ವಿಷಯದ ವಿವರಗಳಿಗೆ ದಾಟಿರಿ

ಜುಲೈ 4, 2020

1

ಕಾಂಗ್ರೆಸೀ – ಚೀನೀ ಭಾಯಿ ಭಾಯಿ, ದೇಶ ಬಡಿದುಕೊಳ್ಳಬೇಕಿದೆ ಬಾಯಿ ಬಾಯಿ!

‍ನಿಲುಮೆ ಮೂಲಕ

– ಪ್ರೇಮಶೇಖರ

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಚೈನೀಸ್ ಕಮ್ಯೂನಿಸ್ಟ್ ಪಾರ್ಟಿಗಳ ನಡುವೆ ಹನ್ನೆರಡು ವರ್ಷಗಳ ಹಿಂದೆ ಅಂದರೆ 2008ರಲ್ಲಿ ರಹಸ್ಯ ಒಪ್ಪಂದವೊಂದಾಗಿದೆಯಂತೆ.  ವರದಿಗಳ ಪ್ರಕಾರ ಆ ಒಪ್ಪಂದಕ್ಕೆ ಸಹಿ ಹಾಕಿದ್ದು ಕಾಂಗ್ರೆಸ್ ಪರವಾಗಿ ಆಗಿನ ಜನರಲ್ ಸೆಕ್ರೆಟರಿ ಶ್ರೀ ರಾಹುಲ್ ಗಾಂಧಿ ಮತ್ತು ಸಿಸಿಪಿ ಪರವಾಗಿ ಆಗಿನ ಚೀನೀ ಉಪಾಧ್ಯಕ್ಷ ಷಿ ಜಿನ್‍ಪಿಂಗ್. ಈ ‘ರಹಸ್ಯೋತ್ಪಾಟನೆ’ ಇದುವರೆಗೆ ನಮ್ಮನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳಿಗೆ ಉತ್ತರ ಒದಗಿಸುವಂತಿದೆ.  ಈ ಪ್ರಶ್ನೆಗಳು ಮತ್ತು ಉತ್ತರಗಳು ಏನು ಎನ್ನುವ ಮೊದಲು ಇದನ್ನೊಮ್ಮೆ ಓದಿ-

“ಚೀನೀಯರ ಜತೆಗಿನ ನಿಮ್ಮ ಆತ್ಮೀಯ ಸ್ನೇಹಸಂಬಂಧಗಳನ್ನು ಉಪಯೋಗಿಸಿಕೊಂಡು, (ಮಸೂದ್ ಅಜ಼ರ್ ವಿಷಯದಲ್ಲಿ) ಭಾರತಕ್ಕೆ ಹಿತಕಾರಿಯಾಗಿ ನಡೆದುಕೊಳ್ಳುವಂತೆ ಚೀನಾವನ್ನು ನೀವು ಮನವೋಲಿಸಬಹುದಾಗಿತ್ತಲ್ಲ?  ಹಾಗೇಕೆ ಮಾಡಲಿಲ್ಲ?  ಬದಲಾಗಿ, ಇಂದು ಚೀನಾ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ನಿವು ಖುಷಿ ಪಡುತ್ತಿದ್ದೀರಲ್ಲ?  ಚೀನೀ ನಡವಳಿಕೆಯನ್ನು ನಿಮ್ಮ ಮೋದಿ-ವಿರುದ್ಧದ ರಾಜಕೀಯ ಹಿತಾಸಕ್ತಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದೀರಲ್ಲ?” ಎಂದು ರವಿಶಂಕರ್ ಪ್ರಸಾದ್ ಮತ್ತು ಅರುಣ್ ಜೇಟ್ಲಿ ಕೇಳುವ ಪ್ರಶ್ನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಚೀನಾ ಕುರಿತಾಗಿ ರಾಹುಲ್ ಗಾಂಧಿವರ ನೀತಿಗಳನ್ನು ಅವಲೋಕಿಸೋಣ.

ಜೂನ್-ಆಗಸ್ಟ್ 2017ರ ದೊಕ್ಲಾಮ್ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ನವದೆಹಲಿಯಲ್ಲಿನ ಚೀನೀ ದೂತಾವಾಸಕ್ಕೆ ಭೇಟಿ ನೀಡಿ, ಚೀನೀ ರಾಯಭಾರಿಯ ಜತೆ ಮಾತುಕತೆ ನಡೆಸಿದ್ದರು.  “ಈ ದೇಶದ ಒಬ್ಬ ನಾಯಕನಾಗಿ ದೊಕ್ಲಾಮ್ ಬಗ್ಗೆ ವಿವರಗಳನ್ನು ಪಡೆದುಕೊಳ್ಳಲು ನನಗೆ ಹಕ್ಕಿದೆ” ಎಂದವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.  ಆದರೆ ಆ ಭೇಟಿಯಲ್ಲಿ ದೊಕ್ಲಾಮ್ ಬಗ್ಗೆ  ಯಾವುದೇ ಮಾತುಕತೆ ನಡೆಯಲಿಲ್ಲ ಎನ್ನುವ ಸೂಚನೆ ವರ್ಷದ ನಂತರ ರಾಹುಲ್ ಗಾಂಧಿಯವರಿಂದಲೇ ಬಂತು!  ಸೆಪ್ಟೆಂಬರ್ 2018ರಲ್ಲಿ ಲಂಡನ್‌ನಲ್ಲಿ ಪತ್ರಕರ್ತರ ಸಮಾವೇಶದಲ್ಲಿ “…ನೀವು ಅಧಿಕಾರದಲ್ಲಿದ್ದರೆ ದೊಕ್ಲಾಮ್ ವಿವಾದವನ್ನು ಹೇಗೆ ನಿಭಾಯಿಸುತ್ತಿದ್ದಿರಿ?” ಎಂಬ ಪ್ರಶ್ನೆ ಬಂದಾಗ ರಾಹುಲ್ ಗಾಂಧಿ “ದೊಕ್ಲಾಮ್ ಬಗ್ಗೆ ನನ್ನಲ್ಲಿ ವಿವರಗಳಿಲ್ಲ.  ಹೀಗಾಗಿ ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದಾಗದು” ಎಂದುತ್ತರಿಸಿದರು.  ಇದರರ್ಥ ವರ್ಷದ ಹಿಂದೆ ಅವರು ದೊಕ್ಲಾಮ್ ಬಗ್ಗೆ ಮಾತಾಡುವ ನೆಪದಲ್ಲಿ ಚೀನೀ ರಾಯಭಾರಿಯನ್ನು ಭೇಟಿಯಾದಾಗ ಅವರು ಮಾತಾಡಿರುವುದು ಬೇರೆಯೇ ವಿಷಯ!  ಇದು ಸೂಚಿಸುವುದು ಚೀನೀಯರ ಜತೆ ರಾಹುಲ್ ಗಾಂಧಿ ಹೊಂದಿರಬಹುದಾದ, ಭಾರತ-ಚೀನಾ ಸಂಬಂಧಗಳಿಂದ ಬೇರೆಯಾದ, ಹೊಕ್ಕುಬಳಕೆಯ ಬಗ್ಗೆ.  ಇದರ ಸೂಚನೆ ಮತ್ತೊಂದು ಪ್ರಕರಣದಲ್ಲೂ ದೊರೆಯುತ್ತದೆ.  ಕಳೆದ ಸೆಪ್ಟೆಂಬರ್‌ನಲ್ಲಿ ರಾಹುಲ್ ಗಾಂಧಿ ಕೈಲಾಶ್ ಮಾನ್‌ಸರೋವರ್ ಯಾತ್ರೆಯ ಮೊದಲ ಹಂತವಾಗಿ ಕಾಠ್ಮಂಡುಗೆ ಹೊರಟಾಗ ಅವರನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬೀಳ್ಕೊಡಲು ನವದೆಹಲಿಯಲ್ಲಿನ ಚೀನೀ ರಾಯಭಾರಿ ಬಯಸಿದ್ದರು. ಭಾರತ ಸರ್ಕಾರದ ಅನುಮತಿ ಸಿಗದೇಹೋದದ್ದರಿಂದ ಅದು ಸಾಧ್ಯವಾಗಲಿಲ್ಲ.

ರಾಷ್ಟ್ರನಾಯಕರು ವಿದೇಶವೊಂದಕ್ಕೆ ಅಧಿಕೃತ ಭೇಟಿ ನೀಡಲು ಹೊರಡುವಾಗ ಆ ದೇಶದ ರಾಜತಂತ್ರಜ್ಞರು ವಿಮಾನನಿಲ್ದಾಣದಲ್ಲಿ ಬೀಳ್ಕೊಡುವುದು ವಾಡಿಕೆ.  ಆದರೆ ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯೂ ಅಲ್ಲ, ರಾಷ್ಟ್ರಪತಿಯೂ ಅಲ್ಲ.  ಜತೆಗೇ, ಅವರ ಭೇಟಿ ಅಧಿಕೃತ ಭೇಟಿಯೂ ಅಲ್ಲ.  ತೀರ್ಥಕ್ಷೇತ್ರವೊಂದಕ್ಕೆ ವೈಯುಕ್ತಿಕ ಭೇಟಿಯಷ್ಟೇ.  ಹಾಗಿದ್ದೂ ಚೀನೀಯರು ರಾಹುಲ್ ಗಾಂಧಿಯವರ ಬಗ್ಗೆ ಇಷ್ಟೇಕೆ ಆಸ್ಥೆ ತೋರುತ್ತಿದ್ದಾರೆ ಎನ್ನುವ ಬಗ್ಗೆ ವಿವರಗಳು ಲಭ್ಯವಿಲ್ಲ.  ಆದರೆ, ಲಭ್ಯವಿರುವ ಕೆಲ ಸಾಂಧರ್ಭಿಕ ಬೆಳವಣಿಗೆಗಳು ಗಾಬರಿಯನ್ನುಂಟುಮಾಡುವಂತಿವೆ.

‘ಅಭಿವೃದ್ಧಿ ಯೋಜನೆಗಾಗಿ ನೆರವು’ ಎಂಬ ಅಮಾಯಕ ಹಣೆಪಟ್ಟಿಯಡಿಯಲ್ಲಿ ಚೀನಾ ಕಳೆದೈದು ವರ್ಷಗಳಲ್ಲಿ ವಿದೇಶಗಳಲ್ಲಿ ಆರಂಭಿಸಿರುವ ಬಹುತೇಕ ಯೋಜನೆಗಳು ನಿರರ್ಥಕ.  ನೌಕಾಸಂಚಾರವೇನೂ ಹೆಚ್ಚಿಗಿರದ ಬಂದರು (ಶ್ರೀಲಂಕಾ), ಕಡಿಮೆ ಸಂಚಾರವಿರುವ ರಸ್ತೆ (ಮಾಂಟೆನೀಗ್ರೋ), ಲಾಭದಾಯಕವಲ್ಲದ ವಿಮಾನ ನಿಲ್ದಾಣಗಳು (ಝಾಂಬಿಯಾ, ಶ್ರೀಲಂಕಾ)- ಇಂತಹ ನಿರರ್ಥಕ ಯೋಜನೆಗಳಲ್ಲಿ ಕೆಲವು.  ಜತೆಗೆ ತನಗಷ್ಟೇ ಉಪಯೋಗವಾಗುವ ಬಂದರುಗಳು, ದೀರ್ಘ ರಸ್ತೆ ಮತ್ತು ರೈಲು ಮಾರ್ಗಗಳನ್ನು ಲಾವೋಸ್, ಕಾಂಬೋಡಿಯಾ, ಪಾಕಿಸ್ತಾನ, ಕೆನ್ಯಾ, ಜಿಬೂತಿ ಸೇರಿದಂತೆ ಹಲವಾರು ದೇಶಗಳಲ್ಲಿ ಚೀನಾ ನಿರ್ಮಿಸುತ್ತಿದೆ.  ಈ ಯೋಜನೆಗಳ ವೆಚ್ಚದ ಒಂದಂಶವಷ್ಟೇ ನೆರವು, ದೊಡ್ಡ ಅಂಶ ಆ ದೇಶಗಳಿಗೆ ಚೀನಾದ ಸಾಲದ ರೂಪದಲ್ಲಿರುತ್ತದೆ ಮತ್ತು ಬಡ್ಡಿದರ ಅಂತರರಾಷ್ಟ್ರಿಯ ಹಣಕಾಸು ಸಂಸ್ಥೆಗಳು ವಿಧಿಸುವ ಬಡ್ಡಿದರಕ್ಕಿಂತ ಹೆಚ್ಚಾಗಿರುತ್ತದೆ!  ಇದೆಲ್ಲದರ ಅರ್ಥ, ಲಾಭದಾಯಯಕವಲ್ಲದ ಯೋಜನೆಗಳಿಗಾಗಿ ಸಾಲ ಮಾಡಿ ಹೂಡಿದ ಹಣ ಆ ದೇಶಗಳಿಗೆ ವಾಪಸ್ ಬರುವುದಿಲ್ಲ!  ಅಂದರೆ ಚೀನಾದ ಸಾಲವನ್ನು ತೀರಿಸಲು ಆ ದೇಶಗಳಿಗೆ ಎಂದೂ ಸಾಧ್ಯವಾಗುವುದಿಲ್ಲ!  ಮರುಪಾವತಿಯಾಗದ ಸಾಲಕ್ಕೆ ಬದಲಾಗಿ ತಾನು ನಿರ್ಮಿಸಿದ ಬಂದರು, ವಿಮಾನ ನಿಲ್ದಾಣ, ರಸ್ತೆಗಳನ್ನು ತನಗೆ ದೀರ್ಘಕಾಲಿಕ ಗುತ್ತಿಗೆಗೆ ನೀಡುವಂತೆ ಸಾಲಗಾರ ದೇಶಗಳನ್ನು ಒತ್ತಾಯಿಸಿ ಆ ದೇಶಗಳ ನೆಲದ ಮೇಲೆ ಚೀನೀ ಅಧಿಕಾರ ಸ್ಥಾಪಿಸುವುದು ಚೀನೀ ಅಧ್ಯಕ್ಷ ಜಿನ್‌ಪಿಂಗ್‌ರ ಹುನ್ನಾರ.  ಇದನ್ನವರು ಈಗಾಗಲೇ ಶ್ರೀಲಂಕಾದಲ್ಲಿ, ಜಿಬೂತಿಯಲ್ಲಿ, ಕೆನ್ಯಾದಲ್ಲಿ, ಲಾವೋಸ್‌ನಲ್ಲಿ, ಕಾಂಬೋಡಿಯಾದಲ್ಲಿ ಮಾಡಿದ್ದಾರೆ.  ಮಾಂಟೆನೀಗ್ರೋ, ಪಾಕಿಸ್ತಾನಗಳಲ್ಲಿ ಮಾಡಹೊರಟಿದ್ದಾರೆ.  ಇದನ್ನವರು ಮಾಡುತ್ತಿರುವುದು ವಿದೇಶಗಳಲ್ಲಿನ ಭ್ರಷ್ಟ ನಾಯಕರಿಗೆ ಹೇರಳ ಲಂಚ ನೀಡುವ ಮೂಲಕ ಅವರನ್ನು ತಮ್ಮ ಬುಟ್ಟಿಗೆ ಕೆಡವಿಕೊಂಡು ಅವರು ತಮ್ಮ ದೇಶಕ್ಕೇ ಹಾನಿಕಾರಕವಾದ ಒಪ್ಪಂದಗಳನ್ನು ಚೀನಾ ಜತೆ ಮಾಡಿಕೊಳ್ಳುವಂತೆ ಮಾಡುವುದರ ಮೂಲಕ.

ಎಶಿಯಾದಲ್ಲಿ ತನ್ನೆಲ್ಲಾ ಯೋಜನೆಗಳಿಗೆ ತಡೆಯಾಗಿ ನಿಂತಿರುವ ಭಾರತವನ್ನೇ ತಮ್ಮ ಬಲೆಗೆ ಕೆಡವಿಕೊಳ್ಳುವುದು ಚೀನಾಗೆ ಅತ್ಯಂತ ಅನುಕೂಲಕರ ಎಂದು ಚಿನ್‌ಪಿಂಗ್ ಅರಿತಿದ್ದಾರೆ.  ಅದು ಮೋದಿ ಅಧಿಕಾರದಲ್ಲಿರುವವರೆಗೂ ಸಾಧ್ಯವಾಗುವುದಿಲ್ಲ.  ಅಲ್ಲದೇ, ಭಾರತಕ್ಕೆ ಸಾಲ ಕೊಟ್ಟು ಈ ದೇಶವನ್ನು ಸಾಲಸಂಕೋಲೆಯಲ್ಲಿ ಸಿಲುಕಿಸಿಕೊಳ್ಳಲೂ ಸಾಧ್ಯವಿಲ್ಲ.

ಬದಲೀ ಮಾರ್ಗವಾಗಿ, ಮೋದಿ ಸರ್ಕಾರವನ್ನು ಉರುಳಿಸಿ ತಮಗನುಕೂಲವಾದ ಬೇರೊಂದು ಸರ್ಕಾರವನ್ನು ಅಸ್ತಿತ್ವಕ್ಕೆ ತರುವಂತೆ ಮಾಡುವುದು ಜಿನ್‌ಪಿಂಗ್‌ರ ಗುರಿಯಾಗಿರಬಹುದು.  ಅದಕ್ಕಾಗಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೇ ತಮ್ಮತ್ತ ಸೆಳೆಯಲು ಹವಣಿಸುತ್ತಿರುವಂತಿದೆ.  ದೊಕ್ಲಾಮ್ ಬಿಕ್ಕಟ್ಟಿನ ಸಮಯದಲ್ಲಿ ರಾಹುಲ್ ಗಾಂಧಿ ಚೀನೀ ರಾಯಭಾರಿಯನ್ನು ಭೇಟಿಯಾದದ್ದು, ವರ್ಷದ ನಂತರ ಕೈಲಾಶ್ ಮಾನ್‌ಸರೋವರ್ ಯಾತ್ರೆಗೆಂದು ಹೊರಟಾಗ ಅವರನ್ನು ‘ಬೀಳ್ಕೊಡಲು’ ನವದೆಹಲಿಯಲ್ಲಿನ ಚೀನೀ ರಾಜತಂತ್ರಜ್ಞ ವಿಮಾನನಿಲ್ದಾಣಕ್ಕೆ ಹೋಗಬಯಸಿದ್ದು- ಈ ಎರಡು ‘ಬಹಿರಂಗ’ ಉದಾಹರಣೆಗಳು ಕಾಂಗ್ರೆಸ್ ಅಧ್ಯಕ್ಷರನ್ನು ಸೆಳೆಯಲು ಜಿನ್‌ಪಿಂಗ್ ಹೂಡಿರಬಹುದಾದ ತಂತ್ರದ ಸುಳಿವನ್ನು ನೀಡುವುದರ ಜತೆಗೆ, ಚೀನೀ ತಂತ್ರಗಳಿಗೆ ರಾಹುಲ್ ಗಾಂಧಿ ಸ್ಪಂದಿಸುತ್ತಿರಬಹುದೇನೋ ಎಂಬ ಅನುಮಾನವನ್ನೂ ಉಂಟುಮಾಡುತ್ತವೆ.  ದೇಶವಿಂದು ಎಚ್ಚರಿಕೆಯಿಂದ ಗಮನಿಸಬೇಕಾದ ವಿಷಯವಿದು.

ಹದಿನಾಲ್ಕು ತಿಂಗಳುಗಳ ಹಿಂದೆ ನಾನು ಬರೆದ ಮಾತುಗಳಿವು.

ಈಗ ನಮ್ಮನ್ನು ಕಾಡುತ್ತಿದ್ದ ಪ್ರಶ್ನೆಗಳತ್ತ ಹೊರಳೋಣ.  2008ರ ಜುಲೈನಲ್ಲಿ ಬೀಜಿಂಗ್‍ನಲ್ಲಿ ಒಲಿಂಪಿಕ್ಸ್ ಪಂದ್ಯಾವಳಿಗಳು ನಡೆದವಷ್ಟೇ.  ಆಗ ಚೀನೀ ಸರ್ಕಾರ ಶ್ರೀಮತಿ ಸೋನಿಯಾ ಗಾಂಧಿ ಮತ್ತು,ಶ್ರೀ ರಾಹುಲ್ ಗಾಂಧಿಯವರನ್ನು ಬೀಜಿಂಗ್‍ಗೆ ವಿಶೇಷ ಆಮಂತ್ರಣವಿತ್ತು ಆಹ್ವಾನಿಸಿತ್ತು.  ಆ ಆಹ್ವಾನ ಶ್ರೀಮತಿ ಪ್ರಿಯಾಂಕಾ ವಾದ್ರಾ ಅವರೂ ಸೇರಿದಂತೆ ಗಾಂಧಿ ಪರಿವಾರದ ಇನ್ನೂ ಹಲವರಿಗೆ ಬಂದಿತ್ತು ಎಂಬ ಸುದ್ದಿ ಇದೆ.  ಈ ಬಗ್ಗೆ ನನ್ನಲ್ಲಿ ನಿಖರ ವಿವರಗಳಿಲ್ಲ.  ಇರಲಿ, ಬೀಜಿಂಗ್‍ನಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರುಗಳನ್ನು ವಿಶೇಷ ಅತಿಥಿಗಳಂತೆ ನೋಡಿಕೊಳ್ಳಲಾಯಿತಂತೆ.  ಅಂದಿನ ಭಾರತ ಸರ್ಕಾರದಲ್ಲಿ ಯಾವುದೇ ಅಧಿಕೃತ ಜವಾಬ್ದಾರಿಯನ್ನೂ ಹೊಂದಿಲ್ಲದಿದ್ದ ಇವರಿಬ್ವರನ್ನು ಚೀನೀ ಸರ್ಕಾರ ಈ ಬಗೆಯಾಗಿ ಸತ್ಕರಿಸಿದ್ದರ ಕಾರಣವೇನಿರಬಹುದು ಎಂಬ ಪ್ರಶ್ನೆ ಕಾಡಿದ್ದು ನನ್ನನ್ನಷ್ಟೇ ಇರಲಾರದು.  ಈಗ ಬಯಲಾಗಿರುವ ವಿವರಗಳ ಪ್ರಕಾರ ಚೀನೀ ಕಮ್ಯೂನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್ ನಡುವೆ ರಹಸ್ಯ ಒಪ್ಪಂದವಾದದ್ದು ಆ ವರ್ಷವೇ!  ಟೂ ಪ್ಲಸ್ ಟೂ ಈಸ್ ಫೋರ್!

ಈ ಒಪ್ಪಂದದಿಂದ ಭಾರತಕ್ಕೆ ಏನು ಲಾಭವಾಯಿತು ಎಂದು ಗೊತ್ತಿಲ್ಲ.  ಆದರೆ ರಾಜೀವ್ ಗಾಂಧಿ ಫೌಂಡೇಷನ್‍ಗೆ ನವದೆಹಲಿಯಲ್ಲಿನ ಚೀನೀ ದೂತಾವಾಸ ಮತ್ತು ಚೀನೀ ಸರ್ಕಾರ ಧನಸಹಾಯ ಒದಗಿಸುತ್ತಿದ್ದವು ಎಂಬ ಸುದ್ದಿ ಈಗ ಹೊರಬಿದ್ದಿದೆ.  ಈಗ ನಾನು ಮತ್ತೊಂದು ಸಂದರ್ಭದಲ್ಲಿ ಬರೆದಿದ್ದ ಈ ಮಾತುಗಳನ್ನು ಓದಿ-

ಯುಪಿಎ ಅಧಿಕಾರಾವಧಿಯಲ್ಲಿ ರಕ್ಷಣೆ ಆದ್ಯತೆ ಕಳೆದುಕೊಂಡ ಪರಿಣಾಮವಾಗಿ ಗಡಿಯ ಮೇಲೆ ಭಾರತದ ಹಿಡಿತ ಸಡಿಲಾಗುತ್ತಾ ಹೋದ ದುರಂತವನ್ನು ಕಾಣುತ್ತೇವೆ.  ಇಲ್ಲಿ ಎರಡು ಪ್ರಕರಣಗಳನ್ನು ಪ್ರಮುಖವಾಗಿ ಉಲ್ಲೇಖಿಸಬೇಕು.  2008ರ ಸೆಪ್ಟೆಂಬರ್ ನಲ್ಲಿ ಲದಾಖ್‌ನ ಕೊಂಗ್‌ಕಾ ಕಣಿವೆಗೆ ಚೀನೀ ಸೇನೆ ಅತಿಕ್ರಮ ಪ್ರವೇಶ ಮಾಡಿತು.  ಮಾತುಕತೆಗಳ ಮೂಲಕ ಸಮಸ್ಯೆಯ ಪರಿಹಾರ ಸಾಧ್ಯವಿದೆ ಎಂದು ವಿದೇಶಮಂತ್ರಿ ಎಸ್. ಎಂ. ಕೃಷ್ಣರ ಮೂಲಕ ಘೋಷಿಸಿದ ಭಾರತ ಸರ್ಕಾರ ಮುಂದೇನು ಮಾಡಿತೆಂಬ ಬಗ್ಗೆ ವಿವರಗಳಿಲ್ಲ.  2013ರ ಪ್ರಕರಣವಂತೂ ಇನ್ನಷ್ಟು ಅದ್ವಾನ.  ಏಪ್ರಿಲ್ 15ರಂದು ಐವತ್ತು ಚೀನೀ ಸೈನಿಕರ ಪಡೆಯೊಂದು ಉತ್ತರ ಲಡಾಖ್‌ನಲ್ಲಿರುವ ಭಾರತೀಯ ಸೇನಾಠಿಕಾಣೆ ದೌಲತ್ ಬೇಗ್ ಓಲ್ದಿಗೆ ಹೊಂದಿಕೊಂಡಂತಿರುವ ದೇಪ್‌ಸಂಗ್ ಬಯಲುಪ್ರದೇಶದಲ್ಲಿ ಹತ್ತೊಂಬತ್ತು ಕಿಲೋಮೀಟರ್‌ಗಳಷ್ಟು ಪಶ್ಚಿಮಕ್ಕೆ ಮುಂದೊತ್ತಿ ಬಂತು.  ಅದು ಮೇ 6ರಂದು ಹಿಂದೆ ಸರಿದಿತೇನೋ ನಿಜ.  ಆದರೆ ಮೇ 5ರಂದು ನಡೆದ ಬ್ರಿಗೇಡಿಯರ್ ಮಟ್ಟದ ಮೂರನೆಯ ಸುತ್ತಿನ ಮಾತುಕತೆಯಲ್ಲಿ ಆಕ್ರಮಿತ ಪ್ರದೇಶದಿಂದ ಹಿಂತಿರುಗಲು ಚೀನೀ ಸೇನೆಯ ಮನವೋಲಿಕೆಗಾಗಿ ಭಾರತ ‘ರಿಯಾಯಿತಿ’ ತೋರಬೇಕಾಯಿತು.  ಇದಕ್ಕೆ ಕಾರಣ ಇನ್ನೊಂದು ವರ್ಷದಲ್ಲಿ ಚುನಾವಣೆಗಳನ್ನೆದುರಿಸಬೇಕಾಗಿದ್ದ ಯುಪಿಎ ಅದಾಗಲೇ ಮೈತುಂಬಾ ಸುತ್ತಿಕೊಂಡಿದ್ದ ಹಗರಣಗಳ ಜತೆ ಈ ಬಿಕ್ಕಟ್ಟನ್ನೂ ತನ್ನ ತಲೆಯ ಮೇಲೆಳೆದುಕೊಳ್ಳಲು ಹೆದರಿದ್ದು.  ಹೀಗೆ ಒತ್ತಡಗಳಿಂದಾಗಿ ಭಾರತ ಮಾಡಿಕೊಂಡ ಒಳಒಪ್ಪಂದದ ಪ್ರಕಾರ ದೇಪ್‌ಸಂಗ್‌ನಿಂದ ಚೀನೀ ಸೈನಿಕರ ಹಿಂತಿರುಗುವಿಕೆಗೆ ಪ್ರತಿಯಾಗಿ ಹತ್ತಿರದಲ್ಲಿದ್ದ ನಮ್ಮದೇ ಚುಮರ್‌ನಲ್ಲಿ ನಮ್ಮ ಸೈನಿಕರು (ಚೀನೀ ಸೇನೆಯ ಅತಿಕ್ರಮಣದ ನಂತರ) ನಿರ್ಮಿಸಿದ್ದ ಬಂಕರ್ ಒಂದನ್ನು ತೆರವುಗೊಳಿಸಿ ಪಶ್ಚಿಮಕ್ಕೆ ಸರಿಯಲು ಭಾರತೀಯ ಸೇನೆ ಸಮ್ಮತಿಸಬೇಕಾಯಿತು.  ಇಲ್ಲಿ ಆತಂಕಕಾರಿ ವಿಷಯವೆಂದರೆ ಭಾರತೀಯ ಸೇನೆಯೂ ಪಶ್ಮಿಮಕ್ಕೆ ಹಿಂದೆ ಸರಿಯುವುದಾದರೆ “ನಿರ್ಮಾನುಷ ಪ್ರದೇಶ” ನಿರ್ಮಾಣವಾದದ್ದು ಭಾರತೀಯ ನೆಲದಲ್ಲಿ!  “ನಮ್ಮದೇ ಪ್ರದೇಶದಿಂದ ನಾವೇಕೆ ಹಿಂದೆ ಸರಿಯಬೇಕು” ಎಂದು ಪ್ರಶ್ನಿಸುವುದರ ಮೂಲಕ ಜಮ್ಮು ಮತ್ತು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಯುಪಿಎ ಮುಖಕ್ಕೆ ಕನ್ನಡಿ ಹಿಡಿದರು.

ಮೇಲಿನ ವಿವರಗಳ ಆಧಾರದಲ್ಲಿ ಈಗ ಇತಿಹಾಸವನ್ನು ನೇರವಾಗಿ ಚಿತ್ರಿಸಿ.  ಜುಲೈನಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಚೀನೀಯರ ವಿಶೇಷ ಅತಿಥಿಗಳಾಗುತ್ತಾರೆ, ಬಹುಶಃ ಚೀನೀಯರೊಂದಿಗೆ ರಹಸ್ಯ ಒಪ್ಪಂದವಾದದ್ದು ಆಗಲೇ ಇರಬಹುದು.  ಸೆಪ್ಠೆಂಬರ್ ನಲ್ಲಿ ಕೊಂಗ್‍ಕಾ ಕಣಿವೆಗೆ ಚೀನೀ ಅತಿಕ್ರಮಣವಾಗುತ್ತದೆ, ಆ ಬಗ್ಗೆ ಭಾರತ ಏನು ಮಾಡಿತೆಂಬ ಬಗ್ಗೆ ವಿವರಗಳಿಲ್ಲ!  ಕಾಂಗ್ರೆಸ್-ಸಿಸಿಪಿ ಒಪ್ಪಂದಕ್ಕೆ ಸಹಿ ಹಾಕಿದ ಷಿ ಜಿನ್‍ಪಿಂಗ್ ನವೆಂಬರ್ 2012ರಲ್ಲಿ ಸಿಸಿಪಿಯ ಜನರಲ್ ಸೆಕ್ರೆಟರಿ ಆಗುತ್ತಾರೆ ಮತ್ತು ಮಾರ್ಚ್ 2013ರಲ್ಲಿ ಚೀನಾದ ಅಧ್ಯಕ್ಷರಾಗುತ್ತಾರೆ, ಏಪ್ರಿಲ್‍ನಲ್ಲಿ ಚೀನೀಯರು ದೆಪ್‍ಸಂಗ್‍ನಲ್ಲಿ ಆಕ್ರಮಣ ಎಸಗುತ್ತಾರೆ, ನಿರ್ಮಾನುಷ ಪ್ರದೇಶ ಭಾರತೀಯ ನೆಲದಲ್ಲಿ ನಿರ್ಮಾಣವಾಗುತ್ತದೆ!  ನಂತರ, ಮೇಲೆ ವಿವರಿಸಿದಂತೆ ರಾಹುಲ್-ಚೀನೀ ಹೊಕ್ಕುಬಳಕೆಯ ಉದಾಹರಣೆಗಳು ನಮಗೆ ದೊರೆಯುತ್ತವೆ, ರಾಜೀವ್ ಗಾಂಧಿ ಫೌಂಡೇಶನ್‍ಗೆ ಚೀನೀ ಹಣ ಹರಿದು ಬಂತು ಎಂಬ ಸುದ್ದಿಯೂ ಬರುತ್ತದೆ.  ಈ ಎಲ್ಲಾ ಬೆಳವಣಿಗೆಗಳಿಗೂ, ಆ ‘ರಹಸ್ಯ’ ಒಪ್ಪಂದಕ್ಕೂ ಸಂಬಂಧವಿದೆಯೇ?  ಈ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರಗಳಿಲ್ಲ.  ಕಾಂಗ್ರೆಸ್-ಸಿಸಿಪಿ ಒಪ್ಪಂದದ ಕುರಿತಾಗಿ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.  ನ್ಯಾಯಾಲಯ ಪಿಐಎಲ್ ಅನ್ನು ಪುರಸ್ಕರಿಸಿ, ಅದರಂತೆ ತನಿಖೆ ನಡೆದರೆ ವಿವರಗಳು ಹೊರಬರಬಹುದು.

ಅಲ್ಲಿಯವರೆಗೆ ಈ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳೋಣ-

  1. 2004-14ರ ನಡುವಿನ ಹತ್ತು ವರ್ಷಗಳಲ್ಲಿ ದೇಶಕ್ಕಾದ ನಷ್ಥ, ಗಾಂಧಿ ಕುಟುಂಬಕ್ಕಾದ ಲಾಭ ಎಷ್ಟಿರಬಹುದು?
  2. 2014ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ದೊಕ್ಲಾಂನಲ್ಲಿ ಏನಾಗಿರುತ್ತಿತ್ತು?
  3. 2019ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ಈಗ ಏನಾಗಬಹುದಿತ್ತು?

ಜತೆಗೆ, ಇನ್ನೊಂದು ಆಸಕ್ತಿಕರ ಬೆಳವಣಿಗೆಯನ್ನೂ ನೆನಪಿಸಿಕೊಳ್ಲೋಣ.  ಕಾಂಗ್ರೆಸ್ – ಸಿಸಿಪಿ ಒಪ್ಪಂದಕ್ಕೆ ಸಹಿ ಹಾಕಿದ ಷಿ ಜಿನ್‍ಪಿಂಗ್ ಮಾರ್ಚ್ 2013ರಲ್ಲಿ ಚೀನಾದ ಅಧ್ಯಕ್ಷರಾದ ನಂತರ ನಮ್ಲಲ್ಲಿ ಕಾಂಗ್ರೆಸ್ ಜತೆಗಿನ ಹಲವಾರು ಪತ್ರಕರ್ತರು ಮತ್ತು ವಿಚಾರವಾದಿಗಳ ಸಖ್ಯ ಗಾಢವಾಯಿತು, ಕೆಲವರು ಏಕಾಏಕಿ ಪಾಳಯ ಬದಲಾಯಿಸಿ ಕಾಂಗ್ರೆಸ್‍ಗೆ ಹತ್ತಿರಾದದ್ದೂ ಉಂಟು.  ಅವರಿಂದ ದೊಕ್ಲಾಂ ಬಿಕ್ಕಟ್ಟು ಮತ್ತಿತರ ಸೂಕ್ಷ್ಮ ಸನ್ನಿವೇಶಗಳಲ್ಲಿ ಚೀನಾ ಪರವಾದ ಹೇಳಿಕೆಗಳು ಬಂದವು!

ಅಂದಹಾಗೆ, ಚೀನೀ ಯುವಾನ್ ಕರೆನ್ಸಿ ನೋಟುಗಳು ಗುಲಾಬಿ ಬಣ್ಣಕ್ಕಿವೆ, ಹಳದಿ ಅಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments