಇವತ್ತಿನದ್ದಲ್ಲ, 1966ರಿಂದ ನಡೆದುಕೊಂಡೂ ಬಂದಿರುವುದು. ಅದಾದ ಮೇಲೆ ಬಂದ ಎಲ್ಲಾ ಪ್ರಧಾನಿಗಳೂ ಚೀನಾಕ್ಕೆ ಸ್ವಲ್ಪ ಹೆದರಿಕೊಂಡೇ ಇದ್ದವರು, ಚಂದ್ರಶೇಖರ್ ಒಬ್ಬರನ್ನು ಬಿಟ್ಟರೆ. ಎನ್.ಡಿ.ಎ ಕೂಡಾ ಜಾರ್ಜ್ ಫರ್ನಾಂಡಿಸ್’ರಂತಹ ಎದೆಗಾರಿಕೆಯ ವ್ಯಕ್ತಿಯಿದ್ದರೂ ಸಹ (ಅದೂ ಸಹ ಕಟ್ಟಾ ಚೀನಾ ವಿರೋಧಿಯಾಗಿದ್ದ ವ್ಯಕ್ತಿ) ಯಾಕೋ ಚೀನಾ ವಿರುದ್ಧ ಮಂಕಾಯಿತು. ಸಿಂಗರ ಕಾಲವಂತೂ ಕೇಳುವುದೇ ಬೇಡ. ಆದರೆ 2013ರ ನಂತರವೂ ನಾವು ನೆಹರೂ-ಅಕ್ಸಾಯ್ ಚಿನ್-ಹಿಮಾಲಯನ್ ಬ್ಲಂಡರ್ ಅನ್ನುವ ಘೋಷಣೆಗಳನ್ನು ಬಿಟ್ಟರೆ ಚೀನಾಕ್ಕೆ ಅದರ ಭಾಷೆಯಲ್ಲೇ ಉತ್ತರಿಸಲು ಪ್ರಯತ್ನಿಸಿಲ್ಲ. ಬದಲಿಗೆ ನಮ್ಮ ದೇಶದಲ್ಲಿ ಹೆಚ್ಚೆಚ್ಚು ಚೀನಾ ಬೇರೂರಿತು. ಚೀನೀ ಕಂಪನಿಗಳ ಮೇಲೆ ಭಾರತ ಯಾವುದೇ ನಿಷೇಧ ಹೇರಿಲ್ಲ. ನಮ್ಮ ಸರ್ಕಾರ ಮತ್ತು ಖಾಸಗೀ ಕಂಪನಿಗಳು ಚೀನಿಯರಿಗೆ ಹೆಚ್ಚೆಚ್ಚು ಕಾಂಟ್ರಾಕ್ಟುಗಳನ್ನು ಕೊಟ್ಟಿವೆ. ಮೋದಿ ಮತ್ತೆ ಮತ್ತೆ ‘ವಿನ್ನಿ ದ ಪೂ’ವನ್ನು ಭೇಟಿಯಾದರು. ಅವರಿಲ್ಲಿಗೆ ಬಂದರು, ಇವರಲ್ಲಿಗೆ ಹೋದರು. ಭಾರತ ಇನ್ನೂ ಹೆಚ್ಚೆ ಚೀನಾದ ವಸ್ತುಗಳ ಮೇಲೆ ಅವಲಂಬಿತವಾಗುತ್ತಲೇ ಹೋಯ್ತು.

ಇಲ್ಲೊಂದು ಸಣ್ಣ ವಿಷಯ. ಮೇಲಿನದ್ದನ್ನು ಓದಿ, ಅಯ್ಯಯ್ಯೋ ನಾವು ಚೀನಾದ ಅಡಿಯಾಳಾ ಹಾಗಾದ್ರೆ!? ಅಂತಾ ಗಾಬರಿಯಾಗಬೇಡಿ. ಇವತ್ತಿಗೂ ಚೀನಾದ ಮಹಾನ್ ಆಸೆಗಳು ತುಂಬಿರುವ ಕಣ್ಣಿಗೆ ಕಸವಾಗಿ ನಿಂತಿರುವ ಒಂದೇ ಒಂದು ಹಾಗೂ ಅತೀ ದೊಡ್ಡ ದೇಶವೆಂದರೆ ಭಾರತ. ಜಗತ್ತಿನೆಲ್ಲೆಡೆ ಪ್ರಾಬಲ್ಯ ಸ್ಥಾಪಿಸಿರುವ ಚೀನಾದ ಮಹತ್ವಾಕಾಂಕ್ಷೆಗೆ ಅಡ್ಡವಾಗಿ ನಿಂತಿರುವುದು, ಹಾಗೂ ಅವರಷ್ಟಲ್ಲದಿದ್ದರೂ ವೇಗವಾಗಿ ಬೆಳೆಯುತ್ತಿರುವ ಭಾರತ ಚೀನಾಕ್ಕೆ ಸದಾ ವೈರಿಯೇ. ಗೊತ್ತಿಲ್ಲದೇ ನಾವೆಷ್ಟು ಚೀನಾದ ವಸ್ತುಗಳ ಮೇಲೆ ಅವಲಂಬಿತವೋ, ಗೊತ್ತಿಲ್ಲದೆಯೇ ಅವರೂ ನಮ್ಮ ಮಾರುಕಟ್ಟೆಯ ಮೇಲೆ ಅವಲಂಬಿತರು. #BanChineseProducts ನಂತಹ ಚಳುವಳಿಗಳು ಅದೆಷ್ಟು ಸೂಕ್ತ? ಅದೆಲ್ಲಾ ಆಗಿಹೋಗುವ ಮಾತಾ ಮಾರಾಯ್ರೆ? ಅಂತೆಲ್ಲಾ ಮೂಗುಮುರಿಯಬೇಡಿ. ಭಾರತವೇನಾದರೂ ಈಗಲೂ ಸಹ ವಾರವೊಂದರಲ್ಲಿ ಚೀನೀ ಪದಾರ್ಥಗಳ ಬಳಕೆಯನ್ನು 100% ಅಲ್ಲ ಕೇವಲ 20% ಇಳಿಸಿದರೂ ಚೀನಾದ ಸಪ್ಲೈ ಚೈನ್ ಉಸಿರುಗಟ್ಟಿ ಹೋಗುತ್ತದೆ. ಆದರೆ ಇಂತಹದ್ದೊಂದು ಚಳುವಳಿಯನ್ನು ನಡೆಸಲು ನಮಗೆ ಆ ಧೀಶಕ್ತಿ, ಆ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ನಿರ್ದೇಶನ ಬೇಕಷ್ಟೇ. ‘ವೋಕಲ್ ಫಾರ್ ಲೋಕಲ್’ ಅಂದರೇನು ಅನ್ನುವುದರ ಹಿಂದಿನ ಅರ್ಥ ಎಲ್ಲರಿಗೂ ಒಂದೇ ರೀತಿ ಮನವರಿಕೆಯಾಗಬೇಕಷ್ಟೇ.

ಈಗ, ಈ ಕ್ಷಣದಲ್ಲಿ ನಮಗೆ ಚೀನಾದ ವಿರುದ್ಧದ ಯುದ್ಧವೊಂದನ್ನು ತಡೆದುಕೊಳ್ಳುವ ತಾಕತ್ತಿದೆಯೇ? ಇಲ್ಲ, ಖಂಡಿತಾ ಇಲ್ಲ. ಚೀನಾ ಅಲ್ಲ, ಪಾಕಿಸ್ಥಾನವಲ್ಲ, ಈಗ ನಮಗೆ ಬಾಂಗ್ಲಾದೇಶ ವಿರುದ್ಧವೂ ಯುದ್ಧ ತಡೆದುಕೊಳ್ಳುವ ತಾಕತ್ತಿಲ್ಲ. ಇಷ್ಟಕ್ಕೂ ಎಲ್ಲಾ ಯುದ್ಧಗಳನ್ನೂ “ಈ ಕ್ಷಣದಲ್ಲಿ ತಡೆದುಕೊಳ್ಳುವ ತಾಕತ್ತಿದೆಯೇ” ಎಂಬ ಪ್ರಶ್ನೆಗೆ ಉತ್ತರವನ್ನರಸಿ ಮಾಡಲಿಕ್ಕಾಗಲ್ಲ. ನಾಳೆ ನನ್ನದೇ ದೇಶವೆನಿಸಿಕೊಳ್ಳುವ ನೆಲದಲ್ಲಿ ಮೂರುಹೊತ್ತಿನ ಊಟತಿನ್ನುವ ಆಸೆಯಿದ್ದರೆ, ಇವತ್ತು ಒಂದುಹೊತ್ತಿನ ಊಟ ಬಿಟ್ಟಾದರೂ ಯುದ್ದಕ್ಕೆ ಹೋಗಲೇಬೇಕು. ಆದರೆ ಈ ಸಮಯದಲ್ಲಿ ಯುದ್ಧ ಹೇಗೆ ನಮಗೆ ಮಾರಕವೋ, ಅಷ್ಟೇ ಮಾರಕ ಚೀನಾಕ್ಕೂ ಸಹ. ಆರ್ಥಿಕವಾಗಿ ಮಾತ್ರವಲ್ಲ, ಬೇರೆ ರೀತಿಯಲ್ಲೂ ಸಹ ಚೀನಾಕ್ಕೆ ಈಗ ಪೀಕಲಾಟವೇ. ಕೊರೋನಾ ವೈರಸ್ ಬಂದಿರೋದೇ ಚೀನಾದಿಂದ ಅನ್ನೋ ಒಂದು ಸೆಂಟಿಮೆಂಟ್ ಜಗತ್ತಿನೆಲ್ಲೆಡೆ ಇರುವುದರಿಂದ ಈಗೇನಾದರೂ ಭಾರತ ಚೀನಾ ಯುದ್ಧಕ್ಕೆ ಹೋದರೆ ಮತ್ತೆ ಜಗತ್ತು ಇಬ್ಬಾಗವಾಗುತ್ತದೆ. ಪಾಕಿಗಳು obviously ಚೀನಾ ಕಡೆ ವಾಲುತ್ತಾರೆ, ಸಿಕ್ಕಿದ್ದೇ ಸೀರುಂಡೆ ಅಂತಾ ಭಾರತವನ್ನು ಎರಡೂ ಕಡೆಯಿಂದ ಆಕ್ರಮಿಸಲಾಗುತ್ತದೆ (ಇದೇ ಕಾರಣಕ್ಕೆ ಚೀನಾದೊಂದಿಗೆ ಗಲಾಟೆಯಾದಾಗಲೆಲ್ಲಾ ಭಾರತೀಯ ಸೇನೆ ರಾಜಸ್ಥಾನ ಮತ್ತಿ ಕಾಶ್ಮೀರದಲ್ಲಿ ಸಹ ಸೇನೆಯ ಜಮಾವಣೆ ಮಾಡುತ್ತದೆ). ಆದರೆ, ಈ ಬಾರಿ ಹೀಗೇನಾದರೂ ನಡೆದರೆ ಅಮೇರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ ಭಾರತ ಪರವಾಗಿ ನಿಲ್ಲಲಿವೆ. ಅಲ್ಲಿಗೆ NATO ಮತ್ತು ಅದರೊಂದಿಗೆ ಯೂರೋಪು ಭಾರತದ ಕಡೆಗಾಯ್ತು. ರಷ್ಯಾ, ಆಫ್ರಿಕಾದ ಬಹಳಷ್ಟು ದೇಶಗಳು, ಅರಬ್ ದೇಶಗಳು, ನಮ್ಮ ನೆರೆಯಲ್ಲಿ ನೇಪಾಳ, ಕಾಂಬೋಡಿಯಾ, ವಿಯೆಟ್ನಾಂ, ಬರ್ಮಾ, ಬಾಂಗ್ಲಾ ಚೀನಾದ ಪರವಾಗಲಿವೆ. Anyways……ಇದೆಲ್ಲಾ ಯುದ್ಧ ನ…ಡೆ….ದ…ರೆ. ಆದರೆ ಹಾಗಾಗುವುದು ಸುಲಭವಲ್ಲ. ಈಗಿನ ಯುದ್ಧ ಎಲ್ಲರಿಗೂ ಮಾರಕ. ಉಳಿದವರು ಬರದಿದ್ದರೂ, ಯುದ್ದ ನಡೆಯದಿದ್ದರೂ ಚೀನಾದ ವಸ್ತುಗಳ ಬಹಿಷ್ಕಾರವೂ ಆರ್ಥಿಕವಾಗಿ ಚೀನಾಕ್ಕೆ ಹಾನಿ ಮಾಡಲಿದೆ. ಆದ್ದರಿಂದ ಡ್ರಾಗನ್ ಈ ಬಾರಿ ಕಣ್ಣುಮಿಟುಕಿಸುವುದು ಖಂಡಿತಾ. ಕಣ್ಣಲ್ಲಿ ಕಣ್ಣಿಟ್ಟು ನಿಲ್ಲುವವರು ಬೇಕಷ್ಟೇ. ಮೋದಿಗೆ ಅದಿದೆ ಎನ್ನುವ ನಂಬಿಕೆ ನನಗಿದೆ.

ಈ ಗಡಿಗಲಾಟೆಗಳಿಗೆ ಕಳೆದ ಕೆಲವರ್ಷಗಳಿಂದ ಭಾರತ ತೆಗೆದುಕೊಂಡಿರುವ ಕೆಲ ಆಕ್ರಮಣಕಾರೀ ನೀತಿಗಳೂ ಕಾರಣ. ಡೊಕ್ಲಾಮ್’ಗಿಂತಲೂ ಮೊದಲೇ ಭಾರತ ಲಡಾಕ್’ನ ಸೂಕ್ಷ್ಮಜಾಗಗಳಲ್ಲಿ ಸೇನಾತುಕಡಿಗಳನ್ನು ನಿಯೋಜಿಸಿ ಅಲ್ಲೆಲ್ಲಾ ಸೇನಾನೆಲೆಗಳನ್ನು ಕಟ್ಟಿಟ್ಟಿದೆ. ನೆಲೆಕಟ್ಟೀದ ಮೇಲೆ ಅದಕ್ಕೊಂದು ರಸ್ತೆ ಬೇಕು, ಅದಕ್ಕೊಂದು ಏರ್-ಸ್ಟ್ರಿಪ್ ಬೇಕು ಅಂತೆಲ್ಲಾ ಸಣ್ಣದೊಡ್ಡ ಕೆಲಸಗಳನ್ನು ಮಾಡಿದೆ. ಚೀನಾದ ಗಡಿಯುದ್ದಕ್ಕೂ ಟ್ಯಾಂಕರುಗಳು ಹೋಗಬಹುದಾದ ಗುಣಮಟ್ಟದ ರಸ್ತೆನಿರ್ಮಿಸಿದೆ. ಈ ರಸ್ತೆಗಳು ಚೀನಾದ G219 ಹೆದ್ದಾರಿಗೆ ತೀರಾ ಹತ್ತಿರದಲ್ಲಿದೆ. ಈ G219 ಹೆದ್ದಾರಿ ಭಾರತಕ್ಕೆ, ‍ಕ್ಸಿನ್ಜಿಯಾಂಗ್ ಪ್ರಾಂತ್ಯಕ್ಕೂ, ಚೀನಾದ ಮಹತ್ವಾಕಾಂಕ್ಷಿ ಒನ್-ಬೆಲ್ಟ್-ಒನ್-ರೋಡ್ ಯೋಜನೆಯ ಭಾಗವಾದ ಕಾರಕೋರಂ ಹೆದ್ದಾರಿಗೂ ಪ್ರವೇಶದೊರಕಿಸಬಲ್ಲುದು. ಯಾವತ್ತಾದರೂ ಯುದ್ದನಡೆದರೆ ಭಾರತ ಒಂದಷ್ಟು ಬಾಂಬುಗಳ ಮೂಲಕ ಈ ಹೆದ್ದಾರಿಯನ್ನು ಹಿಡಿದು ಕ್ಸಿನ್ಜಿಯಾಂಗ್ ಒಳಗೆ ಬಂದರೆ ಚೀನಾದ ರಫ್ತಿಗೂ ತೊಂದರೆ. ಮಾತ್ರವಲ್ಲ ಚೀನಾದ ಸೇನೆಯ ಸಹಾಯವಿಲ್ಲದಂತೆ ಒಂದೇ ಏಟಿಗೆ ಪಾಕಿಸ್ಥಾನ ಒಬ್ಬಂಟಿಯಾಗುತ್ತದೆ. ಈ ಕಾರಣಗಳಿಂದಾಗಿ ಇಲ್ಲಿ ಭಾರತದ ಸೇನಾನೆಲೆಗಳು ಗಟ್ಟಿಯಾದರೆ ಚೀನಾಕ್ಕೂ ಪಾಕಿಸ್ಥಾನಕ್ಕೂ ಪುಕು-ಪುಕು. ಭಾರತ ಏನೂ ಮಾಡದೇ ಸುಖಾಸುಮ್ಮನೇ ಚೀನಾ ತಗಾದೆ ತೆಗೆದಿಲ್ಲ. ಬದಲಿಗೆ ಭಾರತದ ಈ ಗಟ್ಟಿ ನಿಲುವುಗಳಿಂದಲೇ ಚೀನಾ ಈ ರೀತಿಯ ಸಣ್ಣಪುಟ್ಟ ಗಲಾಟೆಗಳನ್ನು ತೆಗೆದು ಭಾರತವನ್ನು ಒಂದಲ್ಲಒಂದು ರೀತಿಯಲ್ಲಿ ಕಿರಿಕಿರಿಗೊಳಿಸಿ, ಸಹನೆಯನ್ನೂ ರಾಜತಾಂತ್ರಿಕ ನಿಲುವುಗಳನ್ನೂ ಪರೀಕ್ಷಿಸುತ್ತಿರುತ್ತದೆ.

ಒಂದು ವಿಷಯ ತಿಳಿದಿರಿ. ಚೀನಾ ಪಾಕಿಸ್ಥಾನದಂತೆ ಐಎಸ್ಐ, ಲಷ್ಕರ್, ಹಿಜ್ಬುಲ್’ಗಳಂತಾ ಶಿಖಂಡಿಗಳನ್ನು ಮುಂದಿಟ್ಟುಕೊಂಡು ಗೆರಿಲ್ಲಾ ಯುದ್ಧ ಮಾಡುವುದಿಲ್ಲ. ಚೀನಾ ನಮ್ಮ ನಿಮ್ಮ ಊರಿನಲ್ಲಿರುವ ಆ ರಿಯಲ್ ಎಸ್ಟೇಟ್ ರೌಡಿ ರೆಡ್ಡಿಯಿದ್ದಂಗೆ, ಕನಕಪುರದ ಶಿವಣ್ಣನಿದ್ದಂಗೆ. ಅದೊಂದಷ್ಟು ಭೂಮಿಯ ಮೇಲೆ ಕಣ್ಣುಬಿದ್ದರೆ ಮುಗೀತು. ಇಲ್ಲಸಲ್ಲದ ತೊಂದರೆ ಕೊಟ್ಟು ನಿಮ್ಮನ್ನು ಒಕ್ಕಲೆಬ್ಬಿಸುತ್ತದೆ. ಎಲ್ಲೂ ಸಂಧಾನವೇ ಇಲ್ಲ. ಪಕ್ಕಾ ರೌಡಿಯಂತದ್ದೇ ವ್ಯವಹಾರ. ಬರೀ ಭಾರತದೊಂದಿಗೆ ಮಾತ್ರವಲ್ಲ ಟಿಬೇಟ್, ನೇಪಾಳ, ಭೂತಾನ, ಮಂಗೋಲಿಯಾ, ತೈವಾನ್, ಹಾಂಗ್-ಕಾಂಗ್, ಫಿಲ್ಲಿಪೀನ್ಸ್, ಜಪಾನ್, ಇಂಡೋನೇಷ್ಯಾ, ದೂರದಲ್ಲೆಲ್ಲೋ ಇರೋ ಆಸ್ಟ್ರೇಲಿಯಾ ಜೊತೆಗೂ ಹೀಗೇ ಮೊದಲಿಂದ್ಲೂ ಕಿರಿಕ್ ಮಾಡಿಕೊಂಡೇ ಇರೋದು. ವ್ಯವಹಾರದ ವಿಚಾರದಲ್ಲಿ ಚೀನಿಯರು “ನೀ ಹಾವ್” “ಆಯ್ ನೀ”, “ಕ್ಸಿ-ಕ್ಸಿ” ಅಂತಾ ಅದೆಷ್ಟೇ ಚೆನ್ನಾಗಿ ಮಾತಾಡಿಕೊಂಡು ನಿಧಾನಕ್ಕೆ ಬೆಣ್ಣೆಯಲ್ಲಿ ಕೂದಲು ತೆಗೆದರೂ, China always plays hardball when it comes to land disputes. ನೀವು ಅವರನ್ನು ಅಷ್ಟೂ ಸುಲಭದಲ್ಲಿ ಗೆಲ್ಲಲಾರಿರಿ. ಇದೇ ಕಾರಣಕ್ಕೆ ಈಗಲೂ ಸಹ ಪ್ರತಿಬಾರಿ ಚೀನಾದೊಂದಿಗೆ ಗಡಿ ಗಲಾಟೆಗಳಾದಾಗ ಸಂಧಾನ ಇನ್ನೊಂದು ನಡೆಯಲ್ಲ, ಮೂರು ಅಂಶಗಳ ಸಂಧಾನ, ಐದು ಅಂಶಗಳ ಒಡಂಬಡಿಕೆಗಳೆಲ್ಲಾ ನಡೆಯಲ್ಲ. ಮೊದಲು ಕೈಕೈ ಮಿಲಾಯಿಸಿ ನಿಧಾನಕ್ಕೆ ಒಂದೆರಡು ವಾರಗಳ ನಂತರ ಚೀನಾ ನಾನಲ್ಲಿಗೆ ಬರಲ್ಲ, ನೀನಿಲ್ಲಿಗೆ ಬರಬೇಡ ಹುಷಾರ್ ಅಂತಾ ಬುಸುಗುಡುತ್ತಾ ಹಿಂದೆ ಹೋಗುತ್ತದಷ್ಟೇ. ಇನ್ಯಾವುದಾದರೂ ವಿಚಾರದಲ್ಲಿ ತಕರಾರು ತೆಗೆಯುವುದಕ್ಕೆ ಪ್ಲಾನು ಹಾಕುತ್ತದೆ. ಚೀನಾಕ್ಕೆ ನಿಮ್ಮ ಜಾಗದ ವಿಚಾರದಲ್ಲಿ ಗಲಾಟೆತೆಗೆಯೋಕೆ ಆ ಜಾಗಕ್ಕೆ ಸಂಬಂಧಿಸಿದ ವಿಚಾರವೇ ಆಗಬೇಕೆಂದಿಲ್ಲ. ಅದು ಹೆಂಗಾದರೂ ತೆಗೆಯುತ್ತದೆ. ವಿಶ್ವಸಂಸ್ಥೆಯಲ್ಲಿ ಶುಂಠಿ-ಬೆಳ್ಳುಳ್ಳಿ ರೇಟ್ ಎಲ್ಲೂ ಹೆಚ್ಚಿಸುವಂತಿಲ್ಲ ಅಂತಾ ನಿರ್ಣಾಯಕ್ಕೆ ನೀವು ಪರವಾಗಿ, ಚೀನಾ ವಿರೋಧವಾಗಿ ವೋಟು ಹಾಕಿದ ವಿಚಾರವೂ ಸಾಕು, ಸೊಮಾಲಿಯಾ ಪೈರೇಟುಗಳ ಮುಖಂಡನ ಹೆಂಡತಿಯ ಹೆರಿಗೆಗೆ ನಾರ್ವೆಯ ಆಸ್ಪತ್ರೆಯಲ್ಲಿ ಅವಕಾಶ ನೀಡಬಾರದು ಎಂಬ ವಿಚಾರಕ್ಕೆ ಚೀನಾ ವಿರೋಧಿಸಿ ನೀವು ಸಮ್ಮತಿಸಿದರೂ ಸಾಕು, ಲಿಂಬೇಹಣ್ಣೋ ನಿಂಬೇಹಣ್ಣೋ ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಚೀನಾದ ಉತ್ತರಕ್ಕಿಂತ ಭಿನ್ನವಾಗಿದ್ದರೂ ಸಾಕು, ಚೀನಾ ಕ್ಯಾತೆ ತೆಗೆದೇ ತೆಗೆಯುತ್ತದೆ. ಚೀನಾದಲ್ಲಿ ಎಲ್ಲಾ ನಿರ್ಧಾರಗಳು ಮೇಲಿನಿಂದ ಕೆಳಕ್ಕೆ, ಮತ್ತವುಗಳ ಪರಿಣಾಮ ಕೆಳಗಿನಿಂದ ಮೇಲಕ್ಕೆ ಒಂದೇ ದಾರಿಯಲ್ಲಿ ಮತ್ತು ನಿಗದಿತ ಬಿಂದುಗಳ ಮೂಲಕವೇ ಪ್ರಯಾಣಿಸುವುದರಿಂದ, ಹಾಗೂ ಸರ್ಕಾರ ಮತ್ತದರ ಅಧಿಕಾರಿಗಳು ಬದಲಾಗುವ ಸಾಧ್ಯತೆಗಳು ತೀರಾ ಕಡಿಮೆಯಾದ್ದರಿಂದ long-term ತಂತ್ರಗಳನ್ನು ಹೆಣೆಯುವುದು ಸುಲಭ. ಮತ್ತು ಆ ತಂತ್ರಗಳನ್ನು ಕಾರ್ಯರೂಪಗೊಳಿಸುವುದೂ ಸಾಧ್ಯ.

ಸಧ್ಯಕ್ಕೆ ಚೀನಾವನ್ನು ಸೋಲಿಸಬೇಕಾಗಿರುವುದು ಆರ್ಥಿಕ ಯುದ್ದದಲ್ಲಿ. ಕಡಿಮೆಬೆಲೆಯಲ್ಲಿ ಮಾರುವವನಿಗಿರುವ leverage ಚೀನಾಕ್ಕಿದೆ. ಆದರೆ ಖರೀದಿಸುವವನ leverage ನಮಗೂ ಇದೆ. “ನಾನು ನಿನ್ನಿಂದ ಈ ಮತ್ತು ಈ ಮತ್ತು ಈ ವಸ್ತುಗಳನ್ನು ಖರೀದಿಸಲ್ಲ” ಅಂತಲೋ, “ನಿನಗೆ…. ಕೇವಲ ನಿನಗೆ ಮಾತ್ರ ಈ ಮತ್ತು ಈ ಕ್ಷೇತ್ರಗಳ ವ್ಯವಹಾರದಲ್ಲಿ ಒಳಬಿಟ್ಟುಕೊಳ್ಳಲ್ಲ” ಅಂತಾ ಭಾರತ ಹೇಳಬೇಕಾಗಿದೆ. ಇದರ ಪರಿಣಾಮವೇನಾಗಬಹುದು? ಕೆಲವೊಂದು ವಸ್ತುಗಳು ನಮಗೆ ಚೀನಾದಿಂದ ಸಿಗದೇ ಹೋಗಬಹುದು. ಹಾಗಂತ ಅವು ಯಾವುವೂ ನಾವೇ ತಯಾರಿಸಿಕೊಳ್ಳಲಾಗದ್ದೇನೂ ಅಲ್ಲ. ಒಂದು ವಿಷಯ ಯೋಚಿಸಿ ನೋಡಿ, “ಚೀನಾ ಎಷ್ಟು ಹೊಸರೀತಿಯ ವಸ್ತುಗಳನ್ನು ಆವಿಷ್ಕಾರದ ಮೂಲಕ ಕಂಡುಹಿಡಿದಿದೆ (invent ಮಾಡಿದೆ)? ಚೀನಾ ಎಷ್ಟು ರೀತಿಯ ವಸ್ತುಗಳನ್ನು ತಯಾರಿಸುತ್ತದೆ (manufacture ಮಾಡುತ್ತದೆ)?”. E…..X…..A…..C….T….L….Y. ವಿಶ್ವದ ಉತ್ಪಾದನಾ ಕೇಂದ್ರವಾಗಬೇಕು ಅಂದರೆ ನೀವು ಹೊಸತನದ ಅಥವಾ ಆವಿಷ್ಕಾರಗಳ ನಾಡೇ ಆಗಿರಬೇಕೆಂದೇನೂ ಇಲ್ಲ. ಸರ್ಕಾರ ಸಾಂಸ್ಥಿಕಹೂಡಿಕೆಗಳ ಮೂಲಕ ದೇಶೀ ತಯಾರಿಕೆಗೆ ಒತ್ತುನೀಡುವುದು, ಚೀನಾದ ಬದಲು ರಷ್ಯಾ, ವಿಯೆಟ್ನಾಂ, ಬಾಂಗ್ಲಾದೇಶ, ಆಫ್ರಿಕಾ, ಸ್ಲೊವಾಕಿಯಾ, ಬೋಸ್ನಿಯಾ, ಕಝಾಕಸ್ಥಾನದಂತಹ ದೇಶಗಳೆಡೆಗೆ ಮುಖಮಾಡುವುದರಿಂದ ಚೀನಾ ಕೈಕಟ್ಟಿಸುವುದು ತೀರಾ ಅಸಾಧ್ಯವೇನಲ್ಲ.

ಈ ಆರ್ಥಿಕ ಯುದ್ಧ ಪೇಪರಿನಲ್ಲಿ ಬರೆದಷ್ಟು ಸುಲಭವೂ ಅಲ್ಲ. ಯಾಕೆಂದರೆ ಚೀನಾದೊಂದಿಗಿನ ವ್ಯವಹಾರ ಫಾರ್ಗೋ ಧಾರಾವಾಹಿಯ ವಿ.ಎಂ.ವಾರ್ಗಾನಂತಹ ವಿಲನ್ನಿನೊಂದಿಗಿನ ವ್ಯವಹಾರ. ಇವತ್ತು ಟ್ವಿಟರಿನಲ್ಲಿ ಒಂದು ಲೇಖನ ಓದಿದೆ. ನಮ್ಮ ವ್ಯವಹಾರಸ್ಥರೊಬ್ಬರು 2008ರಲ್ಲಿ ಹೋಟೆಲ್ಲಿನ ನೆಲ ಮತ್ತು ಬಚ್ಚಲುಕೋಣೆಯ ಟೈಲ್ಸ್ ಮತ್ತು ಟಬ್ ಮತ್ತಿತರ ವಸ್ತುಗಳಿಗಾಗಿ ಮಾರುಕಟ್ಟೆ ತಡಕಾಡಿದಾಗ ಭಾರತದಲ್ಲಿ ತೀರಾ ಕಮ್ಮಿ ಆಯ್ಕೆಗಳೂ, ಯೂರೋಪು ಸಿಕ್ಕಾಪಟ್ಟೆ ದುಬಾರಿಯೂ ಆಯ್ತೆಂದು ಚೀನಾಕ್ಕೆ ಹೋದರಂತೆ. ವಿಟ್ರಿಫೈಡ್ ಶ್ರೇಣಿಯ ಸಾಮಾನುಗಳು ಕಡಿಮೆಬೆಲೆಯಲ್ಲಿದ್ದರೂ ಸಹ ಆಗ ಭಾರತದಲ್ಲಿ ಚೀನಾದಿಂದ ಆಮದಾದ ವಿಟ್ರಿಫೈಡ್ ಶ್ರೇಣಿಯ ವಸ್ತುಗಳ ಮೇಲೆ Anti Dumping Duty ಹೇರಲಾಗುತ್ತಿತ್ತು. ಆದ್ದರಿಂದ ಇವರು ಸ್ವಲ್ಪ ದುಬಾರಿಯಾದರೂ ಸಹ ಸಿರಾಮಿಕ್ ಶ್ರೇಣಿಯ ವಸ್ತುಗಳನ್ನೇ ಕೊಳ್ಳಲು ನಿರ್ಧರಿಸಿದರಂತೆ. ಆ ಕಂಪನಿಯ ಮಾಲೀಕ ಅವರನ್ನು ರಾತ್ರಿ ಡಿನ್ನರಿಗೆ ಆಹ್ವಾನಿಸಿ ನಿಧಾನಕ್ಕೆ ಮಾತಿನ ನಡುವೆ, “ವಿಟ್ರಿಫೈಡೇ ಯಾಕೆ ತಗೊಳ್ತಿಲ್ಲಾ ಸಾರ್ ಕಮ್ಮಿಯಲ್ಲೇ ವರ್ಕೌಟಾಗುತ್ತೆ ನಿಮಗೆ!” ಅಂತಾ ಕೇಳಿದ್ದಕ್ಕೆ, ಇವರು ADD ಬಗ್ಗೆ ಹೇಳಿದರಂತೆ. ಅದಕ್ಕವ “ಒಂದು ಕೆಲಸ ಮಾಡಿ, ವಿಟ್ರಿಫೈಡ್ ತಗೊಳ್ಳಿ. ಅದೆಷ್ಟು ಆಂಟಿ ಡಂಫಿಂಗ್ ಡ್ಯೂಟಿ ಬೀಳುತ್ತೆ ಅದನ್ನೂ ನಾನೇ ಕಟ್ಟಿ ಕೊಡ್ತೀನಿ” ಅಂದನಂತೆ. ಅದಕ್ಕವ ಹಾಕಿದ್ದು ಒಂದೇ ಕಂಡೀಷನ್, “ಭಾರತಕ್ಕೆ ವಾಪಾಸ್ ಹೋದಮೇಲೆ ನೀವು ಈ ವಿಟ್ರಿಫೈಡ್ ವಸ್ತುಗಳಮೇಲೆ ನಿಮ್ಮ ಸರ್ಕಾರ ಹಾಕಿರುವ ಈ ತೆರಿಗೆಯನ್ನು ನಿಮ್ಮ ಕೋರ್ಟಿನಲ್ಲಿ ಪ್ರಶ್ನಿಸಬೇಕು. ಅತ್ಯುತ್ತಮ ಲಾಯರುಗಳನ್ನೇ ತಗಳ್ಳಿ. ಖರ್ಚು ನನ್ನದು. ಕೇಸು ಎಳೆದರೂ ಪರವಾಗಿಲ್ಲ. Infact ಸ್ವಲ್ಪ ಎಳೆದರೇ ಒಳ್ಳೆಯದು. ಮಾಧ್ಯಮದ ಕಡೆಯಿಂದ ಇದಕ್ಕೆ traction ನಾನು ಕೊಡಿಸ್ತೀನಿ, ಮುಂದಿನ ಎರಡು ಪ್ರಾಜೆಕ್ಟಿಗೂ ನಿಮಗೆ ಕಮ್ಮಿರೇಟಲ್ಲಿ ಟೈಲ್ಸ್ ಸಪ್ಲೈ ಮಾಡ್ತೀನಿ” ಅಂದನಂತೆ. ನಮ್ಮವರಿಗೆ ಡೀಲ್ ತುಂಬಾ ಒಳ್ಳೆಯದೆನಿಸಿದರೂ “ಆಯ್ತು, ಆಮೇಲೆ ಫೋನ್ ಮಾಡ್ತೀನಿ” ಅಂತಾ ಹೇಳಿ ಬಂದವರು, ಬೇರೆ ಯಾರಿಂದಲೋ ಖರೀದಿಸಿ ಕೆಲಸ ಮುಗಿಸಿದರಂತೆ. ಆದರೆ ಅವರಿಗೆ ಆ ಮಾಲೀಕನ ಮಾತುಗಳು ಆಶ್ಚರ್ಯ ಮೂಡಿಸಿದವು. ಅವನ್ಯಾಕೆ ಇಷ್ಟೆಲ್ಲಾ ಮಾಡೋಕೆ ತಯಾರಿದ್ದಾನೆ? ಅವನ ವಿಟ್ರಿಫೈಡ್ ವಸ್ತುಗಳಿಗೆ ಭಾರತ ಅಷ್ಟು ದೊಡ್ಡ ಮಾರುಕಟ್ಟೆಯಾ ಅಂತಾ ಸ್ವಲ್ಪ ಇಂಟರ್ನೆಟ್ ತಡಕಾಡಿದಾಗ ಆ ಕಂಪನಿ ಚೀನದಲ್ಲಲ್ಲದೇ ಬ್ರಿಟೀಷ್ ವರ್ಜಿನ್ ದ್ವೀಪಗಳಲ್ಲಿರೋ ಕಂಪನಿ ಅಂತಾ ತಿಳಿದುಬಂತು. ಅಂದರೆ ಕಂಪನಿಯ ದೊಡ್ಡ ಮಾಲೀಕ ಖಂಡಿತಾ ಕಮ್ಯೂನಿಸ್ಟ್ ಪಾರ್ಟಿಯ ಯಾವನೋ ದೊಡ್ಡ ಕುಳವೇ ಅಂತಾ ಸುಲಭವಾಗಿ ಊಹಿಸಬಹುದಾಗಿತ್ತು.

…ಅಂದರೆ ಪ್ರತಿಯೊಂದು ಬ್ಯುಸಿನೆಸ್ ಡೀಲೂ ಚೀನಾಕ್ಕೆ ಇನ್ನೊಂದು ದೇಶಕ್ಕೆ ಪ್ರವೇಶಿಸಲು ಅವಕಾಶ. ಆ ದೇಶದಲ್ಲಿ ಇರಬಹುದಾದ ಚೀನಾವಿರೋಧಿ ನೀತಿಗಳನ್ನು ಮುರಿಯಲು ಅವಕಾಶ. ಅದಕ್ಕಾಗಿ ಚೀನಾ ಇವತ್ತಿನ ನಿಮ್ಮ ಡೀಲ್’ಗೆ 80% ಕಡಿಮೆ ಬೆಲೆಯಲ್ಲೂ ಮಾರೋಕೆ ತಯಾರು. ಅದರ ಸಾಗಾಟವೆಚ್ಚವನ್ನೂ ಭರಿಸಲು ತಯಾರು. ನಿಮಗೆ ಲಾಯರುಗಳ ಫೀಸು ಕೊಡಲೂ ತಯಾರು.

ಈ ತರಹದ್ದೇ ಇನ್ನೊಂದು ಕಥೆಯಲ್ಲಿ ಕನ್ನಡಕ ತಯಾರಿಸುವ ಕಂಪನಿಯೊಂದು ಲೆನ್ಸುಗಳನ್ನು ಚೀನಾದಿಂದ ತರಿಸೋಕೆ ಪ್ರಯತ್ನಿಸ್ತಾ ಇತ್ತು. ಬಹಳಷ್ಟು ಹುಡುಕಾಡಿದ ಮೇಲೆ ಇವರ ಗುಣಮಟ್ಟಕ್ಕೆ ತಕ್ಕಂತೆ ಲೆನ್ಸ್ ತಯಾರಿಸಬಲ್ಲ ಒಂದು ಕಂಪನಿ ಸಿಗ್ತಂತೆ. ಅದರ ಮಾಲೀಕ ಸಂಪೂರ್ಣ ಚೀನೀ. ಇಂಗ್ಳೀಷ್ ಬರಲ್ಲ. ಮಾತುಕಥೆಗೆ ಮಗಳು ಬಂದು ಕೂರ್ತಿದ್ಳು. ಯಾಕಂದರೆ ಮಗಳನ್ನು ಇದಕ್ಕೋಸ್ಕರವೇ ಫಾರಿನ್ ವಿವಿಗೆ ಕಳಿಸಿ ಇಂಗ್ಳೀಷ್ ವಿಶಾರದಳನ್ನಾಗಿ ಮಾಡಿಸಿದ್ದ. ಮಾತುಕತೆಗೆ ಅವಳನ್ನು ಕೂರಿಸಿ ಉಳಿದದ್ದನ್ನು ತಾನು ನೋಡಿಕೊಳ್ಳೋದು ಅವನ ಪ್ಲಾನು. ಹತ್ತಾರು ಸುತ್ತಿನ ಮಾತುಕಥೆಗಳ ನಂತರವೂ ನಮ್ಮವರಿಗೆ ಬೆಲೆ ಸರಿಬರಲಿಲ್ಲ. ನಿಮ್ಮ ಬೆಲೆಗೆ ನಮ್ಮ ತಯಾರಿಕಾ ಖರ್ಚೂ ಗಿಟ್ಟಲ್ಲ ಅಂತಾ ಕೂತಿದ್ಳು ಚೀನಿ. ಇಷ್ಟೆಲ್ಲಾ ಖರ್ಚಾಗೋದಾದರೆ ನಾನು ಚೀನಾಕ್ಕೆ ಯಾಕೆ ಬರಬೇಕು, ಬೇರೆಲ್ಲಾದ್ರೂ ಹೋಗ್ತೀನಿ ಅಂತಾ ಈ ಸಿಂಧಿ ರಚ್ಚೆ ಹಿಡಿದು ಕೂತಿದ್ದ. ಮೂರುವಾರಗಳ ನಂತರ ಕಂಪನಿ ಇವರಿಗೆ ತಯಾರಿಕಾವೆಚ್ಚದ ಮೇಲೆ 1% ಲಾಭಕ್ಕೆ ಮಾರೋಕೆ ರೆಡಿಯಾಯ್ತು. ಸಿಂಧಿ ಒಪ್ಪಿದ. ಇದನ್ನೆಲ್ಲಾ ಗಮನಿಸುತ್ತಿದ್ದ ಪಾರ್ಟಿಯೊಬ್ಬರು ಸಂಜೆಯ ಪಾರ್ಟಿಯಲ್ಲಿ ಆ ಚೀನಿಯನ ಮಗಳ ಹತ್ರ ಹೋಗಿ “ಅದು ಹೇಗೆ ಬರೀ 1% ಪ್ರಾಫಿಟ್ಟಲ್ಲಿ ಕಂಪನಿ ನಡೆಸ್ತೀರಾ?” ಅಂತಾ ಕೇಳಿದನಂತೆ. ಆಕೆ ಇಲ್ಲಸಲ್ಲದ ಕಥೆಗಳನ್ನೆಲ್ಲಾ ರೀಲು ಬಿಡುತ್ತಾದ್ದಾಗ ನಿಲ್ಲಿಸಿ, “ಇದೆಲ್ಲಾ ಇರ್ಲಿ, ನಿಜ ಹೇಳಮ್ಮಾ” ಅಂತಾ ಒತ್ತಾಯಿಸಿದ ಮೇಲೆ ತಿಳಿದುಬಂದದ್ದೇನೆಂದರೆ “ನಮಗೆ ಈ ವಸ್ತುಗಳನ್ನು ರಫ್ತು ಮಾಡಿದ್ದಕ್ಕೆ 10% ಸಬ್ಸಿಡಿ ಸಿಗುತ್ತೆ. ಇನ್ನೂ ಈ ಸಬ್ಸಿಡಿ ಬಿಲ್ ಪಾಸ್ ಆಗಿಲ್ಲ. ಆದರೆ ನಾವು ಲೆನ್ಸ್ ತಯಾರಕರೆಲ್ಲಾ ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈ ವರ್ಷದ ಕೊನೆಯಲ್ಲಿ ಬಿಲ್ ಪಾಸಾಗುತ್ತೆ. ಸಬ್ಸಿಡಿ ಸಿಗುತ್ತೆ. ನಮ್ಮ ನಿಜವಾದ ಲಾಭ ಅದು. ಅದು ಬರೋವರೆಗೆ ನಿಮ್ಮ 1% ಲಾಭ ನನಗೆ ಕ್ಯಾಷ್-ಪ್ಲೋ ಒದಗಿಸುತ್ತೆ” ಅಂತಾ ಬಾಯ್ಬಿಟ್ಟಳಂತೆ.

ಇದು ಚೀನಾದ ತಂತ್ರಗಳ ಬತ್ತಳಿಕೆ. ಅವರ ಆಟಗಳು ಇವತ್ತು ನಾಳೆಗಲ್ಲ. ಮುಂದಿನ ಹತ್ತು-ಇಪ್ಪತ್ತು ವರ್ಷಕ್ಕೆ. 2020ರಲ್ಲಿ ಹೊರದೇಶಕ್ಕೆ ವಸ್ತು ಮಾರೋಕೆ 2010ರಲ್ಲಿ ಅಪ್ಪ ತನ್ನ ಮಕ್ಕಳಿಗೆ ಇಂಗ್ಳೀಷು ಕಲಿಸುವ ಪ್ಲಾನು ಹಾಕುವಷ್ಟು ಅಲ್ಲಿನ ಬ್ಯುಸಿನೆಸ್ ಕಮ್ಯೂನಿಟಿ ಮುಂದಿದೆ. ನೀವಿವತ್ತು ನಿರಾಕರಿಸಲು ಸಾಧ್ಯವೇ ಆಗದಂತ ಡೀಲ್ ಕೊಟ್ಟು ನೀವು ಚೀನಾವನ್ನು ಅವಲಂಬಿಸುವಂತೆ ಮಾಡುವ ತಂತ್ರ ಅವರಿಗೆ ಗೊತ್ತಿದೆ. ಸರ್ಕಾರವೇ ಮುಂದೆ ನಿಂತು ಹೇಳಿಕೊಡುತ್ತೆ. This is how world has become dependent on China. ವ್ಯವಹಾರಸ್ಥರು ಈ ರೀತಿ ವ್ಯವಹಾರ ಮಾಡಿದರೆ, ಸರ್ಕಾರ ಒನ್-ಬೆಲ್ಟ್-ಒನ್-ರೋಡಿನಂತಹಾ ತಂತ್ರಗಳ ಮೂಲಕ ಈ ವ್ಯವಹಾರಸ್ಥರು ತಯಾರಿಸಿದ್ದನ್ನ ಮನೆಬಾಗಿಲಿಗೆ ತಲುಪಿಸುತ್ತಿದೆ. ದೇಶಗಳಿಗೆ ಸಾಪ್ಜ್ಟ್-ಲೋನುಗಳನ್ನು ಕೊಟ್ಟು ನಿಧಾನಕ್ಕೆ ಇಡೀ ದೇಶವನ್ನೇ ಆಪೋಶನ ಪಡೆಯುವ ತಂತ್ರ ಹೆಣೆಯುತ್ತದೆ. ಚೀಪ್ ಇದ್ರೆ ನನಗೊಂದಿರ್ಲಿ ನನ್ನ ಮಗನೊಗೊಂದಿರ್ಲಿ ಎಂಬ ಮನೋಭಾವನೆಯನ್ನು ಎನ್ಕ್ಯಾಷ್ ಮಾಡಿಕೊಳ್ಳುತ್ತಾ ಚೀನಾ ಜಗತ್ತನ್ನು ತನ್ನ ಅಡಿಯಾಳಾಗಿಸಿಕೊಳ್ಳುತ್ತಿದೆ.

(ಇಡೀ ಚೀನಾ ಹೀಗೇ ಅಂದ್ಕೋಬೇಡಿ. ಅಲ್ಲಿನ ಬಡತನ, ಬಾಯ್ಕಟ್ಟಿಸುವ ಜೀವನ ನಮ್ಮ ಶತ್ರುವಿಗೂ ಬೇಡ ಬಿಡಿ. ಎಲ್ಲಾ ನಗರಗಳು ಶಾಂಘೈ ಅಲ್ಲ, ಬೀಜಿಂಗ ಅಲ್ಲ. ಹತ್ತಡಿ ಬೈ ಹತ್ತಡಿಯ ರೂಮಿನಲ್ಲಿ ಇಡೀ ಸಂಸಾರ ಬದುಕುವುದೂ ಇದೆ. ಆದರೆ ಈ ಲೇಖನ ಅದರಬಗ್ಗೆಯಲ್ಲ, ಬಿಡಿ.)

ಇದೇ ಕಾರಣಕ್ಕೆ ನೀವಿಲ್ಲಿ #BoycottChineseGoods ಅಂದಾಗ, ಚೀನಿಯರ ಉತ್ಪನ್ನಗಳನ್ನು ಬಹಿಷ್ಕರಿಸುವ ಮಾತಾಡಿದಾಗ, ಶಾಂಘೈನಲ್ಲಿ ಕೂತಿರುವ ವ್ಯಾಪಾರಿಯೊಬ್ಬನ ತೊಳ್ಳೆ ನಡುಗುತ್ತದೆ. ಗ್ವಾಂಗ್ಡಾಂಗಿನಲ್ಲಿರುವ ಸಂಸಾರಗಳ ಹೃದಯ ಮುಂದಿನ ತಿಂಗಳು ಫ್ಯಾಕ್ಟರಿ ಮುಚ್ಚಿಬಿಟ್ಟರೆ ಅಂತಾ ಢವಢವ ಅನ್ನುತ್ತೆ. ಒಟ್ಟಿನಲ್ಲಿ ನಿಮ್ಮ ಬಹಿಷ್ಕಾರದ ಧ್ವನಿ ಅದೆಲ್ಲಿ ನೋವುಂಟುಮಾಡಬೇಕೋ ಅಲ್ಲಿ ಮಾಡುತ್ತದೆ. ಚೀನಿಯರು ದಶಕಗಳಿಂದ ಸೂಕ್ಷ್ಮವಾಗಿ ನಿಖರವಾಗಿ ಹೆಣೆದುಕೊಂಡು ಬಂದ ಯೋಜನೆಯೊಂದರ ಬುಡ ಅಲ್ಲಾಡುತ್ತದೆ. ಅವರ ಉತ್ಪನ್ನಗಳನ್ನು ಬಹಿಷ್ಕರಿಸುವುದು ಅವರಿಗೆ ವೈಯಕ್ತಿಕವಾಗಿ ನೋವುಂಟು ಮಾಡುವ ತಂತ್ರ. ಅಲ್ಲಿನ ಹೆಚ್ಚಿನ ಕಂಪನಿಗಳು ಮತ್ತು ವ್ಯವಹಾರಗಳು ಕಮ್ಯೂನಿಸ್ಟ್ ಅಧಿಕಾರಿಗಳ ಒಡೆತನದಲ್ಲಿವೆ. ಬಹಳಷ್ಟು ಜನ ಹೆಮ್ಮೆಪಟ್ಟು ಶೇರ್ ಮಾಡುವ, ಕಷ್ಟದ ಜೀವನದ ಕಥೆ ಹೇಳುವ ವಿಡಿಯೋದ ಅಲಿಬಾಬಾ ಕಂಪನಿಯ ಮುಖ್ಯಸ್ಥ ಜಾಕ್ ಮಾ ಕೂಡಾ ಕಮ್ಯೂನಿಸ್ಟ್ ಪಾರ್ಟಿಯ ಸದಸ್ಯ. ಅದೂ 1980ರ ಕಾಲದಿಂದಲೇ! ಅವನೊಬ್ಬನೇ ಅಲ್ಲ ಇವತ್ತು ಯಶಸ್ವಿಯಾಗಿರುವ ಎಲ್ಲಾ ಚೀನೀಕಂಪನಿಗಳ ಮಾಲೀಕರೂ ಅವರ ಮಕ್ಕಳೂ, ಜಿಯಾಂಗ್ ಝೆಮಿನ್ ಈ ಆಧುನಿಕ ಚೀನಾದ ಸೋಷಿಯಲಿಸ್ಟಿಕ್ ಕ್ಯಾಪಿಟಲಿಸಂ ತಂತ್ರಗಳ ಓಂನಾಮ ಬರೆಯುತ್ತಿರುವಾಗಲಿಂದಲೇ ವ್ಯವಹಾರದಲ್ಲಿದ್ದವರು. ಅವರೆಲ್ಲರೂ ಈ grand schemeನ ಭಾಗೀದಾರರು. ಯಾಕೆಂದರೆ ಸರ್ಕಾರದ ಕನೆಕ್ಷನ್ನುಗಳಿಲ್ಲದೇ ನೀವು ಚೀನಾದಲ್ಲಿ ಯಶಸ್ವೀ ಬ್ಯುಸಿನೆಸ್ಮ್ಯಾನ್ ಆಗಲಾರಿರಿ. ಇಲ್ಲ, ಅಲ್ಲಿ ಯಾರಿಗೂ ಲೈಸೆನ್ಸಿಗೆ ಲಂಚ ಕೊಡುವ ಅಗತ್ಯನಿಮಗಿಲ್ಲ. ಸರ್ಕಾರೀ ಅಧಿಕಾರಿಗಳ ಪರಿಚಯವಿಲ್ಲದೇ ನೀವು ಅಲ್ಲಿ ಬ್ಯುಸಿನೆಸ್ಮ್ಯಾನ್ ಆಗಬಲ್ಲಿರಿ, ಆದರೆ ಯಶಸ್ವೀ ಅಂತರರಾಷ್ಟ್ರೀಯ ಬ್ಯುಸಿನೆಸ್ಮ್ಯಾನ್ ಆಗಲಾರಿರಿ. ಆದ್ದರಿಂದ, ನಿಮ್ಮ ವ್ಯಾವಹಾರಿಕ ಬಹಿಷ್ಕಾರ ಆ ಯಶಸ್ವೀ ಮಾರಾಟಗಾರರಿಗೆ ವೈಯಕ್ತಿಕವಾಗಿ ನಷ್ಟವನ್ನುಂಟುಮಾಡಬಲ್ಲುದು. ಅವರ ನಷ್ಟಕ್ಕೂ ಚೀನಾ ಸರ್ಕಾರದ ನಷೃಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಮಿಲಿಟರಿ ಗಲಾಟೆಗಳು ಬಂದುಹೋಗುತ್ತಿರುತ್ತವೆ. ಆದರೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದು ಮತ್ತು ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳನ್ನು ಚೀನಾದಿಂದ ನಿಮ್ಮೆಡೆಗೆ ಸೆಳೆಯುವುದು ಕಮ್ಯೂನಿಸ್ಟ್ ಪಾರ್ಟಿಗೆ ನೇರವಾಗಿ ನೋವುಂಟು ಮಾಡುತ್ತದೆ.

ನಿಮ್ಮ ವಿರೋಧಿಗಳನ್ನು ತಿಳಿದುಕೊಳ್ಳಿ. ಚೀನಿ ಉತ್ಪನ್ನಗಳ ಖರೀದಿಯ ಬಗ್ಗೆ ದೃಡಮನಸ್ಸು ಮಾಡಿ. ಯಾಕೆಂದರೆ ಸಧ್ಯಕ್ಕೆ ಅವರು ನಿಮ್ಮದೇ ನೋವಿಗೆ, ನಿಮ್ಮದೇ ಸೋಲಿಗೆ, ನಿಮ್ಮದೇ ಶರಣಾಗತಿಗಾಗಿ ನೀವೇ ಹಣತೆರುವಂತೆ ಮಾಡುತ್ತಿದ್ದಾರೆ.

ಭಾರತೀಯರಿಗೆ, ಭಾರತದ ಸರ್ಕಾರಗಳಿಗೆ ಚೀನಾದ ಬಗ್ಗೆ ಬೇರೆ ಬೇರೆ ಭಾವನೆಗಳಿರಬಹುದು. ನಮ್ಮ ರಾಜಕಾರಣಿಗಳಲ್ಲೇ ಹಲವರಿಗೆ ಚೀನಾದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ಗೊಂದಲವೂ ಭಿನ್ನಾಭಿಪ್ರಾಯವೂ ಇರಬಹುದು. ನಾವು ಚೀನಾವನ್ನು ಅರ್ಥೈಸಿಕೊಳ್ಳುವಲ್ಲಿ, ಅವರೊಂದಿಗೆ ವ್ಯವಹರಿಸುವ ರೀತಿಯಲ್ಲಿ ಮತ್ತೆ ಮತ್ತೆ ಎಡವಿರಬಹುದು. ಆದರೆ ಚೀನಾಕ್ಕೆ ಭಾರತದೆಡೆಗಿನ ತನ್ನ ದೃಷ್ಟಿಕೋನ ಸ್ಪಷ್ಟವಾಗಿದೆ. ಮಾವೋನಿಂದ ಹಿಡಿದು ಜಿಯಾಂಗ್ ಝೆಮಿನ್, ಹೂ ಝಂಟಾವೋ ಮತ್ತು ಈಗಿನ ಕ್ಸಿ-ಜಿನ್ಪಿಂಗ್’ವರೆಗೆ ಎಲ್ಲಾ ಮುಖ್ಯಸ್ಥರಿಗೂ ಭಾರತದ ಬಗೆಗಿನ ನಿಲುವು ಸ್ಪಷ್ಟ. ಅವರ ಪ್ರಕಾರ ಭಾರತ ಸ್ವತಂತ್ರ್ಯವಾದ ದಿನದಿಂದಲೂ ಚೀನಾದ ಎದುರಾಳಿ. ಹಾಗೂ ಈ ಎದುರಾಳಿಯನ್ನು ದುರ್ಬಲಗೊಳಿಸುವುದು, ಆಂತರಿಕವಾಗಿ ಮುರಿದು, ಆರ್ಥಿಕವಾಗಿ ಮಂಡಿಯೂರಿಸಿ, ರಾಜತಾಂತ್ರಿಕವಾಗಿ ಹಾಗೂ ಉಳಿದೆಲ್ಲಾ ರೀತಿಯಲ್ಲಿ ತನ್ನ ಅಧೀನ ದೇಶವಾಗಿಸಿಕೊಳ್ಳುವುದು ಅವರ ಮುಖ್ಯ ಉದ್ದೇಶಗಳಲ್ಲೊಂದು. ಇದನ್ನವರು ದಶಕಗಳಿಂದ ಮಾಡಿಕೊಂಡು ಬಂದಿದ್ದಾರೆ. ಇಲ್ಲವಾದಲ್ಲಿ 1954ರಲ್ಲಿ ಪಂಚಶೀಲ ತತ್ವಕ್ಕೆ ಸಹಿಹಾಕಿದ ಮೇಲೂ 1962ರಲ್ಲಿ ಕ್ಯಾತೆ ತೆಗೆಯುತ್ತಿರಲಿಲ್ಲ. ಡೋಕ್ಲಾಮ್, ಗಲ್ವಾನ್ ನಡೆಯುತ್ತಿರಲಿಲ್ಲ. ಚೀನಾ ಭಾರತವನ್ನು ಆಂತರಿಕ ದುರ್ಬಲಗೊಳಿಸಲು ತನ್ನ ಸೈನಿಕರ ಸ್ಲೀಪರ್ ಸೆಲ್ಲುಗಳನ್ನು ಸದಾ ಜೀವಂತವಾಗಿಟ್ಟಿದೆ. ಅವರ ಸ್ನೇಹಿತರು over democratic ಆಗಿರುವ ನಮ್ಮೀ ದೇಶದೊಳದೆ ಎಂದಿನಿಂದಲೋ ಇದ್ದಾರೆ. ಕಳೆದೆರಡು ದಶಕಗಳಿಂದಲಂತೂ ಚೀನಾದ ಸಂಬಳಕ್ಕೆ ದುಡಿಯುವ ಭಾರತೀಯರ ಸಂಖ್ಯೆ 1962ರಲ್ಲಿ ಇದ್ದದ್ದಕ್ಕಿಂತ ನಾಲ್ಕುಪಟ್ಟಾಗಿದೆ.

ಚೀನೀ ಉತ್ಪಾದನೆಗಳನ್ನು ಬಹಿಷ್ಕರಿಸುವುದು ಒಂದು ಹಂತ. #MakeInIndia ಮತ್ತು #ಆತ್ಮನಿರ್ಭರಭಾರತ ಚಳುವಳಿಗಳು ಗಟ್ಟಿಯಾಗಲಿ. ಆದರೆ ಇದು ಸರ್ಕಾರಕ್ಕಿಂತಾ ಮುಖ್ಯವಾಗಿ ನಮ್ಮಹಂತದಲ್ಲಿ ಆಗಬೇಕಾದ ಕೆಲಸ. ಸರ್ಕಾರಗಳು ಇಂತಹದ್ದನ್ನು ಒಂದೇದಿನಕ್ಕೆ ಅದೂ ನೇರಾನೇರ ಮಾಡಲು ಸಾಧ್ಯವಿಲ್ಲ. ಇದು ರಾಜತಾಂತ್ರಿಕವಾಗಿ ಸ್ವಲ್ಪ ಮುಸುಕಿನ ಗುದ್ದಾಟವೇ. ನಿಧಾನಕ್ಕೆ ಸ್ವಲ್ಪ ಸಮಯತೆಗೆದುಕೊಂಡು, ಸ್ಟ್ರಾಟೀಜಿಕ್ ಆಗಿ ಮಾಡಬೇಕಾದ ಕೆಲಸ. ಹಾಗಾದರೆ ಈ ತಕ್ಷಣ ನಮ್ಮ ಸರ್ಕಾರ ಏನು ಮಾಡಬಹುದು? ಚೀನಾದ ನಿದ್ದೆ ಕೆಡಿಸುವುದಕ್ಕೆ ಯಾವ್ಯಾವ ಸೊಳ್ಳೆಗಳನ್ನು ಎಚ್ಚರಿಸಬಹುದು?

ಸರ್ಕರದ ತುರ್ತು ಚೀನಾದ ಬಗೆಗಿನ ತನ್ನ ನಿಲುವನ್ನು ಬದಲಿಸಿಕೊಳ್ಳುವುದು. ಬರೀ ಬದಲಿಸಿಕೊಂಡರೆ ಸಾಕಾಗಲ್ಲ. ಇದೇನೂ ಬರೀ ಟಾಪ್ ಸೀಕ್ರೇಟ್ ಫೈಲುಗಳಲ್ಲಿ ಬರೆದಿಡಬೇಕಾದ ಫುಟ್-ನೋಟ್ ಅಲ್ಲ. ಬದಲಿಗೆ ಚೀನಾದ ಔಷಧಿಯನ್ನು ಚೀನೀಯರ ಮೂಗಿಗೇ ಬಿಡುವ arm-twisting ತಂತ್ರ. ತನ್ನ ಬದಲಾದ ನಿಲುವುಗಳನ್ನು ನಿಧಾನಕ್ಕೆ ಜಗತ್ತಿನ ವೇದಿಕೆಗಳಲ್ಲಿ ಗಮನ ಸೆಳೆಯುವಂತೆ ಹೇಳಬೇಕಾದದ್ದೂ ಸರ್ಕಾರದ ತಂತ್ರವಾಗಬೇಕು. ಹಾಗಾದರೆ ಅವರೊಂದಿಗೆ ಯುದ್ಧವೂ ಮಾಡದೇ, ವ್ಯವಹಾರಗಳನ್ನು ತೀರಾ ತೋಪೆಬ್ಬಿಸದೇ ಏನೇನು ಮಾಡಬಹುದು?

ಮೊದಲಿಗೆ, ಹಿಂದೀ-ಚೀನೀ ಭಾಯಿ ಭಾಯಿ ಎಂಬ ಸವಕಲು ಹೇಳಿಕೆ ಬದಿಗಿಟ್ಟು, ಚೀನಾಕ್ಕೆ ಭಾರತದೆಡೆಗಿನ ತನ್ನ ಸ್ನೇಹವನ್ನು ನಿರೂಪಿಸುವಂತೆ ಕೇಳಿ ಇಕ್ಕಟ್ಟಿಗೆ ಸಿಲುಕಿಸುವುದು. BRICS ಮಾತುಕಥೆಗಳಲ್ಲಿ ಪಾಕಿಸ್ಥಾನದ ತರಲೆಗಳನ್ನು ಬಿಚ್ಚಿಟ್ಟು, ಇದನ್ನು ಶಮನಗೊಳಿಸಲು ಚೀನಾದ ಸಹಾಯವನ್ನು ಕೋರಬೇಕು. ಚೀನಾ ನಮ್ಮೊಂದಿಗಿನ ವ್ಯವಹಾರ ಮತ್ತು ಪಾಕಿಸ್ಥಾನದ ಸ್ನೇಹ ಇವೆರಡರಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವಕೊಡುತ್ತದೆ ಎಂಬುದನ್ನು ಪ್ರಶ್ನಿಸಬೇಕು.

ತೈವಾನ್ ಬಗ್ಗೆ ತನ್ನ ನೀತಿಯನ್ನು ಬದಲಿಸಿ, One China ತತ್ವವನ್ನು ಒಪ್ಪದೇ, ತೈವಾನ್ ಅನ್ನು ಪ್ರತ್ಯೇಕ ದೇಶ ಎಂದು ಪರಿಗಣಿಸಬೇಕು. ಟಿಬೆಟ್ ಬಗ್ಗೆ ಇಂತಹುದೊಂದು ನೀತಿಯನ್ನ ಅನುಸರಿಸಲು ಸಾಧ್ಯವಿದೆ ಅಂತಾದರೆ, ತೈವಾನ ಬಗ್ಗೆಯೂ ಅದೇ ನೀತಿಯನ್ನು ಅನುಸರಿಸಲು ಸಾಧ್ಯವಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿಯ ಗಲಾಟೆಗಳಿಗೆ, ಚೀನಾವಿರೋಧಿ ದೇಶಗಳ ಪರವಾಗಿ ದನಿಯೆತ್ತಬೇಕು. ಏಷ್ಯಾದಲ್ಲಿ ತಾನೇ ದೊಡ್ಡಣ್ಣನೆಂಬ ಜಬರ್ದಸ್ತನ್ನು ಚೀನಾ ಎಲ್ಲೆಡೆ ತೋರಿಸುತ್ತಿದೆ. ಅದಕ್ಕೆದುರಾಗಿ ನಿಲ್ಲಲು ಜಪಾನ್, ಫಿಲಿಫೈನ್ಸ್, ಮಲೇಷ್ಯಗಳು ಭಾರತದಂತಹ ಇನ್ನೊಂದು ಏಷ್ಯನ್ ಹೆವಿವೈಟ್ ದೇಶಕ್ಕಾಗಿ ಕಾಯುತ್ತಿವೆ. Power cannot be given, power has to be taken. ಶಕ್ತಿಪಲ್ಲಟ ಸಾಧ್ಯವಾಗಬೇಕಾದರೆ ಮೊದಲು ನಾನು ಶಕ್ತಿವಂತ ಅಂತಾ ತೋರಿಸಬೇಕಾಗುತ್ತದೆ. ಆ ಸಣ್ಣಮಟ್ಟಿನ ದಾರ್ಷ್ಟ್ಯವನ್ಣೂ ತೋರದೇ ಕೂತರೆ ನಾವು ಕೂತೇ ಇರಬೇಕಾಗುತ್ತದೆ.

ವಿಶ್ವಸಂಸ್ಥೆಯಲ್ಲಿ ಭದ್ರತಾಮಂಡಳಿಯ ಸದಸ್ಯತ್ವ ಆಸೆಗಾಗಿ ಚೀನಾವನ್ನು ಟೀಕಿಸುವ ದೌರ್ಬಲ್ಯವನ್ನು ಕೈಬಿಡಬೇಕು. ಬೇಕಾದರೆ ಆ ಆಸೆಯನ್ನೇ ಐದು ವರ್ಷ ಮುಂದೂಡೋಣ. ಭದ್ರತಾಮಂಡಳಿಯ ಸದಸ್ಯತ್ವಕ್ಕೆ ಉಳಿದದೇಶಗಳ ವೋಟ್ ಕೂಡಾ ಚೀನಾದ ವೋಟಿನಷ್ಟೇ ಮುಖ್ಯ. ನಾವು ಚೀನಾದ ವೀಟೋದ ಹೆದರಿಕೆಗಾಗಿ ಅವರನ್ನು ತೀರಾ ಹಚ್ಚಿಕೊಂಡು ಕೂತಿದ್ದೇವೆ. ತಮಾಷೆಯೆಂದರೆ ಹಿಂದಿನ ಅಷ್ಟೂ ವೋಟಿಂಗುಗಳಲ್ಲಿ ಉಳಿದವರ ಬೆಂಬಲವಿದ್ದರೂ ಚೀನಾವೇ ನಮ್ಮ ಸದಸ್ಯತ್ವಕ್ಕೆ ತಡೆಯೊಡ್ಡಿದ್ದು. ಹೀಗಿದ್ದ ಮೇಲೆ ಇನ್ಯಾವ ಹೆದರಿಕೆ? ಆ ರೌಡಿ ನಿಮ್ಮನ್ನು ನೇರವಾಗಿಯೇ ವಿರೋಧಿಸುತ್ತಾನೆ ಎಂದಾದಮೇಲೆ ಅವನನ್ನು ವಿರೋಧಿಸಲೂ ನಮಗೆ ಹೆದರಿಕೆ ಯಾಕೆ? ಹೊಡೆದಾಟ ಬೇಡ, ಮಾತನಾಡಲು ಯಾವ ಹೆದರಿಕೆ?

ಇದೆಲ್ಲದರ ಜೊತೆಯಲ್ಲಿ, ಚೀನಾದ ಕಂಪನಿಗಳನ್ನು ದೇಶದೊಳಕ್ಕೆ ಬಿಟ್ಟುಕೊಳ್ಳುವ ಪ್ರಕ್ರಿಯೆಗೆ ತಡೆಗೋಡೆಗಳನ್ನು ನಿರ್ಮಿಸುವ ಕೆಲಸವಾಗಬೇಕು. ಹಣ ಅನ್ನೋದು ನೀರಿದ್ದಂತೆ. ನೀವು ಅದನ್ನು ಒಂದು ರೀತಿಯಲ್ಲಿ ತಡೆಗಟ್ಟಿದರೆ ಇನ್ನೊಂದು ಕಡೆಯಿಂದ ಒಳಬಂದೇಬರುತ್ತದೆ. ನೀವು ಚೈನಾದಲ್ಲಿ ರಿಜಿಸ್ಟರ್ ಆಗಿರುವ ಕಂಪನಿಗಳ ಹೂಡಿಕೆ ನಿರಾಕರಿಸಿದರೆ, ಆ ಚೈನೀಸ್ ಕಂಪನಿ ಮಾರಿಷಿಯಸ್ಸಿನಲ್ಲಿ ಶೆಲ್ ಕಂಪನಿ ತೆರೆದು ಬ್ರಿಟೀಷ್ ಎಕ್ಸಿಕ್ಯೂಟಿವುಗಳನ್ನು ಮುಂದಿಟ್ಟುಕೊಂಡು ಭಾರತಕ್ಕೆ ಬರುತ್ತದೆ. ಅದನ್ನು ತಡೆದರೆ ಕೇಮನ್ ದ್ವೀಪಗಳಿಂದ, ಅದನ್ನು ತಡೆದರೆ ಉಗಾಂಡದಿಂದ, ಅದನ್ನೂ ತಡೆದರೆ ಅಮೇರಿಕಾದಿಂದಲೂ ಬರುತ್ತದೆ. ಹೌದು ಇದನ್ನು ತಡೆಯುವುದು ಸುಲಭದ ಮಾತಲ್ಲ. ಹಾಗಂತ ಸುಮ್ಮನೇ ಕೂರಲಾದೀತೇ? ನೂರು ಕಿಲೋಮೀಟರುಗಳ ಪ್ರಯಾಣ ಮೊದಲ ನೂರು ಮೀಟರುಗಳಿಂದಲೇ ಅಲ್ಲವೇ ಪ್ರಾರಂಭವಾಗುವುದು! ಮೊದಲಹಂತವಾಗಿ ಕಡೇಪಕ್ಷ ಡಿಫೆನ್ಸ್, ಐಟಿ, ಬ್ಯಾಂಕಿಂಗ್, ಟಿಲಿಕಾಂ, ಮೀಡಿಯಾದಂತಹ ಕೆಲ ಕ್ರಿಟಿಕಲ್ ವಲಯಗಳಲ್ಲಿ ಚೀನಾದ ನೇರ ಹೂಡಿಕೆಯನ್ನಾದರೂ ತಡೆಯಬಹುದಲ್ಲವೇ? ಈಗ ನೋಡಿ ಓಲಾದಲ್ಲಿ, ಸ್ವಿಗ್ಗಿಯಲ್ಲಿ, ಪಾಲಿಸಿಬಝಾರಿನಲ್ಲಿ, ಬೈಜೂಸಿನಲ್ಲಿ, ಡೆಲಿವರಿಯಲ್ಲಿ, ಫ್ಲಿಪ್ಕಾರ್ಟಿನಲ್ಲಿ, ಝೊಮ್ಯಾಟೋದಲ್ಲಿ, ಪೇಟಿಎಂನಲ್ಲಿ, ಉಡಾನ್, ಬಿಗ್-ಬ್ಯಾಸ್ಕೆಟ್, ಲೆನ್ಸ್ಕಾರ್ಟ್, ಹೈಕ್, ಸ್ನಾಪ್-ಡೀಲ್, ಸಿಟೀಯಸ್-ಟೆಕ್, ಹೆಚ್.ಡಿ.ಎಫ್.ಸಿಯಂತಾ ಕಂಪನಿಗಳಲ್ಲಿ ಚೀನಾ ಬಂದು ಕೂತಾಗಿದೆ. ಇವೆಲ್ಲಾ ಸಣ್ಣಪುಟ್ಟ ಸ್ಟಾರ್ಟ್-ಅಪ್ ಗಳಲ್ಲ. ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಬಲ್ಲಂತಹಾ ಮುಂದಿನ ಜನರೇಷನ್ನಿನ ಕಂಪನಿಗಳು. ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದೇ ಚೀನಾದ ಟೆನ್ಸೆಂಟ್, ಟಿಆರ್ ಕ್ಯಾಪಿಟಲ್, ಅಲಿಬಾಬಾ, ಟೈಬೌರ್ನ್ ಕ್ಯಾಪಿಟಲ್, ಹಿಲ್ಹೌಸ್ ಕ್ಯಾಪಿಟಲ್, ಷುನ್ವೈ ಕ್ಯಾಪಿಟಲ್’ಗಳನ್ನು ನಿಯಂತ್ರಿಸದಿದ್ದರೆ ನಾಳೆ ಸರ್ಕಾರಗಳೇ ಚೀನಾದ ಪ್ರೈವೇಟ್ ಕಂಪನಿಗಳಾಗಲೂ ಸಾಕು.

ಇವಕ್ಕೆ ತಡೆಹಾಕಿದರೆ ಅವು ಬೇರೆ ಕಡೆಯಿಂದ ಬೇರೆ ರೂಪದಲ್ಲಿ ಬರುತ್ತವೆ. ಬರಲಿ. ಅವನ್ನೂ ತಡೆಯೋಣ. ಕಡೇಪಕ್ಷ ಅವರಿಗಿಲ್ಲಿಗೆ ಬರಲು ಪಡಬೇಕಾದ ಕಷ್ಟವನ್ನಾದರೂ ದ್ವಿಗುಣವಾಗಿಸೋಣ. ಹಾಗೆ ಹೊರಗಿನಿಂದ ಬಂದ ಹೂಡಿಕೆಯ ಕಂಪನಿಗಳ ಲಾಭ ಮತ್ತೆ ಇಲ್ಲೇ ಮರುಹೂಡಿಕೆಯಾಗಬೇಕು ಎಂಬ ನಿಯಮವೂ ಬರಲಿ. ಲಾಭದ repatriation ನಿಲ್ಲಿಸಬೇಕು. ಭಾರತದಲ್ಲಿ ಹೂಡಿಕೆ ಮಾಡಿದರೆ 30% ಲಾಭ ಸಿಗುತ್ತೆ ಅಂತಾ ಅಂದುಕೊಂಡಿರುವ ಚೀನಿ ಕಂಪನಿಗಳ ಲಾಭವನ್ನು 15% ಆಗಿಸೋಣ. ಈ ನಿಯಮಗಳೊಂದಿಗೆ ಸ್ವದೇಶೀ ಉತ್ಪಾದನೆಗೆ ಒತ್ತುಕೊಟ್ಟು ಇಲ್ಲಿನ ಮಾರುಕಟ್ಟೆಯನ್ನು ಗಟ್ಟಿಯಾಸಬೇಕು. Infact, ಮೊದಲು ಅಲ್ಲಿನವರ ಹೂಡಿಕೆಗೆ ಕಡಿವಾಣ ಹಾಕಿದರೇನೆ ಸ್ವದೇಶೀ ಉತ್ಪಾದನೆ, ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಗಟ್ಟಿಯಾಗಲು ಸಾಧ್ಯ. ಇಲ್ಲವಾದಲ್ಲಿ ಪ್ರತೀವರ್ಷವೂ ಈ ಚೀನಿ ಹೂಡಿಕೆದಾರರು ತಮ್ಮ ಲಾಭವನ್ನು ಚೀನಾಕ್ಕೆ ಸಾಗಿಸುತ್ತಲೇ ಇರುತ್ತಾರೆ. ಅದು ಅಲ್ಲಿನ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಲೇ ಇರುತ್ತದೆ. ಆ ಹಣ ಬುಲೆಟ್ ಆಗಿ ಪರಿವರ್ತನೆ ಹೊಂದಿ ನಮ್ಮದೇ ಲಡಾಕಿನಲ್ಲಿ ನಮ್ಮದೇ ಸೈನಿಕರ ಎದೆ ಸೀಳುತ್ತದೆ, ವಿದೇಶೀ ಪತ್ರಿಕೆಗಳಲ್ಲಿ ಅಕ್ಷರರೂಪದಲ್ಲಿ ಪ್ರಕಟವಾಗಿ ಭಾರತ ಬ್ರಾಂಡಿಗೆ ಮಸಿ ಬಳಿಯುತ್ತದೆ. ವಿವಿಗಳಲ್ಲಿ ಪ್ರಾದ್ಯಾಪಕರ ಮಾತಿನ ರೂಪದಲ್ಲಿ ನಮ್ಮದೇ ಮಕ್ಕಳ ಹಣೆಬರಹ ಬರೆಯುತ್ತದೆ.

ಮೊದಲಿಗೆ, ಚೀನಿಯರು ಭಾರತದ ರಾಜಕೀಯಕ್ಕೆ ನುಸುಳಿದರು. ನಂತರ, ಅವರು ನಿಮ್ಮ ಮಾರುಕಟ್ಟೆಗಳಿಗೆ ನುಸುಳಿದರು. ಅದರ ನಂತರ, ಅವರು ನಿಮ್ಮ ಮಾಧ್ಯಮ ವಲಯದೊಳಗೆ ನುಸುಳಿದರು. ಅದಾದಮೇಲೆ, ಅವರು ನಿಮ್ಮ ನ್ಯಾಯಾಂಗಕ್ಕೆ ನುಸುಳಿದರು. ಆಮೇಲೆ, ಅವರು ನಿಮ್ಮ ವ್ಯವಹಾರಗಳಿಗೆ ನುಸುಳಿದರು. ಈಗ, ಅವರು ನಿಮ್ಮ ಗಡಿಯೊಳಕ್ಕೆ ನುಸುಳುತ್ತಿದ್ದಾರೆ. ಇಷ್ಟುದಿನ ಸುಮ್ಮನಿದ್ದ ನೀವು ಈಗ ಯಾಕೆ ವಿರೋಧಿಸುತ್ತಿದ್ದೀರಿ ಅಂತಾ ಅವರಿಗೆ ಅರ್ಥವಾಗುತ್ತಿಲ್ಲ. ಅವರಿಗೆ ಇದನ್ನು ಅರ್ಥಮಾಡಿಸುವುದು ಭಾರತ ಸರ್ಕಾರ ಮತ್ತು ಕಟ್ಟಕಡೆಯ ಪ್ರಜೆಯ ಕರ್ತವ್ಯ ಕೂಡಾ.

Read more from ಲೇಖನಗಳು
1 ಟಿಪ್ಪಣಿ Post a comment
  1. ಸರ್ ನಮಸ್ಕಾರ…
    ಈ ಮುಂಚೆ ನನ್ನ ವಾಟ್ಸಾಪ್ ಖಾತೆಗೆ ನಿಲುಮೆಯಲ್ಲಿನ ಅಂಕಣಗಳು ಬರ್ತಾ ಇದ್ವು ಕೇಲವು ತಿಂಗಳುಗಳಿಂದ ನಿಲುಮೆಯಲ್ಲಿನ ಅಂಕಣಗಳು ಬರುವುದು ನಿಂತಿವೆ ದಯವಿಟ್ಟು ನನ್ನ ವಾಟ್ಸಾಪ್ ಖಾತೆಗೆ ಅಂಕಣಗಳನ್ನು ಕಳುಹಿಸಿಕೊಡಿ
    9741415027 ನನ್ನ ವಾಟ್ಸಾಪ್ ಸಂಖ್ಯೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments