ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 5, 2020

ರಾಮಜನ್ಮ ಭೂಮಿ ಚಳವಳಿ – ನನ್ನ ಬಾಲ್ಯದ ನೆನಪಿನಲ್ಲಿ

‍ನಿಲುಮೆ ಮೂಲಕ

– ಅಜಿತ್ ಶೆಟ್ಟಿ ಹೆರಂಜೆ

ಚಿತ್ರ ಕೃಪೆ: ಕಲಾವಿದರದ್ದು. ಕೇರಳದ ಕಲಾವಿದರೊಬ್ಬರ ಕುಂಚದಲ್ಲಿ ಅರಳಿದ ಅಯೋಧ್ಯೆ ಭೂಮಿಪೂಜೆ

ಅಯೋದ್ಯೆಯ ರಾಮ ಜನ್ಮ ಭೂಮಿಯ ಹೋರಾಟ ನನ್ನ ವಯೋಮಾನದವರಿಗೆ ನಮ್ಮ ಕಣ್ಣ ಮುಂದೆಯೇ ನಿರ್ಮಾಣವಾದ ಇತಿಹಾಸ.ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಒಂದು ಕಡೆಯಾದರೆ ಇನ್ನೊಂದು ಕಡೆ ಆಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಕಟ್ಟಲು ಭಾರತದ ಹಿಂದೂ ಸಮಾಜ ಮಾಡಿದ ಸುಮಾರು 500 ವರ್ಷಗಳ ಸುಧೀರ್ಘ ಹೋರಾಟ. ಈ ಹೋರಾಟದ ಇತಿಹಾಸ ಕೂಡ ವಾಲ್ಮೀಕಿಯವರು ರಾಮಾಯಣಕ್ಕಿಂತ ಭಿನ್ನವಾಗಿರಲಿಲ್ಲ. ತ್ರೇತಾ ಯುಗದಲ್ಲಿ ವನವಾಸ ಮುಗಿಸಿ, ರಾವಣ ಸಂಹಾರ ಮಾಡಿ ಅಯೋಧ್ಯೆಗೆ ಮರಳಿದ ಪ್ರಭು ಶ್ರೀರಾಮಚಂದ್ರನ ಪಟ್ಟಾಭಿಷೇಕವಾಗಿ ರಾಮ ರಾಜ್ಯದ ಸ್ಥಾಪನೆ ಆದದ್ದು ಒಂದು ಭಾಗವಾದರೆ,ಈ ಕಲಿಯುಗದಲ್ಲಿ ಅಯೋಧ್ಯೆಯಲ್ಲಿ ಇದ್ದ ಪ್ರಭು ಶ್ರೀರಾಮಚಂದ್ರನ ಮಂದಿರವನ್ನು ಬಾಬರನ ಸೈನ್ಯ ಕೆಡವಿ ಮಸೀದಿ ಮಾಡಿದ್ದಲ್ಲಿನಿಂದ, ಆ ಮಸೀದಿಯನ್ನ ಕೆಡವಿ ಅಲ್ಲಿ ಪುನಃ ಒಂದು ಭವ್ಯ ಮಂದಿರ ನಿರ್ಮಾಣ ಮಾಡಲು ಆಯಾ ಕಾಲದ ಆಡಳಿತ ವ್ಯವಸ್ಥೆ ವಿರುದ್ಧ ಸುಧೀರ್ಘ ಹೊರಾಟ ಮಾಡಿ ಇಂದು ನೆರವೇರುತ್ತಿರುವ ಶಿಲಾನ್ಯಾಸದವರೆಗಿನ ಅಧ್ಯಾಯ ಇನ್ನೊಂದು ಭಾಗ. ಅಲ್ಲಿ ರಾವಣನ ಸಂಹಾರ ಆಯಿತು, ಇಲ್ಲಿ ಕಾಂಗ್ರೆಸ್ ಪಕ್ಷ ಎಂಬ ಸೆಕ್ಯುಲರ್ ಮಾರೀಚನ ಅಧಃಪತನ ಆಯಿತು. ಈ ಘಟನೆಗಳ ಸರಪಳಿಯಲ್ಲಿ ನನ್ನ ಊರಾದ ಹೆರಂಜೆ ಮತ್ತು ಸುತ್ತಮುತ್ತಲಿನ ಇನ್ನೂ ಐವತ್ತನಾಲಕ್ಕು ಗ್ರಾಮಗಳ ಒಂದು ಅಳಿಲು ಸೇವೆಯ ಕೊಂಡಿ ಕೂಡ ಇತ್ತು.

ಇದು ನನ್ನ ಸೌಭಾಗ್ಯವೇ ಹೌದು, ನನ್ನ ಬಾಲ್ಯದ ತೀರಾ ಮೊದಲಿನ ನೆನಪುಗಳಲ್ಲಿ ನನ್ನ ಮನಸ್ಸಿನಲ್ಲಿ ಇನ್ನು ಅಚ್ಚೊತ್ತಿದಂತೆ ಉಳಿದಿರುವುದು “ರಾಮ ಶಿಲಾ ರಥ ಯಾತ್ರ.” ಇದು ನಡೆದದ್ದು 1990-91 ರ ಸಮುಯದಲ್ಲಿ. ಆಗ ನನಗೆ ಸುಮಾರು 8-9 ರ ವಯಸ್ಸು. ಅದು ‌ಸುಮಾರು ರಾತ್ರಿ‌ ಎಂಟು‌ ಗಂಟೆಯ ಸಮಯ.ದೂರದ ಬಯಲಿನ ಅಂಚಿನಲ್ಲಿ ‌ಒಂದು ಗುಂಪು‌ ಪೆಟ್ರೊ ಮ್ಯಾಕ್ಸ್ ಲೈಟ್, ತೆಂಗಿನ ಗರಿಯ ಬೆಂಕಿ‌ಸೂಡಿ ಹಿಡಿದು ಜೋರಾಗಿ ರಾಮ ಭಜನೆ ಮಾಡುತ್ತಾ ತಾಳ ತಟ್ಟುತ್ತ ನಮ್ಮ‌ ಮನೆಯತ್ತ ಬರವುದನ್ನ‌ ಕಂಡೊಡನೆ, ಓಡಿ ಹೋಗಿ ಅಜ್ಜಿಗೆ ಹೇಳಿದೆ. ಅಜ್ಜಿ ಕೂಡಲೇ ಹೊರ ಬಂದು ಅಂಗಳಕ್ಕೆಲ್ಲಾ ನೀರು ಹಾಕಿ ಶೇಡಿ‌ ಮಣ್ಣಿನಲ್ಲಿ‌‌ ರಂಗೋಲಿ ‌ಬಿಡಿಸಿ, ತುಳಸಿಗೆ ದೀಪ ಹಚ್ಚಿ, ಮನೆಯ ಒಳಗಿದ್ದ ಒಂದು ತಾಮ್ರದ ಬಿಂದಿಗೆ, ಒಂದು ಚೆಂಬು,ಒಂದು ಬಟ್ಟಲು ಗಟ್ಟಿ ಬೆಲ್ಲ ತಗೆದು ಬಾವಿಕಟ್ಟಯಲ್ಲಿ‌ ಇಟ್ಟು ಅವರು ಬರುವುದನ್ನೆ ಎದುರು‌ ನೋಡುತ್ತಿದ್ದರು.ನನಗೆ ಆಶ್ಚರ್ಯ ಇದೇನಿದು ಇವರು ಮಾರಿಗೆ, ಕಂಬಳಕ್ಕೆ ಊರೂರು ತಿರುಗಿ ಡೋಲು ಹೊಡೆಯುವವರಲ್ಲ, ಜೊತಗೆ ಭಜನೆ ಬೇರೆ ಕೇಳಿಸುತ್ತಿದೆ, ಅಜ್ಜಿ ನೋಡಿದರೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಕಾದು ಕುಳಿತಿದ್ದಾರೆ. ಅವರು ನಮ್ಮ ಅಂಗಳಕ್ಕೆ ಬರುವ ತನಕ. ನನಗೆ ಕಾಯದೆ ಬೇರೆ ಉಪಾಯ ಇರಲಿಲ್ಲ.

ಅವರು ಮನೆಯಂಗಳಕ್ಕೆ ಬಂದರು.. ಸುಮಾರು ಇಪ್ಪತ್ತು ಜನ ಇರಬೇಕು. ಮುಂದೆ ಒಬ್ಬರ ತಲೆಯಲ್ಲಿ ಒಂದು ಇಟ್ಟಿಗೆ,ಹೊತ್ತು ಬಂದರು, ಅದನ್ನ ತುಳಸಿ‌ಕಟ್ಟೆ ಅಡಿಯಲ್ಲಿಟ್ಟು ಆರತಿ ಮಾಡಲಾಯಿತು, ಅಲ್ಲೆ ಸ್ವಲ್ಪ ಹೊತ್ತು ಕೂತು ಅಜ್ಜಿ‌ ಇಟ್ಟಿದ್ದ ಕೊಡಪಾನದಿಂದ ನೀರನ್ನ‌ ಸೇದಿ, ಬೆಲ್ಲ ನೀರು ‌ಕುಡಿದು, ಪೆಟ್ರೋ ಮ್ಯಾಕ್ಸ ದೀಪಕ್ಕೆ ಸೀಮೆ ಎಣ್ಣೆಯನ್ನ‌ ತುಂಬಿಸಿಕೊಂಡು ಭಜನೆ ಮಾಡುತ್ತಾ ಮುಂದೆ ಹೋದರು. ನನಗೆ ಇವರು ಯಾರು, ಯಾಕೆ‌ ರಾತ್ರಿ ಬಂದು ಭಜನೆ ಮಾಡಿದ್ರು ಒಂದೂ ಅರ್ಥ ಆಗಲಿಲ್ಲ. ಅಜ್ಜಿಯನ್ನ ಕೇಳಿದಾಗ ಹೇಳಿದ್ದು ಇಷ್ಟೆ ; “ಅಯೋದ್ಯಂಗೆ ರಾಮ್ ಮಂದಿರ ಕಟ್ತ್ರಂಬ್ರಾ. ಅದಕ್ಕೆ ಇಟ್ಟಿಗೆ ತಕಂಡ್ ಹ್ವಾತಾ ಇದ್ರ್”. ನನಗೆ ಆಗಲೂ ಅರ್ಥ ಆಗಲಿಲ್ಲ. ಮಾರನೆಯ ದಿನ ಇವರ ಜೊತೆ ಇಡೀ ಊರು ಸುತ್ತಾಡಿ ಬೆಳಗ್ಗೆ ಮನೆಗೆ ಬಂದ ಅಪ್ಪನನ್ನ ಕೇಳಿದೆ. “ಯಾರಿವರು, ನೀವು ಯಾಕೆ ಇವರ ಜೊತೆ ಇಡೀ ರಾತ್ರಿ ಹೊರಗಿದ್ರಿ”. ಆಗ ಅಪ್ಪ ರಾಮಾಯಣ, ಅಯೋಧ್ಯೆಯ ಹೋರಾಟದ ಕಥೆ ಒಂದೊಂದೆ ಹೇಳತೊಡಗಿದರು. ಆಗ ನನ್ನ‌ತಂದೆ ( ದಿನಕರ ಶೆಟ್ಟಿ ಹೆರಂಜೆ) ಒಂದು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಇದಿಷ್ಟು ಹಳೆಯ ನೆನಪು, ಆವತ್ತಿಂದ ಎಲ್ಲೇ ಅಯೋಧ್ಯೆಯ,ರಾಮ ಮಂದಿರದ ಸುದ್ದಿ ಕೇಳಿದರೂ ನನಗೆ ಮೊದಲು ನೆನಪಾಗುತ್ತಿದ್ದು ಈ ಘಟನೆ.

ಅಯೋಧ್ಯೆಯ ರಾಮ ಮ‌ಂದಿರದ ಶಿಲಾನ್ಯಾಸದ ದಿನ‌ ನಿಗದಿಯಾದಾಗ ತಂದೆಯ ಬಳಿ ‌ಕುತೂಹಲಕ್ಕೆ ನನ್ನ ಬಾಲ್ಯದ ಘಟನೆ ಬಗ್ಗೆ, ಅದರ ಸಂಘಟಕರ ಬಗ್ಗೆ ಪ್ರಶ್ನೆ ಮಾಡಿದೆ. ಆಗ‌ ಮತ್ತೊಂದಿಷ್ಟು ಕೌತುಕದ ವಿಚಾರ ಗೊತ್ತಾಯಿತು.ಆವತ್ತು ರಾತ್ರಿ ನಮ್ಮೂರಿಗೆ ಬಂದಾಗ ರಾಮ ಶಿಲೆ ನಿಗದಿಯಾದಂತೆ ಅಂದೆ ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿರಲಿಲ್ಲ. ತಡ ರಾತ್ರಿಯಾದ ಕಾರಣ ನಮ್ಮೂರಿನ‌ ಹೆರಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದೊಳಕ್ಕೆಶ್ರೀ ರಾಮ ಶಿಲೆ ಇಟ್ಟು ಬೆಳಿಗ್ಗೆಯ ಪೂಜೆಯ ನಂತರ ಇದನ್ನು ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕೊಂಡುಹೋಗಲಾಯಿತು. ಇದರ ಆಯೋಜನೆಯ ಹಿಂದಿನ‌ ವಿಚಾರಗಳನ್ನು ‌ಕೆದಕಿದಾಗ ಸಿಕ್ಕ‌ ಮಾಹಿತಿ ರೋಚಕವಾಗಿತ್ತು. ಇದನ್ನು ಆಯೋಜನೆ ಮಾಡಿದ್ದು ಆಂದಿನ‌‌ ಸಂಘ ಪರಿವಾರದ ಹಿರಿಯ ಮುಖಂಡರಾಗಿದ್ದ ಟಿ. ಭಾಸ್ಕರ ರೈಯವರು. ಬ್ರಹ್ಮಾವರ ಪ್ರಖಾಂಡದ ಕೆಲವು ಹಿರಿಯರನ್ನ ಸೇರಿಸಿ “ಶ್ರೀ ರಾಮ ಶಿಲಾ ಪೂಜನ ಮತ್ತು ಯಜ್ಙ ಸಮಿತಿ” ಅನ್ನುವ ಒಂದು ಸಂಘ ಮಾಡಿಕೊಂಡು, ಬ್ರಹ್ಮಾವರ ಪರಿಸರದ ಸುಮಾರು ಐವತ್ತನಾಲ್ಕು ಗ್ರಾಮಗಳಿಗೆ ಹೋಗಿ ಪ್ರತಿಯೊಂದು ಗ್ರಾಮದಿಂದ ಒಂದು ಶ್ರೀರಾಮ‌ಶಿಲೆ ಮತ್ತು ಒಂದು ಸಾವಿರ ರುಪಾಯಿ ಸಂಗ್ರಹ ಮಾಡಿ ಅದೆಲ್ಲವನ್ನೂ ಬ್ರಹ್ಮಾವರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಟ್ಟು ಕೊನೆಯ‌ ದಿನ ದೇವಸ್ಥಾನದಲ್ಲಿ‌ ಒಂದು ಬ್ರಹತ್ ಶ್ರೀರಾಮ ಯಜ್ಞವನ್ನು ಮಾಡಿ ಸಾರ್ವಜನಿಕ ಅನ್ನ‌ಸಂತರ್ಪಣೆ ಮಾಡಬೇಕು ಎನ್ನುವ ಯೋಜನೊಂದನ್ನು ಹಾಕಿದರು. ಯೋಜನೆಯೇನೊ‌‌ ಚೆನ್ನಾಗಿಯೇ ಇತ್ತು ಆದರೆ ಅದನ್ನ‌ ಕಾರ್ಯ ರೂಪಕ್ಕೆ ತರಲು ಒಂದು ಉತ್ತ ಮತ್ತು ದಕ್ಷ ತಂಡ ಬೇಕಿತ್ತು. ಆಗ ರೈಗಳ ಜೊತೆಗಾರರಾಗಿದ್ದು ಮೊದಲನೆಯದಾಗಿ ಬಿ ಜಗಜೀವನ್ ದಾಸ್ ಶೆಟ್ಟಿ ಸಮಿತಿಯ ಗೌರವಾಧ್ಯಕ್ಷರಾದರು. ಇವರ ಜೊತೆಗೆ ಪಾದರರಸದಂತೆ ಇದ್ದು ದುಡಿದವರಲ್ಲಿ ಪ್ರಮಖರು ಚಾಂತಾರಿನ ಕೆ ಅಶೋಕ್ ಭಟ್ ,ಬ್ರಹ್ಮಾವರ ಪರಿಸರದ ಆರ್ ಎಸ್ ಎಸ್ ನ ಹಿರಿಯ ಸ್ವಯಂ ಸೇವಕರಾದ ಬಾಬು ದೇವಾಡಿಗ, ಬಿ ಬುಜಂಗ ಶೆಟ್ಟಿ, ಕೆ. ತಿಮ್ಮಪ್ಪ ಹೆಗ್ಡೆ, ಹೆಚ್ ಶಿವರಾಮ ಭಟ್, ಡಾ. ಕೆ ನಾರಾಯಣ ಪೈ, ಮಾಬೂಕಳ ಕೃಷ್ಣ ಕಿಣಿ, ಬಿ.ಭುಜಂಗ ಹೆಗ್ಡೆ, ಎಚ್ ಜಗನ್ನಾಥ ಪೂಜಾರಿ, ಆನಂದ ಮಟಪಾಡಿ, ಎಮ್ ರಾಮಪ್ಪ ಪೈ ಕುಮಾರ ಸ್ವಾಮಿ, ಟಿ. ವಿಶ್ವನಾಥ್ ಪೈ, ಎ ಸದಾಶಿವ ನಾಯಕ್, ಜ್ನಾನ ವಸಂತ ಶೆಟ್ಟಿ ಪ್ರಮುಖರಾದವರು.
ಇನ್ನೂ ಹಲವು ಮಂದಿ ತೆರೆಮರೆಯ ಕಾಯಿಯಂತೆ ರೈಗಳ ಶ್ರೀರಾಮ ಶಿಲಾರಥವನ್ನ ಎಳೆಯಲು ಕೈ ಮಿಲಾಯಿಸಿದರು. ಆ ಕಾಲಕ್ಕೆ ರಾಮ ಮಂದಿರದ ಹೋರಾಟದಲ್ಲಿ ರಾಜಕಾರಾಣದ ವಾಸನೆ ಅಷ್ಟೊಂದು ಇರಲಿಲ್ಲ. ರಾಮ ಮಂದಿರ ಕಟ್ಟುವ‌ಕೆಲಸ ಪ್ರತಿಯೊಬ್ಬ. ಹಿಂದುವಿನ ಸಹಜವಾದ ಭಾವ ಆಗಿತ್ತು. ಆ ಕಾರಣಕ್ಕೆ ಆಗ ಬ್ರಹ್ಮಾವರ ವಿಧಾನಸಭಾ‌ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ನಾಯಕರಾದ ಬಿ ಭುಜಂಗ ಶೆಟ್ಟಿ,ಅಂದಿನ ಜನತಾ ಪಕ್ಷದ ಅಧ್ಯಕ್ಷರಾದ ಜ್ನಾನ ವಸಂತ ಶೆಟ್ಟಿಯವರೂ ಪಾಲ್ಗೊಂಡಿದ್ದರು. ಅಂದು ಶಿಲಾಯಾತ್ರೆಯ ಆಯೋಜನೆಯ ಸಮಯದಲ್ಲಿ ಕಾರ್ಯಕರ್ತರ ಮೇಲೆ ಪೋಲೀಸ್ ಕೇಸುಗಳಾದ, ಇವರೆಲ್ಲಾ ಮುಂದೆ ನಿಂತು ಅವುಗಳನ್ನ ನಿಭಾಯಿಸಿ ಕಾರ್ಯಕರ್ತರಿಗೆ ರಕ್ಷಣೆ ಕೊಟ್ಟಿದ್ದರು. ‌ಮುಂದೆ ಒಂದು ದಿನ ರಾಮ ಮಂದಿರದ ರಾಜಕಾರಣವನ್ನ ಕಾಂಗ್ರೆಸ ಪಕ್ಷ ಈ ಮಟ್ಟಿಗೆ ರಾಜಕಾರಣದ ರಾಡಿಯಲ್ಲಿ ಮುಳುಗಿಸಿ ಏಳಿಸಲಿದೆ ಅನ್ನವು ಕಲ್ಪನೆಯೂ ಇರಲಿಕ್ಕಿರಲಿಲ್ಲ.

ಕಾರ್ಯಕ್ರಮ ಅಂದುಕೊಂಡಂತ ಚೊಕ್ಕಟವಾಗಿ ನಡೆಯಿತು. ಕೊನೆಯ‌ ದಿನದ ಶ್ರೀ ರಾಮಯಜ್ಙ ಮತ್ತು ಅನ್ನ ಸಂತರ್ಪಣೆಯ ನೇತೃತ್ವ ಚಾಂತಾರಿನ ಅಶೋಕ ಭಟ್ರದ್ದು. ಆ ಐವತ್ತನಾಲ್ಕೂ ‌ಶ್ರೀರಾಮ ಶಿಲೆಗೆ ಪೂಜೆ ಮಾಡಿ ಸುಮಾರು ಏಳು ಸಾವಿರ ಮಂದಿಗೆ ಅನ್ನ ಸಂತರ್ಪಣೆ ಮಾಡಿ ದೇಣಿಗೆಯ ಮೊತ್ತ ಐವತ್ತನಾಲ್ಕು ಸಾವಿರ ರುಪಾಯಿ ರಥ ಯಾತ್ರಗೆ ಸಮರ್ಪಣೆ ಮಾಡಿದರು.

ಈ ವಿಚಾರದ ಬಗ್ಗೆ ಈಗ ಮಾಹಿತಿ ಕೇಳಲು ಅಶೋಕ್ ಭಟ್ಟರನ್ನ,ಜ್ನಾನ ವತಂತ ಶೆಟ್ಟರನ್ನ‌ ಸಂಪರ್ಕ ಮಾಡಿದಾಗ ಈ ಬಗ್ಗೆ ಮಾತನಾಡುತ್ತಾ ಒಮ್ಮೆ ‌ಗದ್ಗಗತಿರಾದರು, ಅಶೋಕ ಭಟ್ಟರು ಅವರು ಅಂದು ಶ್ರೀರಾಮ ಶಿಲಾ ಪೂಜನಕ್ಕೆ ಮಾಡಿದ ಕರ ಪತ್ರವನ್ನ ಟಿ ಭಾಸ್ಕರ ರೈಗಳ ಮುಖೇನ ಸಂಪಾದಿಸಿ‌ಕೊಟ್ಟರು. ಭಟ್ರೆ ನಿಮ್ಮ‌ಹೋರಾಟ ಸಾರ್ಥಕ ಆಯಿತು ನಿಮ್ಮ‌ ಕಣ್ಣೆದುರೇ ಅಯೋಧ್ಯೆಯ ರಾಮ ಮಂದಿರದ ಶಿಲಾನ್ಯಾಸ ಆಗುತ್ತದೆ ಅಂದಾಗ ಅವರ. ಇವತ್ತು ಶಿಲಾನ್ಯಸದ ದಿನ ಬೇಳಿಗ್ಗೆ ಸಹಸ್ರ ತುಳಸಿ ಅರ್ಚೆ ಮಾಡಿಸುತ್ತೇನೆ. ಸಂಜೆ ರಾಮ ಭಜನೆ ಕಾರ್ಯಕ್ರಮ ಇಟ್ಟುಕೊಡಿದ್ದೇನೆ ಅಂದರು, ನಮ್ಮೂರಿನ ಹೆರಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಇವತ್ತು ಶಿಲಾನ್ಯಾಸದ ಪ್ರಯುಕ್ತ ವಿಶೇಷ ಪೂಜೆ ಇದೆ.

ಇದೆಲ್ಲವನ್ನ ಕೇಳಿದಾಗ ಮನದಲ್ಲಿ ಅದೇನೋ ‌ಪುಳಕ, ರೋಮ‌ರೋದಲ್ಲೂ‌ ರಾಮ ನಾಮ ಸ್ಮರಣೆಯಾದಂತೆ ಭಾಸವಾಯಿತು. ನಮ್ಮ‌ ಬಾಲ್ಯದಲ್ಲಿ ನಡೆದ ಘಟನೆ ನಮ್ಮ‌ ಯೌವ್ವನದ ಕಾಲಘಟ್ಟದಲ್ಲಿ ಭವ್ಯರಾಮ ಮಂದಿರ ನಿರ್ಮಾಣ ಬುನಾದಿ ಆಗಲಿದೆ ಎಂದು ಭಾವಿಸರಲಿಲ್ಲ. ಇಂತಹದ್ದೊಂದು ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ನನ್ನ ಶತ ಶತ ಪ್ರಣಾಮಗಳು.

ಜೈ ಶ್ರೀ ರಾಮ್

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments