ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 3, 2020

ಸ್ವ ರಕ್ಷಣೆಯಿಂದ ರಾಷ್ಟ್ರರಕ್ಷಣೆ: ರಕ್ಷಾಬಂಧನ ಸಂದೇಶ

‍ನಿಲುಮೆ ಮೂಲಕ
– ರಾಜೇಶ್ ನರಿಂಗಾನ
ಶ್ರಾವಣ ಹುಣ್ಣಿಮೆ ಮತ್ತೆ ಬಂದಿದೆ. ಶ್ರಾವಣ ಹುಣ್ಣಿಮೆಯಂದು ಆಚರಿಸುವ ರಕ್ಷಾಬಂಧನ ಹಬ್ಬಕ್ಕೆ ಅದರದೇ ಆದ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿದೆ. ಓರ್ವ ಜವಾಬ್ದಾರಿಯುತ ಸಹೋದರ ತನ್ನ ಸಹೋದರಿಯನ್ನು ರಕ್ಷಣೆ ಮಾಡಬೇಕು ಎನ್ನುವ ಆಶಯದಿಂದ ಹಿಡಿದು ಸ್ವಯಂಸೇವಕರು ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ರಾಷ್ಟ್ರ ರಕ್ಷಣೆಗೈಯುವ ಸಂಕಲ್ಪದ ಉದಾತ್ತ ಧ್ಯೇಯ ಆಶಯದವರೆಗೆ ರಕ್ಷಾಬಂಧನವನ್ನು ವಿವಿಧ ರೀತಿಯಲ್ಲಿ ವಿಶ್ವದಾದ್ಯಂತ ಆಚರಿಸುತ್ತೇವೆ. ಇಂತಿಪ್ಪ ರಕ್ಷಾಬಂಧನ ಮತ್ತೆ ಬಂದಿದೆ. ಕಟ್ಟಲು ಬಗೆಬಗೆಯ ರಕ್ಷೆಗಳು ಮಾರುಕಟ್ಟೆಗೆ ಮಿತವಾಗಿ ಬಂದಿದೆ.
ಸಹೋದರ ಸಹೋದರಿಯರ ನಡುವೆ ನಂಬಿಕೆ, ಭರವಸೆಯನ್ನು ಉದ್ದೀಪನಗೊಳಿಸುವ, ಸಹೋದರನಿಗೆ ಸಹೋದರಿಯ ಮೇಲೆ ಇರುವ ಕಾಳಜಿ, ಸಹೋದರಿಗೆ ಸಹೋದರನ ಮೇಲೆ ಇರುವ ಅಕ್ಕರೆ, ನವಿರಾದ ಬಾಂಧವ್ಯವನ್ನು ಉಜ್ವಲಗೊಳಿಸುವ ಹಬ್ಬವೇ ರಕ್ಷಾಬಂಧನ. ಸಹೋದರನ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ, ನಿನ್ನ ಸುಖ-ದುಃಖಗಳಲ್ಲಿ ಸಮಾನ ಭಾಗಿಯಾಗುತ್ತೇನೆ; ನನ್ನ ಯೋಗಕ್ಷೇಮ, ರಕ್ಷಣೆಯ ಭಾರ ನಿನ್ನ ಹೆಗಲಿಗೆ ಎಂದು ದೇವರ ಮುಂದೆ ಪ್ರಾರ್ಥಿಸಿ ರಕ್ಷೆಯನ್ನು ಕಟ್ಟುವುದು ತಲೆತಲಾಂತರದಿಂದ ಬಂದಿರುವ ಪದ್ಧತಿ, ಸಂಪ್ರದಾಯ.

ರಕ್ಷಾಬಂಧನಕ್ಕೆ ತನ್ನದೇ ಆದ ಐತಿಹ್ಯವಿದೆ.  ಕದನದಿಂದಾಗಿ ತನ್ನ ರಾಜ್ಯವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಇಂದ್ರನು ಬೃಹಸ್ಪತಿಯ ಮೊರೆ ಹೋಗುತ್ತಾನೆ.‌ ಆಗ ಬೃಹಸ್ಪತಿಯು ಇಂದ್ರಾಣಿಯ ಕೈಗೆ ಒಂದು ದಾರವನ್ನು ಕೊಟ್ಟು ಶ್ರಾವಣ ಹುಣ್ಣಮೆಯ ದಿನ ಇದನ್ನು ಇಂದ್ರನ ಕೈಗೆ ಕಟ್ಟುವಂತೆ ಹೇಳುತ್ತಾನೆ. ಅಂತೆಯೇ ಶ್ರಾವಣ ಹುಣ್ಣಮೆಯ ದಿನ ಇಂದ್ರಾಣಿಯು ಇಂದ್ರನ ಕೈಗೆ ದಾರವನ್ನು ಕಟ್ಟಿಸಿಕೊಂಡ ಬಳಿಕ  ಕಳೆದು ಹೋಗಿದ್ದ ಸಂಪತ್ತೆಲ್ಲವೂ ಮರಳಿ ಬಂತು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಜಗತ್ತನ್ನೇ ಗೆಲ್ಲಬೇಕೆಂಬ ಮಹದಾಸೆ ಇಟ್ಟುಕೊಂಡು ದಂಡಯಾತ್ರೆ ಮಾಡಿಕೊಂಡು ಭಾರತಕ್ಕೆ ಬಂದ ಗ್ರೀಕ್ ದೊರೆ ಅಲೆಕ್ಸಾಂಡರ್‌ನಿಗೆ ಭಾರತದ ಓರ್ವ ಸಾಮಂತ‌ ರಾಜ ಪುರೂರವ ಎದುರಾಗಿ ನಿಲ್ಲುತ್ತಾನೆ. ಯುದ್ಧದ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ಪುರೂರವನ ಕೈಗೆ ದಾರವನ್ನು ಕಟ್ಟಿ ನನ್ನ ಪತಿಯ ರಕ್ಷಣೆ ಮಾಡುವಂತೆ ಕೇಳಿಕೊಳ್ಳುತ್ತಾಳೆ ಎಂದು ಚರಿತ್ರೆಯಲ್ಲಿ ಉಲ್ಲೇಖವಿದೆ. ಇಂಥ ವಿಶೇಷತೆಯುಳ್ಳ ರಕ್ಷಾಬಂಧನವನ್ನು 1925ರಂದು ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಆರು ಉತ್ಸವಗಳಲ್ಲಿ ಇದನ್ನೂ ಒಂದಾಗಿ ಆಚರಣೆ ಮಾಡುತ್ತಾ ಬರುತ್ತಿದೆ.
ಇಂದು ಇಡೀ ಜಗತ್ತು ಚೈನಾ ವೈರಸ್‌ ಕೋವಿಡ್-೧೯ಕ್ಕೆ ನಲುಗಿಹೋಗಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿದುಬಿದ್ದಿದೆ. ಇಂಥ ಸಮಯದಲ್ಲಿ ಎಲ್ಲಾ ದೇಶಗಳು ಜಾಗತೀಕರಣದಿಂದ ರಾಷ್ಟ್ರೀಕರಣದ ಕಡೆಗೆ ವಾಲತೊಡಗಿದೆ. ಜಾಗತಿಕ ಮಟ್ಟದಲ್ಲಿ ಕೊರೋನೋತ್ತರ ಕಾಲ ಒಂದು ಹೊಸ ಮಜಲಿಗೆ ಕೊಂಡೊಯ್ಯುವುದಂತೂ ಅಕ್ಷರಶಃ ನಿಜ. ಈ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಇಟ್ಟಿರುವಂತೆ ಕಾಣುತ್ತಿದೆ.. ಕೊರೊನಾದ ಭೀತಿಯ ನಡುವೆಯೂ ಭಾರತದ ಘನ ಸರಕಾರ ಆತ್ಮನಿರ್ಭರ ಭಾರತಕ್ಕೆ ಕರೆನೀಡಿದೆ. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದೇ ಆತ್ಮನಿರ್ಭರ ಭಾರತದ ಮೂಲ ಉದ್ದೇಶ. ನಮ್ಮ ಸ್ವಯಂರಕ್ಷಣೆಯ ಮೂಲಕ ರಾಷ್ಟ್ರರಕ್ಷಣೆಯ ಸಂಕಲ್ಪ ಮಾಡುವುದು ರಕ್ಷಾಬಂಧನದ ಉದಾತ್ತ ಸಂದೇಶ.  ರಕ್ಷೆ(ರಾಖಿ)ಯಲ್ಲಿ ಹತ್ತಾರು ರೇಷಿಮೆ ಎಳೆಗಳನ್ನು ಒಂದು ದಾರಕ್ಕೆ ಬೆಸೆದು ಕಟ್ಟಿರುತ್ತಾರೆ. ಅದು ಜಾತಿ-ಮತ-ಪಂಥಗಳ ಎಲ್ಲೆ ಮೀರಿ ನಾವೆಲ್ಲರೂ ಭಾರತೀಯರು ಎನ್ನುವ ಸಂದೇಶವನ್ನು ಸಾರುತ್ತದೆ.
ಭಾರತದಲ್ಲಿ ಎಲ್ಲೇ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಭಾರತೀಯರೆಲ್ಲರೂ ಒಂದಾಗುವುದನ್ನು ಅನೇಕ ಭಾರಿ ನೋಡಿದ್ದೇವೆ. ಈ ಬಾರಿಯಂತೂ ಕಳೆದ ಎಂಟು ತಿಂಗಳಿನಿಂದ ಇಡೀ ಜಗತ್ತೇ ಕಣ್ಣಿಗೆ ಕಾಣದ ಒಂದು ವೈರಸ್‌ಗೆ ನಲುಗಿಹೋಗಿದೆ. ಈ ಸಂದರ್ಭದಲ್ಲಿ ಇಡೀ ಭಾರತ ಒಂದಾಗಿ ನಿಂತ ರೀತಿಯಂತೂ ಅಮೋಘ. ಕೊರೊನಾ ಭಾರತಕ್ಕೆ ಬಂದ ಆರಂಭ ಕಾಲದಲ್ಲಿ ಕೇಂದ್ರ ಸರಕಾರವು ಒಂದು ದಿನದ ಜನತಾ ಕರ್ಫ್ಯೂ ಮೂಲಕ ಎಚ್ಚರಿಕೆಯ ಸಂದೇಶ ನೀಡಿದಾಗ ಇಡಿಯ ಭಾರತ ಅದಕ್ಕೆ ಸ್ಪಂದಿಸಿತು. ಮುಂದೆ ಲಾಕ್‌ಡೌನ್ ಘೋಷಣೆ ಮಾಡಿ ಭಾರತೀಯರನ್ನು ಮನೆಯೊಳಗೆ ಇರುವಂತೆ ಕೇಳಿಕೊಂಡಾಗ ಅನೇಕ ಸಂಘಟನೆಗಳು ನಿರ್ಗತಿಕರಿಗೆ, ದಿನಕೂಲಿ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ದೇಶದಾದ್ಯಂತ ನೀಡಿ ನಿಮ್ಮ ಜೊತೆ ನಾವಿದ್ದೇವೆ.. ಎಲ್ಲರೂ ಒಗ್ಗಟ್ಟಾಗಿ ಕೊರೊನಾವನ್ನು ಎದುರಿಸೋಣ ಎಂಬ ಸಂದೇಶವನ್ನು ಸಾರಿದರು. ಡಾಕ್ಟರ್‌ಗಳು, ನರ್ಸ್‌ಗಳು, ಪೋಲೀಸರು ಸ್ವಚ್ಛತಾ ಕರ್ಮಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಮರೋಪಾದಿಯಲ್ಲಿ ಸೇವೆ ಸಲ್ಲಿಸತೊಡಗಿದರು. ಸಂಘ ಆಚರಿಸುವ ರಕ್ಷಾಬಂಧನದ ಸಂದೇಶವೇ ಇದು. ಸ್ವಯಂರಕ್ಷಣೆಯಿಂದ ರಾಷ್ಟ್ರರಕ್ಷಣೆ.
“ನಮಗೆ ನಾವು ಭಾರವಾಗದೆ ಸ್ವಾವಲಂಬಿಗಳಾಗುವ ಪರಿಕಲ್ಪನೆಯು ಇಡೀ ಸಮಾಜಕ್ಕೆ ಬರಬೇಕು. ರಾಷ್ಟ್ರವು ಸ್ವಾವಲಂಬನೆ ಸಾಧಿಸಬೇಕಾದರೆ ಮತ್ತು ಸ್ವಯಂಪೂರ್ಣವಾಗ ಬೇಕಾದರೆ ನಾವೆಲ್ಲರೂ ಸ್ವಾವಲಂಬಿಗಳಾಗಬೇಕು. ನಮ್ಮ ಆವಶ್ಯಕತೆಗಳನ್ನು ನಾವೇ ತುಂಬಿಕೊಳ್ಳಬೇಕು. ದೇಶವೇ ಆತ್ಮವಾದಾಗ ಇನ್ನೊಂದು ದೇಶದ ಮೇಲೆ ಅವಲಂಬನೆ ತಪ್ಪುತ್ತದೆ. ಎಲ್ಲರಲ್ಲೂ ಸ್ವಾಭಿಮಾನ, ಸಂಘಟನೆ, ಸಶಕ್ತತೆ ತುಂಬಿಕೊಂಡಾಗ ರಾಷ್ಟ್ರವನ್ನು ಆತ್ಮ ನಿರ್ಭರ ಮಾಡಬಹುದು.” ಇದು ಸಂಘದ ಈಗಿನ ಸಹ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರ ನುಡಿಗಳು. ಪ್ರಸ್ತುತತೆಗೆ ತುಂಬಾ ಹತ್ತಿರವಾಗಿದೆ. ಮೊದಲು ನಾವು ಸ್ವಾವಲಂಬಿ ಆಗಬೇಕು. ಅದೇ ಆತ್ಮ ನಿರ್ಭರ ಭಾರತಕ್ಕೆ ಅಡಿಪಾಯ. ಚೈನಾ ನಿರ್ಮಿತ ವಸ್ತುಗಳು ಭಾರತದಲ್ಲಿ ಅದೆಷ್ಟು ಬೆರೆತುಹೋಗಿದೆ ಎಂದರೆ ಸಣ್ಣ ಪುಟ್ಟ ಆಟಿಕೆ ಸಾಮಾಗ್ರಿಗಳಿಂದ ಹಿಡಿದು ಎಲೆಕ್ಟ್ರಾನಿಕ್ ಉತ್ಪನ್ನಗಳವರೆಗೆ ಎಲ್ಲವೂ ಚೈನಾ ಮೇಡ್ ವಸ್ತುಗಳೇ ತುಂಬಿ ಹೋಗಿದೆ. ಚೈನಾ ಉತ್ಪನ್ನಗಳಿಲ್ಲದ ಮನೆಗಳು ಸಿಗುವುದು ಬಲು ಅಪರೂಪ. ಇದಕ್ಕೆ ಸ್ಪರ್ಧೆಯೊಡ್ಡುವ ತಾಕತ್ತು ಭಾರತಕ್ಕೆ ಇದೆ..
ಚೀನಾ ನಮ್ಮ ದೇಶದ ವಿರುದ್ಧ ಪದೇಪದೇ ಗಡಿತಂಟೆ ಮಾಡುತ್ತಿರುವ ಈ ಸಂದರ್ಭದಲ್ಲಿ ಅದಕ್ಕೆ ತಕ್ಕ ಪಾಠ ಕಲಿಸಲು ಬದ್ಧ ಸರಕಾರ ನಮ್ಮಲ್ಲಿದೆ. ಇದರ ಜೊತೆಗೆ ನಾವು, ಜನಸಾಮಾನ್ಯರು ಚೀನಾ ನಿರ್ಮಿತ ವಸ್ತುಗಳನ್ನು ಉಪಯೋಗಿಸುವುದನ್ನು ನಿಲ್ಲಿಸಿದರೆ ಚೀನಾಕ್ಕೆ ದೊಡ್ಡ ಆರ್ಥಿಕಹೊಡೆತ ಬೀಳುವುದಂತೂ ಖಂಡಿತ. ಜಾಗತಿಕ ಮಾರುಕಟ್ಟೆ ನಿಯಮವನ್ನು ಪಾಲನೆ ಮಾಡಬೇಕಿರುವುದರಿಂದ ಸರಕಾರಕ್ಕೆ ಚೀನಾ ನಿರ್ಮಿತ ವಸ್ತುಗಳಿಗೆ ನಿಷೇಧ ಹೇರುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ನಾವುಗಳು ಅದನ್ನು ಸ್ವಯಂಬಹಿಷ್ಕರಿಸಬೇಕು ಹಾಗೂ ಅಂಥದ್ದೇ ವಸ್ತುಗಳನ್ನು ಭಾರತದಲ್ಲಿ ತಯಾರಿಸಬೇಕು. ಅದಕ್ಕಾಗಿಯೇ ಸರಕಾರ ಆತ್ಮನಿರ್ಭರ ಪ್ಯಾಕೇಜ್ ಘೋಷಣೆ ಮಾಡಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಈ ಕೊರೊನಾದ ಸಂದಿಗ್ಧ ಕಾಲದ ನಡುವೆ ಅಯೋಧ್ಯೆಯಲ್ಲಿ ನಮ್ಮ ರಾಷ್ಟ್ರದ ಅಸ್ಮಿತೆಯಾಗಿರುವ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರದ ನಿರ್ಮಾಣಕ್ಕೆ  ಭೂಮಿಪೂಜೆಗೆ ಸಕಲ ಸಿದ್ಧತೆ ನಡೆದಿದೆ. ಮುಂದಿನ ಎರಡು-ಮೂರು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ತಲೆಎತ್ತಿ ನಿಲ್ಲಲಿದೆ. ಶತಮಾನಗಳ ಕಳಂಕ ದೂರವಾಗಲಿದೆ. ದೇಶದ ಸಾರ್ವಭೌಮತೆಗೆ ಕಳಂಕಪ್ರಾಯವಾಗಿದ್ದ ಸಂವಿಧಾನದ 370ನೇ ವಿಧಿ(ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ)ಯನ್ನು ಈಗಾಗಲೇ ರದ್ದುಮಾಡಿ ಇಡೀ ದೇಶವೇ ಸಂವಿಧಾನದ ಅಡಿಯಲ್ಲಿ ಒಂದು ಎಂದು ಮುನ್ನುಡಿ ಬರೆಯಲಾಗಿದೆ. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ‌ ಮೂಲಕ ರಾಷ್ಟ್ರದ ಭವಿಷ್ಯವನ್ನು ಬರೆಯುವ ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯತೆ, ಕೌಶಲ್ಯಮಟ್ಟ ಸುಧಾರಣೆಯನ್ನು ತರಬಹುದು. ಉದ್ಯೋಗಾವಕಾಶಗಳೂ ಹೆಚ್ಚಾಗುತ್ತವೆ.
ಕೊರೊನೋತ್ತರ ಕಾಲ ಭಾರತವನ್ನು ಒಂದು ಹೊಸ ಮಜಲಿಗೆ ಕೊಂಡೊಯ್ಯುವುದಂತೂ ನಿಶ್ಚಿತ. ಕಾರ್ಪೋರೇಟ್ ವಲಯದಲ್ಲಿ ಭಾರೀ ಬದಲಾವಣೆ ಸಂಭವಿಸಬಹುದು. ನಗರದ ಕಡೆಯಿಂದ ಯುವಕರು ತಮ್ಮ ತಮ್ಮ ಹಳ್ಳಿಯ ಕಡೆಗೆ ಮುಖಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಜೀವನಕ್ಕೆ ಹೊಸ ಆಯಾಮ ಬರಬಹುದು.  ದೇಸೀ‌ ಕೈಗಾರಿಕೆಗಳಿಗೆ ಜೀವಕಳೆ ಬರಲಿದೆ.. ನಾನು ಕಂಡಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಥಳೀಯ ಉತ್ಪನ್ನಗಳ ಖರೀದಿ-ಮಾರಾಟ ಹೆಚ್ಚಾಗಿದೆ. ಲಾಕ್‌ಡೌನ್ ನಂತರ ಅನೇಕ ಯುವಕರು ತಮ್ಮ ಸ್ವಂತ ವಾಹನಗಳಲ್ಲಿ ತರಕಾರಿ-ಮೀನು-ದಿನಸಿ ಸಾಮಾಗ್ರಿಗಳು ಮೊದಲಾದ ದೈನಂದಿನ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪ್ರಧಾನಿಗಳು ಕರೆ ನೀಡಿರುವ Vocal for Localಗೆ ಭಾರೀ ಧನಾತ್ಮಕ ಪ್ರತಿಕ್ರಿಯೆಗಳು ಈಗಾಗಲೇ ವ್ಯಕ್ತವಾಗಿವೆ. ಇದು ಮುಂದಿನ ದಿನಗಳಲ್ಲಿ ದೇಶದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಗಬಹುದು. ಇದಕ್ಕೆ ರಕ್ಷಾಬಂಧನ ಉತ್ಸವವೇ ಮುನ್ನುಡಿ ಬರೆಯಲಿ. ರಾಷ್ಟ್ರ ಆತ್ಮನಿರ್ಭರತೆಯತ್ತ ಸಾಗಲಿ.. ವಿಶ್ವಗುರುವಾಗಲಿ..
ರಕ್ಷೆ ಎಲ್ಲರಿಗೂ ಶುಭವನ್ನು ತರಲಿ..

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments