ವಿಷಯದ ವಿವರಗಳಿಗೆ ದಾಟಿರಿ

ಜೂನ್ 26, 2020

ಅಧಿಕಾರ ನಿಮಿತ್ತಂ ಬಹುಕೃತ ವೇಷಂ

‍ನಿಲುಮೆ ಮೂಲಕ

– ಬಿದಿರೆ ಪ್ರಕಾಶ್

ಎಂತಹ ಮಾತು? :  ‘ನನ್ನ ಮೇಲೆ ಬಿಜೆಪಿಯ ಕೃಪೆಯಿದೆ, ಬಿಜೆಪಿಯ ಕೃಪೆಯಿಂದ, ಬಿಜೆಪಿಯ ಹಿರಿಯರು ನೀಡಿದ ನನಗೊಂದು ಅವಕಾಶದಿಂದ ನಾನು ಇಂತಹ ಸ್ಥಾನದಲ್ಲಿದ್ದೇನೆ’ ಇದು ಇಡೀ ದೇಶದಲ್ಲಿ ತನ್ನದೇ ನಾಮಬಲದಿಂದ ಬಿಜೆಪಿಯನ್ನು ಮೇರು ಶಿಖರಕ್ಕೆ ಹೊತ್ತೊಯ್ದ ದೇಶದ ನೆಚ್ಚಿನ ಪ್ರಧಾನಿಯವರ ಮಾತುಗಳು.

ಕಳೆದ ಲೋಕಸಭಾ ಚುನಾವಣೆಯಲ್ಲಿ 282ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದದ್ದೂ ಇವರ ನಾಮಬಲದಿಂದಲೇ, ನಂತರ ಒಂದಾದ ಮೇಲೆ ಒಂದರಂತೆ ದೇಶದ ರಾಜ್ಯಗಳೆಲ್ಲಾ ಬಿಜೆಪಿ ಗೆಲುವು ಸಾಧಿಸುತ್ತಿರುವುದೂ ಇವರ ಸಾಮರ್ಥ್ಯದಿಂದಲೇ. ಆದರೆ ಈ ಗೆಲುವು, ಸಾಧನೆಗಳೆಲ್ಲವಕ್ಕೂ ತಾವೇ ಕಾರಣೀ ಪುರುಷನಾಗಿದ್ದರೂ ಅದನ್ನು ‘ಕಾರ್ಯಕರ್ತರ ಗೆಲುವು’, ಹಿರಿಯರು ಕೊಟ್ಟ ಅವಕಾಶ’ ಎಂದು ಹೇಳುವ ಶ್ರೀ ನರೇಂದ್ರ ಮೋದಿಯವರಂತಹ ಮೇರು ವ್ಯಕ್ತಿತ್ವವಿರುವುದೂ ಬಿಜೆಪಿಯಲ್ಲೇ.

ಎಂತಹ ವಿಪರ್ಯಾಸ… ! :  ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಬಿಜೆಪಿಗೆ ಬಂದರು, ಅಧಿಕಾರವನ್ನೂ ಅನುಭವಿಸಿದರು. ಬಿಜೆಪಿಗೆ ಏನನ್ನೂ ಕೊಡದೆ, ಬಿಜೆಪಿಯಿಂದಲೇ ಎಲ್ಲವನ್ನೂ ಪಡೆದರು. ಕೊನೆಗೆ ಬಿಜೆಪಿಯನ್ನೂ, ಬಿಜೆಪಿ ನಾಯಕರನ್ನೂ ಜರಿದು ಬಿಡುವ ಬಿ.ಜೆ. ಪುಟ್ಟಸ್ವಾಮಿಯಂತಹ ನಾಯಕ(?)ರುಗಳು ಇರುವುದೂ ಬಿಜೆಪಿಯಲ್ಲೇ.ಬಿಜೆಪಿಗೆ ಒಳಹೊಕ್ಕಾಗ ಇದರಿಂದ ಬರುವಂತಹ ಮಾತುಗಳೆಂತಹವು? ಬಿಜೆಪಿ ಬಿಡುವಾಗ ಇವರುಗಳ ಬಾಯಿಂದ ಉದುರುವ ನುಡಿಮುತ್ತುಗಳೆಂತವು? ಎಂಎಲ್‌ಸಿ ಸ್ಥಾನ ವಂಚಿತರಾದ ಕೂಡಲೇ ಎಂತಹ ಮಾತುಗಳು ಈ ಪುಟ್ಟಸ್ವಾಮಿಯವರಿಂದ ಬಂದು ಬಿಟ್ಟಿತು! ಇವರು ಬಂದ ಮೇಲೆಯೇ ಬಿಜೆಪಿಯಲ್ಲಿ ಹಿಂದುಳಿದ ವರ್ಗ ಸಂಘಟನೆಯಾಯಿತಂತೆ! ಪುಟ್ಟಸ್ವಾಮಿಯವನರನ್ನು ಒಮ್ಮೆ ಕೇಳಲೇಬೇಕು. ಎಲ್ಲಿದ್ದೀರಾ ಪುಟ್ಟಸ್ವಾಮಿಯವರೇ? ನೀವು ಬರುವ ಮೊದಲು ಬಿಜೆಪಿ ಏನಾಗಿತ್ತು? ನೀವು ಬಂದ ಮೇಲೆ ಬಿಜೆಪಿ ಏನಾಯಿತು? ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ, ಹಾಗೆಯೇ ಬಿಜೆಪಿಗೆ ನೀವು ಬಂದ ಮೇಲೆ, ನೀವೂ, ನಿಮ್ಮ ಅಂತಸ್ತು ಏನಾಯಿತೆಂಬುದನ್ನೂ ಮನನ ಮಾಡಿಕೊಳ್ಳಿ.

ಬಿಜೆಪಿಯಲ್ಲಿಯೇ ಇರದಿದ್ದ ಪುಟ್ಟಸ್ವಾಮಿಯಂತಹವರಿಗೆ ಗೊತ್ತಿರದ ಅನೇಕ ಸಂಗತಿಗಳಿವೆ. ಒಂದು ಸಣ್ಣ ಉದಾಹರಣೆಯನ್ನು ನಿಮ್ಮ ಮುಂದಿಡುತ್ತೇನೆ. ತುಮಕೂರು ಜಿಲ್ಲೆಯಲ್ಲಿ ಕಾ.ಬೋರಪ್ಪ ಎಂಬ ಕಾರ್ಯಕರ್ತರಿದ್ದರು. (ಪುಟ್ಟಸ್ವಾಮಿಯವರ ಹಾಗೆ ‘ನಾಯಕ’ರಲ್ಲ) ಅವರೆಂದೂ ಇವರ ಹಾಗೆ ‘ನಾನು ಹಿಂದುಳಿದ ವರ್ಗದ ನಾಯಕ’ ಎಂದು ಹೇಳಿಕೊಳ್ಳಲೇ ಇಲ್ಲ. ಬಿಜೆಪಿಯೂ ಅವರನ್ನು ಒಂದು ವರ್ಗಕ್ಕೆ ಸೀಮಿತವೆಂದು ಹೇಳಲೂ ಇಲ್ಲ. ಇಡೀ ಜೀವನವನ್ನು ಬಿಜೆಪಿಗಾಗಿಯೇ ತೇಯ್ದರು. ತುರ್ತುಪರಿಸ್ಥಿತಿಯ ಕಾಲದಲ್ಲಿ ಇವರು ಜೈಲಿಗೆ ಹೋದಾಗ, ಜೀವನ ನಿರ್ವಹಣೆಗಾಗಿ ಇವರ ಪತ್ನಿ ಶ್ರೀಮತಿ ರಂಗಮ್ಮನವರು ಹುಟ್ಟಿದೂರಿನಲ್ಲಿ ಟೀ ವ್ಯಾಪಾರ ಮಾಡಲು ಇರುಸು ಮುರುಸಾಗಿ ಸಂಕೋಚದಿಂದ ಉಸಿರುಬಿಟ್ಟರು. ಪಕ್ಕದೂರಿನಲ್ಲಿ ಟೀ ಮಾಡಿ ಮಕ್ಕಳನ್ನು ಸಾಕಿದರು. ಆದರೆ ಕಾ. ಬೋರಪ್ಪನವರಾಗಲೀ, ಆ ಮಹಾತಾಯಿಯಾಗಲೀ, ಆ ಕುಟುಂಬವಾಗಲೇ ಎಂದೂ ತಾವು ಹಿಂದುಳಿದ ವರ್ಗದ ನಾಯಕರೆಂದಾಗಲೀ, ತಾವೇ ಬಿಜೆಪಿಯನ್ನು ಕಟ್ಟಿದೆ ಎಂದಾಗಲೀ ಹೇಳಿಕೊಳ್ಳಲೇ ಇಲ್ಲ.

ಇಂದು ಎರಡನೇ ಬಾರಿಗೆ ಎಂಎಲ್‌ಸಿ ಸ್ಥಾನಕ್ಕೆ ಗಣನೆಗೆ ತೆಗೆದುಕೊಳ್ಳಲಿಲ್ಲವೆಂಬ ಕಾರಣಕ್ಕೆ ಪಕ್ಷ ಬಿಡುತ್ತಿರುವ ಪುಟ್ಟಸ್ವಾಮಿಯವರಂತಹವರಿಗೆ ಹಾಗೂ ಇದೇ ಮನಸ್ಥಿತಿಯಲ್ಲಿ ಇನ್ನೂ ಬಿಜೆಪಿಯಲ್ಲಿರುವ ಇನ್ನಿತರ ನಾಯಕರಿಗೂ ಗೊತ್ತಿರಲಿ! ಬೋರಪ್ಪನವರಿಗೂ ಎಂಎಲ್‌ಸಿಯಾಗುವ ಎಲ್ಲಾ ಅರ್ಹತೆಯೂ ಇತ್ತು. ಪಕ್ಷದಲ್ಲಿ ಅವಕಾಶವೂ ಇತ್ತು. ಆದರೆ ಆಗಲಿಲ್ಲ. ಆದರೆ ಅವರೆಂದೂ ಪಕ್ಷ ಬಿಡುವ ಮಾತಾಡಲಿಲ್ಲ. ಹಿರಿಯರನ್ನು ದೂಷಿಸಲಿಲ್ಲ. ಆದರೆ ಪಕ್ಷಕ್ಕಾಗಿ ಏನನ್ನೂ ಮಾಡದಿದ್ದರೂ ಭಟ್ಟೀತನದಿಂದಲೇ ಎಂಎಲ್‌ಸಿ ಸ್ಥಾನವನ್ನೂ ಗಿಟ್ಟಿಸಿ, ಮಂತ್ರಿ ಪದವಿಯನ್ನೂ ಅನುಭವಿಸಿ, ಈಗ ಎರಡನೇ ಬಾರಿಗೆ ಇವರನ್ನು ತಿರಸ್ಕರಿಸಿದದಕ್ಕೆ ಪುಟ್ಟಸ್ವಾಮಿಯವರಿಗೆ ಬಿಜೆಪಿ, ಬಿಜೆಪಿ ನಾಯಕರೂ ಎಲ್ಲರೂ ಬೇಡವಾಗಿದ್ದಾರೆ.

ಅಷ್ಟಕ್ಕೂ ಸಂಘಟನೆಗಾಗಿ ಪುಟ್ಟಸ್ವಾಮಿಯವರು ಮಾಡುವುದಾದರೂ ಏನು? ಬೆಳಿಗ್ಗೆ ಬಿ.ಎಸ್. ಯಡಿಯೂರಪ್ಪನವರ ಮನೆಗೆ ಹೋಗಿ ಅವರನ್ನು ಸ್ತುತಿಸುವುದು (ಅವರೇ ಹೇಳಿದಂತೆ) ರಾತ್ರಿ ಚಾನಲ್‌ವೊಂದರಲ್ಲಿ ಬಡಬಡಾಯಿಸುವುದು ಎಷ್ಟು ಬಿಟ್ಟರೆ ಸಂಘಟನೆಗಾಗಿ ಇವರೇನು ಮಾಡಿದ್ದಾರೆ? ತಾವು ಬಂದ ಮೇಲೆ ಹಿಂದುಳಿದ ವರ್ಗದ ಸಂಘಟನೆಯಾಯಿತೆಂದು ಬೊಗಳೆ ಬಿಡುವ ಇವರು, ಇವರಿಗಿಂತ ಮೊದಲು ಬಿಜೆಪಿಯ ಹಿಂದುಳಿದ ವರ್ಗದ ಅಧ್ಯಕ್ಷರುಗಳಾಗಿದ್ದವರನ್ನು ಒಮ್ಮೆ ಮಾತನಾಡಿಸಿ ತಿಳಿಯಲಿ. ಅವರಾರನ್ನೂ ಎಂಎಲ್‌ಸಿ ಮಾಡದಿದ್ದರೂ ಸಂಘಟನೆಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಯೇ ಇದ್ದಾರೆ.

ಇನ್ನು ಅಂದು ಹಾಡಿ ಹೊಗಳಿದ ಶ್ರೀ ಯಡಿಯೂರಪ್ಪನವರು ಇವರಿಗೆ ಎಂಎಲ್‌ಸಿ ಸ್ಥಾನ ನಿರಾಕರಣೆಯಾಗುತ್ತಲೇ ನಾಯಕರಾಗಿ ಕಾಣುತ್ತಲೇ ಇಲ್ಲ. ಅಂದು ಅವರನ್ನು ಹಾಡಿ ಹೊಗಳಿದದೂ ಎಂಎಲ್‌ಸಿ ಸ್ಥಾನಕ್ಕಾಗಿ ಇಂದು ಅವರನ್ನು ತೆಗಳುತ್ತಿರುವುದು ಸ್ಥಾನ ವಂಚಿತವಾಯಿತೆಂಬ ಕಾರಣಕ್ಕಾಗಿ. ಶ್ರೀ ಪುಟ್ಟಸ್ವಾಮಿಯವರ ಸಣ್ಣತನದ ಈ ಸಂಗತಿಯನ್ನು ಅರಿಯದಷ್ಟು ನಾಡಿನ ಜನತೆ ಹಾಗೂ ಬಿಜೆಪಿಯ ಕಾರ್ಯಕರ್ತರು ದಡ್ಡರಲ್ಲ. ಇಷ್ಟಾಯಿತು ಇನ್ನು ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರನ್ನು ಹಾಡಿ ಹೊಗಳುವ ಇವರು ಶ್ರೀ ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ ಅವರೊಂದಿಗೆ ಹೋಗಲೇ ಇಲ್ಲ. ಏಕೆಂದರೆ ಎಂಎಲ್‌ಸಿ ಸ್ಥಾನ ಹೋಗಿ ಬಿಡುತ್ತಿತ್ತಲ್ಲಾ! ನಾಟಕವಾಡಿಕೊಂಡೇ ಬಿಜೆಪಿಯಲ್ಲಿ ಇದ್ದ ಇವರ ನಡೆಯನ್ನು ಯಾರೂ ಮರೆತಿಲ್ಲ. ಈಗಲೂ ಕಾಂಗ್ರೆಸ್‌ ನಿಂದ ಇವರಿಗೆ ಅಧಿಕಾರದ ಆಹ್ವಾನ ಬಂದರೆ, ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಪರಮೇಶ್ವರ್ ಅವ್ಯಾಯಮಾನರಾಗುತ್ತಾರೆ. ಡಿ.ಕೆ. ಶಿವಕುಮಾರ್ ಧೀಮಂತ ಯುವನಾಯಕರಾಗುತ್ತಾರೆ. ನಿಜವಾದ ಹಿಂದುಳಿದ ವರ್ಗದ ಏಳ್ಗೆ ಕಾಂಗ್ರೆಸ್‌ನಿಂದ ಮಾತ್ರ ಎಂದು ಪುಟಾನುಪುಟವಾಗಿ ಹೇಳಿಕೆಯನ್ನೂ ನೀಡುತ್ತಾರೆ.

ಎಂತಹ ದೌರ್ಭಾಗ್ಯದ ಸಂಗತಿ ನೋಡಿ! ಮಾತೆತ್ತಿದರೆ ಶ್ಯಾಮ ಪ್ರಸಾದ್ ಮುಖರ್ಜಿ, ದೀನದಯಾಳಜೀ ಎನ್ನುತ್ತಿದ್ದ ತುರುವೇಕೆರೆಯ ಎಂ.ಡಿ. ಲಕ್ಷ್ಮಿನಾರಾಯಣ್ ಎಂಬ ಮಹಾಶಯನಿಗೆ ಶ್ರೀ ಯಡಿಯೂರಪ್ಪನವರು ಅಧಿಕಾರದಿಂದ ಇಳಿಯುತ್ತಲೇ ಎಂಎಲ್‌ಎ ಮಾಡಿದ, ಅಧಿಕಾರ ಅಂತಸ್ತು ಎಲ್ಲವನ್ನೂ ಕೊಟ್ಟ ಬಿಜೆಪಿ, ಎಂಎಲ್‌ಸಿ ಸ್ಥಾನ ಕೊಟ್ಟ ಯಡಿಯೂರಪ್ಪ ಎಲ್ಲರೂ ಬೇಡವಾದರು. ಹಾಡಿ ಹೊಗಳಿ ಬಿಜೆಪಿಗೆ ಒಂದು ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಸ್ಥಾನವನ್ನೂ ಪಡೆದ ಜಿ.ಟಿ. ದೇವೇಗೌಡರಿಗೆ ಈಗ ದೇವೇಗೌಡರ ಮುಂದೆ ಯಡಿಯೂರಪ್ಪನವರು ಕಾಣುತ್ತಲೇ ಇಲ್ಲ. ಯಾವುದೋ ಮಾರ್ಗದಿಂದ ಪರಿಸರ ಮಾಲಿನ್ಯ ಮಂಡಳಿಯ ಅಧ್ಯಕ್ಷ ಹುದ್ದೆಯನ್ನು ಗಳಿಸಿಕೊಂಡ ಪರಮೇಶ್ವರಯ್ಯ ಎಂಬುವನಿಗೆ ಬಿಜೆಪಿಯೂ ಕಾಣುತ್ತಿಲ್ಲ, ಯಡಿಯೂರಪ್ಪ ಬಳಿ ಹೋಗಬೇಕೆಂದೂ ಅನಿಸುತ್ತಿಲ್ಲ. ಈ ತರಹದ ಉದಾಹರಣೆಗಳು ಇಡೀ ರಾಜ್ಯದ ತುಂಬೆಲ್ಲಾ ಇದೆ.

ನಿಜ, ಬಿಜೆಪಿಯ ಕಾರ್ಯಕರ್ತ ಇಂತಹವರನ್ನೆಲ್ಲಾ ಸಹಿಸಿಕೊಂಡಿದ್ದಾನೆ. ಅದಕ್ಕೆ ಕಾರಣವೂ ಇದೆ. ಬಿಜೆಪಿ ಕಾರ್ಯಕರ್ತನಿಗೆ ಅಧಿಕಾರಕ್ಕಾಗಿ ಬಂದು ಹೋಗುವ, ಅಧಿಕಾರಕ್ಕಾಗಿ ಹಾಡಿ ಹೊಗಳುವ ಇಂತಹ ನಾಯಕರುಗಳಾರೂ ಆದರ್ಶವೇ ಅಲ್ಲ, ಏನೂ ಇರದಿದ್ದ ಕಾಲದಲ್ಲಿಯೂ, ಯಾವುದೇ ಅಧಿಕಾರ ಸಿಗುವುದಿಲ್ಲವೆಂದೂ ಖಾತ್ರಿಯಿದ್ದರೂ, ‘ಬಿಜೆಪಿ’ ಎಂಬ ಮೂರಕ್ಷರದ ಸಂಘಟನೆಯನ್ನು ಕಟ್ಟುವುದಕ್ಕಾಗಿ ‘ದೇಶ’ ಎಂಬ ಎರಡಕ್ಷರದ ಉಳಿಗಾಗಿ ಜೀವ ತೇಯ್ದ, ಜೀವ ತೇಯುತ್ತಿರುವ ನಾಯಕರು ಆದರ್ಶವಾಗಿದ್ದಾರೆ. ಅನೇಕ ಬಾರಿ ಪುಟ್ಟಸ್ವಾಮಿಯಂತಹವರಿಗೆ ಮಾನ್ಯತೆ ಸಿಕ್ಕಿದೆ. ಅನೇಕರು ಕಡೆಗಣನೆಗೆ ಒಳಗಾಗಿದ್ದಾರೆ, ಅವಮಾನಿತರಾಗಿದ್ದಾರೆ. ಆದರೂ ಎಲ್ಲವನ್ನೂ ಸಹಿಸಿಕೊಂಡು ಮೌನವಾಗಿ ಸಂಘಟನೆಗಾಗಿ ಶ್ರಮಿಸುತ್ತಿದ್ದಾರಲ್ಲಾ! ಅವರುಗಳು ಬಿಜೆಪಿಯ ಕಾರ್ಯಕರ್ತರಿಗೆ ಆದರ್ಶ.

ನೆನಪಿಡಿ, ಅಧಿಕಾರ ಸಿಗುವುದಿಲ್ಲವೆಂದ ಕೂಡಲೇ ಈ ಆದರ್ಶಗಳೆಲ್ಲಾ ಬಿಜೆಪಿ ಬಿಟ್ಟು ಹೋಗಿದ್ದರೆ ಈ ವೇಳೆಗೆ ಬಿಜೆಪಿಯಲ್ಲಿ ಯಾರೂ ಇರುತ್ತಲೇ ಇರುತ್ತಿರಲಿಲ್ಲ, ಬಿಜೆಪಿಯೂ ಇರುತ್ತಿರಲಿಲ್ಲ. ಪುಟ್ಟಸ್ವಾಮಿಯಂತವರು ಎಂಎಲ್‌ಸಿಯೂ ಆಗುತ್ತಿರಲಿಲ್ಲ. ಬಿಜೆಪಿಯ ಅಧಿಕಾರದ ಅವಧಿಯಲ್ಲೂ ಜಿ.ಟಿ. ದೇವೇಗೌಡರಿಗೆ ಗೂಟದ ಕಾರು, ಎಂಡಿಎಲ್‌ಗೆ, ಎಂಎಲ್‌ಸಿ ಸ್ಥಾನ (ಪಟ್ಟಿ ಉದ್ದ ಇದೆ) ಸಿಗುತ್ತಿರಲಿಲ್ಲ.

ಕೊನೆಯದಾಗಿ ಒಂದು ಮಾತು. ಬಿಜೆಪಿಯ ಕಾರ್ಯಕರ್ತನಿಗೆ ಇಂತಹವರನ್ನು ಸಹಿಸಿಕೊಳ್ಳುವುದೂ ಗೊತ್ತಿದೆ. ಇಂತಹವರು ಬಿಟ್ಟು ಹೋದಾಗ ಸಂಘಟನೆಯನ್ನು ಕಟ್ಟುವುದೂ ಗೊತ್ತಿದೆ. ಏಕೆಂದರೆ ಬಿಜೆಪಿಗೆ ಬಂದವರಿದ್ದಾರೆ, ಬಿಜೆಪಿ ತೊರೆದವರಿದ್ದಾರೆ, ಬಿಜೆಪಿ ವಿರುದ್ಧ ತೊಡೆ ತಟ್ಟಿದವರಿದ್ದಾರೆ, ಪುನಃ ಬಿಜೆಪಿಯ ಬಾಗಿಲು ಬಡಿದವರೂ ಇದ್ದಾರೆ. ಆದರೆ ಬಿಜೆಪಿ ಎಂದೂ ಬದಲಾಗಿಲ್ಲ. ಬಿಜೆಪಿಯೆಂದೂ ಇಂತಹ ನಾಯಕರುಗಳ ಮನೆ ಬಾಗಿಲಿಗೆ ಹೋಗಿಯೂ ಇಲ್ಲ, ಹೋಗುವುದೂ ಇಲ್ಲ. ಬದಲಾಗಿರುವುದು ಇವರುಗಳೇ, ಇಂತಹವರು ಬಂದಾಗ ಜೊತೆಯಾಗಿ ಕರೆದೊಯ್ಯುವುದೂ ಬಿಜೆಪಿ ಕಾರ್ಯಕರ್ತನಿಗೆ ಗೊತ್ತಿದೆ. ಬರದಿದ್ದರೆ ಬಿಟ್ಟು ಸಂಘಟನೆ ಕಟ್ಟುವುದೂ ಗೊತ್ತಿದೆ. ಅಡ್ಡ ಬಂದರೆ ಮೆಟ್ಟಿ ನಿಂತು ಸಂಘಟನೆ ಮಾಡುವುದು ತಿಳಿದಿದೆ. ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಇಂತಹ ನಾಯಕರುಗಳಿಗೆ ಧಿಕ್ಕಾರವಿರಲಿ, ಇಂತಹವರುಗಳ ಭಟ್ಟಂಗಿತನದ, ಅವಕಾಶವಾದಿ ರಾಜಕಾರಣದ ಅಂತ್ಯವಾಗಲಿ, ವಿಶ್ವದ ಅತ್ಯಂತ ಶ್ರೇಷ್ಠ ವ್ಯವಸ್ಥೆ ಪ್ರಜಾಪ್ರಭುತ್ವ ಉಳಿಯಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments