– ಅಜಿತ್ ಶೆಟ್ಟಿ ಹೆರಂಜೆ

ಗೊಡಾ ಹೈ ಮೈದಾನ್ ಹೈ ಅನ್ನುವುದು ಹಿಂದಿಯ ಒಂದು ಅತ್ಯಂತ ಪ್ರಚಲಿತ ನಾಣ್ಣುಡಿ. ಭಾರತದ ಡಿಜಿಟಲ್ ಜಗತ್ತಿಗೆ ಇದು ಇವತ್ತು ಅಕ್ಷರಶಃ ಹೇಳಿ ಮಾಡಿಸಿದ ಹಾಗಿದೆ. ಭಾರತ ೨೦೧೪ರ ನಂತರ ಕ್ಷಿಪ್ರಗತಿಯ ಡಿಜಿಟಲ್ ಕ್ರಾಂತಿಯೊಂದನ್ನು ಕಂಡಿತು. ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗೆ ಇಂಬು ಕೊಟ್ಟಿತು. ಅದೇ ಕಾರಣಕ್ಕೆ ಇವತ್ತು ವಿತ್ತೀಯ ಕ್ಷೇತ್ರದಲ್ಲಿ ಜನಸಾಮಾನ್ಯರ ಕೈಯಲ್ಲಿ ಸುಮಾರು ೫ ವರ್ಷಗಳ ಹಿಂದೆ ಯಾರೂ ಕೂಡ ಊಹಿಸಲೂ ಸಾಧ್ಯವಾಗದ ಅತ್ಯಂತ ಪ್ರಭಾವಿ ತಂತ್ರಜ್ಞಾನವೊಂದು ಸಿಕ್ಕಿದೆ. ಜನಸಾಮನ್ಯರು UPI ಮೂಲಕ ಮೆಸೇಜ್ ಕಳಿಸಿದಷ್ಟೆ ಸುಲಭವಾಗಿ ಮೊಬೈಲುಗಳಿಂದ ಹಣ ಕಳುಹಿಸಬಹುದು. ಇದು ಡಿಜಿಟಲ್ ಕ್ರಾಂತಿಯ ಒಂದು ಮುಖವಾದರೆ ಇದರ ಇನ್ನೊಂದು ಮುಖ ಕರಾಳವಾಗಿದೆ. ಅದಕ್ಕೆ ಕಡಿವಾಣ ಹಾಕುವವರು ಯಾರು? ಗೋಡಾ, ಮೈದಾನ್, ಮತ್ತದರ ನಾಗಾಲೋಟ!
ಇತ್ತಿಚೆಗೆ ಮದ್ರಾಸ್ ಹೈಕೋರ್ಟಿನಲ್ಲಿ ಎ.ಪಿ ಸೂರ್ಯ ಪ್ರಕಾಸಂ ಎನ್ನುವ ವ್ಯಕ್ತಿಯೊಬ್ಬರು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಚಿತ್ರನಟಿ ತಮನ್ನಾ ಅವರನ್ನು ಬಂಧಿಸುವಂತೆ ಕೋರಿದ್ದಾರೆ. ಏಕೆಂದರೆ ದೇಶಾದ್ಯಂತ ಎಂಪಿಎಲ್ ಎನ್ನುವ ಆನ್‌ಲೈನ್ ಜೂಜಿನ ಆಟವೊಂದಕ್ಕೆ ಇವರು ಪ್ರಚಾರ ನೀಡುತ್ತಿದ್ದಾರೆ. ಅದನ್ನು ಆಡಿ ಲಕ್ಷಾಂತರ ರೂಪಾಯಿ ಗೆಲ್ಲಿ ಎನ್ನುವ ಆಮಿಷವನ್ನೊಡ್ಡುತ್ತಿದ್ದಾರೆ. ಯಾವುದೇ ಉತ್ಪನ್ನ ಅಥವಾ ಸೇವೆಗಳು ಗ್ರಾಹಕರಿಗೆ ಮಾಡಿದ ಆಶ್ವಾಸನೆಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಗ್ರಾಹಕ ಹಕ್ಕಿನ ಕಾಯಿದೆಯ ಅಡಿಯಲ್ಲಿ ಉತ್ಪನ್ನಕ್ಕೆ ಪ್ರಚಾರ ಕೊಡುವ ವ್ಯಕ್ತಿಯ ಮೇಲೆ ಮೊಕದ್ದಮೆ ಹೂಡುವ ಅವಕಾಶವಿದೆ. ವಿರಾಟ್ ಕೊಹ್ಲಿ ಮತ್ತು ತಮನ್ನಾ ಅವರು ಎಂಪಿಎಲ್ ಅನ್ನು ಆನ್‌ಲೈನ್ ಜೂಜಾಟಕ್ಕೆ ಪ್ರಚಾರ ಕೊಟ್ಟು ಜನರನ್ನು ಜೂಜಾಡುವಂತೆ ಪ್ರೇರೇಪಿಸುತ್ತಾರೆ. ಜನ ಈ ಗೀಳಿಗೆ ಬಿದ್ದು ಹಣ ಕಳೆದುಕೊಂಡು ಕಂಗಾಲಾಗಿ, ಚಟಕ್ಕೆ ಬಿದ್ದು ಕಳ್ಳತನಕ್ಕೂ ಮುಂದಾಗುತ್ತಾರೆ. ತಾನು ತೊಂದರೆಗೆ ಸಿಕ್ಕಿಕೊಳ್ಳುವುದಲ್ಲದೆ ತನ್ನ ಕುಟುಂಬವನ್ನೂ ಸಂಕಷ್ಟಕ್ಕೆ ಸಿಲುಕಿಸುತ್ತಾರೆ ಎನ್ನುತ್ತಾರೆ ಎಂ.ಪಿ ಸೂರ್ಯಪ್ರಕಾಸಂ.
ಸುಮಾರು ಒಂದು ವರ್ಷದ ಹಿಂದೆ ಬ್ಲೂವೇಲ್ ಎಂಬ ಆನ್‌ಲೈನ್ ಆಟವೊಂದು ಯುವಕರಿಗೆ ರಿಯಲ್ ಲೈ ಟಾಸ್ಕ್ ಕೊಡುತ್ತಾ ಆಟದ ಕೊನೆಯ ಹಂತದಲ್ಲಿ ತನ್ನನ್ನು ತಾನೆ ಅಂತ್ಯಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಇದಕ್ಕೆ ಭಾರತದ ಒಂದಿಷ್ಟು ಮಕ್ಕಳು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದರು. ಇದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆಯೇ ಮದ್ರಾಸ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಬ್ಲೂವೇಲನ್ನು ನಿಷೇಧಿಸುವ ಆದೇಶ ಹೊರಡಿಸಿತು.
ಜೂಜು, ಮದ್ಯವ್ಯಸನ ಮತ್ತು ವೇಶ್ಯಾವಾಟಿಕೆ ಇವು ಮನುಷ್ಯ ಈ ಭೂಮಿಗೆ ಬಂದಾಗಿನಿಂದ ಸಮಾಜದ ಒಂದು ಭಾಗವೇ ಆಗಿ ಬಿಟ್ಟಿದೆ. ಇದನ್ನು ನಿಯಂತ್ರಿಸಲು ಪ್ರಪಂಚದಲ್ಲಿ ಅದೆಷ್ಟೋ ಕಾನೂನುಗಳು ಬಂದವು. ಪ್ರಪಂಚದ ಕೆಲ ಭಾಗದಲ್ಲಿ ಇದನ್ನು ಕಾನೂನುಬದ್ಧಗೊಳಿಸಿ ಸರ್ಕಾರದ ನಿಯಂತ್ರಣದಲ್ಲಿ ನಡೆಯಲು ಅವಕಾಶ ಕೊಟ್ಟರೆ, ಇನ್ನು ಕೆಲವು ದೇಶಗಳಲ್ಲಿ ಇವುಗಳ ವಿರುದ್ಧ ಕಠಿಣ ಕಾನೂನು ಮಾಡಿ ಅವುಗಳು ಜನಸಾಮಾನ್ಯರ ಕೈಗೆ ಅಷ್ಟು ಸುಲಭವಾಗಿ ಸಿಗದ ಹಾಗೆ ನೋಡಿಕೊಳ್ಳಲಾಗುತ್ತಿದೆ. ಆದರೆ ಸಮಾಜಘಾತುಕರು ಕಾನೂನಿನ ಕಣ್ಣು ತಪ್ಪಿಸಿ ಹೊಸ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಗ್ರಾಹಕರನ್ನು ಸೆಳೆಯಲು ತಂತ್ರ ರೂಪಿಸುತ್ತಿರುತ್ತಾರೆ. ಇಂದು ಸಾಮಾಜಿಕ ಜಾಲತಾಣಗಳು ಇಂತಹ ಜೂಜಿನ ಆಟವನ್ನು ಪ್ರಚಾರ ಮಾಡಲು ಮತ್ತೊಂದು ವೇದಿಕೆ ಕಲ್ಪಿಸಿವೆ. ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮುಂತಾದವುಗಳಲ್ಲಿ ಜೂಜಾಟವನ್ನು ಪ್ರಚಾರ ಮಾಡುತ್ತಾರೆ. ದುರಂತವೆಂದರೆ ಇದಕ್ಕೆ ಸಮಾಜದ ಕೆಲವು ಗಣ್ಯರೆನಿಸಿಕೊಳ್ಳುವವರು ರಾಯಭಾರಿಗಳಾಗಿರುತ್ತಾರೆ. ರಮ್ಮಿ ಎನ್ನುವ ಆಟವನ್ನೇ ತೆಗದುಕೊಳ್ಳಿ, ( ದೇಶ ಲಾಕ್ ಡೌನಿನಲ್ಲಿದ್ದಾಗ ಅದರ ಲಾಭ ಪಡೆದು, ದುಡಿಮೆ ಇಲ್ಲದ ಜನರ ಉಳಿತಾಯ ಖಾಲಿಮಾಡಿಸಿದ ಮಂದಿ ಇವರು ) ಇದರ ಜಾಹೀರಾತನ್ನುನೋಡಿದರೆ ಅದು ಜೂಜಲ್ಲ, ಇನ್ಯಾವುದೋ ವರ್ಕ್ ಪ್ರಂ ಹೋಮ್ ರೀತಿಯ ಕೆಲಸ ಅನ್ನಿಸಬೇಕು! ಆ ಮಟ್ಟಕ್ಕೆ ಇವರು ಜನರ ಮನಸನ್ನು ಕೆಡಿಸುತ್ತಾರೆ.
ಸಮಾಜದಲ್ಲಿ ಒಬ್ಬ ವ್ಯಕ್ತಿ ಪ್ರಭಾವ ಬೀರುವ ಮಟ್ಟಕ್ಕೆ ಬೆಳೆದರೆ ಆ ವ್ಯಕ್ತಿಯ ಮೇಲೆ ಒಂದು ಸಾಮಾಜಿಕ ಜವಾಬ್ಧಾರಿ ಅಂತಾನೂ ಇರುತ್ತದೆ. ಒಬ್ಬ ಪ್ರಭಾವ ಮತ್ತು ಶಕ್ತಿಶಾಲಿ ಮನುಷ್ಯ ಹೇಗೆ ನಡೆದುಕೊಳ್ಳಬೇಕು ಎಂದು ಸಮಾಜಕ್ಕೆ ತೋರಿಸಿಕೊಟ್ಟವರು ಕನ್ನಡದ ವರನಟ ಡಾ. ರಾಜಕುಮಾರ್, ಉದ್ಯಮಿ ರತನ್ ಟಾಟಾ, ನಾರಾಯಣ ಮೂರ್ತಿ, ಸುಧಾ ಮೂರ್ತಿಯಂತವರು. ನಮ್ಮ ದೇಶದಲ್ಲಿ ಜನ ಕಾನೂನಿಗಿಂತ ಹೆಚ್ಚು ಬೆಲೆ ಕೊಡುವುದು ಮತ್ತು ಅಂಜುವುದು ನೈತಿಕತೆಗೆ. ನಮ್ಮ ದೇಶದ ಕಾನೂನು ಕೂಡ ಅದೇ ಆಧಾರದ ಮೇಲೆ ರೂಪಿಸಲ್ಪಟ್ಟಿದೆ. ಯಾವಾಗ ಸಮಾಜ ನೈತಿಕತೆಯನ್ನು ಕೈ ಬಿಡುತ್ತದೋ ಆಗ ಸರ್ಕಾರ ಸೂಕ್ತವಾದ ಕಾನೂನಿನ ಮೂಲಕ ಸಮಾಜದ ನೈತಿಕ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡುತ್ತದೆ. ಭಾರತೀಯ ಸಂಪ್ರದಾಯದಲ್ಲಿ ವಯಸ್ಸಾದ ತಂದೆ ತಾಯಂದಿರನ್ನು ನೋಡಿಕೊಳ್ಳುವುದು ಮಕ್ಕಳ ಧರ್ಮ. ಹೆತ್ತ ಮಕ್ಕಳೇ ತಂದೆ ತಾಯಂದಿರನ್ನು ಬೀದಿಪಾಲು ಮಾಡಿದಾಗ ಸರ್ಕಾರ ವಯಸ್ಸಾದ ತಂದೆ ತಾಯಂದಿರನ್ನು ಕೊನೆತನಕ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಎಂದು ಕಾನೂನು ಹೇಳುತ್ತದೆ. ಇಂದು ಆನ್‌ಲೈನ್ ಜೂಜುಗಳನ್ನು ಬಗ್ಗುಬಡಿಯಲು ಸರಿಯಾದ ಕಾನೂನುಗಳು ಇಲ್ಲದಿರುವ ಕಾರಣ ಸಮಾಜದ ಸೋಕಾಲ್ಡ್ ದೊಡ್ಡ ಮನುಷ್ಯರು ತಮ್ಮ ನೈತಿಕತೆಯನ್ನು ಜೂಜುಕೋರರ ದುಡ್ಡಿಗೆ ಅಡವಿಟ್ಟು ಜೂಜನ್ನು ಪ್ರಚಾರ ಮಾಡುತ್ತಿದ್ದಾರೆ. ಕ್ಲಾಸಿನಲ್ಲಿ ಪಾಠ ಕೇಳಬೇಕಾದ ಮಕ್ಕಳು ಶಾಲೆ ಕಾರಿಡಾರಿನ ಮೂಲೆಯಲ್ಲಿ ಕೂತು ಜೂಜಾಡಿ ತಮ್ಮ ಮನೆಯವರು ಕೂಡಿಟ್ಟ ಹಣವನ್ನು ಕಳೆಯುತ್ತಿದ್ದಾರೆ. ದುಡಿದ ಹಣವನ್ನು ಪಡೆದು ಜೂಜನ್ನು ಪ್ರಚಾರ ಮಾಡುವವರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಬೇಕು.
ಡಿಜಿಟಲ್ ಕ್ರಾಂತಿ ಸಾಕಷ್ಟು ಅವಕಾಶಗಳ ಜೊತೆಗೆ ಸವಾಲುಗಳನ್ನೂ ಒಡ್ಡಿದೆ. ಇವು ಇವತ್ತು ಸಮಾಜದ ಭದ್ರತೆಗೆ ನೇರ ಸವಾಲನ್ನು ಹಾಕುತ್ತಿದೆ. ಇಂತಹ ಸವಾಲನ್ನು ಸಮಾಜ ಮತ್ತು ಸರ್ಕಾರ ಒಟ್ಟಿಗೆ ಹೆಗಲಿಗೆ ಹೆಗಲು ಕೊಟ್ಟು ನಿಭಾಯಿಸಬೇಕು. ಆನ್‌ಲೈನ್ ಗೇಮುಗಳು ಮತ್ತು ಅದರ ರಾಯಭಾರಿಗಳು ಖಂಡಿತವಾಗಿಯೂ ಕಾನೂನಿನಲ್ಲಿ ಇರುವ ಲೋಪಗಳ ದುರ್ಬಳಕೆ ಮಾಡಿಕೊಂಡು ಹಣ ಸಂಪಾದಿಸಲು ನಯಾ ಪೈಸೆಯ ಮುಲಾಜನ್ನು ತೋರಿಸುತ್ತಿಲ್ಲ. ಹಾಗಾಗಿ ಸರ್ಕಾರ ಕೂಡ ಇಂತಹ ಅನೈತಿಕತೆಗೆ ಯಾವುದೇ ಮುಲಾಜು ತೋರಿಸಬಾರದು. ಆನ್‌ಲೈನ್ ಆಥವಾ ಸೈಬರ್ ಅಪರಾಧ ತಡೆಯಲು ಕೆಂದ್ರ ಸರ್ಕಾರ NIA, ED ಯಂತಹ ಪ್ರತ್ಯೇಕ ಸಂಸ್ಥೆಗಳನ್ನು ಸ್ಥಾಪನೆ ಮಾಡಬೇಕು. ಅಂತವರಿಗೆ ಸರ್ಕಾರ ಯಾವುದೇ ಸರ್ಕಾರಿ ಪ್ರಶಸ್ತಿ-ಗೌರವಗಳನ್ನು ಕೊಡಬಾರದು. ಅವರನ್ನು ಸರ್ಕಾರದ ಯಾವುದೇ ಯೋಜನೆಗಳಿಗೆ ರಾಯಭಾರಿಯಾಗಿ ನೇಮಿಸಬಾರದು. ಇದರ ಜೊತೆಗೆ ಇಂದಿನ ನ್ಯಾಯಾಂಗ ವ್ಯವಸ್ಥೆ ಕೂಡ ಈ ಆನ್‌ಲೈನ್ ಜೂಜುಕೊರರ ವಿರುದ್ಧ ಸುಮೋಟೋ ಕೇಸು ದಾಖಲಿಸಿ ಅವುಗಳಿಂದ ಸಮಾಜದ ಬಡವರಿಗೆ ಆಗುತ್ತಿರುವ ಸಮಸ್ಯೆಗಳಿಂದ ಪಾರುಮಾಡಬೇಕು. ಕೇಂದ್ರ ಸರ್ಕಾರ ಟಿಕ್ ಟ್ಯಾಕ್ ನಿಷೇಧ ಮಾಡುವ ಮುಂಚೆಯೇ ಮದ್ರಾಸ್ ಹೈಕೋರ್ಟ್ ಅದನ್ನು ನಿಷೇಧ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನವನ್ನು ಕೊಟ್ಟಿತ್ತು. ಈಗ ಅದೇ ಮದ್ರಾಸ್ ಹೈಕೋರ್ಟಲ್ಲಿ MPL ಆಟದ ವಿರುದ್ಧ ಕೇಸು ದಾಖಲಾಗಿದೆ. ಹಾಗೆಯೇ ಉಳಿದ ಆನ್‌ಲೈನ್ ಜೂಜುಗಳ ವಿರುದ್ಧ ಕೂಡ ದೇಶದ ನ್ಯಾಯಾಂಗ ವ್ಯವಸ್ಥೆ ಸೂಕ್ತವಾದ ಕಾನೂನನ್ನು ತರಬೇಕು. ಆಗಲೇ ಆನ್‌ಲೈನ್ ಜೂಜಾಟ ಎಂಬ ಲಂಗೂಲಗಾಮು ಇಲ್ಲದ ಕುದುರೆಯನ್ನು ಹಿಡಿದು ನಿಲ್ಲಿಸಲು ಸಾಧ್ಯ.
Like this:
Like ಲೋಡ್ ಆಗುತ್ತಿದೆ...
Related