ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 3, 2020

ಅಳಿದ ಮೇಲೆ

‍ನಿಲುಮೆ ಮೂಲಕ

ದೇವು ಹನೆಹಳ್ಳಿ,
ಬಂಡೀಮಠ, ಹನೆಹಳ್ಳಿ ಗ್ರಾಮ ಮತ್ತು ಅಂಚೆ,
ವಯಾ ಬಾರಕೂರು, ಉಡುಪಿ ಜಿಲ್ಲೆ – 576 210.

ಕೋವಿಡ್-19 ಸಂಕಷ್ಟದ ಹೊತ್ತಲ್ಲಿ ಬಹುಚರ್ಚಿತ ವಿಷಯಗಳಲ್ಲಿ ಒಂದು ಶವಸಂಸ್ಕಾರ. ಶವಕ್ಕೆ ಇರುವುದು ಒಂದೇ ಮುಖವಾದರೆ ಪಾರ್ಥಿವ ಶರೀರದ ನಿವೃತ್ತಿಗೆ ಮತ್ತು ಸಮಸ್ಯೆಗೆ ಹಲವು ಮುಖಗಳು. ಒಮ್ಮೆಲೇ ಹೆಚ್ಚಾದ ಶವಗಳ ಸಂಖ್ಯೆ ಒಂದು ಸಮಸ್ಯೆಯಾದರೆ ಕೋವಿಡ್-19 ರೋಗಿಗಳ ಶವವು `ಭಯಾನಕ ರೋಗಗಳ ಕೂಪ’ ಎಂದು ತಿಳಿದದ್ದು ಇನ್ನೊಂದು ಸಮಸ್ಯೆ. ಈ ವಿದ್ಯಮಾನ ನಾವು ತಿಳಿದ ಮತ್ತು ಇದುವರೆಗೆ ಪಾಲಿಸಿಕೊಂಡ ಬಂದ ಶವಗಳ ಅಂತಿಮ ವಿಲೇವಾರಿ ಮತ್ತು ಸಂಸ್ಕಾರಗಳ ರೀತಿ-ನೀತಿ-ನಿಯಮಗಳನ್ನು ಮಣ್ಣುಪಾಲು ಮಾಡಿತು. ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಕೋವಿಡ್-19 ಶವ ವಿಲೇವಾರಿಯ ನೂತನ ವಿಲೇವಾರಿ ರೀತಿ, ಕ್ರಮ, ಸಿದ್ಧತೆ, ಕಾಮಗಾರಿಗಳ ಕುರಿತಂತೆ ಬರಹ, ಚಿತ್ರ, ಚರ್ಚೆ, ವೀಡಿಯೋಗಳು ನಡೆದವು, ಹರಿದಾಡಿದವು. ಸ್ಪೈನ್ ದೇಶದಲ್ಲಿ ಹೊಸ ವಿನ್ಯಾಸ, ಕಚ್ಚಾವಸ್ತುಗಳ ಶವಪೆಟ್ಟಿಗೆ ತಯಾರಿಯ ಅರ್ಧ ಗಂಟೆಯ ಟಿ.ವಿ ರೂಪಕ, ಬ್ರೆಜಿಲ್‍ನಲ್ಲಿ ಹತ್ತಾರು ಎಕರೆ ಕಾಡನ್ನು ಸವರಿ ಮಾಡಿದ ನೂರಾರು-ಸಾವಿರಾರು ಶವಗುಂಡಿಗಳ ಡ್ರೋನ್ ನೋಟದ ವೀಡಿಯೋಗಳಿಂದ ತೊಡಗಿ ಇಲ್ಲಿಯೇ ಸಮೀಪದ ಬಳ್ಳಾರಿಯಲ್ಲಿ ಶವವನ್ನು ಎಳೆದು ದೂಡಿ ಗುಂಡಿಗೆ ನೂಕಿ `ಎದ್ದೆವೋ ಬಿದ್ದೆವೋ ಕೆಟ್ಟೆವೋ’ ಎಂದು ಭಯದಿಂದ ಓಡಿದ (ಹೆಗಲ ಮೇಲೆ ಚಟ್ಟವಿರದ) ನಾಲ್ವರು ಚಟ್ಟೋಪಾಧ್ಯಾಯರ ವೀಡಿಯೋದ ತನಕ ನೂರಾರು ಸಾವಿರಾರು ಬಂದವು.

ಈ ಹೊತ್ತಲ್ಲಿ ಶವಸಂಸ್ಕಾರ ಹೇಗೆ ನಡೆದರೆ ಉತ್ತಮ ಎಂಬ ಚರ್ಚೆಗಳೂ ವ್ಯಾಪಕವಾಗಿ ನಡೆದವು. ಶವದ ಘನತೆಯಿಂದ ತೊಡಗಿ ಶವಹೊರುವವರ ಆರೋಗ್ಯದ ತನಕ ಎಲ್ಲ ವಿಷಯಗಳು ಕೂಲಂಕಷವಾಗಿ ಚರ್ಚಿತವಾದವು. (ದೇಹವನ್ನು ಕಡೆದು ವಿದೇಹ ಹುಟ್ಟಿಕೊಳ್ಳಲಿಲ್ಲ!) ಅಂತಹ ಹೊತ್ತಲ್ಲಿ ನನ್ನೋರ್ವ ಕಿರಿಯ ಮಿತ್ರ ಕಳುಹಿಸಿದ ಬರಹ ಹೀಗಿತ್ತು:

“ಭೂಮಿಯಲ್ಲಿ ಪ್ಲಾಸ್ಟಿಕ್ ಕರಗೋದಿಲ್ಲ ಅಂತಾರೆ. ಆದ್ರೆ ಕೊರೋನಾದಿಂದ ಮೃತರಾದವರ ಶರೀರವನ್ನು ಪ್ಲಾಸ್ಟಿಕ್‍ನಿಂದ ಹಾಗೂ ಮೇಲ್ಗಡೆ ಲೋಕಲ್ ಕಪ್ಪು ಪ್ಲಾಸ್ಟಿಕ್‍ನಿಂದಲೂ ಸುತ್ತಿ ಗುಂಡಿ ತೆಗೆದು ಮಣ್ಣು ಮುಚ್ಚುತ್ತಾರೆ. ಪ್ಲಾಸ್ಟಿಕ್ ಕರಗುವುದಿಲ್ಲ ಅಂದ ಮೇಲೆ ಅದರ ಒಳಗಿರುವ ಸತ್ತ ಶರೀರದ ಕಥೆಯೇನು? ಅದು ಕೊಳೆತು ನಾರುವ ಸ್ಥಿತಿಗೆ ಬಂದಾಗ ಪ್ಲಾಸ್ಟಿಕ್ ಲೀಕೇಜ್ ಆಗಿ ಭೂಮಿಗೆ ಸೇರಿ ಅಂತರ್ಜಲಕ್ಕೆ ಸೇರಿ, ಅಕ್ಕಪಕ್ಕದ ಕೊಳವೆಬಾವಿ ಹಾಗೂ ಪರಿಸರದೊಳಗೆ ಬೆರೆಯುವುದಿಲ್ಲವೇ? ಇದು ಮುಂದೆ ಇನ್ನೊಂದು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ಕೊಟ್ಟಂತಲ್ಲವೇ? ಇದಕ್ಕೆ ಪರ್ಯಾಯವಾಗಿ ಸತ್ತ ಶರೀರಗಳನ್ನು ಅಗ್ನಿಸ್ಪರ್ಶ ಮಾಡಿದರೆ ಒಳಿತಲ್ಲವೇ? ಇದರಲ್ಲಿ ತಪ್ಪೇನಿದೆ? ಕೆಲವೊಮ್ಮೆ ನಾಗರಿಕ ಸಮಾಜವೂ ಸಹ ಇಂತಹ ವಿಷಯಗಳಲ್ಲಿ ಜಾಗ್ರತೆಯಿಂದ ಎಚ್ಚರಿಕೆ ವಹಿಸಬೇಕು. ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಅನಾಹುತಕ್ಕೆ ಎಡೆಮಾಡಿಕೊಟ್ಟಂತೆ!! ಸರಕಾರಕ್ಕೆ ಮನದಟ್ಟು ಮಾಡುವ ಬಗ್ಗೆ ಬುದ್ಧಿವಂತ ನಾಗರೀಕರೂ, ಮಾಧ್ಯಮದವರೂ, ಇದು ಸರಿ-ತಪ್ಪು ಪರಿಗಣಿಸಿ ಸರಕಾರದ ಗಮನಕ್ಕೆ ತಂದರೆ ಒಳಿತಲ್ಲವೇ?…” (ಇದನ್ನು ಬರೆದವರು ತಮ್ಮ ಹೆಸರನ್ನು ನಮೂದಿಸಿಲ್ಲ.) ಇದನ್ನು ಬರೆದವರು ಪಂಡಿತರೋ, ತಜ್ಞರೋ ಅಲ್ಲ. ಆದರೆ ಅವರ ಕಳಕಳಿಯನ್ನು ತಳ್ಳಿಹಾಕುವಂತಿಲ್ಲ. ಹೌದು. ಪ್ಲಾಸ್ಟಿಕ್ ಶವಸಂಸ್ಕಾರದ ಬಗ್ಗೆ ಓರ್ವ ಪತ್ರಕರ್ತ ಮಿತ್ರರು ಈಗ್ಗೆ ಕೆಲವು ದಿನಗಳ ಹಿಂದೆ “ಶವವನ್ನು ಮೂರು-ಮೂರು ಪದರ ಲ್ಯಾಮಿನೇಟ್ ಮಾಡುತ್ತಾರಲ್ಲ ದೇವಣ್ಣಾ…” ಎಂದು ಹೌಹಾರಿ ಹೇಳಿದ್ದರು.

ಈ ಕುರಿತು ಚರ್ಚೆಯನ್ನು ಮುಂದುವರಿಸಲು ಅನುಕೂಲವಾಗುವಂತೆ ಇನ್ನೊಂದು ಬರಹವನ್ನು (ಪೂರ್ತಿ ಪಠ್ಯ) ನೋಡಿ ಮುಂದೆ ಸಾಗುವ. ಇದನ್ನು ಬರೆದವರು ಓರ್ವ ಖ್ಯಾತ ಪರಿಸರ ಪತ್ರಕರ್ತರು.

“ಕೋವಿಡ್–19ನ ಮೃತದೇಹವನ್ನು ಪ್ಲಾಸ್ಟಿಕ್‍ನಲ್ಲಿ ಸುತ್ತಿ ಹೂಳುವುದು ಅಪಾಯವೆಂದು ಅದು ಮುಂದೆ ಅಂತರ್ಜಲಕ್ಕೆ ಸೇರಿ ಕಂಟಕಕಾರಿ ಆದೀತೆಂದು `ಎಚ್ಚರಿಸುವ’ ಕೆಲವೊಂದು ಮೆಸೇಜ್‍ಗಳು ವಾಟ್ಸ್ ಆ್ಯಪ್‍ನಲ್ಲಿ ಹರಿದಾಡುತ್ತಿವೆ. ಅದಕ್ಕೆ ನನ್ನ ಸ್ಪಷ್ಟೀಕರಣ ಹೀಗಿದೆ: ಇವೆಲ್ಲ ಅವೈಜ್ಞಾನಿಕ ವಿಚಾರಗಳು! ವ್ಯಕ್ತಿ ಸತ್ತ ಕೆಲವೇ ನಿಮಿಷಗಳಲ್ಲಿ ವೈರಸ್, ಬ್ಯಾಕ್ಟೀರಿಯಾ ಇನ್ನಿತರ ರೋಗಾಣುಗಳೂ ಸಾಯುತ್ತವೆ. ಅರ್ಧ ಗಂಟೆಯ ಅನಂತರ ಯಾವ ಸೂಕ್ಷ್ಮಾಣುವೂ ದೇಹದಲ್ಲಿ ಬದುಕಿ, ವಂಶಾಭಿವೃದ್ಧಿ ಮಾಡುವುದಿಲ್ಲ. ಆದರೆ ಆಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದಿರುವುದರಿಂದ ಅದು ಕೊಳೆಯುವ ಹಂತದಲ್ಲಿ ಬೇರೆ ಜೀವಿಗಳು ಬರುತ್ತವೆ. ಶವವನ್ನು ಹಾಗೆಯೇ ಬಿಟ್ಟರೆ ಶಿಲೀಂದ್ರ, ಏಕಾಣುಜೀವಿ, ನೊಣ, ಹೆಗ್ಗಣ, ನಾಯಿನರಿ ಕೊನೆಗೆ ಹದ್ದುಗಳೂ ಬಂದು ದೇಹವನ್ನು ಮಣ್ಣುಮಾಡುತ್ತವೆ. ಅದು ಸಹಜ ನೈಸರ್ಗಿಕ ಕ್ರಿಯೆ.

“ಸುಡುವುದು ನೈಸರ್ಗಿಕ ಅಲ್ಲ; ಅದು ನಿಸರ್ಗವಿರೋಧಿ ಕ್ರಿಯೆ. ಮಾನವ ಶರೀರದಲ್ಲಿ ಶೇಖರವಾಗಿದ್ದ ಕೊಬ್ಬಿನ ಅಂಶವೆಲ್ಲ ಹೊಗೆಯಾಗಿ ಕಾರ್ಬನ್ ಆಗಿ ವಾಯುಮಂಡಲ ಸೇರುತ್ತದೆ. ಜೀವನವಿಡೀ ಕಾರ್ಬನನ್ನು (ಪೆಟ್ರೋಲ್, ಡೀಸೆಲ್ಲನ್ನು ಸುಡುತ್ತ) ವಾಯುಮಂಡಲಕ್ಕೆ ಸೇರಿಸಿ ಭೂಮಿಯ ತಾಪಮಾನವನ್ನು ಏರಿಸಿದ ಮನುಷ್ಯ, ಸತ್ತ ಮೇಲೂ ಅದನ್ನೇ ಮಾಡುವುದು ಸರಿಯಲ್ಲ. ಹೂತರೆ ಭೂಮಿಗೆ ಒಂದಿಷ್ಟು ಖನಿಜ ಪೋಷಕಾಂಶವನ್ನು ಸೇರಿಸಿ ಮುಂದಿನ ಜೀವಿಗೂ ಉಪಯುಕ್ತವಾಗಬಹುದು. ಪ್ಲಾಸ್ಟಿಕ್‍ನಲ್ಲಿ ಸುತ್ತುವುದರಿಂದ ಈ ಮಣ್ಣಾಗುವ ಕ್ರಿಯೆ ನಿಧಾನವಾಗಬಹುದು. ನೂರು ವರ್ಷಗಳ ನಂತರ ನೆಲದೊಳಗಿನ ಶಾಖಕ್ಕೆ ಪ್ಲಾಸ್ಟಿಕ್ ಚಿಂದಿಯಾಗಿ, ಅದರೊಳಕ್ಕೆ ಗಿಡಮರಗಳ ಬೇರುಗಳು ನುಗ್ಗುತ್ತವೆ. ಮನುಷ್ಯನ ಪಳಯುಳಿಕೆಯಲ್ಲಿರುವ ರಂಜಕ, ಪೊಟ್ಯಾಶ್, ಸಾರಜನಕ, ಕಬ್ಬಿಣ, ಮ್ಯಾಂಗನೀಸ್, ಗಂಧಕ ಮುಂತಾದವನ್ನು ಹೀರಿಕೊಂಡು ಗಿಡಗಳು ಪುಷ್ಟಿಯಾಗಿ ಬೆಳೆಯುತ್ತವೆ. ಹಾಗೆ ಬೆಳೆಯುವ ಗಿಡಗಳೇ ಮನುಷ್ಯನ ಅಸಲಿ ಸ್ಮಾರಕ ಆಗಬೇಕು.”

ಈ ಬರಹವನ್ನು ಓದಿದ ಮೇಲೆ ಕೆಲವು ಪ್ರಶ್ನೆಗಳನ್ನು, ಅಭಿಪ್ರಾಯಗಳನ್ನು ಹೇಳಬೇಕಾಗುತ್ತದೆ.

ಶವವನ್ನು ದಫನ ಮಾಡುವವರು ಅದನ್ನು ಗೊಬ್ಬರವೆಂದು ಹೂಳುವುದಲ್ಲ, ಅದನ್ನು ಅವರ ಸಂಪ್ರದಾಯ ಎಂದು ಮಾಡುತ್ತಾರೆ. ಹಾಗೆ ಅದು ಸಹಜವಾಗಿ ಗೊಬ್ಬರವಾಗುತ್ತದೆ ಎಂಬುದನ್ನು ಕಲ್ಪಿಸಿಕೊಂಡೇ ದುಃಖಪಡುತ್ತಾರೆ! ಮೃತ ಶರೀರದಲ್ಲಿ ಅರ್ಧ ಗಂಟೆಗೆ ಮಿಕ್ಕಿ ಯಾವ ವೈರಾಣವೂ ಬದುಕುವುದಿಲ್ಲ ಎಂದ ಮೇಲೆ ಕೋವಿಡ್-19ರಿಂದಾಗಿ ಮೃತರಾದವರ ಶವವನ್ನು ಏಕೆ ಅಷ್ಟೊಂದು ಪ್ಲಾಸ್ಟಿಕ್‍ನಿಂದ ಸುತ್ತಬೇಕು? ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅವರು “ಮನುಷ್ಯ ಮೃತಪಟ್ಟ 2ರಿಂದ 6 ಗಂಟೆಯ ಒಳಗೆ ವೈರಾಣು ಸಾಯುತ್ತದೆ. ಮೃತದೇಹ ಕೊಡುವಾಗ ಅದಕ್ಕಿಂತ ಹೆಚ್ಚು ಅವಧಿ ಹಿಡಿಯುವುದರಿಂದ ದೇಹದಲ್ಲಿ ವೈರಾಣು ಇರುವುದಿಲ್ಲ. ಆದರೆ ಹೊದಿಕೆ, ಮೇಲ್ಮೈನಲ್ಲಿ ಇರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ…” ಎನ್ನುತ್ತಾರೆ. ಇದೇ ಮಾತನ್ನು ಮಣಿಪಾಲ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ ಬಲ್ಲಾಳ್ ಅವರೂ ಹೇಳುತ್ತಾರೆ. ಹಾಗಾದರೆ ಅದನ್ನು ಸಾಗಿಸುವವರು, ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರು ಮಾತ್ರ ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಸಾಕಲ್ಲವೇ? ಮುನ್ನೆಚ್ಚರಿಕೆ ಎಂದರೆ ಪ್ಲಾಸ್ಟಿಕ್ ಮಾತ್ರ ಯಾಕಾಗಬೇಕು?!

ಮೇಲಿನ ಬರಹವನ್ನು ಬರೆದ ಪರಿಸರವಾದಿಗಳು ತಮ್ಮ ವೃತ್ತಿಜೀವನದುದ್ದಕ್ಕೂ (ಈಗಲೂ) ಪ್ಲಾಸ್ಟಿಕ್‍ನ ಘೋರ ಪರಿಣಾಮಗಳ ಬಗ್ಗೆಯೇ ಬರೆದು ಹೆಸರು, ಕೀರ್ತಿ, ಸಂಬಳ, ಸಂಭಾವನೆ, ಪ್ರಶಸ್ತಿಗಳನ್ನು ಗಳಿಸಿದವರು. ಶವಸಂಸ್ಕಾರದಲ್ಲಿ ಅಗತ್ಯವಿಲ್ಲದಿದ್ದರೂ ಪ್ಲಾಸ್ಟಿಕ್ ಬಳಸುವುದನ್ನು ಎಷ್ಟು ಸುಲಭದಲ್ಲಿ ಒಪ್ಪಿಬಿಟ್ಟರು! ಇವರದೇ ಒಂದು ಪುಸ್ತಕದಲ್ಲಿ “ನಮ್ಮದೇ ವಿಷಕಾರಿ ತ್ಯಾಜ್ಯಗಳನ್ನು ಭೂಮಿಯೊಳಕ್ಕೆ ತಳ್ಳುತ್ತಾ ಜೀವಜಲಕ್ಕೆ ವಿಷ ಸೇರಿಸುತ್ತಿದ್ದೇವೆ” (ಅಭಿವೃದ್ಧಿಯ… ಪುಟ 19) ಎಂದು ಬರೆದಿದ್ದಾರೆ. ಮುಂದೆ ಅವರೇ ಈ ವಿಷಕಾರಿ ವಸ್ತುಗಳಲ್ಲಿ ಪ್ಲಾಸ್ಟಿಕ್ಕನ್ನು ಸೇರಿಸಿದ್ದಾರೆ. ಅವರ ಅನೇಕ ಪುಸ್ತಕಗಳಲ್ಲಿ ಇಂತಹ ನೂರಾರು ಸಾವಿರಾರು ವಾಕ್ಯಗಳನ್ನು ಕಾಣಬಹುದು! ಆದರೂ ಹೂಳುವ ಸಂಪ್ರದಾಯವನ್ನು ಸಮರ್ಥಿಸಬೇಕು! ಏಕೆಂದರೆ ಅವರಿಗೂ, ಅವರ `ಸೆಕ್ಯೂಲರ್’ (!?) ಪತ್ರಿಕೆಗೂ ಅದು ಅನಿವಾರ್ಯ. ಮೊದಲೇ ಜಗತ್ತು ಪ್ಲಾಸ್ಟಿಕ್‍ಮಯವಾಗಿತ್ತು. ಈಗ ಈ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಶಸ್ತ್ರಾಸ್ತ್ರಗಳೆಲ್ಲಾ ಪ್ಲಾಸ್ಟಿಕ್‍ನವೇ! ʼಅದೆಲ್ಲ ಮತ್ತೆ ನೋಡಿಕೊಳ್ಳುವ, ಮೊದಲು ಈ ಕೊರೋನಾ ಗುಣವಾಗಲಿ’ ಎಂಬಂತಿದೆ ನಮ್ಮ ಧೋರಣೆ.

ಸಂಪ್ರದಾಯಪಾಲನೆಯ ಮುಖ್ಯ ಲಕ್ಷಣವೇ ನಿಷ್ಠೆ, ಶೃದ್ಧೆ. ಅವು ನಮಗೆ ಆ ಸಂಪ್ರದಾಯಗಳೇ ಪರಮಸತ್ಯ ಮತ್ತು ಅನಾದಿ ಎಂಬ ಹಠವನ್ನು ತರುತ್ತವೆ. ಅದೆಂತಹ ನಿಷ್ಠೆಯೆಂದರೆ ಮಾನವನು ಸತ್ಯವನ್ನು, ಮಾನವೀಯತೆಯನ್ನು, ಪರಹಿತವನ್ನು ಸುಲಭದಲ್ಲಿ ಬಿಟ್ಟುಬಿಡಬಲ್ಲ; ಆದರೆ ಸಂಪ್ರದಾಯಗಳನ್ನು, ಮಿಥ್ಯೆಗಳನ್ನು ಮತ್ತು ಅನಗತ್ಯ ಭಯಗಳನ್ನು ಬಿಡುವುದಿಲ್ಲ.

ಸಂಪ್ರದಾಯಗಳಿಗೆ ಚಾರಿತ್ರಿಕ ಅನುಕ್ರಮಣಿಕೆಯ ಹಂಗೇನೂ ಇಲ್ಲವಲ್ಲ?! ಶವದಫನಕ್ಕೆ ಎಷ್ಟು ಹಿಂದಿನ ಚರಿತ್ರೆ ಇರಬಹುದು? ಗುಂಡಿಯನ್ನು ತೋಡಲು ಲೋಹದ ಹತ್ಯಾರ ಬೇಕಲ್ಲ? ಆದುದರಿಂದ ಶವದಫನಕ್ಕೆ ಹೆಚ್ಚೆಂದರೆ ಹತ್ತು ಸಾವಿರ ವರ್ಷಗಳ ಚರಿತ್ರೆಯಿದ್ದಿರಬಹುದು. ಅದಕ್ಕೂ ಹಿಂದೆ? ಶವವನ್ನು ಜನವಸತಿಯಿಂದ ದೂರ ತ್ಯಜಿಸಿಬರುವುದು ಅಷ್ಟೆ. (ತ್ಯಜಿಸಿಬಿಡುವುದು ಕೂಡಾ ಜಗತ್ತಿನಲ್ಲಿ ಹಲವಾರು ಸಂಪ್ರದಾಯಗಳಾಗಿ ಬೆಳೆದದ್ದನ್ನು ಗುರುತಿಸಬಹುದು.) ಯಾರಿಗೋ ತಮ್ಮ ಪ್ರೀತಿಪಾತ್ರರಾದವರ ಶವವನ್ನು ದೂರ ಎಸೆದು, ಅದು ಕೊಳೆಯುವುದನ್ನು ಕಾಣವುದು ಸಾಧ್ಯವಾಗದೇ ಹೂತುಹಾಕಿರಬೇಕು. ಅದು ಮನುಷ್ಯನ ನಾಗರಿಕತೆ, ಸಂಸ್ಕೃತಿಗಳ ಉಗಮದ ಒಂದು ಬೀಜವಿರಬಹುದು. ಹಾಗೆಯೇ, ಇನ್ನೊಬ್ಬ ಸುಟ್ಟಿರಬಹುದು. ಜಗತ್ತಿನಾದ್ಯಂತ ಎಲ್ಲ ಆದಿಮ ಜನಸಮುದಾಯಗಳು ಬೆಂಕಿಗೆ ನೀಡಿದ ಪ್ರಾಶಸ್ತ್ಯ, ಗೌರವಗಳನ್ನು ನೋಡುವಾಗ ಬೆಂಕಿಯನ್ನು ಪಳಗಿಸಿದ ಮನುಷ್ಯನ ಆವಿಷ್ಕಾರ ಆತನ ನಾಗರಿಕತೆಯ ಉಗಮಕ್ಕೆ ಅದೆಂತಹ ಪ್ರಚೋದನೆಯನ್ನು ನೀಡಿತು ಎಂಬುದು ಅರಿವಾಗುತ್ತದೆ. ಬೆಂಕಿಗೆ ಹಾಕಿದ ವಸ್ತು ಇಲ್ಲವಾಗುವುದು, ಶುದ್ಧವಾಗುವುದು, ನಿರ್ಮಲವಾಗುವುದು ಎಲ್ಲವೂ ಆತನಿಗೆ ಸೋಜಿಗದ ಸಂಗತಿಗಳೇ! ಆರ್ಯರ ಪಾಲಿಗೆ ರುದ್ರಸೂಕ್ತವನ್ನು ಪಠಿಸಿ ರುದ್ರನಿಗೆ ಶವವನ್ನು ಅರ್ಪಿಸಿದರೆ ಮುಗಿಯಿತು, ಮತ್ಯಾವ ಸಂಸ್ಕಾರದ ಅಗತ್ಯವೂ ಇಲ್ಲ! ಜಗತ್ತಿನಾದ್ಯಂತ ಮಾನವಚರಿತ್ರೆಯಲ್ಲಿ ಮರಣಾನಂತರ ಶವದ ವಿಲೇವಾರಿ ಎಂಬುದು ವೈವಿಧ್ಯಮಯ, ರೋಚಕ ಸಂಗತಿ. ತ್ಯಜಿಸುವುದು, ಲೇಪನಮಾಡಿ ಕಾಪಿಡುವುದು, ದಫನಮಾಡುವುದು ಮತ್ತು ದಹನಮಾಡುವುದು – ಈ ನಾಲ್ಕು ಕ್ರಮಗಳಲ್ಲಿ ಅದೆಷ್ಟು ವೈವಿಧ್ಯವಿದೆ! (ಈಗೆಲ್ಲ ಇದನ್ನು ತಿಳಿಯುವುದು ಬಲು ಸುಲಭ. ಪ್ರತಿ ದೇಶ, ಜನಾಂಗ, ಮತಗಳ ಹೆಸರು ನಮೂದಿಸಿ Cremation ಎಂಬ ಪದ ಅಂಟಿಸಿದರೆ ಗೂಗಲ್ ಗುರು ನಾವು ಸಾಯುವುದನ್ನೇ ಮರೆತು ಮೂರು ಜನ್ಮ ಕುಳಿತು ಓದುವಷ್ಟು, ತಿಳಿಯುವಷ್ಟು ಮಾಹಿತಿಗಳನ್ನು ನೀಡುತ್ತಾನೆ!)

ಶವ ಗೊಬ್ಬರವಾಗುವುದು ಹೌದು. ಆದರೆ ಗೊಬ್ಬರವನ್ನು ಯಾವ ಬೇಸಾಯಗಾರರೂ ತೋಟದಲ್ಲಿ ಆರಡಿ ಗುಂಡಿ ತೋಡಿ ಹೂಳುವುದಿಲ್ಲ! `ಶವವನ್ನು ಹೂಳುವುದು ತಪ್ಪು; ಏಕೆಂದರೆ ಅದು ಗೊಬ್ಬರವೂ ಆಗುವುದಿಲ್ಲ, ಪ್ರಾಣಿಗಳಿಗೆ ಆಹಾರವೂ ಆಗುವುದಿಲ್ಲ’ ಎಂಬುದು ಜಪಾನೀಯರ ಕಾಳಜಿ! ಅದಕ್ಕೇ ಮೊನ್ನೆಮೊನ್ನೆ ತನಕ ಅವರು ಶವವನ್ನು ಕಾಡು ಅಥವಾ ಸಮುದ್ರದಲ್ಲಿ ಎಸೆಯುತ್ತಿದ್ದರು. ಈಗಲೂ ಕೂಡಾ ಶವದಹನ ಅಥವಾ ಶವದಫನ ಜೀವಜಗತ್ತಿನಲ್ಲಿ ಕೇವಲ ಮನುಷ್ಯಜೀವಿಯ ಅಗತ್ಯ ಮಾತ್ರ. ಮನುಷ್ಯಜೀವಿ ಮತ್ತು ಆತನ ಸಾಕುಪ್ರಾಣಿಗಳಲ್ಲಿ ಬಿಟ್ಟರೆ ಉಳಿದಂತೆ ಎಲ್ಲ ಜೀವಿಗಳ ಸಹಜ ಸಾವು ಮತ್ತು ಶವ ವಿಲೇವಾರಿ ನಿಗೂಢ. ಇಷ್ಟೊಂದು ಜೀವಿಗಳು ಸಹಜವಾಗಿ ಸಾಯುತ್ತವೆ, ಆದರೆ ನಾವೆಂದಾದರೂ ಅವುಗಳ ಶವವನ್ನು ಕಾಣುತ್ತೇವೆಯೇ! ಇಲ್ಲ! `ಶವದಹನವಾಗಲಿ, ಶವದಫನವಾಗಲಿ ಎರಡೂ ಸಹಜ, ವೈಜ್ಞಾನಿಕ ವಿಧಾನಗಳಲ್ಲ; ಶವವನ್ನು ತ್ಯಜಿಸುವುದೇ ಸಹಜ, ವೈಜ್ಞಾನಿಕ’ ಎಂದು ಬಗೆದು ಹಾಗೆಯೇ ನಡೆದುಕೊಳ್ಳುವುದು ಇಂದಿನ ಸಂದರ್ಭದಲ್ಲಿ ಸಾಧ್ಯವಿದೆಯೇ?

ಶವದಹನ ಪದ್ಧತಿ ಶವದಫನ ಪದ್ಧತಿಗಿಂತ ಹಿಂದಿನದೇ? ಇರಬೇಕು. ಏಕೆಂದರೆ ಬೆಂಕಿಯ ಉಪಯೋಗ ಗುಂಡಿ ತೋಡುವುದಕ್ಕಿಂತ ಹಿಂದಿನದು. ತೋಡುವ ಹತ್ಯಾರವನ್ನು ತಯಾರಿಸುವ ಯೋಚನೆ ಮಿಂಚಿದ್ದೂ ಬೆಂಕಿಯ ಉಪಯೋಗವನ್ನು ಅರಿತಮೇಲಲ್ಲವೇ? ಗಡ್ಡೆಗೆಣಸು ಅಗೆಯುವುದಕ್ಕೂ ಗುಂಡಿತೋಡುವುದಕ್ಕೂ ಬಲು ವ್ಯತ್ಯಾಸವಿದೆ. ಗಡ್ಡೆಗೆಣಸು ಅಗೆಯಲು ಸಣ್ಣ ಕಟ್ಟಿಗೆಯ ಚೂರು, ಕಲ್ಲಿನ ಚೂರು ಅಥವಾ ಪ್ರಾಣಿಗಳ ಕೊಂಬು ಸಾಕಲ್ಲವೇ? ಕಟ್ಟಿಗೆ ಒಟ್ಟುಮಾಡುವ ಕ್ರಿಯೆ ಕಟ್ಟಿಗೆ ಕಡಿಯುವುದಕ್ಕಿಂತ ಹಿಂದಿನದಲ್ಲವೇ? ಶವವನ್ನು ಸುಡುವುದಾಗಲೀ, ದಫನ ಮಾಡುವುದಾಗಲೀ ಎರಡೂ ನಿಸರ್ಗ ಸಹಜ ಕ್ರಿಯೆಗಳಲ್ಲ. ಮನುಷ್ಯನ ಹೊರತಾಗಿ ಬೇರೆ ಯಾವ ಪ್ರಾಣಿಯೂ ಅದನ್ನು ಮಾಡುವುದಿಲ್ಲ. ಶವವನ್ನು ತ್ಯಜಿಸಿ ಅದು ಎಲ್ಲೋ ಅಜ್ಞಾತಸ್ಥಳದಲ್ಲಿ ಕೊಳೆತುಹೋಗುವುದು ನಿಸರ್ಗ ಸಹಜ ಕ್ರಿಯೆ. ಕೆಲವು ಪ್ರಾಣಿಗಳು ಸಾವು ಸಮೀಪಿಸಿದಾಗ ಗುಂಪಿನಿಂದ ದೂರವಾಗಿ ಹೋಗುತ್ತವೆ. ಆದರೆ ಮನುಷ್ಯ ನಾಗರಿಕತೆ ಇಷ್ಟು ಬೆಳೆದ ಮೇಲೆ ಮತ್ತು ಈ ಗ್ರಹದ ಮೇಲೆ ಮನುಷ್ಯನ ಸಂಖ್ಯೆ ಒಂದು ಕೋಟಿಯಿಂದ 900 ಕೋಟಿ ಆದ ಮೇಲೆ ಅದು ಸಾಧ್ಯವೇ? ನಾಳೆಯಿಂದ ನಿಸರ್ಗ ಸಹಜ ಎಂದು ಹೇಳಿ ಎಲ್ಲರೂ ಶವಗಳನ್ನು ಎಸೆಯಲು ಶುರುವಿಟ್ಟುಕೊಂಡರೆ?! ಶವವೊಂದು ಗೊಬ್ಬರವೆಂದು ತಿಳಿದು ಬೆಂಗಳೂರಿನ ಸಾವಯವಪ್ರಿಯರೆಲ್ಲ ಅವರವರ ಪ್ರೀತಿಪಾತ್ರರ ಶವಗಳನ್ನು ಲಾಲ್‍ಬಾಗಿನಲ್ಲಿಯೋ ಕಬ್ಬನ್ ಪಾರ್ಕಿನಲ್ಲಿಯೋ ಹೂಳಲು ಶುರುವಿಟ್ಟುಕೊಂಡರೆ?! ಇಡೀ ಭೂಮಂಡಲ ಶೇಕಡಾ ನೂರರಷ್ಟು ಸಹಜ ಆವಾಸ ಆಗಿದ್ದಾಗ, ಮನುಷ್ಯನ ಸಂಖ್ಯೆ ಒಂದೆರಡು ಕೋಟಿಗಿಂತ ಕಡಿಮೆಯಿದ್ದಾಗ ಮಾತ್ರ ಅದು ಸಾಧ್ಯವಿತ್ತು.

ಮೃತಶರೀರ ಮಾತ್ರವಲ್ಲ ಮನುಷ್ಯನೂ ಸೇರಿದಂತೆ ಹೆಚ್ಚಿನೆಲ್ಲ ಪ್ರಾಣಿಗಳ ಮಲ ಕೂಡಾ ಗೊಬ್ಬರವೇ. (ಕೆಲವು ಪ್ರಾಣಿಗಳ ಮಲ ಇನ್ನು ಕೆಲವು ಚಿಕ್ಕ ಪ್ರಾಣಿಗಳ ಆಹಾರ ಮತ್ತು ಪೌಷ್ಟಿಕಾಂಶದ ಆಕರ.) ಈಗ ನಮಗೆ ಮನುಷ್ಯನ ಮಲವನ್ನು ಗೊಬ್ಬರವಾಗಿ ಪರಿಗಣಿಸಿ ಸಂಗ್ರಹ, ಸಾಗಾಟ, ಉಪಯೋಗ ಸಾಧ್ಯವೇ? ಈಗ ಅದು ಕೇವಲ ಸಾಮಾಜಿಕ ಕಾರಣ ಮಾತ್ರವಲ್ಲ, ವೈಜ್ಞಾನಿಕವಾಗಿ ಅಸಾಧ್ಯವಾಗಿದೆ. ಏಕೆಂದರೆ ಮನುಷ್ಯ ಮತ್ತು ಇತ್ತೀಚೆಗೆ ಮನುಷ್ಯನ ಸಾಕುಪ್ರಾಣಿಗಳ ಮಲ ವಿಪರೀತ ದುರ್ವಾಸನೆ ಬೀರುತ್ತಿವೆ. ಇದಕ್ಕೆ ಕಾರಣ ನಾವು ಸಂಸ್ಕರಿತ ಆಹಾರವನ್ನು ಸೇವಿಸುವುದು. ದನದ ಸೆಗಣಿಯನ್ನು ಸಾರಿಸಿದ ಅಂಗಳದಲ್ಲಿ ಅದೆಷ್ಟು ಸುಖವಾಗಿ ಮಲಗಿ ನಿದ್ರಿಸುತ್ತಿದ್ದೆವು. ಸಗಣಿ ಬಳಿದ ಗೆರೆಸೆಯಲ್ಲಿ ಆಹಾರಪದಾರ್ಥಗಳನ್ನು ಒಣಗಿಸಿದರೆ ಯಾರಾದರೂ `ಸಲ್ಲದು’ ಎನ್ನುತ್ತಿದ್ದರೇ? ಈಗ ದನದ ಮಲವೂ ವಾಸನೆ ಬೀರುತ್ತದೆ. ಸಂಸ್ಕರಿತ ಆಹಾರಗಳನ್ನು ಅವುಗಳಿಗೂ ನೀಡುವುದರಿಂದ ಅವುಗಳ ಜೀರ್ಣಕ್ರಿಯೆ ಏರುಪೇರಾಗಿದೆ. ದನಗಳು ಇತ್ತೀಚೆಗೆ ಮೆಲುಕುಹಾಕುವುದನ್ನು ಬಿಟ್ಟಿವೆ. ಆದುದರಿಂದ ಜಾನುವಾರುಗಳ ಸಗಣಿ ಮೊದಲಿನಂತಿಲ್ಲ. (ಇದನ್ನು ಪಶುವೈದ್ಯ ಡಾ. ಮನೋಹರ ಉಪಾಧ್ಯರು ಬಲುಹಿಂದೆಯೇ ಗಮನಿಸಿ ಎಚ್ಚರಿಸಿದ್ದರು. ಯಾರೂ ಎಚ್ಚರಗೊಳ್ಳಲಿಲ್ಲ, ಆ ಮಾತು ಬೇರೆ!) ಕರಾವಳಿಯ ಹಿರಿಯ ಗಾಂಧೀವಾದಿ, ಸಾವಯವ ಕೃಷಿಕರೊಬ್ಬರು (ಅವರ ಹೆಸರಿನಲ್ಲಿ ಕೃಷಿ ಪದ್ಧತಿಯೊಂದು ಜಗತ್ಪ್ರಸಿದ್ಧವಾಗಿದೆ.) ತಮ್ಮ ಕೃಷಿಭೂಮಿಯಲ್ಲಿ, ತೋಟದ ಮರಗಳ ಕೆಳಗೆಯೇ ಮಲವಿಸರ್ಜನೆ ಮಾಡುತ್ತಿದ್ದರು. ಅದನ್ನು ಹೇಗೆ rotation ಪದ್ಧತಿಯಲ್ಲಿ ಮಾಡುತ್ತೇನೆ ಎಂದೂ ಅವರು ಈ ಲೇಖಕನ ಬಳಿ ಹೇಳಿದ್ದರು. ನಾಳೆ ದಿನ ಈ ದೇಶದ ನಿಸರ್ಗಪ್ರಿಯರು, ಸಾವಯವ ಕೃಷಿಕರು ಮತ್ತು ಪ್ರತಿಪಾದಕರು, ಪರಿಸರವಾದಿಗಳೆಲ್ಲ ತಮ್ಮ ಮನೆಯ ಕೈತೋಟದಲ್ಲಿ ಮಲಪೂತ್ರ ವಿಸರ್ಜನೆ ಶುರುವಿಟ್ಟುಕೊಂಡರೆ ಹೇಗೆ? (ನಿಜ, ನಾಳೆ ದಿನ ನಾವೆಲ್ಲರೂ ಮನೆಯ ಮುಂದಿನ ಮಲಗದ್ದೆಯಲ್ಲಿ, ಮಲ್ಲಿಗೆಚಪ್ಪರದ ಕೆಳಗೆ ಮಲವಿಸರ್ಜನೆ ಮಾಡಿಬಿಟ್ಟರೆ ನಾವೇನೂ ಅವರಂತೆ ಧೀಮಂತರಾಗುವುದಿಲ್ಲ. (`ನಿಮ್ಮ ತಂದೆಯ ಶವವನ್ನು ನೀವೇನು ಮಾಡಿದಿರಿ’ ಎಂದು ಈ ಲೇಖಕ ಅವರ ಮಗನಲ್ಲಿ ಕೇಳಿದ್ದಿಲ್ಲ.)

ಮಲಮೂತ್ರ ವಿಸರ್ಜನೆ ಎನ್ನುವುದು ಈಗ ಅದೆಷ್ಟು ದೊಡ್ಡ ಉದ್ಯಮ, ಕಾಮಗಾರಿ ಆಗಿವೆ ಎಂದರೆ ಒಂದು ಬಾರಿ ಮಲ ವಿಸರ್ಜನೆ ಮಾಡಿದರೆ ಅದಕ್ಕೆ ಜಾಗತಿಕವಾಗಿ ಸರಾಸರಿ ಖರ್ಚು ರೂ. 2000/- ಕ್ಕೂ ಅಧಿಕ ಆಗಬಹುದು! ಅದೆಂತಹ ಬೃಹತ್ ಸಂಕೀರ್ಣ ಉದ್ಯಮವಾಗಿದೆ ಎಂದರೆ ನಾವು ಮಲವಿಸರ್ಜನೆ ಮಾಡುವುದು ನಾವು ಉಂಡ ಪ್ರಾಯಶ್ಚಿತ್ತಕ್ಕೋ ಅಥವಾ ಮತ್ಯಾರೋ ಉಂಡುಟ್ಟು ಸುಖವಾಗಿರಲಿ ಎಂದೋ ಗೊತ್ತಾಗುವುದಿಲ್ಲ! ಇಲ್ಲೆಲ್ಲಾ ನಿಸರ್ಗದ ಆರೋಗ್ಯದ ಬಗ್ಗೆ ಕೇಳುವವರಿಲ್ಲ! “ತಂಡಾಸು ಗುಂಡಿ, ಸಾಗಾಟದ ತೋಡು ಇತ್ಯಾದಿ ಮಾಡಿ ಭೂಮಿಯ ಮೇಲ್ಪದರವೆಲ್ಲಾ ಛಿದ್ರಛಿದ್ರ ತೂತುತೂತಾಗಿ, ನೀರು ಇಂಗಿ ಅದು ಹೇಗಿದೆಯೋ?! ಕಣ್ಣಿಗೆ ಕಾಣಿಸುವುದಿಲ್ಲ” ಎಂದು ಇತ್ತೀಚೆಗೆ ವನ್ಯಜೀವಿ ಕಾರ್ಯಕರ್ತರೊಬ್ಬರು ಈ ಲೇಖಕನಲ್ಲಿ ಗೋಳಾಡಿದ್ದರು. ಇದು ನಿಸರ್ಗವಿರೋಧಿ ಎಂದು ಹೇಳುವ ಸ್ಥಿತಿಯಲ್ಲಿ ನಾವಿದ್ದೇವೆಯೇ? ಇಂತಹ ನೂರು-ಸಾವಿರ ವಿಷಯಗಳನ್ನು ಚರ್ಚಿಸಬಹುದು.

ಇತ್ತೀಚೆಗೆ ನಿಧನರಾದ ಕನ್ನಡ ಖ್ಯಾತ ಪತ್ರಕರ್ತರೊಬ್ಬರು ತಮ್ಮ ಪತ್ನಿಯ ಶವವನ್ನು ಮನೆಯಂಗಳದಲ್ಲಿಯೇ ಹೂತಿದ್ದರು. ಆಕೆ ಗೊಬ್ಬರವಾಗಲಿ ಎಂದು ಹೂತದ್ದಲ್ಲ. ಯಾವ ಸಾವಯವ ಕೃಷಿಕರೂ ಅದನ್ನು ಕೊಂಡಾಡಲಿಲ್ಲ. ಅಕ್ಕಪಕ್ಕದ ಮನೆಯವರು ಪ್ರತಿರೋಧ ವ್ಯಕ್ತಪಡಿಸಿದರು. ಏಕೆ?

ಶವವನ್ನು ಹೂಳುವುದು. ಸರಿ. ಎಷ್ಟು ಆಳದಲ್ಲಿ ಹೂಳಬೇಕು? ಇದು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಎರಡು ಮೂರು ಅಡಿಗಳಲ್ಲಿಯೇ ಮುಗಿಸಿಬಿಡುವವರಿದ್ದಾರೆ. ಹಾಗೆಯೇ ಹೂಳುವವರಿದ್ದಾರೆ, ಮಣ್ಣಿನ ಮಡಕೆಯಲ್ಲಿ ಹೂಳುವ ಪದ್ಧತಿಯಿತ್ತು. ಮತ್ತೆ ಪೆಟ್ಟಿಗೆ ಬಂತು. ಹೂಳುವುದು ಪರಿಸರಸಹ್ಯವೇ? ಒಂದು 6x3x6 ಗುಂಡಿಯೆಂದರೆ ಕನಿಷ್ಠ ಒಂದೂವರೆ ಟನ್ ಮಣ್ಣು ಹೊರಬೀಳುತ್ತದೆ. ಗುಂಡಿಮುಚ್ಚಿಯೂ ಉಳಿದ ಅರ್ಧ ಟನ್ ಏನಾಗಬೇಕು? (ಶವದಫನಕ್ಕೆಂದೇ ಇರುವ ಸಿಮೆಟರಿ, ಖಬರ್‍ಸ್ತಾನ್ ಭೂಮಿಯಲ್ಲಿ ಇದರ ಪ್ರಮಾಣ ಸ್ವಲ್ಪ ಕಡಿಮೆಯಿರಬಹುದು.) ಬ್ರೆಜಿಲ್‍ನಲ್ಲಿ ಕಾಡನ್ನು ಸವರಿ ಮಾಡಿದ ಗುಂಡಿಗಳ ಸಾಲುಗಳು ಭೀಕರವಾಗಿವೆ. ಇರಾನ್‍ನಲ್ಲಿಯೂ ಪರಿಸ್ಥಿತಿ ಗಂಭೀರವಾಗಿದೆ. ತೀರಿಕೊಂಡ ಮನುಷ್ಯರೆಲ್ಲರಿಗೂ ಒಂದೊಂದು 6x3x6 ಅಳತೆಯ ಗುಂಡಿ ಮಾಡುತ್ತಾ ಹೋದರೆ ಗತಿಯೇನು? ಮಣ್ಣಿನ ಸವಕಳಿಯು ಜಗತ್ತಿನಲ್ಲಿ ಅದೆಂತಹ ದೊಡ್ಡ ಸಮಸ್ಯೆಯೆಂಬುದನ್ನು ಪರಿಸರತಜ್ಞರಿಗೆ ವಿವರಿಸುವ ಅಗತ್ಯವಿಲ್ಲ.

ಮಗು ಹುಟ್ಟಿದ ಅನಂತರ ಬೀಳುವ `ಕಸ’ವನ್ನು (ಮಾಸು) ಹೂಳುವ ಗುಂಡಿಯಿಂದ ತೊಡಗಿ ಶವದ ಗುಂಡಿಯ ತನಕ ಎಲ್ಲವೂ ಮಣ್ಣು ಅಗೆಯುವ ಕಾಮಗಾರಿಗಳೇ! ಉಳುವ, ಹೊದ್ದು ಕಡಿಯುವ ಕಾಯಕದಿಂದ ತೊಡಗಿ ಉಪಗ್ರಹ ಉಡ್ಡಯನ ಅಟ್ಟೆಯನ್ನು ನಿಲ್ಲಿಸುವ ಸಾಹಸದ ತನಕ ಎಲ್ಲವೂ ಮಣ್ಣು ತೋಡುವ ಕಾಮಗಾರಿಗಳೇ! ಈಗ ಕೋವಿಡ್-19 ಆರ್ಥಿಕ ಸಂಕಷ್ಟಕ್ಕೆ ಸಂಜೀವಿನಿಯಾಗಿ ಒದಗಿ ಬಂದ ನರೇಗಾ ಯೋಜನೆಯ 99.99 ಶೇಕಡಾ ಕಾಮಗಾರಿಗಳೂ ಕೂಡಾ ಮಣ್ಣು ತೋಡುವುದೇ ಆಗಿದೆ! `ನಿಸರ್ಗ ವಿರೋಧಿ’ ಎಂದು ತಳ್ಳಿಹಾಕುವ ಸ್ಥಿತಿಯಲ್ಲಿ ನಾವಿದ್ದೇವೆಯೇ? ಪ್ಲಾಸ್ಟಿಕ್ ಕೂಡಾ ಇಂತಹ ಸರ್ವಾಂತರ್ಯಾಮಿ.

ಸುಟ್ಟರೂ ಅಷ್ಟೆ ಕೊಳೆತರೂ ಅಷ್ಟೆ, ಮನುಷ್ಯನ ದೇಹದಲ್ಲಿರುವ ಭೌತಿಕ ಮತ್ತು ರಾಸಾಯನಿಕ ವಸ್ತುಗಳು ಪಂಚಭೂತಗಳನ್ನು ಸೇರಿಯೇ ಸೇರುತ್ತವೆ. ಸೇರುವ ಸ್ವರೂಪ, ವೇಗ ಬೇರೆ ಬೇರೆ ಇರಬಹುದು ಅಷ್ಟೆ. ಹೊಗೆಯಾಗಿ ಗಗನ ಸೇರಿದ ಕಾರ್ಬನ್, ಸಾರಜನಕ ಇತ್ಯಾದಿ ಪುನಃ ಸಾವಯವ-ಜೈವಿಕ ವಸ್ತುಗಳಾಗಿ ಜನಿಸದಿದ್ದರೆ ಸಮಸ್ಯೆ. ಹಾಗೆ ಅವಕಾಶವಿಲ್ಲದಿದ್ದಾಗ ಅಂತಹ ವಸ್ತುಗಳು ಸುಟ್ಟು ಗಗನ ಸೇರಿದರೂ ಒಂದೆ, ಭೂಮಿಯಡಿ ಕೊಳೆತು ಮತ್ತೆ ಗಗನ ಸೇರಿದರೂ ಒಂದೆ.

ಸಹಜ ಬದುಕಿನಿಂದ ನಾವೆಷ್ಟು ದೂರ ಬಂದಿದ್ದೇವೆ ಎಂದರೆ ನಾವು ಪರಿಸರರಕ್ಷಣೆಯ ವಿಚಾರವಾಗಿ ಯಾವ ಹೆಜ್ಜೆಯನ್ನು ಇರಿಸಹೊರಟರೂ ಮನುಷ್ಯನ ಸಾಂಸ್ಕೃತಿಕ ಮತ್ತು ನಾಗರಿಕ ಜೀವನಗಳ ಹಲವು ಆಯಾಮಗಳನ್ನು ಪರಿಗಣಿಸಲೇಬೇಕಾಗುತ್ತದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜನಸಂಖ್ಯೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಯೋಚಿಸಬೇಕಾಗುತ್ತದೆ. ಶವಹೂಳಲು ಸಿಮೆಟರಿಗಳಲ್ಲಿ ಜಾಗದ ಕೊರತೆ, ಕೆಲವೆಡೆ ತಲೆಬುರುಡೆ ಮೂಳೆ ಇತ್ಯಾದಿಗಳನ್ನು ಸಂಗ್ರಹಿಸಿಡುವ ಸಂಪ್ರದಾಯ ಮತ್ತು ಶೋಕಿ, ಸಮಾಧಿಶಿಲೆ-ಸಮಾಧಿಫಲಕಗಳ ಸಂಗ್ರಹ ಮತ್ತು ಕಾಪಿಡುವ ಸಮಸ್ಯೆ ಇತ್ಯಾದಿ ಜಗತ್ತಿನ ವಿವಿಧೆಡೆ ಅದೆಂತಹ ಗಂಭೀರ ಸಮಸ್ಯೆಗಳನ್ನು ತಂದೊಡ್ಡಿವೆ ಎಂಬುದು ಎಲ್ಲರಿಗೂ ವೇದ್ಯ. ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಮೆಕ್ಸಿಕೋ ನಗರದಲ್ಲಿ ಶವಹೂಳಲು ಜಾಗವಿಲ್ಲದೆ ಅರೆಬರೆ ಕೊಳೆತ ಶವಗಳನ್ನೇ ಎತ್ತಬೇಕಾದ ದುಸ್ಥಿತಿ ಒದಗಿತ್ತು. ಕೆಲವೆಡೆ ದಫನಭೂಮಿಯಲ್ಲಿ ತೇವದ ಸಮಸ್ಯೆ, ನೀರು ಜಿನುಗುವ ಸಮಸ್ಯೆ, ನೀರು ನಿಲ್ಲುವ ಸಮಸ್ಯೆ, ಪ್ರವಾಹದ ಸಮಸ್ಯೆ.

ಯುರೋಪಿನಲ್ಲಿ ಶವದಹನದ ಅಭಿಯಾನ ಶುರುವಾದದ್ದೇ `ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕತೆಯ ಅಗತ್ಯ’ ಎಂಬ ಶಿರೋನಾಮೆಯ ಅಡಿಯಲ್ಲಿ! ಹತ್ತೊಂಬತ್ತನೆಯ ಶತಮಾನದಿಂದಲೇ ಪಾಶ್ಚಿಮಾತ್ಯ ದೇಶಗಳಲ್ಲಿ ಶವದಹನ ಪ್ರಚಾರಕ್ಕೆ ಬರುತ್ತಿದೆ. ತಜ್ಞರು `ಪರಿಸರಸಹ್ಯ’, `ಸೂಕ್ತ-ಯುಕ್ತ-ಅನುಕೂಲ’ ಮತ್ತು ಹಣಕಾಸಿನ ಅನುಕೂಲ (viable) ಎಂಬ ಕಾರಣಗಳಿಗಾಗಿ ಶವದಹನ ಪದ್ಧತಿಯನ್ನು ಪ್ರತಿಪಾದಿಸುತ್ತಿದ್ದಾರೆ. ಯುರೋಪಿನಲ್ಲಿ ಅಧಿಕೃತವಾಗಿ ಮೊದಲ ಶವದಹನ ನಡೆದದ್ದೇ ಕೆತೋಲಿಕ್ ದೇಶ ಇಟೆಲಿಯ ಫ್ಲಾರೆನ್ಸ್ ನಗರದಲ್ಲಿ!

ಈಗಂತೂ ಅತ್ಯಾಧುನಿಕ ಶವದಹನ ಯಂತ್ರಗಳ ಆವಿಷ್ಕಾರವಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶವದಹನ ಸಾಮಾನ್ಯವಾಗುತ್ತಿದೆ. ಜಪಾನ್ ದೇಶದಲ್ಲಿ ಈಗ ಶವದಹನ ಕಡ್ಡಾಯ. ಅದಕ್ಕೆ ಮುಖ್ಯ ಕಾರಣ ಚಿಕ್ಕದೇಶವಾದ ಅಲ್ಲಿನ ದೊಡ್ಡ ಜನಸಂಖ್ಯೆ. ಶವ ತ್ಯಜಿಸುವಿಕೆ, ಸಹನ, ದಫನಗಳ ಕುರಿತಂತೆ ಚರಿತ್ರೆಯುದ್ದಕ್ಕೂ ಅತಿಹೆಚ್ಚು ಗಂಭೀರ ಚರ್ಚೆ, ವಾದ, ವಿವಾದ, ಕಲಹ, ರಾಜಕೀಯ ತಿಕ್ಕಾಟ, ಶಾಸನಗಳು ನಡೆದದ್ದು ಜಪಾನ್ ದೇಶದಲ್ಲಿ. ಹೂತರೆ ಮರಗಿಡ, ಪ್ರಾಣಿಗಳಿಗೂ ಉಪಯೋಗವಿಲ್ಲ ಎಂಬ ಅಭಿಪ್ರಾಯ ಅವರದಾಗಿತ್ತು. ಶವದಹನವನ್ನು ಜಪಾನಿಗೆ ತಂದವರು ಬೌದ್ಧರು. (ಶವದ ವಿಚಾರದಲ್ಲಿಯೇ ಸ್ವದೇಶೀ ಚಳುವಳಿ ಅಲ್ಲಿ ನಡೆದಿತ್ತು!) ಶವವನ್ನು ಕಾಡಲ್ಲಿ ಅಥವಾ ಸಮುದ್ರದಲ್ಲಿ ತ್ಯಜಿಸಿ ಸಸ್ಯಗಳಿಗೆ ಗೊಬ್ಬರ ಒದಗಿಸುವುದು, ಪ್ರಾಣಿಗಳಿಗೆ ಜಲಚರಗಳಿಗೆ ಆಹಾರ ಒದಗಿಸುವುದು ಅವರ ಪದ್ಧತಿಯಾಗಿತ್ತು. (ಪಾರಸೀಕರ ನಂಬಿಕೆಯ ಭಾಗವೂ ಅದಾಗಿತ್ತು.) ಈಗ ಅದು ಸಾಧ್ಯವೇ?

ಶವದಹನಕ್ಕೆ ಬೇಕಾದ ಕಟ್ಟಿಗೆಗಾಗಿ ಮರಗಳನ್ನು ಕಡಿಯಬೇಕಾಗುತ್ತದೆ, ಹೊಗೆ ಬರುತ್ತದೆ ಎಂಬ ವಾದವಿದೆ. ಹಿಂದೆ ಬೇಕಾದಷ್ಟು ಕಾಡಿದ್ದಾಗ, ಜನಸಂಖ್ಯೆ ಕಡಿಮೆಯಿದ್ದಾಗ ಅದು ಸಮಸ್ಯೆಯಾಗಿರಲಿಲ್ಲ. ಈಗ ಅದು ಸಮಸ್ಯೆ ಹೌದು. ಈಗ ಕಾಡಿನ ಮರಗಳನ್ನು ಕಡಿಯದೆ ತೆಂಗು, ಕಂಗು, ರಬ್ಬರ್, ಕಾಫಿ ಇತ್ಯಾದಿ ತೋಟಗಳಿಂದ ಅದಕ್ಕಾಗಿ ಬಳಸಬಹುದು. ಮಲೆನಾಡಿನಲ್ಲಿ ಬೆಟ್ಟೆ ಅಡಿಕೆ ಬೇಯಿಸುವ ಶ್ರಾಯದಲ್ಲಿ ಬೂದಿಯಾಗುವ ಕಟ್ಟಿಗೆಯ ಹತ್ತನೇ ಒಂದಂಶದ ಕಟ್ಟಿಗೆಯೂ ಶವದಹನಕ್ಕೆ ವಿನಿಯೋಗವಾಗುವುದಿಲ್ಲ! (ಬೆಟ್ಟೆ ಅಡಿಕೆ ಮನುಷ್ಯನ ನೈಸರ್ಗಿಕ ಆಹಾರವಲ್ಲವಲ್ಲ?!) ಪಂಜಾಬ್, ಹರ್ಯಾಣ, ರಾಜಸ್ಥಾನದ ಉತ್ತರಭಾಗಗಳಲ್ಲಿ ಗೋಧಿ ಕೂಳೆಗೆ ಬೆಂಕಿ ಹಾಕಿ ಎದ್ದ ಹೊಗೆಯ ನೂರನೆಯ ಒಂದಂಶದ ಹೊಗೆಯೂ ಶವದಹನದಿಂದ ಬರುವುದಿಲ್ಲ! ವಿದ್ಯುತ್ ಚಿತಾಗಾರವನ್ನು ಬಳಸಬಹುದು. (ಅಮೇರಿಕಾದ ಕೆಲವು ಕಂಪೆನಿಗಳು ಅತ್ಯಾಧುನಿಕ, ಕಡಿಮೆ ಹೊಗೆಯುಗುಳುವ, ಕಡಿಮೆ ಮಾಲಿನ್ಯ ಉಂಟುಮಾಡುವ ಚಿತಾಗಾರಗಳ ಅತ್ಯಾಕರ್ಷಕ ಜಾಹೀರಾತುಗಳನ್ನು ನೀಡುತ್ತಿವೆ! ಟಿ.ವಿ. ಕಂಪ್ಯೂಟರ್ ಜಾಹೀರಾತುಗಳೂ ನಾಚಬೇಕು ಹಾಗೆ! ಅದರ ಮೇಲೆ ತುಂಡುಡುಗೆಯ ರೂಪದರ್ಶಿ ಮಲಗಿರಲಿಲ್ಲ ಎಂಬುದಷ್ಟೇ ಕೊರತೆ!) ವಿದ್ಯುತ್ ಕೂಡಾ ಪರಿಸರ ನಾಶದಿಂದಲೇ ಬಂದುದು. ಆದರೆ ಚಪ್ಪಲಿ ಅಂಗಡಿ, ಬಟ್ಟೆ ಅಂಗಡಿ, ಕಾಸ್ಮೆಟಿಕ್ ಅಂಗಡಿಗಳ ಅಲಂಕಾರಕ್ಕೆ ವ್ಯಯವಾಗುವ ವಿದ್ಯುತ್ತಿನ ನೂರನೇ ಒಂದಂಶವೂ ಶವದಹನಕ್ಕೆ ಬಳಕೆಯಾಗುವುದಿಲ್ಲ! ಆದರೂ ವಾರಾಣಸಿಯ ಘಾಟ್‍ಗಳಲ್ಲಿ ಶವಗಳನ್ನು ಅರೆಬರೆ ಸುಟ್ಟು, ಬೇಯಿಸಿ ವಿಲೇವಾರಿ ಮಾಡುವುದನ್ನು ಒಪ್ಪಿಕೊಳ್ಳುವುದು ಕಷ್ಟವೇ!

ಈ ಸಂದರ್ಭದಲ್ಲಿ ಮೈಸೂರಿನ ಏಷ್ಯಾ ಕೊಲಂಬಿಯಾ ಆಸ್ಪತ್ರೆಯ ವೈದ್ಯ ಡಾ. ಎಂ. ಸತೀಶ್ ಕುಮಾರ್ ಅವರ ಮಾತುಗಳು ಔಚಿತ್ಯಪೂರ್ಣವಾಗಿವೆ. ಅವರೆನ್ನುತ್ತಾರೆ “ಕೋವಿಡ್-19ನಿಂದ ಮೃತಪಟ್ಟವರ ದೇಹಗಳನ್ನು ವಿದ್ಯುತ್ ಚಿತಾಗಾರದಲ್ಲಿ ಸಂಸ್ಕಾರ ಮಾಡುವುದೇ ಉತ್ತಮ. ಅದೇ ಹೆಚ್ಚು ಸುರಕ್ಷಿತ ಕೂಡ. ಇಡೀ ದೇಹ ಸಂಪೂರ್ಣ ಭಸ್ಮವಾಗುತ್ತದೆ. ವೈರಾಣು ಇದ್ದರೂ ನಾಶವಾಗುತ್ತದೆ. ಚಿತಾಭಸ್ಮ ಪಡೆದು ಮುಂದಿನ ವಿಧಿವಿಧಾನ ಪೂರೈಸಬಹುದು. ಜನರ ಮನಸ್ಸಿನಲ್ಲಿರುವ ಆತಂಕ ಕೂಡ ದೂರವಾಗುತ್ತದೆ. ಅಲ್ಲದೆ ಸಾಮಾಜಿಕ ಸಮಸ್ಯೆ ನೀಗುತ್ತದೆ. ಹೂಳಲೇಬೇಕೆಂದು ಕೆಲ ಸಮುದಾಯದವರು ಬಯಸಿದರೆ ಅದಕ್ಕೂ ಅವಕಾಶ ನೀಡಬಹುದು. ದೇಹವೇನೋ ಬೇಗನೇ ಕರಗಿಹೋಗುತ್ತದೆ. ಆದರೆ ದೇಹವನ್ನು ಸುತ್ತಲು ಬಳಸಿದ ಪ್ಲಾಸ್ಟಿಕ್ ನಾಶವಾಗದೇ ಉಳಿದು ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಜನರಿಗೂ ಭಯ ಇದ್ದೇ ಇರುತ್ತದೆ.” ಇಷ್ಟೆಲ್ಲಾ ವಿವೇಚನೆಯ ಮಾತುಗಳು ತಿಳಿದಿದ್ದರೂ ಆ ಸೆಕ್ಯೂಲರ್ ಪರಿಸರವಾದಿಗಳು ಅದಕ್ಕೆಲ್ಲ ಎಳ್ಳುನೀರು ಬಿಟ್ಟು, ತಾವು ಬರೆದದ್ದನ್ನೆಲ್ಲಾ ಸುತ್ತಿ ಶವದೊಂದಿಗೇ ಹೂಳಿಬಿಟ್ಟರು! ಶವಸಂಸ್ಕಾರ environmentally correct ಆಗದಿದ್ದರೂ ಪರವಾಗಿಲ್ಲ (ಎಷ್ಟಾದರೂ ಹೆಣ ತಾನೇ!), politically correct ಆದರೆ ಒಳಿತು!

ಭಾರತದ ಸೆಕ್ಯೂಲರ್ ಪರಿಸರವಾದಿಯೊಬ್ಬರ ಪರಿಪಾಟಲನ್ನು ಓದಿ ಇಷ್ಟೆಲ್ಲ ಬರೆಯಬೇಕಾಯಿತು. ಈಗ ಅವರ ಸೋದರ ಸಂಬಂಧಿ ಸೆಕ್ಯೂಲರ್ ರಾಜಕಾರಣಿಯೋರ್ವರು ತಮ್ಮ ತಲೆಯನ್ನು ಮಾತ್ರ ಹೂತುಕೊಂಡು ಇನ್ನೂ ಅದ್ಭುತವಾದ politically correct ಮಾತನಾಡಿದ್ದಾರೆ. ಅವರ ಪ್ರಕಾರ ಪ್ರಾಣ ಹೋದರೂ ಶವ ಶಾಶ್ವತ. ತಮ್ಮ ಶವವನ್ನು ಸುಡುವ ಮಂದಿಗೆ (ಸಮುದಾಯಕ್ಕೆ) ಭೂಮಿಯ ಮೇಲೆ ಹಕ್ಕಿಲ್ಲವಂತೆ. ಶವವನ್ನು ಹೂಳುವವರಿಗೆ, ಅಂದರೆ ಶವವನ್ನು `ಶಾಶ್ವತ’ ಕಾಪಿಡುವ ಸಮುದಾಯದವರಿಗೆ ಭೂಮಿಯ ಮೇಲೆ ಹೆಚ್ಚಿನ ಅಧಿಕಾರವಂತೆ. ನಾವು, ಅಂದರೆ ಶವವನ್ನು ಸುಡುವ ಸಂಪ್ರದಾಯದವರು, ನಮ್ಮ ಶವವನ್ನು ಸುಟ್ಟ ನಂತರ ಹಕ್ಕನ್ನು ಕಳೆದುಕೊಳ್ಳುತ್ತೇವೋ ಅಥವಾ ಸುಟ್ಟುಹಾಕುವ ಮೊದಲೇ ಕಳೆದುಕೊಳ್ಳುತ್ತೇವೋ ಎಂಬುದು ಸ್ಪಷ್ಟವಾಗಲಿಲ್ಲ. ಜಗತ್ತಿನ ಸಧ್ಯದ ಮತೀಯ-ರಾಜಕೀಯ ವಿದ್ಯಮಾನಗಳನ್ನು ಗಮನಿಸುವಾಗ ಎರಡೂ ಸರಿಯಿರಬಹುದು. ಈ ಬುದ್ಧಿಜೀವಿ ರಾಜಕಾರಣಿಯ ಪ್ರಧಾನಿಯೋರ್ವರು `ಅಲ್ಪಸಂಖ್ಯಾತರಿಗೆ ಈ ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು’ ಎಂದು ಹೇಳಿದ್ದನ್ನು ಕೇಳಿದ ನೆನಪು. ಆದರೂ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ ಭಾರತೀಯ ತಥಾಕಥಿತ ಸೆಕ್ಯೂಲರ್ ಚಿಂತಕರು ತಮ್ಮ ಮಾನ, ಮರ್ಯಾದೆ, ಬೌದ್ಧಿಕ ಪ್ರಾಮಾಣಿಕತೆ, ವಿವೇಚನೆಗಳನ್ನು ಶವಕ್ಕಿಂತಲೂ ಆಳದಲ್ಲಿ ಹೂಳಿಬಿಟ್ಟಿದ್ದಾರೆ.

******************

(ಶೀರ್ಷಿಕೆಯನ್ನು ಕದ್ದದ್ದಕ್ಕಾಗಿ ಕಾರಂತರಲ್ಲಿ ಕ್ಷಮೆಯಾಚಿಸುತ್ತೇನೆ.)

27-7-2020 ದೇವು ಹನೆಹಳ್ಳಿ

 

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments